Poetry: ಅವಿತಕವಿತೆ; ಸುದೀರ್ಘ ಹಗಲಿನಲ್ಲಿ ಕಡುಕಿರಾತಕಿಯಾಗಿ ಸುಟ್ಟ ಸಿಗರೇಟಿನೊಂದಿಗೆ ಗಹಗಹಿಸುತ್ತೇನೆ ಒಬ್ಬಳೇ

Poem : ‘ಎಷ್ಟು ಕಾಲ ಮನಸಿನ ಹರೆಯ ಮಾಗುವುದಿಲ್ಲವೋ ಅಷ್ಟು ಕಾಲವೂ ಕವಿ ಕಾವ್ಯದೊಳಗೆ ಜೀವಂತ ಎಂದು ನನಗನಿಸುತ್ತದೆ. ಮನಸಿಗೆ ಮುಪ್ಪಡರದಂತೆ ಕಾಯುವುದೂ ಒಂದು ಕಲೆ. ಹಾಗೆ ಕಾವ್ಯವು ಎಂದೆಂದೂ ಬತ್ತದ ಜೀವಸೆಲೆ.’ ಮಧುರಾಣಿ ಎಚ್.ಎಸ್.

Poetry: ಅವಿತಕವಿತೆ; ಸುದೀರ್ಘ ಹಗಲಿನಲ್ಲಿ ಕಡುಕಿರಾತಕಿಯಾಗಿ ಸುಟ್ಟ ಸಿಗರೇಟಿನೊಂದಿಗೆ ಗಹಗಹಿಸುತ್ತೇನೆ ಒಬ್ಬಳೇ
Follow us
ಶ್ರೀದೇವಿ ಕಳಸದ
|

Updated on:Mar 27, 2022 | 9:57 AM

ಅವಿತಕವಿತೆ | AvithaKavithe : ನಾನು ಬಹು ಪ್ರೀತಿಯಲ್ಲಿ ಸಲಹಿದ ಒಲವಿನ ಪ್ರತಿರೂಪಗಳು ನನ್ನ ಕವನಗಳು. ಅಕ್ಕಪಕ್ಕದ ಗೌಜಿಗೆ ಕಿವಿಗೊಡದೆ ನನ್ನದೇ ಹಾಡನ್ನು ಗುನುಗುತ್ತಾ ನನ್ನದೇ ಪ್ರಪಂಚಕ್ಕೆ ಕನಸಿನ ಬಣ್ಣಗಳನ್ನು ಬಳಿಯುತ್ತಾ ಒಲಿದಂತೆ ಹಾಡಿದವಳು ನಾನು. ಕವಿತೆಗೆ ಸಮನಾಗಿಯೇ ಗದ್ಯವನ್ನು ಬರೆಯುವ ನನಗೆ ಕವಿತೆ ಮಾತ್ರ ಭಾರವಾದ ಭಾವಗಳ ಬಿಡುಗಡೆಯ ಹಾದಿ. ಇನ್ನು ಹೊರಲಾರೆ ಎನ್ನುವಷ್ಟು ಮನಸ್ಸು ಭಾರವಾದಾಗ ಕಾಗದ ತಿಳಿಸಿ ಹಗುರಾಗಿ ಮತ್ತೆ ಹಾರಲು ಸಿದ್ಧವಾಗುವ ಶಕ್ತಿಮೂಲ. ಕಾವ್ಯವು ಮಾರುಕಟ್ಟೆಯಲ್ಲಿ ಓಡುವ ಸರಕು ಅಲ್ಲವೆಂದು ವ್ಯಾವಹಾರಿಕ ಪ್ರಪಂಚ ಎಷ್ಟೇ ಹೇಳಿಕೊಂಡರು ನನಗೆ ಎಂದೆಂದೂ ಉಸಿರು ಪೂಸಿರುವುದು ಕಾವ್ಯವೇ! ನನ್ನ ಮಟ್ಟಿಗೆ ಕಾವ್ಯ ಬದುಕನ್ನು ಮತ್ತಷ್ಟು ಸಹ್ಯವಾಗಿಸುವ ಅಪ್ರತಿಮ ಸ್ನೇಹಿತ.  ‘ಯೌವನದಲ್ಲಿ ಎಲ್ಲರೂ ಕವಿಗಳೇ..’ ಎಂಬ ಮಾತೊಂದು ಪ್ರಚಲಿತದಲ್ಲಿದೆ. ಆದರೆ ಎಷ್ಟು ಕಾಲ ಮನಸಿನ ಹರೆಯ ಮಾಗುವುದಿಲ್ಲವೋ ಅಷ್ಟು ಕಾಲವೂ ಕವಿ ಕಾವ್ಯದೊಳಗೆ ಜೀವಂತ ಎಂದು ನನಗನಿಸುತ್ತದೆ. ಮನಸಿಗೆ ಮುಪ್ಪಡರದಂತೆ ಕಾಯುವುದೂ ಒಂದು ಕಲೆ. ಹಾಗೆ ಕಾವ್ಯವು ಎಂದೆಂದೂ ಬತ್ತದ ಜೀವಸೆಲೆ. ಮಧುರಾಣಿ ಎಚ್.ಎಸ್. ಕವಿ

*

ರೂಪಾಂತರ

ಏನು ಬರೆಯಲಿ ಆಷಾಢಕ್ಕೆ ಉಡುಗೊರೆಯಾಗಿ!? ಆ ಮೊದಲ ವರುಷದ ಹಸಿ ವಿರಹವು ಮರೆತೇ ಹೋಗಿ ನಿರುಮ್ಮಳವಾಗಿದ್ದೇನೆ ಮೂಗಿನ ಮೇಲೆ ಕೂತ ಚಿಟ್ಟೆಯೊಂದು ಎದೆಗೆ ಬಣ್ಣ ಅಂಟಿಸಿ ಹೋದ ಕಾಲ ಅದು, ಈಗ ಕಣ್ಣೊಳಗೆ ತೇವವಿಲ್ಲ ನೀನು ಬರದೇ ಹೋದರೆ? ಎಂಬ ಭಯವಿಲ್ಲ ಬರದಿದ್ದರೆ ಸಾಕು, ನಿದ್ದೆ ಮಾಡಬಹುದೆಂದು ಯೋಚಿಸಿ ದುಷ್ಟಳೂ, ಭ್ರಷ್ಟಳೂ ಆಗುತ್ತೇನೆ ಈ ಸುದೀರ್ಘ ಹಗಲಿನಲ್ಲಿ ಕಡು ಕಿರಾತಕಿಯಾಗಿ ಸುಟ್ಟ ಸಿಗರೇಟಿನೊಂದಿಗೆ ಗಹಗಹಿಸುತ್ತೇನೆ ಒಬ್ಬಳೇ…

*

ಭರ್ರೋ ಎಂದು ಯಮಗಾಳಿ ಬೀಸಿ ಎಲೆಗಳು ಉದುರಿದರೆ ಅದೇನೋ ಅವ್ಯಕ್ತ ಕೇಡಿ ಹಿತ! ಸಂಜೆಗಳೀಗ ಶುಭ್ರ ನಿಸ್ಸಾರ ಶುಷ್ಕ… ಆಹಾ…

ಕಾಫಿ ಕಪ್ಪಿನ ಮೇಲೆ ಮೂಡಿರಬಹುದಾದ ಲಿಪ್ ಗ್ಲಾಸಿನ ಗುರುತುಗಳನ್ನು ಒಣಗಿ ಚರ್ಮ ಕಿತ್ತು ಗಾಯವಾದ ಬಯಕೆಗಳಂತೆ ಮ್ಲಾನ… ಪ್ರೇಮಕಾವ್ಯದ ಆಯಸ್ಸು ಕಡಿಮೆ ಈಗ ಆಷಾಢಕ್ಕಾಗಿ ಪದ ಹೆಕ್ಕುವಾಗ ಖುಷಿ! ಒಣಗುವುದೂ, ಅಂಡಲೆಯುವುದೂ ಮಾಗಿದ ಸಂಕೇತವೆಂದು ಅವನು ಕೂಡಿದಾಗಲೆಲ್ಲಾ ಹೇಳುತ್ತಲೇ ಇದ್ದ. ಜಂಗಮವೇ ಶಾಶ್ವತ, ಗಾಳಿಗೆ ತೂರುವ ಎಲೆಯ ಹಾಗೆ… ನಿರ್ಭಯದಿಂದ ವಿನೀತ ಮಗುವಿನಂಥೆ ಈ ಎಳೆ ಮಾಗಿಯ ಗಾಳಿಗೆ ಮೈಯೊಡ್ಡುತ್ತೇನೆ ಜಾರುತ್ತಿರುವ ಸೌಂದರ್ಯಕ್ಕೆ ಈಗ ನಾನು ಹೆದರುವುದಿಲ್ಲ.

*

ತುಟಿಯ ಚರ್ಮದಿಂದ ಹಿಮ್ಮಡಿಯವರೆಗೂ ಒಡೆದ ರಾತ್ರಿಗಳ ಉಸಿರುಗಟ್ಟಿಸುವ ವಿದ್ರೋಹಿ ಹೃದಯ ಬರೀ ಕಳೆಯುವುದನ್ನೇ ಪದೇಪದೆ ಲೆಕ್ಕ ಮಾಡಿ ‘ಕಳೆದದ್ದೇ ನಿನ್ನದು!’ ಖಚಿತ ತೀರ್ಪಿತ್ತು, ಇದೇ ಗಾಳಿಯಲ್ಲಿ, ಹೊಸ ಸಖಿಯೊಂದಿಗೆ ತೂರಿ ಹೋದ ಅರೆನೆರೆತ ಎಲೆಯಂತಹ ನಿನ್ನನ್ನು ನನ್ನವನೆಂದೇ ಮಾರ್ಪಡಿಸುತ್ತದೆ. ನಾನು ಒಪ್ಪದೇ ನಿನ್ನಿಂದ ಬೇರ್ಪಡುವ ಧಾವಂತದಲ್ಲಿ, ಬಟ್ಟೆ ಕಳಚಿ ಗಾಳಿಗೆ ಸಿಲುಕಿ, ಚರ್ಮ ಸಿಡಿಯಲೆಂದೇ ಧಪಧಪನೆ ಓಡುತ್ತಾ… ಮುಂಬರುವ ಶ್ರಾವಣವನ್ನು ಧಿಕ್ಕರಿಸುತ್ತಾ ತಬ್ಬಿ ಮುದ್ದಾಡುವ ಹೊಸಾ ಪ್ರೇಮಿಗಳಿಗೆ ‘ಹುಚ್ಚಪ್ಪಗಳಿರಾ… ಇದು ನಶ್ವರ ಮಾಗಿಯ ತೆಕ್ಕೆಗೆ ಬನ್ನಿ’ ಎಂದು ಕೂಗುತ್ತಾ ತರಗೆಲೆಗಳ ಜೊತೆ ಶಾಪ ವಿಮೋಚಿತಳಾಗಿ ಮೊಲೆತೊಟ್ಟುಗಳ ಕತ್ತರಿಸಿ ಎಸೆದು ಇಹ ಬಂಧನಗಳ ತೊರೆದು ಒಡೆದ ಚರ್ಮ ಸುಲಿದುಕೊಂಡು ಚಿಟ್ಟೆಯಾಗಿ ಮಾರ್ಪಟ್ಟು ಹಾರುತ್ತೇನೆ.

*

ಕ್ಷೇತ್ರದಲ್ಲಿ ವೈಯುಕ್ತಿಕ ಸುಖವನರಸಿ ಅನುಭವಿಸಿ ಅಭಿವ್ಯಕ್ತಿಸುವ ಕಲೆಯಾದ ಕಾವ್ಯಕ್ಕೆ ಯಶಸ್ವಿಯಾಗಲು ಕಾವ್ಯಪ್ರಯೋಗದ ಜಾಣ್ಮೆ ಮಾತ್ರ ಸಾಲದು. ಸಾರ್ವತ್ರಿಕ ಅನುಭವದ ಗ್ಯಾರಂಟಿಯಾಗಿ ಸಾಧಾರಣೀಕರಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಒಂದು ವಿಶಿಷ್ಠವಾದ ತನ್ನತನದ ಛಾಪು. ರಾಚನಿಕ ಸೂಕ್ಷ್ಮ ಹಾಗೂ ಅನನ್ಯ ದನಿಗಳ ಅನುರಣನ ಇವೆರಡೂ ಪ್ರವೃತ್ತಿಗಳು ಸಮತೂಕವಾಗಿ ಸಮಪಾಕವಾಗಿವೆ. ಯಾವುದೇ ಥರದ ಗಾಳಿಗಂಟಲಿಲ್ಲದೆ ಹಿತಮಿತ ಮೃದುವಚನದಲ್ಲಿ ಈ ವರೆಗಿನ ಮಹಿಳಾಕಾವ್ಯಕ್ಕಿಂತಾ ಬೇರೆಯೇ ಆದ ರೀತಿಯಲ್ಲಿ ಸಹೃದಯರ ಮನದುಂಬುವ ಬಗೆಯಲ್ಲಿ ಮಧುರಾಣಿಯವರ ಕವಿತೆಗಳು. ಎಚ್.ಎಸ್ ಶಿವಪ್ರಕಾಶ್, ಕವಿ, ನಾಟಕಕಾರ

AvithaKavithe Column by Kannada Poet Madhurani HS

ಮಧುರಾಣಿ ಕೈಬರಹ

ಮಧುರಾಣಿ ಎಚ್. ಎಸ್. : ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎ. (ಇಂಗ್ಲಿಷ್) ಸ್ನಾತಕೋತ್ತರ ಪದವಿ ಪಡೆದು, ರಾಜ್ಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ. ಸುಮಾರು 18 ವರ್ಷಗಳ ಬೋಧನಾ ಅನುಭವವಿರುವ ಇವರು ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಮತ್ತು ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಮಾಡಿದ್ದಾರೆ. ಪ್ರಸ್ತುತ ಮೈಸೂರಿನ ಸರ್ಕಾರಿ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರತರಾಗಿದ್ದಾರೆ. 2016ರಲ್ಲಿ ಮೊದಲ ಕವನ ಸಂಕಲನ ‘ನವಿಲುಗರಿಯ ಬೇಲಿ’ ಪ್ರಕಟಿಸಿದರು. ಇದು ಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಾಡುವ ಯುವ ಸಾಹಿತಿಗಳ ಚೊಚ್ಚಲ ಕೃತಿಯ ಧನಸಹಾಯದ ಪುರಸ್ಕಾರ ಪಡೆದು ಪ್ರಕಟಗೊಂಡಿದೆ. ‘ನೀಲಿ ಚುಕ್ಕಿಯ ನೆರಳು’ ಎರಡನೆಯ ಕವನ ಸಂಕಲನ. ಇದು ‘ಈ ಹೊತ್ತಿಗೆ’ಯ ಮೊಟ್ಟಮೊದಲ ಕಾವ್ಯ ಪ್ರಶಸ್ತಿ (2022) ಪಡೆದುಕೊಂಡಿದೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ‘ಮಠದ ಕೇರಿಯ ಕಥೆಗಳು’ ಇವರ ಅಂಕಣ. ಮೈಸೂರಿನ ‘ಆಂದೋಲನ’ ದಿನಪತ್ರಿಕೆಯ ‘ಹಾಡುಪಾಡು’ ವಿಭಾಗದಲ್ಲಿ ಇವರ ಹಲವಾರು ಲೇಖನಗಳು ಪ್ರಕಟವಾಗಿವೆ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Poetry: ಅವಿತಕವಿತೆ; ಅಳುವ ತಾಯಿಯ ಮುಖಕ್ಕೆ ಮೈಕಿಟ್ಟು

ಅವಿತಕವಿತೆ ಅಂಕಣದ ಎಲ್ಲಾ ಕವಿತೆಗಳನ್ನು ಇಲ್ಲಿ ಓದಿ : https://tv9kannada.com/tag/avithakavithe

Published On - 9:22 am, Sun, 27 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ