
50 ಎಕರೆಯಿಂದ ಆರಂಭವಾದ ಒಪ್ಪಂದ ಆಧಾರಿತ ಕೃಷಿ ಪದ್ದತಿ ನಾಲ್ಕು ವರ್ಷದಲ್ಲಿ 5 ಸಾವಿರ ಎಕರೆಯಲ್ಲಿ ಬೆಳೆಯಲಾಗುತ್ತಿದ್ದು, ಗುಂಟೂರು ತಳಿಯ ಸೂಪರ್ ಟೆನ್ ಮೆಣಸಿನಕಾಯಿ (Guntur Super 10 Dry Red Chilli) ವಿದೇಶಕ್ಕೆ ರವಾನೆಯಾಗುತ್ತಿದೆ. ಕೆಂಪು ಬಣ್ಣದಿಂದ ಕಂಗೊಳಿಸುತ್ತಿರುವ ಮೆಣಸಿನಕಾಯಿ. ಚೀಲದಲ್ಲಿ ಮೆಣಸಿನಕಾಯಿ ತುಂಬಿ ಲೋಡ್ ಮಾಡುತ್ತಿರುವ ರೈತರು. ಸ್ಥಳದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ವಿವಿ ವಿಜ್ಞಾನಿಗಳ ಭೇಟಿಯಿಂದ ರೈತರಿಗೆ ಮೆಚ್ಚುಗೆ. ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಚಿತ್ತರಗಿ ಗ್ರಾಮದ ವ್ಯಾಪ್ತಿಯಲ್ಲಿ.

ಹೌದು ಹುನಗುಂದ ತಾಲ್ಲೂಕು ಅಂದರೆ ನೆನಪಾಗೋದು ಕಡಲೆ, ತೊಗರಿ, ಜೋಳ, ಹೆಸರು ಬೆಳೆ ಮಾತ್ರ. ಆದರೆ ಅಂತಹ ನಾಡಲ್ಲಿ ಇದೀಗ ಕೆಂಪು ಘಾಟು ಸುಂದರಿ ಎಲ್ಲರ ರೈತರನ್ನು ತನ್ನತ್ತ ಸೆಳೆಯುತ್ತಿದ್ದಾಳೆ. ಜೊತೆಗೆ ರೈತರ ಕೈ ತುಂಬ ಕಾಂಚಾಣ ತಂದು ಕೊಡುತ್ತಿದ್ದಾಳೆ. ಮೆಣಸಿನಕಾಯಿ ಬೆಳೆದು ಇತಿಹಾಸವೇ ಇಲ್ಲದ ಹುನಗುಂದ ಭಾಗದಲ್ಲಿ ಈಗ ಗುಂಟೂರ್ ಸೂಪರ್ ಟೆನ್ ತಳಿಯ ಮೆಣಸಿನಕಾಯಿಯದ್ದೇ ಮಾತು. (ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ)

ಈ ತಳಿ ಬೆಳೆದ ಸಾವಿರಾರು ರೈತರು ಕೈ ತುಂಬಾ ಲಾಭ ಪಡೆದು ಸಾಲರಹಿತ ಜೀವನ ಮಾಡುತ್ತಿದ್ದಾರೆ. ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಯ ಮಾರ್ಗದರ್ಶನ, ಸಲಹೆ ಮೂಲಕ ರೈತರು ಬೀಜ ಖರೀದಿಸಿ ಬಿತ್ತನೆ ಮಾಡಿ ಇದೀಗ ಒಂದು ಎಕರೆಗೆ ಖರ್ಚು, ವೆಚ್ಚ ತೆಗೆದು ಒಂದರಿಂದ ಒಂದೂವರೆ ಲಕ್ಷ ಆದಾಯ ಪಡೆಯುತ್ತಿದ್ದಾರೆ.

ವಿಶೇಷ ಅಂದರೆ ಈ ಮೆಣಸಿನಕಾಯಿ ವಿದೇಶಕ್ಕೆ ರಫ್ತಾಗುತ್ತಿದೆ. ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆ ಈ ಮೆಣಸಿನಕಾಯಿಯನ್ನು ಒಪ್ಪಂದದಂತೆ ಖರೀದಿಸಿ ಓಲಂ ಫುಡ್ ಇನ್ ಗ್ರೇಡಿಯಂಟ್ಸ್ ಕಂಪನಿಗೆ ಪೂರೈಕೆ ಮಾಡುತ್ತದೆ. ಆ ಕಂಪನಿ ಮೂಲಕ ಬಾಗಲಕೋಟೆ ಮೆಣಸಿನಕಾಯಿ ಸದ್ಯ ಯೂರೋಪ್, ಅಮೇರಿಕಾ, ಕೋರಿಯಾಗೆ ಹೋಗ್ತಿದೆ.

ಸೂಪರ್ ಟೆನ್ ತಳಿ ಅಡುಗೆಗೆ ಬೇಕಾದ ರುಚಿ, ಖಾರ, ಗುಣಮಟ್ಟ ಹೊಂದಿದೆ. ಇದನ್ನು ಬೆಳೆದ ರೈತರು ಭರ್ಜರಿ ಲಾಭ ಪಡೆಯುತ್ತಿದ್ದಾರೆ. ಪ್ರಸಕ್ತ ವರ್ಷ ಪ್ರಾರಂಭದಲ್ಲಿ ಕ್ವಿಂಟಲ್ ಗೆ 26 ಸಾವಿರ ರೂ. ಬೆಲೆ ಸಿಕ್ಕಿದ್ದು, ಇದೀಗ ಎರಡನೇ ಹಂತದಲ್ಲಿ 19 ಸಾವಿರ ರೂ. ಬೆಲೆ ಸಿಗ್ತಿದೆ. ಇನ್ನು ರೈತ ಉತ್ಪಾದಕ ಸಂಸ್ಥೆಯಲ್ಲಿ ಒಂದು ಸಾವಿರ ರೈತರಿದ್ದು, 700ಕ್ಕೂ ಅಧಿಕ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ.


ಇದರ ಪರಿಕಲ್ಪನೆ ಏನೆಂದರೆ ರೈತರಿಗೆ ರೈತ ಉತ್ಪಾದಕ ಸಂಘದಿಂದ ಬೀಜ ಮಾರಾಟ ಮಾಡಲಾಗುತ್ತದೆ. ಖರೀದಿ ಮಾಡುವ ಕಂಪನಿಯಿಂದಲೇ ಖಾಲಿ ಚೀಲ, ಲೋಡಿಂಗ್, ಸಾಗಾಣಿಕೆ ವೆಚ್ಚ ಕೊಡಲಾಗುತ್ತದೆ. ಜೊತೆಗೆ ಸ್ಥಳೀಯ ಮಾರುಕಟ್ಟೆಗಿಂತಲೂ ಅಧಿಕ ಬೆಲೆ ಸಿಗಲಿದೆ. ರೈತರ ಜಮೀನಿನಲ್ಲೆ ತೂಕ, ಯಾವುದೇ ಕಮಿಶನ್ ಕೊಡಬೇಕಿಲ್ಲ, ತೂಕದಲ್ಲೂ ಮೋಸ ಇರಲ್ಲ, ದಲ್ಲಾಳಿಗಳ ಕಾಟವಿಲ್ಲ.

ಮೇಲಾಗಿ 10 ದಿನಗಳಲ್ಲಿ ರೈತರ ಖಾತೆಗೆ ಬಿಲ್ ಜಮಾ ಆಗುತ್ತದೆ. ರೈತರು ತಮ್ಮ ಬೆಳೆಯನ್ನ ರೈತ ಉತ್ಪಾದಕ ಸಂಘದ ಮೂಲಕ ಈಗಾಗಲೇ 200 ಟನ್ ಮಾರಾಟ ಮಾಡಿದ್ದು, ಇನ್ನೂ 150 ಟನ್ ಮಾರಾಟ ಆಗಲಿದೆ. ಇದರಿಂದ ರೈತರು ಖುಷಿಯಾಗಿದ್ದರೆ, ಈ ಕಾರ್ಯಕ್ಕೆ ಹರ್ಷಗೊಂಡ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ಉತ್ಪಾದಕ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೆಣಸಿನಕಾಯಿ ಅಂದ್ರೆ ಬ್ಯಾಡಗಿ ನೆನಪಾಗುತ್ತದೆ. ಆದರೆ ಕಡಲೆ, ತೊಗರಿ, ಜೋಳದ ನಾಡಲ್ಲಿ ಮೆಣಸಿನಕಾಯಿ ಬೆಳೆಯೋದಷ್ಟೇ ಅಲ್ಲದೆ ವಿದೇಶಕ್ಕೆ ಮಾರಾಟವಾಗುತ್ತಿರೋದು ಒಳ್ಳೆಯ ಬೆಳವಣಿಗೆ.