ಜಿ-20 ಶಾಶ್ವತ ಸದಸ್ಯತ್ವ ಪಡೆದ ಆಫ್ರಿಕನ್ ಒಕ್ಕೂಟ: ಜಗತ್ತಿನ ಮೇಲೆ ಪ್ರಭಾವ ಬೀರಬಲ್ಲದೇ ಕಗ್ಗತ್ತಲ ಖಂಡ?
1.3 ಬಿಲಿಯನ್ ಯುವ ಜನಸಂಖ್ಯೆ ಹೊಂದಿರುವ ಆಫ್ರಿಕಾ ಖಂಡದ ಜನಸಂಖ್ಯೆ 2050ರ ವೇಳೆಗೆ ದುಪ್ಪಟ್ಟಾಗುವ ಸಾಧ್ಯತೆಗಳಿವೆ. ಆ ಮೂಲಕ ಅದು ಜಗತ್ತಿನ ಜನಸಂಖ್ಯೆಯ ಶೇ.25 ಪಾಲು ಹೊಂದಲಿದೆ. ಇಂತಹ ಆಫ್ರಿಕನ್ ಯೂನಿಯನ್ ಶಾಶ್ವತ ಜಿ-20 ಸದಸ್ಯತ್ವ ಹೊಂದಿರುವುದು ಜಾಗತಿಕ ಅಧಿಕಾರದಲ್ಲಿ ಅದರ ಉತ್ಕರ್ಷ ಆರಂಭವಾಗಿದೆ ಎನ್ನುವ ಸಂಕೇತ ನೀಡಿದೆ.
ಆಫ್ರಿಕನ್ ಒಕ್ಕೂಟ (African Union) ಎನ್ನುವುದು ಆಫ್ರಿಕಾ ಖಂಡದ 50ಕ್ಕೂ ಹೆಚ್ಚು ರಾಷ್ಟ್ರಗಳನ್ನು ಒಳಗೊಂಡಿರುವ ಒಂದು ಗುಂಪಾಗಿದ್ದು, ಅದನ್ನು ಅಧಿಕೃತವಾಗಿ ಗ್ರೂಪ್ ಆಫ್ 20 (G20) ಗುಂಪಿನ ಶಾಶ್ವತ ಸದಸ್ಯನಾಗಿ ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ಜಾಗತಿಕವಾಗಿ ಹೆಚ್ಚುತ್ತಿರುವ ಆಫ್ರಿಕಾದ ಮಹತ್ವವನ್ನು ಗುರುತಿಸಲಾಗಿದೆ. ಆಫ್ರಿಕನ್ ಒಕ್ಕೂಟ ಕಳೆದ ಏಳು ವರ್ಷಗಳಿಂದ ಜಿ-20ಯ ಶಾಶ್ವತ ಸದಸ್ಯತ್ವ ಪಡೆಯಲು ಸತತ ಪ್ರಯತ್ನ ನಡೆಸುತ್ತಿತ್ತು. ಈಗ ಒಕ್ಕೂಟವನ್ನು ಜಿ-20ಗೆ ಸೇರ್ಪಡೆಗೊಳಿಸಿರುವುದರಿಂದ ಆಫ್ರಿಕಾ ಖಂಡದ ಹೆಚ್ಚುತ್ತಿರುವ ಮಹತ್ವಕ್ಕೆ ಬೆಲೆ ಸಿಕ್ಕಂತಾಗಿದೆ.
ಆಫ್ರಿಕಾ ಪಾಲಿಗೆ ಜಿ20 ಮಹತ್ವವೇನು?
1.3 ಬಿಲಿಯನ್ ಯುವ ಜನಸಂಖ್ಯೆ ಹೊಂದಿರುವ ಆಫ್ರಿಕಾ ಖಂಡದ ಜನಸಂಖ್ಯೆ 2050ರ ವೇಳೆಗೆ ದುಪ್ಪಟ್ಟಾಗುವ ಸಾಧ್ಯತೆಗಳಿವೆ. ಆ ಮೂಲಕ ಅದು ಜಗತ್ತಿನ ಜನಸಂಖ್ಯೆಯ ಶೇ.25 ಪಾಲು ಹೊಂದಲಿದೆ. ಇಂತಹ ಆಫ್ರಿಕನ್ ಯೂನಿಯನ್ ಶಾಶ್ವತ ಜಿ-20 ಸದಸ್ಯತ್ವ ಹೊಂದಿರುವುದು ಜಾಗತಿಕ ಅಧಿಕಾರದಲ್ಲಿ ಅದರ ಉತ್ಕರ್ಷ ಆರಂಭವಾಗಿದೆ ಎನ್ನುವ ಸಂಕೇತ ನೀಡಿದೆ.
ಆಫ್ರಿಕನ್ ಒಕ್ಕೂಟ (ವಿವಾದಾತ್ಮಕ ಪಶ್ಚಿಮ ಸಹರಾವೂ ಸೇರಿದಂತೆ) 55 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದ್ದು, ಎರಡನೇ ಮಹಾಯುದ್ಧದ ಬಳಿಕ ಸ್ಥಾಪನೆಗೊಂಡ ಜಾಗತಿಕ ಸಂಸ್ಥೆಗಳಲ್ಲಿ ಮಹತ್ವದ ಪಾತ್ರಗಳಿಗಾಗಿ ಆಗ್ರಹಿಸುತ್ತಾ ಬಂದಿತ್ತು. ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕೂ ಬೇಡಿಕೆ ಸಲ್ಲಿಸಿತ್ತು. ಆಫ್ರಿಕನ್ ಒಕ್ಕೂಟ ವಿಶ್ವ ಬ್ಯಾಂಕ್ ಸೇರಿದಂತೆ, ವಿವಿಧ ಜಾಗತಿಕ ಹಣಕಾಸು ವ್ಯವಸ್ಥೆಗಳು ಕಾರ್ಯಾಚರಿಸುವ ವಿಧಾನದಲ್ಲಿ ಬದಲಾವಣೆ ಬಯಸಿದೆ. ವಿಶ್ವ ಬ್ಯಾಂಕ್‌ನ ಪ್ರಸ್ತುತ ವ್ಯವಸ್ಥೆ ಆಫ್ರಿಕನ್ ದೇಶಗಳಿಗೆ ಅವುಗಳು ಪಡೆಯುವ ಹಣಕ್ಕಿಂತಲೂ ಸಾಕಷ್ಟು ಹೆಚ್ಚು ಹಣ ಪಾವತಿಸುವಂತೆ ಮಾಡುತ್ತಿದ್ದು, ಆ ಮೂಲಕ ತಮ್ಮ ಸಾಲ ಇನ್ನಷ್ಟು ಹೆಚ್ಚಾಗುತ್ತಿದೆ ಎಂದಿದೆ.
ಜಿ-20ಗೆ ಆಫ್ರಿಕನ್ ಒಕ್ಕೂಟದ ಪ್ರಯೋಜನಗಳೇನು?
ಜಿ-20ಯ ಪೂರ್ಣಾವಧಿ ಸದಸ್ಯನಾಗಿ, ಆಫ್ರಿಕನ್ ಒಕ್ಕೂಟ ಒಂದು ಸಂಪೂರ್ಣ ಖಂಡವನ್ನು ಪ್ರತಿನಿಧಿಸುತ್ತದೆ. ಆಫ್ರಿಕಾ ಖಂಡ ಯಾವುದೇ ನಿರ್ಬಂಧವಿಲ್ಲದೆ, ರಾಷ್ಟ್ರಗಳು ವ್ಯಾಪಾರ ನಡೆಸುವ ಅತಿದೊಡ್ಡ ಭೂಪ್ರದೇಶವನ್ನು ಹೊಂದಿದೆ. ಅದರೊಡನೆ, ಆಫ್ರಿಕಾ ಖಂಡ ಮಹತ್ವಪೂರ್ಣ ಸಂಪನ್ಮೂಲಗಳನ್ನು ಒಳಗೊಂಡಿದ್ದು, ಹವಾಮಾನ ಬದಲಾವಣೆಗೆ ಆಫ್ರಿಕಾ ಖಂಡ ಪ್ರಾಥಮಿಕ ಕಾರಣವಲ್ಲದಿದ್ದರೂ, ಅದನ್ನು ಎದುರಿಸಲು ಈ ಸಂಪನ್ಮೂಲಗಳು ನೆರವಾಗುತ್ತವೆ. ಜಾಗತಿಕ ತಾಪಮಾನ ಏರಿಕೆಗೆ ಆಫ್ರಿಕಾ ಮೂಲ ಕಾರಣವಲ್ಲದಿದ್ದರೂ, ಅದರ ಗಂಭೀರ ಪರಿಣಾಮಗಳನ್ನು ಆಫ್ರಿಕಾ ಅನುಭವಿಸುತ್ತಿದೆ.
ಜಗತ್ತಿನ ನವೀಕರಿಸಬಹುದಾದ ಇಂಧನದಲ್ಲಿ ಜಾಗತಿಕವಾಗಿ 60% ಪಾಲನ್ನು ಆಫ್ರಿಕಾ ಹೊಂದಿದ್ದು, ಪರಿಸರ ಸ್ನೇಹಿ ಹಾಗೂ ಲೋ ಕಾರ್ಬನ್ ತಂತ್ರಜ್ಞಾನಕ್ಕೆ ಅವಶ್ಯಕವಾದ ಮಹತ್ವದ ಖನಿಜಗಳ 30%ಕ್ಕೂ ಹೆಚ್ಚು ಆಫ್ರಿಕಾ ಖಂಡದಲ್ಲಿವೆ. ಆಫ್ರಿಕಾದ ಆರ್ಥಿಕ ಪ್ರಗತಿಯ ಕುರಿತು ವಿಶ್ವಸಂಸ್ಥೆ ಕಳೆದ ತಿಂಗಳು ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಕಾಂಗೋ ದೇಶ ಒಂದೇ ಜಾಗತಿಕ ಕೋಬಾಲ್ಟ್ ಸಂಗ್ರಹದ ಅರ್ಧಕ್ಕಿಂತಲೂ ಹೆಚ್ಚು ಪಾಲು ಹೊಂದಿದೆ. ಕೋಬಾಲ್ಟ್ ಲೋಹ ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಅತ್ಯವಶ್ಯಕವಾಗಿದೆ.
ವಿದೇಶೀ ಶಕ್ತಿಗಳು ತಮ್ಮ ನೆಲದಲ್ಲಿ, ತಮ್ಮ ಖಂಡದ ಸಂಪನ್ಮೂಲಗಳನ್ನು ಹೊರತೆಗೆದು, ಬೇರೆಲ್ಲೋ ಅವುಗಳನ್ನು ಸಂಸ್ಕರಿಸಿ, ತಮ್ಮ ಲಾಭಕ್ಕೆ ಬಳಸಿಕೊಳ್ಳುವುದನ್ನು ನೋಡುತ್ತಾ ಆಫ್ರಿಕಾದ ಮುಖಂಡರು ಬೇಸತ್ತಿದ್ದಾರೆ. ಅವರು ಆಫ್ರಿಕಾ ಖಂಡದ ಗಡಿಗಳೊಳಗೆ ಔದ್ಯಮಿಕ ಅಭಿವೃದ್ಧಿ ಸಾಧಿಸಿ, ಆ ಮೂಲಕ ಆರ್ಥಿಕ ಪ್ರಗತಿ ಹೊಂದಿ, ಸ್ಥಳೀಯವಾಗಿ ತಮ್ಮ ಸಂಪನ್ಮೂಲಗಳ ಪ್ರಯೋಜನವನ್ನು ತಾವೇ ಪಡೆಯುವ ಉದ್ದೇಶ ಹೊಂದಿದ್ದಾರೆ.
ಈ ವಾರ ನಡೆದ ಆರಂಭಿಕ ಆಫ್ರಿಕಾ ಕ್ಲೈಮೇಟ್ ಸಮ್ಮಿಟ್‌ನಲ್ಲಿ ಕೀನ್ಯಾ ಅಧ್ಯಕ್ಷ ವಿಲಿಯಂ ರೂಟೋ ಅವರು ಆಫ್ರಿಕಾ ಖಂಡದ ಅಪರಿಮಿತ ಸಂಪನ್ಮೂಲಗಳ ಕುರಿತು ಬೆಳಕು ಚೆಲ್ಲಿದರು. ನೈರೋಬಿಯಲ್ಲಿ ನೆರವೇರಿದ ಈ ಸಮ್ಮೇಳನದಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಹಣಕಾಸು ಸಂಸ್ಥೆಗಳು ಆಫ್ರಿಕಾವನ್ನು ಸಮಾನವಾಗಿ ಪರಿಗಣಿಸುವಂತೆ ಮಾಡುವುದು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹವಾಮಾನ ಬದಲಾವಣೆಯ ಕುರಿತು ಶ್ರೀಮಂತ ರಾಷ್ಟ್ರಗಳು ವಾರ್ಷಿಕವಾಗಿ 100 ಬಿಲಿಯನ್ ಡಾಲರ್ ನೀಡುವ ದೀರ್ಘಕಾಲೀನ ಆಗ್ರಹವನ್ನು ಮುಂದುವರಿಸುವುದು, ಹಾಗೂ ಪಳೆಯುಳಿಕೆ ತೈಲದ ಮೇಲೆ ಜಾಗತಿಕ ತೆರಿಗೆ ಜಾರಿಗೆ ತರುವುದು ಅವುಗಳಲ್ಲಿ ಪ್ರಮುಖ ತೀರ್ಮಾನಗಳಾಗಿವೆ.
ಆಫ್ರಿಕನ್ ನಾಯಕರು ಇಂತಹ ಪ್ರಯತ್ನಗಳನ್ನು ನಾವು ಜೊತೆಯಾಗಿ ನಡೆಸಲು ಸಿದ್ಧರಿದ್ದೇವೆ ಎಂದು ಘೋಷಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ನಡುವೆಯೂ, ಶ್ರೀಮಂತ ರಾಷ್ಟ್ರಗಳು ಲಸಿಕೆಗಳ ಭಾರೀ ಸಂಗ್ರಹ ಹೊಂದುವುದನ್ನು ಅವರು ಕಟುವಾಗಿ ಟೀಕಿಸಿದ್ದು, ಆಫ್ರಿಕಾ ಖಂಡಕ್ಕೆ ಅವಶ್ಯಕ ಲಸಿಕೆಗಳನ್ನು ಜೊತೆಯಾಗಿ ಖರೀದಿಸಲು ನಿರ್ಧರಿಸಿದ್ದರು.
ಈಗ ಆಫ್ರಿಕನ್ ಒಕ್ಕೂಟ ಜಿ-20ಯ ಶಾಶ್ವತ ಸದಸ್ಯನೂ ಆಗಿರುವುದರಿಂದ, ಅದರ ಬೇಡಿಕೆಗಳನ್ನು ತಿರಸ್ಕರಿಸುವುದಾಗಲಿ, ಅಸಡ್ಡೆ ಮಾಡುವುದಾಗಲಿ ಸುಲಭವಲ್ಲ.
ಆಫ್ರಿಕಾದ ಖನಿಜಗಳಿಗಾಗಿ ಭಾರತದ ಪ್ರಯತ್ನ: ಶಕ್ತಿ ಭದ್ರತೆಗಾಗಿ ಕಾರ್ಯತಂತ್ರದ ನಡೆ
ಆಫ್ರಿಕಾ ಖಂಡದಲ್ಲಿರುವ ಅಪರೂಪದ ಖನಿಜ ಸಂಗ್ರಹದ ಕಾರಣದಿಂದಾಗಿ ಜಾಗತಿಕ ನೋಟ ಆ ಕಡೆಗೆ ತಿರುಗಿದೆ ಎಂದು ಶಕ್ತಿ ಸಂಪನ್ಮೂಲಗಳ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. “ಆಫ್ರಿಕಾ ಈಗ ಜಾಗತಿಕ ರಾಜಕಾರಣದ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತಿದ್ದು, ಭಾರತ ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತಿದೆ” ಎಂದು ತಜ್ಞರೊಬ್ಬರು ಅಭಿಪ್ರಯಿಸಿದ್ದಾರೆ. ಭಾರತ ವಿದ್ಯುತ್ ಚಾಲಿತ ವಾಹನಗಳು ಮತ್ತು ಶುದ್ಧ ಇಂಧನದ ಕುರಿತು ಮಹತ್ವಾಕಾಂಕ್ಷೆ ಹೊಂದಿದ್ದು, ನಿರ್ಣಾಯಕ ಖನಿಜಗಳನ್ನು ತಡೆಯಿಲ್ಲದೆ ಪಡೆಯಲು ತನ್ನದೇ ಆದ ಪೂರೈಕೆ ಜಾಲವನ್ನು ಹೊಂದಲು ಅಪೇಕ್ಷಿಸುತ್ತಿದೆ. ಭಾರತ ಸರ್ಕಾರವೂ ಇತ್ತೀಚೆಗೆ ಇಂತಹ ಖನಿಜಗಳ ಗಣಿಗಾರಿಕೆಯಲ್ಲಿ ಖಾಸಗಿ ಹೂಡಿಕೆಗೆ ಅನುಮತಿ ನೀಡುವ ರೀತಿಯಲ್ಲಿ ಮಹತ್ವದ ಶಾಸನ ತಿದ್ದುಪಡಿ ನಡೆಸಿದೆ.
ಆಫ್ರಿಕಾದ ಅಪರೂಪದ ಭೂ ಖನಿಜಗಳ ಅನಾವರಣ: ಸವಾಲುಗಳು ಮತ್ತು ಅವಕಾಶಗಳು
ಒಂದು ವೇಳೆ ಆಫ್ರಿಕಾಗೆ ಚೀನಾವನ್ನು ಹಿಂದಿಕ್ಕಿ ಅಪರೂಪದ ಖನಿಜಗಳ ಪ್ರಮುಖ ಪೂರೈಕೆದಾರ ರಾಷ್ಟ್ರವಾಗಲು ಸಾಧ್ಯವಿದೆಯೇ? ಪ್ರಸ್ತುತ ಸನ್ನಿವೇಶದಲ್ಲಿ, ಇಂತಹ ಅಪರೂಪದ ಖನಿಜಗಳ ಉತ್ಪಾದನೆ ಬಹುತೇಕ ಚೀನಾ ಕೇಂದ್ರಿತವಾಗಿದೆ. ಇದು ಪಾಶ್ಚಾತ್ಯ ರಾಷ್ಟ್ರಗಳು ಮತ್ತು ಅವುಗಳ ಸಹಯೋಗಿಗಳಿಗೆ ಕಳವಳದ ಅಂಶವಾಗಿದೆ. ಚೀನಾ ಅಪರೂಪದ ಖನಿಜಗಳ 60% ಉತ್ಪಾದನೆ ನಡೆಸುತ್ತಿದ್ದು, 85%ದಷ್ಟು ಅವುಗಳನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆ ಮೂಲಕ ಜಾಗತಿಕ ಮಾರುಕಟ್ಟೆಯ ಮೇಲೆ ಅಸಾಧಾರಣ ಹಿಡಿತ ಹೊಂದಿದೆ.
ರೇರ್ ಅರ್ತ್ ಎಲಿಮೆಂಟ್ಸ್ ಎನ್ನುವ ಈ ಅಪರೂಪದ 17 ಲೋಹಗಳು ಇಲೆಕ್ಟ್ರಾನಿಕ್ಸ್ (ಕಂಪ್ಯೂಟರ್, ಟಿವಿ, ಹಾಗೂ ಸ್ಮಾರ್ಟ್ ಫೋನ್), ನವೀಕರಿಸಬಹುದಾದ ಇಂಧನ ತಂತ್ರಜ್ಞಾನ (ಗಾಳಿ ಯಂತ್ರ, ಸೌರ ಫಲಕಗಳು, ಹಾಗೂ ಇಲೆಕ್ಟ್ರಿಕ್ ವಾಹನ ಬ್ಯಾಟರಿಗಳು) ಹಾಗೂ ರಕ್ಷಣಾ ವಲಯಗಳಲ್ಲಿ (ಜೆಟ್ ಇಂಜಿನ್‌ಗಳು, ಮಿಸೈಲ್ ಗೈಡೆಡ್ ವ್ಯವಸ್ಥೆಗಳು, ಉಪಗ್ರಹ ತಂತ್ರಜ್ಞಾನ, ಜಿಪಿಎಸ್ ಉಪಕರಣಗಳು) ಅತ್ಯವಶ್ಯಕವಾಗಿವೆ.
ಈ ನಿಟ್ಟಿನಲ್ಲಿ, ಇಂತಹ ಅಪರೂಪದ ಖನಿಜಗಳು, ಲೋಹಗಳ ಉತ್ಪಾದನೆ ನಡೆಸುವ ಮತ್ತು ಪೂರೈಕೆಯ ಮೇಲೆ ಹಿಡಿತ ಹೊಂದಿರುವ ರಾಷ್ಟ್ರ ಭವಿಷ್ಯದ ಪ್ರಮುಖ ತಂತ್ರಜ್ಞಾನಗಳ ಮೇಲೆ ತನ್ನ ಪ್ರಭಾವ ಬೀರಲಿದೆ. ಈ ಕಾರಣದಿಂದಲೇ ಚೀನಾ ಇಂತಹ ಖನಿಜಗಳ ಮೇಲೆ ಸ್ವಾಮ್ಯ ಹೊಂದಿರುವುದಕ್ಕೆ ಪಾಶ್ಚಾತ್ಯ ದೇಶಗಳು ಅಸಮಾಧಾನ ಹೊಂದಿವೆ. ಚೀನಾದ ಹೆಚ್ಚುತ್ತಿರುವ ಪ್ರಭಾವ ಅವುಗಳಿಗೆ ತಾವು ಹೊಂದಿರುವ ಮಾರುಕಟ್ಟೆ ನಿಯಂತ್ರಣದ ಮೇಲಿನ ಅತಿದೊಡ್ಡ ಜಾಗತಿಕ ರಾಜಕಾರಣದ ಸವಾಲಿನಂತೆ ಕಾಣಿಸುತ್ತಿದೆ.
ಆದರೆ, ಚೀನಾವನ್ನು ಹೊರತುಪಡಿಸಿದರೆ, ಆಫ್ರಿಕಾದ ಬಳಿ ಮಾತ್ರ ಇಂತಹ ಪ್ರಮುಖ ಖನಿಜಗಳ ನಿಕ್ಷೇಪಗಳಿವೆ. ಆದರೆ ಭೌಗೋಳಿಕ ರಾಜಕಾರಣದ ಮೇಲೆ ಪ್ರಭಾವ ಬೀರುವಂತಹ ನೀತಿಗಳು ಆಫ್ರಿಕಾದ ಬಳಿ ಇಲ್ಲದಿರುವುದರಿಂದ, ಈ ಸ್ಪರ್ಧೆಯಲ್ಲಿ ಆಫ್ರಿಕಾ ಹಿಂದುಳಿಯುವಂತಾಗಿದೆ.
ಆಫ್ರಿಕಾ ಖಂಡಕ್ಕೆ ಇಂತಹ ಅಪರೂಪದ ಖನಿಜಗಳು ತಂದುಕೊಡಬಲ್ಲ ಭೌಗೋಳಿಕ ರಾಜಕೀಯದ ಲಾಭಗಳು, ಅವುಗಳ ಮಹತ್ವಗಳ ಕುರಿತು ಆಫ್ರಿಕನ್ ನಾಯಕರಿಗೆ ಇನ್ನೂ ಮನವರಿಕೆಯಾಗಿಲ್ಲ. ಆಫ್ರಿಕಾ ಖಂಡದಲ್ಲಿ ಇವುಗಳ ಅನ್ವೇಷಣೆಗೆ ಕನಿಷ್ಠ ಪ್ರಯತ್ನಗಳು ನಡೆದಿವೆ. ಆದ್ದರಿಂದ ಅಲ್ಲಿನ ಅಪರೂಪದ ಖನಿಜಗಳ ಕುರಿತ ಅನ್ವೇಷಣೆ ಪೂರ್ಣಗೊಂಡಿಲ್ಲ.
ಆಫ್ರಿಕನ್ ಸರ್ಕಾರಗಳು ಮತ್ತು ಉದ್ಯಮಗಳ ಬಳಿ ಅನ್ವೇಷಿಸಿರದ ಅಪರೂಪದ ಖನಿಜಗಳ ಹುಡುಕಾಟ ನಡೆಸುವಷ್ಟು ಹಣಕಾಸಿನ ಲಭ್ಯತೆಯಿಲ್ಲ. ಆದ್ದರಿಂದ ವಿದೇಶೀ ಸರ್ಕಾರಗಳು ಮತ್ತು ಕಂಪನಿಗಳು ಆಫ್ರಿಕಾದಲ್ಲಿನ ಬಹುತೇಕ ಅನ್ವೇಷಣೆಗಳನ್ನು ನಡೆಸುತ್ತಿದ್ದು, ಅದು ಆಫ್ರಿಕಾದ ಪಾಲಿಗೆ ಉತ್ತಮ ಬೆಳವಣಿಗೆಯಲ್ಲ. ಭಯಗೊಳಿಸುವ ಸತ್ಯ ವಿಚಾರವೇನೆಂದರೆ, ಕಳೆದ 70,000 ವರ್ಷಗಳಲ್ಲಿ ಮಾನವರು ಬಳಸಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲೋಹಗಳು ಮತ್ತು ಖನಿಜಗಳನ್ನು ನಾವು ಮುಂದಿನ 30 ವರ್ಷಗಳಲ್ಲಿ ಬಳಸಿಕೊಳ್ಳಲಿದ್ದೇವೆ.
ಇಂತಹ ಅಪರೂಪದ ಖನಿಜಗಳು ಆಫ್ರಿಕನ್ ಸರ್ಕಾರಗಳು ಮತ್ತು ಜನರಿಗೆ ಅಧಿಕಾರ ಮತ್ತು ಕ್ಷೇಮವನ್ನು ತಂದುಕೊಡಬೇಕು. ಆದರೆ ಅದರ ಸಾಧ್ಯಾಸಾಧ್ಯತೆಯ ಕುರಿತು ಅನುಮಾನ ಉಂಟುಮಾಡುವ ಅಂಶವೆಂದರೆ, ಆಫ್ರಿಕಾದ ಅಸ್ಥಿರ ಆಡಳಿತ ಮತ್ತು ರಾಜಕೀಯ ವಿದ್ಯಮಾನಗಳು. ಉದಾಹರಣೆಗೆ ನಾವು ಜಗತ್ತಿನ 70% ಕೋಬಾಲ್ಟ್ ಉತ್ಪಾದಿಸುವ ಕಾಂಗೋವನ್ನು ಪರಿಗಣಿಸೋಣ.
ವಸ್ತು ವ್ಯಾಪಾರ ಮತ್ತು ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ ಗ್ಲೆನ್‌ಕೋರ್ ಎಂಬ ಸ್ವಿಸ್ ಮೂಲದ ಬಹುರಾಷ್ಟ್ರೀಯ ಸಂಸ್ಥೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (ಡಿಆರ್‌ಸಿ) ಕೋಬಾಲ್ಟ್ ಗಣಿಗಾರಿಕೆಯ ಹೆಚ್ಚಿನ ಪಾಲು ಹೊಂದಿದೆ. ಡಿಆರ್‌ಸಿಯಲ್ಲಿ ಎರಡನೆಯ ಅತಿದೊಡ್ಡ ಕೋಬಾಲ್ಟ್ ಗಣಿಗಾರಿಕೆಯನ್ನು ಚೀನಾದ ಮಾಲಿಬ್‌ಡೆನಮ್ ಗ್ರೂಪ್ ಲಿಮಿಟೆಡ್ ನಡೆಸುತ್ತಿದೆ.
ಇದನ್ನೂ ಓದಿ: ಜಿ 20 ಶೃಂಗಸಭೆ; ಪ್ರಧಾನಿ ಮೋದಿಯವರ ಬಹುಪಕ್ಷೀಯ ಸ್ನೇಹದ ಕಾರ್ಯತಂತ್ರ ಹಾಗೂ ಜಾಗತಿಕ ಪರಿಣಾಮಗಳು
ಕಾಂಗೋದಲ್ಲಿ ನಡೆಯುತ್ತಿರುವ ಕೋಬಾಲ್ಟ್ ಗಣಿಗಾರಿಕೆಯ ಕುರಿತ ಒಂದು ಹೇಳಿಕೆ ಇಲ್ಲಿ ಗಮನಾರ್ಹವಾಗಿದೆ. “ಚೀನಾ ಕಾಂಗೋದ ಭೂಮಿಯಿಂದ ಬೆಲೆಬಾಳುವ ಖನಿಜಗಳನ್ನು ಪಡೆದುಕೊಳ್ಳುತ್ತಿದ್ದರೆ, ಕಾಂಗೋದ ಮಕ್ಕಳು ಅತ್ಯಂತ ಕಡಿಮೆ ಬೆಲೆಗೆ ಅವರಿಗೆ ಕೂಲಿ ಕೆಲಸ ಮಾಡುತ್ತಿದ್ದಾರೆ” ಎಂಬ ಮಾತು ಅಲ್ಲಿನ ಪರಿಸ್ಥಿತಿಗೆ ಬೆಳಕು ಚೆಲ್ಲಿದೆ.
ಚೀನಾ ಮತ್ತು ವಿವಿಧ ಪಾಶ್ಚಾತ್ಯ ರಾಷ್ಟ್ರಗಳು ಕೋಬಾಲ್ಟ್ ಸಂಸ್ಕರಣೆಯನ್ನು ಕಾಂಗೋದಲ್ಲಿ ನಡೆಸುವುದಿಲ್ಲ. ಅದರ ಬದಲಿಗೆ, ಅವುಗಳು ಕೋಬಾಲ್ಟ್ ಅದಿರನ್ನು ಕಾಂಗೋದಿಂದ ಸಾಗಿಸಿ, ತಮ್ಮ ದೇಶದಲ್ಲಿ ಕೋಬಾಲ್ಟ್ ಸಂಸ್ಕರಣೆ ನಡೆಸುತ್ತವೆ. ಇದರ ಪರಿಣಾಮವಾಗಿ, ಆಫ್ರಿಕನ್ ಸಮುದಾಯಗಳಿಗೆ ಇಂತಹ ಅಪರೂಪದ ಖನಿಜಗಳ ಪೂರೈಕೆ ಸರಪಳಿಯಲ್ಲಿ, ಸಂಸ್ಕರಣೆಯಲ್ಲಿ ಕೌಶಲ್ಯಾಭಿವೃದ್ಧಿ ಹೊಂದಲು ಅವಕಾಶ ಸಿಗುತ್ತಿಲ್ಲ.
ಪುಟ್ಟ ಮಕ್ಕಳನ್ನು ಕಡಿಮೆ ಕೂಲಿಗೆ ಕಾರ್ಮಿಕರನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಇದು ಯುನಿಸೆಫ್ ನಿಯಮಗಳಿಗೆ ವಿರುದ್ಧವಾಗಿದೆ. ಆದರೆ, ಇಂತಹ ಅಪರೂಪದ ಖನಿಜಗಳ ಮಾರುಕಟ್ಟೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು, ಆಫ್ರಿಕಾದಲ್ಲಿ ಖನಿಜ ಗಣಿಗಾರಿಕೆಯ ಮೇಲೆ ಹತೋಟಿ ಸಾಧಿಸುವ ವಿಚಾರದಲ್ಲಿ ಚೀನಾ ಹಾಗೂ ಪಾಶ್ಚಾತ್ಯ ದೇಶಗಳ ನಡುವೆ ವೈಷಮ್ಯವಿದೆ.
ಇನ್ನು ಮುಂದಿರುವ ಪ್ರಮುಖ ಸವಾಲೆಂದರೆ, ಗಣಿಗಾರಿಕೆಯಲ್ಲಿ ಚೀನಾ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಪ್ರಭಾವದ ನಡುವೆಯೂ, ಭವಿಷ್ಯದಲ್ಲಿ ಆಫ್ರಿಕಾ ಇಂತಹ ಅಪರೂಪದ ಖನಿಜಗಳ ವಲಯದಲ್ಲಿ ತನ್ನನ್ನು ತಾನು ಸಶಕ್ತ ಎಂದು ನಿರೂಪಿಸಲು ಸಾಧ್ಯವೇ ಎನ್ನುವುದಾಗಿದೆ.
ಭೌಗೋಳಿಕ ರಾಜಕಾರಣದ ದೃಷ್ಟಿಕೋನದಿಂದ ಗಮನಿಸುವುದಾದರೆ, ಆಫ್ರಿಕಾಗೆ ಈ ಬಿಲಿಯನ್ ಡಾಲರ್ ಗಣಿಗಾರಿಕಾ ವಲಯದಲ್ಲಿ ಚೀನಾ ಮತ್ತು ಪಾಶ್ಚಾತ್ಯ ದೇಶಗಳನ್ನು ಹಿಂದಿಕ್ಕುವ ಸಾಮರ್ಥ್ಯವಿದೆ. ಆದರೆ ಅದಕ್ಕಾಗಿ ಪ್ರಸ್ತುತ ಡಿಆರ್‌ಸಿ, ನಮೀಬಿಯಾ, ಉಗಾಂಡಾ, ಹಾಗೂ ಅಂಗೋಲಾದಂತಹ ಆಫ್ರಿಕನ್ ರಾಷ್ಟ್ರಗಳು ಮೊದಲಿಗೆ ಅಂತಾರಾಷ್ಟ್ರೀಯ ಸಹಕಾರದ ಮೂಲಕ ಸಮರ್ಥ ಗಣಿಗಾರಿಕಾ ನೀತಿಯನ್ನು ಜಾರಿಗೆ ತರುವ ಕುರಿತು ಗಮನ ಹರಿಸಬೇಕಿದೆ. ಆ ಮೂಲಕ ಜಾಗತಿಕ ಖನಿಜ ಮಾರುಕಟ್ಟೆಯ ಮೂಲಕ ಜಾಗತಿಕ ರಾಜಕಾರಣದ ಮೇಲೆ ಪ್ರಭಾವ ಬೀರಲು ಆಫ್ರಿಕಾಗೆ ಸಾಧ್ಯವಾಗುತ್ತದೆ.
ಆಫ್ರಿಕನ್ ರಾಷ್ಟ್ರಗಳು ತಮಗೆ ಈ ಅಪರೂಪದ ಖನಿಜಗಳು ಒದಗಿಸಬಹುದಾದ ಅನುಕೂಲತೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಇದಕ್ಕೆ ಸಂಬಂಧಿಸಿದ ಸೂಕ್ತ ನೀತಿಗಳನ್ನು ಜಾರಿಗೆ ತರುವುದರಿಂದ ಅದಿರಿನ ರೂಪದಲ್ಲಿ ಖನಿಜಗಳು ಹೊರಹೋಗದಂತೆ ತಡೆಯಬಹುದು.
ಸಮರ್ಥ ಖನಿಜ ನೀತಿಗಳನ್ನು ರೂಪಿಸಿದರೆ, ಅವುಗಳನ್ನು ಜಾರಿಗೆ ತರುವ ಸಾಮರ್ಥ್ಯ ಹಲವಾರು ಆಫ್ರಿಕನ್ ರಾಷ್ಟ್ರಗಳಿಗಿದೆ. ಉಗಾಂಡಾದಲ್ಲಿ ಅದರ ಖನಿಜ ಸಂಪನ್ಮೂಲಗಳ ಕುರಿತ ತಪ್ಪು ಮಾಹಿತಿಗಳೇ ಹರಿದಾಡುತ್ತಿವೆ.
ಅಮೆರಿಕಾ ಹಾಗೂ ಯುರೋಪಿನ ಹಳೆಯ ವಸಾಹತುಶಾಹಿ ರಾಷ್ಟ್ರಗಳ ಹೊರತಾಗಿಯೂ, ಆಫ್ರಿಕಾ ಹಲವಾರು ಜಾಗತಿಕ ಶಕ್ತಿಗಳ ಗಮನ ಸೆಳೆಯುತ್ತಿದೆ. ಚೀನಾ ಆಫ್ರಿಕಾದೊಡನೆ ನಿರಂತರವಾಗಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು, ಆಫ್ರಿಕಾಗೆ ಬಹಳಷ್ಟು ಸಾಲ ನೀಡುತ್ತಿದೆ. ರಷ್ಯಾ ಆಫ್ರಿಕಾಗೆ ಅವಶ್ಯಕವಿರುವ ಬಹುತೇಕ ಆಯುಧಗಳನ್ನು ಒದಗಿಸುತ್ತದೆ. ಗಲ್ಫ್ ರಾಷ್ಟ್ರಗಳು ಆಫ್ರಿಕಾದಲ್ಲಿ ಅಪಾರ ಪ್ರಮಾಣದ ಹೂಡಿಕೆ ನಡೆಸುತ್ತವೆ. ಟರ್ಕಿ ಸೋಮಾಲಿಯಾದಲ್ಲಿ ತನ್ನ ಅತಿದೊಡ್ಡ ಸೇನಾ ನೆಲೆ ಮತ್ತು ರಾಯಭಾರ ಕಚೇರಿಯನ್ನು ಸ್ಥಾಪಿಸಿದೆ. ಇಸ್ರೇಲ್ ಮತ್ತು ಇರಾನ್‌ಗಳು ಆಫ್ರಿಕಾದಲ್ಲಿ ಇನ್ನಷ್ಟು ಸ್ನೇಹಿತರನ್ನು ಹೊಂದಲು ಪ್ರಯತ್ನ ನಡೆಸುತ್ತಿವೆ.
ಆಫ್ರಿಕಾದ ನಾಯಕರಿಗೆ ಈಗ ಜಗತ್ತು ತಮ್ಮ ಖಂಡವನ್ನು ಯುದ್ಧಪೀಡಿತ, ಹಸಿವಿನಿಂದ ಬಾಧಿತ, ವಿಕೋಪ ಪೀಡಿತ ಅಸಹಾಯಕ ಪ್ರದೇಶ, ಕಗ್ಗತ್ತಲಿನ ಖಂಡ ಎಂದು ನೋಡುವುದು ಇಷ್ಟವಿಲ್ಲ. ಆದ್ದರಿಂದ ಆಫ್ರಿಕನ್ ನಾಯಕರು ಈಗ ದೊಡ್ಡ ಜಾಗತಿಕ ಶಕ್ತಿಗಳೊಡನೆ ನಿಲ್ಲುವ ನಿರ್ಧಾರ ಕೈಗೊಂಡಿದ್ದಾರೆ. ಅದು ಎಷ್ಟರಮಟ್ಟಿಗೆ ಫಲಪ್ರದವಾಗಲಿದೆ ಎನ್ನುವುದು ಕುತೂಹಲಕರ ಅಂಶ.
ಗಿರೀಶ್ ಲಿಂಗಣ್ಣ
(ಲೇಖಕರು; ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:50 pm, Sun, 10 September 23