ಭೌಗೋಳಿಕ ರಾಜಕೀಯ ಸಂಕೀರ್ಣತೆ ನಡುವೆ ಜಿ20 ನಾಯಕರ ಶೃಂಗಸಭೆಯಲ್ಲಿ ಭಾರತದ ಮಹತ್ವ

ಪ್ರಧಾನಿ ನರೇಂದ್ರ ಮೋದಿಯವರು ವರ್ಷಾದ್ಯಂತ ಜಿ20 ನಾಯಕನಾಗಿ ಭಾರತದ ಪಾತ್ರದ ಕುರಿತು ಪ್ರಚಾರ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಿ20 ಅಧ್ಯಕ್ಷತೆಯನ್ನು ಒಂದು ಮಾಮೂಲು ಜವಾಬ್ದಾರಿ ಎಂಬಂತೆ ಪರಿಗಣಿಸದೆ, ಮೋದಿ ಮತ್ತು ಅವರ ರಾಜಕೀಯ ಪಕ್ಷವಾದ ಆಡಳಿತಾರೂಢ ಬಿಜೆಪಿ, ಈ ಅವಕಾಶವನ್ನು ಮೋದಿ ನಾಯಕತ್ವದಲ್ಲಿ ಭಾರತ ಪ್ರಮುಖ ಜಾಗತಿಕ ಶಕ್ತಿಯಾಗಿದೆ ಎಂದು ರೂಪಿಸುವ ಪ್ರಯತ್ನ ನಡೆಸಿದೆ.

ಭೌಗೋಳಿಕ ರಾಜಕೀಯ ಸಂಕೀರ್ಣತೆ ನಡುವೆ ಜಿ20 ನಾಯಕರ ಶೃಂಗಸಭೆಯಲ್ಲಿ ಭಾರತದ ಮಹತ್ವ
ಭೌಗೋಳಿಕ ರಾಜಕೀಯ ಸಂಕೀರ್ಣತೆ ನಡುವೆ ಜಿ20 ಶೃಂಗಸಭೆಯಲ್ಲಿ ಭಾರತದ ಮಹತ್ವ
Follow us
| Updated By: ಗಣಪತಿ ಶರ್ಮ

Updated on: Sep 08, 2023 | 8:00 AM

ಜಿ20 ನಾಯಕರ ಶೃಂಗಸಭೆಯನ್ನು (G20 Summit) ಆಯೋಜಿಸುತ್ತಿರುವುದು ಭಾರತದ ಪಾಲಿಗೆ ಏಕಕಾಲದಲ್ಲಿ ಸವಾಲೂ, ಉತ್ತಮ ಅವಕಾಶವೂ ಆಗಿದೆ. ಯಾಕೆಂದರೆ, ಭಾರತ ಭೌಗೋಳಿಕ ರಾಜಕೀಯದ ಸಂಕೀರ್ಣತೆಗಳ ನಡುವೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು, ಗ್ಲೋಬಲ್ ಸೌತ್‌ನ ಪ್ರತಿನಿಧಿಯಾಗುವ ಉದ್ದೇಶ ಹೊಂದಿದೆ. ಸೆಪ್ಟೆಂಬರ್ 9ರಂದು, ಜಗತ್ತಿನ ಪ್ರಮುಖ ಆರ್ಥಿಕತೆಗಳ ನಾಯಕರನ್ನೊಳಗೊಂಡ, ಜಾಗತಿಕ ಆರ್ಥಿಕ ವಿಚಾರಗಳ ಕುರಿತು ಮಾತುಕತೆ ನಡೆಸುವ ಜಿ20 ಶೃಂಗಸಭೆ ನವದೆಹಲಿಯಲ್ಲಿ ನಡೆಯಲಿದೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ವರ್ಷದ ಜಿ20 ಶೃಂಗಸಭೆಯ ಜವಾಬ್ದಾರಿ ಹೊಂದಿದ್ದು, ಸಮಾವೇಶಕ್ಕೂ ಮೊದಲು ವಿದೇಶಗಳಲ್ಲಿ ಹಾಗೂ ಭಾರತದಲ್ಲಿ ನಡೆಯುತ್ತಿರುವ ಸಮಾರಂಭಗಳಲ್ಲಿ ಭಾರತದ ಜಾಗತಿಕ ಸ್ಥಾನವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅದರೊಡನೆ, ಮೋದಿಯವರು ಜಿ20ಯಲ್ಲಿ ತನ್ನ ನಾಯಕತ್ವವನ್ನು ಗ್ಲೋಬಲ್ ಸೌತ್ ರಾಷ್ಟ್ರಗಳು ಮತ್ತು ಪಾಶ್ಚಾತ್ಯ ರಾಷ್ಟ್ರಗಳ ನಡುವೆ ಸಂಪರ್ಕ ಸಾಧಿಸಲು ಒಂದು ಅವಕಾಶವಾಗಿ ಪರಿಗಣಿಸಿದ್ದಾರೆ. ಆದರೆ, ಈ ಜಿ20 ಎಂದರೇನು? ಈ ವರ್ಷದ ಸಮಾವೇಶಕ್ಕೆ ಯಾಕೆ ಮಹತ್ವವಿದೆ? ನವದೆಹಲಿಯಿಂದ ನಾವು ಏನನ್ನು ನಿರೀಕ್ಷಿಸಬಹುದು?

1999ರ ಏಷ್ಯನ್ ಆರ್ಥಿಕ ಸಂಕಷ್ಟಕ್ಕೆ ಪ್ರತಿಕ್ರಿಯೆಯಾಗಿ ಜಿ20ಯನ್ನು ಸ್ಥಾಪಿಸಲಾಯಿತು. ಈ ಆರ್ಥಿಕ ಸಮಸ್ಯೆಯ ಕಾರಣದಿಂದ, ಈಗಾಗಲೇ ಸ್ಥಾಪನೆಗೊಂಡಿದ್ದ ಗ್ರೂಪ್ ಆಫ್ ಸೆವೆನ್ (ಜಿ7) ರಾಷ್ಟ್ರಗಳು ಜಾಗತಿಕ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲು ಇತರ ಪ್ರಮುಖ ಆರ್ಥಿಕ ಶಕ್ತಿಗಳೊಡನೆ ಮಾತುಕತೆ ನಡೆಸಬೇಕಾಯಿತು. 1997ರಲ್ಲಿ ಆರಂಭದಲ್ಲಿ ಈ ಗುಂಪಿನಲ್ಲಿ 22 ಸದಸ್ಯರಿದ್ದು, 1999ರ ಆರಂಭದಲ್ಲಿ ಅದನ್ನು ತಾತ್ಕಾಲಿಕವಾಗಿ 33ಕ್ಕೆ ಹೆಚ್ಚಿಸಲಾಯಿತು. ಅದೇ ವರ್ಷದ ಸೆಪ್ಟೆಂಬರ್ ವೇಳೆಗೆ ಪ್ರಸ್ತುತ ಇರುವ ರೀತಿಯಲ್ಲಿ 19 ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟ ಜಿ20ಯ ಸದಸ್ಯರೆನಿಸಿದವು. ಒಟ್ಟಾಗಿ, ಈ ಸದಸ್ಯ ರಾಷ್ಟೃಗಳು ಜಾಗತಿಕ ಆರ್ಥಿಕ ಉತ್ಪಾದನೆಯಲ್ಲಿ 80% ಪಾಲು ಹೊಂದಿವೆ.

2008ರ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ, ಜಿ20 ಸದಸ್ಯ ರಾಷ್ಟ್ರಗಳ ಅರ್ಥ ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್‌ಗಳ ನಡುವೆ ಸಮರ್ಪಕ ಸಹಕಾರವನ್ನು ಏರ್ಪಡಿಸಲು ಕಾರಣವಾಯಿತು. ಆದರೆ, ಅಂದಿನಿಂದ ಜಿ20 ವ್ಯಾಪಾರವನ್ನು ಸುಗಮಗೊಳಿಸಲು ತನ್ನ ಗುರಿಗಳನ್ನು ಸಾಧಿಸಲು ಅಷ್ಟೊಂದು ಸಫಲತೆ ಕಂಡಿಲ್ಲ. ಆದರೆ, ಪ್ರತಿಯೊಂದು ದೇಶದ ಆರ್ಥಿಕ ವ್ಯವಸ್ಥೆಯೂ ಸದೃಢವಾಗಿ, ಭಯೋತ್ಪಾದನೆಗೆ ಹಣ ಹೂಡಿಕೆ ಮಾಡದಂತೆ ತಡೆಯಲು ಯಶಸ್ವಿಯಾಗಿದೆ.

ಈ ವರ್ಷದ ಜಿ20 ಸಮಾವೇಶ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ವರ್ಷಾದ್ಯಂತ ಜಿ20 ನಾಯಕನಾಗಿ ಭಾರತದ ಪಾತ್ರದ ಕುರಿತು ಪ್ರಚಾರ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಿ20 ಅಧ್ಯಕ್ಷತೆಯನ್ನು ಒಂದು ಮಾಮೂಲು ಜವಾಬ್ದಾರಿ ಎಂಬಂತೆ ಪರಿಗಣಿಸದೆ, ಮೋದಿ ಮತ್ತು ಅವರ ರಾಜಕೀಯ ಪಕ್ಷವಾದ, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಈ ಅವಕಾಶವನ್ನು ಮೋದಿಯವರ ನಾಯಕತ್ವದಲ್ಲಿ ಭಾರತ ಪ್ರಮುಖ ಜಾಗತಿಕ ಶಕ್ತಿಯಾಗಿದೆ ಎಂದು ರೂಪಿಸುವ ಪ್ರಯತ್ನ ನಡೆಸಿದೆ.

ಭಾರತದಾದ್ಯಂತ 56 ನಗರಗಳಲ್ಲಿ 200ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಲಾಗಿದೆ. ಜಿ20 ಸಮಾವೇಶದ ಕುರಿತು ಮಾಹಿತಿ ನೀಡುವ, ಮೋದಿಯವರ ಬೃಹತ್ ಚಿತ್ರಗಳಿರುವ ಭಿತ್ತಿ ಚಿತ್ರಗಳನ್ನು ದೇಶಾದ್ಯಂತ ಅಳವಡಿಸಲಾಗಿದ್ದು, ಶಾಲೆಗಳಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಕುರಿತು ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಈ ಪ್ರಯತ್ನಗಳಲ್ಲಿ ಪ್ರಬಂಧ ಸ್ಪರ್ಧೆಗಳು ಮತ್ತು ಜಿ20 ಜ್ಞಾನದ ಕುರಿತು ಪ್ರಮಾಣಪತ್ರ ನೀಡುವ ಶೈಕ್ಷಣಿಕ ಕೋರ್ಸ್‌ಗಳನ್ನು ನಡೆಸಲಾಯಿತು. ಇದನ್ನು ಗಮನಿಸಿದ ಅಮೆರಿಕಾದ ಅಧಿಕಾರಿಯೊಬ್ಬರು, ಅಮೆರಿಕಾ ಸಂಯುಕ್ತ ಸಂಸ್ಥಾನವೂ ತನ್ನ ಅಧ್ಯಕ್ಷೀಯ ಅವಧಿಯಲ್ಲಿ ಜನರಲ್ಲಿ ಇಂತಹ ಉತ್ಸಾಹ ಮೂಡಿಸಲು ಪ್ರಯತ್ನ ನಡೆಸಬೇಕಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ!

ಭಾರತ ಐತಿಹಾಸಿಕವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳೊಡನೆ ಉತ್ತಮ ಸಂಬಂಧ ಹೊಂದಿತ್ತು. ಅದರೊಡನೆ, ಫ್ರಾನ್ಸ್, ಆಸ್ಟ್ರೇಲಿಯಾ, ಮತ್ತು ಅಮೆರಿಕಾದಂತಹ ಪಾಶ್ಚಾತ್ಯ ರಾಷ್ಟ್ರಗಳ ಜೊತೆಯೂ ತನ್ನ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಿತ್ತು. ಅದರೊಡನೆ, ಭಾರತ ಜಿ20ಯನ್ನು ತನ್ನನ್ನು ತಾನು ಗ್ಲೋಬಲ್ ಸೌತ್ ಪ್ರತಿನಿಧಿಯಾಗಿ ಗುರುತಿಸಿಕೊಳ್ಳಲು ವೇದಿಕೆಯಾಗಿ ಬಳಸಿಕೊಂಡಿದೆ. ತಾನು ಅಭಿವೃದ್ಧಿಶೀಲ ಜಗತ್ತು ಮತ್ತು ಪಾಶ್ಚಾತ್ಯ ದೇಶಗಳ ನಡುವಿನ ಸಂವಹನ ಕೊಂಡಿಯಾಗಿ ಕಾರ್ಯಾಚರಿಸಿದೆ. ಈ ಕಾರಣದಿಂದ, ಜಿ20 ಅಜೆಂಡಾದಲ್ಲಿ ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅಳವಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಹವಾಮಾನ ಧನಸಹಾಯ, ಆಹಾರ ಭದ್ರತೆಯನ್ನು ಖಾತ್ರಿಪಡಿಸುವುದು, ಹಾಗೂ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳ ಮೂಲಕ ಆರ್ಥಿಕ ಕೊರತೆಯಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸುಸ್ಥಿರ ಸಾಲ ಸಹಾಯ ಮಾಡುವುದು, ಮತ್ತಿತರ ಸುಧಾರಣೆಗಳನ್ನು ತರುವುದು ಸೇರಿವೆ. ಅದರೊಡನೆ, ಭಾರತ 55 ಆಫ್ರಿಕನ್ ರಾಷ್ಟ್ರಗಳಿಗೆ ಪೂರ್ಣ ಜಿ20 ಸದಸ್ಯತ್ವ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಇದಕ್ಕೆ ಜರ್ಮನಿ ತನ್ನ ಬೆಂಬಲ ವ್ಯಕ್ತಪಡಿಸಿದೆ.

ಸೆಪ್ಟೆಂಬರ್ 9 ಹಾಗೂ 10ರಂದು ನಡೆಯಲಿರುವ ಅಂತಿಮ ಶೃಂಗಸಭೆಯ ಯಶಸ್ಸಿನ ಕುರಿತು ಈಗಲೇ ಏನೂ ಹೇಳಲಾಗದು. ಅದರೊಡನೆ, ಪೂರೈಕೆ ಸರಪಳಿಗಳನ್ನು ಬಲಪಡಿಸುವ ಮತ್ತು ರೂಪುರೇಷೆ ರಚಿಸುವ ಮೂಲಕ ಜಾಗತಿಕ ವ್ಯಾಪಾರವನ್ನು ಹೆಚ್ಚಿಸುವುದು, ಹವಾಮಾನ ಹಣಕಾಸು, ಎಲ್ಲರಿಗೂ ಲಭ್ಯವಾಗುವ ಡಿಜಿಟಲ್ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಅಭಿವೃದ್ಧಿ, ಸುಸ್ಥಿರ ಕೃಷಿ ಮತ್ತು ಆಹಾರ ಭದ್ರತೆಯನ್ನು ಒಳಗೊಂಡ ಹಸಿರು ಅಭಿವೃದ್ಧಿ ಒಪ್ಪಂದವನ್ನು ಮುಂದುವರಿಸುವುದು ಸೇರಿದಂತೆ ಭಾರತದ ಪ್ರಮುಖ ಆದ್ಯತೆಗಳ ಕುರಿತು ಒಮ್ಮತವಿದೆಯೇ ಎಂಬುದು ಅನಿಶ್ಚಿತವಾಗಿದೆ.

ಭಾರತದ ಪ್ರಯತ್ನಗಳನ್ನೂ ಮೀರಿ, ಉಕ್ರೇನ್ ಕದನ ಜಿ20 ಶೃಂಗಸಭೆಯ ಮೇಲೆ ತನ್ನ ನೆರಳನ್ನು ಬೀರಿದೆ. ಕಪ್ಪು ಸಮುದ್ರದ ಆಹಾರ ಧಾನ್ಯ ಒಪ್ಪಂದದಿಂದ ರಷ್ಯಾ ಇತ್ತೀಚೆಗೆ ಹಿಂದೆ ಸರಿದಿರುವುದು ಜಿ20ಯ ಭಾಗವಾಗಿರುವ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೂ ಆಹಾರ ಭದ್ರತೆಯ ಕುರಿತು ಕಳವಳ ಮೂಡಿಸಿದೆ. ಈ ವರ್ಷದ ಆರಂಭದಲ್ಲಿ, ಜಿ20 ಅರ್ಥ ಸಚಿವರ ಸಭೆಯಲ್ಲಿ, ಉಕ್ರೇನ್ ಸಂಘರ್ಷದಿಂದ ಉಂಟಾದ “ಅಗಾಧವಾದ ಮಾನವ ಸಂಕಟ” ಮತ್ತು “ಜಾಗತಿಕ ಆರ್ಥಿಕತೆಯಲ್ಲಿ ಈಗಾಗಲೇ ಇರುವ ಸಮಸ್ಯೆಗಳ ಉಲ್ಬಣ” ದಂತಹ ವಿಚಾರಗಳನ್ನು ಬರೆಯದಂತೆ ಚೀನಾ ಮತ್ತು ರಷ್ಯಾಗಳು ತಡೆದಿದ್ದವು. ಇದರ ಪರಿಣಾಮವಾಗಿ, ಯಾವುದೇ ಒಮ್ಮತದ ಹೇಳಿಕೆಗಳನ್ನು ನೀಡಲು ಸಾಧ್ಯವಾಗಿಲ್ಲ. ಕೇವಲ ಅಧ್ಯಕ್ಷೀಯ ಹೇಳಿಕೆ ಮಾತ್ರವೇ ಬಿಡುಗಡೆಗೊಂಡಿತ್ತು.

ಕಪ್ಪು ಸಮುದ್ರದ ಬಂದರಿನ ಮೂಲಕ ಆಹಾರ ಧಾನ್ಯಗಳ ಸಾಗಾಣಿಕೆಗೆ ‘ಬ್ಲ್ಯಾಕ್ ಸೀ ಗ್ರೇನ್ ಇನಿಷಿಯೇಟಿವ್’ ಎಂಬ ಒಪ್ಪಂದ ಜಗತ್ತಿನಾದ್ಯಂತ ಕಾಳಜಿಯ ಅಂಶವಾಗಿದೆ. ಅದರಲ್ಲೂ, ಉಕ್ರೇನ್ ಮತ್ತು ರಷ್ಯಾಗಳಿಂದ ಆಹಾರ ಧಾನ್ಯ ಮತ್ತು ರಸಗೊಬ್ಬರಗಳ ಪೂರೈಕೆಯ ಮೇಲೆ ಅವಲಂಬಿತವಾಗಿರುವ ರಾಷ್ಟ್ರಗಳಿಗೆ ಇದು ಕಳವಳಕಾರಿಯಾಗಿದೆ. ಈ ಒಪ್ಪಂದವನ್ನು ವಿಶ್ವಸಂಸ್ಥೆಯ ಮಧ್ಯಪ್ರವೇಶದಿಂದ ಕೈಗೊಳ್ಳಲಾಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಡುವೆಯೂ ಕಪ್ಪು ಸಮುದ್ರದಲ್ಲಿರುವ ಉಕ್ರೇನಿನ ಮೂರು ಬಂದರುಗಳಿಂದ ಜಗತ್ತಿನ ಇತರ ಭಾಗಗಳಿಗೆ ಧಾನ್ಯಗಳು ಮತ್ತು ಇತರ ಆಹಾರ ವಸ್ತುಗಳ ಸಾಗಾಣಿಕೆ ನಡೆಸಲು ಅವಕಾಶ ಕಲ್ಪಿಸಿತ್ತು. ಈ ಒಪ್ಪಂದದ ಕಾರಣದಿಂದ, ಪಾಶ್ಚಾತ್ಯ ನಿರ್ಬಂಧಗಳ ನಡುವೆಯೂ ರಷ್ಯನ್ ಆಹಾರ ಮತ್ತು ರಸಗೊಬ್ಬರಗಳ ಪೂರೈಕೆಗೆ ಅವಕಾಶ ಕಲ್ಪಿಸಿತ್ತು. ಈ ಒಪ್ಪಂದ ಜಾಗತಿಕ ಆಹಾರ ಬೆಲೆಯನ್ನು ಸ್ಥಿರಗೊಳಿಸಿ, ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರ ಕ್ಷಾಮ ತಲೆದೋರದಂತೆ ತಡೆಯುವ ಉದ್ದೇಶ ಹೊಂದಿತ್ತು.

ಆದರೆ, ಈ ಒಪ್ಪಂದವನ್ನು ಮೂರನೇ ಬಾರಿಗೆ ಮರು ನವೀಕರಿಸಲಾಗಿಲ್ಲ. ಒಪ್ಪಂದ ಜುಲೈ 17, 2023ರಂದು ಕೊನೆಗೊಂಡಿದೆ. ಅಂದರೆ, ಉಕ್ರೇನ್ ಮತ್ತು ರಷ್ಯಾಗಳಿಂದ ಆಹಾರ ಧಾನ್ಯಗಳ ಪೂರೈಕೆ ಸ್ಥಗಿತಗೊಂಡಿದ್ದು, ಜಾಗತಿಕ ಆಹಾರ ಪೂರೈಕೆಯಲ್ಲಿ ಭಾರೀ ಕಂದಕ ಸೃಷ್ಟಿಸಿದೆ. ಇದರ ಪರಿಣಾಮವಾಗಿ, ತಮ್ಮ ಆಹಾರಕ್ಕೆ ಮತ್ತು ಜೀವನೋಪಾಯಕ್ಕಾಗಿ ಇದರ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಜನರ ಜೀವನ ದುರ್ಬರವಾಗಲಿದೆ. ವಿಶ್ವಸಂಸ್ಥೆ ಒಪ್ಪಂದದ ನವೀಕರಣಕ್ಕಾಗಿ ಮಾತುಕತೆ ನಡೆಸುವಂತೆ ಆಗ್ರಹಿಸಿದ್ದು, ಈ ಮಾನವ ಸಂಕಷ್ಟಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದೆ.

ಇದನ್ನೂ ಓದಿ: ಜಿ20 ಶೃಂಗಸಭೆಗೆ ಭಾರತ ಸನ್ನದ್ಧ: ಪ್ರಮುಖ ವಿಚಾರಗಳು, ರಾಜತಾಂತ್ರಿಕ ಸವಾಲುಗಳೇನು?

ಈ ಬಾರಿಯ ಶೃಂಗಸಭೆಯಲ್ಲಿ ಭಾರತ ಜಿ20 ಸದಸ್ಯರಿಗೆ ಒಮ್ಮತದ ಹೇಳಿಕೆ ನೀಡುವಂತೆ ಮನವೊಲಿಸುವುದು ಕಷ್ಟಕರವಾಗಿ ಕಂಡುಬರುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಉಕ್ರೇನ್ ಪರಿಸ್ಥಿತಿಯ ಕಾರಣದಿಂದ ತಾನು ಜಿ20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ. ತನ್ನ ಬದಲಿಗೆ ರಷ್ಯಾದ ವಿದೇಶಾಂಗ ಸಚಿವ ಲಾವ್‌ರೋವ್ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಭಾರತ ಈಗಲೂ ರಷ್ಯಾದ ತೈಲ, ಕಲ್ಲಿದ್ದಲು, ಹಾಗೂ ಆಯುಧಗಳನ್ನು ಖರೀದಿಸುತ್ತಿದ್ದು, ಚೀನಾ ಮತ್ತು ರಷ್ಯಾಗಳು ಆತ್ಮೀಯವಾಗುತ್ತಿರುವ ಕುರಿತು ಕಳವಳ ಹೊಂದಿರುವ ಕಾರಣ ಮೋದಿಯವರು ಈ ಯುದ್ಧದ ಕುರಿತು ಮಾತನಾಡುವ ಸಾಧ್ಯತೆಗಳಿಲ್ಲ. ಭಾರತ ಯಾವುದೇ ಜಿ20 ಅಧಿಕೃತ ಹೇಳಿಕೆಯಲ್ಲಿ ಯುದ್ಧ ಎಂಬ ಪದ ಬಳಕೆ ಮಾಡದಿರಲು ಬಯಸುತ್ತದೆ.

ಫ್ರಾನ್ಸ್ ಈಗಾಗಲೇ 2022ರ ಬಾಲಿ ಶೃಂಗಸಭೆಯ ಜಂಟಿ ಹೇಳಿಕೆಯಂತೆ ಈ ಬಾರಿಯ ಜಂಟಿ ಹೇಳಿಕೆಯೂ ರಷ್ಯಾದ ಉಕ್ರೇನ್ ಆಕ್ರಮಣವನ್ನು ಕಟುವಾಗಿ ಖಂಡಿಸದಿದ್ದರೆ ತಾನು ಹೇಳಿಕೆಗೆ ಸಹಿ ಹಾಕುವುದಿಲ್ಲ ಎಂದು ಬಹಿರಂಗವಾಗಿ ಹೇಳಿದೆ. ಅಮೆರಿಕಾ ಸಹ ಭಾರತ ಏನಾದರೂ ರಷ್ಯಾವನ್ನು ಭಿನ್ನವಾಗಿ ನಡೆಸಿಕೊಳ್ಳಲಿದೆಯೇ ಎಂದು ಗಮನಿಸಲಿದೆ. ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿಯವರನ್ನು ಅಮೆರಿಕಾದಲ್ಲಿ ಭವ್ಯವಾಗಿ ಸ್ವಾಗತಿಸಿದ್ದರಿಂದ, ಅಮೆರಿಕಾ ಸಹ ಭಾರತದಿಂದ ಅಂತಹದ್ದೇ ಪ್ರತ್ಯುತ್ತರವನ್ನು ನಿರೀಕ್ಷಿಸುತ್ತಿದೆ.

ಇದನ್ನೂ ಓದಿ: ಗ್ಲೋಬಲ್ ಸೌತ್: ಭಾರತ ಕೇಂದ್ರಿತ ದೃಷ್ಟಿಯೊಡನೆ ಸವಾಲುಗಳು, ಅವಕಾಶಗಳು ಮತ್ತು ಬದಲಾಗುತ್ತಿರುವ ಆಯಾಮಗಳು

ಈ ಸಂಕೀರ್ಣತೆಯನ್ನು ಇನ್ನಷ್ಟು ಹೆಚ್ಚಿಸುವಂತೆ, ಚೀನಾ ತನ್ನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ವರ್ಷದ ಜಿ20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ, ಅವರ ಬದಲಿಗೆ ಪ್ರೀಮಿಯರ್ ಲಿ ಕಿಯಾಂಗ್ ಭಾಗಿಯಾಗಲಿದ್ದಾರೆ ಎಂದಿದೆ. ಆಗಸ್ಟ್ ತಿಂಗಳಲ್ಲಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತುಕತೆ ನಡೆಸಿದ್ದರಿಂದ ಈ ಬಾರಿ ಮೋದಿ ಮತ್ತು ಕ್ಸಿ ರಾಜತಾಂತ್ರಿಕ ಮಾತುಕತೆ ನಡೆಸುವ ನಿರೀಕ್ಷೆಗಳಿದ್ದವು. ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ, ಎರಡು ರಾಷ್ಟ್ರಗಳ ನಡುವೆ ಗಡಿ ವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇನ್ನೊಂದು ಮಾತುಕತೆ ನಡೆಯುವ ನಿರೀಕ್ಷೆಗಳಿದ್ದವು.

ಜಿ20 ನಾಯಕರ ಶೃಂಗಸಭೆ ಭಾರತದ ಪಾಲಿಗೆ ಸವಾಲೂ ಹೌದು, ಅವಕಾಶವೂ ಹೌದು. ಭಾರತ ತನ್ನ ಪ್ರಸ್ತುತ ಮೈತ್ರಿಕೂಟಗಳನ್ನು ಕೌಶಲಪೂರ್ಣವಾಗಿ ನಿರ್ವಹಿಸುತ್ತಾ, ಗ್ಲೋಬಲ್ ನಾರ್ತ್ ಮತ್ತು ಗ್ಲೋಬಲ್ ಸೌತ್ ಎಂಬ ಎರಡು ಧ್ರುವಗಳ ನಡುವಿನ ಮಧ್ಯವರ್ತಿಯ ಪಾತ್ರವನ್ನು ಭಾರತ ನಿಭಾಯಿಸಬೇಕು. ಒಂದು ವೇಳೆ ಮೋದಿಯವರು ಏನಾದರೂ ಇದರಲ್ಲಿ ಯಶಸ್ವಿಯಾದರೆ, ಭಾರತದ ಸ್ಥಾನವನ್ನು ಇನ್ನಷ್ಟು ಗಟ್ಟಿಯಾಗಿಸಬಹುದು. ಆದರೆ ಏನಾದರೂ ವೈಫಲ್ಯ ಅನುಭವಿಸಿದರೆ, ಭಾರತದ ಸ್ಥಾನವನ್ನು ತಗ್ಗಿಸಬಹುದು. ಯಾಕೆಂದರೆ ಸಂಘರ್ಷದ ಸಂದರ್ಭದಲ್ಲಿ ಒಮ್ಮತ ಸಾಧಿಸುವುದು ಸವಾಲಾಗಿದ್ದು, ಅದನ್ನು ಸಾಧಿಸಲು ಸಮರ್ಥ ನಾಯಕತ್ವದ ಅಗತ್ಯವಿದೆ.

ಗಿರೀಶ್ ಲಿಂಗಣ್ಣ

(ಲೇಖಕರು; ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ