AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನನ್ನು ಹಿಂದಿಕ್ಕಿದ ಭಾರತ; ಪ್ರಲ್ಹಾದ್ ಜೋಶಿ ಮಾಹಿತಿ

ಭಾರತವು ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನ್‌ಗಿಂತ ಮುಂದಿದೆ. ಜಪಾನ್‌ನ 96,459 GWh ಗೆ ಹೋಲಿಸಿದರೆ ಭಾರತ ದೇಶ 1,08,494 GWh ಉತ್ಪಾದಿಸುತ್ತದೆ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿದೆ. ನಮ್ಮ ದೇಶ ಚೀನಾ, ಅಮೆರಿಕಾ ನಂತರದ ಸ್ಥಾನದಲ್ಲಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನನ್ನು ಹಿಂದಿಕ್ಕಿದ ಭಾರತ; ಪ್ರಲ್ಹಾದ್ ಜೋಶಿ ಮಾಹಿತಿ
Pralhad Joshi
ಸುಷ್ಮಾ ಚಕ್ರೆ
|

Updated on: Jul 31, 2025 | 10:24 PM

Share

ನವದೆಹಲಿ, ಜುಲೈ 31: ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಈಗ ಜಪಾನ್‌ಗಿಂತ ಮುಂದಿದ್ದು, 1,08,494 GWh (ಗಿಗಾವ್ಯಾಟ್‌) ವಿದ್ಯುತ್‌ ಉತ್ಪಾದಿಸುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ನವದೆಹಲಿಯಲ್ಲಿ ಇಂದು ಈ ಮಾಹಿತಿಯನ್ನು ಹಂಚಿಕೊಂಡ ಸಚಿವ ಪ್ರಲ್ಹಾದ್ ಜೋಶಿ, ಜಪಾನ್‌ ಸದ್ಯಕ್ಕೆ 96,459 GWh ವಿದ್ಯುತ್‌ ಉತ್ಪಾದಿಸುತ್ತಿದ್ದರೆ ಭಾರತ 1,08,494 GWh ವಿದ್ಯುತ್‌ ಉತ್ಪಾದಿಸಿ ಮುಂಚೂಣಿಯಲ್ಲಿದೆ. ಪಳೆಯುಳಿಕೆಯೇತರ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಶೇ.50ರಷ್ಟನ್ನು ಅದಾಗಲೇ ಸಾಧಿಸಿದೆ ಎಂದು ಹೇಳಿದ್ದಾರೆ.

ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವೀಗ ಜಪಾನ್‌ ದೇಶವನ್ನು ಹಿಂದಿಕ್ಕುವ ಮೂಲಕ ಮೂರನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಚೀನಾ ಮತ್ತು ಅಮೆರಿಕದ ನಂತರದ ಸ್ಥಾನದಲ್ಲಿ ಭಾರತ ರಾರಾಜಿಸುತ್ತಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಭಾರತ ವಿಶ್ವದ ಮೂರನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲ, ಪ್ರೋತ್ಸಾಹ, ಮಾರ್ಗದರ್ಶನ ಅತ್ಯಮೂಲ್ಯವಾಗಿದೆ. ಮೋದಿ ಅವರ ದೂರದೃಷ್ಟಿಯಿಂದಾಗಿ ಭಾರತ ಶುದ್ಧ ಇಂಧನ ಕ್ರಾಂತಿಯಲ್ಲಿ ಜಾಗತಿಕವಾಗಿ ಮುಂಚೂಣಿ ಸಾಧಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 2023ರ ಕರ್ನಾಟಕದ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ?; ಕಾಂಗ್ರೆಸ್​​ಗೆ ಪ್ರಲ್ಹಾದ್ ಜೋಶಿ ಲೇವಡಿ

ಅಂತರಾಷ್ಟ್ರೀಯ ಇಂಧನ ಸಂಸ್ಥೆ 2024ರ ದತ್ತಾಂಶದ ಪ್ರಕಾರ ಚೀನಾ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. 2023ರಲ್ಲಿ 260 GW ಸೇರಿಸಿದ್ದು, ಕಳೆದ ವರ್ಷಕ್ಕಿಂತ ಮೂರು ಪಟ್ಟು ಸನಿಹದಲ್ಲಿದೆ. ನವೀಕರಿಸಬಹುದಾದ ಇಂಧನಕ್ಕಾಗಿ ಚೀನಾ 14ನೇ ಪಂಚವಾರ್ಷಿಕ ಯೋಜನೆಗೆ ಮಹತ್ವಾಕಾಂಕ್ಷೆಯ ಗುರಿ ನಿಗದಿಪಡಿಸಿದ್ದು, ಮತ್ತಷ್ಟು ಬೆಳವಣಿಗೆಗೆ ಕಾರಣವಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಅಮೆರಿಕಾ 2022ರಲ್ಲಿ ಹಣದುಬ್ಬರ ಕಡಿತ ಕಾಯ್ದೆಯಲ್ಲಿ (IRA) ಸೌರ ಪಿವಿಗಾಗಿ ಉದಾರವಾಗಿ ಅನುದಾನ ಒದಗಿಸಿತು. ಇದರ ಪರಿಣಾಮ 2023ರಲ್ಲಿ ಅಮೆರಿಕದಲ್ಲಿ ಶೇ.70ರಷ್ಟು ಹೆಚ್ಚಾಗಿ ದಾಖಲೆಯ 32 GW ತಲುಪಿದೆ ಎಂದು ತಿಳಿಸಿದ್ದಾರೆ.

ಭಾರತ 2023ರಲ್ಲಿ 12 GW ಸೌರ PVಯನ್ನು ಸ್ಥಾಪಿಸಿತು. 2024ರಲ್ಲಿ ಇದು ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಬ್ರೆಜಿಲ್ 2023ರಲ್ಲಿ 15 GW ಸೌರ PV ಸಾಮರ್ಥ್ಯ ಸಾಧಿಸಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.30ರಷ್ಟು ಹೆಚ್ಚಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ರಸಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ: ರೈತರ ಕೂಗಿಗೆ ಕಿವಿಯಾದ ಪ್ರಹ್ಲಾದ್ ಜೋಶಿ ಆ್ಯಂಡ್ ಟೀಮ್

ಪ್ಯಾರಿಸ್‌ ಒಪ್ಪಂದ ಸಾಧಿಸಿದ ಭಾರತ:

ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ ಭಾರತ ತನ್ನ ವಿದ್ಯುತ್ ಸಾಮರ್ಥ್ಯದ ಶೇ.50ರಷ್ಟು ಅನ್ನು ಪಳೆಯುಳಿಕೆಯೇತರ ಮೂಲಗಳಿಂದ 5 ವರ್ಷ ಮೊದಲೇ ಸಾಧಿಸಿದೆ. 2030ರ ವೇಳೆಗೆ ಪಳೆಯುಳಿಕೆಯೇತರ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇ.50ಕ್ಕೆ ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. ಜೂನ್ 30ರ ಹೊತ್ತಿಗೆ ಭಾರತದ ಒಟ್ಟು ಇಂಧನ ಸಾಮರ್ಥ್ಯ 484.8 GW ಆಗಿದ್ದು, ಇದರಲ್ಲಿ 242.04 GW (ಶೇ.49.92) ಉಷ್ಣ-ಕಲ್ಲಿದ್ದಲಿನಿಂದ ಹಾಗೂ 8.78 GW (ಶೇ.1.81) ಪರಮಾಣುವಿನಿಂದ ಮತ್ತು 234.00 GW (ಶೇ.48.27) ನವೀಕರಿಸಬಹುದಾದ ಮೂಲಗಳಿಂದ ಸಾಧ್ಯವಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ವಿವರಿಸಿದ್ದಾರೆ.

ಗ್ಲ್ಯಾಸ್ಗೋದಲ್ಲಿ ನಡೆದ COP26ನಲ್ಲಿ ಭಾರತ ತನ್ನ ಬದ್ಧತೆಗಳನ್ನು ಪೂರೈಸುವ ಹಾದಿಯಲ್ಲಿದೆ. 2030ರ ವೇಳೆಗೆ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು 500 GWಗೆ ಹೆಚ್ಚಿಸಲಿದೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಂದ ಶೇ.50ರಷ್ಟು ಇಂಧನ ಅಗತ್ಯಗಳನ್ನು ಪೂರೈಸಲಿದೆ ಎಂದು ಘೋಷಿಸಿದ್ದಾರೆ.

ಹಾಗೇ, ಭಾರತ 1 ಶತಕೋಟಿ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಗುರಿ ಹೊಂದಿದ್ದು, 2030ರ ವೇಳೆಗೆ ಶೇ.45ರಷ್ಟು ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿ ಸಾಧಿಸುವತ್ತ ಹೆಜ್ಜೆ ಹಾಕಿದೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ