ಬಾಗಲಕೋಟೆ: ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸಿದ್ದೇಶ್ವರ ಜಾತ್ರೆಯ ಸಡಗರ ಮನೆ ಮಾಡಿದೆ. ಜಾತ್ರೆ ಪ್ರಯುಕ್ತ ಪ್ರತಿನಿತ್ಯ ಗ್ರಾಮದಲ್ಲಿ ಒಂದೊಂದು ಗ್ರಾಮೀಣ ಕ್ರೀಡೆಗಳನ್ನು ಆಯೋಜನೆ ಮಾಡಿದ್ದಾರೆ.
ಟಗರಿನ ಕಾಳಗ, ಬಂಡಿ ಓಟ, ಕುಸ್ತಿ ಸೇರಿದಂತೆ ಬಾರ ಎತ್ತುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ 20, 25, 50, 100, 120 ಕೆ.ಜಿ ಬಾರದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ರೋಚಕವಾಗಿತ್ತು.
ಬಲಶಾಲಿಗಳು ಒಂದೆ ಕೈಯಲ್ಲಿ ಕಲ್ಲು ಎತ್ತಿ ಬಿಸಾಕುತ್ತಿದ್ದರೆ, ನೆರೆದ ಜನರು ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸುತ್ತಿದ್ದರು. ಬಲಭೀಮರಂತೆ ಕಲ್ಲಿನ ಜೊತೆ ಸೆಣಸಾಡಿದ ಜಟ್ಟಿಗಳು ಮೈ ಬಗ್ಗಿಸಿ ನೋಡ ನೋಡುತ್ತಿದ್ದಂತೆ ಕಲ್ಲು ಎತ್ತುವ ಪರಿ ಜನರನ್ನು ರೋಮಾಂಚನಗೊಳಿಸಿತ್ತು.
ಒಂದು ಕಡೆ ಸಂಗ್ರಾಣಿ ಕಲ್ಲು ಎತ್ತುತ್ತಿದ್ದರೆ, ಇನ್ನೊಂದು ಕಡೆ ಕ್ವಿಂಟಲ್ ಬಾರದ ಚೀಲ ಹೊತ್ತು 200 ಮೀಟರ್ ದೂರ ಸಾಗುವ ಸ್ಪರ್ಧೆ ನೋಡುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಆಯೋಜಕರು ಹಾಕಿದ ಮಾರ್ಕಿನಲ್ಲಿ ಯಾರು ಹೆಚ್ಚು ಸುತ್ತು ಚೀಲ ಹೊತ್ತು ಸಾಗುತ್ತಾರೊ ಅವರಿಗೆ ಬಹುಮಾನ ನಿಗಧಿ ಮಾಡಲಾಗಿತ್ತು.
ಸಂಗ್ರಾಣಿ ಕಲ್ಲು ಎತ್ತುವುದು ಹಾಗೂ ಚೀಲ ಹೊರುವ ಸ್ಪರ್ಧೆಗಳಿಗೆ ಪ್ರಥಮ ಬಹುಮಾನ 5001, ಧ್ವಿತೀಯ 3001, ತೃತೀಯ 2001 ನಿಗಧಿ ಮಾಡಲಾಗಿತ್ತು. ಚೀಲ ಹೊತ್ತು ಸಾಗುವ ಸ್ಪರ್ಧೆಯಲ್ಲಿ ಮುಧೋಳ ತಾಲ್ಲೂಕಿನ ಜಾಲಿಕಟ್ಟಿ ಗ್ರಾಮದ ಹನುಮಂತ ಕಳಸಣ್ಣವರ ಚೀಲ ಹೊತ್ತು ೨೧ ಸುತ್ತು ಸಾಗಿ ಮೊದಲ ಸ್ಥಾನ ಪಡೆದರು.ಹನುಮಂತ ಸ್ನೇಹಿತರು ಆತನ ಕೊರಳಿಗೆ ಮಾಲೆ ಹಾಕಿ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.
ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯಿಂದ ಸಾಹಸಿಗಳು ಭಾಗಿಯಾಗಿ ತಮ್ಮ ಶಕ್ತಿಪ್ರದರ್ಶನ ಮಾಡಿದರು.ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸುವ ಉದ್ದೇಶ,ಯುವಕರನ್ನು ದೈಹಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶದಿಂದ ಸಿದ್ದೇಶ್ವರ ಜಾತ್ರಾ ಕಮೀಟಿಯ ಬಸವೇಶ್ವರ ಗೆಳೆಯರ ಬಳಗದಿಂದ ಈ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಒಟ್ಟಿನಲ್ಲಿ ನಶಿಸಿ ಹೊರಟಿರುವ ಗ್ರಾಮೀಣ ಕ್ರೀಡೆಗಳನ್ನು ಶಿರೂರು ಗ್ರಾಮಸ್ಥರು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದೇಶ್ವರ ಜಾತ್ರೆ ಇಂತಹದೊಂದು ಸ್ಪರ್ಧೆಗೆ ಕಾರಣವಾಗಿದ್ದು, ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸುತ್ತಿರುವ ಇವರ ಕಾರ್ಯ ಶ್ಲಾಘನೀಯ.