Bengaluru Rains: ಭಾರಿ ಮಳೆಗೆ ಬೆಂಗಳೂರು ಹೈರಾಣ, ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು, ಹಲವೆಡೆ ಸಂಚಾರಕ್ಕೆ ಅಡಚಣೆ
ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಜಯನಗರ, ವಿಜಯನಗರ, ಚಾಮರಾಜಪೇಟೆ ಸೇರಿದಂತೆ ಬೆಂಗಳೂರಿನ ಅನೇಕ ಕಡೆಗಳಲ್ಲಿ ಭಾನುವಾರ ರಾತ್ರಿ ಭಾರಿ ಮಳೆಯಾಗಿದೆ. ಹಲವು ಏರಿಯಾಗಳಲ್ಲಿ ರಾತ್ರಿಯಿಡೀ ತುಂತುರು ಮಳೆ ಸುರಿದಿದೆ. ಪರಿಣಾಮವಾಗಿ ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರೆ, ಇನ್ನು ಅನೇಕ ಕಡೆಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ವಿವರಗಳು ಇಲ್ಲಿವೆ.

ಬೆಂಗಳೂರು, ಮೇ 19: ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಆಗಾಗ್ಗೆ ಮಳೆ (Bengaluru Rains) ಸುರಿಯುತ್ತಿದೆ. ಭಾನುವಾರ ಸಂಜೆ ಹಾಗೂ ರಾತ್ರಿ ಕೂಡ ಚಾಮರಾಜಪೇಟೆ, ಜಯನಗರ, ವಿಜಯನಗರ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಅಷ್ಟೇ ಅಲ್ಲದೆ, ರಾತ್ರಿಯಿಡೀ ಮಳೆ ಸುರಿದಿದೆ. ಶನಿವಾರ ರಾತ್ರಿ ಸುರಿದಿದ್ದ ಮಳೆಗೆ ರಸ್ತೆಗಳಲ್ಲಿ ಗುಂಡಿಗಳು ಬಾಯ್ತೆರೆದಿದ್ದವು. ಗ್ರೇಟರ್ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳದ್ದೇ ದರ್ಬಾರ್ ಆಗಿದ್ದು, ಕಿತ್ತುಹೋಗಿರುವ ರಸ್ತೆಗಳನ್ನು ಸರಿಪಡಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಇದರ ಮಧ್ಯೆ ಇದೀಗ ಭಾನುವಾರ ರಾತ್ರಿ ಇಡೀ ಸುರಿದ ಮಳೆ ಮತ್ತಷ್ಟು ಅಧ್ವಾನ ಮಾಡಿಹಾಕಿದೆ. ಹೆಬ್ಬಾಳ, ಗೊರಗುಂಟೆಪಾಳ್ಯ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರ ಕಷ್ಟವಾಗಿದೆ.
ಭಾನುವಾರ ರಾತ್ರಿ ಸುರಿದ ಧಾರಾಕಾರ ಸುರಿದ ಮಳೆಗೆ ವಾಹನ ಸವಾರರು ಪರದಾಡಿದರು. ಭಾನುವಾರ ಎಂದು ಹೊರಗೆ ಬಂದಿದ್ದವರೆಲ್ಲ ಫಜೀತಿ ಅನುಭವಿಸಿದ್ದಾರೆ.
ಶನಿವಾರ ಸುರಿದಿದ್ದ ಮಳೆಗೆ ಸಾಯಿ ಲೇಔಟ್ ಜನರು ಇನ್ನೂ ಪರದಾಡುತ್ತಿದ್ದಾರೆ. ಇಡೀ ಏರಿಯಾಗೇ ಏರಿಯಾನೇ ಜಲಾವೃತಗೊಂಡಿದೆ. ರಸ್ತೆ ತುಂಬ ನೀರು, ಮನೆಗಳಿಗೂ ನೀರು ನುಗ್ಗಿ ಸಾಯಿಲೇಔಟ್ ಕೆರೆಯಂತಾಗಿದೆ. ರಾತ್ರಿಯಿಡಿ ಜಾಗರಣೆ ಮಾಡಿ ಬೆಳಗ್ಗೆಯಾದ್ರೂ ಮನೆಗಳಿಗೆ ನುಗ್ಗಿದ್ದ ರಾಜಕಾಲುವೆ ನೀರು ತಗ್ಗದೇ ನಿವಾಸಿಗಳು ಹಿಂಸೆ ಅನುಭವಿಸಿದರು.
ಭಾನುವಾರ ಮಧ್ಯಾಹ್ನ ಸಾಯಿ ಲೇಔಟ್ಗೆ ಭೇಟಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಟ್ರ್ಯಾಕ್ಟರ್ ಏರಿ ಏರಿಯಾ ಪರಿಶೀಲಿಸಿದ್ದಾರೆ. ಇದೇ ವೇಳೆ ಬಿಬಿಎಂಪಿ ಕಮಿಷನರ್ ಎದುರು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ 12 ಗಂಟೆ ಭಾರಿ ಮಳೆ ಮುನ್ಸೂಚನೆ
ಬೆಂಗಳೂರಿನಲ್ಲಿ ಮುಂದಿನ 12 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಜಾನೆಯೇ ಟ್ರಾಫಿಕ್ ಜಾಮ್, ಸಂಚಾರಕ್ಕೆ ಅಡಚಣೆ!
ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ನಗರದ ಹೊರ ಹೋಗುವ ಮತ್ತು ಒಳ ಬರುವ ಕಡೆಗೆ ನಿಧಾನಗತಿಯ ಸಂಚಾರ ಇದೆ. ವಿದ್ಯಾಶಿಲ್ಪ ರೈಲ್ವೆ ಅಂಡರ್ಪಾಸ್ ನಿಂದ ಏರ್ಪೋರ್ಟ್ ಕಡೆಗೂ ಸಂಚಾರ ನಿಧಾನ ಇದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೆ, ಇನ್ನೂ ಅನೇಕ ಪ್ರದೇಶಗಳಲ್ಲಿ ನಿಧಾನಗತಿಯ ಸಂಚಾರ ಇರುವುದಾಗಿ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಆ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಎಲ್ಲೆಲ್ಲಿ ಸಂಚಾರಕ್ಕೆ ಅಡಚಣೆ, ನಿಧಾನಗತಿಯ ಸಂಚಾರ?
- ಹೆಚ್ಎಸ್ಆರ್ ಲೇಔಟ್ ಡಿಪೋ ದಿಂದ14 ನೇ ಮುಖ್ಯ ರಸ್ತೆಯ ಕಡೆಗೆ.
- ಕನಕಪುರ ಮುಖ್ಯ ರಸ್ತೆ (ನೈಸ್ ರಸ್ತೆ) ಯಿಂದ ಕೋಣನಕುಂಟೆ ಕಡೆಗೆ.
- ಶಿರಸಿ ವೃತ್ತದ ಬಳಿ ಮರ ಬಿದ್ದಿರುವುದರಿಂದ ಉಮಾ ಥಿಯೇಟರ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
- ಪ್ರಸನ್ನ ಚಿತ್ರ ಮಂದಿರದಿಂದ ಬಸವ ಮಂಟಪ ಸಿಗ್ನಲ್ ಕಡೆಗೆ.
- ಸೋನಿ ವರ್ಲ್ಡ್ ಸಿಗ್ನಲ್ನಿಂದ ಮಹಾರಾಜ ಸಿಗ್ನಲ್ ಕಡೆಗೆ.
- ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಬೆಳ್ಳಂದೂರು ಕಡೆಗೆ.
- ಲೌರಿ ರೈಲ್ವೆ ಅಂಡರ್ಪಾಸ್ ನಿಂದ ಮಹದೇವಪುರ ಕಡೆಗೆ.
- ಬೇಲಿಮಠ ಜಂಕ್ಷನ್ ನಿಂದ ಬಿನ್ನಿಮಿಲ್ ಕಡೆಗೆ.
- ಆದರ್ಶ ಜಂಕ್ಷನ್ ನಿಂದ ರಾಮಯ್ಯ ಜಂಕ್ಷನ್ ಕಡೆಗೆ.
- ಸಿಲ್ಕ್ ಬೋರ್ಡ್ ನಿಂದ ಅಗರ ಸಿಗ್ನಲ್ ಕಡೆಗೆ.
- ಕೆನ್ಸಿಂಗ್ಟನ್ ನಿಂದ ಗುರುದ್ವಾರ ಕಡೆಗೆ.
- ಆಟೋ ಮಾರ್ಟ್ ನಿಂದ ಅಗರ ಕಡೆಗೆ.
- ಶಾಹಿ ಗಾರ್ಮೆಂಟ್ಸ್, ಬನ್ನೇರುಘಟ್ಟ ರಸ್ತೆ ಯಿಂದ ಹುಳಿಮಾವು ಗೇಟ್ ಕಡೆಗೆ.
- ರಾಷ್ಟ್ರೋತ್ಥಾನ ಸ್ಕೂಲ್ ಜಂಕ್ಷನ್ ನಿಂದ ಕ್ಲೌಡ್-9 ಆಸ್ಪತ್ರೆ,ಥಣಿಸಂದ್ರ ರಸ್ತೆ ಕಡೆಗೆ.
ಇದನ್ನೂ ಓದಿ: ಮಳೆಯಿಂದ ಹೊಳೆಯಂತಾದ ಬೆಂಗಳೂರಿನ ರಸ್ತೆಗಳು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:03 am, Mon, 19 May 25








