ಭಾರತದ ಪ್ರಯತ್ನ ಪ್ರಾಯೋಗಿಕವಾಗಿದ್ದು, ಸಾಗರದ ತಳದಲ್ಲಿ ಲಭ್ಯವಿರುವ ಬೆಲೆಬಾಳುವ ಖನಿಜಗಳನ್ನು ಅನ್ವೇಷಣೆ ನಡೆಸಿ, ಸಾಗರದ ಜೀವ ವೈವಿಧ್ಯತೆಯನ್ನು ಅಧ್ಯಯನ ನಡೆಸುವ ಗುರಿ ಹೊಂದಿದೆ. ಭಾರತ 6,000 ಮೀಟರ್‌ಗಳಿಗಿಂತಲೂ ಆಳದಲ್ಲಿರದ, ಆದರೆ ಆರ್ಥಿಕವಾಗಿ ನೆರವಾಗಬಲ್ಲ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆ. ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳುವಾಗ ಅವರು ಅತ್ಯಂತ ಜೋರಾಗಿ ಸದ್ದು ಮಾಡುವ, ಶಕ್ತಿಶಾಲಿ ರಾಕೆಟ್ ಇಂಜಿನ್‌ಗಳನ್ನು ಬಳಸುವ, ಭೂಮಿಯ ಗುರುತ್ವಾಕರ್ಷಣಾ ಬಲವನ್ನು ಮೀರಲು ಪ್ರತಿ ಗಂಟೆಗೆ 40,000 ಕಿಲೋಮೀಟರ್ ವೇಗದಲ್ಲಿ ಸಾಗುವ ಬಾಹ್ಯಾಕಾಶ ನೌಕೆಯಲ್ಲಿ ಕುಳಿತು ಸಾಗಬೇಕಾಗುತ್ತದೆ.
ಆದರೆ, ಜಲಾಂತರ್ಗಾಮಿಯ ಮೂಲಕ ಸಾಗರದಾಳಕ್ಕೆ ತೆರಳುವುದು ಒಂದು ಆರಾಮದಾಯಕ ಪ್ರಯಾಣವಾಗಿದೆ. ಈ ಜಲಾಂತರ್ಗಾಮಿ ವಿಶೇಷ ಟ್ಯಾಂಕ್‌ಗಳನ್ನು ಬಳಸಿ, ಸಮುದ್ರದ ನೀರನ್ನು ಎಳೆದುಕೊಳ್ಳುತ್ತದೆ. ಆ ಮೂಲಕ ಅದರ ಭಾರ ಇನ್ನಷ್ಟು ಹೆಚ್ಚಿ, ಅದು ನೀರಿನಾಳಕ್ಕೆ ಇಳಿಯತೊಡಗುತ್ತದೆ. ಜಲಾಂತರ್ಗಾಮಿಯ ಚಲನೆಗಳನ್ನು ನಿಯಂತ್ರಿಸಲು, ನಿಖರ ಸಂಚರಣೆ (ನ್ಯಾವಿಗೇಶನ್) ನಡೆಸಲು ಸಹ ಟ್ಯಾಂಕ್‌ಗಳನ್ನು ಬಳಸಲಾಗುತ್ತದೆ.
ಸಮುದ್ರಯಾನ ಯೋಜನೆಯ ವಿಭಾಗಗಳ ಜವಾಬ್ದಾರಿ ವಹಿಸಿಕೊಂಡಿರುವ ವಿಜ್ಞಾನಿಯೊಬ್ಬರ ಪ್ರಕಾರ, ಸಮುದ್ರದ ಮೇಲ್ಮೈಯಲ್ಲಿ ಅಲೆಗಳಿಂದ ಉಂಟಾಗುವ ಕಠಿಣತೆಯನ್ನು ಹೊರತುಪಡಿಸಿದರೆ, ಸಂಪೂರ್ಣ ಆಳ ಸಮುದ್ರ ಯಾನ ಸುಲಲಿತವಾಗಿರುತ್ತದೆ. ಈ ಯೋಜನೆಯಲ್ಲಿ ಮೂವರು ಅನ್ವೇಷಕರು ಟೈಟಾನಿಯಂ ಕ್ಯಾಬಿನ್ ಒಳಗೆ ಕುಳಿತು ಹಲವು ಬಾರಿ ಸಾಗರದಾಳಕ್ಕೆ ತೆರಳಲಿದ್ದಾರೆ. ಪ್ರತಿಯೊಂದು ಪ್ರಯಾಣವೂ ಬಹುತೇಕ 12 ಗಂಟೆಗಳದ್ದಾಗಿರಲಿದೆ. ಅವರು ಕನ್ಯಾಕುಮಾರಿಯಿಂದ 1,500 ಕಿಲೋಮೀಟರ್ ದೂರದಲ್ಲಿ ಈ ಅನ್ವೇಷಣೆ ನಡೆಸಲಿದ್ದಾರೆ. ಸಾಗರ ತಳಕ್ಕೆ ಇಳಿಯುವ ಪ್ರಕ್ರಿಯೆ ಮತ್ತು ಮೇಲೇರುವಿಕೆಗಳು ಎಂಟು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಸಮುದ್ರದಾಳದ ಅನ್ವೇಷಣೆ, ಸಮೀಕ್ಷೆ, ಹಾಗೂ ವೈಜ್ಞಾನಿಕ ಕಾರ್ಯಗಳನ್ನು ಉಳಿದ ನಾಲ್ಕು ಗಂಟೆಗಳಲ್ಲಿ ನಡೆಸಲಾಗುತ್ತದೆ.
ಜಲಾಂತರ್ಗಾಮಿಯ ಒಳಭಾಗದ ತಾಪಮಾನ ಕಡಿಮೆಯಾಗಬಹುದಾದರೂ, ಸಾಮಾನ್ಯವಾದ ಬೆಚ್ಚಗಿನ ಬಟ್ಟೆಗಳೇ ಸಾಕಾಗುತ್ತವೆ. ಸಮುದ್ರದಾಳಕ್ಕೆ ಇಳಿಯುವಾಗಲೂ, ಮೇಲೆ ಬರುವಾಗಲೂ ಆಹಾರ ಸೇವಿಸಬಹುದು. ಆದರೆ, ಅನ್ವೇಷಕರು ಜಲಾಂತರ್ಗಾಮಿಯಲ್ಲಿ 2.1 ಮೀಟರಿನ ಗೋಳದೊಳಗೆ ಇನ್ನಿಬ್ಬರು ವ್ಯಕ್ತಿಗಳೊಡನೆ (ಒಟ್ಟು ಮೂವರು ಅನ್ವೇಷಕರು) ಸಾಗಬೇಕಾಗುವುದರಿಂದ, ಸ್ವಲ್ಪ ಸ್ಥಳಾವಕಾಶ ಕಡಿಮೆ ಇರುವಂತೆ ಅನಿಸಬಹುದು. ಸಮುದ್ರದ ಆಳದಲ್ಲಿ 6,000 ಮೀಟರ್ ಕೆಳಗೆ ಸಾಗಿದಾಗ, ಅಲ್ಲಿ ನೀರಿನ ಭಾರ ಸಮುದ್ರದ ಮೇಲ್ಮೈಗಿಂತ 600 ಪಟ್ಟು ಹೆಚ್ಚಾಗಿರುತ್ತದೆ. ಈ ಕಾರಣದಿಂದಲೇ ಸಬ್‌ಮರ್ಸಿಬಲ್‌ನ ಒತ್ತಡ ಹೊಂದಿರುವ ಹಲ್ ಅತ್ಯಂತ ಮುಖ್ಯವಾಗುತ್ತದೆ.
ಇದನ್ನೂ ಓದಿ: ಭಾರತದ ಮಹತ್ವಾಕಾಂಕ್ಷಿ ಸಮುದ್ರಯಾನ: ಆಳ ಸಮುದ್ರದ ರಹಸ್ಯಗಳ ಅನಾವರಣ
ಪ್ರಸ್ತುತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶನ್ ಟೆಕ್ನಾಲಜಿ (ಎನ್ಐಒಟಿ) ವಿವಿಧ ಮಾದರಿಯ ಉಕ್ಕಿನ ಹಲ್ ಮಾದರಿಗಳನ್ನು ಸಿದ್ಧಪಡಿಸಿದೆ. ಅದರಲ್ಲಿ ಅನ್ವೇಷಕರು ಒಬ್ಬೊಬ್ಬರಾಗಿ ಪ್ರವೇಶಿಸಿ, ವಾಹನದ ನಿಯಂತ್ರಣ ಸಾಧಿಸಲು ಅವಶ್ಯಕವಾದ ಈ ಉಪಕರಣವನ್ನು ಪರೀಕ್ಷಿಸಬಹುದು. ಆದರೆ, ಉಕ್ಕು ಸಾಕಷ್ಟು ಭಾರವಾಗಿರುತ್ತದೆ. ಅದು ಸಮುದ್ರದ ನೀರಿನಲ್ಲಿ ತುಕ್ಕು ಹಿಡಿಯುವ ಸಾಧ್ಯತೆಗಳಿವೆ. ಆದ್ದರಿಂದ ದೀರ್ಘಾವಧಿಯಲ್ಲಿ ಉಕ್ಕಿನ ಹಲ್ ಸೂಕ್ತ ಆಯ್ಕೆಯಲ್ಲ. ಆದ್ದರಿಂದಲೇ ಜಗತ್ತಿನಾದ್ಯಂತ ವಿವಿಧ ಸಬ್‌ಮರ್ಸಿಬಲ್‌ಗಳು ಇದಕ್ಕಿಂತ ಉತ್ತಮ ಆಯ್ಕೆಯಾದ ಟೈಟಾನಿಯಂ ಅನ್ನು ಬಳಸುತ್ತವೆ.
ಆದರೆ ಭಾರತದಲ್ಲಿ, ಈ ರೀತಿಯ ಟೈಟಾನಿಯಂ ಹಲ್ ನಿರ್ಮಿಸುವ ಯಾವುದೇ ಕಂಪನಿಗಳಿರಲಿಲ್ಲ. ಆದ್ದರಿಂದ ಎನ್ಐಒಟಿ ಇಸ್ರೋದ ಸಹಾಯ ಪಡೆದುಕೊಂಡಿತು. ಜಲಾಂತರ್ಗಾಮಿಯ ಹೊರಭಾಗದ ಚಿಪ್ಪನ್ನು ನಿರ್ಮಿಸಲು, ಗಟ್ಟಿಯಾದ ಟೈಟಾನಿಯಂನ ಎರಡು ಅರ್ಧಗಳನ್ನು ಜೋಡಿಸಲಾಗುತ್ತದೆ. ಈ ಹೊರಚಿಪ್ಪು ಮಾತ್ರವೇ ಸಬ್‌ಮರ್ಸಿಬಲ್ ಒಳಗಿರುವ ಮಾನವರನ್ನು ಸಮುದ್ರದ ಅಪಾರ ಒತ್ತಡದಿಂದ ರಕ್ಷಿಸುತ್ತದೆ. ಆದರೆ, ಇದು 80 ಮಿಲಿಮೀಟರ್‌ಗಿಂತ ಹೆಚ್ಚು ದಪ್ಪವಾಗಿರುವಂತಿಲ್ಲ. ಹಾಗಿದ್ದರೆ ಮಾತ್ರ ಜಲಾಂತರ್ಗಾಮಿ ಹಗುರವಾಗಿದ್ದು, ಸಿಬ್ಬಂದಿಗಳಿಗೆ ಸಾಕಷ್ಟು ಸ್ಥಳಾವಕಾಶ ಲಭಿಸುತ್ತದೆ.
ಎನ್ಐಒಟಿ ಈ ವರ್ಷ ಟೈಟಾನಿಯಂ ಗೋಳದಲ್ಲಿ 500 ಮೀಟರ್‌ಗಳಷ್ಟು ಆಳಕ್ಕೆ ಜಿಗಿಯುವ ಪರೀಕ್ಷೆ ನಡೆಸುವ ಉದ್ದೇಶ ಹೊಂದಿದೆ. ಬಳಿಕ ಅವರು ಮುಖ್ಯ ಯೋಜನೆಗೂ ಮೊದಲು ಇನ್ನಷ್ಟು ಆಳಕ್ಕೆ ಇಳಿಯುವ ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ. ಈ ಯೋಜನೆಯ ಭಾಗವಾಗಿರುವ ವಿಜ್ಞಾನಿಯೊಬ್ಬರು, ಜಲಾಂತರ್ಗಾಮಿ 60% ದೇಶೀಯ ನಿರ್ಮಾಣವನ್ನು ಹೊಂದಿದೆ ಎಂದಿದ್ದಾರೆ. ಇದರಲ್ಲಿ ಜಲಾಂತರ್ಗಾಮಿಯ ಹೊರಮೈ ರಚನೆ, ಬ್ಯಾಲಸ್ಟ್‌ಗಳು (ಇದೊಂದು ತೂಕದ ಉತ್ಪನ್ನವಾಗಿದ್ದ, ವಾಹನ ಅಥವಾ ಆಕೃತಿಗೆ ಸ್ಥಿರತೆಯನ್ನು ಒದಗಿಸುತ್ತದೆ), ಹಾಗೂ ಒತ್ತಡವನ್ನು ಹೊರಗಿಡುವ ಗಟ್ಟಿಯಾದ ಕೇಸಿಂಗ್‌ಗಳು ಸೇರಿವೆ. ಆದರೆ ಕ್ಯಾಮರಾಗಳು, ಸೆನ್ಸರ್‌ಗಳು ಹಾಗೂ ಸಂವಹನ ವ್ಯವಸ್ಥೆಗಳನ್ನು ವಿದೇಶಗಳಿಂದ ಖರೀದಿಸಲಾಗಿದೆ. ಜಲಾಂತರ್ಗಾಮಿಯ ಸ್ಥಾನ ಮತ್ತು ಚಲನೆಯನ್ನು ನಿಯಂತ್ರಿಸಲು ಬಳಸುವ ಸಾಫ್ಟ್‌ವೇರ್ ಸಹ ಎನ್ಐಒಟಿ ಅಭಿವೃದ್ಧಿ ಪಡಿಸುತ್ತಿದೆ ಎಂದು ವಿಜ್ಞಾನಿ ಮಾಹಿತಿ ನೀಡಿದ್ದಾರೆ.
ಎನ್ಐಒಟಿ ಜಪಾನ್, ರಷ್ಯಾ ಹಾಗೂ ಫ್ರಾನ್ಸ್‌ನಂತಹ ಮಾನವ ಸಹಿತ ಆಳ ಸಮುದ್ರ ಸಬ್‌ಮರ್ಸಿಬಲ್ ತಂಡಗಳ ಜೊತೆ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದೆ. ಆ ಮೂಲಕ ಎನ್ಐಒಟಿ ಸಮುದ್ರದಾಳಕ್ಕೆ ಇಳಿದು, ಯಶಸ್ವಿಯಾಗಿ, ಸುರಕ್ಷಿತವಾಗಿ ಮೇಲಕ್ಕೆ ಮರಳಲು ಬೇಕಾದ ಜ್ಞಾನವನ್ನು ಸಂಪಾದಿಸಿದೆ. ಮತ್ಸ್ಯದ ಸಂಪೂರ್ಣ ಪ್ರಯಾಣವನ್ನು ಸಬ್‌ಮರ್ಸಿಬಲ್ ಸುತ್ತಲೂ ಅಳವಡಿಸಿರುವ ಕ್ಯಾಮರಾಗಳು ಚಿತ್ರೀಕರಿಸಲಿವೆ. ಅದರೊಡನೆ, ಮತ್ಸ್ಯದಲ್ಲಿ ಪ್ರಯಾಣಿಸುವವರೂ ಅದರಲ್ಲಿರುವ ಗಾಜಿನ ಕಿಟಕಿಯ ಮೂಲಕ ತಾವು ನೋಡುವುದನ್ನು ಚಿತ್ರೀಕರಿಸಬಹುದು.
ಮತ್ಸ್ಯದ ಒಳಕೋಣೆಯಲ್ಲಿ ಆಮ್ಲಜನಕದ ವ್ಯವಸ್ಥೆಯಿದ್ದು, ತುರ್ತು ಪರಿಸ್ಥಿತಿ ಎದುರಾದರೆ 96 ಗಂಟೆಗಳ ತನಕ ಸಿಬ್ಬಂದಿಗಳಿಗೆ ಆಮ್ಲಜನಕ ಒದಗಿಸಬಲ್ಲದು. ತುರ್ತು ಸಂದರ್ಭ ಎದುರಾದರೆ, 25 ಟನ್ ತೂಕದ ಮತ್ಸ್ಯವನ್ನು ನೀರಿನಿಂದ ಹೊರತರುವ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಬಾಹ್ಯಾಕಾಶ ನೌಕೆಗಳು ಅತ್ಯಂತ ದಹನಕಾರಿ ಇಂಧನ ಬಳಸುವುದರಿಂದ ಅವುಗಳು ಸ್ಫೋಟಗೊಳ್ಳುವ ಅಪಾಯಗಳಿರುತ್ತವೆ. ಆದರೆ ಮತ್ಸ್ಯ ಸಂಪೂರ್ಣವಾಗಿ ಗುರುತ್ವಾಕರ್ಷಣೆ, ನೀರು ಮತ್ತು ವಿದ್ಯುತ್‌ಗಾಗಿ ಲಿಥಿಯಂ ಅಯಾನ್ ಬ್ಯಾಟರಿಗಳ ಮೇಲೆ ಅವಲಂಬಿತವಾಗಿದೆ.
ಮತ್ಸ್ಯ ಸಾಕಷ್ಟು ಆಳಕ್ಕೆ ತೆರಳುವುದರಿಂದ ಹಾಗೂ ಸಂಕೇತಗಳಿಗೆ ನೀರು ಪ್ರತಿರೋಧ ಒಡ್ಡುವುದರಿಂದ, ಉಡಾವಣಾ ಹಡಗು ಹಾಗೂ ಸಬ್‌ಮರ್ಸಿಬಲ್ ನಡುವಿನ ಸಂವಹನ ವ್ಯವಸ್ಥೆ ಅತ್ಯಂತ ಸರಳವಾಗಿರುತ್ತದೆ. ಉದಾಹರಣೆಗೆ, ಸಾಗರದ ತಳದಿಂದ ಮೇಲಕ್ಕೆ ಸಂದೇಶ ಕಳುಹಿಸಲು 20 ಸೆಕೆಂಡುಗಳ ತಡವಿರುವುದರಿಂದ, ನೇರ ಪ್ರಸಾರ ನಡೆಸಲು ಸಾಧ್ಯವಾಗುವುದಿಲ್ಲ.
ಭಾರತ ತನ್ನ ಶಕ್ತಿ ಸಂಪನ್ಮೂಲಗಳ ಅವಶ್ಯಕತೆಯನ್ನು ಪೂರೈಸಲು ಸಾಗರ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಬಯಸುತ್ತಿದೆ. ಇಂಟರ್ನ್ಯಾಷನಲ್ ಸೀಬೆಡ್ ಅಥಾರಿಟಿ, ಮಧ್ಯ ಹಿಂದೂ ಮಹಾಸಾಗರದಲ್ಲಿ ವಿಶಾಲ ಪ್ರದೇಶವನ್ನು ಗಣಿಗಾರಿಕಾ ಅನ್ವೇಷಣೆಗಳಿಗೆ ಮೀಸಲಾಗಿಟ್ಟಿದೆ. ಇದು ಬಹುತೇಕ 75,000 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಈ ಪ್ರದೇಶದಲ್ಲಿ ಸಾಗರ ತಳದಲ್ಲಿರುವ ಪಾಲಿಮೆಟಲಿಕ್ ನಾಡ್ಯುಲ್‌ಗಳನ್ನು ಹುಡುಕುವುದು ಭಾರತದ ಗುರಿಯಾಗಿದೆ. ಆರಂಭಿಕ ಅಂದಾಜುಗಳ ಪ್ರಕಾರ, ಸಾಗರದಲ್ಲಿ 380 ಮಿಲಿಯನ್ ಟನ್‌ಗಳಷ್ಟು ಈ ನಾಡ್ಯುಲ್‌ಗಳಿವೆ. ಇವು ಬೆಲೆಬಾಳುವ ಲೋಹಗಳಾದ ತಾಮ್ರ, ನಿಕ್ಕೆಲ್, ಕೋಬಾಲ್ಟ್ ಹಾಗೂ ಮ್ಯಾಂಗನೀಸ್‌ಗಳನ್ನು ಒಳಗೊಂಡಿದೆ. ಪಾಲಿಮೆಟಾಲಿಕ್ ನಾಡ್ಯುಲ್‌ಗಳು ಸಾಕಷ್ಟು ಸಣ್ಣ, ದುಂಡನೆಯ ಮುದ್ದೆಗಳಾಗಿದ್ದು, ಸಾಗರ ತಳದಲ್ಲಿ ಕಾಣಸಿಗುತ್ತವೆ. ಇವುಗಳು ಬೆಲೆಬಾಳುವ ಲೋಹಗಳನ್ನು ಒಳಗೊಂಡಿರುತ್ತವೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ