ಜಿ20 ಶೃಂಗಸಭೆಯಲ್ಲಿ ಭಾರತದ ವಿಜಯ: ಜಗತ್ತಿನ ಗಮನ ಸೆಳೆದ ಐದು ಬೆಳವಣಿಗೆಗಳು

ಭಾರತದ ರಾಜಧಾನಿ ನವದೆಹಲಿಯಲ್ಲಿ ಆಯೋಜಿಸಲಾದ ಜಿ-20 ಶೃಂಗಸಭೆ ಪೂರ್ಣಗೊಂಡಿದ್ದು, ಜಗತ್ತಿನಾದ್ಯಂತ ರಾಜತಂತ್ರಜ್ಞರು ಒಂದು ವರ್ಷದ ಅವಧಿಯಲ್ಲಿ ಭಾರತ ತೋರಿದ ನಾಯಕತ್ವವನ್ನು ಶ್ಲಾಘಿಸುತ್ತಿದ್ದಾರೆ. ಭಾರತ ಭಿನ್ನಾಭಿಪ್ರಾಯ ಹೊಂದಿದ್ದ ರಾಷ್ಟ್ರಗಳ ನಡುವೆ ಸಮಾನ ಅಭಿಪ್ರಾಯ ಮೂಡಿಸಿ, ಜಂಟಿ ಹೇಳಿಕೆಯನ್ನು ಘೋಷಿಸುವಂತೆ ಮಾಡಿದೆ. ಅಷ್ಟು ಮಾತ್ರವಲ್ಲದೆ, ಭವಿಷ್ಯದಲ್ಲೂ ಸಹಯೋಗ ಹೊಂದಿ, ಕಾರ್ಯಾಚರಿಸಲು ಅವಶ್ಯಕ ತಳಹದಿ ನಿರ್ಮಿಸಿದೆ.

ಜಿ20 ಶೃಂಗಸಭೆಯಲ್ಲಿ ಭಾರತದ ವಿಜಯ: ಜಗತ್ತಿನ ಗಮನ ಸೆಳೆದ ಐದು ಬೆಳವಣಿಗೆಗಳು
ಗಿರೀಶ್ ಲಿಂಗಣ್ಣ ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
Follow us
Digi Tech Desk
|

Updated on:Nov 03, 2023 | 11:43 AM

ಭಾರತದ ರಾಜಧಾನಿ ನವದೆಹಲಿಯಲ್ಲಿ ಆಯೋಜಿಸಲಾದ ಜಿ-20 ಶೃಂಗಸಭೆ ಪೂರ್ಣಗೊಂಡಿದ್ದು, ಜಗತ್ತಿನಾದ್ಯಂತ ರಾಜತಂತ್ರಜ್ಞರು ಒಂದು ವರ್ಷದ ಅವಧಿಯಲ್ಲಿ ಭಾರತ ತೋರಿದ ನಾಯಕತ್ವವನ್ನು ಶ್ಲಾಘಿಸುತ್ತಿದ್ದಾರೆ. ಭಾರತ ಭಿನ್ನಾಭಿಪ್ರಾಯ ಹೊಂದಿದ್ದ ರಾಷ್ಟ್ರಗಳ ನಡುವೆ ಸಮಾನ ಅಭಿಪ್ರಾಯ ಮೂಡಿಸಿ, ಜಂಟಿ ಹೇಳಿಕೆಯನ್ನು ಘೋಷಿಸುವಂತೆ ಮಾಡಿದೆ. ಅಷ್ಟು ಮಾತ್ರವಲ್ಲದೆ, ಭವಿಷ್ಯದಲ್ಲೂ ಸಹಯೋಗ ಹೊಂದಿ, ಕಾರ್ಯಾಚರಿಸಲು ಅವಶ್ಯಕ ತಳಹದಿ ನಿರ್ಮಿಸಿದೆ. ಭಾರತ ಮಾರ್ಗದರ್ಶನದಡಿ, ಜಿ20 ಪರಿವರ್ತನೆಯ ಹಾದಿಯಲ್ಲಿ ಚಲಿಸಿದ್ದು, ಆಫ್ರಿಕನ್ ಒಕ್ಕೂಟವನ್ನು ಗುಂಪಿನ ಶಾಶ್ವತ ಸದಸ್ಯನನ್ನಾಗಿಸಿರುವುದು ಇದಕ್ಕೆ ಉದಾಹರಣೆಯಾಗಿದೆ. ಇದು ಮುಂದಿನ ಇನ್ನಷ್ಟು ಸುಧಾರಣೆಗಳಿಗೆ ಹಾದಿ ಮಾಡಿಕೊಟ್ಟಿದೆ.

ಭಾರತ ಈ ಜಾಗತಿಕ ವೇದಿಕೆಯ ಸುಧಾರಣೆಗಾಗಿ ಆಗ್ರಹಿಸಿದ್ದು, ಅದನ್ನು ಗ್ರೂಪ್ ಆಫ್ 20 ವೇದಿಕೆಯಲ್ಲೂ ಸಾಬೀತುಪಡಿಸಿದೆ. ಈ ಶೃಂಗಸಭೆ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಭಾರತ ಶೃಂಗಸಭೆಯಲ್ಲಿ ಒಮ್ಮತದ ಘೋಷಣೆ ಮೂಡಿಸಿರುವುದು ಭಾರತದ ಸಾಧನೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳು ಮತ್ತು ರಷ್ಯಾ ಎರಡರ ಜೊತೆಯೂ ಸೌಹಾರ್ದ ಸಂಬಂಧ ಹೊಂದಿರುವ ಭಾರತ, ತನ್ನ ಈ ಸ್ಥಾನವನ್ನು ಜಾಗತಿಕ ಸಮುದಾಯದ ಕ್ಷೇಮಕ್ಕಾಗಿ ಬಳಸಿಕೊಂಡಿದೆ. ನವದೆಹಲಿಯ ಜಿ20 ಸಮ್ಮೇಳನದ ಐದು ಪ್ರಮುಖ ಬೆಳವಣಿಗೆಗಳು ಈ ಕೆಳಗಿನಂತಿವೆ.

1. ಜಿ21 ವಿಸ್ತರಣೆಯೊಡನೆ ಆಫ್ರಿಕಾಗೆ ಜಾಗತಿಕ ಪ್ರಾತಿನಿಧ್ಯ

ಭಾರತದ ನಾಯಕತ್ವದಡಿ, ಜಿ20 ವಿಸ್ತರಣೆ ಹೊಂದಿ, ಜಿ21 ನಿರ್ಮಾಣವಾಗಿದೆ. ಆಫ್ರಿಕನ್ ಒಕ್ಕೂಟಕ್ಕೆ ಈ ಗೌರವಯುತ ಗುಂಪಿನ ಶಾಶ್ವತ ಭಾಗವಾಗಲು ಬಾಗಿಲು ತೆರೆಯಲಾಗಿದೆ. ಆಫ್ರಿಕಾ ಖಂಡ ಜಾಗತಿಕ ಜನಸಂಖ್ಯೆಯ ಐದನೇ ಒಂದು ಪಾಲು ಹೊಂದಿದ್ದು, ಜಾಗತಿಕ ನಾಯಕರಿಗೆ ಆಫ್ರಿಕಾವನ್ನು ಕಡೆಗಣಿಸಬಾರದು ಎಂಬ ಭಾರತದ ಸಂದೇಶ ಸ್ಪಷ್ಟವಾಗಿದೆ. ದಕ್ಷಿಣ ಆಫ್ರಿಕಾ ಅಧ್ಯಕ್ಷೀಯ ವಕ್ತಾರರಾದ ವಿನ್ಸೆಂಟ್‌ ಮಾಗ್‌ವೆನ್ಯ ಅವರು ಈ ಕ್ರಮದ ಮಹತ್ವದ ಕುರಿತು ಮಾತನಾಡಿದ್ದು, ಜಾಗತಿಕ ಮಟ್ಟದಲ್ಲಿ 55 ರಾಷ್ಟ್ರಗಳ ಒಕ್ಕೂಟವಾದ ಆಫ್ರಿಕನ್ ಯೂನಿಯನ್ ಸಲ್ಲಿಸಿದ ಬೇಡಿಕೆಗೆ ಕಡೆಗೂ ಬೆಲೆ ಸಿಕ್ಕಿದೆ ಎಂದಿದ್ದಾರೆ. ಆಫ್ರಿಕನ್ ಒಕ್ಕೂಟ ಜಿ20 ಹಾಗೂ ಇತರ ಜಾಗತಿಕ ಸಂಸ್ಥೆಗಳ ಭಾಗವಾಗುವ ಆಶಯ ವ್ಯಕ್ತಪಡಿಸಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೂ ಪುನಾರಚನೆಯಾಗಬೇಕು ಎಂದು ಆಗ್ರಹಿಸಿತ್ತು.

2. ಚೀನಾದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ ಸವಾಲಾದ ಭಾರತ ನೇತೃತ್ವದ ಆರ್ಥಿಕ ಕಾರಿಡಾರ್

ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ 10ನೇ ವಾರ್ಷಿಕೋತ್ಸವದ ಹಿಂದಿನ ದಿನ ಒಂದು ಗಮನಾರ್ಹ ಬೆಳವಣಿಗೆ ನಡೆದಿದೆ. ಅಮೆರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಹಾಗೂ ಯುರೋಪಿಯನ್ ಒಕ್ಕೂಟದ ಜಂಟಿ ಸಹಯೋಗದೊಡನೆ ಭಾರತ ನೂತನ, ಮಹತ್ವಾಕಾಂಕ್ಷಿ ಯೋಜನೆಯಾದ ಇಂಡಿಯಾ – ಮಿಡಲ್ ಈಸ್ಟ್ – ಯುರೋಪ್ ಎಕನಾಮಿಕ್ ಕಾರಿಡಾರ್ (IMEE – EC) ನಿರ್ಮಾಣಕ್ಕೆ ಎಂಒಯು ಸಹಿ ಹಾಕಿದೆ. ಈ ಕಾರಿಡಾರ್ ಆರ್ಥಿಕ ಏಕೀಕರಣ ಸಾಧಿಸಲು, ಏಷ್ಯಾ ಮತ್ತು ಯುರೋಪ್ ನಡುವೆ ಸಂಪರ್ಕ ಸಾಧಿಸಲು, ಜೊತಗೆ ಕ್ಸಿ ಜಿನ್‌ಪಿಂಗ್ ಅವರ ಬಿಆರ್‌ಐ ಯೋಜನೆಗೆ ಸ್ಪರ್ಧೆಯೊಡ್ಡಲು ನೆರವಾಗಲಿದೆ.

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಜಿ-7 ಒಕ್ಕೂಟದ ಸದಸ್ಯನಾಗಿರುವ ಇಟಲಿ ತನ್ನ ಪ್ರಧಾನಿ ಜಿಯೋರ್ಜಿಯಾ ಮೆಲೊನಿ ಅವರ ನೇತೃತ್ವದಲ್ಲಿ, ಚೀನಾ ಪ್ರಾಯೋಜಿತ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ (ಬಿಆರ್‌ಐ) ನಿಂದ ಹೊರಬರಲು ಆಲೋಚಿಸುತ್ತಿದೆ. ಈ ಬೆಳವಣಿಗೆ ಅತ್ಯಂತ ಕಾರ್ಯತಂತ್ರದ ಮಹತ್ವವನ್ನು ಪಡೆದುಕೊಂಡಿದೆ. ಈ ಮಹತ್ವದ ಯೋಜನೆಗೆ, ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಹಾಗೂ ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಯುಎಇ ಅಧ್ಯಕ್ಷರು ಪ್ರಧಾನಿ ಮೋದಿಯವರಿಗೆ ಆತ್ಮೀಯರಾಗಿದ್ದು, ಭಾರತದ ಮಿತ್ರರೂ ಆಗಿದ್ದಾರೆ. ಅವರು ಈ ಯೋಜನೆಗೆ ಅಪಾರ ಬೆಂಬಲ ವ್ಯಕ್ತಪಡಿಸಿದ್ದು, ಅರೇಬಿಯನ್ ಪರ್ಯಾಯ ದ್ವೀಪ ಭಾರತ ಮತ್ತು ಯುರೋಪ್ ನಡುವೆ ಆರ್ಥಿಕ ಕೊಂಡಿಯಾಗಲಿದೆ ಎಂದು ನಿರೀಕ್ಷಿಸಿದ್ದಾರೆ. ಇನ್ನೊರ್ವ ಮಿತ್ರ ಇಮ್ಮಾನುಯೆಲ್ ಮಾಕ್ರೋನ್ ಅವರ ಫ್ರಾನ್ಸ್ ಬೆಂಬಲದೊಡನೆ, ಜರ್ಮನಿ, ಇಟಲಿ ಹಾಗೂ ಯುರೋಪಿಯನ್ ಕಮಿಷನ್ ಈ ಮಹತ್ವಾಕಾಂಕ್ಷಿ ಯೋಜನೆಗೆ ಕೈಜೋಡಿಸಿವೆ.

3. ಜಿ20ಯಲ್ಲಿ ಭಾರತದ ರಾಜತಾಂತ್ರಿಕ ಗೆಲುವು

ಒಂದು ಗಮನಾರ್ಹ ರಾಜತಾಂತ್ರಿಕ ಸಾಧನೆಯನ್ನು ನಿರ್ಮಿಸಿದೆ. ತನ್ನ ರಾಜಧಾನಿ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ರಷ್ಯಾ – ಉಕ್ರೇನ್ ಯುದ್ಧದ ಕುರಿತು, ಇತರ ಹಲವು ವಿಚಾರಗಳ ಕುರಿತು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯ ಇದ್ದಾಗ್ಯೂ, ಸರ್ವ ಸಮ್ಮತ ಜಂಟಿ ಹೇಳಿಕೆ ಘೋಷಿಸಲು ಭಾರತ ಯಶಸ್ವಿಯಾಗಿದೆ. ಭಾರತದ ಪ್ರತಿನಿಧಿಗಳು ಅವಿಶ್ರಾಂತವಾಗಿ ಕಾರ್ಯಾಚರಿಸಿ, ಪಾಶ್ಚಾತ್ಯ ರಾಷ್ಟ್ರಗಳು ಮತ್ತು ರಷ್ಯಾ – ಚೀನಾ ಸಹಯೋಗದ ನಡುವೆ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾದರು. ಪ್ರಧಾನಿ ನರೇಂದ್ರ ಮೋದಿಯವರು ಜೋ ಬಿಡೆನ್, ರಿಷಿ ಸುನಾಕ್, ಒಲಾಫ್ ಶೋಲ್ಜ್, ಹಾಗೂ ಫುಮಿಯೋ ಕಿಶಿಡಾ ಅವರಂತಹ ನಾಯಕರೊಡನೆ ದ್ವಿಪಕ್ಷೀಯ ಮಾತುಕತೆ ನಡೆಸಿರುವುದೂ ಈ ಒಮ್ಮತ ಮೂಡಿಸುವಲ್ಲಿ ನೆರವಾಗಿದೆ.

4. ಹವಾಮಾನ ಬಿಕ್ಕಟ್ಟಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಮರೆತು ಒಂದಾದ ಜಿ-20

ರಷ್ಯಾ – ಉಕ್ರೇನ್ ಕದನದ ವಿಚಾರದಲ್ಲಿ ಜಿ20 ರಾಷ್ಟ್ರಗಳು ಭಿನ್ನಾಭಿಪ್ರಾಯ ಹೊಂದಿದ್ದರೂ, ಹವಾಮಾನ ಬದಲಾವಣೆ ಅದರದೇ ಆದ ಸವಾಲುಗಳನ್ನು ಮುಂದಿಟ್ಟಿದೆ. ಹವಾಮಾನ ಬಿಕ್ಕಟ್ಟಿನ ನಿವಾರಣೆಯ ವಿಚಾರದಲ್ಲಿ ಒಂದು ಒಮ್ಮತ ಮೂಡಿದ್ದು, ಇದು ಭಾರತ ಮತ್ತು ಜಾಗತಿಕ ಸಮುದಾಯ ಎರಡಕ್ಕೂ ಮಹತ್ವದ ಸಾಧನೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಪಳೆಯುಳಿಕೆ ಇಂಧನ ಬಳಕೆ ಕಡಿಮೆಗೊಳಿಸುವುದು, ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ವಿಸ್ತರಿಸುವುದು, ಹಾಗೂ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವುದು ಸೇರಿದ್ದರೂ, ಇದಕ್ಕೆ ಚೀನಾ ಮತ್ತು ಸೌದಿ ಅರೇಬಿಯಾಗಳಿಂದ ವಿರೋಧ ವ್ಯಕ್ತವಾಯಿತು.

ಜಂಟಿ ಹೇಳಿಕೆಯೆಡೆಗಿನ ಸಂವಾದದಲ್ಲಿ, ಭಾರತ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಜವಾಬ್ದಾರಿ ಪೂರ್ಣಗೊಳಿಸಬೇಕು ಎಂದವು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನ ಸಂಬಂಧಿತ ಗುರಿಗಳಿಗೆ ಜಗತ್ತಿನಾದ್ಯಂತ ಒತ್ತು ನೀಡಬೇಕು ಎಂದವು. ನವದೆಹಲಿ ಜಿ20 ಶೃಂಗಸಭೆಯ ನಿರ್ಣಯ ಪಳೆಯುಳಿಕೆ ಇಂಧನದ ಮೇಲಿನ ಸಬ್ಸಿಡಿಗಳನ್ನು ಕ್ರಮೇಣ ನಿವಾರಿಸುವ, ಹಾಗೂ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಉತ್ಪಾದನೆಯನ್ನು ಕಡಿಮೆಗೊಳಿಸಿ, ಸ್ವಚ್ಛ ಇಂಧನ ಉತ್ಪಾದಿಸಲು ಉತ್ತೇಜನ ನೀಡಬೇಕೆಂದು ಶಿಫಾರಸು ಮಾಡಿದೆ.

ಇದನ್ನೂ ಓದಿ:ಜಿ-20 ಶಾಶ್ವತ ಸದಸ್ಯತ್ವ ಪಡೆದ ಆಫ್ರಿಕನ್ ಒಕ್ಕೂಟ: ಜಗತ್ತಿನ ಮೇಲೆ ಪ್ರಭಾವ ಬೀರಬಲ್ಲದೇ ಕಗ್ಗತ್ತಲ ಖಂಡ?

5. ಸುಸ್ಥಿರ ಭವಿಷ್ಯಕ್ಕಾಗಿ ಜಾಗತಿಕ ಜೈವಿಕ ಇಂಧನ ಮೈತ್ರಿಕೂಟ

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಒಂದು ಮಹತ್ವದ ಘೋಷಣೆ ನಡೆಸಿ, ಜಾಗತಿಕ ಜೈವಿಕ ಇಂಧನ ಮೈತ್ರಿಕೂಟಕ್ಕೆ ಚಾಲನೆ ನೀಡಿದರು. ಈ ಒಕ್ಕೂಟ 19 ರಾಷ್ಟ್ರಗಳು ಮತ್ತು 12 ಅಂತಾರಾಷ್ಟ್ರೀಯ ಸಂಘಟನೆಗಳನ್ನು ಒಳಗೊಂಡಿದ್ದು, ಜಿ-20 ಸದಸ್ಯರು ಮತ್ತು ಸದಸ್ಯರಲ್ಲದವರನ್ನೂ ಒಳಗೊಂಡಿದೆ. ಗಮನಾರ್ಹವಾಗಿ, ಭಾರತ, ಬ್ರೆಜಿಲ್ ಹಾಗೂ ಅಮೆರಿಕಾ ಈ ಮೈತ್ರಿಕೂಟದ ಸ್ಥಾಪಕ ಸದಸ್ಯರಾಗಿ ಕಾರ್ಯಾಚರಿಸಲಿವೆ.

ಈ ಮೈತ್ರಿಕೂಟದ ಸ್ಥಾಪನಾ ಸಮಾರಂಭದಲ್ಲಿ ಪ್ರಮುಖ ನಾಯಕರುಗಳಾದ ಜೋ ಬಿಡೆನ್, ಲೂಯಿಸ್ ಇನಾಸಿಯೋ ಡಾ ಸಿಲ್ವ, ಆಲ್ಬರ್ಟೊ ಏಂಜೆಲ್ ಫರ್ನಾಂಡೀಸ್, ಜಿಯೋರ್ಜಿಯಾ ಮೆಲೊನಿ, ಶೇಖ್ ಹಸೀನಾ, ಮತ್ತಿತರರು ಉಪಸ್ಥಿತರಿದ್ದರು. ಭಾರತ, ಬ್ರೆಜಿಲ್, ಹಾಗೂ ಅಮೆರಿಕಾಗಳೊಡನೆ, ಅರ್ಜೆಂಟೀನಾ, ಕೆನಡಾ, ಇಟಲಿ, ಹಾಗೂ ದಕ್ಷಿಣ ಆಫ್ರಿಕಾದಂತಹ ಜಿ20 ಸದಸ್ಯ ರಾಷ್ಟ್ರಗಳು ಈ ಕ್ರಮಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ. ಜಿ-20 ಸದಸ್ಯರಲ್ಲದಿದ್ದರೂ, ಬಾಂಗ್ಲಾದೇಶ, ಸಿಂಗಾಪುರ, ಮಾರಿಷಸ್, ಹಾಗೂ ಯುಎಇಗಳಿಗೆ ಈ ಮಹತ್ವದ ಯೋಜನೆಯ ಭಾಗವಾಗುವಂತೆ ಆಹ್ವಾನ ನೀಡಲಾಗಿದೆ.

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Mon, 11 September 23