ಯಾವುದು ಇದು ಹೊಸ ಚಾಣಕ್ಯ ವಿಶ್ವವಿದ್ಯಾನಿಲಯ? ವಿರೋಧ ಪಕ್ಷ ಎತ್ತಿದ ಪ್ರಶ್ನೆಗಳಲ್ಲಿ ಎಷ್ಟು ಹುರುಳಿವೆ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 23, 2021 | 10:17 AM

Chanakya University: ವಿಧಾನಸಭೆ ಅಂಗೀಕರಿಸಿರುವ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದರೆ ಕರ್ನಾಟಕದಲ್ಲಿ ಮತ್ತೊಂದು ಖಾಸಗಿ ವಿಶ್ವವಿದ್ಯಾಲಯ ಹುಟ್ಟುವುದು ಖಂಡಿತ. ಈ ವಿಚಾರ ಒಂದು ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಕುರಿತಾದ ವಿಶ್ಲೇಷಣೆ ಇಲ್ಲಿದೆ ನೋಡಿ.

ಯಾವುದು ಇದು ಹೊಸ ಚಾಣಕ್ಯ ವಿಶ್ವವಿದ್ಯಾನಿಲಯ? ವಿರೋಧ ಪಕ್ಷ ಎತ್ತಿದ ಪ್ರಶ್ನೆಗಳಲ್ಲಿ ಎಷ್ಟು ಹುರುಳಿವೆ?
ಪ್ರಾತಿನಿಧಿಕ ಚಿತ್ರ
Follow us on

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ಇಂದು ಸರಕಾರದ ವಿರುದ್ಧ ಬಾಂಬೊಂದನ್ನು ಸಿಡಿಸಿದ್ದಾರೆ. ಸೆ.21ರಂದು ವಿಧಾನಸಭೆ ಅಂಗೀಕರಿಸಿದ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕದ ಬಗ್ಗೆ ಮಾತನಾಡಿದ ಸಿದ್ಧರಾಮಯ್ಯ, ಈ ವಿಶ್ವವಿದ್ಯಾಲಯ ಆರ್​ಎಸ್​ಎಸ್​ನದು. ಆರ್​ಎಸ್​ಎಸ್​ಗೆ ಭೂಮಿಯನ್ನು ನೇರವಾಗಿ ಭೂಮಿಯನ್ನು ಕೊಡಲು ಆಗಲ್ಲ ಎಂಬ ಕಾರಣಕ್ಕಾಗಿ ‘ಸೆಸ್’​ ಎಂಬ ಸಂಸ್ಥೆಯ ಮೂಲಕ ಕೊಟ್ಟಿದ್ದಾರೆ. ಒಂದು ವಿಶ್ವವಿದ್ಯಾಲಯಕ್ಕೆ 106 ಎಕರೆ ಏಕೆ ಬೇಕು? ಎಂಬೆಲ್ಲ ಪ್ರಶ್ನೆ ಎತ್ತಿ ಇದೊಂದು ದೊಡ್ಡ ಗೋಲ್​ಮಾಲ್​ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ನೋಡಿದರೆ ಸಿದ್ಧರಾಮಯ್ಯ ಹೇಳಿರುವುದರಲ್ಲಿ ಸತ್ಯಾಂಶ ಇಲ್ಲ ಎಂದು  ಹೇಳಲು ಸಾಧ್ಯವಿಲ್ಲ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಜಮೀನನ್ನು ಅತ್ಯಂತ ಕಡಿಮೆ ಬೆಲೆಗೆ ಯಾವುದೋ ಒಂದು ಸಂಸ್ಥೆಗೆ ಕೊಡುವುದು ಸರಿಯೇ?

ಕಾಂಗ್ರೆಸ್​ ಎತ್ತಿರುವ ಮೂರು ಪ್ರಶ್ನೆಗಳು
1) ಕರ್ನಾಟಕ ಕೈಗಾರಿಕಾ ವಲಯ ಅಭಿವೃದ್ಧಿ ಮಂಡಳಿಯು, ಏರೋಸ್ಪೇಸ್​ ಕೈಗಾರಿಕೆಗಾಗಿ ರೈತರಿಂದ ಖರೀದಿ ಮಾಡಿದ ಜಮೀನನ್ನು ಬೇರೆ ಉದ್ದೇಶಕ್ಕೆ ಕೊಡುವುದು ಸರಿಯೇ?

2) ಖಾಸಗಿ ವಿಶ್ವವಿದ್ಯಾಲಯ ನಡೆಸಬೇಕಾದರೆ ಕೆಲವು ಅರ್ಹತೆ ಇರಬೇಕು. ಆದರೆ ಈ ‘ಸೆಸ್​’ ಸಂಸ್ಥೆಗೆ ವಿದ್ಯಾ ಸಂಸ್ಥೆ ನಡೆಸಿದ ಅನುಭವ ಇಲ್ಲ. ಹಾಗಾಗಿ ಈ ಸಂಸ್ಥೆಗೆ ಖಾಸಗಿ ವಿಶ್ವವಿದ್ಯಾಲಯ ಹುಟ್ಟು ಹಾಕಲು ಜಮೀನು ನೀಡಿದ್ದು ಏಕೆ?

3) ಈ ಸಂಸ್ಥೆ ವಿಶ್ವವಿದ್ಯಾಲಯನವನ್ನು ಇಲ್ಲಿಯೇ ಯಾಕೆ ಹುಟ್ಟು ಹಾಕಬೇಕು? ಹಗರಿಬೊಮ್ಮನಹಳ್ಳಿಯೋ ಮತ್ತೆ ಮಾಗಡಿಯಲ್ಲಿಯೋ ಮಾಡಲಿ. ಇಲ್ಲಿ ಯಾಕೆ?

ಈ ಮೂರು ಪ್ರಶ್ನೆಗಳು ಅತ್ಯಂತ ಯೋಗ್ಯ ಪ್ರಶ್ನೆಗಳು. ಕಾನೂನಿನ ಅಡಿ ಉದ್ಭವಿಸುವ ಪ್ರಶ್ನೆಗಳು ಒಂದೆಡೆಯಾದರೆ ನೈತಿಕತೆ ಪ್ರಶ್ನೆ ಕೂಡ ಇಲ್ಲಿ ಅಡಗಿದೆ ಎಂಬುದನ್ನು ಮರೆಯೋ ಹಾಗಿಲ್ಲ. ಈ ಪ್ರಶ್ನೆಗೆ ಸರಕಾರ ಮತ್ತು ‘ಸೆಸ್​’ ರಾಜ್ಯದ ಜನರಿಗೆ ಉತ್ತರಿಸಲೇಬೇಕಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿರುವ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಿತಿಗತಿಗಳ ಬಗ್ಗೆ ಒಮ್ಮೆ ಗಮನ ಹರಿಸುವುದು ಸೂಕ್ತ ಅಲ್ಲವೇ?

ಈಗಿರುವ ಖಾಸಗೀ ವಿಶ್ವವಿದ್ಯಾಲಯಗಳ ಸ್ಥಿತಿಗತಿ
ಕೇಂದ್ರ ಸರಕಾರದ ಅಧೀನದ ಮಾನವ ಸಂಪನ್ಮೂಲ ಇಲಾಖೆಯ ಕೆಳಗೆ ಸ್ವಾಯತ್ತವಾಗಿ ಕೆಲಸ ಮಾಡುತ್ತಿರುವ ಐಐಎಸ್​ಸಿ (Indian Institute of Science), ಐಐಎಮ್​ (Indian Institute of Management-Bengaluru), ಐಐಐಟಿ (Indian Institute of Information Technology) ಮತ್ತು ಸರ್ವೋಚ್ಛ ನ್ಯಾಯಾಲಯದ ಅನೇಕ ನ್ಯಾಯಾಧೀಶರನ್ನು ತನ್ನ ಆಡಳಿತ ಮಂಡಳಿಯಲ್ಲಿ ಹೊಂದಿರುವ ರಾಷ್ಟ್ರೀಯ ಕಾನೂನು ಶಾಲೆ (National Law School of India University)ಯನ್ನು ಬಿಟ್ಟರೆ ನಮ್ಮ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳು ಗೊಂದಲದ ಗೂಡಾಗಿವೆ.

2010ರ ನಂತರ ಹುಟ್ಟಿಕೊಂಡಿರುವ ಅನೇಕ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ವಿಪ್ರೊ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ವಾತಾವರಣ ಕಾಣುತ್ತಿದ್ದು ಉಳಿದ ವಿಶ್ವವಿದ್ಯಾಲಯಗಳ ಆಡಳಿತ ಮತ್ತು ಕಲಿಕಾ ಗುಣಮಟ್ಟದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇನ್ನೂ ಇದೆ. ಇಂತಹ ಸನ್ನಿವೇಶದಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಏಕೆ ಬೇಕು? ಅದೂ ಕೂಡ, ನಗರದ ಮಧ್ಯೆ 106 ಎಕರೆ ಜಮೀನು ತೆಗೆದುಕೊಂಡು ಒಂದು ವಿಶ್ವವಿದ್ಯಾಲಯವನ್ನು ಏಕೆ ಸ್ಥಾಪಿಸಬೇಕು ಎನ್ನುವ ಪ್ರಶ್ನೆ ಸ್ವಾಭಾವಿಕ.

ಚಾಣಕ್ಯ ವಿಶ್ವವಿದ್ಯಾಲಯ
ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ (Centre for Education and Social Studies) ಎಂಬ ಸಂಸ್ಥೆ ಈ ಚಾಣಕ್ಯ ವಿಶ್ವವಿದ್ಯಾಲಯವನ್ನು ನಡೆಸುತ್ತದೆ ಎಂಬ ವಾದ ಸಿದ್ಧರಾಮಯ್ಯ ಅವರದ್ದು. ಈ ‘ಸೆಸ್​ (CESS)’ ಎಂಬ ಸಂಸ್ಥೆಯ ವೆಬ್​ಸೈಟನ್ನು ನೋಡಿದರೆ ಇದರ ನಿರ್ದೇಶಕ ಮಂಡಳಿ ಬಗ್ಗೆ ಯಾವ ಮಾಹಿತಿಯೂ ಸಿಗುತ್ತಿಲ್ಲ. ಆದರೆ ಆ ವೆಬ್​​ಸೈಟ್​ನಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ ನಡೆಸುವವರು ಹೇಳಿಕೊಂಡಂತೆ, ಇದು 2006 ರಿಂದ ನಡೆಯುತ್ತಿದೆ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮತ್ತು ಖಾಸಗೀ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅನೇಕ ಯೋಜನೆಗಳ ಅಧ್ಯಯನ/ಸಂಶೋಧನೆ ಮಾಡಿದ್ದೇವೆಂದು ಹೇಳಿಕೊಂಡಿದ್ದಾರೆ.

ಈ ಮಾಹಿತಿ ನಿಜ ಇರಬಹುದು ಎಂದುಕೊಳ್ಳೋಣ. ಈ ಮಾಹಿತಿ ನಿಜವಿದ್ದರೆ, ಇನ್ನುಳಿದ ಕೆಲ ಖಾಸಗಿ ವಿಶ್ವವಿದ್ಯಾಲಯಗಳಿಗಿಂತ ಇವರಿಗೆ ಶಿಕ್ಷಣ ಮತ್ತ ಸಾಮಾಜಿಕ ಅಧ್ಯಯನದ ವಿಚಾರದಲ್ಲಿ ಕೆಲಸ ಮಾಡಿದ ಅನುಭವ ಇದೆ ಎಂದಂತಾಯಿತು. ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಖ್ಯಾತ ಶಿಕ್ಷಣ ತಜ್ಞ ಪ್ರೊ. ಎಂ​.ಕೆ. ಶ್ರೀಧರ್​ ಅವರು ಈ ಚಾಣಕ್ಯ ವಿಶ್ವವಿದ್ಯಾಲಯವನ್ನು ಹುಟ್ಟು ಹಾಕಲು ಮುಂದಾಗಿರುವ ಪ್ರವರ್ತಕರಲ್ಲಿ ಒಬ್ಬರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆನರಾ ಬ್ಯಾಂಕ್​ ಸ್ಕೂಲ್​ ಆಫ್​ ಬಿಸಿನೆಸ್​ನ ನಿರ್ದೇಶಕರಾಗಿ ನಿವೃತ್ತರಾಗಿರುವ ಪ್ರೊ. ಶ್ರೀಧರ್​ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಆಳವಾದ ಅನುಭವ ಇದೆ. ಅವರು ಶುದ್ಧ ಹಸ್ತರು ಮತ್ತು ಸಜ್ಜನ ಕೂಡ. ಅವರು ಆರ್​ಎಸ್​ಎಸ್​ನ ಸಹ ಸಂಸ್ಥೆಗಳ ಒಡನಾಡಿಯಾಗಿರಬಹುದು.

ಹೀಗಾಗಿಯೇ ಸಿದ್ಧರಾಮಯ್ಯ ಪ್ರೊ. ಶ್ರೀಧರ್​ ಅವರ ಹೆಸರು ಹೇಳದೇ ಆರ್​ಎಸ್​ಎಸ್​ಗೆ ಜಮೀನು ಕೊಡುತ್ತಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ. ಕಾಂಗ್ರೆಸ್​ ಪಕ್ಷ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಎತ್ತಿರುವ ಪ್ರಾಮಾಣಿಕ ಪ್ರಶ್ನೆಗಳ ಹಿಂದೆ ರಾಜಕೀಯ ಕೂಡ ಅಡಗಿರಬಹುದು. ಪ್ರಾಯಶಃ ಹೈಕಮಾಂಡನ್ನು ಖುಷಿಪಡಿಸುವ ಹುನ್ನಾರ ಕೂಡ ಇದರ ಹಿಂದೆ ಇರಬಹುದು. ರಾಜಕಾರಣಿಗಳಿಗೆ ರಾಜಕೀಯ ಮಾಡುವುದು ಹೊಸದಲ್ಲ. ಆದರೆ, ಸಾರ್ವಜನಿಕರು ಇದಕ್ಕಿಂತ ಹೊರಗೆ ನಿಂತು ವಿಚಾರ ಮಾಡಬೇಕು. ಈ ಕುರಿತು ಚರ್ಚೆ ಮಾಡುವಾಗ ಎರಡು ಉದಾಹರಣೆಯತ್ತ ಗಮನಹರಿಸಬೇಕು ಮತ್ತು ಆ ಕುರಿತು ಚರ್ಚೆ ನಡೆಸಬೇಕು. ಒಂದು ನಳಂದ ವಿಶ್ವವಿದ್ಯಾಲಯ ಮತ್ತು ಇನ್ನೊಂದು ಡಾ. ಅಂಬೇಡ್ಕರ್​ ಸ್ಕೂಲ್​ ಆಫ್​ ಇಕಾನ್​ಮಿಕ್ಸ್.

ನಳಂದ ವಿವಿ
ಹಿಂದಿನ ಯುಪಿಎ ಸರಕಾರ, ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ನೋಬೆಲ್​ ಪ್ರಶಸ್ತಿ ವಿಜೇತ ಪ್ರೊ. ಅಮರ್ತ್ಯ ಸೇನ್​ ಅವರನ್ನು ಕುಲಪತಿಯನ್ನಾಗಿ ನೇಮಿಸಿತು. ಆಗ ದೇಶದ ಜನ ಖುಷಿಪಟ್ಟರು. ಭಾರತದಲ್ಲಿ ಹೊಸದೊಂದು ಅಲೆ ಶುರುವಾಗುತ್ತೆ. ನೆಹರು ನಂತರ ಭಾರತದ ಉನ್ನತ ಶಿಕ್ಷಣದ ಬಗ್ಗೆ ಹೊಸದೊಂದು ಉಪಕ್ರಮ ತೆಗೆದುಕೊಂಡಿದ್ದಾರೆ. ಇನ್ನು ಅಮೇರಿಕ, ಇಂಗ್ಲೆಂಡ್​ ದೇಶಕ್ಕೆ ಹೋಗುವ ಕಾಲ ನಿಲ್ಲುತ್ತೆ. ನಮ್ಮ ಮಕ್ಕಳು ಅಂತರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಇಲ್ಲಿಯೇ ಪಡೆಯಬಹುದು ಎಂದು ಎಲ್ಲರೂ ಅಂದುಕೊಂಡಿದ್ದು ನಿಜ. ಅದಾಗಿ ಎಷ್ಟು ವರ್ಷ ಆಯ್ತು? ಆ ನಳಂದ ವಿಶ್ವವಿದ್ಯಾಲಯ ಈಗ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಎಲ್ಲಿ ನಿಂತಿದೆ? ಸ್ವಚ್ಛ ಸಾರ್ವಜನಿಕ ಜೀವನದ ಇತಿಹಾಸವಿರುವ ಶಿಕ್ಷಣ ತಜ್ಞ ಮತ್ತು ಸಮರ್ಥರಾದ ಪ್ರೊ. ಸೇನ್​ ಇದ್ದಾರೆಂದಾಕ್ಷಣ ನಳಂದ ವಿಶ್ವವಿದ್ಯಾಲಯ ಬದಲಾವಣೆ ತರುತ್ತೆ ಎಂದು ತಿಳಿದಿದ್ದು ತಪ್ಪಾಯ್ತು. ದೊಡ್ಡ ಹೆಸರಿನ ಶಿಕ್ಷಣ ತಜ್ಞರು ಇದ್ದಾರೆಂದಾಕ್ಷಣ, ಅವರು ಪ್ರಾರಂಭಿಸುವ ವಿಶ್ವವಿದ್ಯಾಲಯ ಮಕ್ಕಳ ಭವಿಷ್ಯವನ್ನು ಬದಲು ಮಾಡುತ್ತೆ ಎಂದು ಲೆಕ್ಕಾಚಾರ ಹಾಕಿದ್ದು ತಪ್ಪಾಯ್ತೋ ಏನೋ? ಚಾಣಕ್ಯ ವಿಶ್ವವಿದ್ಯಾಲಯದ ವಿಚಾರದಲ್ಲಿಯೂ ಈ ಮಾತು ಸೂಕ್ತ.

ಪ್ರೊ ಶ್ರೀಧರ್​ ಅವರ ಹೆಸರಿದ್ದಾಕ್ಷಣ ಚಾಣಕ್ಯ ವಿಶ್ವವಿದ್ಯಾಲಯ ಮಕ್ಕಳ ಭವಿಷ್ಯವನ್ನು ಬದಲಾವಣೆ ಮಾಡುವಂತಹ ಶಿಕ್ಷಣ ಸಂಸ್ಥೆ ಆಗುತ್ತೆ ಎಂದು ಒಪ್ಪಿಕೊಳ್ಳಲಾಗದು. ಇದು ‘ಸೆಸ್​’ ಮುಂದಿರುವ ದೊಡ್ಡ ಸವಾಲು. ಸಾರ್ವಜನಿಕರ ಪ್ರಶ್ನೆಗಳನ್ನು ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವವರ ಶಂಕೆ ಬಗೆಹರಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸಿದರೆ ಆಗ ಚಾಣಕ್ಯ ವಿಶ್ವವಿದ್ಯಾಲಯ ಹುಟ್ಟುಹಾಕಿದ ಉದ್ದೇಶ ಈಡೇರುತ್ತದೆ. ಇಲ್ಲವೆಂದರೆ, ಇದು ಹತ್ತರ ಜೊತೆ ಹನ್ನೊಂದು ಆಗಬಹುದು.

ಡಾ. ಅಂಬೇಡ್ಕರ್​ ಸ್ಕೂಲ್​ ಆಫ್​ ಇಕಾನಮಿಕ್ಸ್​
ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಬಹಳ ಸುದ್ದಿ ಮಾಡಿ ಹುಟ್ಟು ಹಾಕಿದ್ದು ಡಾ. ಅಂಬೇಡ್ಕರ್​ ಸ್ಕೂಲ್​ ಆಫ್​ ಇಕಾನಮಿಕ್ಸ್. ಲಂಡನ್​ ಸ್ಕೂಲ್​ ಆಫ್​ ಇಕಾನಮಿಕ್ಸ್​ ಮಾದರಿಯಲ್ಲಿ ಒಂದು ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕುತ್ತೇವೆ, ನಮ್ಮ ಮಕ್ಕಳಿಗೆ ಅಂತರಾಷ್ಟ್ರೀಯ ಶಿಕ್ಷಣ ಇಲ್ಲಿಯೇ ಸಿಗುತ್ತೆ ಎಂದು ಹೇಳಿದರು. ಲಂಡನ್​ ಸ್ಕೂಲ್​ ಆಫ್​ ಎಕಾನಮಿಕ್ಸ್​ನ ಹೆಸರು ಇಡಲು ಪ್ರಯತ್ನಿಸಲಾಯಿತು. ನಾಲ್ಕು ವರ್ಷದ ಬಿಎ ಕೋರ್ಸನ್ನು ಪರಿಚಯಿಸಿ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ಶುರುಮಾಡಿದರು. ನಾಲ್ಕು ವರ್ಷ ಇನ್ನೂ ಪೂರ್ತಿ ಆಗಿಲ್ಲ. ಆ ವಿಶ್ವವಿದ್ಯಾಲಯ ಇವತ್ತು ನಿವೃತ್ತ ಮತ್ತು ಹಾಲಿ ಐಎಎಸ್​ ಅಧಿಕಾರಿಗಳ ಕಾಲೊರಸಿನಂತಾಗಿದೆ.

ಇಡಿ ಶಿಕ್ಷಣ ಸಂಸ್ಥೆ ರಾಜಕೀಯದ ಗೂಡಾಗಿ ಅಲ್ಲಿ ಕಲಿಯುತ್ತಿರುವ ಮಕ್ಕಳು ಹಿಡಿ ಹಿಡಿ ಶಾಪ ಹಾಕುವಂತಾಗಿದೆ. ಆ ಮಕ್ಕಳ ಭವಿಷ್ಯ ಮಂಕು ಮಾಡಿದ್ದರ ಹೊಣೆಗಾರಿಕೆಯನ್ನು ಯಾರು ಹೊರುತ್ತಾರೆ? ಸಿದ್ಧರಾಮಯ್ಯ ಹೊರುತ್ತಾರೆಯೇ?

ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಿದರೆ ಋಣಾತ್ಮಕ ಭಾವನೆಯೊಂದಿಗೆ ಮುಗಿಸಿದಂತಾಗುತ್ತದೆ. ನಳಂದ ಮತ್ತು ಅಂಬೇಡ್ಕರ್​ ಸ್ಕೂಲ್​ ಬಗ್ಗೆ ಕೇಳಿದವರು ಒಂದು ವಿಚಾರ ಮಾಡಬಹುದು: ನಮ್ಮಲ್ಲಿ ನೆಹರು ಅವರಂತಹ ದೂರದೃಷ್ಟಿಯುಳ್ಳ ನಾಯಕರು ಇಲ್ಲ. ಹಾಗಾಗಿ, ಒಂದು ಉನ್ನತ ಶಿಕ್ಷಣ ಸಂಸ್ಥೆ ಕಟ್ಟಲು ಸಾಧ್ಯವಿಲ್ಲ ಎಂದು ನಿರ್ಣಯ ಮಾಡಿಬಿಡಬಹುದು. ಅಲ್ಲವೇ? ಇದು ತಪ್ಪುಗ್ರಹಿಕೆ. ನಮ್ಮ ಕೂಗಳತೆಯಲ್ಲಿ ಒಂದು ಸಂಸ್ಥೆ ಕಟ್ಟಿ ಬೆಳೆಸಿದವರು ಇದ್ದಾರೆ. ಪ್ರೊ ಎಸ್​.ಸದಗೋಪನ್​ ಅವರು ಬೆಂಗಳೂರಿನಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (Indian Institute of Information Technology) ಯನ್ನು ಈ ಶತಮಾನದಲ್ಲಿ ಕಟ್ಟಿ ಒಂದು ಹಂತಕ್ಕೆ ಯಶಸ್ಸು ತಂದಿದ್ದಾರೆ.

ಪ್ರಾಮಾಣಿಕತೆ, ಮಾನವೀಯತೆ, ಹೃದಯ ವೈಶಾಲ್ಯತೆ ಮತ್ತು ಕಠಿಣ ಪರಿಶ್ರಮದ ಮೂಲಕ ಈ ಸಂಸ್ಥೆಯನ್ನು ಕಟ್ಟಿ ತೋರಿಸಿದವರು ಪ್ರೊ.ಸದಗೋಪನ್ . ಅದನ್ನು ನೋಡಿ ನಾವು ಕಲಿಯಬೇಕಾಗಿದ್ದುದು ಬಹಳಷ್ಟಿದೆ. ಅಂದರೆ, ದೂರದರ್ಶಿತ್ವ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಒಂದು ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆ ಕಟ್ಟಬಹುದು ಎಂದಂತಾಯಿತಲ್ಲ. ಚಾಣಕ್ಯ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಮುನ್ನಡೆಯಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: Legislative Council 5 ಖಾಸಗಿ ವಿವಿ ವಿಧೇಯಕಗಳಿಗೆ ಅಂಗೀಕಾರ.. ಶಿಕ್ಷಣ ದಂಧೆ ಆಗಲಿದೆ ಎಂದು ಪ್ರತಿಪಕ್ಷ ಆತಂಕ

ಇದನ್ನೂ ಓದಿ: ವಿಧಾನಸಭೆಯಲ್ಲಿ ಚಾಣಕ್ಯ ವಿವಿ ವಿಧೇಯಕ ಅಂಗೀಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ

(The controversy about Chanakya Private University and the Congress charges saying the BJP government is giving land to RSS through a private organisation)

Published On - 10:13 am, Thu, 23 September 21