25 ದಿನ ಯಶಸ್ವಿ ಪ್ರದರ್ಶನ ಕಂಡ ‘ಅಮರನ್’ ಸಿನಿಮಾ; ಒಟಿಟಿ ಬಿಡುಗಡೆ ವಿಳಂಬ?
ಬಾಕ್ಸ್ ಆಫೀಸ್ನಲ್ಲಿ ‘ಅಮರನ್’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಕಂಡಿದೆ. ಈ ಸಿನಿಮಾದಿಂದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ಅವರಿಗೆ ಗೆಲುವು ಸಿಕ್ಕಿದೆ. ಎಲ್ಲ ವರ್ಗದ ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಥಿಯೇಟರ್ನಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಒಟಿಟಿ ರಿಲೀಸ್ ವಿಳಂಬ ಆಗುವ ಸಾಧ್ಯತೆ ಇದೆ.
ಮೇಜರ್ ಮುಕುಂದ್ ವರದರಾಜನ್ ಅವರ ಬದುಕಿನ ನೈಜ ಘಟನೆಗಳನ್ನು ಆಧರಿಸಿ ತಯಾರಾದ ‘ಅಮರನ್’ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ. ಶಿವ ಕಾರ್ತಿಕೇಯನ್ ಅವರು ಈ ಸಿನಿಮಾದಲ್ಲಿ ವರದರಾಜನ್ ಪಾತ್ರವನ್ನು ಮಾಡಿದ್ದಾರೆ. ನಟನೆಯ ಮೂಲಕ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ವರದರಾಜನ್ ಪತ್ನಿ ರೆಬೆಕಾ ಪಾತ್ರವನ್ನು ಸಾಯಿ ಪಲ್ಲವಿ ಮಾಡಿದ್ದು, ಅವರಿಗೆ ಈ ಸಿನಿಮಾ ಮೂಲಕ ಗೆಲುವು ಸಿಕ್ಕಿದೆ. ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಈ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿತ್ರಮಂದಿರಗಳಲ್ಲಿ 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ.
‘ಅಮರನ್’ ಸಿನಿಮಾಗೆ ರಾಜ್‌ಕುಮಾರ್ ಪೆರಿಯಸ್ವಾಮಿ ಅವರು ನಿರ್ದೇಶನ ಮಾಡಿದ್ದಾರೆ. ಕಮಲ್ ಹಾಸನ್ ಅವರು ಕೂಡ ಈ ಸಿನಿಮಾದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ರಾಹುಲ್ ಬೋಸ್, ಭುವನ್ ಅರೋರ, ಶ್ಯಾಮ್ ಪ್ರಸಾದ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿನ ಪಾತ್ರಕ್ಕಾಗಿ ದೇಹ ದಂಡಿಸಿ, ಖಡಕ್ ಲುಕ್‌ನಲ್ಲಿ ಶಿವಕಾರ್ತಿಕೇಯನ್ ಅವರು ಕಾಣಿಸಿಕೊಂಡಿದ್ದಾರೆ. ಅವರ ನಟನೆ ಅಭಿಮಾನಿಗಳಿಗೆ ಇಷ್ಟ ಆಗಿದೆ.
ರಿಯಲ್ ಲೈಫ್ ಘಟನೆಗಳನ್ನು ಆಧರಿಸಿದ ಸಿನಿಮಾ ಆದ್ದರಿಂದ ಪ್ರೇಕ್ಷಕರಿಗೆ ‘ಅಮರನ್ʼ ಸಿನಿಮಾ ಹೆಚ್ಚು ಇಷ್ಟ ಆಗುತ್ತಿದೆ. ಒಬ್ಬ ಸೈನಿಕ ಮತ್ತು ಸೈನ್ಯದ ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ ಎಂದು ವಿಮರ್ಶಕರು ಹೊಗಳಿದ್ದಾರೆ. ಅಕ್ಟೋಬರ್ ತಿಂಗಳ 31ಕ್ಕೆ ಈ ಸಿನಿಮಾ ಬಿಡುಗಡೆ ಆಗಿತ್ತು. ಯಶಸ್ವಿಯಾಗಿ 25 ದಿನಗಳನ್ನು ಕಳೆದ ಬಳಿಕವೂ ಚಿತ್ರದ ಬಗ್ಗೆ ಸಿನಿಪ್ರಿಯರು ಮಾತನಾಡುತ್ತಿದ್ದಾರೆ.
ಎಲ್ಲ ವರ್ಗದ ಪ್ರೇಕ್ಷಕರು ಈ ಸಿನಿಮಾಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿರುವುದು ಚಿತ್ರತಂಡಕ್ಕೆ ಪ್ಲಸ್ ಆಗಿದೆ. ಶಿವಕಾರ್ತಿಕೇಯನ್ ಅವರ ಕೆರಿಯರ್ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ‘ಅಮರನ್’ ಚಿತ್ರದ್ದು. ಈ ಸಿನಿಮಾದಲ್ಲಿ ಎಮೋಷನ್ ಹಾಗೂ ಆಕ್ಷನ್ ಹೈಲೈಟ್ ಆಗಿದೆ. ಈ ಸಿನಿಮಾದ ಕಥೆಯು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಸೈನಿಕರ ಕುರಿತಾಗಿದೆ.
ಇದನ್ನೂ ಓದಿ: ‘ಅಮರನ್’ ಚಿತ್ರಕ್ಕಾಗಿ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಪಡೆದ ಸಂಭಾವನೆ ಎಷ್ಟು?
ಚಿತ್ರಮಂದಿರದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದ ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ಪಡೆದುಕೊಂಡಿದೆ. ಡಿಸೆಂಬರ್ 5 ಅಥವಾ 10ರಿಂದ ಒಟಿಟಿಯಲ್ಲಿ ಪ್ರಸಾರ ಆಗುವ ಸಾಧ್ಯತೆ ಇದೆ. ಆದರೆ ಇಂದಿಗೂ ಚಿತ್ರಮಂದಿರದಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವುದರಿಂದ ಒಟಿಟಿ ರಿಲೀಸ್ ಇನ್ನಷ್ಟು ತಡ ಆಗಬಹುದು ಎನ್ನಲಾಗಿದೆ. ಒಟಿಟಿ ರಿಲೀಸ್ ಸ್ವಲ್ಪ ವಿಳಂಬ ಆಗಲಿ ಎಂಬ ಬೇಡಿಕೆ ಚಿತ್ರಮಂದಿರಗಳ ಮಾಲೀಕರಿಂದಲೂ ಕೇಳಿಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.