ಕರ್ನಾಟಕದ 6 ನಗರ ವಿಮಾನ ಸೇವೆ ಬಲವರ್ಧನೆಗೆ ಎಂಬಿ ಪಾಟೀಲ್ ದಿಟ್ಟ ಹೆಜ್ಜೆ
ಕಲಬುರಗಿ ಸೇರಿದಂತೆ ಕರ್ನಾಟಕದ ಎರಡನೇ ಹಂತದ ಆರು ನಗರಗಳಿಗೆ ವಿಮಾನಯಾನ ಸೇವೆಯನ್ನು ಮತ್ತಷ್ಟು ಬಲಪಡಿಸುವ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಮಂಗಳವಾರ ವಿವಿಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದರು. ರಾಜ್ಯಗಳಿಗೆ ವಿಮಾನಯಾನ ಸಂಪರ್ಕ ಹೆಚ್ವಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಅಲ್ಲದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಘೋಷಿಸಲು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ,

ಬೆಂಗಳೂರು, (ಏಪ್ರಿಲ್ 08): ಕಲಬುರಗಿ ಸೇರಿ ರಾಜ್ಯದ 6 ನಗರ ವಿಮಾನ ಸೇವೆ ಬಲವರ್ಧನೆಗೆ ಸಚಿವ ಎಂಬಿ ಪಾಟೀಲ್ (MB Patil) ಅವರು ಇಂದು(ಏಪ್ರಿಲ್ 08) ವಿಮಾನಯಾನ ಸಂಸ್ಥೆಗಳ (Civil Aviation Organization) ಪ್ರತಿನಿಧಿಗಳ ಜತೆ ಸಭೆ ನಡೆಸಿದರು. ಖನಿಜ ಭವನದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಜತೆಗೂಡಿ ಹಲವು ವಿಮಾನಯಾನ ಸಂಸ್ಥೆಗಳ ಉನ್ನತಾಧಿಕಾರಿಗಳ ಜೊತೆ ದೀರ್ಘ ಸಭೆ ನಡೆಸಿ, ಚರ್ಚಿಸಿದರು. ಕಲಬುರಗಿ, ಮೈಸೂರು, ಬೀದರ್, ಹುಬ್ಬಳ್ಳಿ, ಬೆಳಗಾವಿ, ವಿದ್ಯಾನಗರ (ಜಿಂದಾಲ್ ಟೌನ್ ಶಿಪ್) ಮತ್ತು ಉದ್ಘಾಟನೆಗೆ ಸಿದ್ಧವಾಗಿರುವ ವಿಜಯಪುರ ವಿಮಾನ ನಿಲ್ದಾಣಗಳಿಂದ ರಾಜ್ಯ ಸೇರಿದಂತೆ ಇತರ ರಾಜ್ಯಗಳಿಗೆ ವಿಮಾನಯಾನ ಸಂಪರ್ಕ ಹೆಚ್ವಿಸುವ ಕುರಿತು ವಿಸ್ತೃತವಾಗಿ ಚರ್ಚಿಸಿದರು.
ವಿಮಾನ ಸಂಚಾರಕ್ಕೆ ಕಲ್ಬುರ್ಗಿ ಹೆಚ್ಚು ಲಾಭದಾಯಕ ಮಾರ್ಗವಾಗಿದ್ದರೂ ಅಲ್ಲಿಗೆ ಬೆಂಗಳೂರಿನಿಂದ ವಾರಕ್ಕೆ ಕೇವಲ ಮೂರು ದಿನ ಮಾತ್ರ ವಿಮಾನ ಸಂಚಾರ ಇದೆ. ಇದನ್ನು ಮತ್ತಷ್ಟು ಹೆಚ್ಚಿಸಬೇಕು. ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ನಗರ ಹಾಗೂ ಅನ್ಯ ರಾಜ್ಯಗಳ ಪ್ರಮುಖ ನಗರಗಳಿಗೂ ಸಂಪರ್ಕ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ಇಬ್ಬರೂ ಸಚಿವರು ಸಭೆಯಲ್ಲಿ ಮಂಡಿಸಿದರು. ಇದಕ್ಕೆ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಸಕಾರಾತ್ಮಕ ವಾಗಿ ಸ್ಪಂದಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಇದನ್ನೂ ಓದಿ: Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ನ ಬಿಗ್ ಅಪ್ಡೇಟ್ಸ್: ಸಮೀಕ್ಷೆಗೆ ಬಂತು ಕೇಂದ್ರ ತಂಡ
ಎಂಆರ್ ಓ ಸೇವೆಗೂ ಸಿದ್ಧ
ವಿಮಾನ ಸಂಚಾರದ ಜತೆಗೆ ಈ ವಿಮಾನ ನಿಲ್ದಾಣಗಳನ್ನು ವಿಮಾನಗಳ ನಿರ್ವಹಣೆ ಮತ್ತು ರಿಪೇರಿ (ಎಂಆರ್ ಓ) ಕೇಂದ್ರಗಳಾಗಿಯೂ ಬಳಸಬಹುದು. ದೊಡ್ಡ ದೊಡ್ಡ ನಗರಗಳಲ್ಲಿ ಈ ಸೇವೆ ದುಬಾರಿ ಕೂಡ ಆಗುತ್ತದೆ. ಹೀಗಾಗಿ ಬೆಳಿಗ್ಗೆ ಇಂತಹ ನಗರಗಳಿಂದ ಪ್ರಯಾಣಿಕರನ್ನು ಹೊತ್ತೊಯ್ದು ರಾತ್ರಿ ನಿಲುಗಡೆಗೆ ವಾಪಸ್ಸಾಗಬಹುದು. ಬೇಕಾದರೆ ನಿಲುಗಡೆ ಶುಲ್ಕದಿಂದ ವಿನಾಯಿತಿ ನೀಡಬಹುದು ಎಂದು ಸಚಿವರು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕಲ್ಬುರ್ಗಿ ಯಲ್ಲಿ ಈ ವ್ಯವಸ್ಥೆ ಮಾಡಿಕೊಡಲು ತಾವು ಸಿದ್ಧ ಇರುವುದಾಗಿಯೂ ಸಚಿವ ಖರ್ಗೆ ಹೇಳಿದರು. ಇದಕ್ಕೆ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
Important Meeting with Airline Representatives!
Held discussions with major airlines to expand flight services from Mysuru, Hubballi, Kalaburagi, Bidar, Belagavi & Vijdyanagar airports.
Kalaburagi currently has flights only three days a week; due to rising demand, I’ve… pic.twitter.com/fJo9x8a3Jr
— M B Patil (@MBPatil) April 8, 2025
ಮೈಸೂರು, ಕಲಬುರಗಿ, ಬೀದರ್, ವಿದ್ಯಾ ನಗರ ವಿಮಾನ ನಿಲ್ದಾಣಗಳ ಉಪಯೋಗ ಗರಿಷ್ಠ ಮಟ್ಟದಲ್ಲಿ ಆಗುತ್ತಲೇ ಇಲ್ಲ. ಕಲಬುರಗಿ-ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ ವಾರಕ್ಕೆ ಮೂರು ದಿನ ಮಾತ್ರ ವಿಮಾನ ಓಡಾಡುತ್ತಿದೆ. ಸ್ಟಾರ್ ಮತ್ತು ಅಲೈಯನ್ಸ್ ವಿಮಾನಯಾನ ಸಂಸ್ಥೆಗಳು ಮೂರು ವರ್ಷಗಳಿಂದ ಹಾರಾಟ ನಿಲ್ಲಿಸಿವೆ. ಕಲಬುರಗಿ ಪ್ರವಾಸೋದ್ಯಮ ಕೇಂದ್ರವಾಗಿದೆ. ಇಲ್ಲಿಂದ ಪುಣೆ, ತಿರುಪತಿ, ಚೆನ್ನೈ, ಮುಂಬೈ ಹೀಗೆ ಹಲವು ಭಾಗಗಳಿಗೆ ವಿಮಾನ ಸಂಚಾರ ಆರಂಭಿಸಿದರೆ ಖಂಡಿತವಾಗಿಯೂ ಲಾಭ ತಂದುಕೊಡಲಿದೆ. ಇಂತಹ ಮಾರ್ಗಗಳಲ್ಲಿ ಸಂಸ್ಥೆಗಳು ಪ್ರಾಯೋಗಿಕ ಸೇವೆ ಕೈಗೊಂಡು ನೋಡಬಹುದು ಎಂದು ಅವರು ನುಡಿದಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಿಂದ ಕೂಡ ವೈಮಾನಿಕ ಸೇವೆ ಹೆಚ್ಚಾಗಬೇಕು. ಇಲ್ಲಿಂದ ಗೋವಾ, ಕೊಚ್ಚಿನ್, ಹೈದರಾಬಾದ್ ಮುಂತಾದ ನಗರಗಳಿಗೂ ವಿಮಾನಸೇವೆ ಆರಂಭಿಸಬಹುದು. ಬೆಳಗಾವಿಯಿಂದ ಈಗ ವಾರಕ್ಕೆ 44 ವಿಮಾನಗಳು ಓಡಾಡುತ್ತಿವೆ. ಇಲ್ಲಿಂದ ಪುಣೆಗೆ ವಿಮಾನಸೇವೆ ಆರಂಭಿಸಬೇಕೆಂಬ ಬೇಡಿಕೆ ಇದೆ. ಆದರೆ, ಲ್ಯಾಂಡಿಂಗ್ ಸಮಯದ ಅನನುಕೂಲತೆ ಇದೆ. ಇಲ್ಲಿಂದ ಚೆನ್ನೈ, ಕೊಚ್ಚಿ ಮುಂತಾದ ಕಡೆಗಳಿಗೆ ವಿಮಾನ ಸೇವೆಗೆ ಒಳ್ಳೆಯ ಅವಕಾಶವಿದ್ದು, ಕಲಬುರಗಿಗೂ ಸೇವೆ ಆರಂಭಿಸಬಹುದು ಎಂದು ಅವರು ವಿವರಿಸಿದ್ದಾರೆ.
ಜಿಂದಾಲ್ ಟೌನ್-ಶಿಪ್ ನಲ್ಲಿರುವ ವಿಮಾನ ನಿಲ್ದಾಣದಿಂದ ಹೈದರಾಬಾದಿಗೆ ಮಾತ್ರ 2 ವಿಮಾನ ಓಡಾಡುತ್ತಿದೆ. ಇಲ್ಲಿಂದ ಬೆಂಗಳೂರಿಗೂ ವಿಮಾನಯಾನ ಸೇವೆ ಆರಂಭವಾಗಬೇಕು. ಜತೆಗೆ ಜಿಂದಾಲ್ ಟೌನ್ಶಿಪ್ ನಲ್ಲಿ ವಿದೇಶೀಯರೂ ಹೆಚ್ಚಾಗಿದ್ದಾರೆ. ಹತ್ತಿರದಲ್ಲೇ ವಿಶ್ವವಿಖ್ಯಾತ ಹಂಪೆ ಇದೆ. ಆದ್ದರಿಂದ ಬೆಂಗಳೂರು-ಜಿಂದಾಲ್-ಗೋವಾ ಈ ಮಾರ್ಗದಲ್ಲಿ ವಿಮಾನ ಓಡಾಡಿದರೆ ಪರಿಣಾಮಕಾರಿ ಎಂದು ಪಾಟೀಲ ವಿವರಿಸಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಕೇಂದ್ರ ಸರಕಾರದ ಪರಿಸರ ಇಲಾಖೆಯ ಅನುಮತಿ ಬಾಕಿ ಇದೆ. ವಿಮಾನಯಾನ ಸಂಸ್ಥೆಗಳು ಈಗಿನಿಂದಲೇ ತಮ್ಮ ಸೇವೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿರಬೇಕು. ಈ ವಿಮಾನ ನಿಲ್ದಾಣ ಆರಂಭವಾದರೆ ಮಹಾರಾಷ್ಟ್ರ, ತೆಲಂಗಾಣ, ಉತ್ತರ ಭಾರತದ ಹಲವು ನಗರಗಳಿಗೆ ವಿಮಾನಸೇವೆ ಸುಲಭವಾಗಲಿದೆ ಎಂದು ಅವರು ಸೂಚಿಸಿದ್ದಾರೆ.
ಏ.15ರಿಂದ ಬೀದರ್- ಬೆಂಗಳೂರು ವಿಮಾನಸೇವೆ ಪುನಾರಂಭ
ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ವಿಮಾನ ಸೇವೆಯನ್ನು ಸ್ಟಾರ್ ಎರ್ ಸಂಸ್ಥೆಯು ಇದೇ ತಿಂಗಳ 15ರಿಂದ ಪುನಾರಂಭ ಮಾಡಲಿದೆ ಎಂದು ಸಚಿವ ಎಂ ಬಿ ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು
ರಾಜ್ಯದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ಜು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕಾದ ಅಗತ್ಯವಿದೆ. ಈ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವಂತೆ ಸಚಿವ ಎಂ.ಬಿ.ಪಾಟೀಲ ಅವರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇವೆರಡೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಲು ಅರ್ಹತೆ ಪಡೆದಿವೆ. ಪ್ರಯಾಣಿಕರ ದಟ್ಟಣೆ ಕೂಡ ಇದೆ. ಸದ್ಯ ಈ ಭಾಗದವರು ವಿದೇಶಕ್ಕೆ ಹೋಗಬೇಕಾದರೆ ಸಮೀಪ ಅಂದ್ರೆ ಗೋವಾಕ್ಕೆ ಹೋಗಬೇಕು. ಅದರ ಬದಲು ಈ ನಿಲ್ದಾಣಗಳನ್ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಘೋಷಿಸ ಬೇಕು ಎಂದು ಅವರು ಹೇಳಿದರು.