ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕವು ವಿವಿಧ ಬಗೆಯ ಅಪರಾಧ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಸಾಮಾನ್ಯ ರೀತಿಯ ಅಪರಾಧಗಳ ಜೊತೆಗೆ ಕೋಮು ದಳ್ಳುರಿ, ದ್ವೇಷ ಮತ್ತು ಸೈಬರ್ ಸಂಬಂಧಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ತಂತ್ರಜ್ಞಾನವು ಬೆಳೆದಂತೆ ಅಪರಾಧಗಳ ಸ್ವರೂಪವೂ ಹೈಟೆಕ್ ಆಗುತ್ತಿದೆ. ಭಾರತದ ಐಟಿ ರಾಜಧಾನಿಯಾಗಿರುವ ಬೆಂಗಳೂರು ಸೈಬರ್ ಕ್ರೈಮ್‌ಗೂ ರಾಜಧಾನಿಯಾಗಿದೆ. ಪೊಲೀಸ್ ಇಲಾಖೆ ಆಧುನೀಕರಣಗೊಳ್ಳುವದರ ಜೊತೆಗೆ ಸಿಬ್ಬಂದಿಯ ಮನಸ್ಥಿತಿ ಬದಲಾವಣೆಯಾಗದೆ ಹೊಸ ಕಾಲದ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆಯ ಹೊಸಕಾಲದ ಅಗತ್ಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ರಕ್ಷಣ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ.
ಭಾರತದಲ್ಲಿ, 2020ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿಯ ಪ್ರಕಾರ, ಕರ್ನಾಟಕವು ಶೇ 16.2 ಸೈಬರ್ ಕ್ರೈಮ್ ದರದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಪರಾಧ ದರವನ್ನು ಪ್ರತಿ 1,00,000 ಜನರಿಗೆ ನಡೆದ ಅಪರಾಧ ಘಟನೆ ಎಂದು ಲೆಕ್ಕ ಹಾಕಲಾಗುತ್ತದೆ. ಸಂಖ್ಯಾ ದೃಷ್ಟಿಯಲ್ಲಿ ನೋಡಿದರೆ, ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಸೈಬರ್ ಅಪರಾಧ ಪ್ರಕರಣಗಳು (11,097) ವರದಿಯಾಗಿವೆ, ಅನಂತರದ ಸ್ಥಾನದಲ್ಲಿ ಕರ್ನಾಟಕ (10,741) ಇದೆ. ದುರ್ದೈವದ ಸಂಗತಿಯೆಂದರೆ, ಇದೇ ಅವಧಿಯಲ್ಲಿ ಮಕ್ಕಳ ವಿರುದ್ಧ 144 ಸೈಬರ್ ಅಪರಾಧಗಳು ನಡೆದಿವೆ. 2019ರಲ್ಲಿ ಬೆಂಗಳೂರಿನಲ್ಲಿ ಇಂತಹ 10 ಪ್ರಕರಣಗಳು ವರದಿಯಾಗಿವೆ. ಸೈಬರ್ ಕ್ರೈಮ್ ಅನ್ನು 24/7 ವರದಿ ಮಾಡಲು ಸರ್ಕಾರವು ಈಗ ಮೀಸಲಾದ ಫೋನ್ ಲೈನ್ ಹೊಂದಿದೆ.
ಹ್ಯಾಕರ್ ಶ್ರೀಕಿ ಬಿಟ್‌ಕಾಯಿನ್ ಹಗರಣ ಮತ್ತು ಸೈಬರ್ ಕ್ರೈಮ್‌ಗಳು 2021ರಲ್ಲಿ ಸಾಕಷ್ಟು ಸದ್ದು ಮಾಡಿದರೂ ಬೆಂಗಳೂರು ಪೊಲೀಸರು ಅವುಗಳನ್ನು ತಾಂತ್ರಿಕವಾಗಿ ವಿಶ್ಲೇಷಿಸಲಿಲ್ಲ. ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಶ್ರೀಕಿ ಮತ್ತು ಆತನ ಸಹಚರರಿಂದ ವಶಪಡಿಸಿಕೊಂಡಿರುವ ಹಾರ್ಡ್ಡಿಸ್ಕ್ಗಳನ್ನು ವಿಶ್ಲೇಷಿಸಲು ಪೊಲೀಸರು ಖಾಸಗಿ ಸಂಸ್ಥೆಯ ಸೇವೆಗಳನ್ನು ಪಡೆದುಕೊಂಡಿದ್ದಾರೆ. ಅಪರಾಧದ ಅಗಾಧತೆಯನ್ನು ನ್ಯಾಯಾಲಯಕ್ಕೆ ಮನವರಿಕೆಯಾಗುವಂತೆ ವಿವರಿಸಲು ಸೈಬರ್ ಕ್ರೈಂ ಶಾಖೆಗೆ ಸಾಧ್ಯವಾಗಲಿಲ್ಲ. ಇದು ಟೆಕ್-ಸಂಬಂಧಿತ ಅಪರಾಧಗಳನ್ನು ನಿರ್ವಹಿಸಲು ಇಲಾಖೆಯ ಅಸಮರ್ಪಕತೆಯನ್ನು, ಅಸಮರ್ಥತೆಯನ್ನು ಪ್ರತಿಬಿಂಬಿಸುತ್ತದೆ. 2021ರಲ್ಲಿ ವರದಿಯಾದ ಸೈಬರ್ ಅಪರಾಧ ಪ್ರಕರಣಗಳ ಪೈಕಿ ಪ್ರತಿ ಎಂಟರಲ್ಲಿ ಒಂದನ್ನು ಮಾತ್ರ ಭೇದಿಸಲಾಗಿದೆ. 2020ರಲ್ಲಿ, ಬೆಂಗಳೂರು 8,892 ಸೈಬರ್ ಅಪರಾಧ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಈ ಪೈಕಿ ಶೇ 29ರಷ್ಟು ಪ್ರಕರಣಗಳು ಪತ್ತೆಯಾಗಿವೆ. ಸೈಬರ್ ಅಪರಾಧಗಳನ್ನು ಎಸಗಿ ಆರೋಪಿಗಳು ಬೇರೆ ರಾಜ್ಯಗಳಿಗೆ ಪರಾರಿಯಾಗುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಆನ್‌ಲೈನ್ ಅಪರಾಧಗಳು ಹಾಗಿರಲಿ, ಗೃಹ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಗುಪ್ತಚರ ಮಾಹಿತಿ ಸಂಗ್ರಹವೂ ಸವಾಲಾಗಿದೆ. ಈ ತಿಂಗಳ ಆರಂಭದಲ್ಲಿ ಶಾಲಾ ಸಮವಸ್ತ್ರದ ವಿಚಾರದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭುಗಿಲೆದ್ದ ಕೋಮು ದಳ್ಳುರಿಯ ಅಗಾಧತೆಯನ್ನು ಆ ಸಮಸ್ಯೆಯನ್ನು ನಿಭಾಯಿಸುವಾಗ ಪೊಲೀಸರು ಊಹಿಸಿರಲಿಲ್ಲ. ಕರಾವಳಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘಟಕದ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸುವಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಇಂತಹ ಚಟುವಟಿಕೆಗಳನ್ನು ಆರಂಭಿಕ ಹಂತಗಳಲ್ಲೇ ಹತ್ತಿಕ್ಕುವಲ್ಲಿ ಸರ್ಕಾರವೂ ವಿಫಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ವಾಸ್ತವ ಸ್ಥಿತಿ ಹೀಗಿರುವಾಗ, ದಿನನಿತ್ಯದ ಸವಾಲುಗಳನ್ನು ಹಾಗೂ ಹಠಾತ್ ಹಿಂಸಾಚಾರವನ್ನು ನಿಭಾಯಿಸಲು ಕರ್ನಾಟಕ ಪೊಲೀಸ್ ಪಡೆ ಸಜ್ಜಾಗಿದೆಯೇ? ಇಲಾಖೆಯಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದರಿಂದ ಖಾಕಿ ಪಡೆಗೆ ಇದು ಖಂಡಿತವಾಗಿಯೂ ದೊಡ್ಡ ಕೆಲಸವೇ. ಆಧುನೀಕರಣದ ವಿಷಯದಲ್ಲಿ ಇಲಾಖೆಯು ನಿಸ್ಸಂದೇಹವಾಗಿ ಮರುಶೋಧನೆಯ ಪ್ರಯತ್ನಕ್ಕಿಳಿದಿದೆ. ಇದು ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ ಅವು ಇಲಾಖೆಯು ಎದುರಿಸುತ್ತಿರುವ ಸವಾಲುಗಳಿಗೆ ಸಮನಾಗಿಲ್ಲ.
ಕರ್ನಾಟಕ ಪೊಲೀಸರು ಶಸ್ತ್ರಾಸ್ತ್ರಗಳ ಭಾರೀ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರು 2018ರ ತಮ್ಮ ವರದಿಯಲ್ಲಿ ಗಮನ ಸೆಳೆದಿದ್ದಾರೆ. ರಾಜ್ಯವು ತನ್ನ ಬಲವನ್ನು ಆಧುನೀಕರಿಸುವಲ್ಲಿ ವಿಫಲವಾಗಿದೆ. ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೊ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮಾನದಂಡಗಳನ್ನು ನಿಗದಿಪಡಿಸಿದೆ. ಕರ್ನಾಟಕದಲ್ಲಿ ಎಕೆ 47, ಎಕ್ಸ್ಕ್ಯಾಲಿಬರ್ ಗನ್‌ಗಳ ಕೊರತೆಯಿದೆ. ಅಗತ್ಯವಿರುವ ಸಂಖ್ಯೆಗಿಂತ ಶೇ 37ರಷ್ಟು ಕಡಿಮೆ ಇದೆ. ರೈಫಲ್‌ಗಳ ಕೊರತೆಯೂ ಶೇ 72ರಷ್ಟಿದೆ. ವಾಹನಗಳ ಖರೀದಿ ಮತ್ತು ಕಂಪ್ಯೂಟರೀಕರಣಕ್ಕೆ ಕೋಟ್ಯಂತರ ರೂಪಾಯಿ ವ್ಯಯವಾಗುತ್ತಿರುವಾಗ, ಶಸ್ತ್ರಾಸ್ತ್ರಗಳ ಅಭಾವ ಮತ್ತು 20,000ಕ್ಕೂ ಹೆಚ್ಚು ಸಿಬ್ಬಂದಿ ಕೊರತೆಯೂ ಇಲಾಖೆಯನ್ನು ಕಾಡುತ್ತಿದೆ. 10,000 ಕಾನ್‌ಸ್ಟೆಬಲ್‌ಗಳ ಕೊರತೆಯಿಂದ ನಿತ್ಯದ ಕೆಲಸಗಳಿಗೂ ಅಡ್ಡಿಯಾಗುತ್ತಿದೆ. ಸದ್ಯ ಪ್ರತಿ 350 ನಾಗರಿಕರಿಗೆ ಒಬ್ಬ ಕಾನ್‌ಸ್ಟೆಬಲ್ ಇದ್ದಾರೆ. ನಿಯಮದ ಪ್ರಕಾರ ಈ ಅನುಪಾತವು 1:220 ಇರಬೇಕು. ಹಣಕಾಸಿನ ಕೊರತೆಯ ಜೊತೆಗೆ, ಕೋವಿಡ್-19 ಸಾಂಕ್ರಾಮಿಕ ಅವಧಿಯು ನೇಮಕಾತಿಯನ್ನು ಮತ್ತಷ್ಟು ಕುಂಠಿತಗೊಳಿಸಿದೆ.
ಐಪಿಎಫ್ ಸ್ಮಾರ್ಟ್ ಪೊಲೀಸಿಂಗ್ ಇಂಡೆಕ್ಸ್ 2021ರಲ್ಲಿ ದೇಶದ ಒಟ್ಟಾರೆ ಪೊಲೀಸಿಂಗ್ ವಿಷಯದಲ್ಲಿ ಕರ್ನಾಟಕ 6.69 ಅಂಕಗಳೊಂದಿಗೆ 14ನೇ ಸ್ಥಾನದಲ್ಲಿದೆ. ಆದರೆ, 8.11 ಅಂಕಗಳೊಂದಿಗೆ ಆಂಧ್ರಪ್ರದೇಶ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತೀಯ ಪೊಲೀಸ್ ಫೌಂಡೇಶನ್ (IPF), ನವದೆಹಲಿ ಮೂಲದ ಸ್ವತಂತ್ರ ಬಹು-ಶಿಸ್ತಿನ ಚಿಂತಕರ ಚಾವಡಿಯಾಗಿದ್ದು, ಪೊಲೀಸ್ ಇಲಾಖೆಯ ಸುಧಾರಣೆಗೆ ಶ್ರಮಿಸುತ್ತಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಸ್ಮಾರ್ಟ್ (SMART) ಪೊಲೀಸಿಂಗ್ ದೃಷ್ಟಿಯನ್ನು ಈ ಸಮೀಕ್ಷೆಯು ಅನುಸರಿಸುತ್ತದೆ. ಸ್ಮಾರ್ಟ್ ಎಂದರೆ ಕಟ್ಟುನಿಟ್ಟಾದ (Strict), ಸಂವೇದನಾಶೀಲ (Sensitive), ಆಧುನಿಕ (Modern), ಚಲನಶೀಲ (Mobile), ಎಚ್ಚರಿಕೆ (Alert), ಜವಾಬ್ದಾರಿಯುತ (Accountable), ವಿಶ್ವಾಸಾರ್ಹ (Reliable), ಪ್ರತಿಸ್ಪಂದಕ (Responsive), ತಾಂತ್ರಿಕ-ಪರಿಣತ (Techno-savvy) ಮತ್ತು ತರಬೇತಿ ಪಡೆದ (Trained) ಪಡೆ ಎಂದು ಅರ್ಥ. 2018ರಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪೊಲೀಸ್ ಪಡೆಯ ಆಧುನೀಕರಣಕ್ಕೆ ಮೀಸಲಿಟ್ಟ ಹಣವನ್ನು ಸಂಪೂರ್ಣವಾಗಿ ಬಳಸದ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. 2015-16ರಲ್ಲಿ ಬಿಡುಗಡೆಯಾದ ₹ 128.61 ಕೋಟಿಯಲ್ಲಿ ₹ 68.5 ಕೋಟಿ ನಿಧಿಗೆ ಬಳಕೆ ಪ್ರಮಾಣಪತ್ರ ಸಲ್ಲಿಸಲು ಕರ್ನಾಟಕವು ವಿಫಲವಾಗಿದೆ.
ಸ್ಮಾರ್ಟ್ ಬೇಕಿದೆ ಇಲಾಖೆ
ಪೊಲೀಸ್ ಇಲಾಖೆಯು ಸ್ಮಾರ್ಟ್ (SMART) ಆಗಲು ವಿಶೇಷ ಅಭಿಯಾನ ನಡೆಸಬೇಕು ಎನ್ನುವುದು ಸ್ಪಷ್ಟವಾಗುತ್ತದೆ. ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಇಲಾಖೆಯನ್ನು ಆಧುನೀಕರಿಸುವ ಅಗತ್ಯವಿದೆ. ಸಂವಹನ ಮತ್ತು ಚಲನಶೀಲತೆ ಪೊಲೀಸ್ ಇಲಾಖೆಗೆ ಈಗಲೂ ಸವಾಲಾಗಿವೆ. ಭಯೋತ್ಪಾದನೆ ಮತ್ತು ಸೈಬರ್ ಕ್ರೈಮ್ ಅನ್ನು ಎದುರಿಸಲು ಪೋಲೀಸರನ್ನು ಸಜ್ಜುಗೊಳಿಸುವ ಯೋಜನೆ ಮತ್ತು ನಿರ್ವಹಣೆಯಲ್ಲಿ ಕಾರ್ಪೊರೇಟ್ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಪೊಲೀಸ್ ಇಲಾಖೆಯಲ್ಲಿ ತಾಂತ್ರಿಕತೆ ಮತ್ತು ಮಾನವಶಕ್ತಿಯಲ್ಲಿ ಆಧುನೀಕರಣದ ಪ್ರಕ್ರಿಯೆಯು 2009ರಲ್ಲಿ ಪ್ರಾರಂಭವಾಯಿತು. ಪೊಲೀಸ್ ಠಾಣೆಗಳಿಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಒದಗಿಸಲಾಗಿದೆ. ಪೊಲೀಸ್ ಠಾಣೆಗಳು ಮತ್ತು ಇಲಾಖೆಗಳ ಗಣಕೀಕರಣವೂ ಪ್ರಾರಂಭವಾಯಿತು. ಸಿಸಿಟಿವಿ ಅಳವಡಿಕೆಗಳು, ಬಾಡಿ ಕ್ಯಾಮೆರಾಗಳ ಅಳವಡಿಕೆ, ಮೊಬೈಲ್ ಫೋನ್‌ಗಳ ಪೂರೈಕೆ ಮತ್ತು ಮೂರು ಜಿಲ್ಲೆಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಅವುಗಳ ಪರಸ್ಪರ ಸಂಪರ್ಕ ಪೂರ್ಣಗೊಂಡಿದೆ. ಈ ಪ್ರಕ್ರಿಯೆಯನ್ನು ದೊಡ್ಡ ಮಟ್ಟದಲ್ಲಿ ಮುಂದುವರಿಸಬೇಕಾಗಿದೆ.
ಕ್ರಿಮಿನಲ್‌ಗಳು ತಮ್ಮ ಅಪರಾಧಗಳಿಗೆ ತಾಂತ್ರಿಕ ಆವಿಷ್ಕಾರಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಪೊಲೀಸರು ಆಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಗ್ಯಾಜೆಟ್‌ಗಳನ್ನು ಹೊಂದುವ ಮೂಲಕ ಅವರನ್ನು ಮೆಟ್ಟಿ ನಿಲ್ಲುವಂತಾಗಬೇಕು. ಇಲ್ಲದಿದ್ದರೆ, ಮೋಸಗೊಳಿಸುವ ಪ್ರಯತ್ನಗಳನ್ನು ಮೊದಲೇ ಪತ್ತೆ ಮಾಡುವುದು, ವಿಫಲಗೊಳಿಸುವುದು ಅಸಾಧ್ಯವಾಗುತ್ತದೆ.
ನೇಮಕಾತಿ ಅಥವಾ ವರ್ಗಾವಣೆಯಲ್ಲಿ ಪಾರದರ್ಶಕತೆ ಇಲ್ಲದ ಕಾರಣ ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ನಿಂತಿಲ್ಲ. ಯಾವುದೇ ಅರ್ಹತೆ ಆಧಾರಿತ ಪೋಸ್ಟಿಂಗ್‌ಗಳಿಲ್ಲ. ಹಾಗಾಗಿ ಪೋಲೀಸರು ರಾಜಕಾರಣಿಗಳ ಅಡಿಯಾಳುಗಳಾಗಿಯೇ ಇರುತ್ತಾರೆ. ಅವರ ಪ್ರಾಮಾಣಿಕತೆ ಮತ್ತು ನಂಬಿಕೆಗೆ ಇದು ದೊಡ್ಡ ಸವಾಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಶೌಚಾಲಯ, ನೀರು, ಪೀಠೋಪಕರಣಗಳಂತಹ ಮೂಲಸೌಕರ್ಯಗಳ ಕೊರತೆ ಈಗಲೂ ಇದೆ. ಪೊಲೀಸರು ತಮ್ಮ ಕೆಲಸದ ಬಗ್ಗೆ ಹೆಮ್ಮೆ ಪಡುವಂತೆ ಮಾಡಲು, ಅವರ ಕಾರ್ಯಸ್ಥಳಕ್ಕೆ ಸೌಕರ್ಯಗಳನ್ನು ಒದಗಿಸಬೇಕು. ಸೌಲಭ್ಯಗಳ ಕೊರತೆಯು ಪೊಲೀಸರನ್ನು ಸಂಪರ್ಕಿಸಲು ಜನರು ಹಿಂದೇಟು ಹಾಕುವಂತೆಯೂ ಮಾಡುತ್ತದೆ.
ಸಂವಹನ ಸುಧಾರಣೆ ಅತ್ಯಗತ್ಯ
ಆಂತರಿಕ ಮತ್ತು ಬಾಹ್ಯ ಸಂವಹನ ಉತ್ತಮವಾಗಿದ್ದರೆ ಪರಿವರ್ತನೆಯ ಬದಲಾವಣೆಯು ವೇಗವನ್ನು ಹೆಚ್ಚಿಸುತ್ತದೆ. ಆದರೆ, ಇಲಾಖೆಯಲ್ಲಿ ಕಾರ್ಯತಂತ್ರದ ಸಂವಹನದ ಕೊರತೆಯಿದೆ. ಮಾಹಿತಿ ವಿನಿಮಯಕ್ಕೆ ಸಂಬಂಧಿಸಿ ಪೊಲೀಸರಲ್ಲಿರುವ ಹಿಂಜರಿಕೆಯ ಮನೋಭಾವ ಅವರ ಕೆಲಸಕ್ಕೆ ಘಾಸಿ ಮಾಡುತ್ತಿದೆ. ಮಾಧ್ಯಮ ನಿರ್ವಹಣೆ ಮತ್ತು ಆಂತರಿಕ ಸಂವಹನಕ್ಕಾಗಿ ಕಾರ್ಪೊರೇಟ್ ಸಂವಹನ ಶೈಲಿಯನ್ನು ಪೊಲೀಸ್ ಇಲಾಖೆಯು ಅಳವಡಿಸಿಕೊಳ್ಳಬೇಕು. ಪೊಲೀಸರು ಮತ್ತು ಸಾರ್ವಜನಿಕರು, ಪೊಲೀಸರು ಮತ್ತು ಮಾಧ್ಯಮಗಳು ಹಾಗೂ ಕೆಳಹಂತದ ಅಧಿಕಾರಿಗಳು ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳ ನಡುವಿನ ಸಂಪರ್ಕವನ್ನು ಸುಧಾರಿಸಬೇಕು. ಯಾವುದೇ ಹಂತದಲ್ಲಿ, ಡಿಜಿಟಲ್ ಮೋಡ್ ಸೇರಿದಂತೆ ಸ್ಥಿರ ಮತ್ತು ಸಮಗ್ರ ಪಾರದರ್ಶಕ ಸಂವಹನವು ಸವಾಲಾಗಬಾರದು. ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಮೂಲಕ ಕಾಗದದ ಕೆಲಸಗಳ ಬೇಸರದ ಪ್ರಕ್ರಿಯೆಯನ್ನು ನಿಲ್ಲಿಸಬೇಕು.
ಎಲ್ಲ ಶ್ರೇಣಿಯ ಪೊಲೀಸರ ನಡುವೆ ಸಂವಾದವು ಅತ್ಯಗತ್ಯವಾಗಿದೆ. ಆಡಳಿತ ಮತ್ತು ಸಂವಹನದಲ್ಲಿ ಪಾರದರ್ಶಕತೆ ಇದ್ದರೆ ನಾಯಕತ್ವ ಬೆಳೆಯುತ್ತದೆ. ನಿರ್ಧಾರ ಕೈಗೊಳ್ಳುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ತನಗೂ ಸ್ಥಾನವಿದೆ ಎಂದು ಪ್ರತಿಯೊಬ್ಬ ಉದ್ಯೋಗಿಯು ಭಾವಿಸಬೇಕು. ಪ್ರಸ್ತುತ, ಉನ್ನತ ಶ್ರೇಣಿಯ ಅಧಿಕಾರಿಗಳು ಮಾತ್ರ ಸಾರ್ವಜನಿಕವಾಗಿ ಕಾಣುತ್ತಾರೆ ಮತ್ತು ಅಹವಾಲುಗಳನ್ನು ಆಲಿಸುತ್ತಾರೆ. ಆದರೆ, ಅವಿಶ್ರಾಂತವಾಗಿ ದುಡಿಯುವವರು ಬೆಳಕಿಗೆ ಬರುವುದೇ ಇಲ್ಲ. ಯಾವುದೇ ಉದ್ಯೋಗಿಯು ಸುಧಾರಣೆಗಳನ್ನು ಸೂಚಿಸಬಹುದಾದ ಆನ್‌ಲೈನ್ ಐಡಿಯಾ ಬಾಕ್ಸ್ಗೆ ಅವಕಾಶ ಇರಬೇಕು. ತಮ್ಮ ನಿರ್ಬಂಧಗಳನ್ನು ವಿವರಿಸಲು ಅನುಕೂಲವಾಗುವಂತೆ ಕುಂದುಕೊರತೆ ಪೆಟ್ಟಿಗೆಯೂ ಇರಬೇಕು.
ಒಂಬುಡ್ಸ್‌ಮನ್ ನೇಮಿಸಿ
ಒಂಬುಡ್ಸ್‌ಮನ್‌ರನ್ನು ನೇಮಿಸುವುದು ಪೊಲೀಸ್ ದೂರುಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದ ಸಾರ್ವಜನಿಕರಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡುತ್ತದೆ. ಬಾಹ್ಯ, ಸ್ವತಂತ್ರ ಮೌಲ್ಯಮಾಪನ ಮತ್ತು ಸಮಸ್ಯೆಗಳನ್ನು ಪರಿಹರಿಸುವುದು ಒಟ್ಟಾರೆಯಾಗಿ ಮೌಲ್ಯಮಾಪನ ವ್ಯವಸ್ಥೆಗೆ ಸಂಚಲನವನ್ನು ನೀಡುತ್ತದೆ. ಪೊಲೀಸರ ಬಗ್ಗೆ ಟೀವಿಗಳಲ್ಲಿ ಪ್ರಸಾರವಾಗುವ ವಿಕೃತ ಹಾಗೂ ಅವಹೇಳನಕಾರಿ ವರದಿಗಳು, ಅರ್ಧಸತ್ಯಗಳು ಮತ್ತು ಸುಳ್ಳು ಸುದ್ದಿಗಳು ಪೊಲೀಸರ ಇಮೇಜ್‌ಗೆ ಧಕ್ಕೆ ಉಂಟುಮಾಡುವುದರ ಜತೆಗೆ, ಅವರ ಆತ್ಮಸ್ಥೈರ್ಯವನ್ನೂ ಕುಗ್ಗಿಸುತ್ತಿವೆ. ಪೋಲೀಸ್ ಪ್ರಕರಣಗಳ ಬಗ್ಗೆ ಕಟುಸತ್ಯಗಳು ಮತ್ತು ಡೇಟಾವನ್ನು ನೀಡುವ ಮತ್ತು ಆಡಳಿತದ ವಿಧಾನ ಮತ್ತು ಸಾಧನೆಗಳನ್ನು ಹೈಲೈಟ್ ಮಾಡುವ ಪೊಲೀಸ್ ಟಿವಿ ಆರಂಭಿಸುವುದನ್ನು ಸರ್ಕಾರವು ಪರಿಗಣಿಸಬೇಕು. ಇದು ಉದ್ದೇಶಪೂರ್ವಕವಾಗಿ ಅಥವಾ ತಪ್ಪಾಗಿ ವರದಿ ಮಾಡುವುದನ್ನು ತಡೆಯುತ್ತದೆ. ಯುಟ್ಯೂಬ್ ಸುದ್ದಿ ಚಾನಲ್ ಮಿತವ್ಯಯಕಾರಿಯೂ ಆಗಿರಬಹುದು.
ರಾಜಕಾರಣಿಗಳು ಮತ್ತು ಪೊಲೀಸರ ನಡುವಿನ ನಂಟು ನಿಲ್ಲದ ಹೊರತು ಇಲಾಖೆಯ ಆಧುನೀಕರಣ ಯಾವುದೇ ಪರಿಣಾಮ ಬೀರುವುದಿಲ್ಲ. ಆಧುನೀಕರಣವು ಕೇವಲ ಭೌತಿಕ ಸ್ವರೂಪದ್ದಲ್ಲ. ಪೊಲೀಸರ ಮನಃಸ್ಥಿತಿಯೂ ಬದಲಾಗಬೇಕು. ಸಾಧನಗಳು ಯಾರನ್ನೂ ಮನುಷ್ಯರನ್ನಾಗಿ ಮಾಡುವುದಿಲ್ಲ. ಉಪಕರಣಗಳನ್ನು ತಯಾರಿಸುವುದು ಮನುಷ್ಯರೇ.
ಇದನ್ನೂ ಓದಿ: National Defence: ವಿದ್ಯುತ್ ಕ್ಷೇತ್ರದಲ್ಲಿ ಚೀನಾ ಮೇಲಿನ ಅವಲಂಬನೆ: ಭಾರತದ ಆರ್ಥ ವ್ಯವಸ್ಥೆಗೆ, ರಾಷ್ಟ್ರೀಯ ಭದ್ರತೆಗೆ ಮಾರಕ
ಇದನ್ನೂ ಓದಿ: National Defence: ತೈವಾನ್ ಮೇಲೇಕೆ ಚೀನಾಕ್ಕೆ ಕೆಂಗಣ್ಣು? ಅಮೆರಿಕಕ್ಕೆ ಇರುವ ಆಯ್ಕೆಗಳೇನು?