ಸ್ವಭಾವ ಪ್ರಭಾವ: ‘ಸಪ್ರೇಮ ಸಂಬಂಧಗಳು ಮತ್ತು ಕಾವಿಗೆ ಕುಳಿತ ಕೇಡು’ ಮಹಾದೇವ ಹಡಪದ ಬರಹ

|

Updated on: Mar 24, 2022 | 5:20 PM

Communal Clashes: ಅವರು ಬೇರೆ - ಇವರು ಬೇರೆ (ಕಟ್ಟರ್ ಜಾತಿವಾದ) ಎಂಬ ತಿಳಿವಳಿಕೆ ಇದ್ದೂ ವ್ಯವಹರಿಸುವ ರೀತಿಯನ್ನು ಗ್ರಾಮಭಾರತ ಗ್ರಹಿಸಿಕೊಂಡಿತ್ತು. ಆದರೆ ಕಸುಬುಗಳಲ್ಲಿ ಈ ಭಿನ್ನತೆ ಇದ್ದರೂ ದೈವದ ನೇಮಗಳಲ್ಲಿ ಸಾಮರಸ್ಯವು ಜೀವಂತವಾಗಿತ್ತು. ಅದಕ್ಕೆ ಕಾರಣ ಬ್ರಹ್ಮನ ಕಾಲ್ಪನಿಕ ದರ್ಶನದ ಭಯವೂ ಇದ್ದಿರಬಹುದು.

ಸ್ವಭಾವ ಪ್ರಭಾವ: ‘ಸಪ್ರೇಮ ಸಂಬಂಧಗಳು ಮತ್ತು ಕಾವಿಗೆ ಕುಳಿತ ಕೇಡು’ ಮಹಾದೇವ ಹಡಪದ ಬರಹ
ನಾಟಕಕಾರ ಮಹಾದೇವ ಹಡಪದ
Follow us on

ಸ್ವಭಾವ ಪ್ರಭಾವ : ನಾವದೆಷ್ಟೇ ಎದೆಸೆಟೆಸಿ ನಿಂತು ಆರ್ಭಟಿಸಿದರೂ ವಾಸ್ತವದಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಪರಸ್ಪರ ಅವಲಂಬಿತರು ಎನ್ನುವುದು ಕಟುಸತ್ಯ. ಅಭಿವೃದ್ಧಿ-ತಂತ್ರಜ್ಞಾನ ಈ ಅವಲಂಬನೆಯಿಂದ ಮುಕ್ತಗೊಳಿಸುತ್ತಿದೆ ಎಂದೆನ್ನಿಸಿದರೂ ಅದರ ಪರಿಣಾಮಗಳನ್ನು ನಾವು ಸುಲಭಕ್ಕೆ ಒಪ್ಪಿಕೊಳ್ಳಲಾರೆವು. ಏಕೆಂದರೆ ನಾಗರಿಕ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳುವ ಕನಸು ಗುರಿಗಳಿಗೆ ತಕ್ಕಂಥ ವೇಗ ನಮಗೆ ಮುಖ್ಯ. ಮೈಮನಸ್ಸನ್ನು ಬೆಸೆದಿರುವ ಬಹುಸಂಸ್ಕೃತಿಯ ಸ್ವೀಕಾರ, ಸಹಕಾರ ಮತ್ತದರ ನಿಧಾನಲಯದ ಅರಿವಿನ ಸೊಬಗು, ಅಂತಃಕರಣದ ತೇವ, ಪ್ರಜ್ಞೆಯ ಆಳ ನಮಗಿಂದು ಬೇಡ. ಹಾಗಾಗಿ ನಮ್ಮ ಬೇರುಗಳಿಗೆ ಕತ್ತರಿ ಬೀಳುವಾಗ ಜಾಣಕುರುಡರಾಗಿರುತ್ತೇವೆ. ಸ್ವಯಂಶೋಧನೆಗೆ ಒಳಪಡುವ ಏಕಾಂತ, ಅಧ್ಯಯನಶೀಲತೆ ನಮಗೆ ಭಯ ತರಿಸುತ್ತದೆ, ಒಂಟಿತನ ಒಡ್ಡುತ್ತದೆ. ಅದಕ್ಕೇ ಸದಾ ಗೌಜಿ, ಗದ್ದಲ, ವಿವಾದದೊಂದಿಗೆ ಗುಂಪು ಕಟ್ಟಿಕೊಳ್ಳುತ್ತ ಹುಸಿ ಶಕ್ತಿಶಾಲಿತನ ಮೆರೆಯುವುದೇ ನಮಗಿಷ್ಟ!; ಈ ಧರ್ಮದವರನ್ನು ಹೊರಗಿಡಿ, ಆ ಧರ್ಮದವರನ್ನು ಹೊರಗಿಡಿ ಎನ್ನುವ ಕೂಗುಮಾರಿಗಳೇ, ದಯವಿಟ್ಟು ನಿಮ್ಮ ಮೂಲಸ್ವಭಾವವೇನು, ಪ್ರಭಾವವೇನು ಎಂಬುದನ್ನು ಪರಾಮರ್ಶೆಗೆ ಒಳಪಡಿಸಿಕೊಳ್ಳಿ. ಪ್ರಭಾವ ಎನ್ನುವುದು ಎಂದಿಗೂ ಸ್ವನಾಶವೇ.

 

‘ಸ್ವಭಾವ-ಪ್ರಭಾವ’ ಈ ಹೊಸ ಸರಣಿಯಲ್ಲಿ ಮೊದಲಿಗೆ ಓದಿ, ಧಾರವಾಡದಲ್ಲಿ ವಾಸಿಸುತ್ತಿರುವ ನಾಟಕಕಾರ, ಲೇಖಕ ಮಹಾದೇವ ಹಡಪದ ಅವರ ಬರಹ.   

ಬ್ರಹ್ಮನಿಗೆ ನಾಲ್ಕು ಮುಖಗಳು ಅದೊಂದು ಭಾರತೀಯ ಪರಂಪರೆಯ ಶ್ರೇಷ್ಠ ಕಲಾಕೃತಿ ಹೇಗೋ ಹಾಗೆ ನಾಗರೀಕತೆಯ ದ್ಯೋತಕವೂ ಹೌದು. ಬ್ರಹ್ಮ ಎನ್ನುವ ಶಿಲ್ಪ ನಾಲ್ಕುಮುಖ ಎಂಬ ಸೌಂದರ್ಯ ದರ್ಶನಗಳನ್ನು ಒಂದು ಕಡೆ ಸೇರಿಸಿರುವ, ಒಂದೇ ಕಲ್ಲಿನಲ್ಲಿ ಮೂರ್ತಿಗೊಳಿಸಬೇಕೆಂಬ ಬಹುತ್ವದ ಕಲ್ಪನೆಯ ಸಂಕೇತವದು.  ಆ ರಚನೆಯಲ್ಲಿ ಸಾಮುದಾಯಿಕವಾಗಿ ಬದುಕುವ ನಾಗರೀಕತೆಯ ಲಕ್ಷಣವಿದೆ. ಅದು ದೈವ ಹೇಗೋ ಹಾಗೆ ನೈತಿಕವಾಗಿ ನಾವು ಹೇಗೆಲ್ಲ ಒಂದಾಗಿ ಬಾಳಬೇಕೆಂಬ ಪಾಠವೂ ಹೌದಲ್ಲವೇ..! ಈ ಸಾಂಸ್ಕೃತಿಕ ರಚನೆ ಇಂದಿಗೂ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಚಾಲ್ತಿಯಲ್ಲಿದೆ. ಬಾಗಿಲ ಹೊರಗೆ ಭರಮಪ್ಪ ಎಂಬ ಹೆಸರಿನ ದೈವಗಳನ್ನು ಎಡಬಲಕ್ಕಿಟ್ಟು ಪೂಜಿಸುತ್ತಾರೆ. ಹಿತ್ತಿಲು ಬಾಗಿಲಲ್ಲಿ ಎರಡು, ಮುಂಬಾಗಿಲಲ್ಲಿ ಎರಡರಂತೆ ಒಟ್ಟು ನಾಲ್ಕು ಭರಮಪ್ಪಗಳನ್ನ ಮನೆಯಲ್ಲಿ ಪೂಜಿಸುವ ಉದ್ದೇಶವೇ ಒಂದುಮನೆ ಎಂಬುದು ನಾಲ್ಕು ಚೌಕಟ್ಟುಗಳ ನಡುವೆ ರೂಪಿಸಲ್ಪಟ್ಟಿದ್ದು. ಈ ನಾಲ್ಕು ಎನ್ನುವುದು ಒಂದಲ್ಲ ಹಲವು ಎಂಬರ್ಥದಲ್ಲಿ ಜನಪದರು ಗ್ರಹಿಸಿದ್ದರು.

ಊರು ಎನ್ನುವುದು ಕೂಡ ಹಲವು ಮನೆಗಳ ಒಂದುಗುಂಪು. ಆದ್ದರಿಂದ ಮೂರು ಮತಗಳು ಹದಿನೆಂಟು ಕುಲಗಳು ಊರೊಳಗೆ ಇರುತ್ತವೆ. ಆ ಸಮುದಾಯವನ್ನು ಬ್ರಹ್ಮನ ನಾಲ್ಕು ಮುಖಗಳ ಮೂಲಕ ಸಮತೂಗಿಸಬೇಕೆಂಬ ವಿವೇಕ ಜನಪದರದ್ದಾಗಿತ್ತು. ಈ ವಿವೇಕ ಒಮ್ಮೊಮ್ಮೆ ಐಂದ್ರಿಕ ಶಕ್ತಿಗಳ ಹೆಸರಿನಲ್ಲಿ, ಮತ್ತೊಮ್ಮೆ ಕಾಲ್ಪನಿಕ ಶಕ್ತಿಗಳ ಹೆಸರಿನಲ್ಲಿ ಮತ್ತು ಬೌದ್ಧಿಕ ವಿಚಾರವಂತಿಕೆ ಹಾಗೂ ನಾಗರೀಕತೆಯ ಆದರ್ಶಗಳ ಮೂಲಕ ಸಮುದಾಯದ ನಡೆಗಳನ್ನು ನಿರ್ಧರಿಸುತ್ತಿದ್ದವು. ಐಂದ್ರಿಕ, ಕಾಲ್ಪನಿಕ, ಬೌದ್ಧಿಕ ಮತ್ತು ಆದರ್ಶ ಎಂಬ ನಾಲ್ಕು ದರ್ಶನಗಳೇ ಬ್ರಹ್ಮನ ಮುಖಗಳು ಆದ್ದರಿಂದ ಮನೆಯ ಚೌಕಟ್ಟು ಊರಾಗಿ, ಊರಿನ ಚೌಕಟ್ಟು ಮೀರಿದ ನಾಗರೀಕತೆಯನ್ನಾಗಿ ಬುದ್ಧನ ಕಾಲದ ಶಾಕ್ಯರು ನಿರ್ವಹಿಸಿದರು. ಕಾಲಾಂತರದಲ್ಲಿ ಭರಮಪ್ಪನ ಎರಡುಮುಖಗಳು ಮಾಯವಾಗಿ ಕೇವಲ ಐಂದ್ರಿಕ ಮತ್ತು ಕಾಲ್ಪನಿಕ ನೆಲೆಗಟ್ಟಿನಲ್ಲಿ ಯಾವಾಗ ಹಳ್ಳಿಗಳು ರೂಪಗೊಳ್ಳತೊಡಗಿದವೋ  ಆಗ ಕುಲಕೇಂದ್ರಿತ ಕೇರಿಗಳು, ಓಣಿಗಳು, ಆಚರಣೆ ಕೇಂದ್ರಿತ ವರ್ತನೆಗಳು ಆರಂಭವಾದವು. ವಿವೇಕಕ್ಕೆ ಸಾಣೆ ಹಿಡಿಯುವ ವಿಚಾರಗಳು ನಗಣ್ಯಗೊಳ್ಳುತ್ತಾ ಹಳ್ಳಿಗಳೆಂಬವು ಹಲವು ಕವಲುಗಳಾದವು. ಆದರೂ ಸಾಮುದಾಯಕವಾಗಿ ಪರಸ್ಪರ ಅವಲಂಬನೆಯ ಬದುಕನ್ನು ಮಾತ್ರ ಮನುಷ್ಯ ಕಳೆದುಕೊಳ್ಳಲಿಲ್ಲ.

ಚೈತನ್ಯದಾಸರು ಭಾಗವತಪುರಾಣದ ಲೀಲೆಗಳನ್ನಿಟ್ಟುಕೊಂಡು ರಸ್ತೆಗಿಳಿದು ಕೀರ್ತನೆ ಹಾಡತೊಡಗಿದರು, ಬಸವಾದಿ ಶರಣರು ವೈಚಾರಿಕ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸವಾರಂಭಿಸಿದರು, ಶರಣರು, ದಾಸರು, ಸಂತರು, ಸೂಫಿಗಳು ಗ್ರಾಮಸಮುದಾಯದಲ್ಲಿ ವಿವೇಕದ ತಿದಿಯೊತ್ತತೊಡಗಿದಾಗಲೂ ಮಾನವತೆಯ ಘನತೆ ಉಳಿದಿತ್ತೆ ಹೊರತು ಕುಲಭೇದಗಳು ನಾಶವಾಗಲಿಲ್ಲ. ದೇಹಕೇಂದ್ರಿತ ಬೋಧನೆಗಳಿಂದ ಸಮಷ್ಠಿಯ ಕೇಂದ್ರದ ಕಡೆಗೆ ಜನಸಾಮಾನ್ಯರ ಅರಿವನ್ನು ಹಿಗ್ಗಿಸಿದ ಇವರೆಲ್ಲರ ಪರಿಶ್ರಮದ ಫಲವಾಗಿ ನಾವು ಕಂಡ ಹಳ್ಳಿಗಳು ಕೆಲವು ಹುಸಿಕಲ್ಪನೆಯ ಜೊತೆಜೊತೆಗೆ ಪರಸ್ಪರ ಅವಲಂಬನೆಯ ಬದುಕನ್ನು ರೂಪಿಸಿಕೊಂಡಿದ್ದವು. ಅದನ್ನು ಮೇಲ್ನೋಟಕ್ಕೆ ಒಂದು ಚೌಕಟ್ಟಿನೊಳಗಿನ ಸೌಹಾರ್ದತೆಯ ಸಂಕೇತವೆನ್ನಬಹುದೇ ಹೊರತು ಅದೇ ಸೌಹಾರ್ದವಲ್ಲ ಎಂಬ ಅರಿವನ್ನಿಟ್ಟುಕೊಂಡ ಸಹಬಾಳ್ವೆ ಅದು. ಅದನ್ನು ಇನ್ನಷ್ಟು ಸ್ಪಷ್ಟಗೊಳಿಸುವುದಾದರೆ ಅವರು ಬೇರೆ – ಇವರು ಬೇರೆ (ಕಟ್ಟರ್ ಜಾತಿವಾದ) ಎಂಬ ತಿಳಿವಳಿಕೆ ಇದ್ದೂ ವ್ಯವಹರಿಸುವ ರೀತಿಯನ್ನು ಗ್ರಾಮಭಾರತ ಗ್ರಹಿಸಿಕೊಂಡಿತ್ತು. ಆದರೆ ಕಸುಬುಗಳಲ್ಲಿ ಈ ಭಿನ್ನತೆ ಇದ್ದರೂ ಕೂಡ ದೈವದ ನೇಮಗಳಲ್ಲಿ ಸಾಮರಸ್ಯವು ಜೀವಂತವಾಗಿತ್ತು. ಅದಕ್ಕೆ ಕಾರಣ ಬ್ರಹ್ಮನ ಕಾಲ್ಪನಿಕ ದರ್ಶನದ ಭಯವೂ ಇದ್ದಿರಬಹುದು. ಒಟ್ಟು ಒಂದು ಸಮುದಾಯವಾಗಿ ಹಬ್ಬಗಳಲ್ಲಿ ಪಾಲ್ಗೊಳ್ಳುವುದು, ಜಾತ್ರೆಗಳನ್ನು ನಿರ್ವಹಿಸುವುದು, ಎಡೆಕೊಡುವುದು, ಬೇಡಿಕೊಳ್ಳುವುದು, ಕಾಣಿಕೆ ನೀಡುವುದು ಇತ್ಯಾದಿ…

ಇದನ್ನೂ ಓದಿ : ಮುಸ್ಲಿಂ ಕುಟುಂಬಗಳಿಗೆ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ; ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕಿಲ್ಲ ಜಾಗ, ಭಜರಂಗ ದಳದಿಂದ ಕ್ಯಾಂಪೇನ್

ಇದಕ್ಕೂ ಮಿಗಿಲಾಗಿ ಭಾವನಾತ್ಮಕವಾದ ಸಪ್ರೇಮ ಸಂಬಂಧಗಳ ಆವರಣವೂ ಉತ್ತರಕರ್ನಾಟಕದ ಹಳ್ಳಿಗಳಲ್ಲಿದೆ. ಕಾತೂನಬೀ ನಮ್ಮೂರಲ್ಲಿ ಕಾತವ್ವ ಆಗುತ್ತಾಳೆ. ಮಸ್ತಾನಬೀ ಮಸ್ತಾನವ್ವ ಆದಂತೆ ಪೀರಭಾಷ ಪೀರಪ್ಪ ಆಗಿ, ಕ್ರಿಸ್ತರ ಫ್ರಾನ್ಸಿಸ್ ಪ್ರವೀಣನಾಗಿ, ನರ್ಸ್ ರೋಜಿ ರೋಜವ್ವಳಾಗಿ ಊರದೈವದ ನಡುವೆ ನಾವು ಪ್ರತ್ಯೇಕರಲ್ಲ ಎಂಬುದನ್ನ  ಊರಿನ ಪರಿಸರವೇ ಹೇಳಿಕೊಟ್ಟಂತೆ ಸಾಮಾಜಿಕ ನೈತಿಕತೆಯನ್ನು ಪಾಲಿಸಿಕೊಂಡು ಬದುಕುತ್ತಿದ್ದಾರೆ. ಸಾಣೆ ಹಿಡಿಯುವ ಅಲಿ, ಎತ್ತುಗಳಿಗೆ ನಾಲ್ ಬಡಿಯುವ ಸೈದು, ಹಗ್ಗಹೊಸೆಯುವ ಅಬ್ದುಲ್ ಅಷ್ಟೆ ಯಾಕೆ ನಮ್ಮೂರಿನ ಜಾತ್ರೋತ್ಸವಗಳಲ್ಲಿ ಲಯಬದ್ಧವಾಗಿ ಕಣಿಹಲಗಿಯಲ್ಲಿ ಕರಡಿಮಜಲಿನ ತಾಳ ಬಾರಿಸುವ ಹುಸೇನಪ್ಪನೂ, ದೇವರ ರಥದ ಮುಂದೆ ದೀಡನಮಸ್ಕಾರ ಹಾಕುವ ಜೈತೂನಕ್ಕಳೂ ಇವರೆಲ್ಲ ದೇಶಕ್ಕಿಂತ ಮೊದಲು ನಮ್ಮೂರಿನ ಪರಿಸರದಲ್ಲಿ ಹೇಗೆ ಬಾಳಬೇಕೆಂಬುದನ್ನ ಪೂರ್ವಪರಂಪರೆಯಿಂದ ರೂಢಿಸಿಕೊಂಡವರು.

‘ಒಬ್ಬ ಪರೋಕ್ಷ ತಾಯಿ ಹಲವಾರು ಪ್ರತ್ಯಕ್ಷ ತಾಯಿಯರ ಎದುರು ತನ್ನ ಮಕ್ಕಳ ನಿಷ್ಠೆಯನ್ನು ಗಳಿಸಲು ಸ್ಪರ್ಧಿಸುತ್ತಿದ್ದಾಳೆ’ ಅಂತ ಲೋಹಿಯಾ ಹೇಳುವ ವಿಶ್ವ ಏಕತೆಯ ರೂಪಕವನ್ನು ಇಂದಿನ ಭಾರತಕ್ಕೆ ಭಿನ್ನ ಧ್ವನಿಯಲ್ಲಿ ಅನ್ವಯಿಸಿಕೊಳ್ಳಬಹುದಾಗಿದೆ. ಭಿನ್ನ ಮಾತು, ಭಿನ್ನ ಕಾಕು, ಭಿನ್ನ ನಡವಳಿಕೆ, ಭಿನ್ನತೆಯನ್ನು ಒರೆಸಿ ಒಂದೇ ಪಡಿಯಚ್ಚಿನಲ್ಲಿ ಎರಕಹೊಯ್ಯುವ  ದಾವಂತದ ವೇಗವು ಈಗ ಹೆಚ್ಚು ಮೈ ಕಾವು ಕೊಡುತ್ತಿದೆ. ಸಪ್ರೇಮ ಸಂಬಂಧದ ದಿನಗಳನ್ನು ಕಳೆದುಕೊಳ್ಳುತ್ತ ಸಹಜವಾಗಿದ್ದ ಬದುಕನ್ನು  ಅಸಹನೀಯಗೊಳಿಸುವ, ಮತ್ತು ಉತ್ಪ್ರೇಕ್ಷೆ, ರೋಚಕತೆಯ ಸಂಗತಿಗಳನ್ನುಇತಿಹಾಸವಾಗಿಸುವ ಕಥನ ಶೈಲಿಗಳು ಇಂದಿನ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಆವರಣಗಳನ್ನು ಪ್ರವೇಶ ಮಾಡುತ್ತಿವೆ. ಹಲವು ಪ್ರತ್ಯಕ್ಷ ತಾಯಿಯರನ್ನು ಕಳೆದುಕೊಂಡು ಒಬ್ಬ ಪರೋಕ್ಷ ತಾಯಿಯ ಮಕ್ಕಳಾಗಿ ಎಂದು ಪ್ರೇರೇಪಿಸುವ ರಾಜಕೀಯ ಸಂಘಟನೆಗಳು ತಮ್ಮ ಇಚ್ಚಾಶಕ್ತಿಯನ್ನು ನಿರ್ಲಜ್ಜರಾಗಿ ಸಾಧಿಸುತ್ತಿರುವುದು ಗ್ರಾಮೀಣ ಸಮುದಾಯದ ಮೇಲೆ ಪರಿಣಾಮ ಬೀರುತ್ತಿದೆ. ಸದಾಶಯವಿಲ್ಲದ ರಾಜಕೀಯ ಕಾರಣಕ್ಕಾಗಿ ಹಲವು ಆವರಣಗಳ ವೈರುಧ್ಯವನ್ನು ಕೆಡವಿ ಯಾಂತ್ರಿಕತೆಯ ಬದುಕನ್ನು ಕಲ್ಪಿಸಿಕೊಳ್ಳುವುದಕ್ಕೂ ಘೋರವಾದ ಸಂಗತಿ. ಕೊಡುಕೊಳ್ಳುವಿಕೆ, ಸಂವಾದ, ವ್ಯವಹಾರ ನಿರಾಕರಣೆಯಾದರೆ ಇಂದ್ರಿಯಗಳು ನಿಷ್ಕ್ರೀಯಗೊಳ್ಳುತ್ತವೆ. ಅಂಥ ನಿಷ್ಕ್ರೀಯತೆ ಬರತೊಡಗಿದರೆ ನಾಗರೀಕತೆಯ ನಾಶ ಆರಂಭವಾಗುತ್ತದೆ ಎಂದು ಟಾಯ್ನಬೀ ಹೇಳಿರುವ ಕಾಲಕ್ಕೆ ನಾವು ಸಮೀಪದಲ್ಲಿದ್ದೇವೆ ಅಲ್ಲವೇ..?

ಕಗ್ಗೊಲೆಯ ಮುಖೇನ ಪ್ರತಿಷ್ಠಾಪಿತವಾದ ಸಿದ್ಧಾಂತ ಕೇಡನ್ನು ಬಯಸದೆ ಇನ್ನೇನನ್ನು  ಬಯಸಲು ಸಾಧ್ಯ..? ಸಮಗ್ರ ಭಾರತದ ಕಲ್ಪನೆಯನ್ನು ಕಂಡ ಗಾಂಧಿ  ಬಲಿಯಾದದ್ದು ಅಖಂಡ ಹಿಂದೂ ಭಾರತದ ಕಲ್ಪನೆಯ ಗುಂಡುಗಳಿಗೆ ಎನ್ನುವ ಚರಿತ್ರೆಯನ್ನು ನಾವು ನಮ್ಮ ನೆನಪಿನಿಂದ ಅಳಿಸಿಕೊಳ್ಳಬಾರದು.  ಹೇರಾಮ್ ಎಂದು ಕೊನೆಯುಸಿರೆಳೆದ ಮಹಾತ್ಮನ  ಆ ಮಾತು ಜೈಶ್ರೀರಾಮ ಎಂಬ ಘೋಷನೆಯಾಗುವ ವೈರುಧ್ಯವೂ ನಮ್ಮಲ್ಲಿದೆ. ನಮ್ಮ ಊರಿನಲ್ಲಿ ರಾಮನ ದೇವಸ್ಥಾನವಿಲ್ಲ ಆದರೆ ಪರಶುರಾಮನ ಗುಡಿಯಿದೆ ಎಂಬ ಎಚ್ಚರ ನಮ್ಮೊಳಗಿರಬೇಕಿದೆ. ಆ ಪರಶುರಾಮನ ತಾಯಿ ಯಲ್ಲವ್ವನ ಭಕ್ತನಾಗಿ ಗಂಡಿದ್ದವ ಹೆಣ್ಣಾಗಿ ಬದಲಾಗಿರುವ ನಂಬಿಗೆ ಧರ್ಮಗಳ ಗೊಡವೆ ಬೇಕಿಲ್ಲ. ಅವನ ತಾಯಿ ಎಷ್ಟೋ ಸಲ ಯಲ್ಲವ್ವನ ಗುಡ್ಡದ ಕಡೆ ಮುಖಮಾಡಿ ಕೈ ಮುಗಿದು ನಿಟ್ಟುಸಿರಿಡುವ ಸದ್ದು ಹೆಚ್ಚು ಸಂಚಲನ ಮಾಡುತ್ತದೆ. ಕಳೆದ ವರ್ಷ ಗಣೇಶನ ಹಬ್ಬಕ್ಕೆ ಸರಿಯಾಗಿ ಕೋವಿಡ್ ಆವರಿಸಿಕೊಂಡಿತ್ತಲ್ಲ ಅದಾದ ಕೆಲವೇ ದಿನಗಳಲ್ಲಿ ಅಲಾವಿ ಹಬ್ಬ ಬಂದಿತ್ತು. ಪೀರಲ ದೇವರು ಹೊತ್ತವ ಗಣೇಶನ ಹಬ್ಬ ಮಾಡಲಿಲ್ಲ ಏಕೆ ಎಂದು ಊರಿನ ಹಿರಿಯರನ್ನು ಯುವಕರನ್ನು ತರಾಟೆಗೆ ತೆಗೆದುಕೊಂಡ ಘಟನೆಯೊಂದು ಧಾರವಾಡ ಸಮೀಪದ ನುಗ್ಗಿಕೇರಿಯಲ್ಲಿ ನಡೆಯಿತು. ಇಂಥ ಎಷ್ಟೋ ಹಾಸುಹೊಕ್ಕಿರುವ ಜೀವನ ಶೈಲಿಗಳನ್ನು ಇಂದು ಮತ್ತೆ ಕಗ್ಗೊಲೆ ಮಾಡುತ್ತಿರುವ ಭಯ ಕಾಡುತ್ತಿದೆ. ಯಾರೇ ಇರಲಿ, ಯಾವ ಜಾತಿ/ಧರ್ಮವೇ ಆಗಲಿ ಬಹಷ್ಕರಿಸುವ ಚಿಂತನೆ ಅಮಾನುಷವಾದದ್ದು.

ಕೆಣಕುವ ಉದ್ಧೇಶದಿಂದ ರಾಜಕೀಯವಾಗಿ ಲಾಭವಾಗಬಹುದು ಆದರೆ ಕೆಣಕಿದ ಗಾಯ ಇತಿಹಾಸದಿಂದ ಮಾಯವಾಗದು. ಕೇಡು ಕಾವಿಗೆ ಕುಳಿತಿರುವ ಈ ಹೊತ್ತು ತಿಳಿಯಾಗಲಿ…

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ  : ದೇಗುಲದ ಪಕ್ಕದಲ್ಲಿನ ಚಪ್ಪಲಿ ಅಂಗಡಿ ತೆರವಿಗೆ ಆಗ್ರಹ; ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ

Published On - 5:19 pm, Thu, 24 March 22