ಕಾಂಗ್ರೆಸ್ ಪಕ್ಷದ ಕರ್ನಾಟಕ ಘಟಕವು ಭಾನುವಾರ ಮುಂಜಾನೆ ಪಾದಯಾತ್ರೆಗೆ ಚಾಲನೆ ನೀಡಿದೆ. ಹೊಂದಾಣಿಕೆ (Consensus politics) ರಾಜಕೀಯವನ್ನು ನೋಡುತ್ತಿದ್ದ ರಾಜ್ಯದಲ್ಲಿ ಈ ಬೆಳವಣಿಗೆ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಗಡಿ ವಿವಾದ ಮತ್ತು ನದಿ ನೀರು ಹಂಚಿಕೆ ಸಂಕಷ್ಟದಲ್ಲಿ, ವಿವಿಧ ರಾಜಕೀಯ ಸಿದ್ಧಾಂತಗಳಿಗೆ ಸೇರಿದವರು ಕೂಡ ಆಡಳಿತಾರೂಢ ಸರ್ಕಾರಗಳ ಜೊತೆ ಕೈಜೋಡಿಸುತ್ತಿದ್ದರು. ಆದರೆ ಈಗ ಈ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಪಕ್ಷವು ಹೊಂದಾಣಿಕೆ ರಾಜಕೀಯಕ್ಕೆ ತಿಲಾಂಜಲಿ ಕೊಟ್ಟು, ಸಂಘರ್ಷದ ರಾಜಕಾರಣದ ಸಂಭಾವ್ಯತೆಯನ್ನು ಎತ್ತಿ ತೋರಿಸಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಮುಂದೆ ಬಿಜೆಪಿ ವಿರೋಧ ಪಕ್ಷಕ್ಕೆ ಬಂದಾಗ ಅವರು ಕೂಡ ಹೀಗೆ ಮಾಡಬಹುದು. ಆದ್ದರಿಂದ, ಈ ಪಾದಯಾತ್ರೆ ಕರ್ನಾಟಕ ರಾಜಕೀಯದಲ್ಲಿ ನಡೆಯಬಹುದಾಗಿದ್ದ ಹೊಂದಾಣಿಕೆಯನ್ನೇ ಒಡೆದು (rupture) ಹಾಕಿದೆ. ಕರ್ನಾಟಕದಲ್ಲಿ ಪಾದಯಾತ್ರೆ ರಾಜಕಾರಣಕ್ಕೂ ಒಂದು ಪರಂಪರೆ ಇದೆ. ಇದೀಗ ಕಾಂಗ್ರೆಸ್ ಆರಂಭಿಸಿರುವ ಮೇಕೆದಾಟು ಹೋರಾಟವನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸುವ ಪ್ರಯತ್ನ ಇಲ್ಲಿದೆ.
ಏನಿದು ಮೇಕೆದಾಟು ಯೋಜನೆ?
ಅರ್ಕಾವತಿ ನದಿಯು ಮತ್ತು ಕಾವೇರಿಯನ್ನು ಸೇರುವ ಸಂಗಮವು ಮೇಕೆದಾಟು ಪ್ರದೇಶಕ್ಕಿಂತ 3.5 ಕಿಮೀ ಕೆಳಗಿದೆ. ಈ ಪರಿಸರದ ಒಂದು ಸ್ಥಳದಲ್ಲಿ ಕಾವೇರಿ ನದಿಯು ಒಂದು ಕಡಿಮೆ ಅಗಲವಿರುವ ಒಂದು ಸ್ಥಳದಲ್ಲಿ ಕಾವೇರಿ ಹರಿದುಬರುತ್ತದೆ. ಇದು ಒಂದು ಮೇಕೆಯು ಒಂದು ಬದಿಯಿಂದ ಇನ್ನೊಂದು ಬದಿಗೆ ನೆಗೆಯುವಷ್ಟು ವಿಸ್ತೀರ್ಣ ಇರುವುದರಿಂದ ಮೇಕೆದಾಟು ಎಂಬ ಪದವು ಬಳಕೆಗೆ ಬಂದಿದೆ. ನೀರಾವರಿ ಯೋಜನೆಗೂ ಅದೇ ಹೆಸರನ್ನೇ ಸರ್ಕಾರ ಇರಿಸಿಕೊಂಡಿದೆ.
ಈ ಪ್ರದೇಶದಲ್ಲಿ ಸರ್ಕಾರವು ಒಂದು ಸಮತೋಲನ ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಿದೆ. ಮೇಕೆದಾಟು ಸಮೀಪ ನಿರ್ಮಿಸುವ ಅಣೆಕಟ್ಟು ತಮಿಳುನಾಡು ಗಡಿಗೆ ಕೇವಲ 4 ಕಿಮೀ ದೂರದಲ್ಲಿದೆ. ಜಲಾಶಯದಲ್ಲಿ ಸಂಗ್ರಹವಾಗುವ ನೀರಿನಿಂದ 400 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಿದೆ. ಬೆಂಗಳೂರು ನಗರದ ಅಗತ್ಯಕ್ಕೆ ತಕ್ಕಂತೆ ಕುಡಿಯುವ ನೀರು ಪೂರೈಕೆಗೂ ಈ ಯೋಜನೆಯು ನೆರವಾಗಲಿದೆ.
ತಮಿಳುನಾಡು ವಿರೋಧವೇಕೆ?
ತಮಿಳುನಾಡು ಸರ್ಕಾರವು ₹ 9000 ಕೋಟಿ ವೆಚ್ಚದ ಈ ಯೋಜನೆಗೆ ತಮಿಳುನಾಡು ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಕಳೆದ ಜ.5ರಂದು ತಮಿಳುನಾಡು ವಿಧಾನಸಭೆ ಅಧಿವೇಶನ ಉದ್ಘಾಟಿಸಿ ಭಾಷಣ ಮಾಡಿದ ರಾಜ್ಯಪಾಲ ಆರ್.ಎನ್.ರವಿ, ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ಸರ್ಕಾರದ ನಿಲುವು ಸ್ಪಷ್ಟಪಡಿಸಿದರು. ‘ತಮಿಳುನಾಡು ಸರ್ಕಾರವು ರೈತರ ಹಿತ ಸಂರಕ್ಷಿಸಲು ಬದ್ಧವಾಗಿದೆ. ನೀರಿನ ನ್ಯಾಯಯುತ ಪಾಲು ಪಡೆದುಕೊಳ್ಳಲು ಎಲ್ಲ ಪ್ರಯತ್ನ ಮಾಡಲಿದೆ. ಕರ್ನಾಟಕವು ಉದ್ದೇಶಿಸಿರುವ ಜಲಾಶಯ ನಿರ್ಮಾಣವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು. ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಹ ಈ ಯೋಜನೆಯನ್ನು ತಮ್ಮ ಸರ್ಕಾರ ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಕರ್ನಾಟಕದಲ್ಲಿ ಮತ್ತೊಂದು ಜಲಾಶಯ ನಿರ್ಮಾಣವಾದರೆ ತಮಿಳುನಾಡಿಗೆ ನೀರು ಸಿಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದರು.
ಕಾಂಗ್ರೆಸ್ ಈಗೇಕೆ ಪಾದಯಾತ್ರೆಗೆ ಮುಂದಾಗಿದೆ?
ಈಗೇಕೆ ಪಾದಯಾತ್ರೆಗೆ ಮುಂದಾಗಿದ್ದೀರಿ ಎಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಈವರೆಗೂ ಸ್ಪಷ್ಟ ಉತ್ತರ ನೀಡಿಲ್ಲ. ಪಾದಯಾತ್ರೆಗೆ ಕಾಂಗ್ರೆಸ್ನ ಸಿದ್ಧತೆ ಮತ್ತು ಜೆಡಿಎಸ್ ನಾಯಕರು ನೀಡುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಬಹುದು. ಈ ಪಾದಯಾತ್ರೆಯಲ್ಲಿ ಮುಂಚೂಣಿಯಲ್ಲಿರುವ ಡಿ.ಕೆ.ಶಿವಕುಮಾರ್, ಹಳೇ ಮೈಸೂರು ಭಾಗದಲ್ಲಿ ತಮ್ಮನ್ನು ತಾವು ಒಕ್ಕಲಿಗ ಸಮುದಾಯದ ಪ್ರಬಲ ನಾಯಕನೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಭಾವನಾತ್ಮಕ ಅಂಶಗಳನ್ನೇ ಮುನ್ನೆಲೆಗೆ ತಂದು ಜೆಡಿಎಸ್ನ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ. ದೇವೇಗೌಡರ ರಾಜಕೀಯ ಕೈಪಿಡಿಯಲ್ಲಿರುವ ವಿಚಾರಗಳಿಂದಲೇ ಜೆಡಿಎಸ್ ಪ್ರಭಾವ ತಗ್ಗಿಸಲು ಮೇಕೆದಾಟು ಪಾದಯಾತ್ರೆಯನ್ನು ಅಸ್ತ್ರವಾಗಿಸಿಕೊಂಡಿದ್ದಾರೆ. ದೇವೇಗೌಡರನ್ನು ಮುಗಿಸಲು ಪಾದಯಾತ್ರೆ ಏಕೆ ಬೇಕಿತ್ತು ಎಂದು ಯಾರಾದರೂ ಕೇಳಬಹುದು
ಪಾದಯಾತ್ರೆಗಳ ರಾಜಕಾರಣ
ಕರ್ನಾಟಕದಲ್ಲಿ ದೇವೇಗೌಡರು ಪಾದಯಾತ್ರೆಗಳಿಗೆ ಹೆಸರುವಾಸಿ. ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ದಕ್ಷಿಣ ಕರ್ನಾಟಕಕ್ಕೆ ಅವರ ಪಾದಯಾತ್ರೆಗಳು ಸೀಮಿತವಾಗಿದ್ದವು ಎಂಬುದು ಗಮನಾರ್ಹ ಸಂಗತಿ. ರಾಜ್ಯ ರಾಜಕಾರಣದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲು ಪಾದಯಾತ್ರೆಗಳು ನಾಯಕರಿಗೆ ಅವಕಾಶ ನೀಡುತ್ತವೆ ಎನ್ನುವುದು ನಿಜ. ಕಾವೇರಿ ಸಂಕಷ್ಟ ಸೇರಿದಂತೆ ಹಲವು ಮುಖ್ಯ ವಿಚಾರಗಳಿಗೆ ಸಂಬಂಧಿಸಿದಂತೆ ಎಸ್.ಎಂ.ಕೃಷ್ಣ ಸೇರಿದಂತೆ ಹಲವರು ನಡೆಸಿದ ಪಾದಯಾತ್ರೆಗಳು ಉದ್ದೇಶಿತ ಗುರಿ ತಲುಪುವಲ್ಲಿ ವಿಫಲವಾಯಿತು. ಎಲ್ಲ ಸಂದರ್ಭಗಳಲ್ಲಿಯೂ ಪಾದಯಾತ್ರೆಗಳು ಉದ್ದೇಸಿತ ರಾಜಕೀಯ ಗುರಿಗಳನ್ನು ಮುಟ್ಟಲು ನೆರವಾಗಿಲ್ಲ. 2012 ಮತ್ತು 2013ರಲ್ಲಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ನಡೆಸಿದ ಪಾದಯಾತ್ರೆಯು 2013ರಲ್ಲಿ ಪಕ್ಷದ ಗೆಲುವಿಗೆ ಮುಖ್ಯ ಕೊಡುಗೆಯನ್ನೇನೂ ಕೊಡಲಿಲ್ಲ. ಅಂದು ಬಿಜೆಪಿಯ ಸೋಲಿಗೆ ರಾಜ್ಯ ಸರ್ಕಾರದ ಬಗ್ಗೆ ಜನರಲ್ಲಿ ಇದ್ದ ಅಸಹನೆ ಮತ್ತು ಆಡಳಿತ ವೈಫಲ್ಯಗಳೇ ಮುಖ್ಯ ಕಾರಣ ಎನಿಸಿತ್ತು. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಅಧಿಕಾರ ಸಿಗಲು ಪಾದಯಾತ್ರೆಯಿಂದ ಹೆಚ್ಚೇನು ಲಾಭ ಸಿಗಲಿಲ್ಲ.
ದೇವೇಗೌಡರ ಪ್ರಕರಣವನ್ನು ವಿಶದವಾದ ಪರಿಶೀಲಿಸೋಣ. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗಲೆಲ್ಲಾ ದೇವೇಗೌಡರು ಪಾದಯಾತ್ರೆ ನಡೆಸಿದರು. ಹಳ್ಳಿಗಳಲ್ಲಿ ತಳಮಟ್ಟದ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ರಾಜಕೀಯ ವೈಷಮ್ಯ ಆಳವಾಗಿದೆ. ಎಷ್ಟೋ ಹಳ್ಳಿಗಳಲ್ಲಿ ಬಿಜೆಪಿಗೆ ಇನ್ನೂ ನೆಲೆಯೇ ಸಿಕ್ಕಿಲ್ಲ. ಕಾರ್ಯಕರ್ತರ ಭಾವನೆಗಳನ್ನು ಆಧರಿಸಿಯೇ ದೇವೇಗೌಡರು ಪಾದಯಾತ್ರೆಗಳನ್ನು ಯೋಜಿಸುತ್ತಿದ್ದರು. ಡಿ.ಕೆ.ಶಿವಕುಮಾರ್ ಲೆಕ್ಕಾಚಾರಗಳು ಈ ನಿಟ್ಟಿನಲ್ಲಿ ಯೋಚಿಸಿದರೆ ವಿಫಲವಾಗಬಹುದು. ಕರ್ನಾಟಕದ ವಿಧಾನಸಭೆಗೆ 28 ಸದಸ್ಯರನ್ನು ಬೆಂಗಳೂರು ನಗರವೇ ಕಳಿಸುತ್ತದೆ. ಇಂಥ ನಗರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಆಯೋಜಿಸಿರುವುದು ರಾಜಕೀಯವಾಗಿ ಲಾಭ ತಂದುಕೊಡಬಲ್ಲ ಚಿಂತನೆ ಎಂದು ಯಾರಿಗಾದರೂ ಅನ್ನಿಸಬಹುದು. ಆದರೆ ಚುನಾವಣೆಗೆ ಇನ್ನೂ 14 ತಿಂಗಳು ಬಾಕಿಯಿರುವಾಗ ಅಡಳಿತಾರೂಢ ಸರ್ಕಾರದ ವಿರುದ್ಧ ಪ್ರತಿಪಕ್ಷ ನಡೆಸುವ ಪಾದಯಾತ್ರೆಯಿಂದ ಚುನಾವಣೆ ವೇಳೆ ನಿಜವಾಗಿಯೇ ಲಾಭವಾದೀತೆ? ಬಹುಶಃ ಹೆಚ್ಚು ಲಾಭ ಸಿಗದು.
ಮೇಕೆದಾಟು ಯೋಜನೆಗೆ ಇರುವ ಕಾನೂನು ಮತ್ತು ಆಡಳಿತಾತ್ಮಕ ತೊಡಕುಗಳನ್ನು ಗಮನಿಸಿದರೆ ಬಿಜೆಪಿ ನಾಯಕರು ಯಾವೆಲ್ಲಾ ಅಂಶಗಳನ್ನು ಬಚ್ಚಿಡಲು ಯತ್ನಿಸುತ್ತಿದ್ದಾರೆಯೋ ಅಷ್ಟೇ ವಿಷಯಗಳನ್ನು ಕಾಂಗ್ರೆಸ್ ನಾಯಕರೂ ಬಚ್ಚಿಡಬೇಕಾಗಿರುವುದು ಸತ್ಯ ಎನಿಸುತ್ತದೆ. ಗಡಿ ಮತ್ತು ನೀರು ಹಂಚಿಕೆ ವಿಚಾರದಲ್ಲಿ ಮುಖ್ಯ ಪಾತ್ರ ವಹಿಸಿರುವ ಹೊಂದಾಣಿಕೆ ರಾಜಕೀಯವು ಈ ಹಂತದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಮೂರೂ ಪಕ್ಷಗಳು ಎಸಗಿರುವ ಪ್ರಮಾದಗಳನ್ನು ಒಮ್ಮೆ ಪರಿಶೀಲಿಸೋಣ. 2019ರಿಂದೀಚೆಗೆ ರಾಜ್ಯ ಸರ್ಕಾರವು ಒಂದೇ ಒಂದು ಸರ್ವಪಕ್ಷ ಸಭೆ ನಡೆಸಿಲ್ಲ. ನೀರಾವರಿ ಪ್ರಾಧಿಕಾರಗಳು ಹಾಗೂ ಸುಪ್ರೀಂಕೋರ್ಟ್ನಲ್ಲಿ ಬಾಕಿಯಿರುವ ಪ್ರಕರಣಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನೇ ಬಿಜೆಪಿಯು ಮುಂದೂಡುತ್ತಿದೆ. ಸರ್ವಪಕ್ಷಗಳು ಸಭೆಗಳು ಕ್ರಮವಾಗಿ ನಡೆದು, ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ನಾಯಕರಲ್ಲಿ ಒಮ್ಮತ ಮೂಡಲು ಸಾಧ್ಯವಾಗುತ್ತಿತ್ತು. ಕಾಂಗ್ರೆಸ್ ಪ್ರಾಯೋಜಿತ ಪಾದಯಾತ್ರೆಗೆ ನಾವು ಸಾಕ್ಷಿಯಾಗಬೇಕಾದ ಸನ್ನಿವೇಶವೇ ನಿರ್ಮಾಣವಾಗುತ್ತಿರಲಿಲ್ಲ.
ಈ ವಿಚಾರದಲ್ಲಿ ಮೂರೂ ಪಕ್ಷಗಳು, ಅಂದರೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಮಾನವಾಗಿ ಹೊಣೆಗಾರಿಕೆಯನ್ನು ಹೊರಬೇಕಿದೆ. ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡು ಆಕ್ರಮಣಕರ ರೀತಿಯಲ್ಲಿ ವಾದ ಮಂಡಿಸಿದ ಕರ್ನಾಟಕ ಸೂಕ್ತರೀತಿಯಲ್ಲಿ ಪ್ರತಿವಾದ ಮಂಡಿಸಲಿಲ್ಲ. ತಮಿಳುನಾಡು ಸರ್ಕಾರವು ಸುಪ್ರೀಂಕೋರ್ಟ್ ಕೋರ್ಟ್ಗೆ ಅರ್ಜಿ ಸಲ್ಲಿಸಿದಾಗ ಅದನ್ನು ಮೇಕೆದಾಟು ಯೋಜನೆಯನ್ನೇ ತಳಹದಿಯಾಗಿರಿಸಿಕೊಂಡು ಮತ್ತೊಂದು ಪ್ರಕರಣ ದಾಖಲಿಸುವ ಮೂಲಕ ಕರ್ನಾಟಕವು ಪ್ರತಿಕ್ರಿಯಿಸಬೇಕಿತ್ತು. ಮಿಸಲೇನಿಯಸ್ ಅರ್ಜಿಯನ್ನು ಪರಿಶೀಲಿಸುವಾಗ ನ್ಯಾಯಾಲಯವು ಅರ್ಜಿದಾರರಿಂದ ಹೊಸ ಪುರಾವೆಗಳನ್ನು ಕೇಳುವುದಿಲ್ಲ. ಬದಲಿಗೆ ಹಿಂದಿನ ಆದೇಶಕ್ಕೆ ಸ್ಪಷ್ಟನೆ ನೀಡುತ್ತದೆ. ಕರ್ನಾಟಕವು ಒಂದು ವೇಳೆ ಮೂಲದಾವೆ ಹಾಕಿದ್ದರೆ ಸುಪ್ರೀಂಕೋರ್ಟ್ ತಮಿಳುನಾಡಿನ ಮಿಸಲೇನಿಯಸ್ ಅರ್ಜಿಯನ್ನು ತಿರಸ್ಕರಿಸಿ, ಕರ್ನಾಟಕದ ಮೂಲ ದಾವೆಯನ್ನೇ ವಿಚಾರಣೆಗೆ ಅಂಗೀಕರಿಸುತ್ತಿತ್ತು. ಮೂಲದಾವೆ ನಿರ್ವಹಣೆಯಲ್ಲಿ ಕರ್ನಾಟಕಕ್ಕೆ ಎದುರಾಗಬಹುದಾಗಿದ್ದ ಏಕೈಕ ಸಮಸ್ಯೆ ಎಂದರೆ ಸಮಯದ್ದು. ಮೂಲದಾವೆಯ ವಿಲೇವಾರಿಗೆ ಸುಪ್ರೀಂಕೋರ್ಟ್ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ತನ್ನ ನಿಲುವು ಸ್ಪಷ್ಟಪಡಿಸುವ ಮತ್ತಷ್ಟು ಸಾಕ್ಷ್ಯಗಳನ್ನು ನೀಡಲು ಕರ್ನಾಟಕಕ್ಕೆ ಸಾಧ್ಯವಾಗುತ್ತಿತ್ತು. ನದಿಯ ಕೆಳಹರಿವಿನ ರಾಜ್ಯಕ್ಕೆ (ತಮಿಳುನಾಡಿಗೆ) ಹಂಚಿಕೆಯಾಗಿರುವ ನೀರಿನಲ್ಲಿ ಯಾವುದೇ ಕಡಿತ ಮಾಡದೆ, ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರವು ಸ್ಪಷ್ಟಪಡಿಸಬಹುದಿತ್ತು. ಮೂಲದಾವೆಯು ಹೆಚ್ಚು ಸಮಯ ನಡೆಯುತ್ತಿತ್ತು. ಕರ್ನಾಟಕ ರಾಜಕರಣದಲ್ಲಿರುವ ಯಾರೊಬ್ಬರೂ ಇದನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಎಲ್ಲ ನಾಯಕರೂ ಈ ಅವಕಾಶ ಕೈತಪ್ಪಿ ಹೋಗಲು ಕಾರಣರಾದರು. ಈಗ ನಡೆಯುತ್ತಿರುವ ಮಿಸ್ಲೇನಿಯಸ್ ಅರ್ಜಿಯ ವಿಚಾರಣೆಯಲ್ಲಿಯೂ ಕರ್ನಾಟಕಕ್ಕೆ ನ್ಯಾಯ ಸಿಗಬಹುದು ಎಂದು ಯಾರಿಗೂ ಖಾತ್ರಿಯಿಲ್ಲ.
ಕಾಂಗ್ರೆಸ್ನ ಮಹಾಪರಾಧ
ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ (Detailed Project Report – DPR) ಸಿದ್ಧಪಡಿಸಲು ಕಾಂಗ್ರೆಸ್ ಪಕ್ಷವು ತಡಮಾಡಿತು ಎಂಬುದು ರಹಸ್ಯವಾಗಿಯೇನೂ ಉಳಿದಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ಧವಾಗಿರುವ ಡಿಪಿಆರ್ನಲ್ಲಿಯೂ ಮುಖ್ಯ ದೋಷವೊಂದು ಇರುವುದು ಹಲವರಿಗೆ ಗೊತ್ತಿಲ್ಲ. ಕಾವೇರಿ ನದಿಯಲ್ಲಿ ಹರಿದುಹೋಗುವ ಹೆಚ್ಚುವರಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳುವ ಬಗ್ಗೆ ಈ ಡಿಪಿಆರ್ ಮಾತನಾಡುವುದೇ ಇಲ್ಲ. ಹಿರಿಯ ಅಧಿಕಾರಿಗಳು ಈ ಅಂಶವನ್ನು ಎತ್ತಿ ತೋರಿಸಿದಾಗಲೂ ಡಿಪಿಆರ್ ಸರಿಪಡಿಸಲು ಕಾಂಗ್ರೆಸ್ ಸರ್ಕಾರ ಸಮ್ಮತಿಸಲಿಲ್ಲ. ಡಿಪಿಆರ್ನಲ್ಲಿ ಯಾವುದೇ ಅಂಶ ಬದಲಿಸಿದರೂ ಮೇಕೆದಾಟು ಬಗ್ಗೆ ತಮಿಳುನಾಡು ಸಲ್ಲಿಸಿರುವ ಮಿಸಲೇನಿಯಸ್ ಅರ್ಜಿಯ ವಿಚಾರಣೆಯಲ್ಲಿ ಕರ್ನಾಟಕದ ವಾದ ದುರ್ಬಲವಾಗಬಹುದು ಎಂದು ಸರ್ಕಾರವು ಅಂಜಿತು. ಈ ತರ್ಕವನ್ನೇ ಆಧರಿಸಿ ಮುನ್ನಡೆದ ಸರ್ಕಾರವು ತಪ್ಪು ಹೆಜ್ಜೆಗಳನ್ನು ಇರಿಸಿತು. ಜುಲೈ 19, 2019ರಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯವು ಮೇಕೆದಾಟು ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನೇನೋ ನೀಡಿತು. ಈ ಒಪ್ಪಿಗೆಯೂ ಕುಡಿಯುವ ನೀರಿಗಾಗಿ ಸಮತೋಲನದ ಜಲಾಶಯ ನಿರ್ಮಿಸಲು ಮಾತ್ರ ಸೀಮಿತವಾಗಿರುತ್ತದೆ ಎಂದು ಸಚಿವಾಲಯವು ಸ್ಪಷ್ಟಪಡಿಸಿತ್ತು. ಕಾಂಗ್ರೆಸ್ ಸರ್ಕಾರವು ಕೇವಲ ಜಲವಿದ್ಯುತ್ ಯೋಜನೆಯ ಬಗ್ಗೆ ಮಾತ್ರ ಡಿಪಿಆರ್ನಲ್ಲಿ ನಮೂದಿತ್ತು. ಆದರೆ ಕೇಂದ್ರ ಜಲಶಕ್ತಿ ಸಚಿವಾಲಯವು ಇದೇ ಯೋಜನೆಯ ಮತ್ತೊಂದು ಉದ್ದೇಶಕ್ಕೆ ಮಾತ್ರ ತಾತ್ವಿಕ ಅನುಮೋದನೆ ನೀಡಿತ್ತು. ಇದು ನಮ್ಮ ರಾಜಕೀಯ ನಾಯಕರು ಮತ್ತು ಹಿರಿಯ ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ ಹಿಡಿಯುತ್ತದೆ.
ಕೊರೊನಾ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಈ ಪಾದಯಾತ್ರೆಯು ಮತ್ತಷ್ಟು ವಿವಾದಗಳನ್ನು ಹುಟ್ಟುಹಾಕಬಹುದು. ಪಾದಯಾತ್ರೆಯು ಬೆಂಗಳೂರು ನಗರ ತಲುಪುವ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಹಾದುಬರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣವು ಶೇ 9.24 ಇದ್ದರೆ, ಬೆಂಗಳೂರು ನಗರದಲ್ಲಿ ಶೇ 10 ಇದೆ. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜೊತೆಗೂಡಿ ನಡೆಯುವಾಗ, ವಾಸಿಸುವಾಗ ವೈರಾಣು ಹರಡುವಿಕೆ ವೇಗ ಪಡೆದುಕೊಳ್ಳಬಹುದು. ಈ ಪಾದಯಾತ್ರೆಯಿಂದ ರಾಜಕೀಯ ಲಾಭ ಅಥವಾ ವಾಸ್ತವ ಅನುಕೂಲಗಳು ಯಾರಿಗೂ ಸಿಗುವುದಿಲ್ಲ. ನ್ಯಾಯಾಲಯದಲ್ಲಿಯೂ ಕರ್ನಾಟಕಕ್ಕೆ ಇದರಿಂದ ಅನುಕೂಲವೇನೂ ಆಗುವುದಿಲ್ಲ. ಮೂರೂ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಪಾದಯಾತ್ರೆಯನ್ನು ಒಂದು ನೆಪವಾಗಿ ಬಳಸಿಕೊಳ್ಳುತ್ತಿವೆ.
ಇದನ್ನೂ ಓದಿ: Mekedatu Project: ಮೇಕೆದಾಟು ಪಾದಯಾತ್ರೆ; ಕಾಂಗ್ರೆಸ್ ಹೋರಾಟ ಹೇಗಿರಲಿದೆ? ಸಂಪೂರ್ಣ ವಿವರ ಇಲ್ಲಿದೆ
Published On - 8:00 am, Mon, 10 January 22