Letter to CM Bommai: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಯಶಸ್ಸಿಗೆ ಹತ್ತು ಸೂತ್ರಗಳು ಇಲ್ಲಿವೆ ನೋಡಿ

|

Updated on: Aug 21, 2021 | 5:24 PM

Bommai Government: ಮುಖ್ಯಮಂತ್ರಿ ಗದ್ದುಗೆ ಹಿಡಿದ ಬಸವರಾಜ ಬೊಮ್ಮಾಯಿ, ಪುಸ್ತಕ ನೀಡಿ, ಹೂ ಗುಚ್ಛ ನೀಡಬೇಡಿ ಎಂಬ ನಿರ್ಣಯವೂ ಸೇರಿದಂತೆ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡು ಜನರಲ್ಲಿ ಭರವಸೆ ಮೂಡಿಸಿದ್ದಾರೆ. ಅವರ ಸರಕಾರ ಹೇಗೆ ಯಶಸ್ಸು ಗಳಿಸಬಹುದು ಎಂಬುದರ ಕುರಿತಾದ 10 ಸೂತ್ರಗಳು ಇಲ್ಲಿವೆ.

Letter to CM Bommai: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಯಶಸ್ಸಿಗೆ ಹತ್ತು ಸೂತ್ರಗಳು ಇಲ್ಲಿವೆ ನೋಡಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ,
ನಿರೀಕ್ಷೆಯಿಲ್ಲದ ನಿಮಗೆ ಸಿಎಂ ಗದ್ದುಗೆ ಸಿಕ್ಕಿದ್ದು ನೋಡಿ ಸಂತೋಷಪಟ್ಟ ಕೋಟ್ಯಾಂತರ ನಾಗರಿಕರಲ್ಲಿ ನಾನೂ ಒಬ್ಬ. ಆದರೂ ಅದನ್ನು ಹೇಳಲು ಧೈರ್ಯ ಸಾಕಾಗಲಿಲ್ಲ. ಅದಕ್ಕೊಂದು ಕಾರಣ ಇದೆ. ಇತ್ತೀಚಿನ ಕೆಲವು ವರ್ಷಗಳಿಂದ ಆಳಿದ ಬೇರೆ ಬೇರೆ ಪಕ್ಷಗಳ ಆಡಳಿತ ನೋಡಿ ಜನ ಸಿನಿಕರಾಗಿದ್ದಾರೆ. ಹಾಗಾಗಿ, ನೀವು ಮುಖ್ಯಮಂತ್ರಿ ಆದಾಗ ಬೇರೆ ಜನರಂತೆ ನಾನು ಹೆದರಿದ್ದೆ. ಆದರೆ ನೀವು ಮುಖ್ಯಮಂತ್ರಿ ಆಗಿ ಕಳೆದ ಒಂದು ತಿಂಗಳಿನಲ್ಲಿ ಮೂರು ಕ್ರಮ ತೆಗೆದುಕೊಂಡಿರಿ. ಅದನ್ನು ನೋಡಿ ಸ್ವಲ್ಪ ಧನಾತ್ಮಕ ಯೋಚನೆ ಬಂತು. ಆ ಲಹರಿಯಲ್ಲಿ ಈ ಪತ್ರ ಬರೆಯೋಣ ಎನ್ನಿಸಿತು. ಸರಕಾರಿ ಸಮಾರಂಭಗಳಲ್ಲಿ ಹೂಗುಚ್ಛ ನೀಡಬೇಡಿ, ಅದರ ಬದಲಿಗೆ ಕನ್ನಡ ಪುಸ್ತಕ ನೀಡಿ; ಮಂಗಳೂರಿನ ವಿಮಾನ ನಿಲ್ದಾಣದ ಹೊರಗೆ ಗೌರವ ವಂದನೆ (ಗಾರ್ಡ ಆಫ್ ಆನರ್) ನೀಡಲು ಬಂದ ಪೊಲೀಸರ ಕ್ರಮವನ್ನು ತಡೆದು ಈ ಪದ್ಧತಿ ನಿಲ್ಲಿಸಿ ಎಂದಿದ್ದು; ಮೂರನೆಯದಾಗಿ ಝೀರೋ ಟ್ರಾಫಿಕ್ ಸೌಲಭ್ಯ ಬೇಡ ಎಂಬ ನಿರ್ಣಯ ತೆಗೆದುಕೊಂಡಿದ್ದು. ಈ ಮೂರನ್ನೂ ನೋಡಿದಾಗ ಖುಷಿ ಆಯ್ತು. ನಿಮ್ಮ ತಂದೆಯ ಕಾಲದಿಂದ ರಾಜಕೀಯದ ಪಡಸಾಲೆಯಲ್ಲಿ ಕುಳಿತು, ರಾಮಕೃಷ್ಣ ಹೆಗಡೆ-ದೇವೇಗೌಡರ ಆಡಳಿತ, ರಾಜಕೀಯ ಹೊಡೆದಾಟ ನೋಡಿರುವ ನಿಮಗೆ, ಒಂದಲ್ಲಾ ಒಂದು ಬಾರಿ ಈ ರೀತಿ ವಿಚಾರ ಬಂದಿದ್ದರೂ ಬಂದಿರಬಹುದು: ಸಮಯ ಬಂದರೆ ಮತ್ತು ಅಧಿಕಾರ ಸಿಕ್ಕರೆ ಬದಲಾವಣೆ ತರುತ್ತೇನೆ ಎಂಬ ಕನಸನ್ನು ನೀವು ಕಂಡಿರಬಹುದು. ಈ ಮೇಲಿನ ಮೂರು ಕ್ರಮಗಳನ್ನು ನೋಡಿ ಈ ಪತ್ರ ಬರೆಯುತ್ತಿದ್ದೇನೆ.

ತುಂಬಾ ಸಮಯ ಕೈಯಲ್ಲಿ ಸಿಕ್ಕರೆ ಮಾತ್ರ ಬದಲಾವಣೆ ತರಬಹುದು ಎಂಬುದು ಸುಳ್ಳು. ರಾಮಕೃಷ್ಣ ಹೆಗಡೆಯವರ 1983-85ರ ಮಧ್ಯೆ ಹೇಗೆ ಆಡಳಿತ ನಡೆಸಿದ್ದರು ಎಂಬುದನ್ನು ನೀವು ಕಣ್ಣಾರೆ ನೋಡಿದ್ದೀರಿ. ಈಗ ನಿಮ್ಮ ಕೈಯಲ್ಲಿ ಇರುವುದು ಸಹ ಬರೀ 20 ತಿಂಗಳು. ಈ ಕಾಲಾವಧಿಯಲ್ಲಿ ಏನು ಬದಲಾವಣೆ ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಾರೆ. ಅದರಲ್ಲಿಯೂ ಅಧಿಕಾರಿ ವರ್ಗದಲ್ಲಿ ಹೆಚ್ಚು ಕಡಿಮೆ ಎಲ್ಲರೂ ಯಥಾಸ್ಥಿತಿವಾದಿಗಳೇ (status quoists) ತುಂಬಿಕೊಂಡಿರುವುದರಿಂದ ಬದಲಾವಣೆ ತರುವುದು ಕಷ್ಟ. ನಿಮ್ಮ ಕಾಲು ಕೈ ಬಿಡಿಸಲು ಅವರು ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ ಇತಿಹಾಸ ನೋಡಿ. ಆಗ ನಿಮ್ಮ ದ್ವಂದ್ವಕ್ಕೆ ಉತ್ತರ ಸಿಗಬಹುದು. ಹಿಂದೆ ಕೂಡ ಇಂತಹುದೇ ಸಂದಿಗ್ಧ ಸ್ಥಿತಿಯಲ್ಲಿದ್ದಾಗ, ಪ್ರಮುಖ ಕೆಲಸ ಮಾಡಿ ಎದೆಗಾರಿಕೆ ತೋರಿಸಿದ ನಾಯಕರ ಪಟ್ಟಿ ಸಿಗುತ್ತದೆ. ಕರ್ನಾಟಕದ ಹಿತದೃಷ್ಟಿಯಿಂದ ಮತ್ತು ಲಯ ತಪ್ಪಿದ ಆಡಳಿತವನ್ನು ದಾರಿಗೆ ತರಲು ನೀವೇನಾದರೂ ಈ ಕೆಳಗಿನ ಕ್ರಮ ತೆಗೆದುಕೊಂಡರೆ ರಾಜ್ಯಕ್ಕೆ ಹಿತ ಮತ್ತು ನಿಮಗೂ ಕೂಡ ಮುಂದೆ ಸಹಕಾರಿಯಾಗಬಹುದು.

1. ಯಾವುದೇ ಕಾರಣಕ್ಕೂ ನೀವು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ರಬ್ಬರ್ ಸ್ಟಾಂಪ್ ಆಗಬಾರದು. ಇದು ತುಂಬಾ ಕಷ್ಟದ ಕೆಲಸ ಎಂಬುದು ಎಲ್ಲರಿಗೂ ಗೊತ್ತು. ಇದು ನಿಮ್ಮಿಂದ ಆಗದು ಎಂದು ಇನ್ನು ಕೆಲವರು ಹೇಳುತ್ತಿರುವುದನ್ನು ಕೇಳಿದ್ದೇನೆ. ರಾಜಕೀಯದ ವಿವಿಧ ಪಟ್ಟುಗಳನ್ನು ಜನತಾ ಪಕ್ಷ/ದಳದ ಗರಡಿಯಲ್ಲಿದ್ದಾಗಲೇ ಕಲಿತಿರುವ ನಿಮಗೆ, ಯಡಿಯೂರಪ್ಪನವರ ಮನಸ್ಸು ನೋಯಿಸದೆ ಈ ಗುರಿ ತಲುಪಬಹುದು ಮತ್ತು ಇದನ್ನು ಮಾಡಿ ತೋರಿಸಿದರೆ ಜನ ನಿಮಗೆ ಶಭಾಷ್ ಎನ್ನುವುದು ಗ್ಯಾರೆಂಟಿ.

2. ನಿಮ್ಮ ಸಂಪುಟದ ಎಲ್ಲ ಸಚಿವರಿಗೆ ಕರೆದು ಒಂದು ಪ್ರಶ್ನೆ ಕೇಳಿ: ಈಗ ಭ್ರಷ್ಟಾಚಾರ ಮಾಡಿ ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವುದು ಓಕೇನಾ? ಅಥವಾ ಈಗ ಒಳ್ಳೇ ಆಡಳಿತ ಕೊಟ್ಟು ಜನರಲ್ಲಿ ಭರವಸೆ ಮೂಡಿಸಿ ಮತ್ತೆ ಅಧಿಕಾರಕ್ಕೆ ಬರೋ ಯೋಜನೆ ಒಳ್ಳೇದಾ? ಈ ಎರಡು ವಿಚಾರದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ನೀವು ಒಂದು ನಿರ್ಧಾರ ಮಾಡಿ: ಅತ್ಯಂತ ಮೇಲ್ಮಟ್ಟದಲ್ಲಿ ಭ್ರಷ್ಟಾಚಾರವಿರದಂತೆ ಒಂದು ಬಾರಿ ಕೆಲಸ ಮಾಡಿ ತೋರಿಸಿ. ಆಗ ನೋಡೋಣ, ಏನಾಗುತ್ತೆ ಅಂತ. ಅಂದರೆ ಮಂತ್ರಿವಲಯದಲ್ಲಿ ಭ್ರಷ್ಟಾಚಾರ ಸಂಪೂರ್ಣ ನಿಲ್ಲಿಸುವ ಒಂದು ಪ್ರಯೋಗ ಒಮ್ಮೆ ಮಾಡಿ ನೋಡಿ. ಏನಾಗುತ್ತೆ ಗೊತ್ತಾ? ಕೆಲಸ ಮಾಡದೇ ಇರಲು ಅಥವಾ ತಮ್ಮ ಕೆಳಗಿನ ಅಧಿಕಾರಿಗಳಿಂದ ಮತ್ತು ಜನರಿಂದ ಲಂಚ ತೆಗೆದುಕೊಳ್ಳುವ ಕ್ಷುಲ್ಲಕ ಕಾರಣ ಸಿಗಲ್ಲ. ಹಾಗಂತ ಭ್ರಷ್ಟಾಚಾರ ನಿಲ್ಲುತ್ತೆ ಅಂತಲ್ಲ. ಆದರೆ, ಸ್ವಲ್ಪ ಕಡಿಮೆ ಆಗಿಯೇ ಆಗುತ್ತೆ. ಇದರ ಪರಿಣಾಮ ದೀರ್ಘಕಾಲೀನವಾಗಿರುತ್ತೆ ಮತ್ತು ಖಂಡಿತವಾಗಿ ನಿಮಗೆ ರಾಜಕೀಯ ಲಾಭ ತಂದುಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ.

ನಿಮಗೊಂದು ಒಳಗುಟ್ಟು ಗೊತ್ತಾ? ನಮ್ಮ ರಾಜ್ಯದಲ್ಲಿ ಈ ವರ್ಗಾವಣೆ ದಂಧೆ ಎಷ್ಟು ಆಳಕ್ಕೆ ಇಳಿದಿದೆ ಮತ್ತು ಅದರ ಪರಿಣಾಮ ಏನಾಗುತ್ತಿದೆ ಎಂಬುದರ ಬಗ್ಗೆ ಒಂದು ಸಣ್ಣ ಮಾಹಿತಿ ನೀಡ್ತೀನಿ. ನಿಮಗೆ ಇದು ಗೊತ್ತಿಲ್ಲ ಅಂತ ನಾನಂದುಕೊಳ್ಳುವುದಿಲ್ಲ. ಲಕ್ಷ ಲಕ್ಷ ಕೊಟ್ಟು ವರ್ಗಾವಣೆ ಪಡೆವ ಅಧಿಕಾರಿಗಳು ಮೊದಲಿನಂತೆ ಹಣದ ಥೈಲಿ ಇಟ್ಟುಕೊಳ್ಳುವುದನ್ನು ಬಿಟ್ಟಿದ್ದಾರೆ. ಈಗ ಹೊಸದೊಂದು ದಾರಿ (modus operandi) ಹುಡುಕಿದ್ದಾರೆ: ಅವರು ಸೀದಾ ಗಾಂಧಿನಗರ ಅಥವಾ ಚಿಕ್ಕಪೇಟೆಗೆ ಹೋಗುತ್ತಾರೆ. ಅಲ್ಲಿ ವರ್ಗಾವಣೆ ಮಾಡಿಸಲೆಂದೇ ಹುಟ್ಟಿಕೊಂಡಿರುವ ಹೊಸ ಲೇವಾದೇವಿ ವ್ಯವಹಾರದವರಿದ್ದಾರೆ. ಅವರ ಬಳಿ ವ್ಯವಹಾರ ಕುದುರಿಸುತ್ತಾರೆ. ಅಲ್ಲಿಂದ ತಂದ ಹಣವನ್ನು ಎಲ್ಲಿಗೆ ಮುಟ್ಟಿಸಬೇಕೋ ಅಲ್ಲಿ ತಲುಪಿಸಿ, ಹೊಸ ಜಾಗಕ್ಕೆ ಹೋಗಿ ಸೇರಿಕೊಳ್ತಾರೆ. ಆಮೇಲೆ ಒಂದು ವರ್ಷದಲ್ಲಿ ತಾವು ಮಾತು ಕೊಟ್ಟಂತೆ, ಆ ವರ್ಗಾವರ್ಗಿ ಲೇವಾದೇವಿದಾರರಿಗೆ ಕಂತು ಕಂತಲ್ಲಿ ಹಣ ತಲುಪಿಸಿ ಮೇಲಿಂದ ತಿಂಗಳಿಗೆ ಪ್ರತಿಶತ 2 ರಂತೆ ಬಡ್ಡಿ ಹಣ ನೀಡಿ ಖುಷಿಯಾಗಿ ಭಾರತದ ಸಂವಿಧಾನ ಎತ್ತಿ ಹಿಡಿಯುವ ಕೆಲಸ ಮುಂದುವರಿಸಿಕೊಂಡು ಹೋಗುತ್ತಾರೆ. ಇದನ್ನ ಕೇಳಿದಾಗ ನಿಮಗೆ ಏನನ್ನಿಸಿತೋ ಗೊತ್ತಿಲ್ಲ. ನನಗೆ ಶಾಕ್ ಆಯಿತು.

3. ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಸರಕಾರ ರಚಿಸಿರುವ ಭೃಷ್ಠಾಚಾರ ವಿರೋಧ ದಳದ ಬಳಿ ಸುಮಾರು 500 ಕ್ಕೂ ಹೆಚ್ಚಿನ ಫೈಲ್ ಕುಳಿತಿವೆ: ಬೇರೆ ಬೇರೆ ಇಲಾಖೆಯಲ್ಲಿರುವ ಅಧಿಕಾರಿಗಳ ವಿರುದ್ಧ ತನಿಖೆಗೆ ಮಾಡಿ ಎಂದು ಕೋರಿರುವ ಕಡತಗಳು. ಇನ್ನು ಕೆಲವು, ತನಿಖೆ ಮುಗಿದು ಅಭಿಯೋಜನೆಯ ಅನುಮತಿಗಾಗಿ (prosecution sanction) ಕಾದು ಕುಳಿತಿವೆ. ತಿಂಗಳುಗಳೇ ಕಳೆದಿದ್ದರೂ ಈ ಕಡತಗಳಿಗೆ ಬಿಡುಗಡೆ ಇಲ್ಲ? ದಯವಿಟ್ಟು ಒಂದು ಬಾರಿ ಗಟ್ಟಿ ಮನಸು ಮಾಡಿ ಅನುಮತಿ ನೀಡಿ. ಆಗ ನೋಡಿ ಏನಾಗುತ್ತೆ ಅಂತ? ಅಧಿಕಾರಿ ವರ್ಗ ಮತ್ತು ಅವರನ್ನು ಬೆಂಬಲಿಸುವ ಶಾಸಕರು, ಸ್ವಾಮೀಜಿಗಳು ಸಿಟ್ಟಾದರೂ ಆಗಬಹುದು. ಆಗಲಿ ಬಿಡಿ. ಆದರೆ ಜನ ನಿಮ್ಮನ್ನ ಹೇಗೆ ಸ್ವೀಕರಿಸುತ್ತಾರೆ ಅಂತ ನೋಡಿ.

4. ಮೂರನೇ ಅಲೆ ಬರುತ್ತೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಅದಕ್ಕೆ ಈ ಹಿಂದೆ ಮಾಡಿದಂತೆ ಅರ್ಧ ಮನಸ್ಸಿನ ಮತ್ತು ಮೂಗಿನ ನೇರಕ್ಕೆ ಮಾಡುವ ಅಧಿಕಾರಿಗಳ ತಯಾರಿ ಬೇಡ. ಪಾರದರ್ಶಕ ಆಡಳಿತ ಕಷ್ಟ ಎಂದೆನಿಸಿದರೂ, ಈ ಹಿಂದಿನ ಬಾರಿ ಮಾಡಿದ ತಪ್ಪು ಆಗದಿರಲು ಈಗಲೇ ತಯಾರಿ ಮಾಡಿಕೊಳ್ಳುವುದು ಒಳಿತು. ಎಲ್ಲ ಕೋನಗಳಿಂದ ವಿಚಾರಿಸಿ ಒಂದು ಯೋಜನೆ ಹಾಕಿ. ಕೊವಿಡ್ ಲಸಿಕೆಯ ಎರಡನೇ ಡೋಸ್ ಹಾಕಿಸಲು ಒಂದು ಕಾರ್ಯಸೂಚಿ ಇಲ್ಲದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ದಯವಿಟ್ಟು ಬೇಗ ಇದನ್ನು ಮಾಡಿ ಪುಣ್ಯ ಕಟ್ಟಿಕೊಳ್ಳಿ.

5. ಕೊವಿಡ್ ಮೊದಲ ಅಲೆ ಮತ್ತು ಎರಡನೇ ಅಲೆ ಬಂದಾಗ ಎಲ್ಲಾ ರಾಜ್ಯಗಳಂತೆ ಕರ್ನಾಟಕ ಕೂಡ ತುಂಬಾ ಕಷ್ಟಪಟ್ಟಿತ್ತು. ನಮ್ಮ ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟು ಹೋಗಿದೆ. ಈಗ ನಿಮ್ಮ ಮುಂದಿರುವ ಸವಾಲು:, ಇಂತಹ ಸ್ಥಿತಿಯಲ್ಲಿ ಹಣಕಾಸು ಸ್ಥಿತಿಯನ್ನು ಸುಸ್ಥಿತಿಗೆ ತರುವುದು. ಇಲ್ಲಿ ಇನ್ನೊಂದು ಅಂಶವನ್ನು ಹೇಳಲೇಬೇಕು. ಅಧಿಕಾರಿಗಳು ಯೋಜನಾವಲಯ ಬಿಟ್ಟು ಹೊರಗೆ ಮಾಡುವ ಖರ್ಚಿನ ಬಗ್ಗೆ ಸ್ವಲ್ಪ ಗಮನ ಹರಿಸಬೇಕಲ್ಲ. ಒಂದಡೆ, ಹಣ ಉಡಾಯಿಸುತ್ತಿರುವ ಅಧಿಕಾರಿಶಾಹಿ. ಇನ್ನೊಂದೆಡೆ, ತಮ್ಮ ಕ್ಷೇತ್ರಗಳಿಗೆ ತಾವು ಹೇಳಿದಂತೆ ಹಣ ಹರಿಸಬೇಕು ಎಂದು ಒತ್ತಾಯಿಸುವ ಶಾಸಕರು. ದಯವಿಟ್ಟು non-plan expenditure ಅಂದರೆ ಯೋಜನಾವಲಯದ ಹೊರಗೆ ಖರ್ಚು ಮಾಡುವ ಈ ಸಂಪ್ರದಾಯಕ್ಕೆ ಈ ಬಾರಿ ಮತ್ತು ಮುಂದಿನ ವರ್ಷ ದಯವಿಟ್ಟು ಬ್ರೇಕ್ ಹಾಕಿ. ಆಗ ಯೋಜನಾ ವಲಯಕ್ಕೆ ಹೆಚ್ಚು ಹಣ ನೀಡಬಹುದು. ಅದು ನಿಮ್ಮ ಚುನಾವಣಾ ನೀಲನಕ್ಷೆಗೆ ಹತ್ತಿರವೂ ಆಗುತ್ತದೆ.

6. ಇನ್ನೊಂದು ಅತ್ಯಂತ ಮುಖ್ಯ ವಿಚಾರ. ಶಾಸನ ಮಾಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ, ಆ ಶಾಸನಗಳಿಗಾಗಿ ನಿಯಮ ರೂಪಿಸುವುದು. ನೀವು ವಿಧೇಯಕವನ್ನು ಒಂದೇ ನಿಮಿಷದಲ್ಲಿ ಪಾಸು ಮಾಡಿ ವಿಧಾನಸಭೆಯಲ್ಲಿ. ಅದು ನಿಮ್ಮ ಮರ್ಜಿ. ವಿಧೇಯಕವನ್ನು ಒಂದು ನಿಮಿಷದಲ್ಲಿ ಪಾಸು ಮಾಡಿ ಅಥವಾ ಒಂದು ವಾರ ಚರ್ಚೆ ಮಾಡಿ ಪಾಸು ಮಾಡಿ. ಆ ಶಾಸನ ಬರುವಾಗ ಅದಕ್ಕನುಗುಣವಾಗಿ ತರುವ ನಿಯಮಗಳು ಜನರಿಗೆ ಹೇಗೆ ಬಾಧಿಸುತ್ತವೆ ಎಂಬುದರ ಆಧಾರದ ಮೇಲೆ ಆ ಶಾಸನದ ಯಶಸ್ಸು ನಿಂತಿದೆ. ಈಗೇನಾಗುತ್ತಿದೆ? ಈಗ ಈ ಕೆಲಸವನ್ನು ಮುಗುಮ್ಮಾಗಿ ನಾಲ್ಕು ಜನ ಕೇಸ್ ವರ್ಕರ್​ಗಳು ಮಾಡಿ ಕೊನೆಗೆ ಅದನ್ನು ಹಿರಿಯ ಐಎಎಸ್ ಅಧಿಕಾರಿಗಳು ನೋಡಿ, ಮುದ್ರೆ ಒತ್ತಿ ಜಾರಿಗೊಳಿಸುತ್ತಿದ್ದಾರೆ. ತುಂಬಾ ಸಲ, ಆ ನಿಯಮಗಳು ಮತ್ತು ನೀವು ವಿಧಾನಸಭೆಯಲ್ಲಿ ಪಾಸು ಮಾಡುವ ಶಾಸನಗಳಿಗೆ ಸಂಬಂಧವೇ ಇರುವುದಿಲ್ಲ. ಬಹಳ ಸಲ, ಅತ್ಯಂತ ಜಟಿಲ ನಿಯಮ ರೂಪಿಸಿ, ಕಾನೂನಿನ ಮೂಲ ಉದ್ದೇಶವನ್ನು ಸೋಲಿಸುವ ಹುನ್ನಾರವೋ, ಅವಿಧೇಯತನವೋ, ಎಲ್ಲವೂ ನಡೆಯುತ್ತಿದೆ. ಯಾಕೆ, ಪ್ರತಿ ಶಾಸನದ ನಿಯಮಗಳನ್ನು ವೆಬ್ಸೈಟ್​ನಲ್ಲಿ ಹಾಕಿ, ಜನರ ಪ್ರತಿಕ್ರಿಯೆ ತೆಗೆದುಕೊಂಡು ಅದನ್ನು ತಿದ್ದಿ ತೀಡಿ ಜಾರಿಗೆ ತರುತ್ತಿಲ್ಲ? ಈ ರೀತಿ ಮಾಡಿದರೆ ಆ ಕಾನೂನು ಮತ್ತು ಅದರ ನಿಯಮಗಳು ಜನರಿಗೆ ಅನುಕೂಲವಾಗಿ ಇರಬಹುದು ಎಂಬ ನಂಬಿಕೆ ನನ್ನದು. ನಿಮ್ಮ ಗಮನಕ್ಕೆ ಈ ವಿಚಾರ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಇದೇ ವಿಚಾರವನ್ನು ಮೊನ್ನೆ ಸುಪ್ರೀಂಕೋರ್ಟನ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಕೂಡ ಹೇಳಿದ್ದು. ದಯವಿಟ್ಟು ನಿಮ್ಮ ಕಾಲದಲ್ಲಿ ಇದನ್ನು ಮಾಡಿ. ಅತ್ಯಂತ ಸರಳ ಕಾನೂನು ಹೆಚ್ಚು ಪರಿಣಾಮಕಾರಿ.

7. ಇದು ಕೂಡ ಅಷ್ಟೆ, ನಿಮ್ಮ ಗಮನಕ್ಕೆ ಬಾರದ ವಿಚಾರ ಅಂತ ನಾನಂದುಕೊಂಡಿದ್ದೇನೆ. ಈ ಬಾರಿ ಅತಿ ಹೆಚ್ಚು ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರತಿ ವರ್ಷಕ್ಕಿಂತ ತುಂಬಾ ಜಾಸ್ತಿ ವಿದ್ಯಾರ್ಥಿಗಳು ಪಾಸಾಗಿರುವುದರಿಂದ, ಪಾಲಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಅದಕ್ಕೇ ಏನೋ ಸ್ವಲ್ಪ ಸ್ಥಿತಿವಂತ ಪಾಲಕರು ನೀಟ್ ಮತ್ತು ಸಿಇಟಿ ಪರೀಕ್ಷೆ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸೀದಾ ಹೋಗಿ ಮ್ಯಾನೆಜ್ಮೆಂಟ್ ಕೋಟಾದಡಿ ಸೀಟು ತೆಗೆದುಕೊಳ್ಳುತ್ತಿದ್ದಾರೆ. ಈ ಬಾರಿ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಮುಂತಾದ ವಿಷಯಗಳ ಸೀಟುಗಳ ದರ ರೂ 40 ಲಕ್ಷಕ್ಕೆ ಹೋಗಿವೆ. ಇನ್ನು ಮೆಡಿಕಲ್ ಸೀಟ್ ಬಗ್ಗೆ ಕೇಳಲೇಬೇಡಿ. ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ರೂ 1000 ಕೋಟಿ ಇಟ್ಟು ತುಂಬಾ ಉದಾತ್ತತೆ ತೋರಿದ್ದೀರಿ. ಆದರೆ, ಮಧ್ಯಮ ವರ್ಗದ ಸಾವಿರಾರು ಮಕ್ಕಳಿಗೆ ತಾವು ಕನಸು ಕಂಡ ಕೋರ್ಸ್​ಗಳನ್ನು ಓದಲಾಗದೇ ಕನಸನ್ನೇ ಚಿವುಟಿ ಹಾಕುವ ಸ್ಥಿತಿಗೆ ನಾವು ತಲುಪಿದ್ದೇವೆ. ಇದು ಯಾರ ಮನಸ್ಸನ್ನು ಕಲಕುವುದಿಲ್ಲ ನೋಡಿ? ನೀವು ಕೇಳಬಹುದು-ಯಾಕ್ರೀ, ಎಲ್ಲರೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಜ್ಞಾನ ಓದಬೇಕು? ಬೇರೆ ಕೋರ್ಸ್ ಓದಲಿ. ನಿಜ. ಓದುವುದು ದೊಡ್ಡ ವಿಚಾರ ಅಲ್ಲ, ಅಂಕಗಳನ್ನು ತೆಗೆದುಕೊಂಡು ಪರೀಕ್ಷೆಯನ್ನು ಪಾಸು ಮಾಡಿಬಿಡಬಹುದು. ಆದರೆ, ಹೊಸ ಹೊಸ ಕೋರ್ಸ ಅಥವಾ ಕಲಾ ವಿಭಾಗದಲ್ಲಿ ಓದಿದವರಿಗೆ ಎಲ್ಲಿದೆ ಕೆಲಸ? ಈ ಹಿಂದೆ ಇದ್ದ ಸಿದ್ದರಾಮಯ್ಯ ಸರಕಾರ ಬಹಳ ದೊಡ್ಡ ಸುದ್ದಿ ಮಾಡಿ ಬೆಂಗಳೂರಿನಲ್ಲಿ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್​ ಮಾದರಿಯಲ್ಲಿ ಒಂದು ಸಂಸ್ಥೆ ಪ್ರಾರಂಭಿಸಿತು. ಆ ಸಂಸ್ಥೆ ಬಗ್ಗೆ ಕೇಳಿದ್ದೀರಾ? ಮಾಜಿ ಮತ್ತು ಹಾಲಿ ಐಎಎಸ್ ಅಧಿಕಾರಿಗಳ ಕಾಲೊರೆಸುವಿನಂತೆ ಆಗಿರುವ ಈ ಸಂಸ್ಥೆಗೆ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್​ನ ಟ್ಯಾಗ್ ಬೇಡ, ದೆಹಲಿಯಲ್ಲಿರುವ ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್​ನಷ್ಟೂ ಶಕ್ತಿ ಮತ್ತು ಪ್ರಭಾವ ಇಲ್ಲ. ಡಾ ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ಎಂಬ ವಿದ್ಯಾ ಸಂಸ್ಥೆ, ರಾಜಕಾರಿಣಿಗಳು ಮತ್ತು ಅಧಿಕಾರಿಗಳು ಆಡಿದ ಆಟಕ್ಕೆ ಬಲಿಯಾಯ್ತಾ? ಈಗ ಇಲ್ಲಿ ಓದಿದ ಮಕ್ಕಳಿಗೆ ಎಲ್ಲಿದೆ ಭವಿಷ್ಯ. ಈಗ ಹೇಳಿ ಜನ ಯಾಕೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಓದಲು ಹೋಗ್ತಾರೆ ಅಂತ. ಎಲ್ಲ ಮಕ್ಕಳಿಗೂ ಅದನ್ನು ಓದಬೇಕೆಂಬ ಇಷ್ಟವೂ ಇರಲ್ಲ. ಅಪ್ಪ ಅಮ್ಮನ ಕಾಟಾಚಾರಕ್ಕೆ ಸೇರುತ್ತಾರೆ. ಪಾಲಕರದ್ದು ತಪ್ಪಿಲ್ಲ ಬಿಡಿ. ಇಂಥಹ ಕೋರ್ಸ್ ಮಾಡಿದವರಿಗೆ ಎಲ್ಲಾದರೂ ಒಂದು ಸಾಮಾನ್ಯ ನೌಕರಿ ಸಿಗಬಹುದು. ಅದು ನಿಜ ಕೂಡ. ಈಗ ವಿಚಾರ ಮಾಡಿ ಈ ವ್ಯವಸ್ಥೆ ಸುಧಾರಿಸಲು ಏನಾದರೂ ಮಾಡಬೇಕು ಅಂತ ಅನ್ನಿಸುತ್ತಿದೆಯೇ ಅಂತ.

8. ನೀವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಘೋಷಿಸಿದ ಹೊಸ ಯೋಜನೆಗಳ ಜಾರಿ ಆಗಬೇಕು ಎಂದರೆ, ಅವಕ್ಕೆ ಜಾತಿ ಮತ್ತು ಪಕ್ಷದ ಆಧಾರದ ಮೇಲೆ ಫಲಾನುಭವಿ ಆಯ್ಕೆ ಬೇಡ. ಮತ್ತು ಈ ಮೇಲೆ ಹೇಳಿದಂತೆ ಫಲಾನುಭವಿಗಳ ಆಯ್ಕೆಗೆ ಅತೀ ಕ್ಲಿಷ್ಟ ನಿಯಮ ತಂದರೆ ನಿಮಗೆ ಗಂಡಾಂತರ ಕಾದಿಟ್ಟ ಬುತ್ತಿ. ಯಾವುದಾದರೂ ಒಂದು ಊರಿಗೆ ಒಂದು ಯೋಜನೆ ಕೊಟ್ಟಿಲ್ಲ ಎಂದರೆ ಜನ ನಿಮ್ಮ ಮೇಲೆ ಬೇಸರ ಮಾಡಿಕೊಳ್ಳಬಹುದು. ಆದರೆ, ಒಂದು ಯೋಜನೆ ಕೊಡುವ ಸಂದರ್ಭದಲ್ಲಿ, ಊರಿನ ಒಂದು ಮನೆಗೆ ಕೊಟ್ಟು ಪಕ್ಕದ ಮನೆಯಲ್ಲಿರುವ ಅರ್ಹ ಫಲಾನುಭವಿಗೆ ಬಿಟ್ಟರೆ ನಿಮಗೆ ಆ ಊರಿನಲ್ಲಿರುವ ಅರ್ಧಕ್ಕಿಂತ ಹೆಚ್ಚಿನ ಮತ ಕೈ ತಪ್ಪುವ ಸಾಧ್ಯತೆ ಜಾಸ್ತಿ ಇದೆ.

9. ಕೇಂದ್ರದ ಹಲವಾರು ಇಲಾಖೆಗಳಿಂದ ಸಾವಿರಾರು ಕೋಟಿ ಹಣ ಬರುತ್ತಲೇ ಇರುತ್ತದೆ. ನಮ್ಮ ಸಂಸದರು ಏನು ಮಾಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ, ನೀವು ಮುಂದಿನ 20 ತಿಂಗಳು ಜಾಸ್ತಿ ಹಣ ಬರುವಂತೆ ಮಾಡಿ, ಅದನ್ನು ನಿಮ್ಮ ಪಕ್ಷ ಗೆಲ್ಲುವ ಕ್ಷೇತ್ರ ಮತ್ತು ಸೋಲಬಹುದಾದ ಕ್ಷೇತ್ರಗಳಿಗೆ ವಿನಿಯೋಗಿಸಿ. ಆಗ ನಿಮಗೆ anti-incumbancy ಬರುವ ಸಾಧ್ಯತೆ ಕಡಿಮೆ ಆಗಬಹುದು. ಆಗ ಮುಂದಿನ ಚುನಾವಣೆಗೆ ದಾರಿ ಸುಗಮ ಆಗಬಹುದು.

10. ಕೊನೆಯಲ್ಲಿ ಇನ್ನೊಂದು ಮಾತು: ಮೈಕ್ ಕಂಡಲ್ಲಿ ಮಾತಾಡುವ ಮಂತ್ರಿ ಮತ್ತು ಶಾಸಕರನ್ನು ನೀವೇನಾದರೂ ತಡೆದರೆ, ನಿಮ್ಮ ಇಮೇಜ್ ತುಂಬಾ ಮೇಲೆ ಹೋಗಬಹುದು.

ಈ ಹತ್ತು ಅಂಶ ಸಾಕು ಅಂತ ಅಂದುಕೊಂಡು ಈ ಪತ್ರ ಮುಗಿಸುತ್ತೇನೆ. ಇದನ್ನು ಓದಿದ ನಂತರ ನಿಮಗೆ ಒಂದು ವಿಚಾರ ಬರಬಹುದು. ಇವೆಲ್ಲಾ ತುಂಬಾ ಆದರ್ಶವಾದದ ಮಾತುಗಳು. ಇವು ಯಾವುವು 2023 ರ ಚುನಾವಣೆ ಗೆಲ್ಲಲು ಸಹಾಯಕವಾಗಲ್ಲ ಅಂತ ಹೇಳಿಈ ಪತ್ರವನ್ನು ಕಸದ ಬುಟ್ಟಿಗೆ ಎಸೆಯಿರಿ ಅಂತ ನಿಮ್ಮ ಸುತ್ತ ಮುತ್ತ ಇರುವವರು ಹೇಳುತ್ತಾರೆ ಎಂಬುದೂ ಗೊತ್ತು. ಇವು ಚುನಾವಣೆ ಗೆಲ್ಲುವ ಹತ್ತು ಸೂತ್ರಗಳು ಎಂದು ನಾನು ಎಲ್ಲೂ ಹೇಳುತ್ತಿಲ್ಲ. ಆದರೆ, ಜನರಿಗೆ ಭ್ರಮನಿರಸನ ಉಂಟಾಗಿ ಅದು ನಿಮ್ಮ ಸರಕಾರದ ಮೇಲೆ anti-incumbency ಆಗದಂತೆ ಮಾಡುವ ದಾರಿ ತಲುಪಲು ಇರುವ 10 ಮೆಟ್ಟಿಲು ಎಂಬುದನ್ನು ಆತ್ಮವಿಶ್ವಾಸದಿಂದ ಹೇಳುತ್ತ ಈ ಪತ್ರ ಮುಗಿಸುತ್ತೇನೆ.

ನಿಮ್ಮ ಕಾಗದದ ನಿರೀಕ್ಷೆಯಲ್ಲಿರುವ,
ಕರ್ನಾಟಕದ ನಾಗರಿಕ

(Ten point letter on how BJP Basavaraj Bommai government can give good government in Karnataka)

ಇದನ್ನೂ ಓದಿ:

Basavaraj Bommai: ಕೊವಿಡ್ ನಿಯಂತ್ರಿಸಲು ಹಗಲಿರುಳು ಶ್ರಮಿಸುವೆ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

CM Bommai Press Meet: ಜಿಲ್ಲಾವಾರು ಕೊವಿಡ್ ತಡೆ ಯೋಜನೆ, ಗಡಿ ಜಿಲ್ಲೆಗಳ ಹಳ್ಳಿಗಳಲ್ಲಿ ಟೆಸ್ಟಿಂಗ್, 6 ಜಿನೋಮ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ: ಸಿಎಂ ಬೊಮ್ಮಾಯಿ

Published On - 4:35 pm, Sat, 21 August 21