ವಿಧಾನಸಭೆಯಲ್ಲಿ ಚಾಣಕ್ಯ ವಿವಿ ವಿಧೇಯಕ ಅಂಗೀಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ
50 ಕೋಟಿ ರೂಪಾಯಿಗೆ 116 ಎಕರೆ ಭೂಮಿಯನ್ನ ನೀಡಿದ್ದಾರೆ. ಸರ್ಕಾರ ರೈತರಿಗೆ 175 ಕೋಟಿ ರೂಪಾಯಿ ಪರಿಹಾರ ನೀಡಿದೆ. ರೈತರಿಂದ ಸ್ವಾಧೀನಪಡಿಸಿಕೊಂಡು ಭೂಮಿ ಅಭಿವೃದ್ಧಿಪಡಿಸಿದ್ದಾರೆ.
ಬೆಂಗಳೂರು: ಚಾಣಕ್ಯ ವಿವಿ ವಿಧೇಯಕವನ್ನು ನಿನ್ನೆ (ಸೆ.21) ಅಂಗೀಕರಿಸಿದ್ದಾರೆ. ಚರ್ಚೆಗೆ ಅವಕಾಶ ನೀಡದೆ ತರಾತುರಿಯಲ್ಲಿ ಅಂಗೀಕಾರ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಚಾಣಕ್ಯ ವಿವಿಯನ್ನು ನಡೆಸುತ್ತಿರುವುದು ಸೆಸ್ ಸಂಸ್ಥೆ. ಸೆಸ್ ಸಂಸ್ಥೆ ನಡೆಸುತ್ತಿರುವವರು ಆರ್ಎಸ್ಎಸ್ನವರು. ಸೆಸ್ ಸಂಸ್ಥೆಗೆ ಭೂಮಿ ನೀಡಲು 26.04.2021ರಂದು ಸಚಿವ ಸಂಪುಟದಲ್ಲಿ ಒಪ್ಪಿಗೆಯಾಗಿದೆ. ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ನೀಡಲಾಗಿದೆ. 1 ಕೋಟಿ 50 ಲಕ್ಷ ರೂ. ಪರಿಹಾರ ಕೊಟ್ಟು ಸ್ವಾಧೀನಪಡಿಸಿಕೊಂಡಿದ್ದರು. ಇಂತಹ ಭೂಮಿಯನ್ನು ಸೆಸ್ ಸಂಸ್ಥೆಗೆ ನೀಡಿದ್ದಾರೆ. ಸೆಸ್ ಸಂಸ್ಥೆಯಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳೇ ಇಲ್ಲ. ಅಂತಹ ಸಂಸ್ಥೆಗೆ ಭೂಮಿಯನ್ನು ನೀಡಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
50 ಕೋಟಿ ರೂಪಾಯಿಗೆ 116 ಎಕರೆ ಭೂಮಿಯನ್ನ ನೀಡಿದ್ದಾರೆ. ಸರ್ಕಾರ ರೈತರಿಗೆ 175 ಕೋಟಿ ರೂಪಾಯಿ ಪರಿಹಾರ ನೀಡಿದೆ. ರೈತರಿಂದ ಸ್ವಾಧೀನಪಡಿಸಿಕೊಂಡು ಭೂಮಿ ಅಭಿವೃದ್ಧಿಪಡಿಸಿದ್ದಾರೆ. ಈ ಭೂಮಿ 300ರಿಂದ 400 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ ಸರ್ಕಾರ ಈಗ ಈ ಸಂಸ್ಥೆಗೆ ಭೂಮಿಯನ್ನು ನೀಡಿದೆ. ಆರ್ಎಸ್ಎಸ್ನವರಿಗೆ ಬಳುವಳಿಯಾಗಿ ಭೂಮಿಯನ್ನ ನೀಡಿದೆ. ಸೆಸ್ ಸಂಸ್ಥೆಗೆ ಸರ್ಕಾರ ಭೂಮಿ ನೀಡಿರುವುದು ದೊಡ್ಡ ಹಗರಣ ಎಂದು ಸಿದ್ದರಾಮಯ್ಯ ಹೇಳಿದರು.
ಎಲ್ಲ ನಿಬಂಧನೆಗಳನ್ನು ಗಾಳಿಗೆ ತೂರಿ ಜಮೀನು ನೀಡಲಾಗಿದೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಚಾಣಕ್ಯ ವಿವಿ ಮನುವಾದಿಗಳ ಯೂನಿವರ್ಸಿಟಿಯಾಗಲಿದೆ’. ನಾನು ಚಾಣಕ್ಯ ಬಗ್ಗೆ ಹೇಳಲ್ಲ, ಸಂಸ್ಥೆಯ ಬಗ್ಗೆ ಹೇಳುತ್ತಿದ್ದೇನೆ. ಈ ಆರ್ಎಸ್ಎಸ್ನವರು ಮನುವಾದಿಗಳು. ಮತ್ತೆ ಚತುರ್ವರ್ಣ ಜಾರಿ ಮಾಡುವುದಕ್ಕೆ ಹೊರಟಿದ್ದಾರೆ. ಅಂತಹ ಚಾಣಕ್ಯ ವಿವಿ ವಿಧೇಯಕವನ್ನು ಅಂಗೀಕರಿಸಿದ್ದಾರೆ. ಸ್ಪೀಕರ್ ಕೂಡ ಬಹಳ ಒಳ್ಳೆಯ ವಿವಿ ಎಂದು ಹೇಳಿದ್ದಾರೆ ಎಂದರು.
ಮುಂದುವರಿದು ಮಾತನಾಡಿದ ಅವರು, ರೈತರಿಂದ ಜಮೀನು ಕಿತ್ತುಕೊಂಡು ಸೆಸ್ ಸಂಸ್ಥೆಗೆ ನೀಡಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗಲಿದೆ. ಇದು ಕೂಡ ‘ಲೂಟ್’ ಎಂದು ಹೇಳಿದರು. ಸರ್ಕಾರಕ್ಕೆ ನಷ್ಟವಾದರೆ, ರಾಜ್ಯದ ಜನರಿಗೂ ನಷ್ಟವಾಗಲಿದೆ. ವಿಧಾನಸಭೆಯಲ್ಲಿ ಚಾಣಕ್ಯ ವಿವಿ ವಿಧೇಯಕ ಅಂಗೀಕಾರವಾಗಿದೆ. ಆದರೆ ಈ ವಿಧೇಯಕವನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು. ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲವೆಂದು ಸರ್ಕಾರ ಹೇಳುತ್ತಿದೆ. ಆದರೆ ಸರ್ಕಾರದ ಆಸ್ತಿಯನ್ನು ಮನುವಾದಿಗಳಿಗೆ ಕೊಡ್ತಿದ್ದಾರೆ. ಖಾಸಗಿಯವರಿಗೆ ಭೂಮಿ ಮಾರಾಟ ಮಾಡ್ತಿರುವುದು ಸರಿಯಲ್ಲ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರ ಖಂಡಿಸುತ್ತೆ. ಚಾಣಕ್ಯ ವಿವಿ ವಿಧೇಯಕದ ಬಗ್ಗೆ ಚರ್ಚೆಗೆ ಆಗ್ರಹಿಸಿದೆವು. ಚರ್ಚೆ ಮಾಡಬೇಕೆಂದು ಪರಿಪರಿಯಾಗಿ ಕೇಳಿಕೊಂಡಿದ್ದೆವು. ಆದರೆ ಚರ್ಚೆಗೆ ಅವಕಾಶ ನೀಡಿದೆ ತರಾತುರಿಯಲ್ಲಿ ಅಂಗೀಕಾರ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯಗೆ ನಾಲೆಡ್ಜ್ ಇಲ್ಲ; ಡಿ.ಕೆ.ಶಿವಕುಮಾರ್ ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಚಾಣಕ್ಯ ವಿವಿಗಾಗಿ 116 ಎಕರೆ ಭೂಮಿಯನ್ನು ನೀಡಲಾಗಿದೆ. 1 ಎಕರೆ ಭೂಮಿ 3-4 ಕೋಟಿ ಬೆಲೆ ಬಾಳುತ್ತೆ ಎಂದಿದ್ದಾರೆ. ಸಿದ್ದರಾಮಯ್ಯಗೆ ಆ ಲ್ಯಾಂಡ್ ಬಗ್ಗೆ ಅಷ್ಟು ನಾಲೆಡ್ಜ್ ಇಲ್ಲ. 1 ಎಕರೆ ಭೂಮಿ 7-10 ಕೋಟಿ ರೂಪಾಯಿ ಬೆಲೆ ಬಾಳುತ್ತೆ. ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿ ನೀಡಲು ಒಪ್ಪಲ್ಲ. ಕಮರ್ಷಿಯಲ್ ಜಾಗವನ್ನು ವಿವಿಗೆ ನೀಡುವುದು ಒಪ್ಪಲ್ಲ. ಕಲುಬುರಗಿ, ವಿಜಯಪುರ ಕಡೆ ಭೂಮಿ ಬೇಕಿದ್ದರೆ ಕೊಡಲಿ. ದೇವನಹಳ್ಳಿ ಬಳಿಯಿರುವ ಜಾಗ ನೀಡುವುದಕ್ಕೆ ನಾವು ಒಪ್ಪಲ್ಲ. ಈ ಜಾಗ ಹೆಚ್ಚು ಬೆಲೆಬಾಳುತ್ತೆ, ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಅಂತಹ ಜಾಗವನ್ನು ನೀಡುವುದಕ್ಕೆ ಕಾಂಗ್ರೆಸ್ ಒಪ್ಪುವುದಿಲ್ಲ ಎಂದು ಹೇಳಿದರು.
ನಾನು ಶಿಕ್ಷಣ ಸಂಸ್ಥೆ ನಡೆಸುತ್ತೇನೆ. ರಾಮಯ್ಯ, ಪಿಇಎಸ್ ಸೇರಿ ಹಲವರು ನಡೆಸುತ್ತಾರೆ. ಇಂತಹ ಸಂಸ್ಥೆಗಳು ಖಾಸಗಿ ವಿವಿಗೆ ಮಾಡಲು ಅರ್ಹ. ಯಾರೋ 10 ಜನ ಸೇರಿ ಟ್ರಸ್ಟ್ ಮಾಡಿದರೆ ಅವಕಾಶವಿಲ್ಲ. ಭೂಮಿ ಕೊಡ್ತಾರೆ, ಹಣ ಕೊಡ್ತಾರೆ ಅಂತ ಅವಕಾಶ ಕೊಡಲಾಗಲ್ಲ. ಸಿದ್ದರಾಮಯ್ಯನವರಿಗೆ ಮಾಹಿತಿಯಿಲ್ಲ. ದೇವನಹಳ್ಳಿ ಬಳಿ ಭೂಮಿ 10 ಕೋಟಿ ಬೆಲೆ ಬಾಳುತ್ತೆ. ಮಾಗಡಿಯಲ್ಲೂ ಬೇರೆ ಕಡೆ ಭೂಮಿ ಕೊಡಲಿ. ಒಂದು ವಿವಿ ತೆಗೆಯಲು ಅವರಿಗೆ ಅರ್ಹತೆಯಿಲ್ಲ. ಇಲ್ಲಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಆರ್ಎಸ್ಎಸ್ ಶಿಕ್ಷಣ ಸಂಸ್ಥೆಗಳು ಇವೆ. ಇದಕ್ಕೂ ಆರ್ಎಸ್ಎಸ್ ಹೆಸರನ್ನೇ ನೇರವಾಗಿ ಇಡಿ. ಹಿಂಬಾಗಿಲ ಮೂಲಕ ಯಾಕೆ ಬರಬೇಕು. ಕೂಡಲೇ ಇದನ್ನ ಸರ್ಕಾರ ವಿಥ್ ಡ್ರಾ ಮಾಡಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ
ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕೊರೆದು 13 ತಿಂಗಳ ನಂತರ ಹೊರಬಂದ ಊರ್ಜಾ ಯಂತ್ರ
ದೇವನಹಳ್ಳಿ: ಬಿಎಸ್ಎಫ್ ಕ್ಯಾಂಪ್ನಲ್ಲಿ ಕೊರೊನಾ ರಣಕೇಕೆ; ಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ, ಓರ್ವ ಗಂಭೀರ
(Siddaramaiah has objected to the Chanakya University Obedient bill pass)
Published On - 11:54 am, Wed, 22 September 21