ಕೇಂದ್ರ ಕೊಟ್ಟ ಹಣ ಬಳಸುವಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಫಲ: ಅಂಕಿಅಂಶ ಸಮೇತ ಸಿದ್ದರಾಮಯ್ಯಗೆ ಜೋಶಿ ತಿರುಗೇಟು
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಅಂಕಿಅಂಶಗಳೊಂದಿಗೆ ತಿರುಗೇಟು ನೀಡಿದ್ದಾರೆ. ಕೇಂದ್ರದಿಂದ ಸಾಕಷ್ಟು ಹಣ ಬಿಡುಗಡೆಯಾಗಿದೆ ಎಂದು ಜೋಶಿ ಹೇಳಿದ್ದು, ಸಿದ್ದರಾಮಯ್ಯ ಅವರು ಹಣವನ್ನು ಸರಿಯಾಗಿ ಬಳಸಿಕೊಳ್ಳದೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು, ಮೇ 19: ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅಂಕಿಅಂಶ ಸಮೇತ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟ ಹಣವನ್ನು ಸರಿಯಾಗಿ ಬಳಸದೇ ಕರ್ನಾಟಕ ಮುಖ್ಯಮಂತ್ರಿಗಳು ವೃಥಾ ಆರೋಪ ಮಾಡುತ್ತಿದ್ದಾರೆ. ತಮ್ಮ ಹಣಕಾಸು ನಿರ್ವಹಣೆಯ ಅಸಮರ್ಥತೆ ಮುಚ್ಚಿಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯ ಎಕ್ಸ್ನಲ್ಲಿ ಅಂಕಿಅಂಶ ಸಮೇತ ಜೋಶಿ ಮಾಹಿತಿ ನೀಡಿದ್ದು, ಕೇಂದ್ರದಿಂದ ಹಣ ಬಿಡುಗಡೆಯಾಗದ ಒಂದೇ ಒಂದು ಯೋಜನೆಯನ್ನು ಸಿದ್ದರಾಮಯ್ಯ ಹೆಸರಿಸಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.
ಹಣಕಾಸು ನಿರ್ವಹಣೆಯಲ್ಲಿನ ತಮ್ಮ ಅಸಮರ್ಥತೆಯನ್ನು ಒಪ್ಪಿಕೊಳ್ಳುವ ಬದಲು, ಸಿಎಂ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರಿಸುತ್ತಲೇ ಇದ್ದಾರೆ. ತಮ್ಮ ಅಸಮರ್ಥತೆ ಮತ್ತು ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿನ ವೈಫಲ್ಯವನ್ನು ಮುಚ್ಚಿಹಾಕಲು ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ಬರಬೇಕಾದ 4,195 ಕೋಟಿ ರೂ. ಅನುದಾನ ಬಾಕಿ ಇದೆ ಎಂದು ಸಿದ್ದರಾಮಯ್ಯ ದೂರುವುದು ಬೂಟಾಟಿಕೆ ಎಂದು ಜೋಶಿ ಟೀಕಿಸಿದ್ದಾರೆ.
ಪಿಎಂಎವೈ (ಗ್ರಾಮೀಣ), ಸ್ವಚ್ಛ ಭಾರತ ಮಿಷನ್ (ನಗರ), ಅಮೃತ್, ಪೋಷಣ್, ಸಮಗ್ರ ಶಿಕ್ಷಾ ಮುಂತಾದ ಹಲವು ಪ್ರಮುಖ ಯೋಜನೆಗಳು ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಕೇಂದ್ರ ಯೋಜನೆಗಳ ಅಡಿಯಲ್ಲಿ 5,000 ಕೋಟಿ ರೂಪಾಯಿಗೂ ಹೆಚ್ಚು ಹಣ ಲಭ್ಯವಿದೆ ಎಂದು ಸಿದ್ದರಾಮ್ಯ ಅವರ ಸರ್ಕಾರದ ಖಜಾನೆಯ ಮೂಲಗಳೇ ನಮಗೆ ತಿಳಿಸಿವೆ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯಗೆ ಜೋಶಿ ಸವಾಲ್
ಈಗಾಗಲೇ ಕೇಂದ್ರದಿಂದ ನೀಡಲಾಗಿರುವ ಹಣವನ್ನು ಕರ್ನಾಟಕವು ಸಂಪೂರ್ಣವಾಗಿ ಬಳಸಿಕೊಂಡಿದ್ದು, ಆ ನಂತರವೂ ಕೇಂದ್ರ ಸರ್ಕಾರ ಹಣವನ್ನು ತಡೆಹಿಡಿದಿರುವ ಒಂದು ನಿರ್ದಿಷ್ಟ ಯೋಜನೆ ಇದೆ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ ಎಂದಿಟ್ಟುಕೊಳ್ಳೋಣ. ಒಂದು ವೇಳೆ ಹಾಗಿದ್ದರೆ, ಆ ಯೋಜನೆ ಯಾವುದೆಂಬುದನ್ನು ಸ್ಪಷ್ಟಪಡಿಸಲಿ. ವಾಸ್ತವದಲ್ಲಿ ಇದು ಸಾಧ್ಯವೇ ಇಲ್ಲ. ಯಾಕೆಂದರೆ, ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಖರ್ಚು ಮಾಡುವಲ್ಲಿಯೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಜೋಶಿ ಟೀಕಿಸಿದ್ದಾರೆ.
ಪ್ರಲ್ಹಾದ್ ಜೋಶಿ ಎಕ್ಸ್ ಸಂದೇಶ
Instead of acknowledging their financial mismanagement, Mr. @siddaramaiah and his government keep shifting blame to the Centre to hide their incompetence and failure to deliver the Congress promises.
It is hypocritical of Mr. Siddaramaiah to complain about pending grants of… pic.twitter.com/nZiyEOCZja
— Pralhad Joshi (@JoshiPralhad) May 19, 2025
ವಿಪರ್ಯಾಸವೆಂದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ, ಕಾಂಗ್ರೆಸ್‌ನ ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ 40,000 ಕೋಟಿ ರೂ. ಮೀಸಲಿಡಬೇಕಾಗಿತ್ತು ಎಂದು ಈ ಹಿಂದೆ ಒಪ್ಪಿಕೊಂಡಿದ್ದರು. ಇದರಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಹಣ ಉಳಿದಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಕೂಡ 2024 ರ ಜನವರಿಯಲ್ಲಿ, ಗ್ಯಾರಂಟಿಗಳಿಗಾಗಿ 58,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ಬಹಿರಂಗಪಡಿಸಿದ್ದರು ಎಂದು ಜೋಶಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಯೋಧರು ಖರೀದಿಸುವ ಮದ್ಯದ ತೆರಿಗೆ ಹೆಚ್ಚಿಸಲು ಮುಂದಾದ ಕಾಂಗ್ರೆಸ್ ಸರ್ಕಾರ
ಕರ್ನಾಟಕದ ಜನತೆಗೆ ಜವಾಬ್ದಾರಿಯುತ ಆಡಳಿತ ಬೇಕೇ ವಿನಃ ನಿರಂತರ ರಾಜಕೀಯ ಆರೋಪ-ಪ್ರತ್ಯಾರೋಪಗಳು ಮತ್ತು ದಾರಿತಪ್ಪಿಸುವ ನಿರೂಪಣೆಗಳಲ್ಲ. ಕಾಂಗ್ರೆಸ್ ಸರ್ಕಾರ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿ, ಈಗಾಗಲೇ ತನ್ನ ಬಳಿ ಇರುವ ಗಣನೀಯ ಪ್ರಮಾಣದ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪ್ರಾರಂಭಿಸುವ ಸಮಯ ಇದು ಎಂದು ಜೋಶಿ ಆಗ್ರಹಿಸಿದ್ದಾರೆ.