ಜಿ 20 ಶೃಂಗಸಭೆ; ಪ್ರಧಾನಿ ಮೋದಿಯವರ ಬಹುಪಕ್ಷೀಯ ಸ್ನೇಹದ ಕಾರ್ಯತಂತ್ರ ಹಾಗೂ ಜಾಗತಿಕ ಪರಿಣಾಮಗಳು

G20 Summit; 2014ರಲ್ಲಿ ನರೇಂದ್ರ ಮೋದಿಯವರು ಸೃಷ್ಟಿ, ಲಯ ಹಾಗೂ ಪರಿವರ್ತನೆಗಳನ್ನು ಸಂಕೇತಿಸುವ ದೇವರಾದ ಶಿವನ ದೇವಾಲಯದ ಬಳಿ ಗಂಗಾ ನದಿಗೆ ಆರತಿ ಬೆಳಗುವ ಮೂಲಕ ಅಧಿಕಾರದ ಮೆಟ್ಟಿಲು ಏರಲು ಆರಂಭಿಸಿದರು. ಅದಾಗಿ ಬಹುತೇಕ ಹತ್ತು ವರ್ಷಗಳ ಬಳಿಕ, ಮೋದಿಯವರು ಭಾರತದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿದ್ದಾರೆ.

ಜಿ 20 ಶೃಂಗಸಭೆ; ಪ್ರಧಾನಿ ಮೋದಿಯವರ ಬಹುಪಕ್ಷೀಯ ಸ್ನೇಹದ ಕಾರ್ಯತಂತ್ರ ಹಾಗೂ ಜಾಗತಿಕ ಪರಿಣಾಮಗಳು
ಮೋದಿಯವರ ಬಹುಪಕ್ಷೀಯ ಸ್ನೇಹದ ಕಾರ್ಯತಂತ್ರ ಹಾಗೂ ಜಾಗತಿಕ ಪರಿಣಾಮಗಳು
Follow us
| Updated By: ಗಣಪತಿ ಶರ್ಮ

Updated on: Sep 08, 2023 | 8:54 PM

ನವದೆಹಲಿಯಲ್ಲಿ ನಡೆಯುತ್ತಿರುವ ಗ್ರೂಪ್ ಆಫ್ 20 ಶೃಂಗಸಭೆಯಲ್ಲಿ (G20 Summit) ಭಾಗವಹಿಸುವ ನಾಯಕರ ಗಮನವನ್ನು ಹಿಂದೂ ದೇವರಾದ ಶಿವನ 19 ಟನ್ ತೂಕದ ಪ್ರತಿಮೆ ಸೆಳೆಯಲಿದೆ. ಈ ಪ್ರತಿಮೆ ಜಾಗತಿಕ ಸಮುದಾಯದ ಮೇಲೆ ಪ್ರಭಾವ ಬೀರಲು ಭಾರತದ ದೃಢ ನಿರ್ಧಾರವನ್ನು ಸಂಕೇತಿಸುತ್ತದೆ. 28 ಅಡಿಗಳಷ್ಟು (8.5 ಮೀಟರ್) ಎತ್ತರವಿರುವ, ನೃತ್ಯ ಮಾಡುತ್ತಿರುವ ಈ ವಿಗ್ರಹವನ್ನು ಚಿನ್ನ, ಬೆಳ್ಳಿ ಹಾಗೂ ಕಬ್ಬಿಣದಂತಹ ಮೌಲ್ಯಯುತ ಲೋಹಗಳಿಂದ ನಿರ್ಮಿಸಿದ್ದು, ಈ ಸಮಾವೇಶವನ್ನು ಆಯೋಜಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಸೂಕ್ತ ಸಂಕೇತವಾಗಿದೆ. 2014ರಲ್ಲಿ ನರೇಂದ್ರ ಮೋದಿಯವರು ಸೃಷ್ಟಿ, ಲಯ ಹಾಗೂ ಪರಿವರ್ತನೆಗಳನ್ನು ಸಂಕೇತಿಸುವ ದೇವರಾದ ಶಿವನ ದೇವಾಲಯದ ಬಳಿ ಗಂಗಾ ನದಿಗೆ ಆರತಿ ಬೆಳಗುವ ಮೂಲಕ ಅಧಿಕಾರದ ಮೆಟ್ಟಿಲು ಏರಲು ಆರಂಭಿಸಿದರು.

ಅದಾಗಿ ಬಹುತೇಕ ಹತ್ತು ವರ್ಷಗಳ ಬಳಿಕ, ಮೋದಿಯವರು ಭಾರತದ ರಾಜಕೀಯ ಚಿತ್ರಣವನ್ನು ಬದಲಾಯಿಸಿ, ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಈಗ ಅವರು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ದೊಡ್ಡ ಶಕ್ತಿಯನ್ನಾಗಿ ಪರಿವರ್ತಿಸುವ ಗುರಿ ಹಾಕಿಕೊಂಡಿದ್ದಾರೆ. ಅವರ ಯೋಜನೆ, ಭಾರತವನ್ನು ಅಮೆರಿಕಾ ಮತ್ತು ಚೀನಾಗಳ ನಡುವಿನ ಶಕ್ತಿಯಾಗಿಸಿ, ಅವೆರಡರಲ್ಲಿ ಯಾವುದಕ್ಕೂ ಬಂಧಿಯಾಗದೆ, ತನ್ನದೇ ಆದ ಆರ್ಥಿಕ ಪ್ರಗತಿ ಮತ್ತು ಜಾಗತಿಕ ಪ್ರಭಾವವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.

ಮೋದಿಯವರ ಕಾರ್ಯತಂತ್ರದ ಕುರಿತು ಅರಿವಿರುವವರು ಭಾರತವನ್ನು ಅವಕಾಶವಾದಿ ಎನ್ನುತ್ತಿದ್ದು, ಅಮೆರಿಕಾ ಮತ್ತು ಚೀನಾಗಳ ನಡುವೆ ಹೆಚ್ಚುತ್ತಿರುವ ವೈಷಮ್ಯ ಹಾಗೂ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಮಧ್ಯೆಯೂ ಅವಕಾಶವನ್ನು ಹುಡುಕುತ್ತಿದೆ ಎಂದಿದ್ದಾರೆ. ಯುದ್ಧವನ್ನು ಕೈಗೊಂಡಿದ್ದಕ್ಕಾಗಿ ರಷ್ಯಾವನ್ನು ಭಾರತ ಟೀಕಿಸದಿರಲು ನಿರ್ಧರಿಸಿದ್ದು, ರಷ್ಯಾದ ಮೇಲೆ ಜಾಗತಿಕ ನಿರ್ಬಂಧಗಳ ಭಾಗವಾಗದಿರಲು ತೀರ್ಮಾನಿಸಿದೆ. ಅದರ ಬದಲಿಗೆ ಭಾರತ ರಷ್ಯದ ತೈಲ ಮತ್ತು ಆಯುಧಗಳನ್ನು ಖರೀದಿಸುತ್ತಿದ್ದು, ಇದೇ ಸಂದರ್ಭದಲ್ಲಿ ಅಮೆರಿಕಾದೊಡನೆಯೂ ಮಿಲಿಟರಿ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಿದೆ. ಭಾರತ ಈಗ ಎರಡು ಪ್ರತ್ಯೇಕ ಗುಂಪುಗಳ ಭಾಗವಾಗಿದ್ದು, ಅಮೆರಿಕಾ ಬೆಂಬಲಿತ, ಆಸ್ಟ್ರೇಲಿಯಾ, ಜಪಾನ್‌ಗಳ ಕ್ವಾಡ್ ಗುಂಪಿನ ಭಾಗವಾಗಿದೆ. ಅದರೊಡನೆ, ಚೀನಾ ಮತ್ತು ರಷ್ಯಾಗಳನ್ನು ಒಳಗೊಂಡಿರುವ ಬ್ರಿಕ್ಸ್ ಒಕ್ಕೂಟದಲ್ಲಿಯೂ ಭಾರತ ಸದಸ್ಯನಾಗಿದೆ.

ಭಾರತದ ಅತ್ಯುನ್ನತ ರಾಜತಂತ್ರಜ್ಞ, ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರು ಭಾರತದ ವಿದೇಶಾಂಗ ನೀತಿಯನ್ನು ಸಮತೋಲನದ ಹೆಜ್ಜೆ ಎಂದು ಕರೆದಿದ್ದಾರೆ. ಭಾರತ ಏಕಕಾಲದಲ್ಲಿ ಹಲವು ಆಯಾಮಗಳನ್ನು ನಿರ್ವಹಿಸುತ್ತಾ, ಯಾವುದೂ ಕೈಮೀರದಂತೆ ನೋಡಿಕೊಳ್ಳುತ್ತದೆ.

2019ರಲ್ಲಿ ತನ್ನ ಉಪನ್ಯಾಸವೊಂದರಲ್ಲಿ ಸುಬ್ರಹ್ಮಣ್ಯಂ ಜೈಶಂಕರ್ ಅವರು ಈ ಕುರಿತು ಸೂಕ್ತ ಅರಿವಿಲ್ಲದಿರುವವರು, ಅಥವಾ ಭೂತಕಾಲದಲ್ಲೇ ಉಳಿದು ಹೋಗಿರುವವರಿಗೆ ಭಾರತದ ಸಂಘರ್ಷಾತ್ಮಕವಾಗಿ ಕಾಣುವ ಕಾರ್ಯತಂತ್ರಗಳು ಹಾಗೂ ಗುರಿಗಳು ದಿಗ್ಭ್ರಮೆಗೊಳಿಸಬಹುದು ಎಂದಿದ್ದಾರೆ. ಜೈಶಂಕರ್ ಭಾರತದ ಹೆಜ್ಜೆ ಕೇವಲ ಮೂಲ ಗಣಿತಶಾಸ್ತ್ರವಲ್ಲದೆ, ಮುಂದುವರಿದ ಕಲನಶಾಸ್ತ್ರ ಎಂದಿದ್ದಾರೆ.

ಭಾರತದೆಡೆ ಜಗತ್ತಿನ ಗಮನ ಸೆಳೆಯುವ ಮೋದಿ ತಂತ್ರಗಾರಿಕೆ

ಈ ಕಾರ್ಯತಂತ್ರ ಏನೇ ಆಗಿದ್ದರೂ, ಮೋದಿಯವರ ಸರ್ಕಾರದ ಪಾಲಿಗೆ ಭಾರೀ ಪರಿಣಾಮಕಾರಿಯಾಗಿರುವಂತೆ ಕಂಡುಬರುತ್ತಿದೆ. ಈಗ ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ಭಾರತವನ್ನು ಚೀನಾದೆದುರಿಗೆ ಮಹತ್ವದ ಎದುರಾಳಿ ಎಂಬಂತೆ ಬಿಂಬಿಸುತ್ತಿರುವುದು ಭಾರತಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಲಾಭದಾಯಕ ಭೌಗೋಳಿಕ ರಾಜಕೀಯ ಸನ್ನಿವೇಶವನ್ನು ಸೃಷ್ಟಿಸಿದೆ. ಆ್ಯಪಲ್ ಸಂಸ್ಥೆಯಂತಹ ತಂತ್ರಜ್ಞಾನ ದೈತ್ಯ ಚೀನಾವನ್ನು ಮೀರಿ ಚಿಂತಿಸುತ್ತಿದ್ದು, ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಮಧ್ಯಮ ವರ್ಗವನ್ನು ತಲುಪುವ ಯೋಚನೆ ಹೊಂದಿದೆ. ಅದರೊಡನೆ, ಗ್ಲೋಬಲ್ ಸೌತ್‌ನ ಬೆಳೆಯುತ್ತಿರುವ ರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳಿಂದ ಹವಾಮಾನ ಬದಲಾವಣೆಯಂತಹ ವಿಚಾರಗಳಿಗೆ ಹಣ ಪಡೆಯಲು ಭಾರತವನ್ನು ಮಹತ್ವದ ಜೊತೆಗಾರ ಎಂದು ಪರಿಗಣಿಸುತ್ತಿದ್ದು, ಅವೆಲ್ಲವೂ ಉಕ್ರೇನ್ ಕದನದ ವಿಚಾರದಲ್ಲಿ ವ್ಲಾಡಿಮಿರ್ ಪುಟಿನ್ ಕುರಿತಾಗಿ ದೃಢ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿವೆ.

ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ, ಮೋದಿಯವರು ರಷ್ಯನ್ ಹೂಡಿಕೆದಾರರಿಗೆ ಭಾರತದ ಉಕ್ಕು ವಲಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ. ಅದರೊಡನೆ, ಮೋದಿಯವರು ಅಮೆರಿಕಾದೊಡನೆ ಹಾಗೂ ಫ್ರಾನ್ಸ್ ಜೊತೆಗೂ ರಾಜತಾಂತ್ರಿಕ ಸಂಬಂಧವನ್ನು ಬೆಳೆಸುತ್ತಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಭಾರತ ಮತ್ತು ಅಮೆರಿಕಾಗಳ ನಡುವಿನ ದೃಢವಾದ ಸಹಯೋಗವನ್ನು ಶ್ಲಾಘಿಸಿದ್ದು, ಇದನ್ನು ಜಗತ್ತಿನ ಅತ್ಯಂತ ನಿಕಟ ಸ್ನೇಹದಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಯುದ್ಧದ ಕಾರಣದಿಂದ ಜಿ-20 ಶೃಂಗಸಭೆಯಲ್ಲಿ ಭಾಗವಹಿಸದಿದ್ದರೂ, ಭಾರತದೊಡನೆ ವಿಶೇಷ ಸವಲತ್ತು ಹೊಂದಿರುವ ಕಾರ್ಯತಂತ್ರದ ಸಹಯೋಗಕ್ಕೆ ಒತ್ತು ನೀಡಿದ್ದಾರೆ.

ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ ಸಂಸ್ಥೆಯ ಸೌತ್ ಏಷ್ಯಾ ಪ್ರೋಗ್ರಾಮ್ ನಿರ್ದೇಶಕರು, ಹಿರಿಯ ತಜ್ಞರೂ ಆಗಿರುವ ಮಿಲನ್ ವೈಷ್ಣವ್ ಅವರ ಪ್ರಕಾರ, ಭಾರತ ಅತ್ಯಂತ ಸೂಕ್ಷ್ಮವಾದ ಬಹುಪಕ್ಷೀಯ ಸ್ನೇಹವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿದೆ. ಈ ಸಾಮರ್ಥ್ಯಕ್ಕೆ ಮಹತ್ವದ ಭೌಗೋಳಿಕ ರಾಜಕೀಯದ ಆಯಾಮಗಳು, ಅದರಲ್ಲೂ ಚೀನಾದ ಉತ್ಕರ್ಷ ಹಾಗೂ ಇಳಿಯುತ್ತಿರುವ ರಷ್ಯಾದ ಪ್ರಭಾವಗಳು ಕಾರಣವಾಗಿವೆ.

ಅನಾಮಧೇಯರಾಗಿ ಉಳಿಯಲು ಬಯಸಿರುವ ಭಾರತೀಯ ಅಧಿಕಾರಿಗಳು, “ಮಲ್ಟಿ ಅಲೈನ್‌ಮೆಂಟ್” ಎಂದು ಕರೆಯಲಾಗುವ, ಬಹುಪಕ್ಷೀಯ ಸ್ನೇಹದ ಸೂಕ್ಷ್ಮತೆಯನ್ನು ಒಪ್ಪಿಕೊಳ್ಳುತ್ತಾರೆ. ಜಾಗತಿಕ ಭೌಗೋಳಿಕ ರಾಜಕಾರಣದಲ್ಲಿ ಭಾರತ ಒಂದು ಪ್ರಮುಖ ರಾಷ್ಟ್ರವಾಗಿ ಪರಿಗಣಿತವಾಗಿದ್ದರೂ, ಆ ಸ್ಥಾನವನ್ನು ಕಾಪಾಡಿಕೊಳ್ಳುವುದು ಸವಾಲಾಗಿ ಪರಿಗಣಿಸಿದೆ. ಅದರಲ್ಲೂ ತೈವಾನ್ ಮಿಲಿಟರಿ ಬಿಕ್ಕಟ್ಟಿನಂತಹ ನೈಜ ಸವಾಲುಗಳನ್ನು ನಿರ್ವಹಿಸುವುದು ಸವಾಲಿನ ವಿಚಾರವಾಗಿದೆ.

ಜಿ-20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರಂತಹ ಪ್ರಮುಖರ ಗೈರುಹಾಜರಿ ಇಂತಹ ಸಮತೋಲನ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಲಿದೆ. ಕ್ಸಿ ಜಿನ್‌ಪಿಂಗ್ ಸಹ ಜಾಗತಿಕ ಮಟ್ಟದಲ್ಲಿ ಅಮೆರಿಕಾದ ಪ್ರಭಾವವನ್ನು ತಗ್ಗಿಸಲು ಬೆಳೆಯುತ್ತಿರುವ ಮಾರುಕಟ್ಟೆಗಳ ಗುಂಪಿನ ಮೇಲೆಯೇ ಗಮನ ಕೇಂದ್ರೀಕರಿಸಿದ್ದಾರೆ.

ಬ್ರಿಕ್ಸ್​ನಲ್ಲಿಯೂ ಭಾರತದ ಪ್ರಭಾವ

ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದ ಸಂದರ್ಭದಲ್ಲಿ ರಾಜತಾಂತ್ರಿಕ ಸಂಬಂಧಗಳಲ್ಲಿನ ಉದ್ವಿಗ್ನತೆ ಮಹತ್ವದ ಹಂತಕ್ಕೆ ತಲುಪಿತ್ತು. ಭಾರತ ಬ್ರಿಕ್ಸ್ ಒಕ್ಕೂಟವನ್ನು ಹನ್ನೊಂದು ರಾಷ್ಟ್ರಗಳ ಗುಂಪಾಗಿ ವಿಸ್ತರಿಸುವುದಕ್ಕೆ ತನ್ನ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಗುಂಪು ಹೆಚ್ಚು ಹೆಚ್ಚು ಚೀನಾ ಪರವಾಗುವ ಅಪಾಯವಿರುವುದು ಕಾರಣವಾಗಿತ್ತು. ಆದರೆ, ಹೆಚ್ಚಿನ ರಾಷ್ಟ್ರಗಳು ಕ್ಸಿ ಜಿನ್‌ಪಿಂಗ್ ಪರವಹಿಸಿ, ಮೋದಿಯವರಿಗೆ ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆಗೆ ಅನುಮತಿಸುವಂತೆ ಒತ್ತಾಯಿಸಿದರು. ಈ ಸೇರ್ಪಡೆಯಾಗುವ ಪಟ್ಟಿಯಲ್ಲಿ, ಹತ್ತು ಹಲವು ಅಮೆರಿಕಾ ಬೆಂಬಲಿತ ನಿರ್ಬಂಧಗಳನ್ನು ಎದುರಿಸುತ್ತಿರುವ ಇರಾನ್ ಹೆಸರೂ ಇತ್ತು!

ನವದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಸಂಸ್ಥೆಯ ಸುಶಾಂತ್ ಸಿಂಗ್ ಅವರು, ಭಾರತ ಬ್ರಿಕ್ಸ್ ಸಂಘಟನೆಯ ಭಾಗವಾಗಿರುವುದು ಮೂಲತಃ ರಷ್ಯಾ ಮತ್ತು ಚೀನಾಗಳು ಅದನ್ನು ಜಿ-7 ಗುಂಪಿನ ವಿರೋಧಿಯಾಗಿ ಮಾರ್ಪಡಿಸದಂತೆ ತಡೆಯುವ ಉದ್ದೇಶದಿಂದಾಗಿತ್ತು. ಆದರೆ ನವದೆಹಲಿ ಈ ಪಾತ್ರವನ್ನು ಅಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ. ಇದು ವಿವಿಧ ಭೌಗೋಳಿಕ ರಾಜಕೀಯ ನೆಲೆಯಲ್ಲಿ ಚೀನಾವನ್ನು ಎದುರಿಸಬಲ್ಲ ರಾಷ್ಟ್ರ ಎಂಬ ಭಾರತದ ಪ್ರಭಾವವನ್ನು ಕಡಿಮೆಗೊಳಿಸುವ ಸಾಧ್ಯತೆಗಳಿವೆ.

ಜಿ-20 ಸಂವಹನಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ವಿಚಾರಗಳಿಗೆ ಚೀನಾ ತನ್ನ ವಿರೋಧ ವ್ಯಕ್ತಪಡಿಸಿದೆ. ಅದರಲ್ಲಿ ಸಂಸ್ಕೃತ ಪದಗಳ ಬಳಕೆ, ಬೆಳೆಯುತ್ತಿರುವ ಮಾರುಕಟ್ಟೆ ಸಾಲಕ್ಕೆ ಸಂಬಂಧಿಸಿದ ವಿವಾದಗಳು, ಹಾಗೂ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಚಿತ್ರಣಗಳು ಪ್ರಮುಖವಾಗಿದ್ದು, 1999ರಲ್ಲಿ ಜಿ-20 ಸ್ಥಾಪನೆಯಾದ ಬಳಿಕ, ಸರ್ವಸಮ್ಮತ ಹೇಳಿಕೆ ಪಡೆಯಲು ಸಾಧ್ಯವಾಗದಿರುವ ಮೊದಲ ಪ್ರಧಾನಿ ಎಂಬ ಅಪಕೀರ್ತಿ ಮೋದಿಯವರಿಗೆ ಬರುವ ಅಪಾಯವಿದೆ.

ಓರ್ವ ಹಿರಿಯ ರಷ್ಯನ್ ಅಧಿಕಾರಿ ಬ್ರಿಕ್ಸ್ ಒಕ್ಕೂಟದ ವಿಸ್ತರಣೆ ರಷ್ಯಾಗೆ ಒಂದು ಆಶಾ ಭಾವನೆ ಮೂಡಿಸಲಿದೆ ಎಂದಿದ್ದು, ಇದರಿಂದಾಗಿ ರಷ್ಯಾಗೆ ಹೆಚ್ಚಿನ ಬೆಂಬಲ ಅಥವಾ ಜಿ-20 ಸಮ್ಮೇಳನದಿಂದ ಕಡಿಮೆ ಪ್ರತಿರೋಧ ಬರಲಿದೆ ಎಂದಿದ್ದಾರೆ. ಆದರೆ, ಈ ಸಂಭಾವ್ಯ ಬೆಳವಣಿಗೆ ಉಕ್ರೇನ್ ಹಾಗೂ ಅದರ ಸಹಯೋಗಿ ರಾಷ್ಟ್ರಗಳಿಗೆ ಪೂರಕವಾಗಿರುವುದಿಲ್ಲ. ಆದ್ದರಿಂದ ರಷ್ಯಾದ ಆಕ್ರಮಣದ ವಿಚಾರದಲ್ಲಿ ತಟಸ್ಥ ನಿಲುವು ತಳೆದಿರುವ ಭಾರತದ ಮೇಲೆ ಅವುಗಳ ಹತಾಶೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

27 ಸದಸ್ಯರನ್ನು ಒಳಗೊಂಡಿರುವ ಐರೋಪ್ಯ ಒಕ್ಕೂಟದ ಅಧಿಕಾರಿಗಳ ಪ್ರಕಾರ, ಜಿ-20 ಸಮ್ಮೇಳನದ ಅಂತ್ಯದ ವೇಳೆಗೆ ಜಂಟಿ ಹೇಳಿಕೆ ಪಡೆಯಲು ಸಾಧ್ಯವಾಗದಿರುವುದು ಅನಪೇಕ್ಷಿತ ಎನ್ನಲೂ ಸಾಧ್ಯವಿಲ್ಲ. ಯಾಕೆಂದರೆ, ಫ್ರಾನ್ಸ್ ಮತ್ತು ಜರ್ಮನಿಗಳ ಅಧಿಕಾರಿಗಳು ಜಿ-20 ಶೃಂಗಸಭೆಯನ್ನು ಭಾರತ ಯಶಸ್ವಿಯಾಗಿ ಆಯೋಜಿಸುವಂತೆ ಬೆಂಬಲಿಸುವುದು ತಮಗೆ ಲಾಭದಾಯಕ ಎಂದು ಭಾವಿಸಿವೆ. ಯಾಕೆಂದರೆ, ತಂತ್ರಜ್ಞಾನ ಮತ್ತು ವ್ಯಾಪಾರದಂತಹ ಪ್ರಮುಖ ವಲಯಗಳಲ್ಲಿ ಅವು ಭಾರತವನ್ನು ಮಹತ್ವದ ಸಹಯೋಗಿಯಾಗಿ ಪರಿಗಣಿಸಿವೆ.

ಜರ್ಮನಿ, ಫ್ರಾನ್ಸ್ ಹಾಗೂ ಸ್ಪೇನ್‌ಗಳು ಭಾರತದ ಶಿಪ್‌ಯಾರ್ಡ್‌ಗಳೊಡನೆ ಸಹಯೋಗ ಹೊಂದಿ, ಏರ್ ಇಂಡಿಪೆಂಡೆಂಟ್‌ ಪ್ರೊಪಲ್ಷನ್ ವ್ಯವಸ್ಥೆ (ಎಐಪಿ) ಹೊಂದಿರುವ ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಯೋಜಿಸುತ್ತಿವೆ. ಈ ತಂತ್ರಜ್ಞಾನದ ಕಾರಣದಿಂದ, ಡೀಸೆಲ್ ಇಲೆಕ್ಟ್ರಿಕ್ ಸಬ್‌ಮರೀನ್‌ಗಳು ಸಾಂಪ್ರದಾಯಿಕ ಜಲಾಂತರ್ಗಾಮಿಗಳಿಗೆ ಹೋಲಿಸಿದರೆ ದೀರ್ಘಕಾಲದ ತನಕ ನೀರಿನಾಳದಲ್ಲಿ ಮುಳುಗಿರಲು ಸಾಧ್ಯವಾಗುತ್ತದೆ. ಅದಲ್ಲದೆ, ಐರೋಪ್ಯ ಒಕ್ಕೂಟ ಈಗಾಗಲೇ ಭಾರತದೊಡನೆ ವ್ಯಾಪಾರ ಮತ್ತು ತಂತ್ರಜ್ಞಾನ ಸಮಿತಿಯನ್ನು ಸ್ಥಾಪಿಸಿದ್ದು, ಅಮೆರಿಕಾವನ್ನು ಹೊರತುಪಡಿಸಿದರೆ, ಈ ಸಮಿತಿ ಭಾರತಕ್ಕೆ ಸೀಮಿತವಾಗಿದೆ ಮತ್ತು ಸಹಕಾರವನ್ನು ವೃದ್ಧಿಸುವ ಗುರಿ ಹೊಂದಿದೆ.

ಆರ್ಥಿಕ ಚರ್ಚೆಗಳಲ್ಲಿ ಒಂದು ರೀತಿಯ ಸಂಪರ್ಕ ಕಡಿತವಾಗಿರುವಂತೆ ಕಂಡುಬರುತ್ತಿದೆ. ಐರೋಪ್ಯ ಒಕ್ಕೂಟದ ಅಧಿಕಾರಿಗಳು ಕಲೆಹಾಕಿರುವ ಮಾಹಿತಿಯ ಪ್ರಕಾರ, ಭಾರತ ಬ್ಲಾಕ್ (Bloc) ಜಗತ್ತಿನ ಅತಿದೊಡ್ಡ ಏಕ ಮಾರುಕಟ್ಟೆಯನ್ನು ಹೊಂದಿದ್ದರೂ, ಅದನ್ನು ಕಡಿಮೆ ಮಹತ್ವ ಹೊಂದಿರುವ, ಹಳೆಯ ಒಕ್ಕೂಟವಾಗಿ ಪರಿಗಣಿಸುತ್ತದೆ.

ಜಪಾನ್, ಫ್ರಾನ್ಸ್, ಮತ್ತು ಜರ್ಮನಿ ಸೇರಿದಂತೆ ಅಮೆರಿಕದ ಸಹಯೋಗಿಗಳು ಭಾರತದೊಡನೆ ತಮ್ಮ ವ್ಯವಹಾರದಲ್ಲಿ ಭವಿಷ್ಯವನ್ನು ನೋಡುವ ದೃಷ್ಟಿಕೋನ ಹೊಂದಿವೆ ಎಂದು ಓರ್ವ ಹಿರಿಯ ಅಧಿಕಾರಿ ಹೇಳಿದ್ದಾರೆ. ಅವರ ಪ್ರಕಾರ, ಇಂಡೋ – ಪೆಸಿಫಿಕ್ ಪ್ರಾಂತ್ಯದಲ್ಲಿ ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯ ಹೊಂದಿ, ಚೀನಾದ ಹೆಚ್ಚುತ್ತಿರುವ ಆಕ್ರಮಣಕಾರಿ ಸ್ವಭಾವವನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಏಕೈಕ ರಾಷ್ಟ್ರ ಭಾರತವಾಗಿದೆ.

ಗ್ಲೋಬಲ್ ಸೌತ್ ನಾಯಕನಾಗಿ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆಯೂ ಆ್ಯಪ್ ನಿಷೇಧ, ಹೂಡಿಕೆ ನಿರ್ಬಂಧ, ಹಾಗೂ ಕ್ಸಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷೆಯ ಜಾಗತಿಕ ಮೂಲಸೌಕರ್ಯ ಯೋಜನೆ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯ ತಿರಸ್ಕಾರ ಸೇರಿದಂತೆ ಚೀನಾಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಜಿ-20 ಗುಂಪಿಗೆ ಆಫ್ರಿಕನ್ ಒಕ್ಕೂಟವನ್ನು ಸೇರಿಸಬೇಕೆಂಬ ಭಾರತದ ಪ್ರಯತ್ನಕ್ಕೆ ಐರೋಪ್ಯ ಒಕ್ಕೂಟ ಬೆಂಬಲ ಸೂಚಿಸಿದ್ದು, ಇದು ಅಭಿವೃದ್ಧಿಶೀಲ ಜಗತ್ತಿನ ಮೇಲೆ ಚೀನಾದ ಪ್ರಭಾವವನ್ನು ತಗ್ಗಿಸುವ ಪ್ರಯತ್ನ ಎಂಬಂತೆ ಕಂಡುಬರುತ್ತದೆ. ಅದೇ ವೇಳೆ, ಇದು ನರೇಂದ್ರ ಮೋದಿಯವರನ್ನು ಗ್ಲೋಬಲ್ ಸೌತ್ ನಾಯಕನಾಗಿಯೂ ಗುರುತಿಸುತ್ತದೆ.

ಅಮೆರಿಕಾ ಭಾರತದೊಡನೆ ತನ್ನ ಆರ್ಥಿಕ ಸಂಪರ್ಕವನ್ನು ಇನ್ನಷ್ಟು ವೃದ್ಧಿಸುವ ಗುರಿ ಹೊಂದಿದ್ದು, ಶುದ್ಧ ಶಕ್ತಿಮೂಲ ಮತ್ತು ರಕ್ಷಣಾ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸುತ್ತಿದೆ. ಈ ನಿಟ್ಟಿನಲ್ಲಿ, ಭಾರತ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಅಮೆರಿಕಾದ ಜನರಲ್ ಇಲೆಕ್ಟ್ರಿಕ್ ಕಂಪನಿಗಳ ನಡುವೆ ಜೆಟ್ ಇಂಜಿನ್‌ಗಳನ್ನು ಜಂಟಿಯಾಗಿ ಉತ್ಪಾದಿಸುವ ಒಪ್ಪಂದವೂ ಮಹತ್ವದ ಬೆಳವಣಿಗೆಯಾಗಿದೆ. ಈ ಸಹಯೋಗದ ಕಾರಣದಿಂದ, ಭಾರತ ಬೋಸ್ಟನ್ ಮೂಲದ ಜನರಲ್ ಇಲೆಕ್ಟ್ರಿಕ್ ಕಂಪನಿ ತಂತ್ರಜ್ಞಾನ ವರ್ಗಾವಣೆ ನಡೆಸುವ ಮಹತ್ತರ ರಾಷ್ಟ್ರದ ಸ್ಥಾನ ಪಡೆಯಲಿದೆ.

ಭಾರತ ಸರ್ಕಾರದ ಬೆಂಬಲಿತ ಸಂಶೋಧನಾ ಸಂಸ್ಥೆಯಾಗಿರುವ, ನವದೆಹಲಿಯ ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್ ಸಂಸ್ಥೆಯ ಸ್ವಸ್ತಿ ರಾವ್ ಅವರ ಪ್ರಕಾರ, ಪ್ರಸ್ತುತ ಜಾಗತಿಕ ಆದೇಶ ಅಸ್ಪಷ್ಟತೆಯಿಂದ ಕೂಡಿದೆ. ಭಾರತ ಈ ಭೌಗೋಳಿಕ ರಾಜಕಾರಣದ ಚಿತ್ರದಲ್ಲಿ ಓರ್ವ ಸ್ಪಷ್ಟ ವಿಜೇತ ಹೊರಬರುವ ತನಕವೂ ಜಾಗರೂಕವಾಗಿ ಹೆಜ್ಜೆಯಿಡುವ ಕ್ರಮವನ್ನು ಕೈಗೊಂಡಿದೆ. ಬಹುಪಕ್ಷೀಯ ಸ್ನೇಹ ಹೊಂದುವುದು ಒಂದು ರೀತಿ ಸ್ವಯಂ ಸೇವೆಯಂತೆ ಕಂಡುಬಂದರೂ, ಸ್ವಸ್ತಿ ರಾವ್ ಅವರು ಭಾರತ ಇಂತಹ ಅನಿಶ್ಚಿತತೆಗಳನ್ನು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಳಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದು, ಈ ಕ್ರಮವನ್ನು ಜಾಗತಿಕ ಸಮುದಾಯವೂ ಗುರುತಿಸಿದೆ ಎಂದಿದ್ದಾರೆ.

ಆದರೆ ಇದ್ದಕ್ಕಿದ್ದಂತೆ ಉಕ್ರೇನ್ ಉಕ್ರೇನ್ ಯುದ್ಧದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತೆರಳಿದರೆ, ಅಥವಾ ತೈವಾನ್‌ನಲ್ಲಿ ಉದ್ವಿಗ್ನತೆ ತಲೆದೋರಿದರೆ ಭಾರತದ ಅಲಿಪ್ತ ನೀತಿಗೆ ಸವಾಲಾಗುವ ಸಾದ್ಯತೆಗಳಿವೆ. ಮಲಾಕಾ ಜಲಸಂಧಿಯಂತಹ ಪ್ರಮುಖ ಕಾರ್ಯತಂತ್ರದ ಪ್ರದೇಶಕ್ಕೆ ಭಾರತದ ಸಾಮೀಪ್ಯ ಮತ್ತು ಹಿಮಾಲಯ ಪರ್ವತದ ಬಳಿ ಭಾರತ ಚೀನಾದೊಡನೆ ಹಂಚಿಕೊಳ್ಳುವ ಸುದೀರ್ಘ ಗಡಿ ಅಮೆರಿಕಾದಂತಹ ಸಹಯೋಗಿಗಳಿಗೆ ಕಾರ್ಯತಂತ್ರದ ಮೇಲುಗೈಯಂತೆ ತೋರುತ್ತವೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಕದನ ನಡೆದರೆ, ಇದರ ಲಾಭ ಪಡೆಯಬಹುದೆಂದು ಅವು ಆಲೋಚಿಸುತ್ತವೆ.

ಪ್ರಸ್ತುತ ನರೇಂದ್ರ ಮೋದಿಯವರು ‘ವಸುಧೈವ ಕುಟುಂಬಕಂ’ ಎಂಬ ಮಾತಿನೊಡನೆ ಜಾಗತಿಕ ಏಕತೆಗೆ ಒತ್ತು ನೀಡುತ್ತಿದ್ದಾರೆ. ಜಿ-20 ‘ಒಂದು ಜಗತ್ತು, ಒಂದು ಕುಟುಂಬ, ಒಂದೇ ಭವಿಷ್ಯ’ ಎಂಬ ಘೋಷವಾಕ್ಯದಡಿ ಈ ವರ್ಷ ಜರುಗಲಿದೆ. ಆದರೆ, ಈ ಸಂಸ್ಕೃತ ವಾಕ್ಯದ ಬಳಕೆಗೆ ಕೆಲವು ಜಿ-20 ಸದಸ್ಯರು ಮಾತ್ರವಲ್ಲದೆ, ಭಾರತದೊಳಗಿನ ರಾಜಕೀಯ ವಿರೋಧಿಗಳೂ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮುಂದಿನ ವರ್ಷ ಭಾರತದಲ್ಲಿ ಲೋಕಸಭಾ ಚುನಾವಣೆಗಳಿರುವುದರಿಂದ, ಮೋದಿಯವರ ಪಕ್ಷ ಅದನ್ನು ಗೆಲ್ಲುವ ವಿಶ್ವಾಸ ಹೊಂದಿರುವ ಹಂತದಲ್ಲಿ ಇಂತಹ ಪ್ರತಿರೋಧಗಳು ಎದುರಾಗುತ್ತಿವೆ.

ಇದನ್ನೂ ಓದಿ: ಜಿ20 ಶೃಂಗಸಭೆಗೆ ಭಾರತ ಸನ್ನದ್ಧ: ಪ್ರಮುಖ ವಿಚಾರಗಳು, ರಾಜತಾಂತ್ರಿಕ ಸವಾಲುಗಳೇನು?

ಸಾಮಾನ್ಯ ತಯಾರಿಗಳಾದ ಹೊಸದಾದ ಸುಣ್ಣ – ಬಣ್ಣಗಳು ಮತ್ತು ಹೊಸದಾಗಿ ನೆಟ್ಟ ಗಿಡಗಳ ಜೊತೆಗೆ, ಭಾರತದ ರಾಜಧಾನಿಯಾದ್ಯಂತ ಮೋದಿಯವರ ಚಿತ್ರಗಳನ್ನು ಒಳಗೊಂಡ ಹಲವು ಭಿತ್ತಿಚಿತ್ರಗಳು ಮತ್ತು ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಸಂಸ್ಕೃತ ವಾಕ್ಯದ ಬಳಕೆ, ಶಿವನ ಪ್ರತಿಮೆಯ ಉಪಸ್ಥಿತಿ, ಹಾಗೂ ಭಾರತೀಯ ಜನತಾ ಪಾರ್ಟಿಯ ಚಿಹ್ನೆಯಾದ ಕಮಲ ಜಿ-20 ಚಿಹ್ನೆಯೂ ಆಗಿರುವುದು, ನರೇಂದ್ರ ಮೋದಿಯವರ ಬಿಜೆಪಿ ಈ ಜಿ-20 ಶೃಂಗಸಭೆಯನ್ನು ತನ್ನ ರಾಷ್ಟ್ರೀಯವಾದಿ ಹಿಂದುತ್ವದ ಅಜೆಂಡಾಗೆ ಸೇರ್ಪಡೆಗೊಳಿಸುವ ಉದ್ದೇಶ ಹೊಂದಿರುವುದನ್ನು ಸೂಚಿಸುತ್ತದೆ. ಇದನ್ನು ಪ್ರತಿಪಾದಿಸುವಂತೆ, ನರೇಂದ್ರ ಮೋದಿಯವರು ಶೃಂಗಸಭೆಯ ಭೋಜನದ ಆಮಂತ್ರಣದಲ್ಲಿ ‘ಇಂಡಿಯಾ’ ಎಂಬ ಪದದ ಬದಲಿಗೆ, ಪುರಾತನ ಸಂಸ್ಕೃತ ಪದ ‘ಭಾರತ’ವನ್ನು ಆಯ್ಕೆ ಮಾಡಿದ್ದಾರೆ.

ಶೃಂಗಸಭೆ ಹತ್ತಿರಾಗುತ್ತಿರುವಂತೆ, ಭಾರತದಲ್ಲಿ ಕೋಮು ಹಿಂಸೆಗಳು ಹೆಚ್ಚಾಗುತ್ತಿದ್ದು, ಭಾರತದಲ್ಲಿ ಮೋದಿಯವರ ಆಡಳಿತದಲ್ಲಿ ಮಾನವ ಹಕ್ಕುಗಳ, ಅದರಲ್ಲೂ ಹಿಂದೂ ಬಹುಸಂಖ್ಯಾತ ನೆಲದಲ್ಲಿ ಮುಸ್ಲಿಮರಂತಹ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸುವವರ ಗಮನ ಸೆಳೆದಿದೆ. ಮೋದಿಯವರು ಇಂತಹ ಆರೋಪಗಳನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದು, ಈ ವರ್ಷದ ಅಮೆರಿಕಾ ಭೇಟಿಯ ಸಂದರ್ಭದಲ್ಲಿ ಭಾರತದಂತಹ ಪ್ರಜಾಪ್ರಭುತ್ವ ನಿಷ್ಠ ರಾಷ್ಟ್ರದ ಬದ್ಧತೆಯ ಕುರಿತು ಪ್ರಶ್ನೆಗಳು ಬಂದಿರುವುದು ತನಗೆ ಆಶ್ಚರ್ಯ, ಆಘಾತ ಉಂಟುಮಾಡಿದೆ ಎಂದಿದ್ದರು.

ಇದನ್ನೂ ಓದಿ: ಭೌಗೋಳಿಕ ರಾಜಕೀಯ ಸಂಕೀರ್ಣತೆ ನಡುವೆ ಜಿ20 ನಾಯಕರ ಶೃಂಗಸಭೆಯಲ್ಲಿ ಭಾರತದ ಮಹತ್ವ

ಆದರೆ, ಇತ್ತೀಚಿನ ದಿನಗಳಲ್ಲಿ ಭಾರತ ಇತರ ರಾಷ್ಟ್ರಗಳಿಂದ ದೇಶೀಯ ಸಮಸ್ಯೆಗಳ ಕುರಿತಾಗಲಿ, ಅಥವಾ ಅಮೆರಿಕಾ, ಚೀನಾ, ರಷ್ಯಾ ಹಾಗೂ ಇತರ ಜಾಗತಿಕ ಶಕ್ತಿಗಳನ್ನು ಒಳಗೊಂಡ ಜಾಗತಿಕ ರಾಜಕಾರಣದ ವಿಚಾರದಲ್ಲಾಗಲಿ ಹೆಚ್ಚು ಟೀಕೆ ಎದುರಿಸುವಂತೆ ಕಾಣುತ್ತಿಲ್ಲ.

ಭಾರತದ ವಿದೇಶಾಂಗ ಸಚಿವರಾದ ಸುಬ್ರಹ್ಮಣ್ಯಂ ಜೈಶಂಕರ್ ಅವರು ಕಳೆದ ವಾರ ಒಂದು ಸಂದರ್ಶನದಲ್ಲಿ “ನಾವು 140 ಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದ್ದು, ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ನಾವು ಒಂದು ದೃಢ, ಆತ್ಮವಿಶ್ವಾಸದ ನಿರ್ಧಾರ ತೆಗೆದುಕೊಂಡಾಗ, ಜನರು ಅದನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ನಾವೇ ನಿರ್ಧಾರ ಕೈಗೊಳ್ಳಲು ಹಿಂಜರಿದರೆ, ಅಸಮರ್ಥರಾದರೆ, ಜಗತ್ತು ನಮ್ಮನ್ನು ಮೂಲೆಗುಂಪು ಮಾಡುತ್ತದೆ” ಎಂದಿದ್ದರು.

ಗಿರೀಶ್ ಲಿಂಗಣ್ಣ

(ಲೇಖಕರು; ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ