ಅಯೋಧ್ಯೆ, 1992-ಡಿಸೆಂಬರ್ 6ರಂದು ಆಗಿದ್ದೇನು: ಕರಸೇವಕನ ನೆನಪಿನ ಪುಟದಿಂದ

| Updated By: ರಮೇಶ್ ಬಿ. ಜವಳಗೇರಾ

Updated on: Jan 18, 2024 | 5:10 AM

1992 ರಲ್ಲಿ ಡಿಸೆಂಬರ್ 6 ರಂದು ಕರಸೇವಕರು ಬಾಬರಿ ಮಸೀದಿಯನ್ನು (Babri Masjid) ಕೆಡವಿದ್ದು , ಇದು ರಾಷ್ಟ್ರವ್ಯಾಪಿ ಧಾರ್ಮಿಕ ಗಲಭೆಗೆ ಕಾರಣವಾಯಿತು. ಈ ಗಲಭೆ 2,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು. ಇನ್ನು 1992 ರಲ್ಲಿ ಡಿಸೆಂಬರ್ 6ರಂದು ಏನೆಲ್ಲಾ ಆಯ್ತು ಎನ್ಜುವುದನ್ನು ಕರಸೇವಕನ ನೆನಪಿನ ಪುಟ ಈ ಕೆಳಗಿನಂತಿದೆ ನೋಡಿ.

ಅಯೋಧ್ಯೆ, 1992-ಡಿಸೆಂಬರ್ 6ರಂದು ಆಗಿದ್ದೇನು:  ಕರಸೇವಕನ ನೆನಪಿನ ಪುಟದಿಂದ
Follow us on

“ಯಾವ ಜಾಗದಲ್ಲಿ ಕರಸೇವೆ ಮಾಡುತ್ತಾರೊ ಆ ಜಾಗದಿಂದ ನಾನು ದೂರವಿರುತ್ತೇನಮ್ಮ.. ನೀನು ನಿಶ್ಚಿಂತಳಾಗಿರು” ಎಂದು ನಮ್ಮ ತಾಯಿಗೆ ಆಶ್ವಾಸನೆ ಕೊಟ್ಟು, ಅಯೋಧ್ಯೆ ತೆರಳಲು ನವೆಂಬರ್ 30ರಂದು ನಮ್ಮ ತಂಡದೊಂದಿಗೆ ಕೆಕೆ ಎಕ್ಸ್ ಪ್ರೆಸ್ ಹತ್ತಿದೆ. 1991ರ ಕರಸೇವೆಯ ಸಂದರ್ಭದಲ್ಲಿ ನಡೆದ ಪೊಲೀಸರ ಗೋಲಿಬಾರಿನಲ್ಲಿ ಅನೇಕ ರಾಮಭಕ್ತರನ್ನು ಮುಲಾಯಂ ಸಿಂಗ್ ಸರ್ಕಾರ ಅಮಾನುಷವಾಗಿ ಹತ್ಯೆ ಮಾಡಿತ್ತು. 1992ರಲ್ಲಿ ಮತ್ತೊಮ್ಮೆ ಕರಸೇವೆಗೆ ಹೊರಟಾಗ ಕುಟುಂಬ ಸದಸ್ಯರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದರು. ನಮ್ಮ ತಂಡದ ನೇತೃತ್ವವಹಿಸಿದ್ದ ಎನ್.ಎಸ್.ಗೋಪಾಲ್ ಅವರ ಇಡಿ ಕುಟುಂಬ ಕರಸೇವೆಗೆ ಬಂದಿತ್ತು. ಅವರ ಇಬ್ಬರು ತಮ್ಮಂದಿರು ಸಹಾ ಬಂದಿದ್ದರು.

ಮಧ್ಯರಾತ್ರಿ ಇಟಾರಸಿಯಲ್ಲಿ ಇಳಿದು ಮರುದಿನ ಬೆಳಿಗ್ಗೆ ಅಹಮದಾಬಾದ್ ತೆರಳುವ ರೈಲು ಹತ್ತಿದ್ದೆವು. ಅಲಹಾಬಾದಿನ ಸರಸ್ವತಿ ವಿದ್ಯಾ ಮಂದಿರದಲ್ಲಿ ನಮಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ರಾಜೇಂದ್ರ ಸಿಂಹಜೀ (ರಜ್ಜೂಭೈಯಾ) ಅವರು ತಮ್ಮ ಮನೆಯನ್ನೇ ಶಾಲೆ ನಡೆಸಲು ದಾನ ಮಾಡಿದ್ದ ಕಟ್ಟಡ ಅದಾಗಿತ್ತು.

ಇದನ್ನೂ ಓದಿ: Ramlala Pran Pratishtha: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬಿಜೆಪಿ, ವಿಎಚ್‌ಪಿ ಮತ್ತು ಕರಸೇವಕರ ಹೋರಾಟ ಹೇಗೆ ನಡೆದಿತ್ತು?

ಡಿಸೆಂಬರ್ -1: ಅಲಹಾಬಾದ್ ನಗರದ ರಸ್ತೆ ರಸ್ತೆಯಲ್ಲಿ ದಿನವಿಡಿ ಸ್ವಯಂಸೇವಕರು ಕರಸೇವಕರಿಗೆ ಬಿಸಿ ಬಿಸಿ ಚಹಾ ಮತ್ತು ಬಿಸ್ಕತ್ ಉಚಿತವಾಗಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕರಸೇವಕರನ್ನು ಕಂಡ ಕೂಡಲೇ ಜೈಶ್ರೀರಾಮ್ ಘೋಷಣೆಯ ಸ್ವಾಗತ.

ಸಂಜೆ ಬಸ್ ಮೂಲಕ ಅಯೋಧ್ಯೆ ತಲುಪಿದಾಗ ರಾತ್ರಿ ಹನ್ನೊಂದು ದಾಟಿತ್ತು.ಕರ್ನಾಟಕದ ವಸತಿಯು ಭರ್ತಿಯಾಗಿದ್ದರಿಂದ ನಮಗೆ ಪಕ್ಕದಲ್ಲಿಯೇ ಇದ್ದ ಗುಜರಾತ್ ರಾಜ್ಯದ ಟೆಂಟ್ ನಲ್ಲಿ ಸ್ಥಳಾವಕಾಶ ಮಾಡಲಾಯಿತು.

ಡಿಸೆಂಬರ್ -2: ವಿ.ಹೆಚ್.ಪಿ.ಯ ಒಡತನದಲ್ಲಿದ್ದ 67 ಎಕರೆ ಪ್ರದೇಶದಲ್ಲಿ ಇಪ್ಪತ್ತು ನಗರಗಳನ್ನು ನಿರ್ಮಿಸಲಾಗಿತ್ತು. ಟೆಂಟ್ ಒಳಗೆ ಪೂರ್ತಿ ಭತ್ತದ ಹುಲ್ಲನ್ನು ಹಾಸಲಾಗಿತ್ತು. ಅದರ ಮೇಲೆ ಜಮಖಾನ ಹಾಕಿಕೊಂಡು ಮಲಗಬೇಕಾಗಿತ್ತು. ಸಂಘದ ಶಿಬಿರಗಳಲ್ಲಿನ ವ್ಯವಸ್ಥೆಯ ರೀತಿಯ ಹಾಗೆಯೇ ಇಲ್ಲಿಯೂ ಮಾಡಲಾಗಿತ್ತು. ಪ್ರತಿ ನಗರಕ್ಕೂಂದು ಅಡಿಗೆ ಮನೆಯನ್ನು ನಿರ್ಮಿಸಲಾಗಿತ್ತು.

ಕರ್ನಾಟಕದವರಿಗೆ ಅಡಿಗೆ ಮನೆಯನ್ನು ಸಿದ್ದಪಡಿಸಲು ಹತ್ತು ದಿನದ ಮುಂಚೆಯೇ ನೂರಾರು ಜನರು ಬಂದಿಳಿದಿದ್ದರು. ಕಲ್ಲಡ್ಕ ಡಾ।ಪ್ರಭಾಕರ ಭಟ್ಟರು ಇದರ ನೇತೃತ್ವವನ್ನು ವಹಿಸಿದ್ದರು. ಅಡಿಗೆ ಮಾಡಲು ಬೇಕಾದ ಪಾತ್ರೆಗಳನ್ನು ಮತ್ತು ದಿನಸಿಯನ್ನು ಕೇಂದ್ರ ಮಂಡಳಿಯಿಂದ ಎಲ್ಲಾ ವಸತಿಗಳಿಗೆ ವಿತರಿಸಲಾಗುತ್ತಿತ್ತು. ದಕ್ಷಿಣದ ರಾಜ್ಯಗಳಿಗೆ ಗೋಧಿ ಹಿಟ್ಟಿಗಿಂತ ಅಕ್ಕಿಯ ಬೇಡಿಕೆ ಹೆಚ್ಚಿದ್ದ ಕಾರಣ ಕೇಂದ್ರ ಮಂಡಳಿಯವರು ಅದರತ್ತ ವಿಶೇಷ ಗಮನಹರಿಸಿ ಸರಬರಾಜು ಮಾಡುತ್ತಿದ್ದರು.

ಮುಂಜಾನೆ ತಿಂಡಿಗೆ ರುಚಿಕರವಾದ ಹುಗ್ಗಿ, ಉಪ್ಪಿಟ್ಟು ಅಥವಾ ಚಿತ್ರಾನ್ನ ಮಾಡುತ್ತಿದ್ದರು. ಪ್ರತಿ ನಗರಕ್ಕೂ ಊಟಕ್ಕೆ ಪೂರಿ ಬಾಜಿ ಜನ್ಮಭೂಮಿ ಟ್ರಸ್ಟ್ ನ ಅಡಿಗೆ ಮನೆಯಿಂದ ಲಾರಿಯಲ್ಲಿ ತುಂಬಿಕೊಂಡು ತಂದು ಕೊಡುತ್ತಿದ್ದರು. ಪ್ರತಿನಿತ್ಯ ಎಂಟರಿಂದ ಹತ್ತು ಸಾವಿರ ಜನರಿಗೆ ಬೆಳಿಗ್ಗೆ ತಿಂಡಿ ಎರಡು ಹೊತ್ತು ಊಟ ಕೊಡುವ ವ್ಯವಸ್ಥೆ ಅಲ್ಲಿ ಇತ್ತು. ಯಾರೊಬ್ಬರೂ ಖಾಲಿ ಹೊಟ್ಟೆಯಲ್ಲಿ ಇರಬಾರದಂತೆ ನೋಡಿಕೊಂಡಿದ್ದರು. ಡಿಸೆಂಬರ್ ಆರು ಸಮೀಪಿಸುತ್ತಿದ್ದ ಹಾಗೆ ಕರಸೇವಕರ ದಂಡು ದಂಡು ಬಂದು ಸೇರುತ್ತಿದ್ದರು.

ನಮ್ಮ ವಸತಿಯ ಸಮೀಪದಲ್ಲಿಯೇ ದೊಡ್ಡ ವೇದಿಕೆ ನಿರ್ಮಿಸಲಾಗಿತ್ತು. ಕರಸೇವಕರಿಗೆ ಪ್ರತಿನಿತ್ಯ ಧಾರ್ಮಿಕ ಮುಂಡರು ಬಿಜೆಪಿ ನಾಯಕರುಗಳ ಸ್ಪೂರ್ತಿದಾಯಕ ಭಾಷಣವಿರುತ್ತಿತ್ತು. ಸಹಸ್ರಾರು ಕರಸೇವಕರನ್ನು ಹಿಡಿದಿಟ್ಟು ಕೊಂಡು ಅವರನ್ನು ವಿವಿಧ ಚಟುವಟಿಕೆಯಲ್ಲಿ ತೊಡಗಿಸುವುದು ಸವಾಲಿನ ಕೆಲಸವಾಗಿತ್ತು. ಪತ್ರಿಕಾ ವರದಿ ಮಾಡಿದಂತೆ ಆ ವೇದಿಕೆಯು ಯಾರನ್ನು ಪ್ರಚೋದಿಸುವ ಭಾಷಣಕ್ಕೆ ಬಳಕೆಯಾಗಿರಲಿಲ್ಲ.

ಅಶೋಕ್ ಸಿಂಘಾಲ್, ಸಾಧ್ವಿ ರಿತಾಂಬರ, ಉಮಾ ಭಾರತಿ, ಆಚಾರ್ಯ ಧರ್ಮೇಂದ್ರ, ವಿನಯ್ ಕಟಿಯಾರ್ ಇವರ ಭಾಷಣಗಳು ಕರಸೇವಕರಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಿತ್ತು.

ಬಿ.ಎಸ್. ಯಡಿಯೂರಪ್ಪ, ರಾಮಚಂದ್ರ ಗೌಡ, ಅರವಿಂದ ಲಿಂಬಾವಳಿ, ವಿಜಯಕುಮಾರ್, ಸುನೀಲ್ ಕುಮಾರ್ ಮುಂತಾದ ಬಿಜೆಪಿ ನಾಯಕರು ಅಲ್ಲಿ ನಿರ್ಮಿಸಿದ್ದ ವಸತಿಯ ಪೆಂಡಾಲ್ ನಲ್ಲಿಯೇ ಉಳಿದುಕೊಂಡಿದ್ದರು. “ನಾವು ಒಂದು ವಾರ ಮುಂಚಿತವಾಗಿ ಅಯೋಧ್ಯೆಯನ್ನು ತಲುಪಿ ಅಲ್ಲಿನ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದೇವು. ಅಡಿಗೆ ಮನೆ, ಆಹಾರ ಪದಾರ್ಥಗಳ ಸರಬರಾಜು ಮತ್ತು ಊಟದ ಸಮಯದಲ್ಲಿ ಬಡಿಸುವ ಕೆಲಸ ಹೀಗೆ ದಿನವಿಡಿ ಬಂದಂತಹ ಕಾರ್ಯಕರ್ತರ ವ್ಯವಸ್ಥೆಯಲ್ಲಿ ಕೊರತೆಯಾಗದಂತೆ ಗಮನಿಸುವ ಕೆಲಸದಲ್ಲಿ ತೊಡಗಿದ್ದೇವು” ಎನ್ನುತ್ತಾರೆ ಅಂದು ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿಯವರು.

ಕರಸೇವಕರ ಮತ್ತು ಮಾಧ್ಯಮ ಪ್ರತಿನಿಧಿಗಳ ಸಂಬಂಧ ಎಣ್ಣೇ ಸಿಗೇಕಾಯಿಯ ಹಾಗೆ ಇತ್ತು. ಮಾಧ್ಯಮದಲ್ಲಿ ಬರುತ್ತಿದ್ದ ವರದಿಗಳು ಕರಸೇವಕರನ್ನು ತೀವ್ರವಾಗಿ ಕೆರೆಳಿಸಿದ್ದು ಅಲ್ಲಗೆಳೆಯಲು ಸಾಧ್ಯವಿಲ್ಲ. ಸಣ್ಣ ಕಿಡಿಯೊಂದು ಬಿದ್ದರೆ ಬೆಂಕಿ ಹತ್ತಿ ಉರಿಯುವುದು ಖಚಿತವಾಗಿತ್ತು. ಸಂಪೂರ್ಣ ನಕಾರಾತ್ಮ ವರದಿಗಳನ್ನು ದಿನನಿತ್ಯ ಬರೆಯಲಾಗುತ್ತಿತ್ತು. ಕಪೋಲ ಕಲ್ಪಿತ ಕತೆಗಳನ್ನು ಹೆಣದು ಹೋರಾಟವನ್ನು ಗೌಣ ಮಾಡಲು ಸರ್ವ ಯತ್ನ ಮಾಡಲಾಗುತ್ತಿತ್ತು. ಬಹುತೇಕ ವರದಿಗಳು ಡೆಸ್ಕ್ ಬರಹವಾಗಿತ್ತೆ ವಿನಹ ಪ್ರತ್ಯಕ್ಷದರ್ಶಿಗಳ ವರದಿಯಾಗಿರಲಿಲ್ಲ.

ಡಿಸೆಂಬರ್ -4: ನಾಲ್ಕನೆಯ ತಾರೀಖು ನಮಗೆ ಡಿಸಂಬರ್ ಆರರಂದು ನಡೆಯುವ ಕರಸೇವೆಯ ಸ್ವರೂಪವನ್ನು ಸಂಘದ ಹಿರಿಯ ನಾಯಕರು ತಿಳಿಸುತ್ತಾರೆ. ಪ್ರತಿಯೊಬ್ಬ ಕರಸೇವಕರು ಸರಯೂ ನದಿಯ ತಟಕ್ಕೆ ಹೋಗಿ ಒಂದು ಬೊಗಸೆ ಮರಳನ್ನು ತರಬೇಕು ಮತ್ತು ಆರನೆಯ ತಾರೀಖು ಅದನ್ನು ಕರಸೇವೆ ಮಾಡಲು ಉದ್ದೇಶಿಸಿರುವ ಸ್ಥಳದಲ್ಲಿ ಹಾಕಬೇಕು ಎಂದು ತಿಳಿಸುತ್ತಾರೆ. ಕರಸೇವೆಯ ಸ್ವರೂಪವನ್ನು ಕೇಳಿ ಅನೇಕರು ಕೆಂಡಾಮಂಡಲರಾದರು. ಅನೇಕರು ಸಂಪೂರ್ಣ ನಿರಾಶರಾಗಿ ಇಲ್ಲಿಗೆ ಬಂದು ಸಮಯ ಹಾಳಾಯಿತು ಈ ಪುರುಷಾರ್ಥಕ್ಕಾಗಿ ಲಕ್ಷಾಂತರ ಜನರನ್ನು ಸೇರಿಸಬೇಕಿತ್ತಾ ಎಂಬ ಕಟು ಟೀಕೆಗಳು ಪುಖಾನುಪುಂಖಾವಾಗಿ ರಾಮಬಾಣಕ್ಕಿಂತ ತೀಕ್ಷ್ಣವಾಗಿ ಬರಲಾರಂಭಿಸಿತು.

ಸಾವಿರಾರು ಕರಸೇವಕರು ನಿರಾಶೆಗೊಂಡು ತಮ್ಮ ಊರಿಗೆ ವಾಪಸ್ ಕೂಡಾ ಹೋಗುತ್ತಾರೆ. ಯಾವುದೇ ಕಾರಣಕ್ಕೂ ಅಶಿಸ್ತಿಗೆ ಅವಕಾಶ ಕೊಡಬಾರದು ಎಂದು ನಮಗೆ ಸ್ಪಷ್ಟ ಸೂಚನೆಯಿತ್ತು. ಕೇವಲ ಮಣ್ಣು ಹಾಕಿ ಕರಸೇವೆ ಮಾಡಬೇಕು ಎಂದಾಗ ನೆರದಿದ್ದ ಲಕ್ಷಾಂತರ ಕಾರ್ಯಕರ್ತರಲ್ಲಿ ಅದೆಷ್ಟೇ ರೋಷವಿದ್ದರು ಯಾವುದೇ ಅಹಿತಕರ ಘಟನೆಗೆಳಿಗೆ ಅವಕಾಶ ಮಾಡಿಕೊಡಲಿಲ್ಲ. ಆ ಮಟ್ಟಿಗೆ ಬಂದವರ ಶಿಸ್ತು ಸಂಯಮ ಮೆಚ್ಚುವ ಹಾಗಿತ್ತು.

ಡಿಸೆಂಬರ್ – 5: ಮಧ್ಯಾಹ್ನ 4 ಗಂಟೆಗೆ ಒಂದೊಂದೆ ರಾಜ್ಯದ ಕರಸೇವಕರು ಸಾಲಿನಲ್ಲಿ ತೆರಳಿ ಕರಸೇವೆ ಮಾಡಲು ನಿಗದಿತ ಸ್ಥಾನದಲ್ಲಿ ಮರಳು ಹಾಕಿ ಬಂದೆವು. ಎಲ್ಲರ ಮುಖದಲ್ಲಿಯೂ ಅಸಮಾಧಾನ ತಾಂಡವವಾಡುತ್ತಿತ್ತು. ಆದರೆ ಸೂಚನೆ ಪಾಲಿಸಬೇಕಾದ ಅನಿವಾರ್ಯತೆಯಿಂದ ಹೇಳಿದ್ದನ್ನು ಮಾಡಿ ಮುಗಿಸಿದೆವು.

ಮರುದಿನದ ಕರಸೇವೆ ನಡೆಯುವ ಸಮಯದಲ್ಲಿ ರಕ್ಷಣೆಯ ವ್ಯವಸ್ಥೆಗೆ ಕರ್ನಾಟಕದವರು ಆಯ್ಕೆಯಾಗುತ್ತಾರೆ. ನಮಗೆಲ್ಲಾ ಮುಖ್ಯಸ್ಥರಿದ್ದ ವಿ.ಮಂಜುನಾಥ್ ರವರು ಸಂಘ ಶಿಕ್ಷಾ ವರ್ಗವಾಗಿದ್ದ ಸ್ವಯಂಸೇವಕರ ಬೈಠಕ್ ತೆಗೆದುಕೊಂಡು ನಮಗೆಲ್ಲಾ ರಕ್ಷಣೆ ಮಾಡಬೇಕಾದ ಸ್ಥಳ ಮತ್ತು ಕರ್ತವ್ಯದ ವಿವರವನ್ನು ನೀಡಿದರು.

ಡಿಸೆಂಬರ್ – 6: ಬೆಂಗಳೂರಿನಿಂದ ಬಂದಿದ್ದ ಐವತ್ತು ಮಂದಿ ಕಾರ್ಯಕರ್ತರನ್ನು ಕರಸೇವೆ ಮಾಡಲು ನಿಗದಿಪಡಿಸಿದ್ದ 150 ಮೀಟರ್ ವ್ಯಾಪ್ತಿಯಲ್ಲಿ ರಕ್ಷಣೆಗೆ ನೇಮಿಸಿದರು. ಆ ತಂಡದಲ್ಲಿ ನಾನು ಕೂಡಾ ಒಬ್ಬನಾಗಿದ್ದೆ. ಸುತ್ತಲು ಬ್ಯಾರಿಕೇಡ್ ಹಾಕಿ ಆ ಸ್ಥಳಕ್ಕೆ ಯಾರು ನುಗ್ಗದಿರಲು ಬಲಪಡಿಸಲಾಗಿತ್ತು. ನಮಗೆಲ್ಲಾ ಸಂಘದ ನಿಕ್ಕರ್ ಧರಿಸಿ ಬರಲು ಸೂಚಿಸಲಾಗಿತ್ತು. ಪೊಲೀಸರ ಜೊತೆ ನಾವು ಅಲ್ಲಿ ಯಾರೂ ನುಗ್ಗದಿರುವಂತೆ ತಡೆಯಲು ಬೆಳಿಗ್ಗೆಯೇ ಹೋಗಿ ನಿಂತೆವು.

ಸಮಯ ಮೀರಿದ ಹಾಗೆ ಕರಸೇವಕರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಕರಸೇವೆ ನಡೆಯುವ ಸ್ಥಳದ ಪಕ್ಕದಲ್ಲಿ ದೊಡ್ಡ ಕಟ್ಟಡವೊಂದು ಇತ್ತು. ಅದರ ಮೇಲೆ ಸಾವಿರಾರು ಕರಸೇವಕರು ಸೇರಿದ್ದರು. ಒಂದೇ ಸಮನೆ ಜೈ ಶ್ರೀರಾಮ ಘೋಷಣೆ ಮತ್ತು ಓಹೋ ಎಂದು ಕೂಗುತ್ತಿದ್ದರು. ಕರಸೇವೆ ಮಾಡಲು ನಿಗದಿತವಾಗಿದ್ದ ಸ್ಥಳಕ್ಕೆ ಒಬ್ಬೊಬ್ಬರೆ ನುಗ್ಗಲು ಪ್ರಾರಂಭಿಸುತ್ತಾರೆ. ನಮ್ಮ ತಂಡ ಅವರನ್ನು ಹೊರ ದಬ್ಬಲು ಪ್ರಯತ್ನ ಮಾಡಿದಾಗ ಸುತ್ತಲೂ ನೆರದಿದ್ದ ಕರಸೇವಕರು ಏರಿದ ಗಂಟಲಲ್ಲಿ ಕಿರುಚಿಕೊಳ್ಳಲು ನಮಗೆ ಅವರ ಹತ್ತಿರ ಹೋಗಲು ಬಿಡುವುದಿಲ್ಲ. ವೇದಿಕೆಯಿಂದ ಒಂದೇ ಸಮನೆ ಸಂಯಮ ಮತ್ತು ಶಾಂತಿ ಕಾಪಾಡಿಕೊಳ್ಳಲು ವಿನಂತಿ ಮಾಡುತ್ತಿರುತ್ತಾರೆ. ಅದು ಗೋಡೆಯ ಮುಂದೆ ಕಿರುಚಿದಷ್ಟೆ ಅಪ್ರಯೋಜನವಾಗುತ್ತದೆ.

ಇಪ್ಪತೈದು ಜನ ಕರಸೇವರಿಂದ ಆರಂಭವಾಗಿ ಕ್ಷಣ ಮಾತ್ರದಲ್ಲಿ ಅದು ಸಾವಿರ ಸಂಖ್ಯೆಯನ್ನು ದಾಟುತ್ತದೆ. ನಮ್ಮ ತಂಡದವರಿಗೆ ಅವರನ್ನು ತಡೆಯಲು ಸಾಧ್ಯವಿಲ್ಲ ಸುಮ್ಮನಿದ್ದು ಬಿಡೋಣ ಎಂದು ಹೇಳಿ, ಮುಂದಾಗುವ ಬೆಳವಣಿಗೆಯ ಬಗ್ಗೆ ಆತಂಕದಲ್ಲಿದ್ದೆವು. ಆ ಸಮಯದಲ್ಲಿ ಅದೆಲ್ಲಿ ಇದ್ದರೊ ಇಪ್ಪತ್ತೈದು ಜನ ಯುವಕರ ತಂಡವು ಹಣೆಗೆ ಹಳದಿ ಪಟ್ಟಿ ಕಟ್ಟಿಕೊಂಡು ಕರಸೇವೆ ಆವರಣದೊಳಗೆ ನುಗ್ಗಿ ಬಂದು ಒಳಗೆ ನುಗ್ಗಿದ್ದವರನ್ನು ಎತ್ತಿ ಹೊರ ಹಾಕಲು ಶುರು ಮಾಡುತ್ತಾರೆ. ಇದರಿಂದ ಸುತ್ತಮುತ್ತಲು ನೆರದಿದ್ದ ಕಾರ್ಯಕರ್ತರು ರೊಚ್ಚಿಗೆದ್ದು ಆವರಣದ ಸುತ್ತಲು ಕಟ್ಟಿದ್ದ ಬ್ಯಾರಿಕೇಡ್ ಕಿತ್ತು ಬಿಸಾಕಿ ಎಲ್ಲಾ ಒಳ ನುಗ್ಗಲು ಪ್ರಾರಂಭಿಸಿದರು. ಕಿವಿಗಡಚ್ಚಿಕುವ ಹಾಗೆ ಲಕ್ಷಾಂತರ ಜನ ಕೂಗುತ್ತಿದ್ದರೆ. ಎಂಥವನ ಗಂಡೆದೆಯು ನಡುಗಿಸುತ್ತಿತ್ತು.

ವಿವಾದಿತ ಕಟ್ಟಡದ ಸುತ್ತ ನೂರಾರು ಪೊಲೀಸರು ನಿಂತಿದ್ದರು ಮತ್ತು ಎಲ್ಲ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದರು. ಒಮ್ಮೆಗೆ ವಿವಾದಿತ ಕಟ್ಟಡಕ್ಕೆ ಎಲ್ಲಾ ದಿಕ್ಕುಗಳಿಂದ ಕರಸೇವಕರು ನುಗ್ಗಲು ಶುರು ಮಾಡುತ್ತಾರೆ. ಸಹಸ್ರಾರು ಜನರು ವಿವಾದಿತ ಕಟ್ಟಡಕ್ಕೆ ನುಗ್ಗಿ ಅದನ್ನು ಧ್ವಂಸ ಮಾಡಲು ಆರಂಭಿಸುತ್ತಾರೆ.

ಕಟ್ಟಡ ರಕ್ಷಣೆಗೆ ನೇಮಕವಾಗಿದ್ದ ಅರಸೇನಾ ಪಡೆ, ಯುಪಿ ಪೊಲೀಸರು ಕರಸೇವಕರನ್ನು ಕಟ್ಟಡದ ಬಳಿ ಬಾರದಂತೆ ತಡೆಯಲು ಯಾವ ಪ್ರಯತ್ನವನ್ನು ಮಾಡುವುದಿಲ್ಲ ಬದಲಿಗೆ ಅವರೆಲ್ಲರೂ ತಮ್ಮ ಸ್ಥಳದಿಂದ ಎಲ್ಲ ಹೊರ ಹೊರಟು ಹೋಗುತ್ತಾರೆ.

ಕರಸೇವಕರು ತಮ್ಮ ಆಕ್ರೋಶವನ್ನು ಅಲ್ಲಿದ್ದ ಪತ್ರಕರ್ತರ ಮೇಲೆ ತಿರುಗಿಸುತ್ತಾರೆ. ಸಿಕ್ಕಿದವರ ಮೇಲೆ ಹಲ್ಲೆಯಾಗುತ್ತದೆ. ಅವರ ಕ್ಯಾಮರಾಗಳು ಈಡುಗಾಯಿ ರೀತಿ ಒಡೆದು ಹಾಕುತ್ತಾರೆ. ಕಾರು ಗಾಜುಗಳು ಪುಡಿ ಪುಡಿಯಾಗುತ್ತವೆ. ಕೆಲವೇ ಕ್ಷಣದಲ್ಲಿ ಪತ್ರಕರ್ತರ್ಯಾರು ಅಲ್ಲಿ ಇರದ ಹಾಗೆ ಅವರನ್ನು ಒಡಿಸುತ್ತಾರೆ.

ಅಯೋಧ್ಯೆ ನಗರವಾಸಿಗಳು ಸನಿಕೆ, ಸುತ್ತಿ, ಗಡಪಾರೆ ಮುಂತಾದ ಸಲಕರಣೆಗಳನ್ನು ತಂದು ಕೊಟ್ಟಿದ್ದರಿಂದ ಕಟ್ಟಡವನ್ನು ಒಡೆಯುವ ಕೆಲಸ ಸಲೀಸಾಯಿತು. ಒಂದೊಂದೆ ಗುಮ್ಮಟಗಳು ನೆಲಕಚ್ಚಲು ಆರಂಭವಾಯಿತು. ಸಂಜೆಯ ವೇಳೆಗೆ ಮೂರು ಗುಮ್ಮಟಗಳು ನೆಲಸಮವಾದವು.

ಕಟ್ಟಡ ಒಡೆಯಲು ಪ್ರಾರಂಭಿಸಿದಾಗ ಅಲ್ಲಿ ಪೂಜಿಸುತ್ತಿದ್ದ ರಾಮಲಲ್ಲಾ ರಕ್ಷಿಸಲಾಯಿತು. ರಾತ್ರಿ ಮತ್ತೆ ರಾಮಲಲ್ಲಾ ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಲು ವಿ.ಹಿ.ಪ. ತೀರ್ಮಾನಿಸಿ ತ್ವರಿತ ವಾಗಿ ತಾತ್ಕಲಿಕ ಕಟ್ಟಡ ನಿರ್ಮಿಸಲು ನಡು ರಾತ್ರಿಯಲ್ಲಿಯೇ ಕೆಲಸ ಪ್ರಾರಂಭವಾಗುತ್ತದೆ. ಬೆಳಕು ಹರಿಯುವುದರಲ್ಲಿ ರಾಮಲಲ್ಲಾ ಪ್ರತಿಮ ಮೂಲ ಸ್ಥಾನ ಸೇರುತ್ತದೆ.

ಡಿಸೆಂಬರ್ -7: ಮರುದಿನ ಕೆಡವಿದ್ದ ಕಟ್ಟಡ ಅವಶೇಷಗಳನ್ನು ಹೊರಗೆ ಸಾಗಿಸುವ ಕೆಲಸ ಕೈಗೆತ್ತಿಕೊಳ್ಳಲಾಯಿತು. ವೇಗವಾಗಿ ಅಲ್ಲಿ ಬಿದ್ದಿದ್ದ ಇಟ್ಟಿಗೆ ಮಣ್ಣೆಲ್ಲಾ ಹೊರ ತೆಗೆಯಲಾಯಿತು. ಅಯೋಧ್ಯೆಗೆ ಎಂಟನೇ ತಾರೀಖು ಬೆಳಿಗ್ಗೆ ಪೊಲೀಸರು ಪ್ರವೇಶಿಸುವ ಸೂಚನೆ ಇದ್ದ ಕಾರಣ ರಾಮಲಲ್ಲಾ ಪ್ರತಿಷ್ಠಾಪನೆ ಅನಿವಾರ್ಯವಾಗಿತ್ತು ಮತ್ತು ನ್ಯಾಯಾಲಯದಲ್ಲಿ ಯಥಾಸ್ಥಿತಿ ಕಾಯ್ದು ಕೊಳ್ಳುವ ಆದೇಶದ ನಿರೀಕ್ಷೆಯಿಂದ ತಡ ಮಾಡದೆ ರಾಮಲಲ್ಲಾ ತಾತ್ಕಾಲಿಕ ಕಟ್ಟಡದಲ್ಲಿ ಸ್ಥಾಪಿಸಬೇಕಾಯಿತು.

ಅಂದು ಸಂಜೆ ಕರಸೇವೆ ನಡೆಯುವಾಗ ನಾನು ಧೈರ್ಯ ಮಾಡಿ ನನ್ನ ಬಳಿ ಇದ್ದ ಕ್ಯಾಮರದಿಂದ ಕರಸೇವೆ ಮಾಡುವ ಫೋಟೊ ತೆಗೆದೆನು. ಆದ್ದರಿಂದಲೇ ಯಡಿಯೂರಪ್ಪ ಮತ್ತು ರಾಮಚಂದ್ರ ಗೌಡರವರು ಕರಸೇವೆ ಮಾಡುವ ಚಿತ್ರ ದೊರೆಯಲು ಸಾಧ್ಯವಾಯಿತು. ಪ್ರಾಯಶ: ದೇಶದಲ್ಲಿ ನನ್ನೊಬ್ಬನ ಬಳಿ ಮಾತ್ರ ಕರಸೇವೆ ಮಾಡುತ್ತಿರುವ ಚಿತ್ರವಿರುವುದು.

ಡಿಸೆಂಬರ್ – 8: ನಿರೀಕ್ಷೆ ಮಾಡಿದ ಹಾಗೆ ಎಂಟರ ಬೆಳಗಿನ ಜಾವ ಆರ್.ಎ.ಎಫ್. ಅಯೋಧ್ಯೆ ಪ್ರವೇಶಿಸಿತು. ಹಿಂದಿನ ದಿನ ರಾತ್ರಿ ನಮಗೆ ಸ್ಪಷ್ಟ ಸೂಚನೆಯಿತ್ತು, ಪೊಲೀಸರು ಬಂದೊಡನೆ ರೈಲು ನಿಲ್ದಾಣಕ್ಕೆ ತೆರಳಿ ನಮ್ಮ ಊರು ಸೇರಿಕೊಳ್ಳಬೇಕು ಎಂದು. ಧ್ವನಿವರ್ಧಕದಲ್ಲಿ ಜನ್ಮಸ್ಥಾನದ ಬಳಿ ಬರಲು ಕೂಗುತ್ತಿದ್ದರು. ಆದರೆ ನಾವು ಮುಂಚಿತವಾಗಿ ಹೇಳಿದ್ದರಿಂದ ನೇರ ರೈಲು ಹತ್ತಿ ಕಾಶಿ ತಲುಪಿ ಅಲ್ಲಿಂದ ಚನ್ನೈಗೆ ಬಂದು ಬಸ್ ಮೂಲಕ ಬೆಂಗಳೂರು ಸೇರಿದೆವು. ಬೆಂಗಳೂರು ತಲುಪಿ ಕಟ್ಟಡ ನೆಲಸಮದ ಬಿಸಿಯು ಇಳಿದಾಗ ನಮಗೆ ಗೊತ್ತಾಗಿದ್ದು ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರೆ ಬಹು ಮುಖ್ಯ ಕರಸೇವಕರಾಗಿದ್ದರು ಎಂದು.

ಲೇಖನ: ಪ್ರಕಾಶ್ ಶೇಷರಾಘವಾಚಾರ್