ರಾಜಕೀಯ ವಿಶ್ಲೇಷಣೆ: ಮಧ್ಯಂತರ ಚುನಾವಣೆಗೆ ಹೋಗಲು ಜನಪ್ರಿಯ ಬಜೆಟ್ ಕೊಟ್ರಾ ಯಡಿಯೂರಪ್ಪ?

| Updated By: ರಾಜೇಶ್ ದುಗ್ಗುಮನೆ

Updated on: Mar 08, 2021 | 9:50 PM

ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಇದೆ. ಅದಕ್ಕೆ ಎರಡು ವರ್ಷಕ್ಕೆ ಮುಂಚಿತವಾಗಿಯೇ ಜನಪ್ರಿಯ ಬಜೆಟ್ ನೀಡಿದ ಬಿ.ಎಸ್.ಯಡಿಯೂರಪ್ಪ ನೀಡಿರುವ ಗುಟ್ಟೇನು ಎಂಬ ಸಂಗತಿ ಇಲ್ಲಿದೆ.

ರಾಜಕೀಯ ವಿಶ್ಲೇಷಣೆ: ಮಧ್ಯಂತರ ಚುನಾವಣೆಗೆ ಹೋಗಲು ಜನಪ್ರಿಯ ಬಜೆಟ್ ಕೊಟ್ರಾ ಯಡಿಯೂರಪ್ಪ?
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
Follow us on

ಬೆಂಗಳೂರು: ‘ಕರ್ನಾಟಕದಲ್ಲಿ 2023ಕ್ಕೆ ವಿಧಾನಸಭೆ ಚುನಾವಣೆ ಇದೆ. ಆದರೆ ಈಗಿನ ಬಜೆಟ್ ನೋಡಿದರೆ ಐದು ರಾಜ್ಯಗಳ ಚುನಾವಣೆ ನಂತರ ಯಾವಾಗ ಬೇಕಾದರೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಬಹುದು ಎಂದೆನಿಸುತ್ತದೆ’ ಎನ್ನುತ್ತಲೇ ಮಾತಿಗೆ ಶುರು ಮಾಡಿದರು ಆ ರಾಜಕೀಯ ವಿಶ್ಲೇಷಕ. ಅವರಿಗೆ ಹಾಗೆ ಹೇಳುವದಕ್ಕೂ ಸಾಕಷ್ಟು ಕಾರಣಗಳಿದ್ದವು. ಏಕೆಂದರೆ, ರಾಜ್ಯದಲ್ಲಿ ಕೊರೊನಾ ಸಂಕಷ್ಟ ಇರುವಾಗಲೂ ಮಠ- ಮಾನ್ಯಗಳಿಗೆ, ಜಾತಿವಾರು, ಧರ್ಮದ ಲೆಕ್ಕದಲ್ಲಿ ಹಣವನ್ನು ಮೀಸಲಿಡುವುದು ರಾಜಕಾರಣಿಯ ಚುನಾವಣೆ ಲೆಕ್ಕಾಚಾರವೇ ಹೊರತು ಮತ್ತೇನೂ ಅಲ್ಲ ಎಂದು ಅವರು ಹೇಳಿದರು.

ಇನ್ನು ಈ ಬಗ್ಗೆ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ಅವರು ಟಿವಿ9ಕನ್ನಡ ವೆಬ್ ಜತೆಗೆ ಮಾತನಾಡಿ, ‘ಕಳೆದ ಸಲದ ಬಜೆಟ್​ಗೆ ಹೋಲಿಸಿದರೆ ಗಾತ್ರದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ ಅನ್ನೋದು ಬಿಟ್ಟರೆ ಯಾವುದೇ ಬದಲಾವಣೆ ಕಾಣಲ್ಲ. ಇದೊಂದು ಸಪ್ಪೆ ಬಜೆಟ್. ಬಂಡವಾಳ ಇಲ್ಲದ ಬಜೆಟ್. ಇನ್ನೂ ಮುಂದುವರಿದು ಹೇಳಬೇಕು ಅಂದರೆ ರಾಜಕಾರಣಿಯೊಬ್ಬರ ಬಜೆಟ್ ಹೊರತು ಮುತ್ಸದ್ದಿ ಬಜೆಟ್ ಅಲ್ಲ. ಇದರಲ್ಲಿ ಸಮಗ್ರ ದೃಷ್ಟಿಕೋನವೂ ಇಲ್ಲ ಹಾಗೂ ದೂರದರ್ಶಿತ್ವವೂ ಇಲ್ಲ’ ಎಂದು ಅವರು ಹೇಳಿದರು.

ವಿಜಯೇಂದ್ರರನ್ನು ಅಧಿಕಾರಕ್ಕೆ ಏರಿಸುವ ಲೆಕ್ಕಾಚಾರ
ಆದರೆ, ಯಡಿಯೂರಪ್ಪನವರು ಈಗ ಯಾರನ್ನು ಓಲೈಸಬೇಕಿದೆ ಹಾಗೂ ಆದಾಯವೇ ಸಂದಿಗ್ಧ ಇರುವಾಗ ಯಾಕೆ ಇಂಥ ಖರ್ಚುಗಳನ್ನು ಮಾಡುತ್ತಾರೆ ಅನ್ನೋ ಪ್ರಶ್ನೆಯನ್ನು ಬೆನ್ನಟ್ಟಿ ಹೊರಟರೆ ದೊರೆಯುವ ಉತ್ತರಗಳು ಆಸಕ್ತಿಕರವಾಗಿವೆ. ಮುಂದಿನ ಚುನಾವಣೆಗೂ ತಮ್ಮದೇ ನೇತೃತ್ವದಲ್ಲಿ ಜನರ ಮುಂದೆ ಹೋಗಬೇಕು ಅನ್ನೋದು ಬಿಎಸ್​ವೈ ಮೊದಲ ಆಲೋಚನೆ. ಎಷ್ಟು ಸಮಯ ತಮ್ಮಿಂದ ಆಡಳಿತ ನಡೆಸುವುದಕ್ಕೆ ಸಾಧ್ಯವೋ ಅಷ್ಟು ಸಮಯ ತಾವು ಮುನ್ನಡೆಸುವುದು ಹಾಗೂ ಆನಂತರ ತಮ್ಮ ಮಗ ವಿಜಯೇಂದ್ರರನ್ನು ಅಧಿಕಾರಕ್ಕೆ ಏರಿಸುವುದು ಅವರ ಗುರಿ. ಒಂದು ವೇಳೆ ಇದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪದಿದ್ದಲ್ಲಿ ಪಕ್ಷವನ್ನು ಒಡೆಯಲು ಸಿದ್ಧವಿದ್ದಾರೆ. ವಿವಿಧ ಸಮುದಾಯಗಳ ಮಠಗಳಿಗೆ ಹಣ ನೀಡುತ್ತಿದ್ದಾರೆ ಹಾಗೂ ಈ ಸಲ ಯಾವುದೇ ತೆರಿಗೆ ಹಾಕದೆ ರಾಜ್ಯದ ಜನರ ಎದುರು ಗೆಲುವು ಸಾಧಿಸಿದ್ದಾರೆ ಎನ್ನುತ್ತವೆ ಕೇಸರಿ ಪಕ್ಷದೊಳಗಿನ ಮೂಲಗಳು.

ಈ ಹಿಂದೆ ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿ, ಬಿಎಸ್​ವೈ ಅಧಿಕಾರಕ್ಕೆ ಬಂದರಲ್ಲಾ ಆಗ ನಾಲ್ಕು ದಿನಗಳ ಕಾಲ ಸಂಪುಟ ರಚನೆಗೆ ಹೈಕಮಾಂಡ್​ನಿಂದ ಯಾವುದೇ ಸೂಚನೆ ಬರಲಿಲ್ಲ. ಆಗ ಜಗದೀಶ್ ಶೆಟ್ಟರ್, ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಹಾಗೂ ಮಾಧುಸ್ವಾಮಿ ಈ ನಾಲ್ಕು ಮಂದಿ ಹೈಕಮಾಂಡ್ ಜತೆ ಮಾತುಕತೆ ನಡೆಸಲು ಹೋದಾಗ ಆ ಕಡೆಯಿಂದ ಯಾವ ಪ್ರತಿಕ್ರಿಯೆಯೂ ಸಿಕ್ಕಿರಲಿಲ್ಲ. ಆಗ ಮಧ್ಯಂತರ ಚುನಾವಣೆಗೆ ಹೋಗುವುದೇ ವರಿಷ್ಠರ ಆಯ್ಕೆಯಾಗಿತ್ತು. ಆದರೆ ದೆಹಲಿ ನಾಯಕರಿಗೆ ಫೋನ್ ಮಾಡಿದ ಯಡಿಯೂರಪ್ಪ ಬೆದರಿಕೆ ಹಾಕಿದ್ದರು. ಒಂದು ವೇಳೆ ನೀವು ಒಪ್ಪದಿದ್ದಲ್ಲಿ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದಿದ್ದರು. ನಿರ್ವಾಹ ಇಲ್ಲದೆ ದೆಹಲಿ ನಾಯಕರು ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ತೋರಿಸಿ, ಸುಮ್ಮನಾದರು ಎಂದು ಬಿಜೆಪಿಯ ಉನ್ನತ ಮೂಲಗಳೇ ತಿಳಿಸುತ್ತವೆ.

ಪ್ರತಿ ಹಂತದಲ್ಲೂ ಹೈಕಮಾಂಡ್​​ನ ಹೆದರಿಸುತ್ತಲೇ ಬಂದಿದ್ದಾರೆ
ಪ್ರತಿ ಹಂತದಲ್ಲೂ ಯಡಿಯೂಪ್ಪನವರು ಹೈಕಮಾಂಡ್ ಅನ್ನು ಹೆದರಿಸುತ್ತಲೇ ಬಂದಿದ್ದಾರೆ. ಒಂದು ವೇಳೆ ಅವರನ್ನು ಪಕ್ಕಕ್ಕೆ ಸರಿಸಿದರೆ ದಕ್ಷಿಣ ಭಾರತದಲ್ಲಿ ಅಧಿಕಾರಲ್ಲಿ ಇರುವ ದೊಡ್ಡ ರಾಜ್ಯವೊಂದು ಕೈ ತಪ್ಪಿಹೋಗುತ್ತದೆ, ಪಕ್ಷ ಹೋಳಾಗುತ್ತದೆ ಎಂಬ ಕಾರಣಕ್ಕೆ ವರಿಷ್ಠರು ಸಹ ಸಹಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಈ ಸಲ ರಾಜ್ಯ ಬಿಜೆಪಿ ವಿರುದ್ಧ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿದೆ. ಇನ್ನು ಕಳೆದ ಹಲವು ದಿನಗಳಿಂದಲೇ ಬಸನಗೌಡ ಪಾಟೀಲ್ ಯತ್ನಾಳ್ ಅವರಂಥವರು ಸಿ.ಡಿ. ಇದೆ ಎನ್ನುತ್ತಿದ್ದರು. ಕೊನೆಗೆ ರಮೇಶ್ ಜಾರಕಿಹೊಳಿ ಸಿ.ಡಿ. ಹಗರಣ ಆಚೆ ಬಂದು, ಬಿಜೆಪಿಗೆ ತೀವ್ರ ಮುಜುಗರ ಆಗಿದೆ. ಈ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ನೀಡಿ, ಪಂಚರಾಜ್ಯಗಳ ಚುನಾವಣೆ ನಂತರ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ಹೋಗುವ ಲೆಕ್ಕಾಚಾರವೂ ಇದರ ಹಿಂದಿರಬಹುದು ಅಂತಲೂ ಮಾತು ಚಾಲ್ತಿಯಲ್ಲಿದೆ.

ಇನ್ನು ರಾಜ್ಯದಲ್ಲಿ ನಡೆಯಬೇಕಿರುವ ಉಪಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸಹ ಇಂಥದ್ದೊಂದು ಬಜೆಟ್ ಮಂಡನೆ ಆಗಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ: BS Yediyurappa Profile: ಕರ್ನಾಟಕ ರಾಜಕಾರಣದಲ್ಲಿ ‘ಬ್ರ್ಯಾಂಡ್’ ಹುಟ್ಟುಹಾಕಿದ ಯಡಿಯೂರಪ್ಪ ವ್ಯಕ್ತಿಚಿತ್ರ

ಇದನ್ನೂ ಓದಿ: Karnataka Budget 2021: ಕರ್ನಾಟಕ ಬಜೆಟ್ 2021; ಇಲ್ಲಿದೆ ಸಮಗ್ರ ಮಾಹಿತಿ

Published On - 8:51 pm, Mon, 8 March 21