ಭಾರತ – ಚೀನಾ ಸಂಬಂಧಗಳನ್ನು ಹದಗೆಡಿಸುತ್ತಿರುವ ಗಡಿ ವಿವಾದ

India China Border Dispute; ಚೀನಾದ ಪ್ರಭಾವವನ್ನು ತಗ್ಗಿಸಲು ಅಮೆರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳು ಭಾರತದೊಡನೆ ಸಂಬಂಧ ವೃದ್ಧಿಸಲು ಪ್ರಯತ್ನ ನಡೆಸುತ್ತಿವೆ. ಇದೇ ವೇಳೆ ಬೀಜಿಂಗ್ ಪಾಶ್ಚಾತ್ಯ ಮೇಲುಗೈ ತಗ್ಗಿಸಲು ಸೂಕ್ತ ಸಹಯೋಗಿಗಳನ್ನು ಸಕ್ರಿಯವಾಗಿ ಹುಡುಕುತ್ತಿದೆ.

ಭಾರತ - ಚೀನಾ ಸಂಬಂಧಗಳನ್ನು ಹದಗೆಡಿಸುತ್ತಿರುವ ಗಡಿ ವಿವಾದ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Sep 07, 2023 | 3:54 PM

ಭಾರತ ಮತ್ತು ಚೀನಾ (Indo China) ಎರಡೂ ಅಣ್ವಸ್ತ್ರಗಳನ್ನು ಹೊಂದಿರುವ ನೆರೆಹೊರೆಯ ರಾಷ್ಟ್ರಗಳಾಗಿದ್ದು, 2020ರಲ್ಲಿ ದಶಕದಲ್ಲೇ ಅತಿದೊಡ್ಡ ಚಕಮಕಿ ನಡೆದ ಬಳಿಕ, ಹಿಮಾಲಯದ ವಿವಾದಾತ್ಮಕ ಪ್ರದೇಶಗಳಲ್ಲಿ (Border Dispute) ಭಾರೀ ಮಿಲಿಟರಿ ಉಪಸ್ಥಿತಿಯನ್ನು ಹೊಂದಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಚೀನಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿ, ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ತಂತ್ರಜ್ಞಾನ ಸಂಸ್ಥೆಗಳ ಹೂಡಿಕೆ ಮತ್ತು ಉಪಸ್ಥಿತಿಯನ್ನು ಕಡಿಮೆಗೊಳಿಸಲು ಪ್ರಯತ್ನಿಸಿದೆ. ಈ ವಿವಾದಗಳನ್ನು ಮಾತುಕತೆಯ ಮೂಲಕವೇ ಪರಿಹರಿಸಲು ಪ್ರಯತ್ನ ನಡೆಸಲಾಗಿದೆಯಾದರೂ, ಅದರಿಂದ ಹೇಳಿಕೊಳ್ಳುವ ಪ್ರಯೋಜನ ಲಭ್ಯವಾಗಿಲ್ಲ. ಆದರೆ ಈ ವರ್ಷ ಮಾತುಕತೆ ಸ್ವಲ್ಪ ಹೆಚ್ಚು ಸಮಾಧಾನಕರ ಧ್ವನಿಯಲ್ಲಿ ನಡೆದಿದ್ದು, ಎರಡೂ ರಾಷ್ಟ್ರಗಳು ಮಾತುಕತೆ ನಡೆಸಲು ಹೆಚ್ಚಿನ ಇಚ್ಛಾಶಕ್ತಿ ಪ್ರದರ್ಶಿಸಿವೆ. ಈ ಸಂದರ್ಭದಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಯಾವುದೇ ಸಂಭಾವ್ಯ ನಿರ್ಣಯವೂ ಹೆಚ್ಚಿನ ಜಾಗತಿಕ ರಾಜಕಾರಣದ ಚಿತ್ರಣದ ಮೇಲೆ ಹೆಚ್ಚಿನ ಪರಿಣಾಮ ಬೀರಲು ಸಾಧ್ಯವಿಲ್ಲ. ಚೀನಾದ ಪ್ರಭಾವವನ್ನು ತಗ್ಗಿಸಲು ಅಮೆರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳು ಭಾರತದೊಡನೆ ಸಂಬಂಧ ವೃದ್ಧಿಸಲು ಪ್ರಯತ್ನ ನಡೆಸುತ್ತಿವೆ. ಇದೇ ವೇಳೆ ಬೀಜಿಂಗ್ ಪಾಶ್ಚಾತ್ಯ ಮೇಲುಗೈ ತಗ್ಗಿಸಲು ಸೂಕ್ತ ಸಹಯೋಗಿಗಳನ್ನು ಸಕ್ರಿಯವಾಗಿ ಹುಡುಕುತ್ತಿದೆ.

ಗಡಿ ಉದ್ವಿಗ್ನತೆಯ ಕಾರಣವೇನು?

2020ರಲ್ಲಿ, ಚೀನಾ ಇದ್ದಕ್ಕಿದ್ದ ಹಾಗೇ ಟಿಬೆಟ್ ಸಮೀಪದ, ಭಾರತದ ಉತ್ತರ ಭಾಗವಾದ ಲಡಾಖ್ ಬಳಿ ತನ್ನ ಸೇನೆಯನ್ನು ನಿಯೋಜಿಸಿ, ಭಾರತವನ್ನು ಚಕಿತಗೊಳಿಸಿತ್ತು. ಈ ಪ್ರದೇಶದಲ್ಲಿ 3,488 ಕಿಲೋಮೀಟರ್‌ಗಳಷ್ಟು (2,167 ಮೈಲಿ) ಗಡಿಯನ್ನು ಇನ್ನೂ ನಿಖರವಾಗಿ ಗುರುತಿಸಲಾಗಿಲ್ಲ. ಚೀನಾದ ಈ ಕ್ರಮಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಭಾರತ ಸಾಂಸ್ಕೃತಿಕವಾಗಿ ಕಾಶ್ಮೀರ ಮತ್ತು ಟಿಬೆಟ್‌ಗೆ ಹತ್ತಿರವಿರುವ ಲಡಾಖಿನ ಗಡಿಗಳ ಕುರಿತು ಈ ಹಿಂದೆ ಕೈಗೊಂಡ ಕ್ರಮಗಳು ಚೀನಾಗೆ ಕೋಪ ತರಿಸಿದ್ದವು ಎನ್ನಲಾಗಿದೆ. ಚೀನಾ ನವದೆಹಲಿಯ ಮೇಲೆ ತನ್ನ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವ ಆರೋಪ ಹೊರಿಸಿತ್ತು. ಅದೇ ವರ್ಷ ಜೂನ್ ತಿಂಗಳಲ್ಲಿ ಭಾರತ ಮತ್ತು ಚೀನಾಗಳ ನಡುವೆ ಗಲ್ವಾನ್ ನದಿ ಪ್ರದೇಶ ಮತ್ತು ಟಿಬೆಟಿಯನ್ ಪ್ರಸ್ಥಭೂಮಿಯ 14,000 ಅಡಿ (4,300 ಮೀಟರ್) ಎತ್ತರದಲ್ಲಿರುವ ಪಾಂಗಾಂಗ್ ತ್ಸೊ ಸರೋವರದ ಬಳಿ ಚಕಮಕಿ ನಡೆದಿತ್ತು. ಇದರ ಪರಿಣಾಮವಾಗಿ ಸಾವುನೋವುಗಳು ಸಂಭವಿಸಿದ್ದು, ಭಾರತದ 20 ಸೈನಿಕರು ಮತ್ತು ಚೀನಾದ ನಾಲ್ವರು ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಸೆಪ್ಟೆಂಬರ್ ತಿಂಗಳ ವೇಳೆಗೆ ಎರಡು ರಾಷ್ಟ್ರಗಳು ಉದ್ವಿಗ್ನತೆಯನ್ನು ತಿಳಿಗೊಳಿಸುವ ಪ್ರಯತ್ನ ನಡೆಸಲು ಬದ್ಧ ಎಂದು ಘೋಷಿಸಿದ್ದವು. ಅದಾದ ಬಳಿಕ, ಭಾರತ ಮತ್ತು ಚೀನಾಗಳು ಮುಂಚೂಣಿಯಲ್ಲಿ ಸೇನಾ ನಿಯೋಜನೆ ಮಾಡುವುದನ್ನು ನಿಲ್ಲಿಸಲು ಒಪ್ಪಿಕೊಂಡವು. ಫೆಬ್ರವರಿ 2021ರಲ್ಲಿ ಎರಡೂ ಪಡೆಗಳು ಪಾಂಗಾಂಗ್ ಸರೋವರದಿಂದ ಸೇನಾ ಹಿಂಪಡೆತವನ್ನು ಖಚಿತಪಡಿಸಿದವು. ಹಲವು ಸುತ್ತುಗಳ ಮಾತುಕತೆಗಳ ಬಳಿಕವೂ, ಇದರಲ್ಲಿ ಪ್ರಗತಿ ಮಾತ್ರ ಸೀಮಿತವಾಗಿತ್ತು.

ಈ ಎಲ್ಲ ಬೆಳವಣಿಗೆಗಳ ಫಲಿತಾಂಶ ಅಥವಾ ಪರಿಣಾಮಗಳೇನು?

2020ರ ಚಕಮಕಿಯ ಬಳಿಕ, ಭಾರತ ಈ ಸನ್ನಿವೇಶಕ್ಕೆ ಪ್ರತಿಕ್ರಿಯೆಯಾಗಿ ಹಲವು ಕ್ರಮಗಳನ್ನು ಕೈಗೊಂಡಿತು. ಭಾರತ ಟಿಕ್‌ಟಾಕ್, ವಿಚಾಟ್ ಸೇರಿದಂತೆ, ಚೀನಾದ ಹಲವು ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ನಿಷೇಧಿಸಿತು. ಔದ್ಯಮಿಕ ಪ್ರಯಾಣಗಳಿಗೆ ವೀಸಾ ನಿರ್ಬಂಧ ಹೇರಲಾಯಿತು. ಭಾರತದಲ್ಲಿನ ಚೀನೀ ಹೂಡಿಕೆಗಳಿಗೆ ಹೆಚ್ಚಿನ ಪರಿಶೀಲನೆ ಆರಂಭವಾಯಿತು. ಅದಾಗಿ ಮೂರು ವರ್ಷಗಳ ಬಳಿಕವೂ ಭಾರತ ಚೀನಾದ ಹೂಡಿಕೆಗಳನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುತ್ತಿದೆ. ಇತ್ತೀಚೆಗೆ ಭಾರತ ಚೀನಾದಿಂದ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ನಂತಹ ಇಲೆಕ್ಟ್ರಾನಿಕ್ ಉಪಕರಣಗಳ ಆಮದಿನ ಮೇಲೆ ನಿರ್ಬಂಧ ಹೇರಿತು. ಇದು ಚೀನಾದ ಮೇಲೆ ಇನ್ನಷ್ಟು ಪರಿಣಾಮ ಬೀರಿತು. ಭಾರತೀಯ ಅಧಿಕಾರಿಗಳು ಚೀನಾದ ಕಾರ್ ಉತ್ಪಾದಕ ಸಂಸ್ಥೆ ಬಿವೈಡಿ ಕೊ ಒಂದು ಬಿಲಿಯನ್ ಡಾಲರ್ ಹೂಡಿಕೆಯಲ್ಲಿ ಭಾರತದಲ್ಲಿ ವಿದ್ಯುತ್ ಚಾಲಿತ ಕಾರ್ ಉತ್ಪಾದನಾ ಘಟಕ ಆರಂಭಿಸುವುದಾಗಿ ಸಲ್ಲಿಸಿದ ಪ್ರಸ್ತಾವನೆಯನ್ನು ಭದ್ರತಾ ಕಾರಣಗಳನ್ನು ನೀಡಿ ತಿರಸ್ಕರಿಸಿದರು. ಗಡಿ ಉದ್ವಿಗ್ನತೆಯ ಕಾರಣದಿಂದ, ಭಾರತ ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳೊಡನೆ ಸಹಯೋಗವನ್ನು ಹೆಚ್ಚಿಸಿಕೊಂಡು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ತಾಂತ್ರಿಕತೆ ಪಡೆಯಲು ಹಾಗೂ ಚೀನಾದ ಕಾರ್ಖಾನೆಗಳ ಉತ್ಪನ್ನಗಳಿಗೆ ಬದಲಿ ವ್ಯವಸ್ಥೆ ಪಡೆಯಲು ಮುಂದಾಯಿತು. ಅಮೆರಿಕಾ, ಜಪಾನ್ ಹಾಗೂ ಆಸ್ಟ್ರೇಲಿಯಾಗಳನ್ನು ಒಳಗೊಂಡ ಕ್ವಾಡ್ ಭದ್ರತಾ ಒಕ್ಕೂಟವನ್ನು ಪುನಶ್ಚೇತನಗೊಳಿಸಿ, ಹಿಂದೂ ಮಹಾಸಾಗರದಲ್ಲಿ ನೌಕಾ ಅಭ್ಯಾಸ ಕೈಗೊಳ್ಳಲಾಯಿತು. ಈ ಎಲ್ಲ ಕ್ರಮಗಳ ಹೊರತಾಗಿಯೂ, ಸ್ಥಳೀಯ ಉತ್ಪಾದನೆಗಾಗಿ ಭಾರತ ಬಿಡಿಭಾಗಗಳು ಮತ್ತು ಕಚ್ಚಾ ವಸ್ತುಗಳಿಗಾಗಿ ಚೀನಾ ಮೇಲೆ ಅವಲಂಬಿತವಾಗಿದೆ. ಚೀನಾ ಭಾರತದ ಎರಡನೆಯ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿದೆ.

ಪ್ರಸ್ತುತ ಭಾರತ – ಚೀನಾಗಳ ನಡುವಿನ ಸನ್ನಿವೇಶವೇನು?

ಆಗಸ್ಟ್ ತಿಂಗಳ ಆರಂಭದಲ್ಲಿ, ಭಾರತ ಮತ್ತು ಚೀನಾಗಳ ಕಮಾಂಡರ್‌ಗಳು ಗಡಿ ಉದ್ವಿಗ್ನತೆಯನ್ನು ಕ್ಷಿಪ್ರವಾಗಿ ಸರಿಪಡಿಸುವುದಾಗಿ ಘೋಷಿಸಿದರು. ಇದರಿಂದಾಗಿ ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವೆ ನೇರ ಭೇಟಿ, ಮಾತುಕತೆ ನಡೆಯುವ ಸಂದೇಶ ಲಭಿಸಿತ್ತು. ಅವರು ಅದೇ ತಿಂಗಳು ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಭೇಟಿಯಾಗಿ, ಗಡಿ ವಿವಾದವನ್ನು ಶೀಘ್ರವಾಗಿ ಸರಿಪಡಿಸುವ ನಿರ್ಧಾರ ಕೈಗೊಂಡರು. ಆದರೂ, ಕ್ಸಿ ಜಿನ್‌ಪಿಂಗ್ ನವದೆಹಲಿಯಲ್ಲಿ ಗ್ರೂಪ್ ಆಫ್ 20 ಸಮಾವೇಶದಲ್ಲಿ ಭಾಗವಹಿಸದಿರಲು ನಿರ್ಧರಿಸಿ, ತನ್ನ ಬದಲು ಚೀನಾದ ಪ್ರೀಮಿಯರ್ ಲಿ ಕಿಯಾಂಗ್ ಅವರನ್ನು ಪ್ರತಿನಿಧಿಯಾಗಿ ಕಳುಹಿಸುವ ನಿರ್ಧಾರ ಕೈಗೊಂಡಿದ್ದಾರೆ. ಅವರು ತನ್ನ ಈ ನಿರ್ಧಾರಕ್ಕೆ ಯಾವುದೇ ಸ್ಪಷ್ಟ ವಿವರಣೆಯನ್ನೂ ನೀಡಿಲ್ಲ.

ಭಾರತ ಮತ್ತು ಚೀನಾಗಳೆರಡೂ ತಮ್ಮ ಜಾಗತಿಕ ಪ್ರಭಾವವನ್ನು ಹೆಚ್ಚಿಸಿ, ಅಮೆರಿಕಾದ ಪ್ರಭಾವವನ್ನು ಮೀರಲು ಪ್ರಯತ್ನ ನಡೆಸುತ್ತಿವೆ. ಭಾರತ – ಚೀನಾಗಳು ಡಾಲರ್ ಬದಲಿಗೆ ತಮ್ಮ ಸ್ಥಳೀಯ ಹಣದಲ್ಲಿ ವ್ಯಾಪಾರ ಮಾಡಲು ಪ್ರಯತ್ನ ನಡೆಸುತ್ತಿವೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದ್ದರೂ, ಭಾರತ ಮತ್ತು ಚೀನಾಗಳು ಅದರೊಡನೆ ಸಂಬಂಧ ಮುಂದುವರಿಸಿವೆ. ಆದರೆ ಇದು ಆಯುಧಗಳ ನಿರಂತರ ಪೂರೈಕೆಗೆ ರಷ್ಯಾ ಮೇಲೆ ಅವಲಂವಿತವಾಗಿರುವುದು ದೆಹಲಿಗೆ ಅಪಾಯಕರ ಎಂಬ ಭಾವನೆ ಮೂಡಿಸಿದೆ.

ಇದನ್ನೂ ಓದಿ: ಗ್ಲೋಬಲ್ ಸೌತ್: ಭಾರತ ಕೇಂದ್ರಿತ ದೃಷ್ಟಿಯೊಡನೆ ಸವಾಲುಗಳು, ಅವಕಾಶಗಳು ಮತ್ತು ಬದಲಾಗುತ್ತಿರುವ ಆಯಾಮಗಳು

ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಕ್ವಾಡ್ ಒಕ್ಕೂಟದಲ್ಲಿ ಒಂದು ಪ್ರಮುಖ ಸದಸ್ಯನನ್ನಾಗಿಸಲು ಪ್ರಯತ್ನಿಸುತ್ತಿದ್ದು, ಭಾರತ ಚೀನಾಗೆ ಸಮರ್ಥ ಪ್ರತಿಸ್ಪರ್ಧಿಯ ಪಾತ್ರ ನಿರ್ವಹಿಸಲಿದೆ ಎಂಬ ಭಾವನೆ ಮೂಡಿಸಿದ್ದಾರೆ. ಆ ಮೂಲಕ, ಭಾರತಕ್ಕೆ ಮಹತ್ವದ ತಂತ್ರಜ್ಞಾನಗಳು ಮತ್ತು ಉತ್ಪಾದನಾ ಬೆಂಬಲವನ್ನು ಅಮೆರಿಕಾ ಮತ್ತು ಅದರ ಸಹಯೋಗಿ ರಾಷ್ಟ್ರಗಳಿಂದ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಚೀನಾ ಕ್ವಾಡ್ ಒಕ್ಕೂಟವನ್ನು ತನ್ನ ಜಾಗತಿಕ ಏಳಿಗೆಯನ್ನು ತಡೆಯುವ ಪ್ರಯತ್ನ ಎಂದು ಟೀಕಿಸಿದ್ದು, ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಮತ್ತು ನೇಪಾಳಗಳಲ್ಲಿ ಹೂಡಿಕೆ ಮಾಡಿ, ತನ್ನ ಉಪಸ್ಥಿತಿಯನ್ನು ತೋರಿಸುತ್ತಿದೆ. ಅದರೊಡನೆ, ಹಿಂದೂ ಮಹಾಸಾಗರದಲ್ಲೂ ತನ್ನ ಗಸ್ತನ್ನು ಹೆಚ್ಚಿಸುತ್ತಿದೆ. ಚೀನಾ ಮತ್ತು ಅಮೆರಿಕಾಗಳ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ನರೇಂದ್ರ ಮೋದಿಯವರು ಕಾರ್ಖಾನೆ ಉದ್ಯೋಗಗಳನ್ನು ಭಾರತಕ್ಕೆ ಸೆಳೆಯುವ ಪ್ರಯತ್ನ ನಡೆಸುತ್ತಿರುವುದನ್ನು ಚೀನಾ ಗಮನಿಸುತ್ತಿದೆ.

ಭಾರತ ಚೀನಾ ಗಡಿ ವಿವಾದದ ಇತಿಹಾಸ

ಭಾರತ ಮತ್ತು ಚೀನಾಗಳ ನಡುವಿನ ಗಡಿ ವಿವಾದಗಳ ಉಗಮ 1950ರ ದಶಕದಲ್ಲೇ ಆರಂಭಗೊಂಡಿದ್ದವು. 1959ರಲ್ಲಿ ಚೀನೀ ಆಡಳಿತದ ವಿರುದ್ಧ ಟಿಬೆಟ್‌ನಲ್ಲಿ ದಂಗೆ ನಡೆದ ಬಳಿಕ ದಲೈ ಲಾಮಾ ಅವರಿಗೆ ಭಾರತ ಆಶ್ರಯ ನೀಡಿದ ಬಳಿಕ ಭಾರತ – ಚೀನಾ ನಡುವಿನ ಗಡಿ ವಿವಾದಗಳು ಹೆಚ್ಚಾದವು. ಹಿಂದೆ ಬ್ರಿಟಿಷರು 1914ರಲ್ಲಿ ನಿಗದಿಪಡಿಸಿದ್ದ ಗಡಿಗಳ ಬಳಿ, ಟಿಬೆಟಿಯನ್ ಪ್ರಾಂತ್ಯ ಹಾಗೂ ಈಶಾನ್ಯ ಭಾರತದ ನಡುವೆ ಸ್ಥಾಪಿಸಿದ್ದ ಭಾರತೀಯ ಸೇನಾ ಔಟ್ ಪೋಸ್ಟ್‌ಗಳನ್ನು ಚೀನಾ ವಿರೋಧಿಸಿದ ಬಳಿಕ, 1962ರಲ್ಲಿ ಭಾರತ ಚೀನಾಗಳ ನಡುವೆ ಯುದ್ಧ ಆರಂಭಗೊಂಡಿತು. ಪ್ರಸ್ತುತ ಇರುವ ‘ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್’ ಎಂಬ ಭಾರತ ಮತ್ತು ಚೀನಾಗಳ ಗಡಿಯೂ ಬ್ರಿಟಿಷರು ರಚಿಸಿದ ಗಡಿಯನ್ನು ಹೋಲುತ್ತದೆ.

ಬಳಿಕ, 1967 ಮತ್ತು 1987ರಲ್ಲಿ ಭಾರತ ಚೀನಾಗಳ ನಡುವೆ ವಿವಾದ ತಲೆದೋರಿತ್ತು. ಇದನ್ನು ‘ಲೌಡ್ ಸ್ಪೀಕರ್ ವಾರ್’ ಎಂದೂ ಕರೆಯಲಾಗುತ್ತದೆ. ಯಾಕೆಂದರೆ, ಎರಡು ದೇಶಗಳ ಸೈನಿಕರು ಪರಸ್ಪರ ಗುಂಡು ಹಾರಿಸದೆ, ಲೌಡ್ ಸ್ಪೀಕರ್ ಹಿಡಿದುಕೊಂಡು ಬೈದಾಡಿಕೊಂಡಿದ್ದರು. 1993 ರಿಂದ 2013ರ ನಡುವೆ ಎರಡೂ ಸರ್ಕಾರಗಳು ಐದು ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಪರಸ್ಪರ ಸಂಬಂಧ ಅಭಿವೃದ್ಧಿ ಹೊಂದಿತು. ಎರಡು ದೇಶಗಳೂ ಮಹತ್ವದ ಆರ್ಥಿಕ ಪ್ರಗತಿಯನ್ನು ಸಾಧಿಸಿದವು. 2017ರಲ್ಲಿ ಭಾರತದ ಪೂರ್ವ ಗಡಿಯ ಬಳಿಯ ಡೊಕ್ಲಾಮ್ ಎಂಬ ಪ್ರಸ್ಥಭೂಮಿಯ ಬಳಿ ಕೆಲವು ತಿಂಗಳ ಕಾಲ ಭಾರತ – ಚೀನಾ ಪಡೆಗಳು ಮುಖಾಮುಖಿಯಾಗುವ ತನಕವೂ ಶಾಂತ ಪರಿಸ್ಥಿತಿ ಮುಂದುವರಿದಿತ್ತು. ದೋಕ್ಲಾಮ್ ಪ್ರದೇಶವನ್ನು ಚೀನಾ ಮತ್ತು ಭೂತಾನ್ ಎರಡೂ ತನ್ನದು ಎಂದು ಹಕ್ಕು ಸಾಧಿಸಲು ಪ್ರಯತ್ನಿಸುತ್ತಿವೆ.

ಗಿರೀಶ್ ಲಿಂಗಣ್ಣ

(ಲೇಖಕರು; ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Published On - 3:54 pm, Thu, 7 September 23