ಸಂದೀಪ್ ಶಾಸ್ತ್ರಿ
ಚುನಾವಣಾ ಅಧ್ಯಯನ ಮತ್ತುರಾಜಕೀಯ ಶಾಸ್ತ್ರಜ್ಞ
ಉಪಕುಲಪತಿ ಜಾಗರಣ್ ಲೇಕ್ಸಿಟಿ ವಿಶ್ವವಿದ್ಯಾಲಯ, ಭೋಪಾಲ
————————————————————————
ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದ ಸರ್ಕಾರ ಎಂಟು ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ, ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ (BJP) ತನ್ನ ವಿಜಯ ಪತಾಕೆ ಹಾರಿಸುತ್ತಿರುವುದನ್ನು ಪರಾಮರ್ಶಿಸಲು ಸೂಕ್ತ ಸಮಯ ಇದಾಗಿದೆ. ಒಂದೇ ಪಕ್ಷ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸುವ ವ್ಯವಸ್ಥೆಯನ್ನು ದೇಶದಲ್ಲಿ ಕಾಣುತ್ತಿರುವಾಗ, ಬಿಜೆಪಿ ಅತ್ಯಂತ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ನಾವು ನೋಡಬಹುದು. ದೇಶದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಆದ ಪ್ರಮುಖ ರಾಜಕೀಯ ಬೆಳವಣಿಗೆಗಳಲ್ಲಿ ಬಿಜೆಪಿಯ ಈ ಬೆಳವಣಿಗೆ ಒಂದು ಮೈಲಿಗಲ್ಲಾಗಿ ನಿಂತಿದೆ. ಕರ್ನಾಟಕವನ್ನು ಹೊರತುಪಡಿಸಿ, ವಿಂಧ್ಯಾಚಲದ ದಕ್ಷಿಣ ಭಾಗದಲ್ಲಿ ಬಿಜೆಪಿಗೆ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಲು ಸಾಧ್ಯವಾಗದ್ದು ಕೂಡ ನಿಜ. ದೇಶದ ವಿವಿಧ ಭಾಗಗಳಲ್ಲಿ ಅದರ ಅಸ್ತಿತ್ವವನ್ನು ವಿವರಿಸಿದಾಗ. ಬಿಜೆಪಿಯ ಉದಯ ಮತ್ತು ಬೆಳವಣಿಗೆಯ ನಿಜವಾದ ಅರ್ಥ ಆಗಬಹುದು.
2014 ರ ಲೋಕಸಭಾ ಚುನಾವಣೆಯಲ್ಲಿ, ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಹೆಚ್ಚು ಸೀಟು ಗೆಲ್ಲುವ ಮೂಲಕ, ಬಿಜೆಪಿ ಆರಿಸಿ ಬಂತು. 2019 ರ ಚುನಾವಣೆಯನ್ನು ಗೆಲ್ಲುವ ಮೂಲಕ ತನ್ನ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು. ಉತ್ತರ ಮತ್ತು ಮಧ್ಯ ಭಾರತದಲ್ಲಿ, ತನ್ನ ಮಿತ್ರಪಕ್ಷಗಳೊಂದಿಗೆ 94% ಕ್ಕಿಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಪಡೆಯಿತು. ಈ ಪ್ರದೇಶದ ಐದು ರಾಜ್ಯಗಳಲ್ಲಿ ಎಲ್ಲಾ ಸ್ಥಾನಗಳನ್ನು ಗೆದ್ದಿದೆ. ಪಶ್ಚಿಮ ಭಾರತದಲ್ಲಿಯೂ ಅದು 2014 ರಲ್ಲಿ ಉತ್ತಮ ಸಾಧನೆ ಮಾಡಿತು ಮರಳಿ 2019 ರಲ್ಲಿ 89% ಸ್ಥಾನಗಳಲ್ಲಿ ಗೆಲುವು ಸಾಧಿಸಿ ತನ್ನ ಪ್ರಭಾವ ಉಳಿಸಿಕೊಂಡಿತು.
ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳ ವ್ಯತ್ಯಾಸವನ್ನು ಅರಿತುಕೊಂಡೇ ಜನ ಮತ ಹಾಕುತ್ತಿರುವುದನ್ನು ಗುರುತಿಸಬಹುದು. ದೆಹಲಿ, ಬಿಹಾರ, ಜಾರ್ಖಂಡ್, ಹರಿಯಾಣ, ರಾಜಸ್ಥಾನ, ಛತ್ತೀಸಗಢ್ ವಿಧಾನಸಭಾ ಚುನಾವಣೆ ನಡುವೆ ಲೋಕಸಭೆ ಚುನಾವಣೆ ಬಂದಾಗ ಜನ ಬೇರೆ ಬೇರೆ ರೀತಿಯಾಗಿ ತೀರ್ಪು ನೀಡಿರುವದನ್ನು ಗಮನಿಸಬಹುದು. ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ರಾಜ್ಯದ ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರ ಬಿಜೆಪಿ ಚುನಾವಣಾ ಹಿನ್ನಡೆಯನ್ನು ಎದುರಿಸುತ್ತಿದೆ. ಮೈತ್ರಿ ರಾಜಕಾರಣದ ಸ್ವರೂಪವು ಬದಲಾಗಿ ಬಿಜೆಪಿಯನ್ನು ವಿರೋಧ ಪಕ್ಷದಲ್ಲಿ ಕೂರಿಸಲು ಕಾರಣವಾದ ಮಹಾರಾಷ್ಟ್ರದಲ್ಲಿ ನಡೆದ ಬೆಳವಣಿಗೆಯುಕೂಡಾ ಕುತೂಹಲಕಾರಿಯಾಗಿದೆ.
2019 ರ ಲೋಕಸಭೆಯ ತೀರ್ಪಿನ ವಿಶ್ಲೇಷಣೆಯನ್ನು ನೋಡಿದಾಗ ಈ ಚುನಾವಣೆಯು ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಬಿಜೆಪಿಯ ಆಗಮನವನ್ನು ಸೂಚಿಸುತ್ತದೆ. ಈಶಾನ್ಯದಲ್ಲಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 70% ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದವು ಮತ್ತು ಆ ಪ್ರದೇಶದ ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದವು. ಪಶ್ಚಿಮ ಬಂಗಾಳದಲ್ಲಿ, 2019 ರ ಲೋಕಸಭೆ ಚುನಾವಣೆ ಮತ್ತು ನಂತರದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ತೃಣಮೂಲ ಕಾಂಗ್ರೆಸ್‌ಗೆ ಪ್ರಮುಖ ಸವಾಲಾಗಿ ಹೊರಹೊಮ್ಮಿತು. ಒಡಿಶಾದಲ್ಲಿ ಬಿಜೆಡಿಗೆ ಪ್ರಮುಖ ಎದುರಾಳಿಯಾಗಿ ಹೊರಹೊಮ್ಮಿದ ಬಿಜೆಪಿ ಕಾಂಗ್ರೆಸ್ನ್ನು ಮೂರನೇ ಸ್ಥಾನಕ್ಕೆ ತಳ್ಳಿತು.
ದಕ್ಷಿಣ ಭಾರತದಲ್ಲಿ ಬಿಜೆಪಿಯ ಬೆಳವಣಿಗೆಯ ಸಂಕಥನ ವಿಭಿನ್ನ ನಿರೂಪಣೆಯನ್ನು ಹೊಂದಿದೆ. ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ, 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರತಿ ನಾಲ್ಕು ಸ್ಥಾನಗಳಲ್ಲಿ ಒಂದನ್ನು (25%) ಗೆದ್ದಿತು. ಇನ್ನು ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಆಗಲಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಚುನಾವಣಾ ಮಿತ್ರ ಪಕ್ಷ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೇರಳದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಖಾತೆಯನ್ನು ತೆರೆಯಲು ವಿಫಲವಾಗಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಮೈತ್ರಿ (ಬಿಜೆಪಿ ಅದರ ಭಾಗವಾಗಿತ್ತು) ವಿರೋಧ ಪಕ್ಷದಲ್ಲಿದೆ. ಪುದುಚೇರಿಯಲ್ಲಿ, ಬಿಜೆಪಿಯು ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿಕೊಂಡು ಚುನಾವಣೆಯ ನಂತರ ಸರ್ಕಾರವನ್ನು ರಚಿಸಿತು. ದಕ್ಷಿಣ ಭಾರತದಲ್ಲಿ ಬಿಜೆಪಿ ಸಾಧಿಸಿರುವ ನಿಜವಾದ ಪ್ರಗತಿ ಕರ್ನಾಟಕದಲ್ಲಿ ಮಾತ್ರ. ರಾಜ್ಯದಲ್ಲಿ ಇಂದು ಅಧಿಕಾರದಲ್ಲಿರುವ ಬಿಜೆಪಿ, ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲೂ ರಾಜ್ಯದಿಂದ ಉತ್ತಮ ಸಾಧನೆ ಮಾಡಿದೆ. ವಾಸ್ತವವಾಗಿ, 2019 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿನ ಗೆಲುವನ್ನು ದಕ್ಷಿಣ ಭಾರತದ ಲೆಕ್ಕಾಚಾರದಿಂದ ಹೊರತೆಗೆದರೆ, ಪಕ್ಷವು ಈ ಪ್ರದೇಶದಲ್ಲಿ ಕೇವಲ 5% ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿದೆ. ಕರ್ನಾಟಕದಲ್ಲಿ ಬಿಜೆಪಿಯು ದೇಶದ ಉಳಿದ ಭಾಗಗಳ ಸಂಘಟನೆಗಿಂತ ಭಿನ್ನವಾಗಿದೆ. 1990 ರ ದಶಕದ ಮಧ್ಯಭಾಗದವರೆಗೆ ಬಿಜೆಪಿಯು ರಾಜ್ಯದ ರಾಜಕೀಯದಲ್ಲಿ ಮೂರನೇ ಸ್ಥಾನದಲ್ಲಿತ್ತು. ಅಲ್ಲಿಯವರೆಗೆ ಸ್ಪರ್ಧೆಯು ಮುಖ್ಯವಾಗಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಇತ್ತು- ಕಾಂಗ್ರೆಸ್ ಮತ್ತು ಜನತಾ ಪಕ್ಷ/ ಜನತಾ ದಳ. ಜನತಾ ದಳದಲ್ಲಿನ ಒಡಕು ಮತ್ತು ರಾಮಕೃಷ್ಣ ಹೆಗಡೆಯವರ ಲೋಕಶಕ್ತಿ ಮತ್ತು ಬಿಜೆಪಿ ನಡುವಿನ ಮೈತ್ರಿಯಿಂದಾಗಿ, ಕೇಸರಿ ಪಕ್ಷವು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪ್ರಮುಖ ಸವಾಲಾಗಿ ಹೊರಹೊಮ್ಮಲು ಹಾದಿಯನ್ನು ಸುಗಮಗೊಳಿಸಿ ಕೊಟ್ಟಿತು. ಎರಡು ಪಕ್ಷಗಳ ಸ್ಪರ್ಧೆಯಲ್ಲಿ, ಜೆಡಿಎಸ್ (ಎಸ್) ಮೂರನೇ ಸ್ಥಾನಕ್ಕೆ ಇಳಿದಿದೆ.
ದಕ್ಷಿಣ ಭಾರತದ ಉಳಿದ ಭಾಗಗಳಲ್ಲಿ, ತನಗೊಂದು ಭದ್ರ ನೆಲೆ ಕಂಡುಕೊಳ್ಳಲು ಬಿಜೆಪಿಗೆ ಕಷ್ಟಕರವಾಗಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ, ಎರಡೂ ಪ್ರಾದೇಶಿಕ ಪಕ್ಷಗಳ ನಡುವೆ ಪ್ರಬಲ ಪೈಪೋಟಿಯಿದೆ. ಬಿಜೆಪಿಯು ಈ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ತೃಪ್ತಿಪಡಬೇಕಾಗಿದೆ. ತಮಿಳುನಾಡಿನಲ್ಲಿ ಬಿಜೆಪಿಯು ಇತಿಹಾಸದ ಬೇರೆ ಬೇರೆ ಕಾಲಘಟ್ಟದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಮತ್ತು ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಮೂಲಭೂತವಾಗಿ ಮೈತ್ರಿಯಲ್ಲಿ ಕಿರಿಯ ಪಾಲುದಾರರಾಗಿದ್ದ ಕಾರಣದಿಂದಾಗಿ, ಬಿಜೆಪಿಗೆ ಪ್ರತ್ಯೇಕ ರಾಜಕೀಯ ಗುರುತನ್ನು ರಚಿಸಲು ಸಾಧ್ಯವಾಗಲಿಲ್ಲ. ಅಂತೆಯೇ, ಕೇರಳದಲ್ಲಿ, ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವಿನ ಗಟ್ಟಿಮುಟ್ಟಾದ ಪೈಪೋಟಿಯಲ್ಲಿ ಗಮನಾರ್ಹವಾದ ಚುನಾವಣಾ ಯಶಸ್ಸನ್ನು ಕಾಣಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ಅದರ ಮತಗಳ ಪ್ರಮಾಣ ಹೆಚ್ಚಿದ್ದರೂ ಅದನ್ನು ಸೀಟುಗಳಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. ಕರ್ನಾಟಕದ ಜೊತೆಗೆ ಬಿಜೆಪಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಆಶಯ ಹೊಂದಿರುವ ಮತ್ತೊಂದು ರಾಜ್ಯ ತೆಲಂಗಾಣ. ಇದು ಈಗಾಗಲೇ ಆಡಳಿತಾರೂಢ ಟಿಆರ್‌ಎಸ್‌ಗೆ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಟಿಆರ್‌ಎಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ವೈಷಮ್ಯವು ರಾಜ್ಯದಲ್ಲಿರುವ ಪೈಪೋಟಿಯನ್ನು ಸೂಚಿಸುತ್ತದೆ. ದೇಶದ ಯಾವುದಾದರೂ ಭಾಗದಲ್ಲಿ ಬಿಜೆಪಿ ತನ್ನ ಬಲವರ್ಧನೆಗೆ ಹೆಚ್ಚು ಒತ್ತು ನೀಡಬೇಕೆಂದರೆ ಅದು ದಕ್ಷಿಣ ರಾಜ್ಯಗಳು. ದೇಶದೆಲ್ಲೆಡೆ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವ ಅದರ ಆಕಾಂಕ್ಷೆಯಲ್ಲಿ, ದಕ್ಷಿಣ ಭಾರತದಲ್ಲಿ ಅದರ ಚುನಾವಣಾ ವಿಸ್ತರಣೆಯು ಪ್ರಮುಖವಾಗಿದೆ ಎಂಬುದು ಸ್ಪಷ್ಟವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಬಿಜೆಪಿಯು ಈ ನಿಟ್ಟಿನಲ್ಲಿ ಹೇಗೆ ಸಂಘಟಿತ ಪ್ರಯತ್ನವನ್ನು ಮಾಡಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Sat, 28 May 22