ರಾಷ್ಟ್ರೀಯ ಭದ್ರತೆಯೆಡೆಗೆ ದಕ್ಷಿಣ ಕೊರಿಯಾದ ಬದ್ಧತೆ: ಸೆಲೆಬ್ರಿಟಿಗಳಿಗೂ ಹೊರತಲ್ಲದ ಕಡ್ಡಾಯ ಸೇನಾ ಸೇವೆ

|

Updated on: Jun 12, 2023 | 10:38 PM

ದಕ್ಷಿಣ ಕೊರಿಯಾದಲ್ಲಿ ಎಲ್ಲ ನಾಗರಿಕ ಗಂಡಸರು ಕನಿಷ್ಠ ಎರಡು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ.

ರಾಷ್ಟ್ರೀಯ ಭದ್ರತೆಯೆಡೆಗೆ ದಕ್ಷಿಣ ಕೊರಿಯಾದ ಬದ್ಧತೆ: ಸೆಲೆಬ್ರಿಟಿಗಳಿಗೂ ಹೊರತಲ್ಲದ ಕಡ್ಡಾಯ ಸೇನಾ ಸೇವೆ
ದಕ್ಷಿಣ ಕೊರಿಯಾ ಸೆಲೆಬ್ರಿಟಿಗಳು
Follow us on

‘ಕಾನ್‌ಸ್ಕ್ರಿಪ್ಷನ್’ ಎಂದರೆ ನಿರ್ದಿಷ್ಟ ಅವಧಿಗೆ ಜನರನ್ನು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವಂತೆ ಮಾಡುವುದು. ಇದನ್ನು ಡ್ರಾಫ್ಟ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ದಕ್ಷಿಣ ಕೊರಿಯಾ (South Korea) ಸೇರಿದಂತೆ, ಹಲವು ರಾಷ್ಟ್ರಗಳು ಈ ಸೇನಾ ಸೇವೆಯನ್ನು ಬಹಳಷ್ಟು ವರ್ಷಗಳಿಂದ ಜಾರಿಗೆ ತಂದಿವೆ. ದಕ್ಷಿಣ ಕೊರಿಯಾದಲ್ಲಿ ಎಲ್ಲ ನಾಗರಿಕ ಗಂಡಸರು ಕನಿಷ್ಠ ಎರಡು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ವೈದ್ಯಕೀಯ ಕಾರಣಗಳಿದ್ದರೆ, ಅಥವಾ ಆ ವ್ಯಕ್ತಿ ಎರಡು ವರ್ಷ ವಯಸ್ಸಿಗಿಂತ ಸಣ್ಣ ಮಗುವನ್ನು ಹೊಂದಿದ್ದರೆ ಆತನಿಗೆ ಇದರಿಂದ ವಿನಾಯಿತಿ ಸಿಗಬಹುದು. ಆದರೆ ಸೆಲೆಬ್ರಿಟಿಗಳಿಗೆ ಇದರಿಂದ ವಿನಾಯಿತಿ ಸಿಗುವುದು ಅತ್ಯಂತ ಅಪರೂಪ ಎನ್ನಬಹುದು.

ದಕ್ಷಿಣ ಕೊರಿಯಾ ಕಡ್ಡಾಯ ಸೇನಾ ಸೇವೆಯನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಿರುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ದಕ್ಷಿಣ ಕೊರಿಯಾ ಅಸ್ಥಿರತೆಗೆ ಹೆಸರಾಗಿರುವ ಪ್ರದೇಶದಲ್ಲಿದೆ. ಉತ್ತರ ಕೊರಿಯಾ ಒಂದು ಪ್ರತಿಕೂಲ ನೆರೆರಾಷ್ಟ್ರವಾಗಿದ್ದು, ದಕ್ಷಿಣ ಕೊರಿಯಾ 1953ರಿಂದಲೂ ಉತ್ತರ ಕೊರಿಯಾದೊಡನೆ ಯುದ್ಧದ ಸನ್ನಿವೇಶವನ್ನು ಎದುರಿಸುತ್ತಲೇ ಬಂದಿದೆ. ಎರಡನೆಯದಾಗಿ, ದಕ್ಷಿಣ ಕೊರಿಯಾದ ಜನಸಂಖ್ಯೆ ಬಹಳಷ್ಟು ಕಡಿಮೆಯಿದೆ. ಆದ್ದರಿಂದ ಒಂದು ಸದೃಢ ಸೇನೆಯನ್ನು ಹೊಂದಲು ದಕ್ಷಿಣ ಕೊರಿಯಾ ಕಡ್ಡಾಯ ಸೇನಾ ಸೇವೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾಗುತ್ತದೆ. ಮೂರನೆಯದಾಗಿ, ಕಡ್ಡಾಯ ಸೇನಾ ಸೇವೆಯನ್ನು ರಾಷ್ಟ್ರೀಯ ಐಕ್ಯತೆ ಮತ್ತು ದೇಶಭಕ್ತಿಯನ್ನು ಮೂಡಿಸುವ ದಾರಿಯಾಗಿ ಕಾಣಲಾಗುತ್ತದೆ.

ಇದನ್ನೂ ಓದಿ: ಜಗತ್ತಿನ ಅತ್ಯಂತ ಕಲುಷಿತಗೊಂಡ 14 ನಗರಗಳು ಭಾರತದಲ್ಲಿವೆ! ನೀವು ಕಲುಷಿತ ಗಾಳಿ ಉಸಿರಾಡುತ್ತಿದ್ದೀರಾ?

ಹಲವರಿಗೆ ಈ ಕಡ್ಡಾಯ ಸೇನಾ ಸೇವೆ ಒಂದು ರೀತಿ ತೊಂದರೆದಾಯಕ ಎಂದು ಕಾಣಬಹುದು. ಆದರೆ, ಇದು ದಕ್ಷಿಣ ಕೊರಿಯಾ ತನ್ನ ರಾಷ್ಟ್ರೀಯ ಭದ್ರತೆಗೆ ಎಷ್ಟು ಒತ್ತು ಕೊಡುತ್ತದೆ ಎನ್ನುವುದಕ್ಕೂ ಸಾಕ್ಷಿಯಾಗಿದೆ. ದಕ್ಷಿಣ ಕೊರಿಯಾ ಯಾವುದೇ ಸಾಮಾಜಿಕ ಸ್ಥಾನಮಾನದ ಹಂಗಿಲ್ಲದೆ, ಪ್ರತಿಯೊಬ್ಬ ಕೊರಿಯನ್ ಪ್ರಜೆಯೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಆತನ ಜವಾಬ್ದಾರಿ ಎಂದೇ ಪರಿಗಣಿಸುತ್ತದೆ. ಇದನ್ನು ಯುವಜನರಿಗೆ ಶಿಸ್ತು, ತಂಡ ಸ್ಫೂರ್ತಿ ಮತ್ತು ತ್ಯಾಗದ ಮನೋಭಾವವನ್ನು ಕಲಿಸುವ ಮಾರ್ಗವೆಂಬಂತೆಯೂ ಗಮನಿಸಲಾಗಿದೆ.

ಕಡ್ಡಾಯ ಸೇನಾ ಸೇವೆಯ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು

ಧನಾತ್ಮಕ ಅಂಶಗಳು:

  • ಕಡ್ಡಾಯ ಸೇನಾ ಸೇವೆಯಿಂದಾಗಿ ದೇಶ ಸದೃಢ ಸೇನೆಯನ್ನು ಹೊಂದಲು ಸಾಧ್ಯವಾಗುತ್ತದೆ.
  • ಇದು ರಾಷ್ಟ್ರೀಯ ಐಕ್ಯತೆ ಮತ್ತು ದೇಶಭಕ್ತಿಯನ್ನು ರೂಪಿಸುತ್ತದೆ.
  • ಸೇನಾ ಸೇವೆ ಯುವ ಜನತೆಗೆ ಶಿಸ್ತು, ತಂಡವಾಗಿ ಕೆಲಸ ಮಾಡುವುದು ಮತ್ತು ತ್ಯಾಗವನ್ನು ಕಲಿಸುತ್ತದೆ.

ಋಣಾತ್ಮಕ ಅಂಶಗಳು:

  • ಕಡ್ಡಾಯ ಸೇನಾ ಸೇವೆಗೆ ನಿಯೋಜಿತರಾದವರಿಗೆ ಇದೊಂದು ಅನ್ಯಾಯ ಎಂಬಂತೆ ತೋರಬಹುದು.
  • ಇದು ಯುವ ಜನರ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ತೊಂದರೆ ನೀಡಬಹುದು.
  • ಕಡ್ಡಾಯ ಸೇನಾ ಸೇವೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ಸೈನಿಕರು ಅಪಾಯವನ್ನು ಎದುರಿಸುವುದು ಸರ್ವೇ ಸಾಮಾನ್ಯ ವಿಚಾರವಾಗಿದೆ.

ಒಟ್ಟಾರೆಯಾಗಿ ಈ ಕಡ್ಡಾಯ ಸೇನಾ ಸೇವೆ ಎನ್ನುವುದು ವಿವಾದಾತ್ಮಕ ವಿಚಾರವಾಗಿದೆ. ಇದರಲ್ಲಿ ಧನಾತ್ಮಕ, ಋಣಾತ್ಮಕ ಅಂಶಗಳೂ ಇವೆ. ಇದನ್ನು ಜಾರಿಗೆ ತರಬೇಕೇ ಬೇಡವೇ ಎಂದು ನಿರ್ಧರಿಸುವುದು ಆಯಾ ರಾಷ್ಟ್ರಕ್ಕೆ ಬಿಟ್ಟ ವಿಚಾರವಾಗಿದೆ.

ಇದನ್ನೂ ಓದಿ: ಹಳಿ ತಪ್ಪಬೇಡಿ! ರೈಲ್ವೇ ಟ್ರಾಫಿಕ್ ಕಂಟ್ರೋಲ್​ನಲ್ಲಿ ಪಾಯಿಂಟ್ ಮೆಷಿನ್ಸ್ ಅತಿ ಮುಖ್ಯ, ಪ್ರಯೋಜನಗಳು ಇಲ್ಲಿವೆ

ಜಗತ್ತಿನಲ್ಲೇ ಅತ್ಯಂತ ಪ್ರಖ್ಯಾತವಾಗಿರುವ, ದಕ್ಷಿಣ ಕೊರಿಯಾ ಮೂಲದ ಸಂಗೀತ ತಂಡ ಬಿಟಿಎಸ್‌ಗೂ ಈ ಸೇನಾ ಸೇರ್ಪಡೆ ಕಡ್ಡಾಯವಾಗಿದೆ. ಹ್ಯೂಂಡಯ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆಯ 2018ರ ವರದಿಯ ಪ್ರಕಾರ, ಬಿಟಿಎಸ್ ಬ್ಯಾಂಡ್ ದಕ್ಷಿಣ ಕೊರಿಯಾದ ಆರ್ಥಿಕತೆಗೆ ಪ್ರತಿವರ್ಷವೂ 3.6 ಬಿಲಿಯನ್ ಡಾಲರ್ ಆದಾಯ ತಂದಿದೆ. ಫೋರ್ಬ್ಸ್ ವರದಿಯ ಪ್ರಕಾರ, ಅವರ ಯೂಟ್ಯೂಬ್ ಚಾನೆಲ್ ಒಂದೇ ಪ್ರತಿ ತಿಂಗಳು ಎರಡು ಮಿಲಿಯನ್ ಡಾಲರ್ ತನಕ ಆದಾಯ ಹೊಂದಿದೆ. ಆದ್ದರಿಂದ ಇಂತಹ ಪ್ರಮುಖ ಬ್ಯಾಂಡ್ ಸದಸ್ಯರನ್ನು ಕಡ್ಡಾಯ ಸೇನಾ ಸೇವೆಯಿಂದ ಹೊರಗಿಡಬೇಕು ಎಂಬ ವಾದಗಳೂ ದಕ್ಷಿಣ ಕೊರಿಯಾದಲ್ಲಿ ಕೇಳಿ ಬರುತ್ತಿದ್ದವು. ಈ ಬ್ಯಾಂಡ್‌ಗೂ ಕಡ್ಡಾಯ ಸೇನಾ ಸೇವೆಯಿಂದ ವಿನಾಯಿತಿ ನೀಡಲಾಗಿಲ್ಲ. ಏಳು ಸದಸ್ಯರನ್ನು ಹೊಂದಿರುವ ತಂಡದ ಇಬ್ಬರು ಸದಸ್ಯರು ಈಗಾಗಲೇ ಸೇನಾ ಸೇವೆ ಸಲ್ಲಿಸಲು ತೆರಳಿದ್ದಾರೆ.

ಬಿಟಿಎಸ್ ಸದಸ್ಯರ ಸೇನಾ ಸೇರ್ಪಡೆ ಬ್ಯಾಂಡ್ ಅಭಿಮಾನಿಗಳಿಗೆ ಅಂತಹ ಆಶ್ಚರ್ಯದ ವಿಚಾರವೇನೂ ಆಗಿಲ್ಲ. ಯಾಕೆಂದರೆ ಈ ತಂಡದ ಸದಸ್ಯರು ನಮ್ಮ ಸಮಯ ಬಂದಾಗ ನಾವು ಸೇನೆಯಲ್ಲಿ ಸೇವೆ ಸಲ್ಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಬಿಟಿಎಸ್ ಜಗತ್ತಿನ ಅತ್ಯಂತ ಪ್ರಸಿದ್ಧ ಮತ್ತು ಯಶಸ್ವಿ ಕೆ-ಪಾಪ್ ತಂಡಗಳಲ್ಲಿ ಒಂದಾಗಿದ್ದು, “ಆರ್ಮಿ” ಎಂದು ಹೆಸರಾಗಿರುವ ಅಭಿಮಾನಿ ಬಳಗವನ್ನು ಹೊಂದಿದೆ. ಬಿಟಿಎಸ್ ಕೆ-ಪಾಪ್ ಸಂಗೀತವನ್ನು ಜಗತ್ತಿನಾದ್ಯಂತ ಪ್ರಚುರಪಡಿಸಲು ಕಾರಣವಾಗಿದ್ದು, ಹೊಸ ತಲೆಮಾರಿನ ಅಭಿಮಾನಿಗಳನ್ನು ಸಂಪಾದಿಸಿದೆ. ತಂಡದ ಜಿನ್, ಸುಗಾ, ಜೆ ಹೋಪ್, ಆರ್ ಎಂ, ಜಿಮಿನ್, ವಿ ಹಾಗೂ ಜಂಗ್ ಕುಕ್ ಅವರು ಸಾಹಿತ್ಯವನ್ನೂ ರಚಿಸಿ, ಹಾಡುಗಳನ್ನು ಸ್ವತಃ ಸೃಷ್ಟಿಸುತ್ತಾರೆ. ಬಿಟಿಎಸ್ ಬ್ಯಾಂಡ್ ಪಾಪ್, ಹಿಪ್ ಹಾಪ್, ಆರ್ & ಬಿ, ಹಾಗೂ ಇಡಿಎಂ ಶೈಲಿಗಳನ್ನು ಒಳಗೊಂಡಿದೆ.

“ಡಿಎನ್ಎ”, “ಫೇಕ್ ಲವ್”, “ಐಡಲ್”, ಹಾಗೂ “ಬಾಯ್ ವಿದ್ ಲವ್ ಈ ಬ್ಯಾಂಡಿನ ಕೆಲವು ಪ್ರಮುಖ ಹಾಡುಗಳಾಗಿವೆ. ಈ ಹಾಡುಗಳು ದಕ್ಷಿಣ ಕೊರಿಯಾದಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ಜನಪ್ರಿಯವಾಗಿವೆ.

ಜೂನ್ 13 ಬಿಟಿಎಸ್ ಮತ್ತು ಅವರ ಅಭಿಮಾನಿ ಬಳಗವಾದ ‘ಆರ್ಮಿ’ಗೆ ಮಹತ್ವದ ದಿನವಾಗಿದೆ. 2013ರ ಈ ದಿನದಂದು ತಂಡ ಮೊದಲ ಪ್ರದರ್ಶನ ನೀಡಿತ್ತು. ಕೆ-ಪಾಪ್ ಬ್ಯಾಂಡ್ ತಮ್ಮ ಮೊದಲ ಹಾಡಾದ “ನೋ ಮೋರ್ ಡ್ರೀಮ್” ಅನ್ನು ಈ ದಿನದಂದು ತಮ್ಮ ಚೊಚ್ಚಲ ಆಲ್ಬಮ್ 2 ಕೂಲ್ 4 ಸ್ಕೂಲ್ ಆಗಿ ಬಿಡುಗಡೆಗೊಳಿಸಿತ್ತು.

ಆ ಬಳಿಕ ಬಿಟಿಎಸ್ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಸಂಗೀತ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ ಮತ್ತು ದಾಖಲೆಗಳನ್ನು ಮುರಿದಿದೆ. ಅಂತಹ ಪ್ರಮುಖ ಬ್ಯಾಂಡ್ ಸದಸ್ಯರೂ ಈಗ ದೇಶ ಸೇವೆಗೆ ಆದ್ಯತೆ ನೀಡಿ, ಕಡ್ಡಾಯ ಸೇನಾ ಸೇವೆ ಸಲ್ಲಿಸುತ್ತಿದ್ದಾರೆ.

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ