TDS On Cryptocurrencies: ಕ್ರಿಪ್ಟೋಕರೆನ್ಸಿಗಳ ಮೇಲಿನ ಟಿಡಿಎಸ್ ಲೆಕ್ಕಾಚಾರ ಹೇಗೆ? ಹೊಸ ನಿಯಮದ ಬಗ್ಗೆ ಇಲ್ಲಿದೆ ವಿವರ
ಜುಲೈ 1, 2022ರಿಂದ ಅನ್ವಯ ಆಗುವಂತೆ ವರ್ಚುವಲ್ ಡಿಜಿಟಲ್ ಅಸೆಟ್ಸ್ಗಳ ಮೇಲಿನ ತೆರಿಗೆ ಲೆಕ್ಕಾಚಾರದಲ್ಲಿ ಬದಲಾವಣೆ ಆಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ವರ್ಚುವಲ್ ಡಿಜಿಟಲ್ ಅಸೆಟ್ಸ್ (VDAs) ಮತ್ತು ಕ್ರಿಪ್ಟೋಕರೆನ್ಸಿಗಳ ಮೇಲೆ ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್ (TDS) ಜುಲೈ 1ನೇ ತಾರೀಕಿನಿಂದ ಜಾರಿಗೆ ಬಂದಿದೆ. ವಿಡಿಎ ಖರೀದಿಸುವವರು ಮಾರಾಟ ಮಾಡುವವರಿಗೆ (ಭಾರತೀಯ ನಿವಾಸಿಗಳು) ಪಾವತಿಸುವ ಮೊತ್ತದ ಮೇಲೆ ಶೇ 1ರಷ್ಟು ಕಡಿತ ಆಗುತ್ತದೆ. ಅದನ್ನು ಆದಾಯ ಟಿಡಿಎಸ್ ಎಂದು ಪರಿಗಣಿಸಲಾಗುತ್ತದೆ. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.
ಹೊಸ ನಿಯಮ ಏನು ಹೇಳುತ್ತದೆ?
ಸಿಬಿಡಿಟಿ, ಹಣಕಾಸು ಕಾಯ್ದೆ, 2022ರ ಸುತ್ತೋಲೆ ಪ್ರಕಾರ, ಜುಲೈ 1, 2022ರಿಂದ ಅನ್ವಯ ಆಗುವಂತೆ ಆದಾಯ ತೆರಿಗೆ ಕಾಯ್ದೆಗೆ 194S ಹೊಸ ಸೆಕ್ಷನ್ ಸೇರ್ಪಡೆಯಾಗಿದೆ. ಆ ಹೊಸ ಸೆಕ್ಷನ್ ಪ್ರಕಾರ, ಯಾವುದೇ ವ್ಯಕ್ತಿಯು ಯಾವುದೇ ನಿವಾಸಿಗೆ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆ ಸಲುವಾಗಿ ಮೊತ್ತವನ್ನು ಪಾವತಿಸುವುದಕ್ಕೆ ಅದರ ಮೇಲೆ ಶೇ 1ರಷ್ಟನ್ನು ಆದಾಯ ತೆರಿಗೆ ಎಂದು ಪಾವತಿಸಲಾಗುತ್ತದೆ. ಈ ತೆರಿಗೆ ಕಡಿತವನ್ನು ಆ ನಿವಾಸಿಯ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅಥವಾ ಪಾವತಿಸುವ ಸಮಯದಲ್ಲಿ, ಇವೆರಡರಲ್ಲಿ ಯಾವುದು ಮುಂಚೆಯೋ ಆಗ ಕಡಿತ ಮಾಡಬೇಕಾಗುತ್ತದೆ.
ಯಾವ ಸಂದರ್ಭದಲ್ಲಿ ಟಿಡಿಎಸ್ ಅಗತ್ಯವಿಲ್ಲ?
ಸಿಬಿಡಿಟಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಈ ಕೆಳಗಿನ ಸಂದರ್ಭಗಳಲ್ಲಿ ಅಗತ್ಯ ಇಲ್ಲ:
1. ಒಬ್ಬ ನಿರ್ದಿಷ್ಟ ವ್ಯಕ್ತಿಯು ಒಂದು ಹಣಕಾಸು ವರ್ಷದಲ್ಲಿ ಪಾವತಿಸುವ ಮೊತ್ತವು ಅಥವಾ ಸರಾಸರಿ ಮೊತ್ತವು 50 ಸಾವಿರ ರೂಪಾಯಿಯನ್ನು ದಾಟದಿದ್ದಾಗ; ಅಥವಾ
2. ನಿರ್ದಿಷ್ಟ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ಯಾವುದಾದರೂ ವ್ಯಕ್ತಿ ಮೊತ್ತವನ್ನು ಪಾವತಿಸಬೇಕಿದ್ದಲ್ಲಿ ಮತ್ತು ಒಂದು ಹಣಕಾಸು ವರ್ಷದಲ್ಲಿ ಆ ಮೊತ್ತವು 10,000 ರೂಪಾಯಿ ದಾಟದಿದ್ದಾಗ.
ನಿರ್ದಿಷ್ಟ ವ್ಯಕ್ತಿ ಅಂದರೇನು?
1. ವೈಯಕ್ತಿಕ ಅಥವಾ ಹಿಂದೂ ಅವಿಭಜಿತ ಕುಟುಂಬ ಆಗಿದ್ದು, ಅಂಥವರಿಗೆ ವ್ಯಾಪಾರ ಅಥವಾ ವೃತ್ತಿಯಿಂದ ಲಾಭವೋ ಗಳಿಕೆಯೋ ಇರಬಾರದು; ಮತ್ತು
2. ವೈಯಕ್ತಿಕ ಅಥವಾ ಹಿಂದೂ ಅವಿಭಜಿತ ಕುಟುಂಬ ಆಗಿದ್ದು, ವ್ಯಾಪಾರ ಅಥವಾ ವೃತ್ತಿಯಿಂದ ಲಾಭವೋ ಗಳಿಕೆಯೋ ಅವರ ಒಟ್ಟು ಮಾರಾಟ/ಸಗಟು ರಸೀದಿ/ ಉದ್ಯಮದ ವಹಿವಾಟು 1 ಕೋಟಿ ರೂಪಾಯಿ ದಾಟಬಾರದು ಅಥವಾ ವೃತ್ತಿ ಆಗಿದಲ್ಲಿ 50 ಲಕ್ಷ ರೂಪಾಯಿ ದಾಟಬಾರದು. ವರ್ಚುವಲ್ ಡಿಜಿಟಲ್ ಅಸೆಟ್ಸ್ ವರ್ಗಾವಣೆ ಆದ ಹಣಕಾಸು ವರ್ಷದ ತಕ್ಷಣದ ಹಣಕಾಸು ವರ್ಷಕ್ಕೆ ಈ ಮಿತಿಯನ್ನು ನೋಡಲಾಗುತ್ತದೆ.
ಖರೀದಿದಾರರು- ಮಾರಾಟಗಾರರು ಇಬ್ಬರು ಟಿಡಿಎಸ್ ಪಾವತಿಸಬೇಕಾ?
ಒಂದು ವೇಳೆ ಖರೀದಿದಾರರು ಆದಾಯ ತೆರಿಗೆ ಕಾಯ್ದೆ 194S ಅಡಿಯಲ್ಲಿ ತೆರಿಗೆ ಕಡಿತ ಮಾಡಿದಲ್ಲಿ ಮಾರಾಟಗಾರರು ಅದೇ ವಹಿವಾಟಿಗೆ ಕಡಿತ ಮಾಡುವ ಅಗತ್ಯ ಇಲ್ಲ ಎಂದು ಸಿಬಿಡಿಟಿ ಹೇಳಿದೆ. ಇದರ ಅನುಷ್ಠಾನ ಸರಿಯಾಗಿ ಆಗಬೇಕು ಅಂದರೆ ಖರೀದಿದಾರರಿಂದ ತೆರಿಗೆ ಕಡಿತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ತೆಗೆದುಕೊಳ್ಳಬೇಕು.
ಸೆಕ್ಷನ್ 194S ಅಡಿ ಕಡಿತ ಮಾಡಿದ ಮೊತ್ತವನ್ನು ಆ ತಿಂಗಳ ಕೊನೆಯಿಂದ 30 ದಿನದೊಳಗಾಗಿ ಸರ್ಕಾರಕ್ಕೆ ಪಾವತಿಸಬೇಕು. ಸರ್ಕಾರಕ್ಕೆ ಪಾವತಿಸುವುದಕ್ಕೆ ಇನ್ನು 15 ದಿನ ಬಾಕಿ ಇರುವಂತೆ ಮೊತ್ತವನ್ನು ಕಟ್ಟಿದವರಿಗೆ ಕಟ್ಟಿಸಿಕೊಂಡವರು ಟಿಡಿಎಸ್ ಪ್ರಮಾಣ ಪತ್ರ ನೀಡಬೇಕು. ಇದು ಹೊಸ ನಿಯಮವಾಗಿದೆ.
ಇದನ್ನೂ ಓದಿ: PayPal: ಬಿಟ್ಕಾಯಿನ್ ಸೇರಿ ಕ್ರಿಪ್ಟೋಕರೆನ್ಸಿಗಳನ್ನು ಬಾಹ್ಯ ವ್ಯಾಲೆಟ್ಗಳಿಗೆ ವರ್ಗಾವಣೆ ಮಾಡಲು ಪೇಪಾಲ್ ಅನುಮತಿ
Published On - 1:28 pm, Sat, 2 July 22