Karnataka Polls: ಕರ್ನಾಟಕದಲ್ಲಿ ಗುಜರಾತ್ ಮಾದರಿ; 72 ಹೊಸ ಮುಖ, ಮೋದಿ – ಶಾ ಲೆಕ್ಕಾಚಾರ ಏನು?

|

Updated on: Apr 19, 2023 | 11:33 AM

ಈ ಬಾರಿ ಕರ್ನಾಟಕದಲ್ಲಿ ಮೋದಿ ಹಾಗೂ ಅಮಿತ್ ಶಾ ಲೆಕ್ಕಾಚಾರದಂತೆ ನಡೆದು 72 ಹಾಲಿ ಶಾಸಕರನ್ನು ಮನೆಗೆ ಕಳಿಸಿದ ಪ್ರಯೋಗ ಯಶಸ್ವಿಯಾದರೆ ಬಹು ದೊಡ್ಡ ಫಲಿತಾಂಶ ಕಾದಿದೆ-ಪಕ್ಷ ಪುನಃ ಅಧಿಕಾರಕ್ಕೆ ಬರುವುದು. ಅದು ಮೊದಲ ಯಶಸ್ಸು. ಅದಕ್ಕಿಂತ ದೊಡ್ಡ ಯಶಸ್ಸು ಯಾವುದು ಗೊತ್ತೆ? ಮುಂದೆ ಓದಿ.

ಅಧಿಕಾರದ ವಿರೋಧಿ ಅಲೆ ಮಣಿಸಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಅಧಿಕಾರದ ಗದ್ದುಗೆ ಹಿಡಿವ ಕಲೆ ಕರಗತ ಮಾಡಿಕೊಂಡಿರುವ ಭಾರತೀಯ ಜನತಾ ಪಕ್ಷವು (BJP), ವಿಂಧ್ಯಾಚಲದ ಕೆಳಗೆ ತಮ್ಮ ಪಕ್ಷದ ನೆಲೆ ಗಟ್ಟಿಗೊಳಿಸಿ ಬೇರೆ ಬೇರೆ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಅನೇಕ ಪ್ರಯೋಗವನ್ನು ನಡೆಸುತ್ತಿದೆ. ಈ ಪ್ರಯೋಗದ ಭಾಗವಾಗಿಯೇ, ಪ್ರಧಾನಿ ನರೇಂದ್ರ ಮೋದಿ (Narendra Modi) -ಅಮಿತ್ ಶಾ (Amit Shah) ಜೋಡಿ ಕರ್ನಾಟಕದ ಚುನಾವಣೆಯಲ್ಲಿ (Karnataka Assembly Elections) ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಅನೇಕ ಹಾಲಿ ಶಾಸಕರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಿದೆ. ಈ ಪ್ರಯೋಗಕ್ಕೆ ಗುಜರಾತ್ ಮಾದರಿ ಪ್ರಯೋಗ ಎಂದು ಹೆಸರು. ಗುಜರಾತಿನಲ್ಲಿ ಮೋದಿ-ಶಾ ಜೋಡಿ, ಹಾಲಿ ಶಾಸಕರನ್ನು ಕೈ ಬಿಟ್ಟು ಹೊಸಬರನ್ನು ಕಣಕ್ಕಿಳಿಸಿ ಗೆಲ್ಲಿಸಿ ಪಕ್ಷವನ್ನು ಯಶಸ್ವಿಯಾಗಿ ಅಧಿಕಾರಕ್ಕೆ ತಂದಿದ್ದಾರೆ.

ರಾಜಕೀಯ ಪಕ್ಷವೊಂದು ಕರ್ನಾಟಕದಲ್ಲಿ ಈ ರೀತಿಯ ಪ್ರಯೋಗಕ್ಕೆ ಕೈ ಹಾಕಿರುವುದು ಇದೇ ಮೊದಲು. 72 ಹೊಸ ಮುಖಗಳಿಗೆ ಮಣೆ ಹಾಕಿದ್ದು ಸಣ್ಣ ಪ್ರಯೋಗ ಅಲ್ಲವೇ ಅಲ್ಲ. ರಾಜ್ಯದ ಯಾವ ನಾಯಕರೂ ಕೂಡ ಈ ರೀತಿಯ ಪ್ರಯೋಗಕ್ಕೆ ಕೈ ಹಾಕಲಾರರು. ಪಕ್ಷದ ಮೂಲಗಳ ಪ್ರಕಾರ, ಗುಜರಾತ್ ಮಾದರಿ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲೇಬೇಕು ಎಂಬ ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಪ್ರಧಾನಿ ಮೋದಿ. ಬಿ. ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮುಂದಿಟ್ಟುಕೊಂಡು 2018 ರ ಚುನಾವಣೆಗೆ ಹೊರಟಾಗ, ಬಿಜೆಪಿ ಇಂತಹ ಪ್ರಯೋಗ ಮಾಡಲು ಉದ್ದೇಶಿಸಿತ್ತು. ಇಂತಹ ಪ್ರಯೋಗದಿಂದ ಪಕ್ಷಕ್ಕೆ ತೊಂದರೆ ಆಗಬಹುದೆಂದು ವಿವರಿಸಿದ್ದ ಯಡಿಯೂರಪ್ಪನವರು, ಈ ಪ್ರಯೋಗ ಆಗದಂತೆ ತಡೆದಿದ್ದರು. ಈ ಬಾರಿ ಪಕ್ಷಕ್ಕೆ ಅಧಿಕಾರ ವಿರೋಧಿ ಅಲೆ ಇರಬಹುದು. ಆಡಳಿತ ವಿರೋಧಿ ಅಲೆಯನ್ನು ಸಂಪೂರ್ಣವಾಗಿ ಅಳಿಸಿಹಾಕಲು ಈ ಪ್ರಯೋಗದಿಂದ ಮಾತ್ರ ಸಾಧ್ಯ ಎಂಬ ದೃಷ್ಟಿಯಿಂದ ಇಂತಹ ಪ್ರಯೋಗಕ್ಕೆ ಕೈ ಹಾಕಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿಧಾನ ಸಭೆಯ ಚುನಾವಣೆಗೆ ಸಂಬಂಧಿಸಿದಂತೆ, ಆಡಳಿತ ವಿರೋಧಿ ಅಲೆಯಲ್ಲಿ ಐದು ಲಕ್ಷಣವನ್ನು ಗುರುತಿಸಬಹುದು: ರಸ್ತೆ, ನೀರು- ಈ ರೀತಿಯ ಮೂಲಭೂತ ಸೌಕರ್ಯವನ್ನು ಕ್ಷೇತ್ರದ ಜನರಿಗೆ ಕೊಡಿಸದಿರುವುದು; ಕೆಲಸ ಮಾಡಿಕೊಡಲಿ ಅಥವಾ ಬಿಡಲಿ, ತಮ್ಮನ್ನು ಭೇಟಿ ಮಾಡಲು ಬರುವ ಕ್ಷೇತ್ರದ ಜನರ ಜೊತೆ ಸೌಜನ್ಯ ಮೀರಿ ವರ್ತಿಸಿ, ಶಾಸಕರೇ ತಮ್ಮ ಕೈಯಾರೆ ಋಣಾತ್ಮಕ ಅಭಿಪ್ರಾಯ ಮೂಡಲು ಕಾರಣಿಕರ್ತರಾಗುವುದು; ಜನರಿಗೆ ವೈಯಕ್ತಿಕ ಸಹಾಯ ಮಾಡುವುದು; ಯಾವುದೇ ರೀತಿಯ ಭ್ರಷ್ಟಾಚಾರ ಮತ್ತು ಇನ್ನಿತರೆ ಅನೈತಿಕ ವ್ಯವಹಾರದಲ್ಲಿ ಸಿಲುಕಿಕೊಂಡು ಹೆಸರನ್ನು ಕೆಡಿಸಿಕೊಂಡಿರುವುದು ಮತ್ತು ಕೊನೆಯದಾಗಿ ರಾಜ್ಯ ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಫಲವನ್ನು, ತಮ್ಮ ಕ್ಷೇತ್ರದ ಹೆಚ್ಚಿನ ಜನರಿಗೆ ಕೊಡಿಸಲು ವಿಫಲವಾಗಿರುವುದು. ಉದಾಹರಣೆಗೆ ಸುಳ್ಯ ಕ್ಷೇತ್ರದ ಅಂಗಾರ ಅವರನ್ನು ತೆಗೆದುಕೊಳ್ಳೋಣ. ಆರು ಬಾರಿ ಆಯ್ಕೆಯಾಗಿ, ಕೊನೆಗೆ ಮಂತ್ರಿ ಆದ ಮೇಲೆ ತಮ್ಮ ಬಳಿ ಬರುತ್ತಿದ್ದ ಕ್ಷೇತ್ರದ ಜನರ ಮೇಲೆ ಸವಾರಿ ಮಾಡುತ್ತಿದ್ದರು ಎಂಬ ಆರೋಪ ಅವರ ಮೇಲಿತ್ತು. ಇನ್ನು ಕೆಲವರು, ತಮ್ಮ ಕ್ಷೇತ್ರದ ಜನರ ಕೈಗೆ ಸಿಗುತ್ತಿರಲಿಲ್ಲ. ನಾಲ್ಕೈದು ಶಾಸಕರು ಬೇರೆ ಬೇರೆ ರೀತಿಯ ಅನೈತಿಕ ವ್ಯವಹಾರದಲ್ಲಿ ಸಿಲುಕಿಕೊಂಡು, ಪಕ್ಷಕ್ಕೆ ತೀವ್ರ ಮುಜುಗರವುಂಟು ಮಾಡಿದ್ದರು. ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಈಗ ಬಿಜೆಪಿ ನಾಯಕರ ಮೇಲೆ ವಿವಿಧ ಆರೋಪ ಮಾಡಬಹುದು. ಆದರೆ, ಶೆಟ್ಟರ್ ಅಷ್ಟು ಯಶಸ್ವಿಯಾಗಿ ಜನರ ಸೇವೆಗೆ ತೊಡಗಿಸಿಕೊಂಡಿರಲಿಲ್ಲ ಎಂಬುದು ಕಹಿ ಸತ್ಯ.

ಇದನ್ನೂ ಓದಿ: Analysis: 2024ರ ಚುನಾವಣಾ ತಂತ್ರ ಅಂತಿಮಗೊಳಿಸಿದ ಬಿಜೆಪಿ; ಮೋದಿ ಮಂತ್ರವೇ ಶ್ರೀರಕ್ಷೆ

ಈ ಹಿನ್ನೆಲೆಯಲ್ಲಿ ಮೋದಿ ಪ್ರಯೋಗ ಕರ್ನಾಟಕದ ದೃಷ್ಟಿಯಲ್ಲಿ ಹೊಸದು. ಕೆಲವು ರಾಜಕೀಯ ಪಂಡಿತರು ಹೇಳಬಹುದು- ಕೆಲವು ಕಡೆ, ಹಾಲಿ ಇರುವ ಶಾಸಕರ ಹೆಂಡತಿಯೋ, ಮಗನೋ ಅಥವಾ ಸಂಸತ್ ಸದಸ್ಯರ ಮನೆ ಮಂದಿಗೆ ಟಿಕೆಟ್ ನೀಡಿದ್ದಾರೆ. ಅಲ್ಲಿ ಅದು ಬಿಜೆಪಿಗೆ ಸಹಕಾರಿಯಾಗಲ್ಲ. ಅದನ್ನು ಕಾದು ನೋಡಬೇಕು. ಆದರೆ, ರಾಜಕೀಯ ಲೆಕ್ಕಾಚಾರದಲ್ಲಿ ಮತ್ತು ತಂತ್ರಗಾರಿಕೆಯಲ್ಲಿ ಇಲ್ಲೀವರೆಗೂ ಪ್ರಧಾನಿ ಮೋದಿಯನ್ನು, ಅವರ ವಿರೋಧಿಗಳು ಹಿಂದಿಕ್ಕಲು ಸಾಧ್ಯವಾಗಿಲ್ಲ. ಈ 72 ಹಾಲಿ ಮತ್ತೂ ಮಾಜಿ ಶಾಸಕರುಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪಾರುಪತ್ಯ ನಡೆಸುತ್ತಿದ್ದರು. ಆಯಾ ಕ್ಷೇತ್ರಗಳಿಗೆ ಈ ನಾಯಕರುಗಳೇ ದೊರೆಗಳು. ಅಲ್ಲಿ ಪಕ್ಷ ಹೊಸಬರನ್ನು ಬೆಳೆಸುವಂತಿಲ್ಲ. ಇಂತಹ ಸಂದರ್ಭದಲ್ಲಿ ಹಾಲಿ ಮತ್ತು ಮಾಜಿ ಶಾಸಕರುಗಳಿಗೆ ಟಿಕೆಟ್​ ನೀಡದೇ, ಅವರನ್ನು ಮನೆಗೆ ಕಳಿಸುವ ಪ್ರಯೋಗ ಯಶಸ್ವಿಯಾದರೆ ಬಹು ದೊಡ್ಡ ಫಲಿತಾಂಶ ಕಾದಿದೆ-ಮೊದಲನೆಯದು, ಪಕ್ಷ ಪುನಃ ಅಧಿಕಾರಕ್ಕೆ ಬರುವುದು. ಅದು ಮೊದಲ ಯಶಸ್ಸು. ಅದಕ್ಕಿಂತ ದೊಡ್ಡ ಯಶಸ್ಸು ಯಾವುದು ಗೊತ್ತೆ? ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೂ ಕೆಲ ಶಾಸಕರು, ಪಕ್ಷ ಮತ್ತು ಸರಕಾರವನ್ನು ತಮ್ಮ ಅಡಿಯಾಳಾಗಿಸಿ ಬ್ಲಾಕ್​ಮೇಲ್ ಮಾಡುತ್ತಿದ್ದರು. ಈ ಬಾರಿ ಆ ಆಟಕ್ಕೆ ಕೊನೆ ಹಾಡಲು ಮೋದಿ ನಿರ್ಧರಿಸಿದಂತಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:04 pm, Tue, 18 April 23