ಬುಧವಾರ, ಆಗಸ್ಟ್ 23ರಂದು, ಭಾರತೀಯ ಕಾಲಮಾನ ಸಂಜೆ 6:04ಕ್ಕೆ ಸರಿಯಾಗಿ ಭಾರತ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಜಗತ್ತಿನ ಕೇವಲ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ತನ್ನ ಚಂದ್ರಯಾನ-3 (Chandrayaan-3) ಯೋಜನೆಯಲ್ಲಿ ಭಾರತ ಒಂದು ರೋವರ್ ಅನ್ನು ಸವಾಲಿನ ಮೇಲ್ಮೈ ಹೊಂದಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಸಫಲವಾಯಿತು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಕಷ್ಟು ಕುಳಿಗಳು, ಬಂಡೆಗಳು ಇರುವುದರಿಂದ ಅದು ಅತ್ಯಂತ ಸವಾಲಿನ ಪ್ರದೇಶವಾಗಿದ್ದು, ಅಲ್ಲಿ ಲ್ಯಾಂಡಿಂಗ್ ನಡೆಸಿರುವುದು ಅಸಾಧಾರಣ ಸಾಧನೆಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ನಡೆಸುವ ಉದ್ದೇಶ ಹೊಂದಿದ್ದ ರಷ್ಯಾದ ಚಂದ್ರ ಅನ್ವೇಷಣಾ ಯೋಜನೆ ಲೂನಾ-25 ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಪತನಗೊಂಡು, ವೈಫಲ್ಯ ಅನುಭವಿಸಿದ ಕೆಲ ದಿನಗಳ ಅವಧಿಯಲ್ಲಿ ಭಾರತದ ಚಂದ್ರಯಾನ-3 ಈ ಸಾಧನೆ ಮೆರೆಯಿತು.
ಈ ಎರಡೂ ಯೋಜನೆಗಳು ಬಾಹ್ಯಾಕಾಶದಲ್ಲಿ ಒಂದು ಹೊಸ ಸ್ಪರ್ಧೆಯನ್ನು ಆರಂಭಿಸಿವೆ. ಕಳೆದ ಕೆಲ ವರ್ಷಗಳಲ್ಲಿ, ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳು, ಲಾಭರಹಿತ ಸಂಸ್ಥೆಗಳು, ಹಾಗೂ ರಷ್ಯಾ, ಭಾರತ, ಇಸ್ರೇಲ್, ಹಾಗೂ ಜಪಾನಿನ ವಿವಿಧ ಸಂಸ್ಥೆಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಲು ವಿಫಲ ಪ್ರಯತ್ನಗಳನ್ನು ನಡೆಸಿದ್ದವು. ಗಮನಾರ್ಹ ವಿಚಾರವೆಂದರೆ, ಅಮೆರಿಕಾ ಮತ್ತು ಚೀನಾಗಳು ಸಹ ತಮ್ಮ ಮುಂದಿನ ಯೋಜನೆಗಳಲ್ಲಿ ಚಂದ್ರ ಅನ್ವೇಷಣೆ ನಡೆಸುವ ಗುರಿ ಹೊಂದಿವೆ. ಈ ದೇಶಗಳು ಮತ್ತು ಸಂಸ್ಥೆಗಳು ಚಂದ್ರನ ಅನ್ವೇಷಣೆಯಲ್ಲಿ ಆಸಕ್ತಿ ಹೊಂದಿದ್ದು, ಔದ್ಯಮಿಕ ಅಥವಾ ವಾಣಿಜ್ಯಿಕವಾಗಿ ಪ್ರಯೋಜನ ಪಡೆಯುವ ಉದ್ದೇಶಗಳನ್ನು ಹೊಂದಿವೆ. ಚಂದ್ರನ ಮೇಲ್ಮೈಯಲ್ಲಿರುವ ಸಂಪನ್ಮೂಲಗಳು ಭೂಮಿಯಲ್ಲೂ ಅವಶ್ಯಕವಾಗಿದ್ದು, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಇನ್ನಷ್ಟು ಮುಂದಕ್ಕೆ ಸಾಗುವ ಸಾಮರ್ಥ್ಯವನ್ನು ಅವುಗಳು ವೃದ್ಧಿಸಲಿವೆ.
ಆದರೆ, ಬಾಹ್ಯಾಕಾಶದಲ್ಲಿ ಈ ವಿನೂತನ ಸ್ಪರ್ಧೆ ಒಂದು ಅನುದ್ದೇಶಿತ ಫಲಿತಾಂಶಕ್ಕೆ, ತೊಂದರೆಗೆ ಹಾದಿ ಮಾಡಿಕೊಡಬಲ್ಲದು. ಅದೆಂದರೆ, ಚಂದ್ರನ ಮೇಲೆ ಇಳಿಯಲು ಅಪಾರ ಪ್ರಮಾಣದ ಯೋಜನೆಗಳು ಹೆಚ್ಚಾದಂತೆ, ಚಂದ್ರನ ಮೇಲ್ಮೈಯಲ್ಲಿ ನಾವು ತ್ಯಜಿಸಿದ ಯೋಜನಾ ಅವಶೇಷಗಳು, ತ್ಯಾಜ್ಯಗಳು ತುಂಬಬಹುದು. ಈಗಾಗಲೇ ವೈಫಲ್ಯ ಕಂಡ ಲೂನಾ-25 ಯೋಜನೆಯ ಅವಶೇಷಗಳು ಶಾಶ್ವತವಾಗಿ ಚಂದ್ರನ ಮೇಲ್ಮೈಯಲ್ಲಿ ಉಳಿಯಲಿವೆ. ಆದರೆ, ಇಂತಹ ಸ್ಥಿತಿಯಲ್ಲಿ ಕೇವಲ ಲೂನಾ-25ರ ತ್ಯಾಜ್ಯಗಳು ಮಾತ್ರವೇ ಉಳಿದಿಲ್ಲ! ಚಂದ್ರನ ಮೇಲ್ಮೈಯಲ್ಲಿ ಅವಶೇಷಗಳನ್ನು ಉಳಿಸುವ ಪ್ರಕ್ರಿಯೆ ಬಹುತೇಕ 1969ರಿಂದಲೇ ಆರಂಭಗೊಂಡಿದೆ. ಆ ಅವಧಿಯಲ್ಲಿ, ಸೋವಿಯತ್ ಒಕ್ಕೂಟದ ಲೂನಾ-2 ಯೋಜನೆ ಉದ್ದೇಶಪೂರ್ವಕವಾಗಿ ಚಂದ್ರನ ಮೇಲ್ಮೈಯಲ್ಲಿ ಪತನಗೊಂಡಿತು. ಅದು ಚಂದ್ರನ ಮೇಲ್ಮೈಗೆ ಬಂದ ಮೊದಲ ಮಾನವ ನಿರ್ಮಿತ ವಸ್ತುವಾಗಿತ್ತು. ಅದಾದ ಬಳಿಕ, ವಿವಿಧ ಸಂದರ್ಭಗಳಲ್ಲಿ, 50ಕ್ಕೂ ಹೆಚ್ಚು ರಾಕೆಟ್ ಬೂಸ್ಟರ್‌ಗಳು ಚಂದ್ರನ ಮೇಲ್ಮೈಯಲ್ಲಿ ಬಿದ್ದಿವೆ.
ಈ ರಾಕೆಟ್ ಬೂಸ್ಟರ್‌ಗಳು ಮಾತ್ರವಲ್ಲದೆ, ವಿವಿಧ ಬಾಹ್ಯಾಕಾಶ ಯೋಜನೆಗಳೂ ಚಂದ್ರನ ಮೇಲೆ ಮಾನವ ಸಂಬಂಧಿ ವಸ್ತುಗಳನ್ನು ಉಳಿಸಿವೆ. ಅದರಲ್ಲಿ ಎರಡು ಗಾಲ್ಫ್ ಚೆಂಡುಗಳು, ಅಂದಾಜು ಹನ್ನೆರಡು ಬೂಟುಗಳು, ಏರ್ ಫೋರ್ಸ್ ಅಕಾಡೆಮಿಯ ಫಾಲ್ಕನ್ ಮಾಸ್ಕಟ್‌ನ ಒಂದು ಗರಿ, ಮಲ, ಮೂತ್ರ, ವಾಂತಿ ಮತ್ತಿತರ ಮಾನವ ತ್ಯಾಜ್ಯಗಳನ್ನು ಹೊಂದಿರುವ ನೂರಕ್ಕೂ ಹೆಚ್ಚು ಚೀಲಗಳು ಸೇರಿವೆ.
ಒಟ್ಟಾರೆಯಾಗಿ, ಚಂದ್ರಮ ಮೇಲ್ಮೈಯಲ್ಲಿ 181,437 ಕೆಜಿಗಳಷ್ಟು ಮಾನವ ಸಂಬಂಧಿ, ಮಾನವ ನಿರ್ಮಿತ ವಸ್ತುಗಳಿವೆ. ಅದರೊಡನೆ, ಹಲವು ಡಜನ್ ರಾಕೆಟ್‌ಗಳು, ಉಪಗ್ರಹಗಳು, ಹಾಗೂ ವಿವಿಧ ಯೋಜನೆಗಳ ಬಿಡಿಭಾಗಗಳು ಭೂಮಿ ಮತ್ತು ಚಂದ್ರರ ನಡುವಿನ ಬಾಹ್ಯಾಕಾಶದಲ್ಲಿವೆ. ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ, ತಮ್ಮ ಗುರಿಗಳನ್ನು ಈಡೇರಿಸುವ ಯೋಜನೆಗಳೂ ಸಹ ಚಂದ್ರನ ಮೇಲೆ ತಮ್ಮ ಅವಶೇಷಗಳನ್ನು ಬಿಡುತ್ತವೆ. ಕಾಲ ಕಳೆದಂತೆ, ಚಂದ್ರ ಕಾರ್ಯಾಚರಣೆ ಸ್ಥಗಿತಗೊಳಿಸಿದ ರೋಬಾಟಿಕ್ ಉಪಕರಣಗಳ ತಾಣವಾಗಿ ರೂಪುಗೊಳ್ಳಬಹುದು.
ಚಂದ್ರನ ಅಂಗಳದ ಕುರಿತ ಆಸಕ್ತಿ ಹೆಚ್ಚಾಗುತ್ತಿರುವಂತೆ, ಮುಂದಿನ ದಿನಗಳಲ್ಲಿ ಚಂದ್ರನ ಸುತ್ತಲೂ ಹಾಗೂ ಚಂದ್ರನ ಮೇಲೆ ಈ ರೀತಿಯ ತ್ಯಾಜ್ಯಗಳು ಇನ್ನಷ್ಟು ಹೆಚ್ಚಾಗುತ್ತಾ ಹೋಗಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ, ಚಂದ್ರನ ಮೇಲ್ಮೈಯನ್ನು ಸ್ವಚ್ಛಗೊಳಿಸಲು ಯಾವುದೇ ನಿರ್ದಿಷ್ಟ ಯೋಜನೆಗಳು ಸದ್ಯಕ್ಕಂತೂ ನಮ್ಮ ಮುಂದಿಲ್ಲ. ಈ ತ್ಯಾಜ್ಯಗಳನ್ನು ಚಂದ್ರನ ಮೇಲಿಂದ ತೆಗೆಯಲು ಇನ್ನಷ್ಟು ಬಾಹ್ಯಾಕಾಶ ನೌಕೆಗಳನ್ನು ಚಂದ್ರನ ಮೇಲಕ್ಕೆ ಕಳುಹಿಸಬೇಕಾಗಿ ಬರಬಹುದು. ಅದು ಅಪಾರ ವೆಚ್ಚದಾಯಕವಾಗಿದ್ದು, ಅದಕ್ಕಾಗಿ ಮಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಒಂದು ವೇಳೆ ಈ ಯೋಜನೆಗಳು ಯಶಸ್ವಿಯಾಗದಿದ್ದರೆ, ಈ ತ್ಯಾಜ್ಯಗಳು ಇನ್ನಷ್ಟು ಹೆಚ್ಚಾಗಲೂಬಹುದು.
ಚಂದ್ರನ ಮೇಲ್ಮೈ ಇಲ್ಲಿಯತನಕ ಅತ್ಯಂತ ಸ್ವಚ್ಛ ಸಮಯದ ಕ್ಯಾಪ್ಸೂಲ್ ರೀತಿಯಲ್ಲಿತ್ತು. ಚಂದ್ರನ ಮೇಲ್ಮೈ ಸೌರಮಂಡಲದ ಕುರಿತಾದ ಹಲವು ಪ್ರಶ್ನೆಗಳಿಗೆ ಉತ್ತರ ಪೂರೈಸುತ್ತಿತ್ತು. ಆದರೆ, ಈ ‘ಸ್ವಚ್ಛ’ ಸ್ಥಿತಿ ಶಾಶ್ವತವಾಗಿ ಬದಲಾಗುವ ಸಾಧ್ಯತೆಗಳು ನಮ್ಮ ಮುಂದಿವೆ. ಭವಿಷ್ಯದ ಸಾಧ್ಯತೆಗಳನ್ನು ಅವಲೋಕಿಸಿದರೆ, ಕಾಲಕ್ರಮೇಣ ಚಂದ್ರನ ಮೇಲ್ಮೈ ಹಾದಿ ತಪ್ಪಿದ ಚಂದ್ರ ಅನ್ವೇಷಣಾ ಯೋಜನೆಗಳ, ತ್ಯಜಿಸಿದ ರೋಬೋಟ್‌ಗಳ, ಹಾಗೂ ತ್ಯಜಿಸಿದ ಬಿಡಿಭಾಗಗಳ ರುದ್ರಭೂಮಿಯಾಗಿ ಪರಿಣಮಿಸುವ ದಿನಗಳು ಕಣ್ಣ ಮುಂದಿವೆ. ಅದರೊಡನೆ, ಚಂದ್ರನ ಸುತ್ತಲಿನ ಕಕ್ಷೆಯೂ ಅವಶೇಷಗಳಿಂದ ತುಂಬಿದರೆ, ಆಗ ರಾತ್ರಿಯ ವೇಳೆ ಆಕಾಶದ ಸ್ಪಷ್ಟತೆ ಕಡಿಮೆಯಾಗಿ, ಬರಿಗಣ್ಣಿಗೆ ಮತ್ತು ಖಗೋಳಶಾಸ್ತ್ರಜ್ಞರ ಟೆಲಿಸ್ಕೋಪ್ ವೀಕ್ಷಣೆಯ ನಡುವೆ ಹೇಳಿಕೊಳ್ಳುವ ವ್ಯತ್ಯಾಸ ಕಾಣದಾಗುವ ಸವಾಲು ಎದುರಾದರೆ?
ಈ ಹಿಂದೆ ನಾವು ಸಮುದ್ರವನ್ನು ವಿಶಾಲವಾದ, ಸಮೃದ್ಧವಾದ ಪರಿಸರವಾಗಿ ಪರಿಗಣಿಸುತ್ತಿದ್ದೆವು. ಆದರೆ ಇಂದು ಸಮುದ್ರದ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಸಮುದ್ರಗಳಲ್ಲಿ ಮೈಕ್ರೋ ಪ್ಲಾಸ್ಟಿಕ್‌ಗಳು ತುಂಬಿ ಹೋಗಿವೆ. ಅದೇ ರೀತಿ, ಯಾವುದೇ ಸೂಕ್ತ ನೀತಿ ನಿಯಮಗಳಿಲ್ಲದಿದ್ದರೆ, ಸಮುದ್ರದ ರೀತಿಯಲ್ಲೇ ಬಾಹ್ಯಾಕಾಶವೂ ಸ್ವಚ್ಛವಾಗಿರುವುದು ಕಷ್ಟಕರವಾಗಬಹುದು.
ಇದನ್ನೂ ಓದಿ: ಚಂದ್ರನಂಗಳದ ವಿಜಯದಿಂದ ಸೂರ್ಯ ಅನ್ವೇಷಣೆಯಡೆಗೆ: ಆದಿತ್ಯ-ಎಲ್1 ನೊಂದಿಗೆ ಮುಂದುವರಿಯಲಿದೆ ಭಾರತದ ಜೈತ್ರಯಾತ್ರೆ
ಸದ್ಯದ ಪರಿಸ್ಥಿತಿಯಲ್ಲಿ ನಾವು ಚಂದ್ರನ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸದಿದ್ದರೂ, ಅಂತಹ ಪರಿಸ್ಥಿತಿ ನಾವು ಅಂದುಕೊಂಡದ್ದಕ್ಕಿಂತಲೂ ಬೇಗ ಬರಬಹುದು. ವಾಸ್ತವವಾಗಿ, ಚಂದ್ರನ ಮೇಲ್ಮೈ ಏಷ್ಯಾ ಖಂಡದಿಂದಲೂ ಸಣ್ಣದಾಗಿದ್ದು, ಅದರಲ್ಲಿ ಕೆಲಭಾಗ ಮಾತ್ರವೇ ಲ್ಯಾಂಡಿಂಗ್ ನಡೆಸಲು ಸೂಕ್ತವಾಗಿದೆ. ಮುಂದಿನ ದಶಕದಲ್ಲಿ ನೂರಕ್ಕೂ ಹೆಚ್ಚು ಚಂದ್ರನ ಮೇಲಿನ ಲ್ಯಾಂಡಿಂಗ್‌ಗಳನ್ನು ಉದ್ದೇಶಿಸಲಾಗಿದ್ದು, ಕನಿಷ್ಠ ಮಟ್ಟದಲ್ಲಿ ಲಭ್ಯವಿರುವ ಸ್ಥಳ ಅತ್ಯಂತ ಕಡಿಮೆ ಸಮಯದಲ್ಲಿ ಪೂರ್ಣವಾಗಿ ಉಪಕರಣಗಳಿಂದ ತುಂಬುವ ಸಾಧ್ಯತೆಗಳಿವೆ.
ಇನ್ನು ಇತ್ತೀಚಿನ ಸಮಯದಲ್ಲಿ, ಅದರಲ್ಲೂ 2020ರಲ್ಲಿ ಅಮೆರಿಕಾ ನೇತೃತ್ವದಲ್ಲಿ ಆರ್ಟೆಮಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಯೋಜನೆ 2025ರಲ್ಲಿ ಮರಳಿ ಮಾನವರನ್ನು ಚಂದ್ರನ ಮೇಲೆ ಒಯ್ಯುವ ಉದ್ದೇಶ ಹೊಂದಿದೆ. ಈ ಒಪ್ಪಂದಗಳು ಬಾಹ್ಯಾಕಾಶ ಅವಶೇಷಗಳನ್ನು ನಿರ್ವಹಿಸಲು ನಿಯಮಾವಳಿಗಳನ್ನು ಹೊಂದಿವೆ. ಈ ಒಪ್ಪಂದದಲ್ಲಿ 28 ರಾಷ್ಟ್ರಗಳು ಭಾಗಿಯಾಗಿದ್ದು, ಅವುಗಳು ಬಾಹ್ಯಾಕಾಶವನ್ನು ಶಾಂತಿಯುತವಾಗಿ ಬಳಸುವ ನಿಯಮಾವಳಿಗಳನ್ನು ಹೊಂದಿವೆ. ಈ ಒಪ್ಪಂದಗಳಲ್ಲಿ, ಬಾಹ್ಯಾಕಾಶ ಅವಶೇಷಗಳನ್ನು ನಿರ್ವಹಿಸುವ ಕುರಿತು ಕಾರ್ಯಸೂಚಿಗಳನ್ನು ಒಳಗೊಂಡಿದೆ. ಅದರಲ್ಲಿ, ಯೋಜನೆ ಪೂರ್ಣಗೊಂಡ ಬಳಿಕ ಬಾಹ್ಯಾಕಾಶ ನೌಕೆಗಳನ್ನು ನಾಶಗೊಳಿಸುವ ಗುರಿ ಹೊಂದಿದೆ.
ಆದರೆ ಅದನ್ನು ಸಾಧಿಸುವ ದಾರಿಯ ಕುರಿತು ಅರ್ಟೆಮಿಸ್ ಒಪ್ಪಂದ ಯಾವುದೇ ಸೂಕ್ತ ನಿರ್ದೇಶನಗಳನ್ನು ನೀಡಿಲ್ಲವಾದರೂ, ಈ ಒಪ್ಪಂದದಲ್ಲಿ ಭಾಗಿಯಾಗುವ ಸದಸ್ಯ ರಾಷ್ಟ್ರಗಳು ದೈನಂದಿನ ಬಾಹ್ಯಾಕಾಶ ಚಟುವಟಿಕೆಗಳು, ಕಾರ್ಯಾಚರಣಾ ಹಂತದಲ್ಲಿರುವ, ಅಥವಾ ಕಾರ್ಯಾಚರಣಾ ನಂತರದಲ್ಲಿ, ಅಪಘಾತದಿಂದ ಇನ್ನಷ್ಟು ಬಾಹ್ಯಾಕಾಶ ಅವಶೇಷಗಳ ನಿರ್ಮಾಣವಾಗುವುದನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವ ನಿರ್ಣಯ ಕೈಗೊಳ್ಳಲಿವೆ ಎಂದಿದೆ.
ಇಂತಹ ವಿಚಾರದಲ್ಲಿ ಜಾಗತಿಕ ಸಹಕಾರ ಮತ್ತು ಸಹಯೋಗ ಅತ್ಯಂತ ಮಹತ್ತರವಾಗಿದೆ. ಅದಕ್ಕಾಗಿ ಉತ್ತಮವಾಗಿ ರೂಪಿಸಿದ ನೀತಿಗಳು, ಪರಿಣಾಮಕಾರಿ ತಂಡವಾಗಿ ಕಾರ್ಯಾಚರಿಸುವುದು, ಹಾಗೂ ಅಂತಾರಾಷ್ಟ್ರೀಯ ಸಹಕಾರ ಅತ್ಯಂತ ಅವಶ್ಯಕವಾಗಿದೆ. ಆ ಮೂಲಕ ಚಂದ್ರನ ವಾತಾವರಣವನ್ನು ರಕ್ಷಿಸಲು ಸಾಧ್ಯವಾಗುತ್ತದೆ.
ಗಿರೀಶ್ ಲಿಂಗಣ್ಣ
(ಲೇಖಕರು; ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)