Updated on: Apr 14, 2023 | 3:24 PM
ದಕ್ಷಿಣ ಭಾರತವು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಸ್ಥಳವಾಗಿದೆ. ಇಲ್ಲಿನ ಪ್ರತಿಯೊಂದು ರಾಜ್ಯದಲ್ಲೂ ಹಲವಾರು ವಿಶಿಷ್ಟ ಪ್ರವಾಸಿ ತಾಣಗಳಿವೆ. ಪಶ್ಚಿಮ ಘಟ್ಟಗಳು, ಕಡಲತೀರಗಳು, ಟೀ ಕಾಫಿ ತೋಟಗಳು, ಜಲಪಾತ, ಬೆಟ್ಟಗುಡ್ಡ ಹೀಗೆ ಹಲವಾರು ನೈಸರ್ಗಿಕ ಸೌಂದರ್ಯವನ್ನು ದಕ್ಷಿಣ ಭಾರತದಲ್ಲಿ ಕಾಣಬಹುದು. ಈ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಪ್ರಾಕೃತಿಕ ತಾಣಗಳಿಗೆ ಪ್ರವಾಸ ಹೋಗಲು ಹೆಚ್ಚಿನ ಜನರು ಬಯಸುತ್ತಾರೆ. ಅಂತಹವರಿಗೆ ದಕ್ಷಿಣ ಭಾರತದಲ್ಲಿನ ಈ ಕೆಲವೊಂದು ರುದ್ರರಮಣೀಯ ಸ್ಥಳಗಳು ಪ್ರವಾಸ ಕೈಗೊಳ್ಳಲು ಬಹಳ ಯೋಗ್ಯವಾದ ತಾಣಗಳಾಗಿವೆ. ಪ್ರಕೃತಿ ಪ್ರೇಮಿಗಳು ತಪ್ಪದೇ ಭೇಟಿ ನೀಡಲೇಬೇಕಾದ ದಕ್ಷಿಣ ಭಾರತದ 7 ಪ್ರವಾಸಿ ತಾಣಗಳು ಇಲ್ಲಿದೆ
ತೆಕ್ಕಾಡಿ: ಪಶ್ಚಿಮ ಘಟ್ಟಗಳಲ್ಲಿ ನೆಲೆಯಾಗಿರುವ ತೆಕ್ಕಾಡಿ ಪ್ರದೇಶವು ವನ್ಯ ಜೀವಿಗಳ ಪಾಲಿನ ಸ್ವರ್ಗ. ಈ ಸ್ಥಳ ಕೇರಳ ರಾಜ್ಯದಲ್ಲಿದೆ. ಪೆರಿಯಾರ್ ವನ್ಯಜೀವಿ ಅಭಯಾರಣ್ಯಕ್ಕೆ ನೆಲೆಯಾಗಿರುವ ಈ ತಾಣವು ವನ್ಯಜೀವಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ವೀಕ್ಷಿಸಲು ಅವಕಾಶವನ್ನು ನೀಡುತ್ತದೆ. ಆನೆಗಳು, ಕಾಡೆಮ್ಮೆ ಹಾಗೂ ಹುಲಿಗಳನ್ನು ವೀಕ್ಷಿಸಲು ನೀವು ಪೆರಿಯಾರ್ ಸರೋವರದ ಮೇಲೆ ದೋಣಿ ಸವಾರಿ ಹೋಗಬಹುದು.
ಮಡಿಕೇರಿ: ಭಾರತದ ಸ್ಕಾಟ್ಲ್ಯಾಂಡ್ ಸಿಟಿ ಎಂದು ಕರೆಯಲ್ಪಡುವ ಮಡಿಕೆರಿಯು ಬೆಟ್ಟಗಳು ಮತ್ತು ಮಂಜಿನ ಭೂದೃಶ್ಯಗಳಿಂದ ಆವರಿಸಲ್ಪಟ್ಟಿದೆ. ಮಡಿಕೇರಿಯಲ್ಲಿ ಹಲವಾರು ಅದ್ಭುತ ತಾಣಗಳಿವೆ. ಇಲ್ಲಿನ ಅಬ್ಬೆ ಜಲಪಾತಕ್ಕೆ ನೀವು ಟ್ರೆಕ್ಕಿಂಗ್ ಹೋಗಬಹುದು ಜೊತೆಗೆ ದುಬಾರೆ ಆನೆಗಳ ಶಿಬಿರಕ್ಕೂ ಭೆಟಿ ನೀಡಬಹುದು.
ಊಟಿ: ಚಹಾ ತೋಟಗಳು ಮತ್ತು ಗಿರಿಧಾಮಗಳ ಪ್ರಾಕೃತಿಕ ದೃಶ್ಯಗಳ ಸೌಂದರ್ಯವನ್ನು ಸವಿಯಲು ನೀವು ಊಟಿಗೆ ಪ್ರವಾಸ ಕೈಗೊಳ್ಳಬಹುದು. ಇದೊಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿನ ಪ್ರಕೃತಿಯ ವಿಹಂಗಮ ನೋಟವನ್ನು ಸವಿಯಲು ನೀಲಗಿರಿ ಮೌಂಟೇನ್ ರೈಲ್ವೆಯಲ್ಲಿ ಪ್ರಯಾಣ ಮಾಡಿ. ಮತ್ತು ದೊಡ್ಡ ಬೆಟ್ಟ ಶಿಖರಕ್ಕೆ ಟ್ರೆಕ್ಕಿಂಗ್ ಕೈಗೊಳ್ಳಿ.
ಕುಮಾರಕೋಮ್: ನೀವು ಶಾಂತವಾದ ವಿಹಾರವನ್ನು ಹುಡುಕುತ್ತಿದ್ದರೆ, ಕುಮಾರಕೋಮ್ ಗೆ ಪ್ರವಾಸ ಕೈಗೊಳ್ಳಿ. ಕೇರಳದ ಈ ಹಿನ್ನೀರಿನ ತಾಣವು ಶಾಂತವಾದ ಜಲಮಾರ್ಗಗಳು ಮತ್ತು ಪಕ್ಷಿವೀಕ್ಷಣೆಗಳಿಗೆ ಹೆಸರುವಾಸಿಯಾಗಿದೆ. ಈ ಹಿನ್ನೀರಿನ ಪ್ರದೇಶವನ್ನು ಅನ್ವೇಷಿಸಲು ಹೌಸ್ಬೋಟ್ ಸವಾರಿ ಮಾಡಿ ಜೊತೆಗೆ ಕುಮಾರಕೋಮ್ ಪಕ್ಷಿಧಾಮಕ್ಕೆ ಭೆಟಿ ನೀಡಿ.
ಪಾಂಡಿಚೇರಿ: ಐರೋಪ್ಯ ನೋಟದ ಆಕರ್ಷಣೆಗೆ ಹೆಸರುವಾಸಿಯಾದ ಪಾಂಡಿಚೇರಿ, ದಕ್ಷಿಣ ಭಾರತದ ವಿಶಿಷ್ಟ ಪ್ರವಾಸಿ ತಾಣವಾಗಿದೆ. ಈ ಕರಾವಳಿ ಪಟ್ಟಣವು ಸುಂದರವಾದ ಕಡಲತೀರಗಳು, ಕೆಫೆಗಳು ಮತ್ತು ಫ್ರೆಂಚ್ ವಸಾಹತುಶಾಹಿ ವಾಸ್ತುಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಪ್ರಕೃತಿಪ್ರಿಯರಿಗೆ ಭೇಟಿ ನೀಡಲು ಯೋಗ್ಯವಾದ ಪ್ರವಾಸಿ ತಾಣ ಇದಾಗಿದೆ.
Published On - 3:24 pm, Fri, 14 April 23