
ದೆಹಲಿಯಲ್ಲಿ ನಡೆಯುತ್ತಿರುವ 2026 ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಐದನೇ ದಿನದಂದು ಭಾರತದ ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐತಿಹಾಸಿಕ ಜಯ ಸಾಧಿಸುವ ಮೂಲಕ ಸೆಮಿಫೈನಲ್ಗೆ ಅರ್ಹತೆ ಪಡೆದಿದೆ. ಈ ಮೂಲಕ ಭಾರತಕ್ಕೆ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿದೆ.

ಶುಕ್ರವಾರ ನಡೆದ ರಣ ರೋಚಕ ಪಂದ್ಯದಲ್ಲಿ, ಶ್ರೇಯಾಂಕವಿಲ್ಲದ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ 1 ಗಂಟೆ 9 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಚೀನಾದ ಪ್ರಬಲ ಜೋಡಿ ಜಿಯಾ ಯಿ ಫ್ಯಾನ್ ಮತ್ತು ಜಾಂಗ್ ಶು ಜಿಯಾನ್ ಅವರನ್ನು 16-21, 21-15, 21-13 ಸೆಟ್‌ಗಳಿಂದ ಸೋಲಿಸಿತು.

ಈ ಗೆಲುವು ಭಾರತೀಯ ಬ್ಯಾಡ್ಮಿಂಟನ್‌ಗೆ ಮಹತ್ವದ್ದಾಗಿದೆ, ಏಕೆಂದರೆ ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತ ಕಳೆದ 15 ವರ್ಷಗಳಿಂದ ಪದಕ ಗೆದ್ದಿಲ್ಲ. ಕೊನೆಯ ಬಾರಿಗೆ 2011 ರಲ್ಲಿ ಭಾರತದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಕಂಚಿನ ಪದಕ ಗೆದ್ದಿತ್ತು.

ದೆಹಲಿಯ ಇಂದಿರಾ ಗಾಂಧಿ ಅರೆನಾದಲ್ಲಿ ನಡೆದ ಈ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಎದುರು ಮೊದಲ ಗೇಮ್ನ ಆರಂಭದಲ್ಲಿ ಚೀನಾ ಆಟಗಾರ್ತಿಯರು 1-6 ಅಂತರದಲ್ಲಿ ಮುನ್ನಡೆ ಸಾಧಿಸಿದರು. ನಂತರ ಭಾರತೀಯ ಜೋಡಿ ಸತತ ಆರು ಪಾಯಿಂಟ್‌ಗಳನ್ನು ಗಳಿಸಿ ಅಂತರವನ್ನು 8-9ಕ್ಕೆ ಇಳಿಸಿತ್ತಾದರೂ ಚೀನಾ ಜೋಡಿ ಮೊದಲ ಗೇಮ್ ಅನ್ನು 21-16ರಿಂದ ಗೆದ್ದುಕೊಂಡಿತು.

ಆದರೆ ಎರಡನೇ ಗೇಮ್ ಅನ್ನು ಭಾರತದ ಜೋಡಿ 21-15ರಿಂದ ಗೆದ್ದು ಪಂದ್ಯವನ್ನು ಸಮಬಲಗೊಳಿಸಿತು. ಮೂರನೇ ಗೇಮ್‌ನಲ್ಲಿ, ಭಾರತೀಯ ಜೋಡಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ವಿರಾಮದ ವೇಳೆಗೆ 11-5 ಅಂತರದ ಮುನ್ನಡೆ ಸಾಧಿಸಿತು. ಭಾರತದ ದಾಳಿ ಮತ್ತು ಒತ್ತಡದಿಂದಾಗಿ ಚೀನಾದ ಆಟಗಾರ್ತಿಯರು ಅನಗತ್ಯ ತಪ್ಪುಗಳನ್ನು ಮಾಡಲು ಪ್ರಾರಂಭಿಸಿದರು. ಇದರ ಲಾಭ ಪಡೆದ ಭಾರತೀಯ ಜೋಡಿ ಒಂಬತ್ತು ಮ್ಯಾಚ್ ಪಾಯಿಂಟ್‌ಗಳನ್ನು ಗಳಿಸಿ ಅಂತಿಮವಾಗಿ ಪಂದ್ಯವನ್ನು 21-13 ಅಂತರದಿಂದ ಗೆದ್ದಿತು.