- Kannada News Photo gallery Kodagu Girl's Yoga World Record: 10-Year-Old Sets 3 New Marks, Karnataka news in kannada
ಯೋಗದಲ್ಲಿ ವಿಶ್ವದಾಖಲೆ ಬರೆದ ಕೊಡಗಿನ ಹತ್ತರ ಪೋರಿ: ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗರಿ
ಕೊಡಗು ಜಿಲ್ಲೆಯ ಮದೆನಾಡಿನ 10 ವರ್ಷದ ಬಾಲಕಿ ಸಿಂಚನಾ ಯೋಗದಲ್ಲಿ ಮೂರು ವಿಭಿನ್ನ ಆಸನಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ತನ್ನ ತಾಯಿಯ ಮಾರ್ಗದರ್ಶನದಲ್ಲಿ 6 ವರ್ಷಗಳಿಂದ ಯೋಗ ಅಭ್ಯಾಸ ಮಾಡುತ್ತಿರುವ ಸಿಂಚನಾ, ಡಿಂಬಾಸನ, ಉರಭ್ರಾಸನ ಮತ್ತು ಮೃಗಮುಖಾಸನಗಳಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾಳೆ. ಈ ಸಾಧನೆಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗರಿ ಸಂದಿದೆ.
Updated on:Mar 14, 2025 | 3:42 PM

ಆಕೆ ಇನ್ನೂ 10ರ ಹರೆಯದ ಬಾಲಕಿ. ಆದರೆ ಸಾಧನೆ ಮಾತ್ರ ವಿಶ್ವವೇ ನಿಬ್ಬರಗಾಗುವಷ್ಟು. ಹೌದು ಯೋಗದಲ್ಲಿ ಈ ಬಾಲಕಿ ಮಾಡಿರುವ ಸಾಧನೆ ವಿಶ್ವ ದಾಖಲೆ ನಿರ್ಮಿಸಿದೆ. ಅಷ್ಟಕ್ಕೂ ಯಾರು ಆ ಬಾಲಕಿ, ಏನು ದಾಖಲೆ ಮಾಡಿದ್ದು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಈಕೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ಸಿಂಚನಾ. ರೇಣುಕಾ ಮತ್ತು ಕೀರ್ತಿ ಕುಮಾರ್ ದಂಪತಿಯ ಪುತ್ರಿ. ಕಳೆದ ಆರು ವರ್ಷಗಳಿಂದ ಸತತ ಯೋಗಾಭ್ಯಾಸ ಮಾಡ್ತಾ ಇರೋ ಈಕೆಗೆ ತಾಯಿಯೇ ಗುರು. ತಾಯಿ ಹೇಳಿ ಕೊಟ್ಟ ವಿರ್ಧಯೆಯಯನ್ನ ಕಲಿತ ಈಕೆ ಇದೀಗ ಮೂರು ಆಸನಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ತಾನು ಓದುತ್ತಿರುವ ಮದೆನಾಡು ಬಿಜಿಎಸ್ ಶಾಲೆಯಲ್ಲಿ ಇದಕ್ಕಾಗಿ ವೇದಿಕೆ ನಿರ್ಮಿಸಲಾಗಿತ್ತು. ದೇಹವನ್ನ ಬಿಲ್ಲಿನಿಂತೆ ಹಿಮ್ಮುಖವಾಗಿ ಬಗ್ಗಿಸಿ ಕಾಲನ್ನ ಹಿಡಿದು ಒಂದು ನಿಮಿಷದಲ್ಲಿ 15 ಮೀಟರ್ ನಡೆಯುವ ಮೂಲಕ ಡಿಂಬಾಸನ ಮಾಡಿ ದಾಖಲೆ ಬರೆದಿದ್ದಾಳೆ. ಇದಾದ ಬಳಿಕ ಉರಭ್ರಾಸನ ಪ್ರದರ್ಶಿಸಿ ಅದರಲ್ಲೂ ತನ್ನದೇ ದಾಖಲೆಯನ್ನ ಮುರಿದು ಹೊಸ ದಾಖಲೆ ಬರೆದಿದ್ದಾಳೆ. ಬಳಿಕ ಮೃಗಮುಖಾಸನದಲ್ಲಿಯೂ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ತನ್ನ ಪುಟ್ಟ ದೇಹವನ್ನ ರಬ್ಬರನಿಂತೆ ಬಗ್ಗಿಸಿ ಮಾಡಿದ ಯೋಗಾಸನ ರೋಚಕವಾಗಿತ್ತು. ಸಾಮಾನ್ಯವಾಗಿ ದೇಹವನ್ನಹಿಂದಕ್ಕೆ ಬಾಗಿಸಿ ಕಾಲನ್ನು ಹಿಡಿದು ನಿಲ್ಲುವುದೇ ಕಷ್ಟ. ಅಂತಹದ್ದರಲ್ಲಿ 15 ಮೀಟರ್ ದೂರ ನಡೆದು ಅಸಾಧಾರಣ ಸಾಧನೆ ಮಾಡಿದ್ದಾಳೆ.

ಬಿಜಿಎಸ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಸಿಂಚನಾ, ಚಿಕ್ಕಂದಿನಲ್ಲಿ ತಂದೆ ಯೋಗ ಮಾಡುವಾಗ ಅದನ್ನ ಕುತೂಹಲದಿಂದ ನೋಡುತ್ತಿದ್ದಳಂತೆ. ತಾನೂ ದೇಹ ಬಗ್ಗಿಸಿ ಯೋಗ ಮಾಡಲು ಪ್ರಯತ್ನಿಸುತ್ತಿದ್ದಳು. ಇದನ್ನು ಗಮನಿಸಿದ ತಾಯಿ ರೇಣುಕಾ ಮಗಳಿಗೆ ಯೂಟ್ಯೂಬ್ ನೋಡಿ ಯೋಗ ಹೇಳಿಕೊಟ್ಟಿದ್ದಾರೆ. ಇದನ್ನ ಆಸಕ್ತಿಯಿಂದ ಕಲಿತ ಸಿಂಚನಾ ಇಂದು ವಿಶ್ವದಾಖಲೆ ಬರೆದಿದ್ದಾಳೆ.

ಇದನ್ನ ವೀಕ್ಷಿಸಲು ದೆಹಲಿಯಿಂದ ವರ್ಲ್ಸ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ಸಿಬ್ಬಂದಿ ಆಗಮಿಸಿದ್ದರು. ಯೋಗ ಸಾಧನೆಯನ್ನ ಪರಿಶಿಲಿಸಿ ಸ್ಥಳದಲ್ಲೇ ದಾಖಲೆ ಪತ್ರ ನೀಡಿ ಗೌರವಿಸಿದ್ದಾರೆ. ಮುಂದೆ ಮತ್ತಷ್ಟು ದಾಖಲೆ ಬರೆಯುವಂತೆ ಪ್ರೋತ್ಸಾಹಿಸಿದ್ದಾರೆ. ಸದ್ಯ ವರ್ಲ್ಡ್ ಬುಕ್ ರೆಕಾರ್ಡ್ನಲ್ಲಿ ದಾಖಲೆ ಮಾಡಿರುವ ಸಿಂಚನ, ಮುಂದೆ ಗಿನ್ನೆಸ್ ದಾಖಲೆ ಬರೆಯಲು ಈಗಾಗಲೇ ಅಭ್ಯಾಸ ಮಾಡುತ್ತಿದ್ದಾರೆ.
Published On - 3:40 pm, Fri, 14 March 25
























