ಒಂದು ವೇಳೆ ನೀವೇನಾದರೂ ಸ್ಮಾರ್ಟ್ಫೋನ್ ಜಗತ್ತಿನ ಸುದ್ದಿಗಳನ್ನು ಕುರಿತು ಆಸಕ್ತಿ ಹೊಂದಿರುವವರಾದರೆ, ಅದರಲ್ಲೂ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ, ಅಂದರೆ ಮೇ ತಿಂಗಳಿಂದ ಜುಲೈ ತಿಂಗಳ ತನಕ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ್ದರೆ, ಅದು ಒಂದು ರೀತಿಯ ಸುನಾಮಿ ಎಬ್ಬಿಸಿರುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ. ಬಹುತೇಕ ಚೀನಾ ಮೂಲದ ಸ್ಮಾರ್ಟ್ ಫೋನ್ ಸಂಸ್ಥೆಗಳು ಸಾಕಷ್ಟು ಅಕ್ರಮಗಳನ್ನು ನಡೆಸಿದ ಕಾರಣಕ್ಕೆ ಈಗ ಕಾನೂನು ಕ್ರಮವನ್ನು ಎದುರಿಸಬೇಕಾಗುವ ಅಪಾಯದಲ್ಲಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಗಮನಿಸಿ, ಹಲವಾರು ಸಂಸ್ಥೆಗಳ ಬ್ರಾಂಡ್ ಅಂಬಾಸಿಡರ್‌ಗಳು ಇಂತಹ ಸಂಸ್ಥೆಗಳಿಂದ ದೂರಾಗುತ್ತಿದ್ದಾರೆ. ಖ್ಯಾತ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯೂ ಸಹ ವಿವೋ ಮೊಬೈಲ್ ಸಂಸ್ಥೆಯಿಂದ ದೂರಾಗಿ, ಅದನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಈ ರೀತಿಯಲ್ಲಿ ಚೀನಾದ ಮೊಬೈಲ್ ಉತ್ಪಾದಕರಿಗೆ ಆಗಿರುವ ಗಾಯಕ್ಕೆ ಉಪ್ಪು ಸವರುವಂತೆ, ಭಾರತದಲ್ಲಿ ತಯಾರಾಗುವ ಮೇಡ್ ಇನ್ ಇಂಡಿಯಾ ಸ್ಮಾರ್ಟ್ ಫೋನ್‌ಗಳ ಮಾರಾಟ 2022ನೇ ಇಸವಿಯ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ 7ರಷ್ಟು ಹೆಚ್ಚಳ ಕಂಡಿದೆ.
ಇದಲ್ಲದೆ, ಲಂಡನ್ ಮೂಲದ ನತಿಂಗ್ ಸ್ಮಾರ್ಟ್ ಫೋನ್ ಸಂಸ್ಥೆ ತನ್ನ ಫೋನನ್ನು ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ಮಾತ್ರವಲ್ಲದೆ, ಸಂಪೂರ್ಣ ಫೋನ್ ತಯಾರಿಸಿದಿದ್ದರೂ, ಅದರ ಬ್ಯಾಟರಿ ತಮಿಳುನಾಡಿನ ಕಾರ್ಖಾನೆಯಲ್ಲಿ ತಯಾರಾಗುತ್ತಿದೆ. ಮಾರುಕಟ್ಟೆ ಯಾವುದೇ ಆಗಿರಲಿ. ಅಲ್ಲಿ ಯಾವತ್ತೂ ಗ್ರಾಹಕನೇ ಮಹಾರಾಜ ಆಗಿರುತ್ತಾನೆ. ಇಂಥ ಬದಲಾವಣೆಗಳು, ಬೆಳವಣಿಗೆಗಳು ಗ್ರಾಹಕರು ಏನು ಬಯಸುತ್ತಾರೆ ಎಂಬುದನ್ನು ಸೂಚಿಸುತ್ತದೆ.
ಕ್ರಾಂತಿ ಕಹಳೆ: ಭಾರತದಲ್ಲಿ ಚೀನೀ ಉತ್ಪನ್ನಗಳ ನಿಷೇಧಕ್ಕೆ ಕರೆ
ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಸೇನಾಪಡೆಗಳ ಮಧ್ಯ ನಡೆದ ಸಂಘರ್ಷದಲ್ಲಿ ಭಾರತದ ಯೋಧರು 40-50 ಚೀನೀ ಸೈನಿಕರನ್ನು ಹೊಡೆದುರುಳಿಸಿದ್ದರು. ಆ ಬಳಿಕ ನವದೆಹಲಿ ಇದಕ್ಕೆ ಪ್ರತ್ಯುತ್ತರ ಎಂಬಂತೆ ಆರ್ಥಿಕ ಕ್ರಮಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿತು. ಈ ನಿರ್ಧಾರಕ್ಕೆ ಹೆಚ್ಚಿನ ಪ್ರಚೋದನೆ ನೀಡಲು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್, ಎಂಜಿನಿಯರ್- ಶಿಕ್ಷಣ ತಜ್ಞ ಹಾಗೂ ನವೋದ್ಯಮಿ ಸೋನಮ್ ವಾಂಗ್‌ಚುಕ್ ಸೇರಿದಂತೆ ಸಾಕಷ್ಟು ಸಾರ್ವಜನಿಕ ವ್ಯಕ್ತಿಗಳು ಆರ್ಥಿಕ ಹೋರಾಟಕ್ಕೆ ಭಾರತೀಯರಿಗೆ ಕರೆ ನೀಡಿದರು. ಅವರು ಭಾರತೀಯರ ಬಳಿ ಚೀನಾ ನಿರ್ಮಿತ ವಸ್ತುಗಳನ್ನು ಖರೀದಿಸದಂತೆ ಆಗ್ರಹಿಸಿದರು.
ಇದು ಒಂದು ರೀತಿಯಲ್ಲಿ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ನಡೆದ ಸ್ವದೇಶಿ ಚಳವಳಿಯನ್ನು ನೆನಪಿಸುವಂತಿತ್ತು. ಆ ಸಂದರ್ಭದಲ್ಲಿ ಬ್ರಿಟಿಷ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ವ್ಯಾಪಕವಾಗಿ ಕರೆ ನೀಡಲಾಗಿತ್ತು. ಸ್ವದೇಶಿ ಚಳವಳಿಯೊಡನೆ ಈ ಬಾರಿಯ ಚಳವಳಿಗಿದ್ದ ಇನ್ನೊಂದು ಹೋಲಿಕೆ ಎಂದರೆ ಜನರು ಈ ಕರೆಯನ್ನು ಒಪ್ಪಿಕೊಂಡಿದ್ದು. ಅದರಂತೆ ಜನರು ಚೀನೀ ಉತ್ಪನ್ನಗಳನ್ನು ವಿರೋಧಿಸಿದರು. ಒಂದು ಸರ್ವೆಯ ಪ್ರಕಾರ, ಶೇ 71ರಷ್ಟು ಗ್ರಾಹಕರು ಈ ಕರೆಯ ನಂತರ ಚೀನಾದ ಯಾವುದೇ ಉತ್ಪನ್ನಗಳನ್ನು ಖರೀದಿಸಿಲ್ಲ.
ಉಳಿದ ಶೇ 29ರಷ್ಟು ಜನರು ಚೀನಾದ ಉತ್ಪನ್ನಗಳನ್ನು ಖರೀದಿಸಿದ್ದರೂ, ಅದರಲ್ಲಿ ಶೇ 16 ಜನರಿಗೆ ಈ ಚೀನೀ ವಸ್ತುಗಳನ್ನು ಬಹಿಷ್ಕರಿಸುವ ಕರೆಯ ಕುರಿತು ಅರಿವಿತ್ತು. ಉಳಿದ ಶೇ 11ರಷ್ಟು ಜನರಿಗೆ ಈ ವಿಚಾರದ ಬಗ್ಗೆ ತಿಳಿದಿರಲಿಲ್ಲ. ಈ ಬಗ್ಗೆ ಅರಿವಿದ್ದ ಗ್ರಾಹಕರು ಸ್ಪರ್ಧಾತ್ಮಕ ದರದ ಕುರಿತಾಗಿ ಮಾತನಾಡಿದ್ದರು. ಅವರಿಗೆ ಚೀನಾ ದೇಶದ ಉತ್ಪನ್ನಗಳ ಬೆಲೆ ಅದೇ ರೀತಿಯ ಇತರ ಉತ್ಪಾದಕರ ಉತ್ಪನ್ನಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಾಗುತ್ತದೆ ಎನಿಸಿತ್ತು.
ಗ್ರಾಹಕರು ಮಾರುಕಟ್ಟೆಯನ್ನು ನಿರ್ಧರಿಸುತ್ತಾರೆ
ಒಂದು ಸರ್ವೆಯ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ ಶೇ 60ರಷ್ಟು ಜನರು ವಿದೇಶೀ ವಸ್ತುಗಳ ಬದಲಿಗೆ ದೇಶೀಯವಾಗಿ ತಯಾರಾಗುವ ಉತ್ಪನ್ನಗಳನ್ನು ಬಳಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಅದರಲ್ಲಿ ಶೇ 41ರಷ್ಟು ಜನರು ಈ ಉದ್ದೇಶಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಲೂ ಸಿದ್ಧರಿದ್ದರು. ಅದರೊಡನೆ 2014ರಲ್ಲಿ ಆರಂಭಗೊಂಡ ಮೇಕ್ ಇನ್ ಇಂಡಿಯಾ ಯೋಜನೆಯ ಪಾಲೂ ಇದ್ದು, ಆಹಾರ, ಚಿಲ್ಲರೆ ಮಾರುಕಟ್ಟೆ ಹಾಗೂ ತ್ವಚೆ ಉತ್ಪನ್ನಗಳ ಕ್ಷೇತ್ರದಲ್ಲಿ ಬಹುದೊಡ್ಡ ಉತ್ತೇಜನ ನೀಡಿತ್ತು. ಭಾರತದಲ್ಲಿರುವ ಬಹುತೇಕ ಕಂಪನಿಗಳು ತಮ್ಮ ದೀರ್ಘಾವಧಿಯ ದೃಷ್ಟಿಯಿಂದ ಯೋಚಿಸಿ, ಮೇಕ್ ಇನ್ ಇಂಡಿಯಾ ಯೋಜನೆಯೊಡನೆ ಹೊಂದಿಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಓಲಾ ಕಂಪನಿ 2023ರ ವೇಳೆಗೆ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸುವುದಾಗಿ ನಿರ್ಧಾರ ಕೈಗೊಂಡಿದೆ.
ವಿಶೇಷವಾಗಿ ಸ್ಮಾರ್ಟ್ಫೋನ್ಗಳನ್ನೇ ಗಮನಿಸುವುದಾದರೆ, ಸ್ಯಾಮ್‌ಸಂಗ್ ಸಂಸ್ಥೆ ಈ ಕ್ಷೇತ್ರದಲ್ಲಿ ಅಪಾರ ಯಶಸ್ಸು ಗಳಿಸಿದೆ. ಸ್ಯಾಮ್‌ಸಂಗ್ ಸಂಸ್ಥೆ ಭಾರತದಲ್ಲಿ ತನ್ನ ಮೊದಲ ಕಾರ್ಖಾನೆಯನ್ನು ಬಹಳ ಹಿಂದೆಯೇ, ಅಂದರೆ 1995ರಲ್ಲಿ ತೆರೆಯಿತು. ಅದು ಜಗತ್ತಿನ ಅತಿದೊಡ್ಡ ಮೊಬೈಲ್ ಫೋನ್ ಕಾರ್ಖಾನೆಯನ್ನು ನೋಯ್ಡಾದಲ್ಲಿ 2018ರಲ್ಲಿ ಸ್ಥಾಪಿಸಿತು. ಸ್ಯಾಮ್‌ಸಂಗ್ ಮೇಕ್ ಇನ್ ಇಂಡಿಯಾ ಘೋಷಣೆಯನ್ನು ಮೊದಲಿಗೆ ಚಾಲ್ತಿಗೆ ತಂದ ಕಂಪನಿಗಳಲ್ಲಿ ಒಂದಾಗಿದ್ದು, ಇದು ಮೇಕ್ ಇನ್ ಇಂಡಿಯಾ ಮಾತ್ರವಲ್ಲದೆ, ಜಗತ್ತಿಗೆ ರಫ್ತಾಗುವ ಉತ್ಪನ್ನಗಳನ್ನೂ ಭಾರತದಲ್ಲೇ ತಯಾರಿಸತೊಡಗಿತು. ನೋಯ್ಡಾ ಕಾರ್ಖಾನೆಯಿಂದ ಉತ್ಪನ್ನಗಳು ಜಗತ್ತಿಗೆ ಸರಬರಾಜಾಗತೊಡಗಿದವು.
ಚೀನಾ ಉತ್ಪನ್ನಗಳ ಆಮದು ಯಾಕೆ ಕಡಿಮೆಯಾಗುತ್ತಿಲ್ಲ?
ಒಂದು ಮೊಬೈಲ್ ಫೋನ್ ನಿರ್ಮಾಣದ ಹಾದಿ ಅತ್ಯಂತ ದೀರ್ಘವಾದದ್ದು. ಮೊಬೈಲ್ ನಿರ್ಮಾಣದ ಕಾರ್ಯ ಅದು ಕಾರ್ಖಾನೆಯಲ್ಲಿ ರೂಪ ಪಡೆಯುವ ಸಾಕಷ್ಟು ಮೊದಲೇ ಆರಂಭಗೊಳ್ಳುತ್ತದೆ. ಮೊಬೈಲ್ ಫೋನಿನ ಸಾಕಷ್ಟು ಉಪಕರಣಗಳಿಗೆ ಹಲವು ಬಗೆಯ ಲೋಹಗಳ ಉತ್ಪನ್ನಗಳು ಅಗತ್ಯವಿರುತ್ತವೆ. ಉದಾಹರಣೆಗೆ ಟಚ್ ಸ್ಕ್ರೀನ್ ನಿರ್ಮಾಣಕ್ಕೆ ಇಂಡಿಯಂ, ಮೈಕ್ರೋಫೋನ್ ನಿರ್ಮಾಣದಲ್ಲಿ ನಿಕ್ಕೆಲ್, ಬ್ಯಾಟರಿ ನಿರ್ಮಾಣಕ್ಕೆ ಲಿಥಿಯಂ, ಹೀಗೆ ಹಲವು ಲೋಹಗಳ ಬಳಕೆಯಾಗುತ್ತದೆ. ಈ ಎಲ್ಲಾ ಲೋಹಗಳನ್ನು ಭೂಮಿಯಿಂದ ಅಗೆದು ತೆಗೆದು, ಅವುಗಳನ್ನು ಈ ಪ್ರತಿಯೊಂದು ಉಪಕರಣಗಳನ್ನು ತಯಾರಿಸುವ ಕಾರ್ಖಾನೆಗೆ ಕಳುಹಿಸಲಾಗುತ್ತದೆ. ಆ ಬಳಿಕ ಇಂತಹ ಅಗತ್ಯವಿರುವ ಉಪಕರಣಗಳನ್ನು ಮೊಬೈಲ್ ಫೋನ್ ಉತ್ಪಾದನಾ ಘಟಕಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿ ಅವುಗಳನ್ನು ಜೋಡಿಸುವ ಕಾರ್ಯ ನಡೆಯುತ್ತದೆ.
ಈ ಪ್ರಕ್ರಿಯೆಯನ್ನು ಮೇಲಿನ ಸಾಲುಗಳಲ್ಲಿ ಸರಳೀಕರಿಸಿ ಹೇಳಲಾಗಿದೆ. ಆದರೂ ಇದು ಈ ಕ್ರಿಯೆ ಎಷ್ಟು ಸಂಕೀರ್ಣವಾಗಿದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಈ ಎಲ್ಲಾ ಸಣ್ಣಪುಟ್ಟ ಉಪಕರಣಗಳ ಉತ್ಪಾದನೆಯೂ ಮೊಬೈಲ್ ಫೋನ್ ಉತ್ಪಾದನೆಯಾಗುವ ದೊಡ್ಡ ಕಾರ್ಖಾನೆಗೆ ಸಮೀಪದಲ್ಲಿದ್ದಷ್ಟೂ ಅದು ಖರ್ಚು ವೆಚ್ಚಗಳನ್ನು ಕಡಿತಗೊಳಿಸಲು ಸಹಕಾರಿಯಾಗಿರುತ್ತದೆ. ಅದು ಮೊಬೈಲ್ ಫೋನ್ ಉತ್ಪಾದನೆಯನ್ನು ಸರಳಗೊಳಿಸಿ, ಅನಗತ್ಯ ಖರ್ಚುಗಳಿಗೂ ಕಡಿವಾಣ ಹಾಕುತ್ತದೆ. ಇದು ಸ್ಮಾರ್ಟ್ಫೋನ್ ಉತ್ಪಾದನಾ ವಿಚಾರದಲ್ಲಿ ಚೀನಾ ಬಳಿ ಇರುವ ಟ್ರಂಪ್ ಕಾರ್ಡ್ ಆಗಿದೆ. ಚೀನಾದ ಶೆನ್‌ಜಿಯಾನ್ ಪ್ರಾಂತ್ಯದಲ್ಲಿ ಬಹಳಷ್ಟು ಇಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನಾ ಘಟಕಗಳಿವೆ. ಇವು ಉತ್ಪಾದನಾ ಸಮಯವನ್ನು ಸಾಕಷ್ಟು ಕಡಿಮೆಗೊಳಿಸುತ್ತವೆ. ನೂತನ ಫೋನ್‌ಗಳ ಮೂಲ ಮಾದರಿಯನ್ನು ನಿರ್ಮಿಸಲು ತ್ರೀಡಿ ಉತ್ಪಾದನೆಯ ಅಗತ್ಯವಿದ್ದು, ಇದಕ್ಕಾಗಿ ಅತ್ಯಂತ ಬೆಲೆಬಾಳುವ ತ್ರೀಡಿ ಪ್ರಿಂಟರ್ ಅಥವಾ ನಮ್ಮ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗಳನ್ನು ತಯಾರಿಸಿಕೊಡುವವರ ಅಗತ್ಯವಿದೆ. ಅಮೆರಿಕಾದ ಸಿಲಿಕಾನ್ ವ್ಯಾಲಿಯ ಜೊತೆ ಹೋಲಿಸಿ ನೋಡಿದರೆ, ಸಿಲಿಕಾನ್ ವ್ಯಾಲಿಯಲ್ಲಿ ಒಂದು ಉತ್ಪನ್ನದ ನಿರ್ಮಾಣ ಸಮಯ ಒಂದು ವಾರವಾದರೆ, ಶೆನ್‌ಜಿಯಾನ್ ತ್ರೀಡಿ ವಿನ್ಯಾಸವನ್ನು ಕೇವಲ 24 ಗಂಟೆಗಳ ಒಳಗೇ ತಯಾರಿಸಿ ಕೊಡುತ್ತದೆ.
ಈ ವ್ಯವಸ್ಥೆ ಚೀನಾದಲ್ಲಿ ನಡೆಯುವ ಆಧುನಿಕ ಆವಿಷ್ಕಾರಗಳಿಗೆ ಬೆಂಬಲವಾಗಿದೆ. ಈ ಕಾರಣದಿಂದ ಚೀನಾ ಇಂದು ಇಡೀ ಜಗತ್ತಿಗೇ ಇಲೆಕ್ಟ್ರಾನಿಕ್ ಉಪಕರಣಗಳನ್ನು ರಫ್ತು ಮಾಡುತ್ತದೆ. ಈಗ ಭಾರತವೂ ಈ ವಿಚಾರದಲ್ಲಿ ಎಚ್ಚರಗೊಂಡು, ಸ್ಪಷ್ಟ ನಿರ್ಧಾರ ಕೈಗೊಂಡಿದೆ. ಜಾಗತಿಕವಾಗಿ ಈಗ ಸಿಲಿಕಾನ್ ಚಿಪ್‌ಗಳಿಗೆ ಅಪಾರ ಬೇಡಿಕೆ ಮತ್ತು ಕೊರತೆ ಎದುರಾಗಿದೆ. ಈ ಸಿಲಿಕಾನ್ ಚಿಪ್‌ಗಳು ಬಹುತೇಕ ಎಲ್ಲಾ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇರುವುದರಿಂದ ಇವುಗಳು ಅತ್ಯವಶ್ಯಕವಾಗಿವೆ. ಆದ್ದರಿಂದ ಭಾರತ ಸರ್ಕಾರ ಉತ್ಪಾದಕರಿಗೆ ಚಿಪ್ ಉತ್ಪಾದಿಸುವ ಫ್ಯಾಕ್ಟರಿಗಳನ್ನು ಭಾರತದಲ್ಲಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯಡಿ ಆರಂಭಿಸಲು ಕೋರಿದೆ. ಪ್ರಮುಖ ಉತ್ಪಾದಕರಾದ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಸೇರಿದಂತೆ ಹಲವರು ಈ ಯೋಜನೆಗೆ ಅನುಮೋದಿಸಿದ್ದಾರೆ.
ಸರ್ಕಾರವೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ನಿರ್ಧಾರಗಳನ್ನು ಕೈಗೊಂಡಿದ್ದರಿಂದ ವಿಶೇಷವಾಗಿ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಚೀನಾ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ನಿರ್ಧಾರ ಮಾಡಿರುವ ಬಳಕೆದಾರರಿಗೆ ಇನ್ನೂ ಹೆಚ್ಚು ಸ್ಪರ್ಧಾತ್ಮಕ ದರದಲ್ಲಿ, ಹೆಚ್ಚಿನ ಆಯ್ಕೆಗಳು ಲಭಿಸಲಿವೆ. ಭಾರತ ಒಂದು ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಬೇಡಿಕೆಯೂ ಹೆಚ್ಚಾಗಿದೆ. ಆದ್ದರಿಂದ ಮೊದಮೊದಲು ಭಾದತದಲ್ಲಿ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದ ಆ್ಯಪಲ್ ಸಂಸ್ಥೆಯೂ ಸಹ ಈಗ ಫಾಕ್ಸ್ ಕಾನ್ ಮೂಲಕ ‘ಐಫೋನ್ 13’ ಅನ್ನು ಭಾರತದಲ್ಲೇ ಉತ್ಪಾದಿಸುತ್ತಿದೆ.
ಪ್ರಸ್ತುತ ಸಂದರ್ಭದಲ್ಲಿ ಈ ಎಲ್ಲಾ ಬೆಳವಣಿಗೆಗಳ ಫಲಿತಾಂಶ ಸ್ಪಷ್ಟವಾಗಿದೆ. ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೀನಾದ ಕಂಪನಿಗಳಿಗೆ ಭಾರತೀಯ ಪ್ರಜ್ಞಾವಂತ ನಾಗರಿಕರು ಕೈಗೊಂಡ ಬಹಿಷ್ಕಾರದ ನಿರ್ಣಯ ಆಘಾತಕಾರಿಯಾಗಿ ಪರಿಣಮಿಸಿದೆ. ಭಾರತೀಯರು ಇಂತಹ ವಿಚಾರಗಳಲ್ಲಿ ಅದನ್ನು ಬೇಗನೆ ಮರೆತು ಮುಂದೆ ಹೋಗುತ್ತಾರೆನ್ನುವುದು ನಂಬಿಕೆ. ಆದರೆ ಈ ಸಲ ಬಹಿಷ್ಕಾರ ಹಾಕಿದ ನಂತರ ಅದನ್ನು ಮರೆಯುವ ಬದಲು ಭಾರತೀಯರು ಅದನ್ನು ಮುಂದಿನ ಹಂತಗಳಿಗೂ ಕೊಂಡೊಯ್ದರು. ಟಿಕ್‌ಟಾಕ್, ಪಬ್-ಜಿಯಂತಹ ಪ್ರಸಿದ್ಧ ಆ್ಯಪ್‌ಗಳು ನಿಷೇಧಕ್ಕೊಳಗಾದ ಬಳಿಕ ಕೆಲಕಾಲ ಭಾರತೀಯರು ಇನ್ನೇನು ಎಂಬಂತೆ ವರ್ತಿಸಿದರೂ, ಬಳಿಕ ಭಾರತೀಯ ನಿರ್ಮಾಣದ ಆ್ಯಪ್‌ಗಳನ್ನು ಬಳಸಲು ಆರಂಭಿಸಿದರು.
ಈ ನಿಷೇಧದ ಬಳಿಕ ಪಬ್-ಜಿ ಮತ್ತೆ ಭಾರತಕ್ಕೆ ಪ್ರವೇಶಿಸಿದರೂ, ಅದು ಮೇಡ್ ಇನ್ ಇಂಡಿಯಾ ಮಂತ್ರಕ್ಕೆ ಬದ್ಧವಾಗಿ, ಅದಕ್ಕೆ ಬೇಕಾದಂತೆ ಕ್ರಮಗಳನ್ನು ಕೈಗೊಂಡು, ಮರುಪ್ರವೇಶಿಸಿತ್ತು. ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು ಹೆಚ್ಚಾಗಿ ಉಚಿತವೇ ಆಗಿರುವುದರಿಂದ ಜನರೂ ಒಂದು ನಿಷೇಧಕ್ಕೊಳಗಾದ ಬಳಿಕ ಇನ್ನೊಂದು ಆ್ಯಪ್ ಬಳಸುವುದು ಸಹಜವೇ ಆಗಿತ್ತು. ಆದರೆ ಫೋನ್‌ಗಳು ಹಾರ್ಡ್‌ವೇರ್ ಆಗಿರುವುದರಿಂದ, ಅವುಗಳ ಬಹಿಷ್ಕಾರದ ಬಳಿಕ ಕ್ರಮಗಳನ್ನು ಕೈಗೊಳ್ಳಲು ಕೆಲಕಾಲ ಬೇಕಾಯಿತು. ಆದರೆ ಈ ಕ್ರಮಗಳು ಚೀನಾದ ಕಂಪನಿಗಳಿಗೆ ಖಂಡಿತಾ ಪೂರಕವಾಗಿಲ್ಲ. ಯಾಕೆಂದರೆ ಈಗ ಭಾರತೀಯ ಗ್ರಾಹಕರೂ ಕೊಳ್ಳುವ ವಸ್ತುಗಳಲ್ಲಿ ಮೇಡ್ ಇನ್ ಇಂಡಿಯಾ ಎಂದು ಬರೆದಿದೆಯೇ ಎಂದು ಖಾತರಿಪಡಿಸಿಕೊಳ್ಳುತ್ತಿದ್ದಾರೆ.
ಸರ್ಕಾರವೂ ಸಹ ದೀರ್ಘಾವಧಿಯ ಆಲೋಚನೆಗಳನ್ನು ಮಾಡಿ, ಸೆಮಿ ಕಂಡಕ್ಟರ್ ಮತ್ತು ಇತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ಭಾರತದಲ್ಲಿ ನಿರ್ಮಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಿಂದಾಗಿ ಭಾರತ ಭವಿಷ್ಯದ ಸ್ಟಾರ್ಟಪ್‌ಗಳ ಜಾಗತಿಕ ತಾಣವಾಗಿ ರೂಪುಗೊಳ್ಳಲಿದೆ. ಆ ಮೂಲಕ ಚೀನಾದ ಸ್ಥಾನವನ್ನು ಭಾರತ ತುಂಬಲಿದೆ. ಒಪ್ಪೋ, ವೀವೋಗಳಂತಹ ಚೀನೀ ಕಂಪನಿಗಳು ಭಾರತದಲ್ಲಿ ಮೊಬೈಲ್ ನಿರ್ಮಾಣದ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದರೂ, ಇತ್ತೀಚೆಗೆ ನಡೆದ ಜಾರಿ ನಿರ್ದೇಶನಾಲಯ (ಇಡಿ) ದಾಳಿಗಳು ಈ ಎಲ್ಲಾ ಚೀನೀ ಕಂಪನಿಗಳ ಹಳೆಯ ಚಾಳಿಯನ್ನು ಭಾರತೀಯರಿಗೆ ಮತ್ತೊಮ್ಮೆ ಯಶಸ್ವಿಯಾಗಿ ನೆನಪು ಮಾಡಿಕೊಟ್ಟಿವೆ ಮತ್ತು ಅವುಗಳು ಯಾವ ಕಾರಣಕ್ಕೂ ನಂಬಿಕೆಗೆ ಅರ್ಹವಲ್ಲ ಎಂದು ಸಾಬೀತುಪಡಿಸಿದೆ.
(ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Published On - 1:34 pm, Sun, 17 July 22