
2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಹತ್ತನೇ ದಿನದಂದು ಭಾರತ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಬಂಗಾರದ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಮೊದಲಿಗೆ 54 ಕೆಜಿ ವಿಭಾಗದ ಮಹಿಳಾ ಬಾಕ್ಸಿಂಗ್ ಫೈನಲ್‌ನಲ್ಲಿ ಪ್ರೀತಿ ಪನ್ವಾರ್ ಚಿನ್ನ ಗೆದ್ದರೆ, ಅವರ ನಂತರ ಜಾಸ್ಮಿನ್ ಲಂಬೋರಿಯಾ ಕೂಡ ಬಂಗಾರದ ಪದಕಕ್ಕೆ ಮುತ್ತಿಟ್ಟರು(PC-PTI).

ಜಾಸ್ಮಿನ್ ಲಂಬೋರಿಯಾ 57 ಕೆಜಿ ವಿಭಾಗದ ಮಹಿಳೆಯರ ಬಾಕ್ಸಿಂಗ್ ಫೈನಲ್ ಸ್ಪರ್ಧೆಯಲ್ಲಿ ಉತ್ತರ ಐರ್ಲೆಂಡ್‌ನ ಮೈಕೆಲಾ ವಾಲ್ಷ್ ಅವರನ್ನು 5-0 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದರು. ಜಾಸ್ಮಿನ್ ಈ ಹಿಂದೆ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕಾಗಿ ಲೈಟ್‌ವೇಟ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು(PC-PTI).

ಅಂದರೆ ಇದು ಜಾಸ್ಮಿನ್ ಲಂಬೋರಿಯಾ ಅವರ ಎರಡನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕವಾಗಿದೆ. ಮಾತ್ರವಲ್ಲದೆ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಸತತ ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡಂತ್ತಾಗಿದೆ. ಈ ಎರಡು ಚಿನ್ನದ ಪದಕಗಳೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 7ಕ್ಕೇರಿದ್ದು, ಒಟ್ಟಾರೆ ಪದಕಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ(PC-PTI).

ಇದಕ್ಕೂ ಮೊದಲು ಜಾಸ್ಮಿನ್ ಲಂಬೋರಿಯಾ 2025 ರಲ್ಲಿ ನಡೆದಿದ್ದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದರು. ಈ ಫೈನಲ್ ಪಂದ್ಯದಲ್ಲಿ ಅವರು 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪೋಲೆಂಡ್‌ನ ಜೂಲಿಯಾ ಸ್ಜೆರೆಮೆಟಾ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರು(PC-PTI).

ಹರಿಯಾಣದ ಭಿವಾನಿ ಜಿಲ್ಲೆಯವರಾಗಿರುವ ಜಾಸ್ಮಿನ್ ಲಂಬೋರಿಯಾ ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಾಸ್ಮಿನ್ ಅವರ ತಂದೆ ಜೈವೀರ್ ಲಂಬೋರಿಯಾ ಗೃಹರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಜಾಸ್ಮಿನ್ ಅವರ ಮುತ್ತಜ್ಜ ಹವಾ ಸಿಂಗ್ ಭಾರತದ ಪ್ರಸಿದ್ಧ ಹೆವಿವೇಯ್ಟ್ ಬಾಕ್ಸರ್ ಆಗಿದ್ದರು. ಅವರು ಎರಡು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದರು(PC-PTI).