
ಕರ್ನಾಟಕ ಮತ್ತು ಆಂಧ್ರ ಗಡಿ ಭಾಗದ ಗ್ರಾಮದ ಜನರ ಆರಾಧ್ಯ ದೇವಿ ಮಾರಮ್ಮನ ಅದ್ಧೂರಿ ಉತ್ಸವ ಮೂರ್ತಿ ಮೆರವಣಿಗೆ ವೇಳೆ ಕೋಳಿ ತೂರಿ ಹರಕೆ ತೀರಿಸುವ ಭಕ್ತರು. ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ಜನಸಾಗರ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ.

ಪ್ರತಿ ವರ್ಷಕ್ಕೊಮ್ಮೆ ಈ ಗ್ರಾಮದಲ್ಲಿ ಮಾರಮ್ಮ ದೇವಿಯ ಜಾತ್ರೆ, ಉತ್ಸವ ಸಂಭ್ರಮದಿಂದ ನಡೆಯುತ್ತದೆ. ಕರ್ನಾಟಕ ಮಾತ್ರ ಅಲ್ಲದೆ ಆಂಧ್ರ ಪ್ರದೇಶದಿಂದಲೂ ಭಕ್ತರು ಆಗಮಿಸುತ್ತಾರೆ. ಗ್ರಾಮದ ದೇಗುಲದಿಂದ ಹೊರವಲಯದಲ್ಲಿರುವ ಮಾರಮ್ಮ ದೇವಿಯ ಪ್ರದೇಶದವರೆಗೆ ಭವ್ಯ ಮೆರವಣಿಗೆ ನಡೆಯುತ್ತದೆ.

ಈ ವೇಳೆ ಹರಕೆ ಹೊತ್ತ ಭಕ್ತರು ಹೂವು, ಹಣ್ಣು ಮತ್ತು ಕೆಲವರು ಕೋಳಿಗಳನ್ನು ತೂರಿ ಹರಕೆ ತೀರಿಸುವ ಆಚರಣೆ ಕಾಲಾನುಕಾಲದಿಂದ ನಡೆದುಕೊಂಡು ಬಂದಿದೆ.

ಇನ್ನು ಮಧ್ಯಾಹ್ನದ ಮಾರಮ್ಮ ಎಂದೇ ಕರೆಯುವ ಈ ದೇವಿಯ ಉತ್ಸವ ಮಧ್ಯಾಹ್ನದ ವೇಳೆ ಅದ್ಧೂರಿಯಾಗಿ ನಡೆಯುತ್ತದೆ. ಸಂಜೆ ವೇಳೆ ತುಂಬುಲು ಪ್ರದೇಶದಲ್ಲಿನ ದೇಗುಲ ಬಳಿ ಒಬ್ಬರ ಮೇಲೊಬ್ಬರು ಏರಿ ಕಲ್ಲಿನ ಕಂಬವೇರಿ ದೀಪ ಬೆಳಗುತ್ತಾರೆ. ಆ ಮೂಲಕ ಮಳೆ, ಬೆಳೆ ಸಮೃದ್ಧಿಯಾಗಿದ್ದು, ಜನರ ಬದುಕು ಬೆಳಗಲಿ ಎಂದು ಆರಾಧ್ಯ ದೇವಿಯಲ್ಲಿ ಪ್ರಾರ್ಥಿಸುತ್ತಾರೆ.

ಸಂಕಷ್ಟ ಪರಿಹಾರಕ್ಕಾಗಿ ಭಕ್ತರು ವಿವಿಧ ಹರಕೆಗಳನ್ನು ಹೊತ್ತಿರುತ್ತಾರೆ. ಜಾನುವಾರು, ಕುರಿ-ಕೋಳಿ ಸಾಕಣೆಯೇ ಪ್ರಮುಖ ಕಸುಬಾಗಿರುವ ಈ ಭಾಗದ ಜನರು ಕುರಿ-ಕೋಳಿ ರಕ್ಷಣೆಗೂ ಹರಕೆ ಹೊತ್ತಿರುತ್ತಾರೆ. ಹೀಗಾಗಿ, ರಕ್ಷಿಸಿದ ದೇವಿಗೆ ಭಕ್ತರು ಕುರಿ, ಕೋಳಿಗಳನ್ನೇ ಅರ್ಪಿಸುವ ಮೂಲಕ ಹರಕೆ ತೀರಿಸುತ್ತಾರಂತೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಗಡಿ ಭಾಗದಲ್ಲಿ ಈ ಭಾಗದ ಬುಡಕಟ್ಟು ಸಮುದಾಯದ ಸಂಸ್ಕೃತಿ ಅನಾವರಣಗೊಂಡಿದೆ. ಪರಂಪರಾಗತವಾಗಿ ಆಚರಿಸಿಕೊಂಡು ಬಂದ ಜಾತ್ರೆ, ಉತ್ಸವಗಳು ಇಂದಿಗೂ ಯಥಾವತ್ತಾಗಿ ನಡೆಯುತ್ತಿವೆ. ವಿಶೇಷ ಉತ್ಸವಗಳು ಈ ಭಾಗದ ಜನರ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿದೆ.
Published On - 6:15 pm, Wed, 4 September 24