ಕೆಲವೊಮ್ಮೆ ಆರೋಗ್ಯವನ್ನು ಎಷ್ಟೇ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದುಕೊಂಡರೂ ದೇಹ ಒಪ್ಪುವುದಿಲ್ಲ. ಪದೇ ಪದೇ ಆಯಾಸ, ನಿಶ್ಯಕ್ತತತೆ ನಮ್ಮನ್ನು ಕಾಡುತ್ತದೆ. ಅದಕ್ಕೆ ನಾವು ನಮ್ಮ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ದೇಹಕ್ಕೆ ಹೊಸ ಹುಮ್ಮಸ್ಸು ಬರುವಂತೆ ಮಾಡಬಹುದು.
ಉತ್ತಮ ಆರೋಗ್ಯ ಕಾಪಾಡಿಕೊಂಡು ಆಯಾಸ, ನಿಶ್ಯಕ್ತಿಯನ್ನು ಕಡಿಮೆ ಮಾಡಿಕೊಳ್ಳಲು ಆರೋಗ್ಯ ತಜ್ಞೆಯಾಗಿರುವ ಪೂಜಾ ಗಣೇಶ್ ಅವರು ಕೆಲವು ಸಲಹೆಗಳನ್ನು ನೀಡಿದ್ದು ಅವುಗಳನ್ನು ಅನುಸರಿಸುವ ಮೂಲಕ ಇಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಾದರೆ ಅವರು ಈ ಬಗ್ಗೆ ಹೇಳುವುದೇನು ತಿಳಿದುಕೊಳ್ಳಿ.
ಅವರು ತಮ್ಮ ಇನ್ಸ್ಟಾ (nutritionist_inkannada) ಖಾತೆಯಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಬೆಳಿಗ್ಗೆ ತಿಂಡಿಯಲ್ಲಿ ಬಾಳೆಹಣ್ಣು ಚಿಕ್ಕು ಹಣ್ಣು ಜೊತೆಗೆ ಒಂದು ಲೋಟ ಹಾಲು ಸೇವಿಸಿ (ಮಧುಮೇಹ ಇರುವವರು ತ್ಯಜಿಸಿ) ಎಂದಿದ್ದಾರೆ.
ದಿನಕ್ಕೆ 2 ಖರ್ಜುರ 2 ಒಣ ದ್ರಾಕ್ಷಿ, 3 ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಪ್ರತಿನಿತ್ಯ ರಾತ್ರಿ, ಕನಿಷ್ಠ 7 ಗಂಟೆ ನಿದ್ದೆ ಮಾಡುವುದನ್ನು ಮರೆಯಬೇಡಿ. ವಾರದಲ್ಲಿ ಮೂರು ಬಾರಿ ಮಧ್ಯಾಹ್ನದ ಸಮಯದಲ್ಲಿ ನೆಲ್ಲಿಕಾಯಿ, ಸೇಬು, ಕ್ಯಾರೆಟ್ ಜ್ಯೂಸ್ ಅನ್ನು ಸೇವನೆ ಮಾಡಿ.
ಜೋಳ, ನವಣೆ, ಓಟ್ಸ್, ರಾಗಿ ಇವುಗಳಲ್ಲಿ ಒಂದನ್ನು ಪ್ರತಿನಿತ್ಯ ಊಟದಲ್ಲಿ ಬಳಸಿಕೊಳ್ಳಿ. ಆದಷ್ಟು ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಇಲ್ಲಿ ತಿಳಿಸಿರುವ ಸಲಹೆಗಳನ್ನು ಪ್ರಯತ್ನಿಸಿದ ಮೇಲೂ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ವೈದ್ಯರನ್ನು ಸಂಪರ್ಕಿಸಿ ಕೆಲವು ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.