eRupee: ಬಂತು ಇ-ರೂಪಾಯಿ; ಕ್ರಿಪ್ಟೋ ಕರೆನ್ಸಿ ಮೇಲೆ ತೂಗುಗತ್ತಿ

| Updated By: Ganapathi Sharma

Updated on: Nov 15, 2022 | 5:32 PM

ಹಣಕಾಸು ವ್ಯವಸ್ಥೆ ಮೇಲೆ ಡಿಜಿಟಲ್ ಕರೆನ್ಸಿಯ ಪ್ರಭಾವ ಹೇಗಿರಬಹುದು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ರಿಟೇಲ್ ಅಥವಾ ಚಿಲ್ಲರೆ ಗ್ರಾಹಕರು ಅದನ್ನು ಸ್ವೀಕರಿಸಲಿದ್ದಾರೆಯೇ ಎಂಬುದನ್ನೂ ಕಾದು ನೋಡಬೇಕಿದೆ. ಕೇಂದ್ರೀಯ ಬ್ಯಾಂಕ್​ಗಳು ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡುವುದಾಗಿ ಘೋಷಿಸಿರುವುದು ಕ್ರಿಪ್ಟೋ ಕರೆನ್ಸಿ ಮೇಲೆ ತೂಗುಗತ್ತಿ ನೇತುಹಾಕಿದಂತಾಗಿದೆ.

eRupee: ಬಂತು ಇ-ರೂಪಾಯಿ; ಕ್ರಿಪ್ಟೋ ಕರೆನ್ಸಿ ಮೇಲೆ ತೂಗುಗತ್ತಿ
ಆರ್. ಶ್ರೀಧರನ್ ಮತ್ತು ಡಿಜಿಟಲ್ ಕರೆನ್ಸಿಯ ಸಾಂದರ್ಭಿಕ ಚಿತ್ರ
Follow us on

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕಳೆದ ತಿಂಗಳು ಡಿಜಿಟಲ್ ಕರೆನ್ಸಿ ಪರಿಕಲ್ಪನೆಗೆ ಸಂಬಂಧಿಸಿದ ಟಿಪ್ಪಣಿಯನ್ನು ಪ್ರಕಟಿಸಿತ್ತು. (CBDCs) ಪೂರ್ಣ ನಂಬಿಕೆಗೆ ಅರ್ಹವಲ್ಲ ಎನ್ನಲಾಗುತ್ತಿರುವ ಕ್ರಿಪ್ಟೋ ಕರೆನ್ಸಿಗಳಿಗೆ ಪರ್ಯಾಯವಾಗಿ ತಮ್ಮದೇ ಆದ ಡಿಜಿಟಲ್ ಕರೆನ್ಸಿ (CBDCs) ರೂಪಿಸಲು ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಬ್ಯಾಂಕ್​ಗಳಲ್ಲಿ ಆರ್​ಬಿಐ ಕೂಡ ಒಂದಾಗಿದೆ. ಹಾಗಾದರೆ ಕೇಂದ್ರೀಯ ಬ್ಯಾಂಕ್​ಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿ ಬಗ್ಗೆ ಏನು ಯೋಚನೆ ಮಾಡುತ್ತಿವೆ? ಉತ್ತರ ಸ್ಪಷ್ಟವಾಗಿದೆ. ಕ್ರಿಪ್ಟೋ ಕರೆನ್ಸಿಗಳ ಜನಪ್ರಿಯತೆ ದಿಢೀರ್ ಹೆಚ್ಚಾಗಿರುವುದು ಕೇಂದ್ರೀಯ ಬ್ಯಾಂಕ್​ಗಳ ಗಾಬರಿಗೆ ಕಾರಣವಾಗಿದೆ. ಪ್ರಸ್ತುತ 20,000ಕ್ಕೂ ಹೆಚ್ಚು ಕ್ರಿಪ್ಟೋ ಕರೆನ್ಸಿಗಳು ಚಲಾವಣೆಯಲ್ಲಿವೆ. ಇವುಗಳ ಜಾಗತಿಕ ಮಾರುಕಟ್ಟೆ ಬಂಡವಾಳ ಸುಮಾರು 900 ಶತಕೋಟಿ ಡಾಲರ್​ನಷ್ಟಿದೆ (2021ರ ನವೆಂಬರ್ 9ರ ನಂತರ ಮೌಲ್ಯದಲ್ಲಿ ಗಣನೀಯ ಇಳಿಕೆಯಾದ ಹೊರತಾಗಿಯೂ ಇಷ್ಟಿದೆ. ಬಿಟ್​​ಕಾಯಿನ್​ನ ಮಾರುಕಟ್ಟೆ ಬಂಡವಾಳ ಮೌಲ್ಯವೇ ಸುಮಾರು 1.28 ಟ್ರಿಲಿಯನ್ ಡಾಲರ್​ ಆಗಿದೆ).

ನಾನು ಕ್ರಿಪ್ಟೋ ಕರೆನ್ಸಿಗಳಿಗೆ ನಿಜವಾದ ಮೌಲ್ಯ ಇಲ್ಲ ಎಂದು ಭಾವಿಸುವ ವರ್ಗಕ್ಕೆ ಸೇರಿದ್ದೇನೆ (ಆದ್ದರಿಂದ ಇದನ್ನು ‘ಶಿಟ್​ಕಾಯಿನ್​ಗಳು’ ಎಂದು ಕರೆಯಬಹುದು). ಆದರೆ, ಕ್ರಿಪ್ಟೋಸ್ ಅನ್ನು ಬೆಂಬಲಿಸುವ ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಅದ್ಭುತ ಮೌಲ್ಯವಿದೆ. ಇಂದು ಪವರ್​ಫುಲ್ ಕಂಪ್ಯೂಟರ್ ಹೊಂದಿರುವ ಯಾರು ಬೇಕಾದರೂ ತಮ್ಮದೇ ಆದ ಕ್ರಿಪ್ಟೋ ಕರೆನ್ಸಿಗಳನ್ನು ಹೊಂದಬಹುದು. ಅತ್ಯಾಧುನಿಕ ಪ್ರಿಂಟಿಂಗ್ ಪ್ರೆಸ್ ಹೊಂದಿದ ಯಾರಿಗೆ ಬೇಕಾದರೂ ತಮ್ಮದೇ ಆದ ಕರೆನ್ಸಿ ನೋಟುಗಳ ಮುದ್ರಣಕ್ಕೆ ಅವಕಾಶ ಕೊಟ್ಟಂತೆ!

ಇದನ್ನೂ ಓದಿ: TDS On Cryptocurrencies: ಕ್ರಿಪ್ಟೋಕರೆನ್ಸಿಗಳ ಮೇಲಿನ ಟಿಡಿಎಸ್​ ಲೆಕ್ಕಾಚಾರ ಹೇಗೆ? ಹೊಸ ನಿಯಮದ ಬಗ್ಗೆ ಇಲ್ಲಿದೆ ವಿವರ

ಕ್ರಮಬದ್ಧವಾದ ಆದರೆ, ದುರ್ಬಲವಾದ ವಿತ್ತೀಯ ವ್ಯವಸ್ಥೆ ಮತ್ತು ಹಣಕಾಸು ಮಾರುಕಟ್ಟೆಗಳ ಈ ಅಡ್ಡಿಯು ಯಾವಾಗಲೂ ಕೇಂದ್ರ ಬ್ಯಾಂಕುಗಳು ಹೆಚ್ಚು ಭಯಪಡುವಂತೆ ಮಾಡುತ್ತವೆ. ಇದೇ ಕಾರಣಕ್ಕೆ ಹೆಚ್ಚಿನ ಕೇಂದ್ರೀಯ ಬ್ಯಾಂಕ್​ಗಳು ಕ್ರಿಪ್ಟೋಕರೆನ್ಸಿಗಳಿಗೆ ಕಾನೂನಿನ ಮಾನ್ಯತೆ ಕೊಟ್ಟಿಲ್ಲ. ಅನೇಕ ಬ್ಯಾಂಕ್​ಗಳು ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಿವೆ. ಆದಾಗ್ಯೂ, ಕೇಂದ್ರೀಯ ಬ್ಯಾಂಕ್​ಗಳು ಎಲೆಕ್ಟ್ರಾನಿಕ್ ಕರೆನ್ಸಿಯ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಂಡಿವೆ. ಹೀಗಾಗಿ ಹೆಚ್ಚಿನ ಅಪಾಯಗಳಿಲ್ಲದೆ ಉತ್ತಮ ಗುಣಲಕ್ಷಣಗಳನ್ನು ಒಳಗೊಂಡ ಕ್ರಿಪ್ಟೋಕರೆನ್ಸಿಗಳನ್ನು ಬಳಕೆದಾರರಿಗೆ ನೀಡುವುದು ಉತ್ತಮ ಎಂದು ಭಾವಿಸಿವೆ (ನನ್ನ ಪ್ರಕಾರ ಇದರ ಹಿಂದೆ ನಗದು ನಿರ್ವಹಣಾ ವೆಚ್ಚಗಳಲ್ಲಿ ಗಮನಾರ್ಹ ಉಳಿತಾಯದಂತಹ ಇತರ ಕಾರಣಗಳೂ ಇವೆ. ಆದರೆ ಅವುಗಳೇ ಪ್ರಾಥಮಿಕ ಕಾರಣವಲ್ಲ).

ಇ-ರೂಪಾಯಿ vs ಕ್ರಿಪ್ಟೋ ಕರೆನ್ಸಿ

ಇ-ರೂಪಾಯಿ ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯುವ ಮೊದಲು ನಾವು ಇ-ರೂಪಾಯಿ ಮತ್ತು ಕ್ರಿಪ್ಟೋ ಕರೆನ್ಸಿಗಳ ನಡುವಣ ವ್ಯತ್ಯಾಸಗಳೇನು ಎಂಬುದನ್ನು ತಿಳಿಯೋಣ. ವ್ಯತ್ಯಾಸಗಳ ಸಾರಾಂಶ ಇಲ್ಲಿದೆ.

  • ಇ-ರೂಪಾಯಿ ಫಿಯೆಟ್ ಕರೆನ್ಸಿಯಂತೆ, ಬಿಟ್​ಕಾಯಿನ್​ಗಿಂತ ಭಿನ್ನವಾಗಿದೆ. ಇ-ರೂಪಾಯಿಯನ್ನು ಯಾವುದೇ ಪ್ರಾಧಿಕಾರ ಬಿಡುಗಡೆ ಮಾಡುವುದಿಲ್ಲ.
  • ಇ-ರೂಪಾಯಿಯು ಸಾಂಪ್ರದಾಯಿಕ ರೂಪಾಯಿಯ ಅದೇ ಮೌಲ್ಯ ಮತ್ತು ವಿನಿಮಯ ಮೌಲ್ಯವನ್ನು ಹೊಂದಿರುತ್ತದೆ. ಆದರೆ ಕ್ರಿಪ್ಟೋದಂತೆ ಮೌಲ್ಯದಲ್ಲಿ ಹಠಾತ್ ಬದಲಾವಣೆಯಾಗುವುದಿಲ್ಲ.
  • ಕ್ರಿಪ್ಟೋದಂತೆ ಇ-ರೂಪಾಯಿಗೆ ಪಬ್ಲಿಕ್ ಲೆಡ್ಜರ್ ಅಗತ್ಯವಿಲ್ಲ. ಯಾಕೆಂದರೆ ಇದರ ದಾಖಲೆಗಳನ್ನು ಕೇಂದ್ರೀಯ ಬ್ಯಾಂಕ್​ಗಳೇ ಇಟ್ಟುಕೊಂಡಿರುತ್ತವೆ. ಆದಾಗ್ಯೂ, ಇದರಲ್ಲಿ ಮಧ್ಯವರ್ತಿ ಬ್ಯಾಂಕ್‌ಗಳನ್ನು ತೊಡೆದುಹಾಕಲು ಸ್ಮಾರ್ಟ್ ಟೋಕನ್‌ಗಳಂತಹ ಬ್ಲಾಕ್‌ಚೈನ್ ತಂತ್ರಜ್ಞಾನದ ಕೆಲವು ವೈಶಿಷ್ಟ್ಯಗಳನ್ನು ಬಳಸಬಹುದಾಗಿದೆ.
  • ಕ್ರಿಪ್ಟೋಗಳಂತೆ ಇ-ರೂಪಾಯಿಗಳೂ ಸಹ ವಹಿವಾಟನ್ನು ತ್ವರಿತಗೊಳಿಸಬಹುದಲ್ಲದೆ ವಹಿವಾಟಿನ ವೆಚ್ಚವನ್ನು ಕಡಿಮೆ ಮಾಡಲಿವೆ. ಕ್ರಿಪ್ಟೋದಂತೆ ಟೋಕನ್ ಆಧಾರಿತ ಇ-ರೂಪಾಯಿಯಲ್ಲಿ ಸಹ ಖಾತೆಯ ಕೀ ಹೊಂದಿರುವವನೇ ಮಾಲೀಕನಾಗಿರುತ್ತಾನೆ.

ಕೇಂದ್ರೀಯ ಬ್ಯಾಂಕ್​ಗಳ ಡಿಜಿಟಲ್ ಕರೆನ್ಸಿಗಳು ಹೇಗೆ ಕೆಲಸ ಮಾಡಲಿವೆ?

ಈಗ ನಿಮಗೆ ಇ-ರೂಪಾಯಿ ಮತ್ತು ಡಿಜಿಟಲ್ ಬ್ಯಾಂಕಿಂಗ್ ನಡುವಿನ ವ್ಯತ್ಯಾಸವೇನು ಎಂಬ ಪ್ರಶ್ನೆ ಉದ್ಭವಿಸಬಹುದು. ಇದಕ್ಕೆ ಉತ್ತರವಿಷ್ಟೇ; ಇ-ರೂಪಾಯಿ ಕೇಂದ್ರೀಯ ಬ್ಯಾಂಕ್​ನ ಹೊಣೆಗಾರಿಕೆಗೆ ಸೇರಿದ್ದು. ಇದರ ಬಗ್ಗೆ ಕೇಂದ್ರೀಯ ಬ್ಯಾಂಕ್​ ತನ್ನ ದಾಖಲೆಗಳಲ್ಲಿ ನಮೂದಿಸಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ನಿಮ್ಮ ವಾಣಿಜ್ಯ ಬ್ಯಾಂಕ್ ಖಾತೆಯಲ್ಲಿರುವ ಡಿಜಿಟಲ್ ಹಣವು ಬ್ಯಾಂಕಿನ ಹೊಣೆಗಾರಿಕೆಯಷ್ಟೆ. ಇಲ್ಲಿ ಬ್ಯಾಂಕ್​ ಹಣದ ವಹಿವಾಟಿನ ದಾಖಲೆಗಳನ್ನು ಮಾತ್ರ ನಿರ್ವಹಿಸುತ್ತದೆ. ಹಾಗೆಯೇ ಬ್ಯಾಂಕಿನಲ್ಲಿರುವ ನಿಮ್ಮ ಹಣಕ್ಕೆ ಬಡ್ಡಿ ದೊರೆಯುತ್ತದೆ. ಆದರೆ, ಇ-ರೂಪಾಯಿಗೂ ಬಡ್ಡಿ ನೀಡಬೇಕು ಮತ್ತು ನೀಡಬಾರದು ಎಂಬ ಎರಡೂ ವಾದ ಪ್ರಗತಿಯಲ್ಲಿದೆ. ಕಾರಣ; ಡಿಜಿಟಲ್ ಕರೆನ್ಸಿಗಳು ಬ್ಯಾಂಕ್ ಠೇವಣಿಗಳ ಜತೆ ಸ್ಪರ್ಧಿಸುವುದನ್ನು ತಡೆಯುವುದಾಗಿದೆ. ಆರ್​ಬಿಐ ಏನೇ ನಿರ್ಧಾರ ಕೈಗೊಂಡರೂ. ಇ-ರೂಪಾಯಿ ಕೂಡ ಸಾಂಪ್ರದಾಯಿಕ ರೂಪಾಯಿಯ ರೀತಿಯಲ್ಲೇ ಇರಬಹುದೆಂದು ನಿರೀಕ್ಷಿಸಬಹುದಾಗಿದೆ.

ಆರ್​ಬಿಐ ಹೇಳಿರುವ ಪ್ರಕಾರ, ಡಿಜಿಟಲ್ ಕರೆನ್ಸಿಯಲ್ಲಿ ಎರಡು ರೀತಿಯ ಬಳಕೆದಾರರನ್ನು ಉಲ್ಲೇಖಿಸಲಾಗಿದೆ. ಚಿಲ್ಲರೆ (retail) ಬಳಕೆದಾರರು (ನನ್ನ ಹಾಗೂ ನಿಮ್ಮಂಥ ಸಾಮಾನ್ಯ ಬಳಕೆದಾರರು) ಹಾಗೂ ಸಗಟು (wholesale) ಬಳಕೆದಾರರು. ನಂತರದಲ್ಲಿ ಡಿಜಿಟಲ್ ಕರೆನ್ಸಿಗಳನ್ನು ಅಂತರ್ ಬ್ಯಾಂಕ್ ಸೆಟಲ್​​ಮೆಂಟ್​ಗಳಿಗೆ ಬಳಸಬಹುದಾಗಿದೆ. ಟೋಕನ್ ಆಧಾರಿತ ಸಾಮಾನ್ಯ ವ್ಯವಹಾರದ ಮೂಲಕ ಈ ಪ್ರಕ್ರಿಯೆ ನಡೆಯಲಿದೆ.

ಡಿಜಿಟಲ್ ಕರೆನ್ಸಿಗಳು ಕ್ರಿಪ್ಟೋಗಳಿಗೆ ಅಂತ್ಯ ಹಾಡಲಿವೆಯೇ?

ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಒಲವು ಹೊಂದಿರುವವರು ಈಗ ಕೇಂದ್ರೀಯ ಬ್ಯಾಂಕ್​ಗಳ ಡಿಜಿಟಲ್ ಕರೆನ್ಸಿ ಬಗ್ಗೆ ಬಹಳ ಕುತೂಹಲಿಗಳಾಗಿದ್ದಾರೆ. ತಮ್ಮ ವಹಿವಾಟುಗಳನ್ನು ಕೇಂದ್ರೀಯ ಬ್ಯಾಂಕ್​ಗಳು ನಿಯಂತ್ರಿಸುವುದು ಅವರಿಗೆ ಬೇಕಾಗಿಲ್ಲ. ಬಿಟ್​ಕಾಯಿನ್ ಎಂಬುದು ಸಾಮಾನ್ಯ ಕರೆನ್ಸಿ ಬಿಡುಗಡೆ ಮಾಡುವ ಸಂಸ್ಥೆಗಳ ವಿರುದ್ಧ ಸೃಷ್ಟಿಯಾಗಿತ್ತಷ್ಟೇ. ಹೀಗಾಗಿ ತಮ್ಮ ಕರೆನ್ಸಿಯ ಮೇಲೆ ಕರೆನ್ಸಿ ಬಿಡುಗಡೆ ಮಾಡುವ ಸಂಸ್ಥೆಗಳು ಯಾಕೆ ಅಧಿಕಾರ ಹೊಂದಬೇಕು ಎಂಬುದು ಅವರ ಪ್ರಶ್ನೆ. ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳ ಇಚ್ಛೆಗೆ ಪೂರಕವಾಗಿ ಅಲ್ಲದೆ, ಕಂಪ್ಯೂಟರ್ ಅಲ್ಗಾರಿದಮ್‌ನ ತರ್ಕದಿಂದ ನಿರ್ವಹಿಸಬಹುದಾದ ತಮ್ಮದೇ ಆದ ಖಾಸಗಿ ಕರೆನ್ಸಿಯನ್ನು ಚಲಾವಣೆಗೆ ಬಿಡಲು ಜನರ ಗುಂಪಿಗೆ ಏಕೆ ಸಾಧ್ಯವಾಗುವುದಿಲ್ಲ? ಅದೊಂದು ಪ್ರಲೋಭಕ ಐಡಿಯಾ ಆಗಬಹುದು. ಆದರೆ ಕ್ರಿಪ್ಟೋ ಮಾರುಕಟ್ಟೆ ವರ್ಷಪೂರ್ತಿ ಪ್ರಕ್ಷುಬ್ಧತೆ ಹಾಗೂ ಸಾಬೀತುಪಡಿಸಿ ತೋರಿಸಲಾಗದಂಥ ಅಪಾಯಗಳಿಂದ ತುಂಬಿದೆ. ‘ಹೆಚ್ಚಿನ ಕ್ರಿಪ್ಟೋ ಕರೆನ್ಸಿಗಳು ನಿಖರವಾಗಿ ಶೂನ್ಯ ಸಮತೋಲನದ ಮೌಲ್ಯವನ್ನು ಹೊಂದಿವೆ. ಆದರೆ ಇನ್ನು ಕೆಲವೊಮ್ಮೆ ಅವುಗಳು ಅದ್ಭುತ ಮಟ್ಟದಲ್ಲಿ ಬೆಲೆಯನ್ನು ಹೊಂದಿರುತ್ತವೆ’ ಎಂದು ಆರ್​ಬಿಐ ಡೆಪ್ಯುಟಿ ಗವರ್ನರ್ ಟಿ. ರವಿ ಶಂಕರ್ ಐಎಂಎಫ್ ವೆಬಿನಾರ್​ನಲ್ಲಿ ಹಿಂದೊಮ್ಮೆ ಹೇಳಿದ್ದರು. ಅದು ಮೇಲೆ ಉಲ್ಲೇಖಿಸಿದ ಕಾರಣಕ್ಕೇ ಆಗಿರಬಹುದು. ಡಜಿಟಲ್ ಕರೆನ್ಸಿ ಅಸ್ತಿತ್ವಕ್ಕೆ ಬಂದ ಬಳಿಕ ಕ್ರಿಪ್ಟೋಗಳಿಗೆ ಭವಿಷ್ಯವಿಲ್ಲ ಎಂದು ಬ್ಯಾಂಕ್ ಆಫ್ ಇಂಟರ್​ನ್ಯಾಷನಲ್ ಸೆಟಲ್​ಮೆಂಟ್ಸ್ (BIS) ಅಧಿಕಾರಿಗಳೂ ಸೇರಿದಂತೆ ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Budget 2022 ವರ್ಚುವಲ್‌ ಡಿಜಿಟಲ್‌ ಸ್ವತ್ತು, ಕ್ರಿಪ್ಟೊಕರೆನ್ಸಿಗಳ ಮೂಲಕ ಗಳಿಸುವ ಆದಾಯದ ಮೇಲೆ ಶೇ 30 ತೆರಿಗೆ: ಏನಿದು ಕ್ರಿಪ್ಟೊ ತೆರಿಗೆ?

ಹಣಕಾಸು ವ್ಯವಸ್ಥೆ ಮೇಲೆ ಡಿಜಿಟಲ್ ಕರೆನ್ಸಿಯ ಪ್ರಭಾವ ಹೇಗಿರಬಹುದು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ರಿಟೇಲ್ ಅಥವಾ ಚಿಲ್ಲರೆ ಗ್ರಾಹಕರು ಅದನ್ನು ಸ್ವೀಕರಿಸಲಿದ್ದಾರೆಯೇ ಎಂಬುದನ್ನೂ ಕಾದು ನೋಡಬೇಕಿದೆ.

ಒಂದು ವಿಷಯವಂತೂ ನಿಜ, ಕೇಂದ್ರೀಯ ಬ್ಯಾಂಕ್​ಗಳು ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡುವುದಾಗಿ ಘೋಷಿಸಿರುವುದು ಕ್ರಿಪ್ಟೋ ಕರೆನ್ಸಿ ಮೇಲೆ ತೂಗುಗತ್ತಿ ನೇತುಹಾಕಿದಂತಾಗಿದೆ.

 ಆರ್​. ಶ್ರೀಧರನ್ (ವ್ಯವಸ್ಥಾಪಕ ಸಂಪಾದಕರು, ಟಿವಿ9 ಕರ್ನಾಟಕ)

Published On - 4:57 pm, Tue, 15 November 22