Kannada News Photo gallery Bagalkot DAR police environment concern exhibited tree by tree in a mini forest of 3 acres hill region
ಕಾನೂನು ರಕ್ಷಕ ಪೊಲೀಸರು ಪ್ರಕೃತಿ ರಕ್ಷಕರೂ ಆಗಿದ್ದಾರೆ ಇಲ್ಲಿ! 3 ಎಕರೆ ಬುರುಜು ಕಲ್ಲಿನ ಬೆಟ್ಟಗುಡ್ಡದಲ್ಲಿ 3 ಎಕರೆ ಮಿನಿ ಅರಣ್ಯ ಸೃಷ್ಟಿಸಿದ್ದಾರೆ!
ಖಾಕಿ ಅಂದರೆ ಕೇವಲ ಕಾನೂನು ರಕ್ಷಣೆ, ಜನರ ರಕ್ಷಣೆಗೆ ಮಾತ್ರವೇ ಸೀಮಿತವಾದ ಕೆಲಸ. ಆದರೆ ಅದೊಂದು ಜಿಲ್ಲೆಯಲ್ಲಿ ಖಾಕಿ ಜನರ ಕಾನೂನು ರಕ್ಷಣೆ ಜೊತೆಗೆ ಪರಿಸರ ರಕ್ಷಣೆ (World Environment Day) ಕೂಡ ಮಾಡುತ್ತಾ, ಸೈ ಅನಿಸಿಕೊಂಡಿದ್ದಾರೆ. ಕಲ್ಲು ಬಂಡೆಗಳ ಬುರುಜು ಕಲ್ಲಿನ ಬೆಟ್ಟ ಅಗೆದರೆ ಒಂದು ಮುಷ್ಟಿಯಷ್ಟು ಮಣ್ಣು ಸಹ ಸಿಗದ ಜಾಗದಲ್ಲಿ ಖಾಕಿ ಪಡೆ ದೊಡ್ಡ ಪವಾಡವನ್ನೇ ಸೃಷ್ಟಿಸಿ, ಸೃಷ್ಟಿ ಮಾತೆಗೆ ಸೆಲ್ಯೂಟ್ ಹೊಡೆದಿದ್ದಾರೆ!
1 / 9
ಸಂಪೂರ್ಣ ಕಲ್ಲಿನ ಬೆಟ್ಟದಲ್ಲಿ ಖಾಕಿ ಪಡೆ ಮಿನಿ ಅರಣ್ಯವನ್ನೇ ನಿರ್ಮಾಣ ಮಾಡಿ ಹಸಿರು ಹಂದರ ಸೃಷ್ಟಿ ಮಾಡಿದೆ. ಸುತ್ತಲೂ ಹಚ್ಚ ಹಸಿರು, ವಿವಿಧ ಜಾತಿಯ ಗಿಡಗಳು, ಒಳ ಹೊಕ್ಕರೆ ದಟ್ಟ ಕಾಡಿಗೆ ಹೋದಂತಹ ಅನುಭವ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಡಿಎಆರ್ ಕಚೇರಿ (Bagalkot DAR police) ಎದುರಿನಲ್ಲಿ. ಹೌದು ಇದು ಡಿಎಆರ್ ಪೊಲೀಸ್ ಸಿಬ್ಬಂದಿ ನಿರ್ಮಾಣ ಮಾಡಿರುವ ಮಿನಿ ಅರಣ್ಯ (mini forest). ಅರೇ ಅದರಲ್ಲೇನಿದೆ, ಯಾರು ಬೇಕಾದ್ರೂ ಗಿಡ ಬೆಳೆಸಿ ಕಾಡು ನಿರ್ಮಾಣ ಮಾಡಬಹುದಲ್ಲ ಅಂಥ ಅನಿಸಬಹುದು. ಆದರೆ...
2 / 9
ಹಿಂದಿನ ಎಸ್ ಪಿ ಲೋಕೇಶ್ ಜಗಲಾಸರ್, ಆಗಿನ ಡಿಎಆರ್ ಡಿವೈಎಸ್ ಪಿ ಭರತ ತಳವಾರ ಅವರ ಇಚ್ಚಾಶಕ್ತಿ ಉಳಿದಂತೆ ಡಿಎಆರ್ ಅಧಿಕಾರಿಗಳು ಸಿಬ್ಬಂದಿ ಶ್ರಮದ ಫಲದಿಂದ ಹಸಿರು ಅರಣ್ಯ ಕಣ್ಮನ ಸೆಳೆಯುವಂತಾಗಿದೆ.ಈಗ ಎಸ್ ಪಿ ಆಗಿರುವ ಜಯಪ್ರಕಾಶ್, ಡಿಎಆರ್ ಡಿಎಸ್ಪಿ ಪ್ರಭು ಹಾಗೂ ಡಿಎಆರ್ ಸಿಬ್ಬಂದಿ ಮತ್ತಷ್ಟು ಗಿಡ ಬೆಳೆಸುವ ಮೂಲಕ ಪರಿಸರ ಕಾಳಜಿ ಮುಂದುವರೆಸಿದ್ದಾರೆ.
3 / 9
ಈ ಜಾಗ ಹಿಂದೆ ಗುಡ್ಡ ಬೆಟ್ಟವಾಗಿತ್ತು, ಕಲ್ಲು ಮುಳ್ಳಿನಿಂದ ಕೂಡಿತ್ತು. ಸಂಪೂರ್ಣ ಕಲ್ಲಿನಿಂದ ಕೂಡಿದ, ಬಗೆದರೆ ಒಂದು ಹಿಡಿಯಷ್ಟೂ ಮಣ್ಣು ಸಿಗದ ಜಾಗದಲ್ಲಿ ಈ ರೀತಿಯಾಗಿ ಗಿಡಗಳನ್ನು ಬೆಳೆಸಲಾಗಿದೆ. ಡಿಎಆರ್ ಪೊಲೀಸ್ ಹೆಡ್ ಕ್ವಾಟರ್ಸ್ ಕಚೇರಿಯ ಮುಂಭಾಗದಲ್ಲಿ ಇರುವ 3 ಎಕರೆ ಗುಡ್ಡಗಾಡು ಪ್ರದೇಶವನ್ನು ಪೊಲೀಸ್ ಸಿಬ್ಬಂದಿ ಕೇವಲ ಪ್ರತಿನಿತ್ಯ ಹಾಗೂ ವಾರಕ್ಕೊಮ್ಮೆ ಶ್ರಮದಾನದ ಕೆಲಸ ಮಾಡುವ ಮೂಲಕ 15 ಸಾವಿರ ಗಿಡ ನೆಟ್ಟು ನಂದನವನವನ್ನಾಗಿ ನಿರ್ಮಾಣ ಮಾಡಿದ್ದಾರೆ. (ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ)
4 / 9
ಇನ್ನು ಈ ಮೂರು ಎಕರೆ ಗುಡ್ಡಗಾಡು ಪ್ರದೇಶದಲ್ಲಿ 2020 ರಲ್ಲಿ ಮಿನಿ ಅರಣ್ಯ ಮಾಡೋಕೆ ಸಿಬ್ಬಂದಿ ಪಣ ತೊಟ್ಟರು. ಅದರಂತೆ ಗುಡ್ಡಗಾಡು ಪ್ರದೇಶದಲ್ಲಿ ಪೂಜೆ ಸಲ್ಲಿಸಿ, ಗಿಡ ನೆಡುವ ಕಾರ್ಯಕ್ರಮ ಮಾಡಿದ್ದರು. ಸದ್ಯ ಗುಡ್ಡಗಾಡು ಪ್ರದೇಶದಲ್ಲಿ 15 ಸಾವಿರ ಮರಗಳನ್ನು ಬೆಳೆಸಲಾಗಿದೆ.
5 / 9
ಇದರಲ್ಲಿ 60 ಬಗೆಯ ವಿವಿಧ ಮರಗಳಾದ ತೆಂಗು, ಬೇವು, ಅರಳಿಮರ, ಶಿಂಧೆ, ಹೊಂಗೆ, ರುದ್ರಾಕ್ಷಿ, ರಬ್ಬರ ಮರ, ಬಿದಿರು, ತಾಳೆ, ಮಹಾಗಣಿ, ಅಡಕೆ, ಬಸವನಪಾದ, ಬನ್ನಿಗಿಡ, ಹೆಬ್ಬೇವು, ಸಿಂಗಾಪೂರ ಚೆರ್ರಿ, ಅಶ್ವಥಮರಾ,ಅಕೆಷಿಯಾ, ಅಶೋಕಮರಗಳನ್ನು ಬೆಳೆಸಲಾಗಿದೆ.
6 / 9
ಜೊತೆಗೆ 20 ಬಗೆಯ ಹಣ್ಣಿನ ಗಿಡಗಳಾದ ಲೀಚಿ, ಗ್ರೀನ್ ಆ್ಯಪಲ್, ಆ್ಯಪಲ್ ಬೋರೆ, ಕಾಶಿ ಬೊರೆ, ಪೇರಲ, ಜಾಕ್ ಫ್ರೂಟ್, ಹಲಸು, ನೇರಲೆ, ಮಾವು, ಕರ್ಜೂರ, ಅಂಜೂರು, ಬಾಳೆ ಗಿಡಗಳನ್ನು ಬೆಳೆಸಲಾಗಿದೆ. ಇನ್ನು ಗುಡ್ಡಗಾಡು ಜಾಗ ಸದ್ಯ ಪಾರ್ಕ್ ನಂತೆ ಕಂಗೊಳಿಸುತ್ತಿದೆ. ಸಿಬ್ಬಂದಿ ಸೇರಿದಂತೆ ಅಕ್ಕಪಕ್ಕದ ಜನರು ವಾಯುವಿಹಾರಕ್ಕಾಗಿ ಇಲ್ಲಿಗೇ ಬಂದು ತಮ್ಮ ಆಯಾಸ ಮರೆಯಬಹುದಾಗಿದೆ.
7 / 9
ಇನ್ನು ವಿಶ್ವ ಪರಿಸರ ದಿನ ನಿಮಿತ್ತ ಮೂರು ದಿನ ಜನರು ಇಲ್ಲಿ ಮುಕ್ತವಾಗಿ ವಿಹಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಗಿಡ ನೆಟ್ಟ ಸಿಬ್ಬಂದಿ ಗಿಡಗಳನ್ನು ಮಗುವಿನಂತೆ ಜೋಪಾನ ಮಾಡಿ ಹಸಿರು ಹಂದರ ನಿರ್ಮಿಸಿದ್ದಾರೆ. ಡಿಎಆರ್ ಪೊಲೀಸರ ಪರಿಸರ ಕಾಳಜಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇಲ್ಲಿಗೆ ಬಂದರೆ ಉತ್ತಮ ವಾತಾವರಣ ಒಂದು ಸುಮಧುರ ಅನುಭವ ಸಿಗುತ್ತದೆ. ವಿಹಾರದ ಜೊತೆಗೆ ಜನರು ತಮ್ಮ ಜಾಗದಲ್ಲಿ ಸಾಧ್ಯವಾದಷ್ಟು ಗಿಡ ಬೆಳೆಸಬೇಕು ಅಂತಾರೆ.
8 / 9
9 / 9
ಒಟ್ಟಿನಲ್ಲಿ ಕಾನೂನು ಪಾಲನೆ ಹಾಗೂ ರಕ್ಷಣೆ ಮಾಡ್ತಿದ್ದ ಖಾಕಿ ಪಡೆ ಪರಿಸರ ರಕ್ಷಣೆಯನ್ನೂ ಮಾಡ್ತೀವಿ ಅಂತಾ ತೋರಿಸಿಕೊಟ್ಟಿದ್ದಾರೆ. ಖಾಕಿ ಪಡೆಯ ಈ ಕಾರ್ಯ ವಿಶ್ವ ಪರಿಸರ ದಿನಾಚರಣೆ ವೇಳೆ ಅಭಿನಂದನೆಗ ಅರ್ಹವಾಗಿದೆ.