ಸ್ವಭಾವ ಪ್ರಭಾವ : ಬ್ಯಾರಿಗಳು ಕೊಟ್ಟಿದ್ದನ್ನೆಲ್ಲ ತಿನ್ನಬಾರದಂತೆ!
Kasaragodu : ಸೇರು ಭತ್ತಕ್ಕೆ ಪಪ್ಪಾಯಿಯೋ ಬಸಳೆಯೋ ಕೊಡುಕೊಳ್ಳುವಿಕೆಯ ಬದುಕು ನಮ್ಮೂರಿನದು. ಸ್ವಲ್ಪ ದುಡ್ಡಿದ್ದರೆ ಮೀನು, ಇನ್ನೂ ದುಡ್ಡಿದ್ದಕ್ಕೆ ಕೋಳಿ ಪದಾರ್ಥ. ಏನೂ ಇಲ್ಲದಿದ್ದರೆ ಬರೀ ಗಂಜಿಗೆ, ಗಾಂಧಾರಿ ಮೆಣಸು ಸಾಕು ಎಂದು ಬಡತನದಲ್ಲಿಯೇ ಸಂತೃಪ್ತಿ.
ಸ್ವಭಾವ ಪ್ರಭಾವ : ನಾವದೆಷ್ಟೇ ಎದೆಸೆಟೆಸಿ ನಿಂತು ಆರ್ಭಟಿಸಿದರೂ ವಾಸ್ತವದಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಪರಸ್ಪರ ಅವಲಂಬಿತರು ಎನ್ನುವುದು ಕಟುಸತ್ಯ. ಅಭಿವೃದ್ಧಿ-ತಂತ್ರಜ್ಞಾನ ಈ ಅವಲಂಬನೆಯಿಂದ ಮುಕ್ತಗೊಳಿಸುತ್ತಿದೆ ಎಂದೆನ್ನಿಸಿದರೂ ಅದರ ಪರಿಣಾಮಗಳನ್ನು ನಾವು ಸುಲಭಕ್ಕೆ ಒಪ್ಪಿಕೊಳ್ಳಲಾರೆವು. ಏಕೆಂದರೆ ನಾಗರಿಕ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳುವ ಕನಸು ಗುರಿಗಳಿಗೆ ತಕ್ಕಂಥ ವೇಗ ನಮಗೆ ಮುಖ್ಯ. ಮೈಮನಸ್ಸನ್ನು ಬೆಸೆದಿರುವ ಬಹುಸಂಸ್ಕೃತಿಯ ಸ್ವೀಕಾರ, ಸಹಕಾರ ಮತ್ತದರ ನಿಧಾನಲಯದ ಅರಿವಿನ ಸೊಬಗು, ಅಂತಃಕರಣದ ತೇವ, ಪ್ರಜ್ಞೆಯ ಆಳ ನಮಗಿಂದು ಬೇಡ. ಹಾಗಾಗಿ ನಮ್ಮ ಬೇರುಗಳಿಗೆ ಕತ್ತರಿ ಬೀಳುವಾಗ ಜಾಣಕುರುಡರಾಗಿರುತ್ತೇವೆ. ಸ್ವಯಂಶೋಧನೆಗೆ ಒಳಪಡುವ ಏಕಾಂತ, ಅಧ್ಯಯನಶೀಲತೆ ನಮಗೆ ಭಯ ತರಿಸುತ್ತದೆ, ಒಂಟಿತನ ಒಡ್ಡುತ್ತದೆ. ಅದಕ್ಕೇ ಸದಾ ಗೌಜಿ, ಗದ್ದಲ, ವಿವಾದದೊಂದಿಗೆ ಗುಂಪು ಕಟ್ಟಿಕೊಳ್ಳುತ್ತ ಹುಸಿ ಶಕ್ತಿಶಾಲಿತನ ಮೆರೆಯುವುದೇ ನಮಗಿಷ್ಟ!; ಈ ಧರ್ಮದವರನ್ನು ಹೊರಗಿಡಿ, ಆ ಧರ್ಮದವರನ್ನು ಹೊರಗಿಡಿ ಎನ್ನುವ ಕೂಗುಮಾರಿಗಳೇ, ದಯವಿಟ್ಟು ನಿಮ್ಮ ಮೂಲಸ್ವಭಾವವೇನು, ಪ್ರಭಾವವೇನು ಎಂಬುದನ್ನು ಪರಾಮರ್ಶೆಗೆ ಒಳಪಡಿಸಿಕೊಳ್ಳಿ. ಪ್ರಭಾವ ಎನ್ನುವುದು ಎಂದಿಗೂ ಸ್ವನಾಶವೇ.
ಪತ್ರಕರ್ತೆ ರಶ್ಮಿ ಕಾಸರಗೋಡು ಅವರ ಬರಹ.
ತಗಳಿ ಶಿವಶಂಕರ ಪಿಳ್ಳೆಯವರ ಕಾದಂಬರಿ ಆಧಾರಿತ ಚೆಮ್ಮೀನ್ ಸಿನಿಮಾ ಸದಾ ನೆನಪಿನಲ್ಲಿ ಉಳಿಯುವ ಚಿತ್ರಗಳಲ್ಲೊಂದು. ಕರುತ್ತಮ್ಮ ಮತ್ತು ಪರೀಕುಟ್ಟಿಯ ಪ್ರಣಯ ಕಥೆಯಲ್ಲಿ ಅವರಿಬ್ಬರೂ ಯಾಕೆ ಒಂದಾಗಲ್ಲ? ಅವರು ಒಂದಾದರೆ ಏನು ಸಮಸ್ಯೆ? ಎಂಬುದು ಬಾಲ್ಯದಲ್ಲಿ ತಲೆಗೆ ಹೋಗಿರಲಿಲ್ಲ. 60ರ ದಶಕದಲ್ಲಿ ತೆರೆಕಂಡ ಈ ಸಿನಿಮಾವನ್ನು 90ರ ದಶಕದಲ್ಲಿ ದೂರದರ್ಶನದಲ್ಲಿ ನೋಡಿದಾಗ ಅದೊಂದು ಮೀನುಗಾರರ ಕತೆ ಅಷ್ಟೇ. ಆದರೆ ವರ್ಷಗಳು ಕಳೆದಂತೆ ಸಿನಿಮಾ ಕಾಡಿದ್ದು ಯಾಕೆ ಅವರನ್ನು ಒಂದಾಗಲು ಬಿಡಲಿಲ್ಲ ಎಂಬುದಾಗಿತ್ತು. ಅವರು ಒಂದಾಗಿದ್ದು ಎಂಬುದು ದುರಂತ ಅಂತ್ಯ. ಅವರ ಜತೆಯಾಗಿ ಸತ್ತರು, ಬದುಕಲಿಲ್ಲ. ಜತೆಯಾಗಿ ಬದುಕಲು ಬಿಡದೇ ಇದ್ದುದು ಯಾವುದು? ಕೇವಲ ಸಿನಿಮಾ ಮಾತ್ರವಲ್ಲ ಹಲವಾರು ಪ್ರಣಯ ಕತೆಗಳು ಇದೇ ರೀತಿಯ ದುರಂತ ಅಂತ್ಯ ಕಂಡಾಗಲೂ ಇದೇ ಪ್ರಶ್ನೆ ಉದ್ಭವಿಸುತ್ತದೆ. ಪ್ರಶ್ನೆಗಳು ಪ್ರಶ್ನೆಗಳಾಗಿ ಉಳಿದಿಲ್ಲ. ಆದರೆ ಉತ್ತರಗಳು ಅಸ್ಪಷ್ಟ, ಅವ್ಯಕ್ತವಾಗಿಯೇ ಇವೆ.
ನಾವು ಬೆಳೆಯುತ್ತಿದ್ದಂತೆ ನಮ್ಮ ಸುತ್ತಲಿನ ಪರಿಸರ ನಮಗೆ ಬಹಳಷ್ಟು ಕಲಿಸುತ್ತದೆ. ಮನೆ ಮತ್ತು ಶಾಲೆಗಳ ನಡುವೆ ನಮ್ಮೊಂದಿಗೆ ಒಡನಾಡುವ ಜನರು, ಅವರ ರೀತಿ ರಿವಾಜುಗಳು, ನಂಬಿಕೆ- ಮನರಂಜನೆಗಳು ನಮ್ಮ ಮೇಲೆ ಪ್ರಭಾವ ಇದ್ದೇ ಇರುತ್ತದೆ. ಹೀಗಿರುವಾಗ ಅದೊಂದು ದಿನ ಶಾಲೆಯಲ್ಲಿ ಸಹಪಾಠಿಯೊಬ್ಬ ಸಿಹಿತಿಂಡಿ ತಂದಿದ್ದ. ಅವರ ಮನೆಯಲ್ಲಿ ಮಾಡಿದ್ದ ಸಿಹಿತಿಂಡಿ ಅದು. ಎಲ್ಲರಿಗೂ ಒಂದೊಂದು ತುಂಡು ಕೊಟ್ಟು ಅವನು ಅವನ ಬೆಂಚಿನ ಮೇಲೆ ಕುಳಿತುಕೊಂಡ. ನಾವು ಒಂದಷ್ಟು ಮಕ್ಕಳು ತಿಂದೆವು. ಪಕ್ಕದ ಬೆಂಚಲ್ಲಿ ಕುಳಿತಿದ್ದ ಇನ್ನೊಬ್ಬ ಹುಡುಗಿ, ನೀನು ತಿಂದಿದ್ದೀಯನಾ, ಅವರು ನಮ್ಮವರಲ್ಲ. ಅವರು ಕೊಟ್ಟದ್ದನ್ನೆಲ್ಲಾ ನಾವು ತಿನ್ನಬಾರದಂತೆ. ನಾನು ಬಿಸಾಡಿದೆ ಎಂದು ಹೇಳಿದ್ಳು. ಅರೇ ತಿಂದಾಗಿದೆ, ಇನ್ನು ಅವರು ಕೊಟ್ಟದ್ದನ್ನು ತಿನ್ನಬಾರದು ಅಂದ್ರೆ ಹೇಗೆ ಎಂದು ನಾನು ಕಕ್ಕಾಬಿಕ್ಕಿಯಾದೆ.
ಇದನ್ನೂ ಓದಿ : ಸ್ವಭಾವ ಪ್ರಭಾವ : ‘ಆದ್ರೂ ಮುಸ್ಲಿಮ್ಸ್ ಬಗ್ಗೆ ಕೇರ್ಫುಲ್ ಆಗಿ ಇರಬೇಕು’ ಹೀಗಂದ ಆ ನವಯುವಕ
ಮನೆಗೆ ಬಂದು ವರದಿ ಒಪ್ಪಿಸಿದೆ. ಅವರು ಕೊಟ್ಟದ್ದು ನಾವು ತಿನ್ಬಾರ್ದಂತೆ ಅಂತ ಅವಳು ಹೇಳಿದ್ಳು ಅಂದೆ. ನೀನು ತಿಂದ್ಯಾ ಅಂದ್ರು ಅಮ್ಮ? ನಾನು ಮಾತ್ರ ಅಲ್ಲ ಅವಳು, ಇವಳು, ಮತ್ತೊಬ್ಬಳು ಎಲ್ಲರೂ ತಿಂದ್ವಿ ಎಂದು ಪಟ್ಟಿಯನ್ನೇ ಹೇಳಿದೆ. ಚಂದ ಇತ್ತಾ ಅಂದ್ರು, ಹೌದು ಚಂದ ಇತ್ತು ಅಂದೆ (ನಮ್ಮೂರಲ್ಲಿ ನಾವು ಚೆನ್ನಾಗಿದೆ ಅನ್ನೋದಕ್ಕೆ ಚಂದ ಇದೆ ಅಂತನೇ ಹೇಳ್ತಿದ್ವಿ). ಅಮ್ಮ ಬೇರೇನೋ ಮಾತಾಡಿ, ಈ ವಿಷಯ ಮರೆತು ಹೋಗುವಂತೆ ಮಾಡಿದ್ಳು. ಆದರೆ ಅವರು ಎಂದರೆ ಬ್ಯಾರಿಗಳು ಎಂಬುದು ಅರ್ಥವಾಗಲು ಸ್ವಲ್ಪ ಸಮಯ ಹಿಡಿಸಿತ್ತು. ಯಾಕೆಂದರೆ ನಾವು ಬೆಳೆದ ವಾತಾವರಣದಲ್ಲಿ ಹಾಗೊಂದು ಅಂತರ ಇರಲಿಲ್ಲ. ಅಲ್ಲಿರುವ ಜನರಿಗೆ ಬಡತನವೇ ದೊಡ್ಡ ವಿಷಯವಾಗಿರುವಾಗ ಜಾತಿ-ಧರ್ಮಗಳ ಅಡ್ಡಗೋಡೆಯನ್ನು ಅಲ್ಲಿ ಯಾರೂ ತಂದಿರಲಿಲ್ಲ. ಬಹುಶಃ ಈ ಬಡತನವೇ ಎಲ್ಲರನ್ನೂ ಒಗ್ಗೂಡಿಸಿದ್ದಿರಬೇಕು. ಈ ಮನೆಯಿಂದ ಒಂದು ಸೇರು ಭತ್ತಕ್ಕೆ ಪಪ್ಪಾಯಿಯೋ , ಬಸಳೆಯೋ ಕೊಟ್ಟುಕೊಂಡುಕೊಳ್ಳುವ ರೀತಿಯಲ್ಲಿ ಇಲ್ಲಿನ ಜನರು ಬದುಕುತ್ತಿದ್ದದ್ದು. ಸ್ವಲ್ಪ ದುಡ್ಡಿದ್ದರೆ ಮೀನು, ಇನ್ನೂ ಸ್ವಲ್ಪ ಜಾಸ್ತಿ ದುಡ್ಡಿದ್ದಕ್ಕೆ ಕೋಳಿ ಪದಾರ್ಥ. ಏನೂ ಇಲ್ಲದಿದ್ದರೆ ಬರೀ ಗಂಜಿಗೆ, ಗಾಂಧಾರಿ ಮೆಣಸು ಸಾಕು ಎಂದು ಬಡತನದಲ್ಲಿಯೇ ಸಂತೃಪ್ತಿ ಕಂಡ ಊರಾಗಿತ್ತು ನಮ್ಮದು. ಹಸಿವು- ಇದಕ್ಕೆ ಯಾವ ಜಾತಿ, ಯಾವ ಧರ್ಮ?
ಜತೆಗೆ ಬೆಳೆದ ಹುಡುಗರು ದೊಡ್ಡವರಾಗಿ ಗಲ್ಫ್ಗೆ ಹೋದ ಮೇಲೆ ನಮ್ಮ ಗ್ರಾಮವೇ ಬದಲಾಯಿತು. ಮನೆಗಳ ಸಂಖ್ಯೆ ಜಾಸ್ತಿಯಾಯಿತು, ಮಸೀದಿಯೂ ಬಂತು. ಸೂಪರ್ ಮಾರ್ಕೆಟ್ಗಳು ತಲೆಯೆತ್ತತೊಡಗಿದವು. ಧರ್ಮದ ಆಚರಣೆಗಳು ಈಗಲೂ ನಡೆಯುತ್ತಿವೆ. ಭೂತಕೋಲಕ್ಕೆ ಸಂಭಾವನೆ ಎಲ್ಲರೂ ಕೊಡುತ್ತಾರೆ. ಹುಟ್ಟು- ಮದುವೆ- ಸಾವು ಬದುಕಿನ ಪ್ರತಿಯೊಂದು ಸಂಭ್ರಮಗಳಲ್ಲಿ ಅಕ್ಕ ಪಕ್ಕದ ಮನೆಯವರೆಲ್ಲರೂ ಸೇರುತ್ತಾರೆ. ಅಮ್ಮಾ, ಮೇಲಿನ ಮನೆಯ ಉಮ್ಮಾ ಬಂದ್ರು, ಬೈಲಿನ ಮನೆಯ (ಕೆಳಗೆ ಹೊಲ ಗದ್ದೆಗಳಿರುವ ಊರು) ಬಾಯಮ್ಮ ಬಂದ್ರು ಎಂದು ಇಲ್ಲಿನ ಜನರು ಸಂಬೋಧಿಸುತ್ತಾರೆ. ಅಮ್ಮಾನೂ, ಉಮ್ಮಾನೂ, ಬಾಯಮ್ಮನೂ ಎಲ್ಲರೂ ನಮ್ಮವರೇ. ಯಾಕೆಂದರೆ ಅನ್ನ ದೇವರ ಮುಂದೆ, ಎಲ್ಲರೂ ಮನುಷ್ಯರೇ.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಇದನ್ನ ಓದಿ : ಸ್ವಭಾವ ಪ್ರಭಾವ: ‘ನಮ್ಮ ಇಸ್ಲಾಂಪೂರಕ್ಕೆ ವಹಾಬಿಸಮ್ ಕಾಲಿಟ್ಟಿಲ್ಲ, ಸಂಘಪರಿವಾರ ಕೆಮ್ಮಂಗಿಲ್ಲ’
Published On - 4:34 pm, Sat, 26 March 22