ಸ್ವಭಾವ ಪ್ರಭಾವ : ನಾವದೆಷ್ಟೇ ಎದೆಸೆಟೆಸಿ ನಿಂತು ಆರ್ಭಟಿಸಿದರೂ ವಾಸ್ತವದಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಪರಸ್ಪರ ಅವಲಂಬಿತರು ಎನ್ನುವುದು ಕಟುಸತ್ಯ. ಅಭಿವೃದ್ಧಿ-ತಂತ್ರಜ್ಞಾನ ಈ ಅವಲಂಬನೆಯಿಂದ ಮುಕ್ತಗೊಳಿಸುತ್ತಿದೆ ಎಂದೆನ್ನಿಸಿದರೂ ಅದರ ಪರಿಣಾಮಗಳನ್ನು ನಾವು ಸುಲಭಕ್ಕೆ ಒಪ್ಪಿಕೊಳ್ಳಲಾರೆವು. ಏಕೆಂದರೆ ನಾಗರಿಕ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳುವ ಕನಸು ಗುರಿಗಳಿಗೆ ತಕ್ಕಂಥ ವೇಗ ನಮಗೆ ಮುಖ್ಯ. ಮೈಮನಸ್ಸನ್ನು ಬೆಸೆದಿರುವ ಬಹುಸಂಸ್ಕೃತಿಯ ಸ್ವೀಕಾರ, ಸಹಕಾರ ಮತ್ತದರ ನಿಧಾನಲಯದ ಅರಿವಿನ ಸೊಬಗು, ಅಂತಃಕರಣದ ತೇವ, ಪ್ರಜ್ಞೆಯ ಆಳ ನಮಗಿಂದು ಬೇಡ. ಹಾಗಾಗಿ ನಮ್ಮ ಬೇರುಗಳಿಗೆ ಕತ್ತರಿ ಬೀಳುವಾಗ ಜಾಣಕುರುಡರಾಗಿರುತ್ತೇವೆ. ಸ್ವಯಂಶೋಧನೆಗೆ ಒಳಪಡುವ ಏಕಾಂತ, ಅಧ್ಯಯನಶೀಲತೆ ನಮಗೆ ಭಯ ತರಿಸುತ್ತದೆ, ಒಂಟಿತನ ಒಡ್ಡುತ್ತದೆ. ಅದಕ್ಕೇ ಸದಾ ಗೌಜಿ, ಗದ್ದಲ, ವಿವಾದದೊಂದಿಗೆ ಗುಂಪು ಕಟ್ಟಿಕೊಳ್ಳುತ್ತ ಹುಸಿ ಶಕ್ತಿಶಾಲಿತನ ಮೆರೆಯುವುದೇ ನಮಗಿಷ್ಟ!; ಈ ಧರ್ಮದವರನ್ನು ಹೊರಗಿಡಿ, ಆ ಧರ್ಮದವರನ್ನು ಹೊರಗಿಡಿ ಎನ್ನುವ ಕೂಗುಮಾರಿಗಳೇ, ದಯವಿಟ್ಟು ನಿಮ್ಮ ಮೂಲಸ್ವಭಾವವೇನು, ಪ್ರಭಾವವೇನು ಎಂಬುದನ್ನು ಪರಾಮರ್ಶೆಗೆ ಒಳಪಡಿಸಿಕೊಳ್ಳಿ. ಪ್ರಭಾವ ಎನ್ನುವುದು ಎಂದಿಗೂ ಸ್ವನಾಶವೇ.
ದೆಹಲಿಯಲ್ಲಿ ವಾಸಿಸುತ್ತಿರುವ ಧಾರವಾಡದ ಲೇಖಕಿ, ಅನುವಾದಕಿ ರೇಣುಕಾ ನಿಡಗುಂದಿ ಅವರ ಬರಹ.
ನಿಮಗೆ ಗೊತ್ತೇ ? ಬಿಸ್ಮಿಲ್ಲಾಹ್ ಖಾನರ ಶೆಹನಾಯಿ ವಾದನವಿಲ್ಲದೇ ಕಾಶಿ ವಿಶ್ವನಾಥನ ಪೂಜೆ ಪೂರ್ತಿಯಾಗುತ್ತಿದ್ದಿಲ್ಲ. ಅವರ ಅಭಿಮಾನಿಯೊಬ್ಬ ‘ನೀವು ಲಂಡನ್ನಿಗೆ ಬನ್ನಿ. ನಿಮ್ಮ ಕೀರ್ತಿ ಇನ್ನೂ ಹೆಚ್ಚುತ್ತದೆ’ ಎಂದು ಕರೆದಾಗ ಬಿಸ್ಮಿಲ್ಲಾಹ್ ಖಾನರು, ‘ನನ್ನೊಂದಿಗೆ ಈ ಗಂಗೆಯನ್ನು, ವಿಶ್ವನಾಥನನ್ನೂ ಕರೆದೊಯ್ಯುವಂತಿದ್ದರೆ ಬರ್ತೀನಿ’ ಇದು ನಮ್ಮ ನಿಜವಾದ ಸಂಸ್ಕೃತಿ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ತಿಂಥಣಿಯ ಮೌನೇಶ ಮುಸ್ಲಿಮರಿಗೆ ಸಂತ ಮೋಯಿನುದ್ದೀನ ಆಗಿದ್ದಾನೆ. ಮೌನೇಶನ ಜಾತ್ರೆಯ ರಥೋತ್ಸವದಲ್ಲಿ ಎರಡೂ ಜನಾಂಗದವರು ಸೇರಿ ದಾಸೋಹ ನಡೆಸುತ್ತಾರೆ, ಕರ್ನಾಟಕದ ಕಬೀರರೆಂದು ಹೆಸರಾದ ಸಂತ ಶಿಶುನಾಳ ಶರೀಫರಿಗೆ ಗೋವಿಂದ ಭಟ್ಟರು ಗುರುವಾಗ್ತಾರೆ.
ಅಮೃತಸರದ ಸುವರ್ಣ ಮಂದಿರ- ಹರಮಿಂದರ್ ಸಾಹಿಬ್ ಗುರುದ್ವಾರದ ನಿರ್ಮಾಣವಾಗುತ್ತಿದ್ದಾಗ ಗುರು ಅರ್ಜನ್ ದೇವ ಅವರು ಸೂಫಿ ಸಂತರಾದ ಮೀರ್ ಮಿಂಯಾ ಅವರನ್ನು ಲಾಹೋರಿನಿಂದ ಕರೆಸಿ ಕಟ್ಟಡದ ಅಡಿಗಲ್ಲನ್ನು ಅವರಿಂದ ಹಾಕಿಸುತ್ತಾರಂತೆ. ಇದು ನಮ್ಮ ಬಹುತ್ವ ಭಾರತದ ಚೆಲುವು.
ಒಂದು ಊರೆಂದರೆ ಒಂದು ಕೇರಿಯೆಂದರೆ ಅಲ್ಲಿ ಎಲ್ಲ ಸಮುದಾಯದ ಜನರೂ ಒಂದಾಗಿ ಒಟ್ಟಿಗೆ ಬಾಳುತ್ತಾರೆ. ಜಾತಿ ಧರ್ಮ ರೀತಿ ನೀತಿ ಬೇರೆಯಾದರೂ ಕಷ್ಟ ಸುಖದಲ್ಲಿ ಓಡಿಬಂದು ನೆರವಾಗುವವರು ನಮ್ಮ ನೆರೆಹೊರೆಯವರೇ ಹೊರತು ಬಂಧುಗಳಲ್ಲ. ಇದನ್ನು ನಮ್ಮ ಹಿರಿಯರು ಚೆನ್ನಾಗಿ ಅರಿತಿದ್ದರು.
ನಮ್ಮ ಮನೆಯ ಹಿಂದಿನ ಓಣಿ ಪಿಂಜಾರ್ ಓಣಿ. ಅಲ್ಲಿ ವಾಸಿಸುತ್ತಿದ್ದವರೆಲ್ಲ ನಮಗೆ ಪ್ರಿಯರಾಗಿದ್ದವರೇ. ನಮ್ಮ ಹಿತ್ತಲಿಗೂ ಪಿಂಜಾರ್ ಓಣಿಗೂ ನಡುವೆ ಒಂದು ಕಿರಿದಾದ ಸಂದಿಯಿತ್ತು. ಸಂದಿಯನ್ನು ದಾಟಿ ಆ ಓಣಿಗೆ ಹೋಗಬಹುದಿತ್ತು, ಹಿತ್ತಲಿನಲ್ಲಿ ಹೂ ಗಿಡಗಳು, ಪೇರಲ ಗಿಡ, ಅವರೇ ಬಳ್ಳಿ, ಲಿಂಬೆ, ದಾಳಿಂಬೆಗಿಡಗಳಿದ್ದು ನಾವು ಹಿತ್ತಲಿನಲ್ಲಿಯೇ ಕುಳಿತು ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದನ್ನು ಮಾಡುತ್ತಿದ್ದೆವು. ಅತ್ತಲಿಂದ ಆಡು ಕೋಳಿಗಳು ನಮ್ಮ ಹಿತ್ತಲಿಗೆ ನುಗ್ಗುತ್ತಿದ್ದುದರಿಂದ ಆ ಸಂದಿಯನ್ನು ಬಿದಿರಿನ ತಟ್ಟಿಯಿಂದ ಬಂದ್ ಮಾಡಲಾಗಿತ್ತು. ಆ ಸಂದಿಯ ಆಚೆಕಡೆ ನಿಂತುಕೊಂಡು “ಅವ್ವಾ.. ಅವ್ವಾ” ಅಂತ ಕೂಗು ಕೇಳಿದರೆ ನನ್ನ ತಾಯಿ, ‘ಏಯ್ ಹೋಗಿ ನೋಡು… ದಾದೀ ಬೀ ಕರಿಯಾಕತ್ತಾಳ, ಉಪ್ಪಿನಕಾಯಿ ಬೇಕಿರಬೇಕ್’ ಅಂತ ಅವ್ವನೇ ಊಹಿಸಿಬಿಡುತ್ತಿದ್ದಳು.
ಇದನ್ನೂ ಓದಿ : ಸ್ವಭಾವ ಪ್ರಭಾವ: ‘ನಮ್ಮ ಇಸ್ಲಾಂಪೂರಕ್ಕೆ ವಹಾಬಿಸಮ್ ಕಾಲಿಟ್ಟಿಲ್ಲ, ಸಂಘಪರಿವಾರ ಕೆಮ್ಮಂಗಿಲ್ಲ’
ದಾದೀ ಬೀ, ಹುಸೇನ ಬೀ ಗಳ ಸೊಸೆಯಂದಿರಿಗೆ ಬಸಿರು, ಬಯಕೆಗಳು ಶುರುವಾದರೆ ಅವರು ಅಲ್ಲಿಂದ ಕೂಗು ಹಾಕಿ ನಾವು ಇತ್ತಲಿಂದ ಉಪ್ಪಿನಕಾಯಿಯನ್ನು ದಾಟಿಸುತ್ತಿದ್ದೆವು. ಮನೆಯಲ್ಲಿನ ಚಿಕ್ಕಮಕ್ಕಳಿಗೆ ದೃಷ್ಟಿಯಾದರೆ, ಕಾಲ್ಧೂಳಿಯಾದರೆ, ಹಿಂದಿನ ಓಣಿಗೆ ಹೋಗಿ ಗಡ್ದೇಸಾಬರ ನವಿಲುಗರಿಯಿಂದ ನಿವಾಳಿಸಿಕೊಂಡು ಅವರು ಕೊಟ್ಟ ಸಕ್ಕರೆಯನ್ನು ತಿಂದರೆ ಆಯಿತು, ಎಲ್ಲಾ ಬಾಧೆಗಳೂ ”ಛೂ ಮಂತರ್” ಆಗಿಬಿಡುತ್ತಿದ್ದವು.
ಮನೆಯ ಹಬ್ಬ ಹುಣ್ಣಿವೆಗಳಲ್ಲಿ ಶುಭಕಾರ್ಯಗಳಲ್ಲಿ ತಪ್ಪಲೆಗಟ್ಟಲೆ ಗೋಧಿ ಪಾಯಸ, ಹೋಳಿಗೆ, ಕಟ್ಟಿನ ಸಾರು ಉಳಿದರೆ ಅವ್ವ ಖುಶಿಯಿಂದ ಇಮಾಂಬೂ, ಹುಸೇನಬೀ ತಮ್ಮ ಪಾತ್ರೆ ಪಗಡಗಳನ್ನು ತಂದು ತುಂಬಿಕೊಂಡು ಹೋಗುತ್ತಿದ್ದರು, ಪ್ರೀತಿಯಿಂದ ಉಣ್ಣುತ್ತಿದ್ದರು. ಮೊಹರಮ್ಮಿನ ಚೊಂಗೆ, ರಮಜಾನಿನ ಸುರುಕುಂಬಾವನ್ನೂ ನಾವು ಮೂವರೂ ಮಕ್ಕಳು ಬಾಯಲ್ಲಿ ಜೊಲ್ಲು ಸುರಿಸಿಕೊಂಡು ತಿನ್ನುತ್ತಿದ್ದುದನ್ನು ನಾನು ಈಗಲೂ ಮಿಸ್ ಮಾಡಿಕೊಳ್ಳುತ್ತೇನೆ. ಶಾಲೆಯಿಂದ ಬರುವಾಗೆಲ್ಲ ಸಯ್ಯದನ ಟಾಂಗಾದ ಹಿಂದೆ ಹಲಗೆ ಹಿಡಿದು ನಾವು ಓಡುತ್ತಿದ್ದರೆ ಸಯ್ಯದ್ ಟಾಂಗಾ ನಿಲ್ಲಿಸಿ ಹತ್ತಿಸಿಕೊಂಡು ಮನೆಯವರೆಗೂ ಬಿಡುತ್ತಿದ್ದ. ಹೀಗೇ ಅವ್ವ ವಾರಕ್ಕೊಮ್ಮೆ ಸಂತೆ ಮುಗಿಸಿ ಹೊರಲಾರದ ಚೀಲವನ್ನು ಹೊರಲು ಹೆಣಗುತ್ತಿದ್ದರೆ ತಾವೇ ಗುರುತಿಸಿ ಮನೆಗೆ ತಂದು ಬಿಡುತ್ತಿದವರ ಹೆಸರೂ ನೆನಪಿರುತ್ತಿದ್ದಿಲ್ಲ.
ನಮ್ಮೂರಿನ ಲಕ್ಶ್ಮೀ ನಾರಾಯಣನ ಜಾತ್ರೆಯಲ್ಲಿ ತೊಟ್ಟಿಲು ಆಡಿಸುತ್ತಿದ್ದ ಕಾಸಿಂ, ಪಾತ್ರೆ ಪಗಡಗಳ ಅಂಗಡಿ, ರಿಬ್ಬನ್ನು, ಬಳೆಯಂಗಡಿ, ಮಕ್ಕಳ ಆಟದ ಸಾಮಾನುಗಳ ಅಂಗಡಿ ಹಾಕಿ ಜಾತ್ರೆಯನ್ನು ಸಂಭ್ರಮವಾಗಿಸುತ್ತಿದ್ದವರೆಲ್ಲ ನಮ್ಮವರೇ ಮುಸ್ಲಿಂ ಬಾಂಧವರು. ಇತ್ತೀಚೆಗೆ ಧಾರವಾಡದ ನನ್ನ ಹೊಸಮನೆಯ ಮರದ ಕೆಲಸವನ್ನು ಮಾಡಿದವ ಇಮಾಂಬೂನ ಗಂಡ ಮುಹಮ್ಮದ್ ಅಲೀ. ದೇವರ ಮನೆಗೆ ತೇಗದ ಮರದ ಕಟ್ಟಿಗೆ ಆರಿಸಿ ಚೆಂದನೆಯ ಕುಸುರಿಯ ಕೆತ್ತನೆ ಮಾಡಿ ಅಂದಗೊಳಿಸಿದ್ದೂ ಅವನೇ. ಗೃಹಪ್ರವೇಶದ ದಿನವೂ ನೆರೆಹೊರೆಯ ಮುಸ್ಲಿಂ ಬಾಂಧವರೆಲ್ಲ ಬಂದು ಉಡುಗೊರೆ ಕೊಟ್ಟು ಹರಸಿ ಉಂಡು ಹೋಗಿದ್ದರು.
ನಮ್ಮ ಮನೆಯ ಒಂದು ಭಾಗದಲ್ಲಿ ಬಹಳ ಕಾಲದಿಂದ ( ಮೂವತ್ತು ವರ್ಷ ) ಒಂದು ಮುಸ್ಲಿಂ ಕುಟುಂಬ ವಾಸಿಸುತ್ತಿತ್ತು. ರಾಜಮ್ಮ ಅಂತಿದ್ದೆವು ನಾವು, ನಿಜವಾದ ಹೆಸರು ಏನಿತ್ತೋ ಇದವರೆಗೂ ಗೊತ್ತಿಲ್ಲ. ಈಗ ಆಕೆ ಇಲ್ಲ. ಅವರ ಡಜನ್ನು ಮಕ್ಕಳೂ ಅದೇ ಪುಟ್ಟ ಮನೆಯಲ್ಲಿ ಹುಟ್ಟಿ ಬೆಳೆದರು. ಆಡು, ಕೋಳಿಗಳನ್ನು ಸಾಕಿದ್ದರು, ಸಯ್ಯದ್ ಮತ್ತು ಅವರ ಅಪ್ಪ ಟಾಂಗಾ ನಡೆಸುತ್ತಿದ್ದರು. ಮನೆಯ ಹೊರಗೆ ಬಿದಿರಿನ ತಟ್ಟಿಯ ಪುಟ್ಟ ಲಾಯದಲ್ಲಿ ಕುದುರೆಯೂ ಇರ್ತಿತ್ತು. ಮತ್ತೊಂದು ಕುದುರೆ ನಮ್ಮ ಅಂಗಳದಲ್ಲಿ. ನಾವೆಂದೂ ಕುದುರೆ ಲದ್ದಿ ಹಾಕಿದೆ ಗಲೀಜಾಗಿದೆ ಅಂತ ಜಗಳ ಮಾಡಿದ್ದನ್ನು ನೋಡಿಲ್ಲ. ಯಾಕೆಂದರೆ ದಿನಾ ಬೆಳಗಿನ ಐದೂವರೆಗೆದ್ದು ಅಂಗಳ ಗುಡಿಸುತ್ತಿದ್ದುದು ರಾಜಮ್ಮನೇ. ಬಳಿಕ ಅವ್ವ ನೀರು ಸಿಂಪಡಿಸಿ ಮನೆ ಮುಂದೆ ಸೆಗಣಿಯಿಂದ ಗುಂಡಾಗಿ ಸಾರಿಸಿ ರಂಗವಲ್ಲಿ ಇಡುತ್ತಿದ್ದಳು. ಮುಂದೆ ರಂಗೋಲಿಡುವ ಕೆಲಸ ನಮಗೆ ಬಂತು. ರಾತ್ರಿ ಒಳಗೆ ರಾಜಮ್ಮನ ಮಗಳು ಮೆಹಬೂಬ್ ರೊಟ್ಟಿಬಡಿಯುತ್ತಿದ್ದರೆ ಸೆಕೆಗೆ ಮನೆಯವರೆಲ್ಲ ನಮ್ಮ ಕಟ್ಟೆಯ ಮೇಲೆ ಕುಳಿತು ಮಾತಿಗೆ ತೊಡಗಿರುತ್ತಿದ್ದರು. ಅವರ ಮನೆಗೆ ನೆಂಟರು ಬಂದರೂ ಇದೇ ಕಟ್ಟೆಯಮೇಲೆ ಅವರ ಮಾತು. ರಾತ್ರಿ ನಮ್ಮ ಮನೆಯ ಕಟ್ಟೆಯ ಮೇಲೆ ಸೈಯ್ಯದ ಅಥವಾ ಬಾಬಾಜಾನ್ ಕೌದಿಹೊದ್ದು ಮಲಗಿರುತ್ತಿದ್ದರು. ನಮ್ಮ ತಲೆಗೆ ಹೇನು ಹೊಕ್ಕಾಗ ರಾಜಮ್ಮನೇ ಕುಳಿತು ಹೇನು ಸೀರುಗಳನ್ನು ಒರೆದು ಒರೆದು ಸ್ವಚ್ಚಗೊಳಿಸುತ್ತಿದ್ದಳು. ಮೆಣಸಿನಕಾಯಿ ಒಣಹಾಕಿದರೆ ಕಾಯುತ್ತಿದ್ದರು. ಅವರು ಯಾರೋ ಬೇರೆ ಅನಿಸಲೇ ಇಲ್ಲ ನನಗೆ.
ಇದನ್ನೂ ಓದಿ : ಸ್ವಭಾವ ಪ್ರಭಾವ: ‘ಸಪ್ರೇಮ ಸಂಬಂಧಗಳು ಮತ್ತು ಕಾವಿಗೆ ಕುಳಿತ ಕೇಡು’ ಮಹಾದೇವ ಹಡಪದ ಬರಹ
ಅಪ್ಪ ಇನ್ನೇನು ರಿಟೈರ್ ಆಗುತ್ತಾನೆ ಎಂದಾಗ ಅವ್ವ, ‘ಮನೆಯನ್ನು ಬಿಡಿಸಿಕೊಳ್ರೀ, ಇನ್ನಷ್ಟು ಹೆಚ್ಚು ಬಾಡಿಗೆ ಬರುವಂತೆ ಮಾಡಬಹುದು’ ಎನ್ನುತ್ತಿದ್ದಳೇ ಹೊರತು ಅವರು ಮುಸ್ಲಿಮರು ಹೊರಹಾಕಿ ಎಂದದ್ದನ್ನು ನಾನ್ಯಾವತ್ತೂ ಕೇಳಿಲ್ಲ.
ಅಂತೂ ಒಂದಿನ ಅಪ್ಪ ಅಂಗಳದಲ್ಲಿ ಬರುತ್ತಿದ್ದ ರಾಜಮ್ಮನನ್ನು ‘ಬಾರವಾ ಇಲ್ಲೇ ’ ಅಂತ ಕರೆದ. ನಾವೆಲ್ಲ ಮಕ್ಕಳೂ ಬಾಯಿಬಿಟ್ಟುಕೊಂಡು ಇನ್ನೇನು ಜಗಳ ಆಗುತ್ತಾ ಅಂತ ಹೆದರಿದ್ದೆವೆಂದು ಕಾಣುತ್ತದೆ. ಆಕೆ ಕುಲುಕುಲು ನಗುನಗುತ್ತ, ‘ಹಾಂ ಅಣ್ಣಾ ಬೋಲೋ ಬಾ… ಅಂತ’ ಬಾಗಿಲಬಳಿ ಬಂದಳು. ಅಪ್ಪ ಧೈರ್ಯದಿಂದ ಕೇಳಿದ, ‘ಹಾಂ… ಮಕ್ಕಳೆಲ್ಲ ಹೇಗಿದ್ದಾರೆ ಏನೇನು ಮಾಡಿದ್ದಾರೆ, ಗುಲ್ಜಾರಳಿಗೆ ಇನ್ನೇನು ಮದುವೆ ವಯಸ್ಸಾತು.’ ಹೀಂಗೆ ಮಾತಾಡಿ ಕಳಿಸಿಬಿಟ್ಟ. ಮನೆ ಬಿಡ್ರೀ ನಮಗೆ ಬೇಕು ಅಂತ ಯಾವ ಮಾತೂ ನನ್ನಪ್ಪನ ಬಾಯಲ್ಲಿ ಬರಲಿಲ್ಲ. ಅಂಥ ಕರುಳಿನವ ನನ್ನಪ್ಪ. ಈಗಲೂ ಈ ಘಟನೆ ನನ್ನ ಕಣ್ಮುಂದೆ ಕಟ್ಟಿದಂತಿದೆ. ಇವತ್ತಿನ ಧರ್ಮಾಂಧತೆಯ ಕೆಡುಗಾಲದಲ್ಲಿ ನನ್ನಪ್ಪ ನನ್ನವ್ವ ನೆನಪಾಗುತ್ತಾರೆ. ಹೆಮ್ಮೆಯೆನಿಸುತ್ತದೆ ನನಗೆ ಅವರು ನಮ್ಮನ್ನು ಬೆಳೆಸಿದ ರೀತಿಗೆ.
ಈಗಲೂ ಧಾರವಾಡದ ನನ್ನ ಮನೆಯ ಒಂದು ಪಕ್ಕದಲ್ಲಿ ಜನಾಬ್ ಲತೀಫ್ ಸಾಹೇಬರ ಮನೆಯಿದೆ. ಒಂದುಕಾಲಕ್ಕೆ ಅವರು ಅಂಜುಮನ್ ಶಾಲೆಯ ಮಾಸ್ತರರಾಗಿದ್ದರು. ನಾನು ಚಿಕ್ಕವಳಿದ್ದಾಗ ನನ್ನನ್ನು ನೋಡಿದವರು. ನಾನು ಅವರ ಅಂಗಡಿಗೆ ಚಾಕೊಲೇಟ್ ಬಿಸ್ಕಿಟ್ ತರಲು ಹೋಗುತ್ತಿದ್ದೆನಂತೆ, ‘ನೀನು ಇಷ್ಟಿದ್ದೆ’ ಅಂತ ಕೈಮಾಡಿ ತೋರಿಸಿ, ನನ್ನ ಪುಸ್ತಕಗಳನ್ನು ಬೇಡಿ ಪಡೆದು ಓದುತ್ತಾರೆ. ಎಲ್ಲರಿಗೂ ಹೆಮ್ಮೆಯಿಂದ, ‘ಈ ಮಗಳು ಇಷ್ಟಿದ್ದಳು. ಇವರ ತಾಯಿ ತಂದೆ ಬಹೂತ್ ಅಚ್ಛೆ ಲೋಗ ಥೆ.’ ಅಂತನ್ನುವಾಗ ನಾನು ಮೂಕಳಾಗುತ್ತೇನೆ. ಪ್ರತಿವರ್ಷ ನನಗೆ ಕೆಂಪು ಮೆಣಸಿನ ಖಾರದ ಪುಡಿಗೆ ಮಸಾಲೆ ಕೂಡಿಸಿ ಕೊಟ್ಟು ಕಳಿಸುತ್ತಾರೆ ಲತಿಫ್ ಸಾಹೇಬರ ಹೆಂಡತಿ. ನಾನೂ ದಿಲ್ಲಿಯಿಂದ ಶಾಲು ಸ್ವೆಟರ್ ಏನಾದರೂ ಒಯ್ಯುತ್ತೇನೆ. ನಿಜಾಮುದ್ದೀನ್ ದರಗಾಕ್ಕೆ ಹೋದರೆ ಈ ದುಡ್ದು ಹಾಕು ಹುಂಡಿಗೆ ಅಂತ ತಪ್ಪದೇ ಕೊಡುತ್ತಾರೆ. ಆಗ್ರಾದ ಪೇಠಾ ಅವರಿಗಿಷ್ಟ ಅಂತ ಕೊಟ್ಟುಕಳಿಸಿರುತ್ತೇನೆ. ದಿನಾ ನನ್ನ ಅಡುಗೆಗೆ ಅವರದೇ ಮಸಾಲಿ ಖಾರ.
ಅಷ್ಟೇ ಏಕೆ ನನಗೆ ಮೊಟ್ಟ ಮೊದಲ ಸಲ ಮೊಟ್ಟೆಯನ್ನು ಕುದಿಸಿ ಕದ್ದು ಹಿತ್ತಲಿಂದ, ರೇಣೂ… ತಗೋ ಅಂತ ಹಾಳೆಯಲ್ಲಿ ಸುತ್ತಿ ಕೊಟ್ಟಿದ್ದು ರಾಜಮ್ಮನೇ. ನನಗೆ ಹೇಗೆ ತಿನ್ನಬೇಕಂತ ಗೊತ್ತಿರದೇ ಬಿಳಿಭಾಗವನ್ನೆಲ್ಲ ಬಿಸಾಕಿ ಬರಿ ಹಳದೀ ಭಾಗವನ್ನು ಮುಖ ಸಿಂಡರಿಸಿಕೊಂಡು ತಿಂದಿದ್ದೂ ಮರೆತಿಲ್ಲ ನಾನು.
ನಾನು ಹುಟ್ಟಿ ಬೆಳೆದ ವಾತಾವರಣದಲ್ಲಿ ಜಾತ್ರೆಗಳು, ಉರುಸು ಬೇರೆ ಬೇರೆಯಾಗಿದ್ದಿಲ್ಲ. ನೂರಿ. ಗುಲ್ಜಾರ್ , ಫಾತಿಮಾರು ಬೇರೆಯಾಗಿದ್ದಿಲ್ಲ. ಮೆಹಬೂಬಳ ಮದುವೆಯ ಚಪ್ಪರ ನಮ್ಮ ಮನೆಯಮುಂದೆಯೇ ಹಾಕಿದ್ದರು. ನಮ್ಮ ಅವ್ವ ಹಿತ್ತಾಳೆಯ ತಪ್ಪಲೆಯನ್ನು “ಆಯಾರಾ” ಮಾಡಿದ್ದಳು. ಅವರ ಅಡುಗೆ ನಾವು ಉಣ್ಣುವುದಿಲ್ಲವೆಂದು ನಮಗೆ ಪರಾತದಲ್ಲಿ ಅಕ್ಕಿ, ಬೇಳೆ, ಬೆಲ್ಲ, ರವೆ ‘ಉಲುಪಿ’ ಕೊಟ್ಟಿದ್ದರು. ಅವ್ವ ಸಜ್ಜಕದ ಹೋಳಿಗೆ ಮಾಡಿ ಉಣಿಸಿದ್ದಳು. ರಮಜಾನಿನ ಹಬ್ಬಕ್ಕೆ ಮೆಹಂದಿ ಎಲೆಗಳನ್ನು ಅರೆಯುವುದೂ ನಮ್ಮ ಕಟ್ಟೆಯೆ ಮೇಲೆಯೇ. ನಾವು ರಾತ್ರಿಯಾಗುವುದನ್ನೇ ಕಾಯುತ್ತಿರುತ್ತಿದ್ದೆವು. ಯಾವಾಗ ಗುಲ್ಜಾರ್ ಕರೀತಾಳೋ ಅಂತ. ಊಟ ಮುಗಿಸಿ ಮಲಗುವಾಗ ಕರೆದು ನಮ್ಮ ಪುಟ್ಟಪುಟ್ಟ ಕೈಗಳಿಗೆ ಮೆಹಂದಿ ಹಚ್ಚುತ್ತಿದ್ದ ಅವರ ಪ್ರೀತಿಗೆ ಯಾವ ಜಾತಿಯೂ ಇದ್ದಿಲ್ಲ.
ಇದನ್ನೂ ಓದಿ : ಸ್ವಭಾವ ಪ್ರಭಾವ : ‘ಆದ್ರೂ ಮುಸ್ಲಿಮ್ಸ್ ಬಗ್ಗೆ ಕೇರ್ಫುಲ್ ಆಗಿ ಇರಬೇಕು’ ಹೀಗಂದ ಆ ನವಯುವಕ
ಮೊಹರಮ್ಮಿನ ಅಲೀ ದೇವರಿಗೆ ಸಕ್ಕರೆ ಓದಿಸಲು ಹೋಗುವವರು ಹಿಂದೂಗಳೇ ಹೆಚ್ಚು. ಅಲೀ ದೇವರುಗಳೂ ಯಾರಾದರೂ ಹರಕೆ ಹೊತ್ತು ಮರೆತಿದ್ದರೆ ಸೀದ ಹೋಗಿ ಅವರ ಬಾಗಿಲಿಗೆ ನಿಲ್ಲುತ್ತಿದ್ದವು. ನೀವು ಹರಕೆ ಮರೆತಿದ್ದೀರಿ ಅಂತ ನೆನಪಿಸುವ ಮನೆಯ ಕಷ್ಟ ಸುಖಗಳಿಗೆ ಸ್ಪಂದಿಸುವ ಅವರ ದೇವರುಗಳು ನಮ್ಮ ದೇವರೂ ಆಗಿದ್ದವು. ಪ್ರತಿ ಹಿಂದೂ ಮನೆಗಳಲ್ಲಿ ಹೋಳಿಗೆ ಮಣೆ ಜತೆ ಚಿತ್ತಾರದ ಚೊಂಗೇ ಮಣೆಯೂ ಇರ್ತಿತ್ತು. ದುಃಖಸೂಚಕ ಮೊಹರಮ್ಮ್ ಕಳೆದ ಬಳಿಕ ಬಾಯಿ ಸಿಹಿ ಮಾಡಿಕೊಳ್ಳುವ ಹಬ್ಬದ ಚೊಂಗೆ ತಪ್ಪದೇ ಗಮಗಮ ಬೇಯುತ್ತಿದ್ದವು. ತೊರಗಲ್ಲಮಠದವರ ಅಂಗಡಿಯ ಎದುರು ಸಾಲಿನಲ್ಲಿನ ಬಳೆಯಂಗಡಿಗಳಲ್ಲಿ ಕುಳಿತು ಬಳೆ ತೊಡಸಿಕೊಳ್ಳುವಾಗ ಯಾವ ಹೆಂಗಳೆಯರಿಗೂ ಇದು ಮುಸ್ಲಿಮರ ಅಂಗಡಿ ಅವರ ಕೈಯಿಂದ ಬಳೆ ತೊಡಿಸಿಕೊಳ್ಳೂದಾ? ಅಂತ ಅನಿಸಿದ್ದಿಲ್ಲ. ಸತ್ಯನಾರಾಯಣನ ಪೂಜೆಗೆ ಹಣ್ಣು ಖರೀದಿಸುವಾಗ, ‘ಸಾಹೇಬ್ರ ತಗೋರಿ, ಅವ್ವಾರ ತಗೋರಿ ಚೊಲೋ ಬಾಳೆಹಣ್ಣದಾವ’ ಅಂತ ಕೊಡುವಾಗ ಅವನ ಜಾತಿ ಕಾಣುತ್ತಿದ್ದಿಲ್ಲ. ‘ವೀಳ್ಯದ ಎಲೆಮಾರುವ ಹುಡುಗನಿಗೆ ಎರಡು ಎಲೆ ಹೆಚ್ಚು ಹಾಕೋ’ ಅನ್ನುವಾಗಲೂ ಮಾವಿನ ಮರ ಹತ್ತಿಸಿ ತೋರಣಕ್ಕೆ ಕಾಸೀಮನಿಂದ ಎಲೆ ಕೀಳಿಸುವಾಗಲೂ ಅವನ ಜಾತಿ ನಮಗ್ಯಾರಿಗೂ ನೆನಪಾಗುತ್ತಿದ್ದಿಲ್ಲ. ಮಾವಿನ ಹಣ್ಣಿನ ಸುಗ್ಗಿಯಲ್ಲಿ ಹಣ್ಣುಮಾರುವ ನೂರಿಯ ಅವ್ವ ಚೊಲೋ ಹಣ್ಣು ಅಂತ ನಮ್ಮ ಮನೆಗೆ ಹಣ್ಣು ಕೊಟ್ಟು ಸಂತೆಗೆ ಹೋಗುತ್ತಿದ್ದಳು. ನಾನೇಕೆ ನನ್ನ ಕಾಲದ ಯಾರಿಗೂ ತೊಂದರೆಯೆನಿಸಲಿಲ್ಲ. ದೆವ್ವ ಹಿಡಿದವರಿಗೆ ದೆವ್ವ ಬಿಡಿಸಲು ಮುಸ್ಲಿಂ ದರಗಾಗಳಿಗೇ ಹೆಚ್ಚು ಜನ ನಡೆದುಕೊಳ್ಳುತ್ತಿದ್ದರಲ್ಲ. ಇಂಥ ಸಾಮರಸ್ಯದ ಊರು ಕೇರಿಗಳಿಗೆ, ಯಾವ ಕಲ್ಮಶವೂ ಇರದ ಮನಸುಗಳಿಗೆ ಕಿಡಿಗೇಡಿಗಳೇ ಬೆಂಕಿಯಿಡುತ್ತಿದ್ದೀರಲ್ಲಾ ನಾಳೆ ನಿಮ್ಮ ಮನೆಗಳ ತನಕ ಆ ಬೆಂಕಿ ಹಬ್ಬಿದರೆ ಏನುಮಾಡುತ್ತೀರಿ!
ಎಲ್ಲ ಹತೋಟಿಯನ್ನೂ, ಆದೇಶಗಳನ್ನು ಸರಕಾರ ಮಾಡಲಿ ಎಂದು ಅಪೇಕ್ಷಿಸುವುದಕ್ಕಿಂತ ಪ್ರತಿಯೊಬ್ಬ ಮನುಷ್ಯನೂ ತನ್ನನ್ನು ತಾನು ಪ್ರಶ್ನೆ ಕೇಳಿಕೊಳ್ಳಬೇಕಿದೆ. ನಮ್ಮ ಬದುಕಿನ ಉದ್ದೇಶಗಳೇನು? ನೆಮ್ಮದಿಯ ಸಾಮರಸ್ಯದ ಬದುಕು ಚೆಂದವೋ ಈ ನಂಜುಣ್ಣುವ ದ್ವೇಷದ ಬದುಕು ಚೆಂದವೋ? ಮನುಷ್ಯ ಮನುಷ್ಯನನ್ನು ಶತ್ರುವಾಗಿಸುವ ಯಾವ ಧರ್ಮವೂ ಬೇಡ, ಯಾವ ರಾಜಕಾರಣವೂ ನಮಗೆ ಬೇಡ ಎಂದು ನಾವು ನಾವೇ ನಿರ್ಧರಿಸುವ ಎಚ್ಚರವನ್ನು ಕಾಪಾಡಿಕೊಳ್ಳಬೇಕಿದೆ.
ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು
ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ…
ಉಂಬ ಜಂಗಮ ಬಂದರೆ ನಡೆ ಎಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿವರಯ್ಯಾ
ಎಂಬಂತಾಗಿದೆ ಇಂದು. ಒಂದು ಆರೋಗ್ಯಕರ ನೆಮ್ಮದಿಯ ಸಮಾಜಕ್ಕೆ ಜನರಲ್ಲಿ ಹೆಚ್ಚುತ್ತಿರುವ ಕುರುಡು ಮೌಡ್ಯ, ಅಸಹನೆ, ಮನುಷ್ಯ ಮನುಷ್ಯರ ನಡುವಿನ ದ್ವೇಷ, ಅಸೂಯೆಗಳು ಯಾವತ್ತೂ ಒಳ್ಳೆಯದಲ್ಲ.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಇದನ್ನೂ ಓದಿ : ಸ್ವಭಾವ ಪ್ರಭಾವ : ಬ್ಯಾರಿಗಳು ಕೊಟ್ಟಿದ್ದನ್ನೆಲ್ಲ ತಿನ್ನಬಾರದಂತೆ!
Published On - 12:18 pm, Sun, 27 March 22