ಭಾರತದ ಮಹತ್ವಾಕಾಂಕ್ಷಿ ಸಮುದ್ರಯಾನ: ಆಳ ಸಮುದ್ರದ ರಹಸ್ಯಗಳ ಅನಾವರಣ

ಚಂದ್ರಯಾನ-3ರ ಯಶಸ್ಸಿನ ಬಳಿಕ, ಭಾರತೀಯ ವಿಜ್ಞಾನಿಗಳು ಒಂದು ವಿನೂತನ ಪ್ರಯತ್ನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಹತ್ತರ 'ಸಮುದ್ರಯಾನ ಯೋಜನೆ' ದೇಶೀಯ ನಿರ್ಮಾಣದ ಸಬ್‌ಮರ್ಸಿಬಲ್ ಅನ್ನು ಸಮುದ್ರದ ಮೇಲ್ಮೈಯಿಂದ 6,000 ಮೀಟರ್ ಕೆಳಗಡೆ ಇಳಿಸುವ ಉದ್ದೇಶ ಹೊಂದಿದ್ದು, ಭಾರತದ ಮೊತ್ತ ಮೊದಲ ಆಳ ಸಮುದ್ರ ಅನ್ವೇಷಣೆಗೆ ಮೂವರು ಮಾನವರನ್ನೂ ಇಳಿಸುವ ಗುರಿ ಹೊಂದಿದೆ.

ಭಾರತದ ಮಹತ್ವಾಕಾಂಕ್ಷಿ ಸಮುದ್ರಯಾನ: ಆಳ ಸಮುದ್ರದ ರಹಸ್ಯಗಳ ಅನಾವರಣ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 18, 2023 | 10:23 AM

ಭಾರತದ ಮಹತ್ವದ ಚಂದ್ರ ಅನ್ವೇಷಣಾ ಯೋಜನೆ ಚಂದ್ರಯಾನ-3ರ (Chandrayaan-3) ಯಶಸ್ಸಿನ ಬಳಿಕ, ಭಾರತೀಯ ವಿಜ್ಞಾನಿಗಳು ಒಂದು ವಿನೂತನ ಪ್ರಯತ್ನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಹತ್ತರ ‘ಸಮುದ್ರಯಾನ ಯೋಜನೆ’ (Voyage plan) ದೇಶೀಯ ನಿರ್ಮಾಣದ ಸಬ್‌ಮರ್ಸಿಬಲ್ ಅನ್ನು ಸಮುದ್ರದ ಮೇಲ್ಮೈಯಿಂದ 6,000 ಮೀಟರ್ ಕೆಳಗಡೆ ಇಳಿಸುವ ಉದ್ದೇಶ ಹೊಂದಿದ್ದು, ಭಾರತದ ಮೊತ್ತ ಮೊದಲ ಆಳ ಸಮುದ್ರ ಅನ್ವೇಷಣೆಗೆ ಮೂವರು ಮಾನವರನ್ನೂ ಇಳಿಸುವ ಗುರಿ ಹೊಂದಿದೆ. ಆಳ ಸಮುದ್ರದ ಅನ್ವೇಷಣೆ ನಡೆಸುವುದು ಅತ್ಯಂತ ಸವಾಲಿನ ಕಾರ್ಯವಾಗಿದೆ. 200 ಮೀಟರ್‌ಗಿಂತ ಆಳದಲ್ಲಿ, ಸಮುದ್ರ ಅತ್ಯಂತ ಕತ್ತಲಾಗಿರುತ್ತದೆ, ತಣ್ಣಗಾಗಿರುತ್ತದೆ, ಮತ್ತು ಸಾಗರದಾಳದ ಒತ್ತಡ ಸಾಕಷ್ಟು ಹೆಚ್ಚಾಗುತ್ತದೆ. ಈ ಯೋಜನೆಯ ಗುರಿಗಳಲ್ಲಿ, ಸಮುದ್ರದಾಳದ ಸಂಪನ್ಮೂಲಗಳಾದ ಕೋಬಾಲ್ಟ್, ನಿಕ್ಕೆಲ್, ಹಾಗೂ ಮ್ಯಾಂಗನೀಸ್‌ಗಳನ್ನು ಅನ್ವೇಷಿಸುವುದು ಸೇರಿದೆ. ಅದರೊಡನೆ, ಈ ವಿಶಿಷ್ಟ ವಾತಾವರಣದಲ್ಲಿನ ಜೀವವೈವಿಧ್ಯವನ್ನು ಅನ್ವೇಷಿಸುವ ಗುರಿಯನ್ನೂ ಹೊಂದಿದೆ.

ಈ ಸಾಗರದಾಳದ ಅನ್ವೇಷಣಾ ಯೋಜನೆಗೆ ಕೇಂದ್ರ ಸರ್ಕಾರ 2020-2021ರಿಂದ 2025-2026ರ ತನಕ ಐದು ವರ್ಷಗಳ ಅವಧಿಗೆ ಅನುಮೋದನೆ ನೀಡಿದೆ. ಭೂ ವಿಜ್ಞಾನ ಸಚಿವಾಲಯ, 2021ರಿಂದ 2026ರ ತನಕ ನಡೆಯುವ ಎರಡು ಹಂತಗಳ ಈ ಯೋಜನೆಗೆ ಅಂದಾಜು 4,077 ಕೋಟಿ ವೆಚ್ಚ ತಗಲುವ ನಿರೀಕ್ಷೆಗಳಿವೆ ಎಂದಿದೆ. ಯೋಜನೆಗೆ ಈಗಾಗಲೇ 1,400 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಮೊತ್ತದಲ್ಲಿ, 405.92 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ 225.35 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ.

ಕೇಂದ್ರ ಸಚಿವರಾದ ಕಿರಣ್ ರಿಜಿಜು ಅವರು ‘ಮತ್ಸ್ಯ 6000’ ಎಂಬ (ಭಗವಂತ ವಿಷ್ಣುವಿನ ಮೊದಲ ಅವತಾರವಾದ ಬೃಹತ್ ಮೀನನ್ನು ಆಧರಿಸಿದೆ) ಆಳ ಸಮುದ್ರ ಅನ್ವೇಷಣಾ ಯೋಜನೆಯಾದ ‘ಸಮುದ್ರಯಾನ ಯೋಜನೆ’ಗೆ ಬಳಸುವ ವಾಹನದ ಚಿತ್ರಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ವಾಹನವನ್ನು ಚೆನ್ನೈನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒಶೀನ್ ಟೆಕ್ನಾಲಜಿ (ಎನ್ಐಒಟಿ) ಯಲ್ಲಿ, ಭೂ ವಿಜ್ಞಾನ ಸಚಿವಾಲಯದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಿರಣ್ ರಿಜಿಜು ಚೆನ್ನೈನ ಎನ್ಐಒಟಿಗೆ ಸೋಮವಾರ ಭೇಟಿ ನೀಡಿದ್ದು, ಅಲ್ಲಿ ಸಬ್‌ಮರ್ಸಿಬಲ್ ಅನ್ನು ಪರೀಕ್ಷಿಸಿ, ಭಾರತದ ಮೊದಲ ಮಾನವ ಸಹಿತ ಆಳ ಸಮುದ್ರ ಅನ್ವೇಷಣಾ ಯೋಜನೆಯ ಕುರಿತು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ (ಈ ಮೊದಲು ಟ್ವಿಟರ್) ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಕಿರಣ್ ರಿಜಿಜು ಅವರು, “ಭಾರತದ ಮುಂದಿನ ಯೋಜನೆ ‘ಸಮುದ್ರಯಾನ’. ಅದಕ್ಕಾಗಿ ವಿನ್ಯಾಸಗೊಳಿಸಿರುವ ಸಬ್‌ಮರ್ಸಿಬಲ್ ‘ಮತ್ಸ್ಯ 6000’ ಆಗಿದೆ. ಇದನ್ನು ಪ್ರಸ್ತುತ ಚೆನ್ನೈನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒಶೀನ್ ಟೆಕ್ನಾಲಜಿಯಲ್ಲಿ ನಿರ್ಮಿಸಲಾಗುತ್ತಿದೆ. ಭಾರತದ ಮೊದಲ ಮಾನವ ಸಹಿತ ಆಳ ಸಮುದ್ರ ಅನ್ವೇಷಣಾ ಯೋಜನೆಯಾದ ಸಮುದ್ರಯಾನ ಮೂವರು ಅನ್ವೇಷಕರನ್ನು ಸಮುದ್ರದಾಳಕ್ಕೆ 6 ಕಿಲೋಮೀಟರ್‌ಗಳಷ್ಟು ಕೆಳಗೆ ಕಳುಹಿಸುವ ಗುರಿಯನ್ನು ಹೊಂದಿದೆ. ಆ ಮೂಲಕ ಆಳ ಸಮುದ್ರದ ಸಂಪನ್ಮೂಲಗಳು ಹಾಗೂ ಜೀವ ವೈವಿಧ್ಯವನ್ನು ಅಧ್ಯಯನ ನಡೆಸಲು ಉದ್ದೇಶಿಸಿದೆ” ಎಂದಿದ್ದಾರೆ.

ಈ ಯೋಜನೆ ಸಮುದ್ರದ ಸಮತೋಲನಕ್ಕೆ ತೊಂದರೆ ಉಂಟುಮಾಡುವುದಿಲ್ಲ ಎಂದಿರುವ ರಿಜಿಜು, “ಆಳ ಸಮುದ್ರ ಅನ್ವೇಷಣಾ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ನೀಲಿ ಆರ್ಥಿಕತೆ ಯೋಜ‌ನೆಗೆ ಪೂರಕವಾಗಿದೆ. ನೀಲಿ ಆರ್ಥಿಕತೆ ಸಮುದ್ರದ ಸಂಪನ್ಮೂಲಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡು, ಉದ್ಯೋಗ ಸೃಷ್ಟಿ ಮಾಡಿ, ಸಮುದ್ರ ವ್ಯವಸ್ಥೆಯ ಆರೋಗ್ಯ ಕಾಪಾಡಿಕೊಂಡು, ಭಾರತದ ಆರ್ಥಿಕತೆ ಬೆಳೆಯುವಂತೆ ಮಾಡುವ ಉದ್ದೇಶ ಹೊಂದಿದೆ” ಎಂದಿದ್ದಾರೆ.

‘ನೀಲಿ ಆರ್ಥಿಕತೆ’ ಎನ್ನುವುದು ಆರ್ಥಿಕತೆಯ ಅಭಿವೃದ್ಧಿಗೆ ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆ ನಡೆಸುವುದಾಗಿದೆ. ಇದರಲ್ಲಿ ಮೀನುಗಾರಿಕೆ, ಪ್ರವಾಸೋದ್ಯಮ, ಸಾಗಾಣಿಕೆ ಮತ್ತಿತರ ಚಟುವಟಿಕೆಗಳು ಸೇರಿದ್ದು, ಸಮುದ್ರದ ವ್ಯವಸ್ಥೆಯ ಆರೋಗ್ಯ ಕಾಪಾಡಲು ನೆರವಾಗುತ್ತದೆ. ‘ಸುಸ್ಥಿರ’ ವಿಧಾನ ಎಂದರೆ, ವಾತಾವರಣಕ್ಕೆ ಹಾನಿ ಮಾಡದ ರೀತಿಯಲ್ಲಿ ದೀರ್ಘಾವಧಿಯಲ್ಲಿ ಸಂಪನ್ಮೂಲಗಳನ್ನು ಬರಿದಾಗಿಸದೆ, ಅಥವಾ ಯಾವುದೇ ಹಾನಿಯನ್ನು ಉಂಟುಮಾಡದೆ ಕಾರ್ಯಾಚರಣೆ ನಡೆಸುವುದಾಗಿದೆ.

ಬಹುತೇಕ ಎರಡು ವರ್ಷಗಳ ಅಭಿವೃದ್ಧಿಯ ಬಳಿಕ, ಮತ್ಸ್ಯ 6000 ಈಗ ಸಿದ್ಧಗೊಂಡಿದ್ದು, 2024ರ ಆರಂಭದಲ್ಲಿ ಚೆನ್ನೈ ತೀರದ ಬಂಗಾಳ ಕೊಲ್ಲಿಯಲ್ಲಿ ಪರೀಕ್ಷಾ ಪ್ರಯೋಗಕ್ಕೆ ತಯಾರಿ ನಡೆಸುತ್ತಿದೆ. ಈ ಯೋಜನೆಯ ಭಾಗವಾಗಿ, ಓಶನ್ ಮಿನರಲ್ ಎಕ್ಸ್‌ಪ್ಲೋರರ್ ಎಂಬ (OME 6000) ಹೆಸರಿನ ಒಂದು ಡೀಪ್ ವಾಟರ್ ಅಟಾನಮಸ್ ಅಂಡರ್ ವಾಟರ್ ವೆಹಿಕಲ್ (ಎಯುವಿ) ಅನ್ನು ಬಳಸಲಾಗುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ.

ಕೇಂದ್ರ ಭೂ ವಿಜ್ಞಾನ ಸಚಿವಾಲಯದ ರಾಜ್ಯ ಸಚಿವರಾದ ಜಿತೇಂದ್ರ ಸಿಂಗ್ ಅವರು ‘ಮತ್ಸ್ಯ 6000’ ಆಳ ಸಮುದ್ರ ವಾಹನ ಸಾಮಾನ್ಯ ಪರಿಸ್ಥಿತಿಯಲ್ಲಿ 12 ಗಂಟೆಗಳ ಕಾಲ ಕಾರ್ಯಾಚರಿಸಬಲ್ಲದಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಅದು ತನ್ನ ಕಾರ್ಯಾಚರಣಾ ಅವಧಿಯನ್ನು 96 ಗಂಟೆಗಳಷ್ಟು ವಿಸ್ತರಿಸಬಲ್ಲದಾಗಿದ್ದು, ಆ ಮೂಲಕ ಮಾನವರ ಸುರಕ್ಷತೆಯನ್ನು ಸಾಧಿಸಲಿದೆ. ಈ ಯೋಜನೆ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ.

ಈ ಸಾಧನೆ ಕೈಗೊಂಡ ಬಳಿಕ, ಭಾರತ ಆಳ ಸಮುದ್ರದಲ್ಲಿ 5,000 ಮೀಟರ್‌ಗಿಂತಲೂ ಆಳಕ್ಕೆ ಸಾಗಿದ ಸಾಧನೆ ನಿರ್ಮಿಸಿರುವ ಅಮೆರಿಕಾ, ರಷ್ಯಾ, ಫ್ರಾನ್ಸ್, ಜಪಾನ್ ಹಾಗೂ ಚೀನಾಗಳ ಸಾಲಿಗೆ ಸೇರಲಿದೆ.

ಇದನ್ನೂ ಓದಿ: ಬಾಹ್ಯಾಕಾಶ ವಲಯಕ್ಕೂ ವಿಸ್ತರಿಸಿದೆಯೇ ರಷ್ಯಾ, ಉತ್ತರ ಕೊರಿಯಾ ದೋಸ್ತಿ?

ಮತ್ಸ್ಯ 6000ರ ಪ್ರಮುಖ ವೈಶಿಷ್ಟ್ಯಗಳು

~ ಮತ್ಸ್ಯ 6000 ಬ್ಯಾಟರಿ ಆಧಾರಿತ ಪ್ರೊಪಲ್ಷನ್ ವ್ಯವಸ್ಥೆಯನ್ನು ಹೊಂದಿದ್ದು, 6 ಡಿಗ್ರಿಗಳಷ್ಟು ಕೋನದಲ್ಲಿ ನೀರಿನಾಳದಲ್ಲಿ ಚಲಿಸುವ ಸ್ವಾತಂತ್ರ್ಯ ಹೊಂದಿದೆ.

“ಆರು ಡಿಗ್ರಿಗಳ ಸ್ವಾತಂತ್ರ್ಯ” ಎಂದರೆ, ಮತ್ಸ್ಯ 6000 ಸಾಧ್ಯವಿರುವ ಎಲ್ಲ ದಿಕ್ಕುಗಳಲ್ಲಿ ಮತ್ತು ಪಥಗಳಲ್ಲಿ ಚಲಿಸಬಲ್ಲದಾಗಿದೆ.

~ ಈ ಸಬ್‌ಮರ್ಸಿಬಲ್ 2.1 ಮೀಟರ್ ವ್ಯಾಸ ಹೊಂದಿದ್ದು, ಇದನ್ನು ಟೈಟಾನಿಯಂ ಮಿಶ್ರಲೋಹದಿಂದ ನಿರ್ಮಿಸಲಾಗಿದೆ. ಇದು ಸಬ್‌ಮರ್ಸಿಬಲ್‌ಗೆ ಅತ್ಯಧಿಕ ಒತ್ತಡವನ್ನು ತಾಳಿಕೊಳ್ಳುವ ಸಾಮರ್ಥ್ಯ ಒದಗಿಸುತ್ತದೆ.

~ 80 ಮಿಲಿಮೀಟರ್ ದಪ್ಪನೆಯ ಟೈಟಾನಿಯಂನಿಂದ ನಿರ್ಮಿತವಾಗಿರುವ ಮತ್ಸ್ಯ, ಸಮುದ್ರ ಮಟ್ಟದಲ್ಲಿರುವ ಒತ್ತಡಕ್ಕಿಂತಲೂ 600 ಪಟ್ಟು ಹೆಚ್ಚಿನ ಒತ್ತಡವನ್ನು ಸಹಿಸಬಲ್ಲ ಸಾಮರ್ಥ್ಯ ಹೊಂದಿದೆ.

~ ಸಬ್‌ಮರ್ಸಿಬಲ್ ನೀರಿನಾಳದಲ್ಲಿ 6,000 ಮೀಟರ್‌ಗಳಷ್ಟು ಕೆಳಗಿಳಿಯಲು ನಾಲ್ಕು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಅದು ಮೇಲಕ್ಕೇರಲೂ ನಾಲ್ಕು ಗಂಟೆಗಳು ಬೇಕಾಗುತ್ತವೆ. ಇನ್ನುಳಿದ ನಾಲ್ಕು ಗಂಟೆಗಳಲ್ಲಿ ಅದು ಸಾಗರದಾಳದಲ್ಲಿ ಕಾರ್ಯಾಚರಣೆ ನಡೆಸುತ್ತದೆ.

~ ಈ ಸಬ್‌ಮರ್ಸಿಬಲ್ ಅವಶ್ಯಕ ವ್ಯವಸ್ಥೆಗಳಾದ ಆಮ್ಲಜನಕ ಪೂರೈಕೆ, ತೇವಾಂಶ ನಿಯಂತ್ರಣಗಳನ್ನು ಒಳಗೊಂಡಿದೆ. ಇದು ಒಳಗಡೆ ಆರಾಮದಾಯಕ ವಾತಾವರಣ ಒದಗಿಸುವ ಕಾರಣ, ಒಳಗಿರುವ ಸದಸ್ಯರು ಸಹಜ ವಸ್ತ್ರಗಳನ್ನು ಧರಿಸಲು ಸಾಧ್ಯವಾಗುತ್ತದೆ.

~ ಮತ್ಸ್ಯ 6000 ಆಳ ಸಮುದ್ರ ಅನ್ವೇಷಣೆಗೆ ಅವಶ್ಯಕವಾದ ಮೂರು ಉಪಕರಣಗಳನ್ನು ಒಳಗೊಂಡಿದೆ. ಅವುಗಳೆಂದರೆ:

i) ಅಟಾನಮಸ್ ಕೋರಿಂಗ್ ಸಿಸ್ಟಮ್ (ಎಸಿಎಸ್) ಒಂದು ವಿಶೇಷ ಉಪಕರಣವಾಗಿದ್ದು, ಆಳ ಸಮುದ್ರದಲ್ಲಿರುವ ಅನಿಲಗಳ ಅನ್ವೇಷಣೆ ನಡೆಸುತ್ತದೆ. ಇದು ವಿಜ್ಞಾನಿಗಳಿಗೆ ಸಾಗರದಾಳದಲ್ಲಿರುವ ನೈಸರ್ಗಿಕ ಅನಿಲಗಳಿಗೆ ಸಂಬಂಧಿಸಿದ ಮಾಹಿತಿಗಳು ಹಾಗೂ ಮಾದರಿಗಳನ್ನು ಸಂಗ್ರಹಿಸಲು ನೆರವಾಗುತ್ತದೆ.

ii & iii) ಒಂದು ಅಟಾನಮಸ್ ಅಂಡರ್ ವಾಟರ್ ವೆಹಿಕಲ್ (ಎಯುವಿ) ಅನ್ನು ಅನ್ವೇಷಣಾ ಕಾರ್ಯಗಳಿಗೆ ನಿಯೋಜಿಸಲಾಗುತ್ತದೆ. ಡೀಪ್ ಸೀ ಮೈನಿಂಗ್ ಸಿಸ್ಟಮ್ (ಡಿಎಸ್ಎಂ) ಎನ್ನುವ ಉಪಕರಣ ಸಾಗರದಾಳದಿಂದ ಮಾದರಿಗಳನ್ನು ಪಡೆಯಲು ಬಳಕೆಯಾಗುತ್ತದೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ