ಜಿ20 ಶೃಂಗಸಭೆಗೆ ಭಾರತ ಖರ್ಚು ಮಾಡಿದ್ದು 4,100 ಕೋಟಿ ರೂ; ಬೇರೆ ದೇಶಗಳಲ್ಲಿ ನಡೆದ ಸಭೆಗಳಿಗೆ ವೆಚ್ಚವಾಗಿದ್ದು ಎಷ್ಟು?
G20 Summit Expenses: ಭಾರತದಲ್ಲಿ ನಡೆದ ಜಿ20 ಶೃಂಗಸಭೆಗೆ 4,100 ಕೋಟಿ ರೂ ಖರ್ಚಾಗಿರುವುದು ತಿಳಿದುಬಂದಿದೆ. ಚೀನಾ ಮತ್ತು ಕೆನಡಾದಲ್ಲಿ ಈ ಹಿಂದೆ ಆಯೋಜನೆಯಾಗಿದ್ದ ಸಭೆಗಳಿಗೆ ಇದಕ್ಕಿಂತ ಹೆಚ್ಚು ಖರ್ಚಾಗಿತ್ತೆನ್ನಲಾಗಿದೆ. 2010ರಿಂದ ನಡೆದ ವಿವಿಧ ದೇಶಗಳಲ್ಲಿ ನಡೆದಿದ್ದ ಜಿ20 ಸಭೆಗಳಿಗೆ ಎಷ್ಟೆಷ್ಟು ಖರ್ಚಾಗಿತ್ತು ಎಂಬ ವಿವರ ಈ ಸ್ಟೋರಿಯಲ್ಲಿದೆ. ಚೀನಾದ ಹಾಂಗ್ಝೋನಲ್ಲಿ 2016ರಲ್ಲಿ ನಡೆದ ಜಿ20 ಸಭೆಗೆ ಲಕ್ಷಕೋಟಿಗೂ ಹೆಚ್ಚು ಖರ್ಚಾಗಿತ್ತೆನ್ನಲಾಗಿದೆ.
ನವದೆಹಲಿ, ಸೆಪ್ಟೆಂಬರ್ 11: ನಿನ್ನೆ ಮುಕ್ತಾಯಗೊಂಡ ಜಿ20 ಶೃಂಗಸಭೆಯ ಖರ್ಚಿನ ವಿಚಾರ ವೈರಲ್ ಆಗಿದೆ. ವರದಿಗಳ ಪ್ರಕಾರ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಈ ವರ್ಷದ ಜಿ20 ನಾಯಕರ ಶೃಂಗಸಭೆಗೆ (G20 Summit) ಬರೋಬ್ಬರಿ 4,100 ಕೋಟಿ ರೂ ಖರ್ಚಾಗಿರುವುದು ತಿಳಿದುಬಂದಿದೆ. ಇಡೀ ವಿಶ್ವವನ್ನೇ ಬೆರಗಾಗಿಸಿದ ಎರಡನೇ ಚಂದ್ರಯಾನಕ್ಕೆ ಆದ ಖರ್ಚು ಅಂದಾಜು 970 ಕೋಟಿ ರೂ. ಚಂದ್ರಯಾನಕ್ಕಿಂತ ಜಿ20 ಸಭೆಗೆ ನಾಲ್ಕು ಪಟ್ಟಿಗೂ ಹೆಚ್ಚು ಖರ್ಚಾಗಿದೆ. ಕಳೆದ ಬಾರಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಸಭೆಗೆ ಆದ ಖರ್ಚಿಗಿಂತ 11 ಪಟ್ಟು ಹೆಚ್ಚಾಗಿದೆ. ಅದರೂ 2016ರಲ್ಲಿ ಚೀನಾದ ಹಾಂಗ್ಝೋನಲ್ಲಿ ನಡೆದ ಜಿ20 ಶೃಂಗಸಭೆಗೆ ಆದ ಖರ್ಚಿಗೆ ಹೋಲಿಸಿದರೆ ಭಾರತದ್ದು ಬಹಳ ಕಡಿಮೆಯೇ. 2010ರಲ್ಲಿ ಕೆನಡಾದಲ್ಲಿ ಆಯೋಜನೆಯಾಗಿದ್ದ ಜಿ20 ಶೃಂಗಸಭೆಗೂ ಬಹಳ ದೊಡ್ಡ ಪ್ರಮಾಣದಲ್ಲಿ ಖರ್ಚಾಗಿತ್ತು.
ಈ ಹಿಂದೆ ವಿವಿಧ ನಡೆದ 10 ಶೃಂಗಸಭೆಗಳಲ್ಲಿ ಖರ್ಚು ಎಷ್ಟಾಗಿದೆ ಎಂಬ ವಿವರ ಈ ಕೆಳಕಂಡಂತಿದೆ. ವಿವಿಧ ವರದಿಗಳಿಂದ ಅಂಕಿ ಅಂಶಗಳನ್ನು ಪಡೆಯಲಾಗಿದೆ. ಇದರಲ್ಲಿರುವ ಖರ್ಚಿನ ವಿವರ ಭಾರತೀಯ ರುಪಾಯಿಯಲ್ಲಿ ನೀಡಲಾಗಿದೆ.
2022: ಇಂಡೋನೇಷ್ಯಾ- 364 ಕೋಟಿ ರೂ
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದ್ದ 2022ರ ಜಿ20 ಶೃಂಗಸಭೆಗೆ 364 ಕೋಟಿ ರೂ ಖರ್ಚಾಗಿರುವುದು ತಿಳಿದುಬಂದಿದೆ.
2019: ಜಪಾನ್- 2,660 ಕೋಟಿ ರೂ
ಜಪಾನ್ನ ಒಸಾಕದಲ್ಲಿ 2019ರಲ್ಲಿ ನಡೆದಿದ್ದ ಜಿ20 ಶೃಂಗಸಭೆಯ ಆಯೋಜನೆಗೆ 2,660 ಕೋಟಿ ರೂ ವೆಚ್ಚವಾಗಿತ್ತು.
ಇದನ್ನೂ ಓದಿ: G20 Summit Budget: ಜಿ-20 ಶೃಂಗಸಭೆಗೆ ವ್ಯಯಿಸಿದ ಹಣವೆಷ್ಟು? ಇಲ್ಲಿದೆ ಮಾಹಿತಿ
2018: ಅರ್ಜೆಂಟೀನಾ- 931 ಕೋಟಿ ರೂ
ಅರ್ಜೆಂಟೀನಾದ ಬ್ಯೂನಸ್ ಏರಸ್ ನಗರದಲ್ಲಿ 2018ರಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ 931 ಕೋಟಿ ರೂ ಖರ್ಚಾಗಿದೆ.
2017: ಜರ್ಮನಿ- 642 ಕೋಟಿ ರೂ
ಜರ್ಮನಿಯ ಹ್ಯಾಂಬರ್ಗ್ನಲ್ಲಿ ನಡೆದ 2017ರ ಜಿ20 ಶೃಂಗಸಭೆಗೆ 642 ಕೋಟಿ ರೂ ವೆಚ್ಚವಾಗಿದೆ.
2016: ಚೀನಾ- 1.9 ಲಕ್ಷಕೋಟಿ ರೂ
ಚೀನಾದ ಹಾಂಗ್ಝೋನಲ್ಲಿ ಆಯೋಜನೆಯಾಗಿದ್ದ 2016ರ ಜಿ20 ಶೃಂಗಸಭೆಗೆ ಬರೋಬ್ಬರಿ 1.9 ಲಕ್ಷಕೋಟಿ ರೂ ಖರ್ಚಾಗಿದೆ. ಇದು ಜಿ20 ಇತಿಹಾಸದಲ್ಲೇ ಶೃಂಗಸಭೆಗೆ ಆದ ಅತಿಹೆಚ್ಚು ವೆಚ್ಚೆ ಎನಿಸಿದೆ.
2014: ಆಸ್ಟ್ರೇಲಿಯಾ- 2,653 ಕೋಟಿ ರೂ
ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ನಡೆದ 2014ರ ಜಿ20 ಶೃಂಗಸಭೆಗೆ ಅಂದಾಜು 2,653 ಕೋಟಿ ರೂ ಖರ್ಚಾಗಿತ್ತು.
ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಾರತದ ವಿಜಯ: ಜಗತ್ತಿನ ಗಮನ ಸೆಳೆದ ಐದು ಬೆಳವಣಿಗೆಗಳು
2013: ರಷ್ಯಾ- 170 ಕೋಟಿ ರೂ
ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಆಯೋಜನೆಯಾಗಿದ್ದ 2013ರ ಜಿ20 ಶೃಂಗಸಭೆಗೆ ಕೇವಲ 170 ಕೋಟಿ ರೂ ಖರ್ಚಾಗಿತ್ತೆನ್ನಲಾಗಿದೆ.
2011: ಫ್ರಾನ್ಸ್- 712 ಕೋಟಿ ರೂ
ಫ್ರಾನ್ಸ್ನ ಕ್ಯಾನ್ನಲ್ಲಿ ನಡೆದಿದ್ದ 2011ರ ಜಿ20 ಶೃಂಗಸಭೆಯಲ್ಲಿ ಆಗಿದ್ದ ಖರ್ಚು 712 ಕೋಟಿ ರೂ.
2010: ಕೆನಡಾ- 4,351 ಕೋಟಿ ರೂ
ಕೆನಡಾದ ಟೊರೊಂಟೋದಲ್ಲಿ 2010ರಲ್ಲಿ ನಡೆದಿದ್ದ ಜಿ20 ಶೃಂಗಸಭೆಗೆ ಬರೋಬ್ಬರಿ 4,351 ಕೋಟಿ ರೂ ವೆಚ್ಚವಾಗಿದ್ದು ವರದಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ