ಹಿರಿಯ ಸಾಹಿತಿಗಳಾದ ಭೈರಪ್ಪ (SL Bhyrappa) ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ, ಅವರು ಹೇಳಿದ್ದನ್ನೇ, ಹೇಳಿದಷ್ಟನ್ನೇ ಸತ್ಯ ಎಂದು ನಂಬುವವರಿದ್ದಾರೆ, ಆರಾಧಿಸುವವರಿದ್ದಾರೆ. ಆದ್ದರಿಂದ ಸಾಹಿತ್ಯದ ಮೂಲಕವೇ ಪರಿಚಯವಾದ ವ್ಯಕ್ತಿಯೊಬ್ಬರನ್ನು ಆರಾಧನಾ ಭಾವದಿಂದ ನೋಡುವುದು ಎಷ್ಟು ಸರಿ ಎಂಬ ಪ್ರಶ್ನೆ ಓದುಗರ ಭಾವಕ್ಕೆ ಬಿಟ್ಟು, ಹೇಳಬೇಕಾದ ವಿಚಾರವನ್ನು ನೇರವಾಗಿ ಮುಂದಿಡುತ್ತಿದ್ದೇನೆ. ಆದರೆ ಈಗ ಹೇಳಲು ಹೊರಟಿರುವುದು ರಾಜ್ಯ ಸರ್ಕಾರದ ಪಠ್ಯಪುಸ್ತಕದ ಬಗ್ಗೆ ಭೈರಪ್ಪ ಹಂಚಿಕೊಂಡಿರುವ ಅಭಿಪ್ರಾಯದ ಸುತ್ತಲ ವಿಚಾರದ ಬಗ್ಗೆ. ಅದಕ್ಕೂ ಮುನ್ನ ಭೈರಪ್ಪ ಏನು ಎಂಬುದು ಗೊತ್ತಾಗಬೇಕು. ಸಾಮಾನ್ಯವಾಗಿ, ಪತ್ರಕರ್ತರು ಪ್ರಶ್ನೆ ಕೇಳಿದಾಗ ಎಲ್ಲ ಸಂದರ್ಭದಲ್ಲೂ ಅವರು ಉತ್ತರ ಹೇಳಲ್ಲ. ಅಥವಾ ಯಾವುದೇ ಪ್ರಶ್ನೆಗೆ ಬಹಳ ಚಾಣಾಕ್ಷತನದಿಂದ ಕಮ್ಯುನಿಷ್ಟರು, ಕಾಂಗ್ರೆಸ್ಸಿಗರು, ಇಂದಿರಾಗಾಂಧಿ, ನೆಹರೂ ಹೆಸರು ಹೇಳಿ ಓಪನ್ ಎಂಡೆಡ್ ಪ್ರಶ್ನೆಯೊಂದನ್ನು ಹಾಗೇ ಬಿಟ್ಟುಬಿಡುತ್ತಾರೆ. ಆಡುಭಾಷೆಯಲ್ಲಿ ಹೇಳಬೇಕೆಂದರೆ, ಸದಾ ಮೈಗೆ ಎಣ್ಣೆ ಹಚ್ಚಿಕೊಂಡು ಮಾತನಾಡುವ ಭೈರಪ್ಪ ಅವರಿಗೆ ವಯಸ್ಸು, ಈವರೆಗಿನ ಸಾಹಿತ್ಯ ಕೃಷಿ, ಬರವಣಿಗೆಯ ಅಭಿಮಾನಿಗಳು ಗುರಾಣಿಗಳಂತೆ ಬಳಕೆ ಆಗುತ್ತಿದೆ ಎಂದೇನಾದರೂ ಹೇಳಿದರೆ ಬಹಳ ಮಂದಿಗೆ ಬೇಸರ ಆಗಬಹುದು.
ಉದಾಹರಣೆಗೆ, ದೇಶದ ಜಿಡಿಪಿ, ನಿರುದ್ಯೋಗ, ಕೃಷಿ ಕಾಯ್ದೆ ಹಿಂಪಡೆದದ್ದು, ಅಪನಗದೀಕರಣ ಮೊದಲಾದ ಪ್ರಶ್ನೆಗಳನ್ನು ಅವರ ಮುಂದಿಟ್ಟರೆ ಅದಕ್ಕೆ ನೀಡುವ ಉತ್ತರದ ಪರಿ, ವೈಖರಿ ಎರಡೂ ಬೇರೆ ಆಗಿಬಿಡುತ್ತದೆ. ನಾನೊಬ್ಬ ಸಾಹಿತಿ. ಎಲ್ಲಕ್ಕೂ ಸ್ಪಂದಿಸುತ್ತಾ, ಉತ್ತರಿಸುತ್ತಾ ಇರುವುದಕ್ಕೆ ಸಾಧ್ಯವಿಲ್ಲ ಎಂದು ಬಿಡುತ್ತಾರೆ. ಹೀಗೆ ಅಂದವರೆ ತಮ್ಮ ಇಡೀ ಮಾತುಕತೆಯಲ್ಲಿ ಕಾಂಗ್ರೆಸ್ ಕಾಲದ ಭಾರತ, ಅದಕ್ಕೆ ಕಮ್ಯುನಿಸ್ಟರ ಕುಮ್ಮಕ್ಕು, ನೆಹರೂ ಆಲೋಚನೆ, ಇಂದಿರಾಗಾಂಧಿ ಅಂತ ಮಾತನಾಡದೆ ಮುಗಿಸುವುದೇ ಇಲ್ಲ. ಸರಿ, ಅವರಿಗೆ ಅನಿಸಿದ್ದನ್ನು ಹೇಳುವ ಹಕ್ಕು ಇಲ್ಲವೆ ಎಂದು ಪ್ರಶ್ನೆ ಎದ್ದು ನಿಲ್ಲುತ್ತದೆ. ಅದೇ ರೀತಿಯಾದಂಥ ಸ್ಪಂದನೆ, ಉತ್ತರ ಮತ್ತೊಬ್ಬರಿಂದ ಬಂದಾಗ ಭೈರಪ್ಪ ಪೂರ್ತಿ ಬದಲಾಗಿ ಬಿಡುತ್ತಾರೆ. ಮೈಸೂರಿನಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಾ, ಈ ಹಿಂದೆ ಕೇಂದ್ರ ಸರ್ಕಾರದಿಂದ ಆಗಿದ್ದ ಪಠ್ಯಪುಸ್ತಕ ಸಮಿತಿಯಲ್ಲಿ ತಾವು ಇದ್ದದ್ದು, ಅದರ ಅಧ್ಯಕ್ಷರನ್ನು ಕೇಳಿದ ಒಂದು ಪ್ರಶ್ನೆಯಿಂದ ಮುಜುಗರ ಆಗಿ, ಅದಾಗಿ 15 ದಿನಕ್ಕೆ ತಮ್ಮನ್ನು ಆ ಸಮಿತಿಯಿಂದ ತೆಗೆದು ಕಮಿಟೆಡ್ ಕಮ್ಯುನಿಸ್ಟ್ರನ್ನು ಹಾಕಿದ ಬಗ್ಗೆ ಹೇಳಿಕೊಂಡಿದ್ದಾರೆ ಭೈರಪ್ಪ.
ಕಮ್ಯುನಿಸ್ಟರು, ಎಡಪಂಥೀಯರ ವಿರುದ್ಧವೇ ನಂಜು:
ಇಲ್ಲಿಯ ತನಕ ಭೈರಪ್ಪನವರ ಮಾತಿನಲ್ಲಿ ಕಾಣುವ ನಂಜು ಕಮ್ಯುನಿಸ್ಟರು, ಎಡಪಂಥೀಯರ ವಿರುದ್ಧವೇ ಹೊರತು, ಬಲಪಂಥೀಯ, ಕಮಿಟೆಡ್ ಬಲಪಂಥೀಯರ ವಿರುದ್ಧ ಅಲ್ಲ. ಇಲ್ಲ, ಹಾಗಂತ ಅವರ ವಿರುದ್ಧವೂ ಭೈರಪ್ಪನವರು ಮಾತನಾಡಲೇಬೇಕು ಅಂತ ಒತ್ತಾಯಿಸುವುದಕ್ಕೆ ಆಗುತ್ತಾ? ಖಂಡಿತಾ ಇಲ್ಲ. ಆದರೆ ಭೈರಪ್ಪ ಯಾವ ಪಂಥ ಅಂತ ಕನಿಷ್ಠ ಪಕ್ಷ ಅವರ ಓದುಗರಿಗೆ, ಆರಾಧಿಸುವವರಿಗೆ, ಅವರ ಕಾದಂಬರಿಗಳ ಅಭಿಮಾನಿಗಳಿಗಾದರೂ ತಿಳಿಸಬಹುದಲ್ಲವಾ? ಆಗ ಅವರ ಒಲವು- ನಿಲವುಗಳೇನು ಎಂಬ ಸ್ಪಷ್ಟತೆ ಸಿಗುತ್ತದೆ. ನನ್ನ ಕಾಲೇಜು ದಿನಗಳಲ್ಲಿ ಕೆಲವು ಗೆಳೆಯರು ಕೆಲವು ಸಬ್ಜೆಕ್ಟ್ಗಳ ಪರೀಕ್ಷೆಗಳಲ್ಲಿ ಯಾವ ಪ್ರಶ್ನೆಗಳನ್ನೇ ಕೇಳಿದ್ದರೂ ತಾವು ಓದಿದ್ದನ್ನು ಮಾತ್ರ ಬರೆದಿಟ್ಟು ಬರುತ್ತಿದ್ದರು. ಇದು ಹೇಗೆ ಗೊತ್ತು ಅಂದರೆ, ಆ ಮಾತನ್ನು ಅವರು ಸ್ವತಃ ಹೇಳುತ್ತಿದ್ದರು ಕೂಡ. ಭೈರಪ್ಪನವರು ಸಹ ಹೀಗೆ. ಪ್ರಶ್ನೆ ಏನಾದರೂ ಇರಲಿ, ಸುತ್ತಿ-ಬಳಸಿ ತಾವು ಬಯ್ಯುವ ಸಬ್ಜೆಕ್ಟ್ಗಳಿಗೆ ಬಂದುಬಿಡುತ್ತಾರೆ.
ಪತ್ರಿಕಾಗೋಷ್ಠಿಯೋ ಸಾಹಿತ್ಯ ಸಂವಾದವೋ ಅಥವಾ ಬೇರೆಲ್ಲಿಯಾದರೂ ಭೈರಪ್ಪನವರನ್ನು ಸಂದಿಗ್ಧಕ್ಕೆ ಸಿಲುಕಿಸುವ ಅಥವಾ ಸತ್ಯಕ್ಕೆ ಮುಖಾಮುಖಿ ಆಗಿಸುವ ಪ್ರಯತ್ನ ಮಾಡಿದಲ್ಲಿ ಗುರುತಿಟ್ಟುಕೊಂಡು ಅಂಥವರಿಂದ ಅಂತರ ಕಾಪಾಡಿಕೊಳ್ಳುತ್ತಾರೆ. ಇದನ್ನು ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ, ಆಯ್ಕೆ ಎಂದು ಖಂಡಿತಾ ಗೌರವಿಸಬೇಕು ಅಂತ ಹೇಳುವುದಾದರೆ, ಇಂಥದ್ದನ್ನೇ ಭೈರಪ್ಪನವರಿಗೆ ಅನ್ವಯಿಸಬೇಕು ಅಲ್ಲವೇ? ಇತರರು ಇವರ ರೀತಿಯಲ್ಲೇ ಮಾಡಿದಲ್ಲಿ ದೊಡ್ಡ ಅಪರಾಧ ಹಾಗೂ ನುಣುಚಿಕೊಂಡಂತೆ, ಸತ್ಯಕ್ಕೆ ಮುಖಾಮುಖಿ ಆಗದೆ ತಪ್ಪಿಸಿಕೊಂಡಂತೆ ಎಂಬ ಧಾಟಿಯಲ್ಲಿ ಈ ಹಿರಿಯ ಸಾಹಿತಿಗಳ ವ್ಯಾಖ್ಯಾನ ಇರುತ್ತದೆ. ಆದರೆ ಅವರ ಎಲ್ಲ ಭಾಷಣ, ಅಭಿಪ್ರಾಯದಲ್ಲೂ ಒಂದೇ ಕಡೆ ಗುರಿ ಇಟ್ಟಂತೆ ತೂರಿ ಬಿಡುತ್ತಲೇ ಇರುತ್ತಾರೆ. ಇದರಿಂದ ಅವರ ಕಾದಂಬರಿಗಳು ಸಹ ಹೊರತಲ್ಲ. ಆದರೆ ಆ ಸಾಹಿತ್ಯಗಳು ಅಷ್ಟು ತೂಕದ್ದಲ್ಲ ಎಂದಾದರೆ ಹೇಗೆ ಅಷ್ಟು ಸಂಖ್ಯೆಯಲ್ಲಿ ಕಾದಂಬರಿಗಳ ಮಾರಾಟ ಆಗುತ್ತದೆ ಎಂಬ ಪ್ರಶ್ನೆ ಬರುತ್ತದೆ. ಸಂಖ್ಯೆಯೇ ಮುಖ್ಯವೆ, ಶ್ರೇಷ್ಠತೆಗೆ ಅಳತೆಗೋಲು ಅದೊಂದೇ ಅಂದುಕೊಳ್ಳಬೇಕಾ? ಈ ಪ್ರಶ್ನೆಯನ್ನು ಭೈರಪಪ್ಪನವರ ರೀತಿಯಲ್ಲೇ ಓಪನ್ ಎಂಡೆಡ್ ಆಗಿ ಬಿಟ್ಟುಬಿಡೋಣ.
ಅದಿನ್ನೆಂಥ ಆತ್ಮವಂಚನೆ?
ಭೈರಪ್ಪ ಅವರು ಕಾದಂಬರಿಕಾರರು. ಓದಿಸಿಕೊಳ್ಳುವಂಥ ಗುಣ ಅವರ ಬರವಣಿಗೆಗೆ ಇದೆ. ವಯಸ್ಸಿನ ಕಾರಣಕ್ಕೆ ಗೌರವ ಕೂಡ ಕೊಡಬಹುದು. ಆದರೆ ಅವರ ಸಾರ್ವಜನಿಕ ಜೀವನದ ನಡಾವಳಿಗಳು, ಅಭಿಪ್ರಾಯಗಳನ್ನು ಹೇಳುವ ರೀತಿ, ಪ್ರಚೋದನಾಕಾರಿ ಮಾತು, ಒಂದು ಸಿದ್ಧಾಂತ- ಪಕ್ಷ- ವ್ಯಕ್ತಿ ಪರವಾದ ನಿಲುವು ಅಪಾಯಕಾರಿ ಅಂತಲೇ ಅನ್ನಿಸುತ್ತದೆ. ಈಗಿನ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ತಮ್ಮ ಅಭಿಪ್ರಾಯ, ರಾಜ್ಯ ಸರ್ಕಾರ ಏನು ನಿಲುವು ತೆಗೆದುಕೊಳ್ಳಬೇಕು ಎಂಬುದನ್ನೆಲ್ಲ ಹೇಳಿ, ಕೊನೆಗೆ ಸರ್ಕಾರಕ್ಕೆ ನಾನು ಹೇಳುವಂಥದ್ದೇನೂ ಇಲ್ಲ ಎನ್ನುತ್ತಾರೆ ಅಂದರೆ, ಭೈರಪ್ಪ ಅವರದು ಅದಿನ್ನೆಂಥ ಆತ್ಮವಂಚನೆ?
ಇನ್ನು ಆವರಣ ಪುಸ್ತಕಕ್ಕಾಗಿ ವ್ಯಾಪಕವಾದ ಅಧ್ಯಯನ ನಡೆಸಿ, ಬರೆದಿದ್ದೇನೆ ಎನ್ನುತ್ತಾರೆ ಭೈರಪ್ಪ. ಇತಿಹಾಸವನ್ನು ಬರೆದವರಲ್ಲೂ ಭೈರಪ್ಪ ಅಂಥವರು ಇದ್ದಾರೆ. ಅಂದರೆ ತಮಗೆ ಬೇಕಾದದ್ದನ್ನೇ ಹುಡುಕಿ, ಅದನ್ನು ಮಾತ್ರ ಆರಿಸಿ ಬೆಳಕು ಕಂಡಂತೆ ಮಾಡಿದವರು. ಉದಾಹರಣೆಗೆ ಟಿಪ್ಪು ಪರವಾದ ಪುಸ್ತಕಗಳು ಇರುವಂತೆಯೇ ವಿರೋಧಿಸುವಂಥವೂ ಇವೆ. ಈಗ ತನಗೆ ಬೇಕಾದಂತೆ ಕಾದಂಬರಿ ಬರೆದುಕೊಳ್ಳ ಬಯಸುವ ಸಾಹಿತಿ ಯಾವುದನ್ನಾದರೂ ಆರಿಸಿಕೊಳ್ಳಬಹುದು, ಆಕರ ಗ್ರಂಥ ಎಂದು ಹಾಕಬಹುದು. ಪಠ್ಯಪುಸ್ತಕ ಸಮಿತಿಯಲ್ಲಿ ಇರುವ ವ್ಯಕ್ತಿಗಳು ಸಿದ್ಧಾಂತಗಳಿಂದ ಪ್ರಭಾವಿತರಾದಲ್ಲಿ (ಅದು ಎಡವೇ ಇರಲಿ, ಬಲವೇ ಇರಲಿ) ಅಂಥವರಿಂದ ಎಂಥ ಸತ್ಯವನ್ನು ನಿರೀಕ್ಷಿಸುವುದಕ್ಕೆ ಸಾಧ್ಯ?
ಭೈರಪ್ಪನವರ ತರ್ಕ ಹೇಗಿರುತ್ತದೆ ಎಂಬುದಕ್ಕೆ ಅವರದೇ ಒಂದು ಕಾದಂಬರಿಯಾದ ಆವರಣದ ಉದಾಹರಣೆಯನ್ನು ನೀಡಿ ಹೇಳುವುದಾದರೆ, ಹಂಪಿಯು ನಾಶವಾಗಿದ್ದು ಶೈವ- ವೈಷ್ಣವರ ಕಲಹದಲ್ಲಿ ಎಂಬುದು ಇತಿಹಾಸದ ಕಟ್ಟುಕಥೆ ಎಂಬ ತರ್ಕವನ್ನು ಮುಂದಿಡುತ್ತಾರೆ. ಅದಕ್ಕೆ ಕಾದಂಬರಿಯ ಪಾತ್ರಧಾರಿ ಕಾರಣ ಏನೆಂದರೆ, ಏಕೆಂದರೆ ತಮ್ಮೂರಿನ ಬಳಿ ಇರುವ ದೇವರೊಂದಕ್ಕೆ ಶೈವ- ವೈಷ್ಣವರು ಇಬ್ಬರು ನಡೆದುಕೊಳ್ಳುತ್ತಾರೆ. ಅದು ಹೇಗೆ ಹಂಪಿಯಲ್ಲಿನ ಮೂರ್ತಿಗಳು ಶೈವ- ವೈಷ್ಣವರ ಜಗಳದಲ್ಲಿ ಹಾಳಾಗಲು ಸಾಧ್ಯ? ಅಯ್ಯೋ, ಎಷ್ಟು ಸತ್ಯ ಅಲ್ಲವೆ ಎಂದು ಅರೆ ಕ್ಷಣ ಅನಿಸಿಬಿಡುತ್ತದೆ.
ಈ ತರತಮಗಳ ಬಗ್ಗೆ ಏಕೆ ಮೌನ?:
ಆದರೆ, ಭೈರಪ್ಪನವರಿಗೆ ಇದು ಹೇಗೆ ಅಧ್ಯಯನದಿಂದ ತಪ್ಪಿ ಹೋಯಿತೋ ಗೊತ್ತಿಲ್ಲ: ವಿಷ್ಣು ಸರ್ವೋತ್ತಮತ್ವ ಒಪ್ಪದವರ ಮನೆಯಲ್ಲಿ ಊಟ ಸಹ ಮಾಡಬಾರದು ಎಂದು ದ್ವೈತ ಸಿದ್ಧಾಂತದಲ್ಲಿ ಹೇಳಿರುವುದಕ್ಕೆ ಗ್ರಂಥದ ಪ್ರಮಾಣ ಇದೆ. ಇನ್ನು ಶಂಕರಾಚಾರ್ಯರ ಬಗ್ಗೆ ಬ್ರಾಹ್ಮಣರೇ ಆದ ವೈಷ್ಣವ- ಶ್ರೀವೈಷ್ಣವರಲ್ಲಿ ಭಿನ್ನಾಭಿಪ್ರಾಯ ಹಾಗೂ ಶಂಕರರ ಅನುಯಾಯಿಗಳಲ್ಲಿ ವೈಷ್ಣವ- ಶ್ರೀವೈಷ್ಣವರ ಬಗ್ಗೆ ತಿರಸ್ಕಾರ ಭಾವ ಇದೆ. ಇನ್ನೂ ಮುಂದುವರಿದು, ಮಾಧ್ವ ಮಠಗಳ ಮಧ್ಯೆ ವೃಂದಾವನ ಪೂಜೆಗೆ ಸಂಬಂಧಿಸಿದಂತೆ ಕೋರ್ಟ್ ವ್ಯಾಜ್ಯಗಳಿವೆ. ನವ ವೃಂದಾವನದಲ್ಲಿನ ಪೂಜೆಗೆ ಸಂಬಂಧಿಸಿದಂತೆ ಉತ್ತರಾದಿ ಮಠ ಹಾಗೂ ರಾಘವೇಂದ್ರ ಸ್ವಾಮಿ ಮಠದವರ ಮಧ್ಯೆ ಹೊಡೆದಾಟಗಳಾಗಿ ರಕ್ತ ಹರಿದಿದೆ. ಇವೆಲ್ಲ 2022ರಲ್ಲೂ ಜಾರಿಯಲ್ಲಿರುವ ಸಮಸ್ಯೆ. ಮೂರು ದಿನದ ಆರಾಧನೆಯನ್ನು ಒಂದೂವರೆ ದಿನದಂತೆ ಹಂಚಿಕೊಂಡು, ತಮ್ಮ ಪಾಳಿಯಲ್ಲಿ ವೃಂದಾವನದ ಮೇಲಿರುವ ಒಂದು ಎಸಳನ್ನು ಬಿಡದೆ ಬಿಸಾಡುವುದನ್ನು ಕಣ್ಣೆದುರು ನೋಡಿದವರಿದ್ದಾರೆ. ಆದರೆ ಭೈರಪ್ಪನವರು ತಮ್ಮ ಕಾದಂಬರಿಯಲ್ಲಿನ ಪಾತ್ರದ ಮೂಲಕ ಬಹಳ ಜಾಣತನದಿಂದ ಶೈವ- ವೈಷ್ಣವರ ಮಧ್ಯೆ ಕಲಹ ಸಾಧ್ಯವಿಲ್ಲ ಎಂದು ತರ್ಕ ಮುಂದಿಡುತ್ತಾರೆ. ಈಗ ನೋಡಿದರೆ ಮಾಧ್ವ ಮಠಗಳ ಮಧ್ಯೆಯೇ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಸ್ಮಾರ್ತ, ಮಾಧ್ವ, ವೈಷ್ಣವ ಎಂಬ ತರತಮಗಳು ಎದ್ದುಕಾಣುತ್ತಿವೆ.
ಕೆಲ ವರ್ಷದ ಹಿಂದೆ ತುಮಕೂರಿಗೆ ಒಮ್ಮೆ ಹೊಯ್ಸಳ ಕರ್ನಾಟಕ ಬ್ರಾಹ್ಮಣರ ಸಮಾವೇಶಕ್ಕೆ ಬಂದಿದ್ದ ಭೈರಪ್ಪನವರು ಘರ್ವಾಪಸಿ (ಇತರ ಧರ್ಮದಲ್ಲಿ ಇರುವ ಹಿಂದೂಗಳು ವಾಪಸ್ ಹಿಂದೂ ಧರ್ಮಕ್ಕೆ ಬರುವುದು) ಬಗ್ಗೆ ಪತ್ರಕರ್ತರ ಎದುರು ಮಾತನಾಡಿದ್ದರು. ಸರಿ ಸ್ವಾಮಿ, ಅವರು ವಾಪಸ್ ಬರುತ್ತಾರೆ. ಆದರೆ ಅವರು ಯಾವ ಜಾತಿಗೆ ಸೇರಬೇಕು, ಮದುವೆ, ಸಾಮಾಜಿಕ ಸ್ಥಿತಿಗತಿ ಏನು ಎಂದು ಕೇಳಿದ್ದಕ್ಕೆ ಆಗಲೂ ಬಹಳ ಜಾಣತನದಿಂದಲೇ ಉತ್ತರ ನೀಡಿದ್ದರು. ತಂದೆ ಹಾಗೂ ತಾಯಿ ಇಂಥಿಂಥ ಧರ್ಮಕ್ಕೆ ಸೇರಿದವರು, ಇವರ ಮಕ್ಕಳಿಗೆ ಸೂಕ್ತ ವಧು ಅಥವಾ ವರ ಹುಡುಕುತ್ತಿದ್ದಾರೆ ಎಂಬ ಜಾಹೀರಾತನ್ನು ಮೂವತ್ತು- ನಲವತ್ತು ವರ್ಷದ ಹಿಂದೆಯೇ ಅವರು ನೋಡಿದ್ದಾಗಿ ಹೇಳಿದ್ದರು. ಅಲ್ಲಿಗೆ ಮೊದಲ ಪ್ರಶ್ನೆ, ಹಿಂದೂ ಧರ್ಮಕ್ಕೆ ಬಂದಲ್ಲಿ ಯಾವ ಜಾತಿ ಎಂಬುದನ್ನು ಹಾರಿಸಿ, ನೇರವಾಗಿ ತಮಗೆ ಸುಲಭವಾದ ಪ್ರಶ್ನೆಯನ್ನು ಆರಿಸಿಕೊಂಡಿದ್ದರು ಭೈರಪ್ಪ. ಇದು ಅವರ ಸ್ವಭಾವ.
ಈ ಸಂದರ್ಭದಲ್ಲಿ ಇನ್ನೂ ಒಂದು ವಿಚಾರ ನೆನಪಿಸಿಕೊಳ್ಳಬೇಕಾಗುತ್ತದೆ. ಮೇಲುಕೋಟೆಯಲ್ಲಿ ಜೈನ ಧರ್ಮದ ಬಿಟ್ಟಿಗನು ರಾಮಾನುಜಾಚಾರ್ಯರ ಪ್ರಭಾವದಿಂದಾಗಿ ಶ್ರೀ ವೈಷ್ಣವ ದೀಕ್ಷೆ ಪಡೆಯುತ್ತಾನೆ. ಆತನ ಜತೆಗೆ ಸಾವಿರ ಮಂದಿ ಶ್ರೀವೈಷ್ಣವರಾಗುತ್ತಾರೆ. ಈ ಬಿಟ್ಟಿಗ ಯಾರು ಗೊತ್ತಾ? ಹೊಯ್ಸಳರ ರಾಜ ವಿಷ್ಣುವರ್ಧನ. ಆಗಿನ ಕಾಲದಲ್ಲಿ ಜೈನ ಧರ್ಮವನ್ನು ತೊರೆದರಲ್ಲ, ಈಗ ಜೈನ ಧರ್ಮದವರು ಘರ್ ವಾಪಸಿ ಬಗ್ಗೆ ಚಿಂತಿಸಿದರೆ ಹೇಗೆ? ಬಹುಶಃ ಭೈರಪ್ಪನವರ ಬಳಿ ಇದಕ್ಕೂ ಉತ್ತರ ಇರುತ್ತದೆ. ಭೈರಪ್ಪನವರದು ತಮಗೆ ಬೇಕಾದಂತೆ ಹಾಗೂ ತಮಗೆ ಬೇಕಾದ ವಿಷಯವನ್ನು ಮಾತ್ರ ಎತ್ತಾಡುವ ಮನಸ್ತತ್ವ ಎಂಬುದನ್ನು ಹೇಳುವುದಕ್ಕೆ ಇಷ್ಟುದ್ದ ಬರೆಯಬೇಕಾಯಿತು. ಇಲ್ಲಿರುವ ಯಾವುದೇ ಒಂದು ವಿಚಾರದ ಬಗ್ಗೆ ಆಕ್ಷೇಪ, ಅಪದ್ಧ ಅಥವಾ ಸುಳ್ಳು ಮಾಹಿತಿ ಏನಿದ್ದರೂ ಚರ್ಚೆ ಆಗಲಿ, ವಿಮರ್ಶೆ ಆಗಲಿ ಎಂಬುದು ಲೇಖಕನಾಗಿ ನನ್ನ ಆಶಯ.
ಇನ್ನಷ್ಟು ಅಭಿಮತದ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Gyanvapi Mosque: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯ ಬೆನ್ನಲ್ಲೇ ಚರ್ಚೆಗೆ ಬಂತು ಎಸ್ಎಲ್ ಭೈರಪ್ಪ ಬರೆದ ಆವರಣ ಕಾದಂಬರಿ
ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಸಾಹಿತಿ ಎಸ್ ಎಲ್ ಭೈರಪ್ಪ ಹೇಳಿದ್ದೇನು?
Published On - 4:34 pm, Fri, 3 June 22