ಪಾಶ್ಚಾತ್ಯ ನಿರ್ಬಂಧಗಳಿಗೂ ರಷ್ಯಾ ನಲುಗದು ಎಂದು ಸಾಬೀತುಪಡಿಸಿದ ಈಸ್ಟರ್ನ್ ಎಕನಾಮಿಕ್ ಫೋರಮ್

ಸೆಪ್ಟೆಂಬರ್ 12ರಂದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 8ನೇ ಈಸ್ಟರ್ನ್ ಎಕನಾಮಿಕ್ ಫೋರಮ್‌ನ (ಇಇಎಫ್) ಪ್ರಧಾನ ಸಂಕಿರಣದಲ್ಲಿ ಮಾತನಾಡಿದ್ದರು. ಈ ಫೋರಮ್ ಸೆಪ್ಟೆಂಬರ್ 10ರಿಂದ 13ರ ತನಕ ವ್ಲಾಡಿವೋಸ್ಟೋಕ್‌ನ ಫಾರ್ ಈಸ್ಟರ್ನ್ ಫೆಡರಲ್ ಯುನಿವರ್ಸಿಟಿಯಲ್ಲಿ (ಎಫ್ಇಎಫ್‌ಯು) ನೆರವೇರಿತು.

ಪಾಶ್ಚಾತ್ಯ ನಿರ್ಬಂಧಗಳಿಗೂ ರಷ್ಯಾ ನಲುಗದು ಎಂದು ಸಾಬೀತುಪಡಿಸಿದ ಈಸ್ಟರ್ನ್ ಎಕನಾಮಿಕ್ ಫೋರಮ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 14, 2023 | 10:57 AM

ಕಳೆದ ಎರಡು ವರ್ಷಗಳ ಅವಧಿಯಲ್ಲಿ, ಪಾಶ್ಚಾತ್ಯ ರಾಷ್ಟ್ರಗಳು ತನ್ನ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳು ತನ್ನ ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದನ್ನು ರಷ್ಯಾ ನಿರೂಪಿಸಿದೆ. ಅದರ ಬದಲು, ಈ ನಿರ್ಬಂಧಗಳು ಜಗತ್ತಿನ ಮೇಲೆ ಅಮೆರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳ ಪ್ರಭಾವವನ್ನೇ ಕಡಿಮೆಗೊಳಿಸಿವೆ. ಸೆಪ್ಟೆಂಬರ್ 12ರಂದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 8ನೇ ಈಸ್ಟರ್ನ್ ಎಕನಾಮಿಕ್ ಫೋರಮ್‌ನ (ಇಇಎಫ್) ಪ್ರಧಾನ ಸಂಕಿರಣದಲ್ಲಿ ಮಾತನಾಡಿದ್ದರು. ಈ ಫೋರಮ್ ಸೆಪ್ಟೆಂಬರ್ 10ರಿಂದ 13ರ ತನಕ ವ್ಲಾಡಿವೋಸ್ಟೋಕ್‌ನ ಫಾರ್ ಈಸ್ಟರ್ನ್ ಫೆಡರಲ್ ಯುನಿವರ್ಸಿಟಿಯಲ್ಲಿ (ಎಫ್ಇಎಫ್‌ಯು) ನೆರವೇರಿತು.

ಈಸ್ಟರ್ನ್ ಎಕನಾಮಿಕ್ ಫೋರಮ್ ಏನನ್ನು ಒಳಗೊಂಡಿದೆ?

ರಷ್ಯಾದ ಪೂರ್ವ ಭಾಗದಲ್ಲಿ ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲು, ಮತ್ತು ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಜೊತೆಗೆ ರಷ್ಯಾದ ಸಹಯೋಗವನ್ನು ಹೆಚ್ಚಿಸುವ ಉದ್ದೇಶದಿಂದ 2015ರಲ್ಲಿ ಈಸ್ಟರ್ನ್ ಎಕನಾಮಿಕ್ ಫೋರಮ್ (ಇಇಎಫ್) ಸ್ಥಾಪಿಸಲಾಯಿತು.

ಕಳೆದ ಎಂಟು ವರ್ಷಗಳ ಅವಧಿಯಲ್ಲಿ, ಈ ಫೋರಮ್ ಒಂದು ಪ್ರಮುಖ ಜಾಗತಿಕ ವೇದಿಕೆಯಾಗಿ ರೂಪುಗೊಂಡಿದ್ದು, ರಷ್ಯಾ ಮತ್ತು ವಿದೇಶೀ ಹೂಡಿಕೆದಾರರ ನಡುವೆ ಸಂಪರ್ಕಗಳನ್ನು ಹೆಚ್ಚಿಸಿದೆ. ಆ ಮೂಲಕ ರಷ್ಯಾದ ಫಾರ್ ಈಸ್ಟ್ ಪ್ರದೇಶದಲ್ಲಿ ನೂತನ ಉದ್ಯಮ ಸಾಧ್ಯತೆಗಳನ್ನು ಹೆಚ್ಚಿಸಿದೆ.

ಇಇಎಫ್ ಸಮಗ್ರ ಅಧಿವೇಶನದ ಸಂದರ್ಭದಲ್ಲಿ, ಪುಟಿನ್ ಅವರು ವಿಶೇಷವಾಗಿ ಭದ್ರತೆ ಮತ್ತು ರಕ್ಷಣಾ ವಲಯದಲ್ಲಿ ಸ್ವಾವಲಂಬಿಯಾಗುವ ಅವಶ್ಯಕತೆಯನ್ನು ಎತ್ತಿಹಿಡಿದಿದ್ದರು. ಆದರೆ, ಸ್ವಾವಲಂಬನೆ ಎನ್ನುವುದು ದೇಶವನ್ನು ಪ್ರತ್ಯೇಕವಾಗಿಸುವುದಲ್ಲ. ಬದಲಿಗೆ, ಸ್ವಾವಲಂಬನೆ ಎಂದರೆ, ನಮ್ಮ ಸಹಯೋಗಿಗಳೊಡನೆ, ಮಿತ್ರರಾಷ್ಟ್ರಗಳೊಡನೆ ಸಹಯೋಗ ಸ್ಥಾಪಿಸಿ, ಆ ಮೂಲಕ ನಮ್ಮ ದೇಶದ ಭದ್ರತೆಯನ್ನು ಹೆಚ್ಚಿಸುವುದು ಎಂದು ಪುಟಿನ್ ಅಭಿಪ್ರಾಯ ಪಟ್ಟಿದ್ದಾರೆ.

ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ ಉಪನ್ಯಾಸಕರು, ರಾಜಕೀಯ ವಿಜ್ಞಾನಿಗಳಾಗಿರುವ ಜೋ ಸಿರಾಕುಸ ಅವರು ಪುಟಿನ್ ಅವರ ನೇರ ಮಾತುಗಳ ಸಂದೇಶಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ವಾಷಿಂಗ್ಟನ್ ಮತ್ತು ಇತರ ಪಾಶ್ಚಾತ್ಯ ದೇಶಗಳೊಡನೆ ಉದ್ವಿಗ್ನ ಸಂಬಂಧ ಹೊಂದಿರುವ ಹೊರತಾಗಿಯೂ, ಪುಟಿನ್ ತಮ್ಮ ಯೋಜನೆಗಳೊಡನೆ ಮುಂದುವರಿದಿದ್ದಾರೆ. 2015ರಲ್ಲಿ ಸ್ಥಾಪನೆಗೊಂಡ ಈ ವೇದಿಕೆ, ರಷ್ಯಾದ ಫಾರ್ ಈಸ್ಟ್ ಪ್ರದೇಶದ ನಗರಗಳಲ್ಲಿ ಉದ್ಯಮಗಳು, ಶಿಕ್ಷಣ, ಹಾಗೂ ಮತ್ತಿತರ ವಲಯಗಳಲ್ಲಿ ಹೂಡಿಕೆಯನ್ನು ಆಕರ್ಷಿಸಿದೆ. ಸಿರಾಕುಸ ಅವರು ಆ ಪ್ರದೇಶದಲ್ಲಿ ಎಲ್ಲವೂ ಇನ್ನೂ ಸಹಜವಾಗಿಯೇ ಕಾರ್ಯಾಚರಿಸುವ ಕುರಿತು, ಆ ಪ್ರದೇಶದ ಅಭಿವೃದ್ಧಿಗೆ ಪುಟಿನ್ ಸಿದ್ಧತೆ ನಡೆಸುತ್ತಿರುವುದರ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಫೋರಮ್‌ನಲ್ಲಿ ಜಗತ್ತಿನಾದ್ಯಂತ 50ಕ್ಕೂ ಹೆಚ್ಚು ದೇಶಗಳಿಂದ, ಬಹುತೇಕ 7,000 ಜನರು ಭಾಗವಹಿಸಿದ್ದಾರೆ. ಹೆಚ್ಚಿನ ಪ್ರತಿನಿಧಿಗಳು ಚೀನಾ, ಮಯನ್ಮಾರ್, ಭಾರತ, ಮಂಗೋಲಿಯಾ ಹಾಗೂ ಲಾವೋಸ್‌ಗಳಿಂದ ಆಗಮಿಸಿದ್ದಾರೆ.

ಅಮೆರಿಕಾ ನಿರ್ಬಂಧಗಳ ಅಸಮರ್ಪಕತೆಯನ್ನು ದೃಢೀಕರಿಸಿದ ಈಸ್ಟರ್ನ್ ಎಕನಾಮಿಕ್ ಫೋರಮ್

ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳ ಹೊರತಾಗಿಯೂ, ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಜೊತೆ ರಷ್ಯಾದ ವ್ಯಾಪಾರ 2022ರಲ್ಲಿ 13.7% ಹೆಚ್ಚಳ ಕಂಡಿದೆ. 2023ರ ಮೊದಲಾರ್ಧದಲ್ಲೇ ಇನ್ನೂ 18.3% ಹೆಚ್ಚಳ ಕಂಡಿದೆ ಎಂದು ಪುಟಿನ್ ವಿವರಿಸಿದ್ದಾರೆ.

ರಷ್ಯಾ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ, ಅಮೆರಿಕಾ ಅದನ್ನು ನಾಜಿ಼ ಕ್ರಮ ಎಂದು ಆರೋಪಿಸಿತು. ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ಬಹುತೇಕ ರಷ್ಯಾದ ಎಲ್ಲಾ ವಲಯಗಳ ಮೇಲೆ ವಿವಿಧ ಆರ್ಥಿಕ ನಿರ್ಬಂಧಗಳನ್ನು ಹೇರಿ, ರಷ್ಯಾಗೆ ಆರ್ಥಿಕ ಸಂಕಷ್ಟ ತಂದೊಡ್ಡುವ ಪ್ರಯತ್ನ ನಡೆಸಿದವು. ಅದರೊಡನೆ, ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾವನ್ನು ‘ಸ್ವಿಫ್ಟ್’ ಎಂಬ ಹಣ ವರ್ಗಾವಣಾ ವ್ಯವಸ್ಥೆಯಿಂದಲೂ ಹೊರಹಾಕಿ, ರಷ್ಯಾದ ಕೇಂದ್ರೀಯ ಬ್ಯಾಂಕಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡವು.

ಆದರೆ, ರಷ್ಯಾದೊಡನೆ ಡಾಲರ್ ಮೂಲಕ ವ್ಯವಹಾರ ನಡೆಸಲು ಸಾಧ್ಯವಾಗದೇ ಹೋದ್ದರಿಂದ, ಹಲವು ರಾಷ್ಟ್ರಗಳು ರಷ್ಯಾದೊಡನೆ ತಮ್ಮದೇ‌ ರಾಷ್ಟ್ರೀಯ ಹಣದಲ್ಲಿ ವ್ಯವಹರಿಸುವ ಅನಿವಾರ್ಯತೆ ಎದುರಾಯಿತು. ಆ ಮೂಲಕ ಅವುಗಳು ತಮ್ಮ ಉಳಿತಾಯವನ್ನು ಅಮೆರಿಕಾದ ಹೊರಗೆ ಸಂಗ್ರಹಿಸುವಂತಾಯಿತು. ಪುಟಿನ್ ಅವರು ಇದನ್ನು ಪಾಶ್ಚಾತ್ಯ ಹಣಕಾಸು ವ್ಯವಸ್ಥೆಗಳ ಮೇಲೆ ನಂಬಿಕೆ ಕುಸಿಯುತ್ತಿರುವುದಕ್ಕೆ ಉದಾಹರಣೆಯಾಗಿದೆ ಎಂದರು. ರಷ್ಯಾದ 300 ಬಿಲಿಯನ್ ಡಾಲರ್ ಮೌಲ್ಯದ ಚಿನ್ನದ ಸಂಗ್ರಹವನ್ನು ಮುಟ್ಟುಗೋಲು ಹಾಕಿರುವುದಕ್ಕೆ ಪ್ರತಿಕ್ರಿಯಿಸಿರುವ ಪುಟಿನ್, ನಾವು ಕ್ರಮೇಣ ಅದರ ಎರಡು ಪಟ್ಟು ಸಂಗ್ರಹವನ್ನು ಗಳಿಸಿದ್ದೇವೆ ಎಂದಿದ್ದಾರೆ.

ರಷ್ಯಾದ ಹೈಯರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕಾರ್ಯ ನಿರ್ವಹಿಸುವ ಡಿಮಿಟ್ರಿ ಸುಸ್ಲೋವ್ ಅವರು ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಕೈಗೊಂಡ ಆರ್ಥಿಕ ಸಮರ ಯಶಸ್ವಿಯಾಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ, ರಷ್ಯಾದ ವಿರುದ್ಧ ಜಗತ್ತಿನ ವಿವಿಧ ರಾಷ್ಟ್ರಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಜಗತ್ತಿನ ಬಹುತೇಕ ರಾಷ್ಟ್ರಗಳು ಕೈಜೋಡಿಸದೆ, ರಷ್ಯಾ ವಿರೋಧಿ ಮೈತ್ರಿಕೂಟವೂ ಯಶಸ್ವಿಯಾಗಿಲ್ಲ ಎಂದಿದ್ದಾರೆ. ಅಮೆರಿಕಾ ಮತ್ತು ಕೀವ್‌ಗೆ ಯಾವುದೇ ನಿರ್ಣಾಯಕ ಗೆಲುವು ತಂದುಕೊಡದ, ಇನ್ನೂ ಮುಂದುವರಿಯುತ್ತಿರುವ ಉಕ್ರೇನ್ ಯುದ್ಧದ ಕುರಿತು ಅಮೆರಿಕಾದ ನಾಗರಿಕರು ಸಾಕಷ್ಟು ಅಸಹನೆ, ಅಸಮಾಧಾನ ಹೊಂದಿದ್ದಾರೆ ಎಂದು ಸುಸ್ಲೋವ್ ಹೇಳಿದ್ದಾರೆ. ಈ ಪರಿಸ್ಥಿತಿಯಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಮುಂದೆ ಇರುವುದು ಎರಡು ಆಯ್ಕೆಗಳು ಮಾತ್ರ. ಅವೆಂದರೆ: ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳುವುದು, ಆದರೆ ಅದರಿಂದ ರಾಜಕೀಯ ಹಾನಿ ಹೆಚ್ಚಾಗಬಹುದು. ಅಥವಾ, ಪ್ರಸ್ತುತ ಪರಿಸ್ಥಿತಿಯನ್ನು ಇನ್ನಷ್ಟು ವಿಕೋಪಕ್ಕೆ ಒಯ್ಯುವುದು.

ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಾರತದ ವಿಜಯ: ಜಗತ್ತಿನ ಗಮನ ಸೆಳೆದ ಐದು ಬೆಳವಣಿಗೆಗಳು

ಅಮೆರಿಕಾಗೆ ರಷ್ಯಾದ ಆರ್ಥಿಕತೆಯ ಮೇಲೆ ತಾನು ಉದ್ದೇಶಿಸಿದ ರೀತಿಯಲ್ಲಿ ಹಾನಿ ಮಾಡಲು ಸಾಧ್ಯವಾಗಿಲ್ಲ. ಸುಸ್ಲೋವ್ ಅವರ ಪ್ರಕಾರ, ಅಮೆರಿಕಾ ಈಗಾಗಲೇ ತನ್ನ ಮುಂದಿದ್ದ ಎಲ್ಲ ಆಯ್ಕೆಗಳನ್ನೂ ಪ್ರಯೋಗಿಸಿದ್ದು, ಅದರ ಮುಂದೆ ತನ್ನ ಗುರಿಯನ್ನು ಸಾಧಿಸಲು ಇನ್ನೂ ಹೆಚ್ಚಿನ ಆಯ್ಕೆಗಳು ಉಳಿದಿಲ್ಲ.

ಅಮೆರಿಕಾ ಈಗಾಗಲೇ ಇತರ ರಾಷ್ಟ್ರಗಳಿಗೆ ರಷ್ಯಾದೊಡನೆ ವ್ಯವಹಾರ ನಡೆಸದಂತೆ ಎಚ್ಚರಿಕೆ ನೀಡಿದೆ. ಆದರೆ, ಆಸ್ಟ್ರೇಲಿಯಾದ ಉಪನ್ಯಾಸಕರ ಪ್ರಕಾರ, ಈ ಬೆದರಿಕೆ ಹೇಳಿಕೊಳ್ಳುವಂತಹ ಯಾವುದೇ ಪರಿಣಾಮವನ್ನು ಉಂಟುಮಾಡುವುದಿಲ್ಲ. ಅಮೆರಿಕಾ ಈಗಾಗಲೇ ರಷ್ಯಾ ಮೇಲೆ ಮಾತ್ರವಲ್ಲದೆ, ಉತ್ತರ ಕೊರಿಯಾ ಮೇಲೂ ಪ್ರಬಲ ನಿರ್ಬಂಧಗಳನ್ನು ಹೇರಿದೆ ಎನ್ನುವುದರೆಡೆಗೆ ಅವರು ಬೆರಳು ಮಾಡಿ ತೋರುತ್ತಾರೆ. ಈ ನಿರ್ಬಂಧಗಳು ಸಾಕಷ್ಟು ಮಿತಿಗಳನ್ನು ಹೊಂದಿದ್ದು, ಅವುಗಳು ದಿನೇ ದಿನೇ ಕಡಿಮೆ ಪರಿಣಾಮಕಾರಿಯಾಗುತ್ತಿವೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಈಗಾಗಲೇ ಇಂತಹ ನಿರ್ಬಂಧಗಳು ಅಮೆರಿಕಾದ ಹೂಡಿಕೆದಾರರ ಮೇಲೆ, ಅಮೆರಿಕನ್ ನಾಗರಿಕರ ಮೇಲೆ, ಜಗತ್ತಿನಾದ್ಯಂತ ಇರುವ ಅಮೆರಿಕಾದ ಮಿತ್ರರು ಮತ್ತು ಸಹಯೋಗಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರಲು ಆರಂಭಿಸಿದ್ದು, ಆಹಾರದಂತಹ ಉತ್ಪನ್ನಗಳನ್ನು ಹೊಂದುವುದೂ ಕಷ್ಟಕರವಾಗಿದೆ ಎಂದು ಅವರು ವಿವರಿಸುತ್ತಾರೆ. ಅವರ ಪ್ರಕಾರ, ಈಗಾಗಲೇ ರಷ್ಯಾದಲ್ಲಿ ಧನಾತ್ಮಕ ಬದಲಾವಣೆಗಳು ನಡೆಯುತ್ತಿವೆ.

ಸಿರಾಕುಸ ಅವರ ಪ್ರಕಾರ, ವಾಷಿಂಗ್ಟನ್ ವಿಧಿಸಿದ ಹಲವಾರು ನಿರ್ಬಂಧಗಳ ಹೊರತಾಗಿಯೂ ತಾನು ತನ್ನ ಆರ್ಥಿಕ ಚಟುವಟಿಕೆಗಳನ್ನು ನಡೆಸಬಲ್ಲೆ ಎಂಬುದನ್ನು ರಷ್ಯಾ ಸಾಬೀತುಪಡಿಸಿದೆ. ಈಸ್ಟರ್ನ್ ಎಕನಾಮಿಕ್ ಫೋರಮ್ (ಇಇಎಫ್) ಇದಕ್ಕೆ ಕೈಗನ್ನಡಿಯಂತೆ ತೋರುತ್ತಿದೆ.

ರಷ್ಯಾ ಮತ್ತು ಏಷ್ಯಾಗಳ ಪರಿಣಾಮಕಾರಿ ಸಹಯೋಗ ಹೇಗಾಯಿತು?

ಏಷ್ಯಾ ಪೆಸಿಫಿಕ್ ಪ್ರಾಂತ್ಯದ ರಾಷ್ಟ್ರಗಳೊಡನೆ ರಷ್ಯಾ ನಿಜಕ್ಕೂ ತನ್ನ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ರಷ್ಯಾದ ರಾಜಕೀಯ ರಹಿತವಾದ, ಸಮತೋಲಿತ ನಡವಳಿಕೆಯಾಗಿದೆ. ಏಷ್ಯಾದಲ್ಲಿ ರಷ್ಯಾದ ಕಾರ್ಯತಂತ್ರ ಅಮೆರಿಕಾದ ಕಾರ್ಯತಂತ್ರದಿಂದ ಸಾಕಷ್ಟು ಭಿನ್ನವಾಗಿದೆ. ಅಮೆರಿಕಾ ‘ಪಿವೋಟ್ ಟು ಏಷ್ಯಾ’ ಎಂಬ ಧೋರಣೆಯನ್ನು ಹೊಂದಿದ್ದು, ಇದು ಹಲವು ರಾಷ್ಟ್ರಗಳನ್ನು ಏಕಾಂಗಿಯಾಗಿಸುವ, ನಿಗ್ರಹಿಸುವ, ಪ್ರಾದೇಶಿಕ ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಿ, ಏಷ್ಯಾ ಪೆಸಿಫಿಕ್ ರಾಷ್ಟ್ರಗಳನ್ನು ಯಾವುದಾದರೂ ಒಂದು ಬಣವನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಾಯಪಡಿಸುವ ವಿಧಾನವಾಗಿದೆ.

ಸಿರಾಕುಸ ಅವರ ಪ್ರಕಾರ, ಪುಟಿನ್ ಅವರು ನೀಡಿದ ಸಂದೇಶ ಅತ್ಯಂತ ಸ್ಪಷ್ಟವಾಗಿದೆ. ಅದೆಂದರೆ: ಅಧಿಕಾರ ರಾಜಕೀಯದ ಸುಳಿಯಲ್ಲಿ ಸಿಲುಕಿಕೊಳ್ಳದೆ, ಯಾರು ಬೇಕಾದರೂ ರಷ್ಯಾದೊಡನೆ ವ್ಯವಹಾರ ನಡೆಸಬಹುದು. ಶೀತಲ ಸಮರದ ಕಾಲದಲ್ಲಿ, ಪ್ರತಿಯೊಂದು ರಾಷ್ಟ್ರವೂ ಅಮೆರಿಕಾ ಅಥವಾ ಸೋವಿಯತ್ ಒಕ್ಕೂಟ ಎರಡರಲ್ಲಿ ಒಂದು ಬಣವನ್ನು ಆಯ್ಕೆ ಮಾಡುವ ಅನಿವಾರ್ಯತೆ ಇತ್ತು. ಆದರೆ ಭಾರತದಂತಹ ಹಲವು ರಾಷ್ಟ್ರಗಳು ಯಾವುದೇ ಬಣಕ್ಕೂ ಸೇರ್ಪಡೆಯಾಗದೆ, ಅಲಿಪ್ತ ನೀತಿಯನ್ನು ಅನುಸರಿಸಿದ್ದವು. ಈ ರಾಷ್ಟ್ರಗಳು ಇಂದಿಗೂ ಅದೇ ನಿಲುವನ್ನು ಹೊಂದಿವೆ. ಆದ್ದರಿಂದ, ನಮ್ಮ ಭೌಗೋಳಿಕ ರಾಜಕಾರಣದ ಸುಳಿಯಲ್ಲಿ ಇತರರನ್ನು ಸೆಳೆಯದೆಯೇ ಅವರೊಡನೆ ವ್ಯವಹಾರ, ವ್ಯಾಪಾರ ನಡೆಸುವುದು ಅತ್ಯಂತ ಮಹತ್ತರ ವಿಚಾರವಾಗಿದೆ.

ರಷ್ಯಾದ ಫಾರ್ ಈಸ್ಟ್ ಪ್ರದೇಶದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಹಲವಾರು ಅಂಶಗಳಿವೆ ಎಂದು ಆಸ್ಟ್ರೇಲಿಯಾದ ಉಪನ್ಯಾಸಕರು ವಿವರಿಸುತ್ತಾರೆ.

ಸಿರಾಕುಸ ಅವರ ಪ್ರಕಾರ, ಈ ಪ್ರದೇಶದಲ್ಲಿ ಅಪಾರ ಪ್ರಮಾಣದ ಖನಿಜ ಸಂಪನ್ಮೂಲಗಳಿದ್ದು, ವಿವಿಧ ಉದ್ಯಮಗಳಿಗೆ, ಅಧ್ಯಯನ ನಡೆಸುವುದಕ್ಕೆ, ಮತ್ತಿತರ ಯೋಜನೆಗಳಿಗೆ ಅಪರಿಮಿತ ಅವಕಾಶಗಳಿವೆ. ಖನಿಜಗಳಿಗೆ ಮತ್ತು ಪಳೆಯುಳಿಕೆ ಇಂಧನಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಇಂತಹ ಅಮೂಲ್ಯ ಸಂಪನ್ಮೂಲಗಳನ್ನು ತನ್ನ ಭೂಮಿಯಲ್ಲಿ ಇಟ್ಟುಕೊಂಡಿರುವ ರಷ್ಯಾದ ಫಾರ್ ಈಸ್ಟ್ ಪ್ರದೇಶ ಮಹತ್ತರ ಮೇಲುಗೈ ಹೊಂದಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಫಾರ್ ಈಸ್ಟ್ ಪ್ರದೇಶ 21ನೇ ಶತಮಾನದಾದ್ಯಂತ ಕಾರ್ಯತಂತ್ರದ ಮಹತ್ವ ಹೊಂದಿರಲಿದೆ ಎಂದಿದ್ದಾರೆ. ಒಟ್ಟಾರೆಯಾಗಿ ರಷ್ಯಾದಲ್ಲಿ ಇರುವ ಹೂಡಿಕೆಯ ಆಸಕ್ತಿಗೆ ಹೋಲಿಸಿದರೆ, ಫಾರ್ ಈಸ್ಟ್ ಪ್ರದೇಶದಲ್ಲಿ ಅದು ಮೂರು ಪಟ್ಟು ಹೆಚ್ಚಿದೆ ಎಂದು ಪುಟಿನ್ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷರ ಪ್ರಕಾರ, ಸೈಬೀರಿಯಾ ಮತ್ತು ಫಾರ್ ಈಸ್ಟ್ ಮಧ್ಯೆ ಸಂಪರ್ಕ ಕಲ್ಪಿಸುವ ಹೈ ಸ್ಪೀಡ್ ರೈಲ್ವೇ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಅದನ್ನು ಪೆಸಿಫಿಕ್ ಸಮುದ್ರದ ತನಕ ವಿಸ್ತರಿಸಿ, ಈ ಪ್ರದೇಶದ ಸಂಪರ್ಕ ವ್ಯವಸ್ಥೆಯನ್ನು ಉತ್ತಮಪಡಿಸಲಾಗುತ್ತದೆ. ಅದರೊಡನೆ, ‘ಪವರ್ ಆಫ್ ಸೈಬೀರಿಯಾ’ ಮತ್ತು ‘ಸಖಾಲಿನ್ – ಖಬರೋವ್ಸ್ಕ್ – ವ್ಲಾಡಿವೋಸ್ಟೊಕ್’ ಎಂಬ ಎರಡು ಗ್ಯಾಸ್ ಪೈಪ್ ಲೈನ್ ವ್ಯವಸ್ಥೆಯನ್ನು ಒಂದೇ ಏಕೀಕೃತ ವ್ಯವಸ್ಥೆಯಡಿಗೆ ತಂದು, ಫಾರ್ ಈಸ್ಟ್ ಪ್ರದೇಶದ ಚಿತ್ರಣವನ್ನು ಬದಲಾಯಿಸಿ, ಅಲ್ಲಿನ ಔದ್ಯಮಿಕ ಪ್ರಗತಿಗೆ ಇನ್ನಷ್ಟು ವೇಗ ನೀಡುವ ಉದ್ದೇಶಗಳಿವೆ.

ಇದನ್ನೂ ಓದಿ: ಜಿ20 ಶೃಂಗಸಭೆಗೆ ಭಾರತ ಖರ್ಚು ಮಾಡಿದ್ದು 4,100 ಕೋಟಿ ರೂ; ಬೇರೆ ದೇಶಗಳಲ್ಲಿ ನಡೆದ ಸಭೆಗಳಿಗೆ ವೆಚ್ಚವಾಗಿದ್ದು ಎಷ್ಟು?

ರಷ್ಯಾದ ಏಷ್ಯಾ ಕಾರ್ಯತಂತ್ರ ಮತ್ತು ಅಮೆರಿಕಾದ ಪಿವೋಟ್ ಟು ಏಷ್ಯಾ ನಡುವಿನ ವ್ಯತ್ಯಾಸಗಳು

ಪ್ರಸ್ತುತ ಸಂದರ್ಭದಲ್ಲಿ, ಅಮೆರಿಕಾ ಏಷ್ಯಾ – ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದರೆ, ಮಾಸ್ಕೋ ತನ್ನ ಸಂಪರ್ಕಗಳನ್ನು ಗಟ್ಟಿಗೊಳಿಸುವ ಮೂಲಕ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದೆ. ಇದು ಅಸೋಸಿಯೇಷನ್ ಆಫ್ ಸೌತ್ಈಸ್ಟ್ ಏಷ್ಯನ್ ನೇಷನ್ಸ್ (ASEAN) ರಾಷ್ಟ್ರಗಳ ನಡುವೆ ಹೊಸದಾದ ಸಂಭಾವ್ಯ ಅಣ್ವಸ್ತ್ರ ಸ್ಪರ್ಧೆಗೆ ಹಾದಿ ಮಾಡಿ, ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾಗೆ ನೇರ ಸವಾಲಾಗುವ ಸಾಧ್ಯತೆಗಳಿವೆ.

ಇದರೊಡನೆ, ಅಮೆರಿಕಾ ತನ್ನ ಪ್ರಾದೇಶಿಕ ಸಹಯೋಗವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ತಾನು ಚೀನಾವನ್ನು ಒಳಗೊಳ್ಳುವ ಪ್ರಯತ್ನ ಮಾಡುವುದಿಲ್ಲ ಎಂದಿದ್ದು, ಹೊಸ ಸಾಗಾಣಿಕಾ ಮತ್ತು ಮೂಲಭೂತ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸುತ್ತಿದೆ. ಬಿಡೆನ್ ಆಡಳಿತ ಇತ್ತೀಚೆಗೆ ಜಿ20 ಶೃಂಗಸಭೆಯಲ್ಲಿ ಪ್ರಸ್ತಾಪಿಸಲಾದ ಇಂಡಿಯಾ – ಮಿಡಲ್ ಈಸ್ಟ್ – ಯುರೋಪ್ ಎಕನಾಮಿಕ್ ಕಾರಿಡಾರ್ (ಐಎಂಇಸಿ) ಯೋಜನೆಯ ಭಾಗವಾಗುವುದಾಗಿ ತಿಳಿಸಿದೆ. ಇದು ಅಂತಾರಾಷ್ಟ್ರೀಯ ತಜ್ಞರಲ್ಲೂ ಸಂದೇಹಗಳನ್ನು ಮೂಡಿಸಿದೆ. ಅಧಿಕಾರಿಗಳ ಪ್ರಕಾರ, ಈ ಮೂಲಭೂತ ಅಭಿವೃದ್ಧಿ ಯೋಜನೆಯೂ ಜಿ7 ಒಕ್ಕೂಟದ ಹಲವು ಮಹತ್ವಾಕಾಂಕ್ಷಿ ಯೋಜನೆಗಳ ರೀತಿಯೇ ಕಾರ್ಯರೂಪಕ್ಕೆ ಬರದಿರುವ ಸಾಧ್ಯತೆಗಳಿವೆ. ಯಾಕೆಂದರೆ, ಈ ರೀತಿಯ ಹಲವು ಯೋಜನೆಗಳು ಪ್ರಸ್ತಾಪಿಸಲ್ಪಟ್ಟಿವೆಯೇ ಹೊರತು, ಅವು ಜಾರಿಗೆ ಬಂದಿಲ್ಲ.

ಅಮೆರಿಕಾ ಭಾರತದೊಡನೆ ತನ್ನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಸುತ್ತಿದೆ ಎನ್ನುವುದಕ್ಕೆ ಅಂತಹ ರಾಜಕೀಯ ಅಥವಾ ಮಿಲಿಟರಿ ಮಹತ್ವ ಇಲ್ಲ ಎಂದು ಸಿರಾಕುಸ ಅಭಿಪ್ರಾಯ ಪಡುತ್ತಾರೆ. “ಈಗಿನ ಸನ್ನಿವೇಶದಲ್ಲಿ, ಅಮೆರಿಕಾ ಭಾರತದ ಕುರಿತು ಆಸಕ್ತಿ ತಳೆಯುತ್ತಿರುವಂತೆ ಕಂಡುಬರುತ್ತಿದೆ. ಆದರೆ, ಬಾರತ ಇಷ್ಟು ಆಸಕ್ತಿಯಿಂದ ಅಮೆರಿಕಾದೊಡನೆ ವ್ಯವಹರಿಸುತ್ತದೆ ಎನ್ನಲು ಸಾಧ್ಯವಿಲ್ಲ. ಭಾರತಕ್ಕೆ ನೇರವಾಗಿ ಶ್ವೇತ ಭವನಕ್ಕೆ ಆಮಂತ್ರಣದಂತಹ ಅನುಕೂಲತೆಗಳು ಲಭ್ಯವಾಗುತ್ತಿದ್ದು, ಭಾರತದ ಪಾಲಿಗೆ ಸಂತೋಷದಾಯಕವಾಗಿದೆ. ಆದರೆ, ಒಟ್ಟಾರೆಯಾಗಿ ಭಾರತದೊಡನೆ ವ್ಯವಹಾರ ಮಾಡುವುದರಿಂದ, ಅಮೆರಿಕಾಗೆ ಹೆಚ್ಚಿನ ಲಾಭವಾಗಲಿದೆ. ಯಾಕೆಂದರೆ, ಭಾರತದ ಸ್ವದೇಶಿ ಮಿಲಿಟರಿ ನಿರ್ಮಾಣ ಪ್ರಯತ್ನಗಳು ದೊಡ್ಡ ಮಟ್ಟಿಗೆ ಯಶಸ್ವಿಯಾಗುತ್ತವೆ ಎನ್ನುವುದು ಕಷ್ಟಸಾಧ್ಯ” ಎಂದು ಸಿರಾಕುಸ ಅಭಿಪ್ರಾಯ ಪಡುತ್ತಾರೆ.

“ಇದರಿಂದ ನನಗೆ ಏನು ತೋರುತ್ತದೆ ಎಂದರೆ, ಅಮೆರಿಕಾ ಇನ್ನೂ ಆಸ್ಟ್ರೇಲಿಯಾದ ಸ್ಥಾನವನ್ನು ಪೂರ್ತಿಯಾಗಿ ಗ್ರಹಿಸಿಲ್ಲ. ಅಮೆರಿಕಾಗೆ ಆಕಸ್ (AUKUS) ಏನನ್ನು ಪ್ರತಿನಿಧಿಸುತ್ತದೆ ಎಂಬುದರ ಕುರಿತು ಸರಿಯಾದ ಅರಿವಿಲ್ಲ. ಅದೇ ರೀತಿ ಅವರು ಭಾರತದ ಮಹತ್ವವನ್ನೂ ಕಡಿಮೆಯಾಗಿ ಪರಿಗಣಿಸುವ ಸಾಧ್ಯತೆಗಳಿವೆ. ಅಮೆರಿಕಾಗೆ ಕ್ವಾಡ್ ಒಕ್ಕೂಟವೂ ಹೆಚ್ಚಿನ ಮಹತ್ವ ಹೊಂದಿರಲಿಕ್ಕಿಲ್ಲ. ಈಗ ಆಕಸ್ ಸಹ ಅತ್ಯಂತ ಕಡಿಮೆ ಪರಿಣಾಮಕಾರಿಯಾಗಿ ಅವರಿಗೆ ಕಾಣಿಸಬಹುದು. ಶೀತಲ ಸಮರದ ಆರಂಭದ ದಿನಗಳಿಂದಲೂ, ಫಾರ್ ಈಸ್ಟ್ ಪ್ರದೇಶದ ಬಳಿ ಅಮೆರಿಕಾದ ಸಹಯೋಗ ದಕ್ಷಿಣ ಕೊರಿಯಾ, ಜಪಾನ್‌ಗಳೊಂದಿಗಿತ್ತು. ಅವುಗಳು ದೀರ್ಘಕಾಲದಿಂದ ಪರಸ್ಪರ ಉತ್ತಮ ಸಂಬಂಧ, ಸಂಪರ್ಕ ಹೊಂದಿವೆ” ಎಂದು ಅವರು ತಿಳಿಸುತ್ತಾರೆ.

ಅಮೆರಿಕಾದ ನೀತಿಗಳ ಮೇಲೆ ಪ್ರಭಾವಶಾಲಿಗಳ ಪರಿಣಾಮಗಳು

ಏಷ್ಯಾ ಪೆಸಿಫಿಕ್ ಪ್ರದೇಶದ ಮೇಲೆ ಅಮೆರಿಕಾದ ಪ್ರಭಾವ ಕುಸಿತ ಕಾಣುತ್ತಿದೆ. ಇನ್ನು ಅಮೆರಿಕಾದ ಮಿತ್ರ ಉಕ್ರೇನ್, ಮೂರು ತಿಂಗಳಿಂದಲೂ ರಷ್ಯಾ ಮೇಲೆ ಪ್ರತಿದಾಳಿಯ ವಿಫಲ ಯತ್ನ ನಡೆಸುತ್ತಿದೆ.

ಸುಸ್ಲೋವ್ ಪ್ರಕಾರ, ಅಪಾರ ಸಂಖ್ಯೆಯ ಅಮೆರಿಕನ್ನರು, ಅದರಲ್ಲೂ ರಿಪಬ್ಲಿಕನ್ನರು ಅಮೆರಿಕಾದ ಉಕ್ರೇನ್ ನೀತಿ ಮತ್ತು ರಷ್ಯಾ ಕುರಿತ ಕಾರ್ಯತಂತ್ರ ದೋಷಪೂರಿತವಾಗಿದರ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದು ಅಮೆರಿಕಾಗೆ ಅನಗತ್ಯ ವೆಚ್ಚ ಮಾತ್ರವಲ್ಲದೆ, ಏಷ್ಯಾ – ಇಂಡೋ – ಪೆಸಿಫಿಕ್ ಪ್ರದೇಶದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವ ಅಮೆರಿಕಾದ ಯೋಚನೆಗಳಿಗೂ ಇದು ಹಿನ್ನಡೆಯಾಗಿದೆ. ಪ್ರಸ್ತುತ ಇಂತಹ ಅಭಿಪ್ರಾಯ ಹೊಂದಿರುವವರು ಅಮೆರಿಕಾದಲ್ಲಿ ಹೆಚ್ಚಿನ ಸಂಖ್ಯೆ ಹೊಂದಿಲ್ಲದಿರಬಹುದು, ಆದರೆ ಅವರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಸುಸ್ಲೋವ್.

ಅಮೆರಿಕಾದ ಗಮನ ಈಗ ಪೂರ್ವ ಯುರೋಪ್ ಹಾಗೂ ಏಷ್ಯಾ ನಡುವೆ ಹಂಚಿಹೋಗಿದ್ದು, ಬಿಡೆನ್ ಆಡಳಿತ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವ ಆತಂಕವನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯನ್ನು ಸರಿದೂಗಿಸಲು, ಪ್ರಸ್ತುತ ಅಮೆರಿಕಾ ಸರ್ಕಾರ ತನ್ನ ಹಾದಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಸುಸ್ಲೋವ್ ಅಭಿಪ್ರಾಯ ಪಡುತ್ತಾರೆ.

ಅವರ ಪ್ರಕಾರ, ಯಾವ ಒಬ್ಬ ಅಮೆರಿಕಾ ಅಧ್ಯಕ್ಷನೂ ಏಕಾಂಗಿಯಾಗಿ ರಷ್ಯಾ ಜೊತೆಗಿನ ಸಂಬಂಧದ ಕುರಿತು ಅಮೆರಿಕಾದ ನಿಲುವನ್ನು ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಸೂಕ್ತ ಉದಾಹರಣೆ. ಟ್ರಂಪ್ ಅವರು ಅಮೆರಿಕಾ – ರಷ್ಯಾ ಸಂಬಂಧವನ್ನು ಉತ್ತಮಗೊಳಿಸಲು ಪ್ರಯತ್ನ ನಡೆಸಿದರು. ಆದರೆ, ಅವರ ಅಧ್ಯಕ್ಷೀಯ ಅವಧಿಯಲ್ಲಿ ಎರಡು ದೇಶಗಳ ನಡುವಿನ ಅಸಮಾಧಾನಗಳು ಇನ್ನಷ್ಟು ಹೆಚ್ಚಾಗಿ, ಅಮೆರಿಕಾ ರಷ್ಯಾದ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರಿತು. ಈ ರೀತಿ ಯಾಕೆ ಜರುಗಿತು? ಯಾಕೆಂದರೆ, ಏನಾದರೂ ಮಹತ್ವದ ಬದಲಾವಣೆ ನಡೆಯಬೇಕಾದರೆ, ಅದಕ್ಕೆ ಕೇವಲ ಅಮೆರಿಕಾದ ಅಧ್ಯಕ್ಷರ ಬೆಂಬಲ ಮಾತ್ರವಲ್ಲದೆ, ಅಮೆರಿಕಾದ ಗಣ್ಯರು ಮತ್ತು ಡೀಪ್ ಸ್ಟೇಟ್ (ಪ್ರಭಾವಶಾಲಿಗಳು) ಬೆಂಬಲವೂ ಬೇಕಾಗುತ್ತದೆ.

ಅಮೆರಿಕಾದ ವಿದೇಶಾಂಗ ನೀತಿಗಳ ಹಿಂದಿನ ಚಾಲನಾ ಶಕ್ತಿ ಈ ಗಣ್ಯರು ಮತ್ತು ಡೀಪ್ ಸ್ಟೇಟ್ ಆಗಿದ್ದಾರೆ. ಇಂತಹ ಪ್ರಭಾವಶಾಲಿಗಳ ಒಳಗೆ ಮಹತ್ತರ ಬದಲಾವಣೆಗಳು ಕಂಡುಬರುವ ತನಕ ರಷ್ಯಾ ಕುರಿತ ಅಮೆರಿಕಾದ ನೀತಿಗಳಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳು ಉಂಟಾಗಲು ಸಾಧ್ಯವಿಲ್ಲ. ಆದರೆ, ಈಗ ಕಂಡುಬರುವ ಪ್ರಶ್ನೆಯೆಂದರೆ, ಅಮೆರಿಕಾದ ಸಾಮಾನ್ಯ ಜನರ ಅಸಮಾಧಾನಗಳ ಕಾರಣದಿಂದ, ಅಮೆರಿಕಾದ ಪ್ರಭಾವಿ ವ್ಯಕ್ತಿಗಳಲ್ಲಿ ಇಂತಹ ಭಾರೀ ಬದಲಾವಣೆ ಬರಲು ಸಾಧ್ಯವೇ? ಈಗಿನ ಸಂದರ್ಭದಲ್ಲಿ ಈ ಪ್ರಶ್ನೆಗೆ ಒಂದು ನಿರ್ಣಯಾತ್ಮಕ ಉತ್ತರ ನೀಡಲು ಸಾಧ್ಯವಿಲ್ಲ. ಈಗ ಅಮೆರಿಕಾದ ಡೀಪ್ ಸ್ಟೇಟ್ ಜನರ ಬೇಡಿಕೆಗಳು ಮತ್ತು ಅಸಮಾಧಾನದ ಕಾರಣದಿಂದ ಅವಮಾನಿತವಾಗಿದೆ ಎಂದು ಸುಸ್ಲೋವ್ ಅಭಿಪ್ರಾಯ ಪಟ್ಟಿದ್ದಾರೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​