ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ನೇಮಕವಾಗಿದ್ದಾರೆ. ಕಳೆದ ಸೀಸನ್ನಲ್ಲಿ ಆರ್ಆರ್ ತಂಡದ ಕೋಚ್ ಆಗಿ ಕುಮಾರ ಸಂಗಾಕ್ಕರ ಕಾರ್ಯ ನಿರ್ವಹಿಸಿದ್ದರು. ಇದೀಗ ಈ ಸ್ಥಾನಕ್ಕೆ ಟೀಮ್ ಇಂಡಿಯಾದ ಮಾಜಿ ಕೋಚ್ ದ್ರಾವಿಡ್ ಅವರನ್ನು ಆಯ್ಕೆ ಮಾಡಲಾಗಿದೆ. ಐಪಿಎಲ್ 2025 ರಲ್ಲಿ ಆರ್ಆರ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾಣಿಸಿಕೊಳ್ಳಲಿದ್ದಾರೆ.
ಮತ್ತೊಂದೆಡೆ ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿ ಕಾಣಿಸಿಕೊಂಡಿದ್ದ ಕುಮಾರ ಸಂಗಾಕ್ಕರ RR ಫ್ರಾಂಚೈಸಿಯ ಡೈರೆಕ್ಟರ್ ಹುದ್ದೆಯಲ್ಲಿ ಮುಂದುವರೆಯುವ ಸಾಧ್ಯತೆಯಿದೆ. IPL 2021 ರವರೆಗೆ ಸಂಗಾಕ್ಕರ ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಅದೇ ಹುದ್ದೆಗೆ ಅವರನ್ನು ಪುನರ್ ನೇಮಕ ಮಾಡುವ ಸಾಧ್ಯತೆಯಿದೆ.
ಈ ಹಿಂದೆ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ. 2011 ರಿಂದ 2013ರವರೆಗೆ ಅವರು ಆರ್ಆರ್ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ 46 ಪಂದ್ಯಗಳನ್ನಾಡಿರುವ ದ್ರಾವಿಡ್ 7 ಅರ್ಧಶತಕಗಳೊಂದಿಗೆ 1276 ರನ್ ಕಲೆಹಾಕಿದ್ದಾರೆ.
ಇದಾದ ಬಳಿಕ 2014 ಮತ್ತು 2015 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ತನ್ನ ಮಾಜಿ ಆಟಗಾರರನ್ನೇ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿರುವುದು ವಿಶೇಷ.
ಅಂದಹಾಗೆ ರಾಹುಲ್ ದ್ರಾವಿಡ್ ಅವರನ್ನು ಹೆಡ್ ಕೋಚ್ ಆಗಿ ನೇಮಿಸಿಕೊಳ್ಳಲು ಮುಖ್ಯ ಕಾರಣ 2024ರ ಟಿ20 ವಿಶ್ವಕಪ್ನಲ್ಲಿನ ಭಾರತ ತಂಡದ ಪ್ರದರ್ಶನ. ಯುಎಸ್ಎ-ವೆಸ್ಟ್ ಇಂಡೀಸ್ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಾಗಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಭಾರತ ತಂಡದ ಕೋಚ್ ಹುದ್ದೆಯಿಂದ ನಿವೃತ್ತರಾಗಿರುವ ದ್ರಾವಿಡ್ ಅವರನ್ನು ಮುಖ್ಯ ತರಬೇತುದಾರನಾಗಿ ನೇಮಿಸಿಕೊಳ್ಳುವಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ.
Published On - 3:00 pm, Wed, 4 September 24