ಹಿಜಾಬ್ ವಿವಾದದ ಮತ್ತೊಂದು ಮಜಲು: ಹೆಣ್ಣಿಗೆ ಸಮಾನತೆ ತರಬಹುದೇ ಸಮವಸ್ತ್ರ?

|

Updated on: Feb 16, 2022 | 3:17 PM

ಎಸ್ಎಸ್ಎಲ್​ಸಿಯಲ್ಲಿ ಶೇಕಡ 80%ರಷ್ಟು ಅಂಕ ಪಡೆದು ಇಡೀ ಶಾಲೆಗೆ ನಂಬರ್ ಒನ್ ಬಂದರೂ ಬಡತನಕ್ಕೆ ಸಿಕ್ಕಿ ಹಾಕಿಕೊಂಡ ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರು ಉಳಿಯಲೇ ಬೇಕಾದ ಸ್ಥಿತಿ ಬರುತ್ತದೆ. ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

ಹಿಜಾಬ್ ವಿವಾದದ ಮತ್ತೊಂದು ಮಜಲು: ಹೆಣ್ಣಿಗೆ ಸಮಾನತೆ ತರಬಹುದೇ ಸಮವಸ್ತ್ರ?
ಸಾಂದರ್ಭಿಕ ಚಿತ್ರ
Follow us on

ಹಿಜಾಬ್(Hijab) ವಿವಾದ ಕಾಳ್ಗಿಚ್ಚಿನಂತೆ ಹಬ್ಬಿ ಈಗ ಕರ್ನಾಟಕ ಉಚ್ಛ ನ್ಯಾಯಾಲಯ(Karnataka High Court) ಆ ಕೇಸ್​ನ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಹಾಗಾಗಿ, ಅದು ಸರಿ ತಪ್ಪು ಎಂಬುದರ ಗೊಡವೆಗೆ ಹೋಗದೇ, ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಇನ್ನೊಂದಿಷ್ಟು ಸಾಮಾಜಿಕ ಅಂಶಗಳನ್ನು ಎತ್ತಿ ಮುನ್ನೆಲೆಗೆ ತರುವುದು ಈ ಲೇಖನದ ಉದ್ದೇಶ. ಹೆಣ್ಣೊಂದು ಕಲಿತರೆ ಮನೆ ಬೆಳಗಿದಂತೆ ಎಂಬ ಗಾದೆ ಮಾತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಜನ ಹೆಣ್ಣು ಮಕ್ಕಳನ್ನು(Girls Education) ಓದಿಸಲು ಮುಂದೆ ಬರುತ್ತಿಲ್ಲ. ಹೆಣ್ಣು ಮಕ್ಕಳು ವಿದ್ಯೆ ಕಲಿತರೆ, ಅವರಿಗೆ ಜಂಬ ಬರುತ್ತೆ; ಮದುವೆಯಾಗಿ ಹೋದ ಮೇಲೆ ಅವಳೇನು ಅವಳ ಅತ್ತೆ-ಮಾವನಿಗೆ ಓದುವುದನ್ನು ಹೇಳಿಕೊಡಬೇಕಾ? ಓದಿದ ಹೆಣ್ಣು ಮಕ್ಕಳು ಒಟ್ಟು ಕುಟುಂಬ ಇರುವ ಮನೆಗೆ ಹೊಂದಿಕೊಳ್ಳೋದಿಲ್ಲ. ಹೀಗೆ ಅನೇಕ ತಪ್ಪು ಗ್ರಹಿಕೆಯೊಂದಿಗೆ ಹೆಣ್ಣು ಮಕ್ಕಳನ್ನು ಓದಿಸುವುದೇ ಇಲ್ಲ. ಇದರ ಜೊತೆಗೆ ಕಡು ಬಡತನದಲ್ಲಿರುವ ಪಾಲಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಓದಿಸುವುದು ಕಷ್ಟಕರ. ಹೀಗಾಗಿ ಹೆಣ್ಣು ಮಕ್ಕಳು ಓದುವ ಆಸೆಯಿದ್ದರೂ ತಮ್ಮ ಆಸೆಯ ಬಳ್ಳಿಯನ್ನು ಕಿತ್ತು, ಕರುಳು ಬಳ್ಳಿ ಹೇಳುವ ಮಾತು ಕೇಳುತ್ತ ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ. ಈ ಮಧ್ಯೆ ಸಮವಸ್ತದ ಗಲಾಟೆ ಎದ್ದಿದೆ. ಈ ಸಮವಸ್ತ್ರಕ್ಕೂ(uniform )ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರು ಉಳಿಯುವುದಕ್ಕೂ ಹೇಗೆ ಲಿಂಕ್ ಎಂಬ ಅನುಮಾನ ಬಂತಾ?

ರಾಜ್ಯದ ಅನೇಕ ಸರ್ಕಾರಿ ಕಾಲೇಜುಗಳಲ್ಲಿ ಸರ್ಕಾರ ಸಮವಸ್ತ್ರ ಅಥವಾ ಬಿಸಿ ಊಟದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಮಕ್ಕಳನ್ನು ಕಾಲೇಜಿಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಭಾರತೀಯ ಸಂವಿಧಾನದ ಅನುಚ್ಛೇದ-45ರ ಪ್ರಕಾರ 14 ವರ್ಷದವರೆಗಿನ ಮಕ್ಕಳಿಗೆ ಸರ್ಕಾರ ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದೆ. ಅಲ್ಲದೆ 1ನೇ ತರಗತಿಯಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ, ಬ್ಯಾಗ್, ಊಟ, ಸಮವಸ್ತ್ರ, ಪುಸ್ತಕ ಸೇರಿದಂತೆ ಪೋಷಕರಿಂದ ಒಂದು ರೂಪಾಯಿಯೂ ಖರ್ಚಾಗದಂತೆ ಎಲ್ಲವನ್ನು ಉಚಿತ ಮಾಡಿದೆ. ಹೀಗಾಗಿ ಎಸ್ಎಸ್ಎಲ್​ಸಿ ಅಥವಾ ಹತ್ತನೇ ತರಗತಿವರೆಗೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಕೂಡ ಉತ್ಸಾಹಕರಾಗಿರುತ್ತಾರೆ. ಮಗಳು ಶಾಲೆಗೆ ಹೋಗಿ ಬಿಸಿ ಬಿಸಿ ಊಟನಾದ್ರು ಮಾಡುತ್ತಾಳೆ ಎಂದು ಅನೇಕ ಪೋಷಕರು ಯೋಚಿಸ್ತಾರೆ.

ಆದ್ರೆ ಎಸ್ಎಸ್ಎಲ್​ಸಿ ಮುಗಿದ ಮೇಲೆ? ಪಿಯುಸಿಗೆ ಹೋಗುವಾಗ ಪೋಷಕರು ಆ ಉತ್ಸಾಹವನ್ನು ಕಳೆದುಕೊಳ್ಳುತ್ತಾರೆ. ರಾಜ್ಯದ ಅನೇಕ ಸರ್ಕಾರಿ ಕಾಲೇಜುಗಳಲ್ಲಿ ಸರ್ಕಾರ ಸಮವಸ್ತ್ರ ಅಥವಾ ಬಿಸಿ ಊಟದ ವ್ಯವಸ್ಥೆ ಇಲ್ಲ. ಹೀಗಾಗಿ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಎಸ್ಎಸ್ಎಲ್​ಸಿ ಮುಗೀತಲ್ಲ, ಜೀವನಕ್ಕೆ ವ್ಯವಹಾರ ಜ್ಞಾನವೊಂದಿದ್ದರೆ ಸಾಕು ಎಂದು ಓದಿಸುವುದನ್ನೇ ನಿಲ್ಲಿಸಿ ಬಿಡುತ್ತಾರೆ. ಅನೇಕ ಕಾಲೇಜುಗಳಲ್ಲಿ ಪಿಯುಸಿ ಮಕ್ಕಳಿಗೆ ಸರ್ಕಾರದಿಂದ ಯಾವುದೇ ಸಮವಸ್ತ್ರವಾಗಲಿ, ಊಟವಾಗಲಿ ಇರುವುದಿಲ್ಲ. ಆಗ, ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸಬೇಕಂದ್ರೆ ಅವರಿಗೆ ದಿನಾ ತೊಡಲು ಬಟ್ಟೆ ಬೇಕು, ಪುಸ್ತಕಗಳು ಬೇಕು ಈ ಖರ್ಚನ್ನು ಭರಿಸಲು ಸಿದ್ದವಿಲ್ಲದ ಪೋಷಕರು ಅವರನ್ನು ಮದುವೆ ಮಾಡಿಕೊಟ್ಟು ಭಾರ ಕಳೆದುಕೊಳ್ಳೋಣ ಎಂದು ಚಿಂತಿಸುತ್ತಾರೆ. ಎಸ್ಎಸ್ಎಲ್​ಸಿಯಲ್ಲಿ ಶೇಕಡ 80%ರಷ್ಟು ಅಂಕ ಪಡೆದು ಇಡೀ ಶಾಲೆಗೆ ನಂಬರ್ ಒನ್ ಬಂದರೂ ಬಡತನಕ್ಕೆ ಸಿಕ್ಕಿ ಹಾಕಿಕೊಂಡ ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರು ಉಳಿಯಲೇ ಬೇಕಾದ ಸ್ಥಿತಿ ಬರುತ್ತದೆ. ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ತುಂಬಾ ಚೆನ್ನಾಗಿ ಅಂಕ ತೆಗೆದುಕೊಂಡ ಹೆಣ್ಣು ಮಕ್ಕಳು ಕೂಡ ಮುಂದೆ ಓದಲಾಗದೇ ತಂದೆ ಅಥವಾ ತಾಯಿಗೆ ನೆರವಾಗಬೇಕು ಎಂದು ಸಿಕ್ಕ ಕೆಲಸಕ್ಕೆ ಸೇರಿ, ತಂದೆ ತಾಯಿಯ ಮಾತಿಗೆ ವಿರೋಧ ಮಾಡಲಾಗದೆ ಮದುವೆಗೆ ತಯಾರಾಗುತ್ತಾರೆ. ಹಲವು ಬಾರಿ ಭವಿಷ್ಯವಿದೆ ಎಂದುಕೊಂಡ ಮಕ್ಕಳು ಕೂಡ 18ರ ವಯಸ್ಸು ತಲುಪುವ ಮುನ್ನವೇ ಮದುವೆಯಾಗಿ ಹೊರಟು ಬಿಡುತ್ತಾರೆ. ಇದು ದೊಡ್ಡ ದುರಂತ.

ಹೆಣ್ಣು ಮಕ್ಕಳಿಗೆ ಸಮವಸ್ತ್ರವೇಕೆ ಬೇಕು?
ಹಳ್ಳಿಗಳಲ್ಲಿನ ಬಡ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ನೀಡುವ ಸಮವಸ್ತ್ರ ಬಹಳ ಅತ್ಯವಶ್ಯಕವಾಗಿರುತ್ತೆ. ಹಬ್ಬ ಬಂದಾಗಲೂ ಹೊಸ ಬಟ್ಟೆ ನೋಡದ ಅಪರೂಪಕ್ಕೊಮ್ಮೆ ಬಣ್ಣ ಬಣ್ಣದ ಬಟ್ಟೆಗಳನ್ನು ನೋಡುವ ಬಡ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ನೀಡುವ ಎರಡು ಜೊತೆ ಬಟ್ಟೆ ಬೆಟ್ಟದಷ್ಟು ಖುಷಿಯನ್ನು ಹೊತ್ತು ತರುತ್ತೆ. ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಪೋಷಕರು ಒಮ್ಮೆ ತನ್ನ ಮಗಳಿಗೆ ಬಟ್ಟೆ ಹೊಲಿಸಿಕೊಟ್ಟರೆ ಸಾಕು. ವಾರದ ಏಳು ದಿನವೂ ಅದೇ ಬಟ್ಟೆ ಹಾಕಿಕೊಂಡು ಮೈ ಮುಚ್ಚಿಕೊಳ್ಳುವ ಅನೇಕ ಉದಾಹರಣೆಗಳು ಇವೆ. ಈಗಲೂ ಕೂಡ ಅದೆಷ್ಟೂ ಮಕ್ಕಳು ಶಾಲೆ ಮುಗಿಸಿ ಸಂಜೆ ಮನೆಗೆ ಬಂದಾಲೂ ಅದೇ ಬಟ್ಟೆಯಲ್ಲೇ ರಾತ್ರಿ ಕಳೆಯುತ್ತಾರೆ. ಮನೆಯಲ್ಲಿ ಹಾಕುವುದಕ್ಕೂ ಈ ಸಮವಸ್ತ್ರ ಸಹಾಯಕವಾಗುತ್ತೆ.

ಇನ್ನು ಮಕ್ಕಳಿಗೆ ಸಿಗುತ್ತಿರುವ ಈ ಸವಲತ್ತುಗಳಿಂದಾಗಿಯೇ ಚಿಂತೆ ಇಲ್ಲದೆ ಪೋಷಕರು ಹೆಣ್ಣು ಮಕ್ಕಳಿಗೂ ವಿದ್ಯೆ ಕಲಿಯಲು ಬಿಟ್ಟಿರೋದು. ಇಲ್ಲದಿದ್ದರೆ ಮಗಳಿಗೆ ಮನೆಗೆಲಸವೊಂದು ಬಂದರೆ ಸಾಕು ವಿದ್ಯೆ ತಗೊಂಡು ಏನ್ ಮಾಡೋದು ಎಂದು ಶಾಲೆಗಳ ಮುಖವನ್ನೂ ಸಹ ನೋಡಲು ಬಿಡುತ್ತಿರಲಿಲ್ಲ. ಅನಾದಿಕಾಲದಿಂದಲೂ ಶೋಷಣೆ, ದಬ್ಬಾಳಿಕೆಯಿಂದ ನೊಂದ ಹೆಣ್ಣಿಗೆ ವಿದ್ಯೆ, ಕಲಿಕೆಯಿಂದಲೂ ದೂರ ಮಾಡಲಾಗುತ್ತಿತ್ತು. ಅನೇಕ ಬಡ ಹೆಣ್ಣು ಮಕ್ಕಳು ಕಾಲೇಜಿಗೆ ಸೇರುವಾಗ ಅಲ್ಲಿ ಸಮವಸ್ತ್ರ ಇದೆಯಾ? ಎಂದು ನೋಡಿಕೊಂಡೇ ಕಾಲೇಜಿಗೆ ಸೇರೋದು.

ಇನ್ನು ಕಡ್ಡಾಯ ಸಮವಸ್ತ್ರ ಮಾಡುವುದರಿಂದಲೂ ಕೆಲವು ಸಮಸ್ಯೆಗಳಿವೆ. ದಿನಗಳನ್ನು ದೂಡಲು ಕಷ್ಟಪಡುವ ಕಡು ಬಡವರು ತಮ್ಮ ಮಕ್ಕಳಿಗೆ ಒಂದು ಜೊತೆ ಬಟ್ಟೆ ಹೊಲಿಸಿಕೊಡುವಷ್ಟೂ ಸಹ ಅಸಹಾಯಕರಾಗಿರುತ್ತಾರೆ. ಅವರು ಮಕ್ಕಳಿಗೆ ಬಟ್ಟೆ ಹೊಲಿಸಿಕೊಡಲಾಗದೆ ಮಕ್ಕಳನ್ನು ಶಾಲೆಗೂ ಕಳಿಸುವುದಿಲ್ಲ. ಶಾಲೆಗೆ ಹೋದ್ರೆ ಸಮವಸ್ತ್ರ ಬೇಕೆ ಬೇಕು. ಆದ್ರೆ ಸಮವಸ್ತ್ರ ಹೊಲಿಸಿಕೊಡಲು ನಮ್ಮ ಬಳಿ ಹಣವಿಲ್ಲವಮ್ಮ ಎಂದು ದುಃಖಿಸುವವರೂ ಇದ್ದಾರೆ. ಏನೇ ಆದರೂ ಎಲ್ಲದಕ್ಕೂ ಗುರಿಯಾಗುವವಳು ಮಾತ್ರ ಹೆಣ್ಣು. ತನ್ನ ಕುಟುಂಬದ ಸಮಸ್ಯೆಗಳಿಗೆ ಮೊದಲು ಬಲಿಯಾಗುವವಳೇ ಹೆಣ್ಣು. ಇಂತಹದರ ನಡುವೆ ಈಗ ಹಿಜಾಬ್ ವಿವಾದ ಕೂಡ ತಲೆ ಎತ್ತಿದೆ.

ಒಂದೇ ರೀತಿಯ, ಸಮವಸ್ತ್ರದಿಂದ ಮಕ್ಕಳ ಮನಸಲ್ಲಿಯೂ ಸಮಾನತೆಯ ಭಾವನೆ ಮೂಡಿಸುವ ಸಾಧ್ಯತೆ ಜಾಸ್ತಿ. ದುಡ್ಡಿರುವ ಮಕ್ಕಳು ಮನೆಯಲ್ಲಿ ಬಣ್ಣ ಬಣದ ಬಟ್ಟೆ ಧರಿಸಿದರೂ ಶಾಲೆಗೆ ಬರುವಾಗ, ಸಮವಸ್ತ್ರ ಧರಿಸಿಯೇ ಬರಬೇಕು. ಅಲ್ಲದೆ ಹುಟ್ಟುಹಬ್ಬದ ದಿನ ಹೊಸ ಬಟ್ಟೆ ತೊಟ್ಟು ಬಂದರೆ ಬಡ ಮಕ್ಕಳು ಅದೇ ಹಳೆಯ ಸಮವಸ್ತ್ರವನ್ನೇ ಶುದ್ಧವಾಗಿ ತೊಳೆದು ಇಸ್ತ್ರಿ ಮಾಡಿ ತೊಟ್ಟು ಸಂಭ್ರಮಿಸುತ್ತಾರೆ. ಆಗ ಪುಟ್ಟ ಪುಟ್ಟ ಮಕ್ಕಳ ಮನಸ್ಸಿಗೆ ಹೆಚ್ಚಿನ ಘಾಸಿಯೂ ಆಗುವುದಿಲ್ಲ. ಈಗ ಈ ವಿವಾದದ ಮಧ್ಯೆ ಸಮವಸ್ತ್ರ ತರುವುದು ಸರಿ ಎಂದರೆ ಅದೂ ಕೂಡ ವಿವಾದವೇ ಆಗಬಹುದು. ಹಿಜಾಬ್ ವಿವಾದವನ್ನು ಬದಿಗಿಟ್ಟು ಸ್ವಂತ ಕಾಲ ಮೇಲೆ ನಿಂತುಕೊಳ್ಳುವ ಹೆಣ್ಣುಮಕ್ಕಳನ್ನು ಬೆಳೆಸಲು ಎಂತಹ ಪದ್ಧತಿ ಬೇಕು ಅದನ್ನು ಚಿಂತಿಸಿದರೆ, ಚರ್ಚಿಸಿದರೆ ಅದು ಒಳಿತಾಗಬಹುದೇ ಹೊರತು ಈಗ ನಡೆಯುತ್ತಿರುವ ಚರ್ಚೆ ಮತ್ತು ವಿವಾದದಿಂದ, ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬಹುದು ಎಂಬುದು ಮಾತ್ರ ಅರ್ಧ ಸತ್ಯ.

ಇದನ್ನೂ ಓದಿ: Karnataka Hijab Hearing Live: ಹಿಜಾಬ್ – ಕೇಸರಿ ಶಾಲು ವಿವಾದ: ಹೈಕೋರ್ಟ್​ನಲ್ಲಿ ವಿಚಾರಣೆ ಆರಂಭ

Published On - 3:14 pm, Wed, 16 February 22