
ಬೆಂಗಳೂರಿನಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿರುವ ಹೊತ್ತಲ್ಲೇ ಸಂತ್ರಸ್ತ ಪೀಡಿತ ಪ್ರದೇಶಗಳು ಚೇತರಿಕೆ ಕಾಣುತ್ತಿವೆ. ಆದರೆ ಹವಾಮಾನ ಇಲಾಖೆ ಪ್ರಕಾರ ಮಳೆ ಮತ್ತೆ ಸುರಿಯುವ ಸಾಧ್ಯತೆಯಿದೆ. ಇನ್ನು ನಗರದಲ್ಲಿ ಬೃಹತ್ ಮರಗಳು ನೆಲಕ್ಕೆ ಉರುಳುವ ಪ್ರಕರಣಗಳು ಮುಂದುವರೆದಿದ್ದು, ಒಂದೂವರೆ ಶತಮಾನ ಹಳೆಯ ಮರ ಕೂಡ ಧರಶಾಹಿ ಆಗಿದೆ.

ಬೆಂಗಳೂರಿನಲ್ಲಿ ಸದ್ದು ಮಾಡುತ್ತಿರುವ ಗಾಳಿ ಸಹಿತ ವರುಣನ ಅಬ್ಬರಕ್ಕೆ ಬೃಹತ್ ಮರಗಳು, ಮರದ ರೆಂಬೆ ಕೊಂಬೆಗಳು ಏಕಾಏಕಿ ನೆಲಸಮ ಆಗುತ್ತಿವೆ. ಹೀಗಾಗಿ ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿನ್ನೆ ಸಂಜೆ ಸಹ ಸಸ್ಯ ಕಾಶಿ ಲಾಲ್ ಬಾಗ್ ನಲ್ಲಿ ಬೃಹತ್ ಮರವೊಂದು ನೆಲಕ್ಕೆ ಉರುಳಿದೆ.

ಸುಮಾರು 150 ವರ್ಷದಷ್ಟು ಹಳೆಯದಾದ ಫೈಕಸ್ ಕನ್ನಿಂಗ್ ಹ್ಯಾಮಿ ಪ್ರಭೇದದ ಮರ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಾಲ್ ಬಾಗ್ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಮರವನ್ನು ತೆರವು ಮಾಡಲಾಗಿದೆ.

ಇನ್ನು ನಗರದಲ್ಲಿ ಬಲಿಗಾಗಿ ಒಣಗಿದ ಮರ ಹಾಗೂ ಮರದ ರೆಂಬೆ ಕೊಂಬೆಗಳು ಕಾದು ನಿಂತಿವೆ. ಇತ್ತೀಚೆಗೆ ಕೋರಮಂಗಲ ಆರನೇ ಬ್ಲಾಕ್ನಲ್ಲಿ ಮರ ಬಿದ್ದು, ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದರು.

ಮುಂದಿನ ಐದು ದಿನ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸಾಧಾರಣ, ಭಾರೀ ಹಾಗೂ ಅತ್ಯಧಿಕ ಭಾರೀ ಮಳೆ ಆಗುವ ಲಕ್ಷಣಗಳು ಇವೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಮೇ 28 ರವರೆಗೆ ಮಳೆ ಹಗುರದಿಂದ ಸಾಧಾರಣವಾಗಿ, ಕೆಲವೆಡೆ ಭಾರೀ ಮಳೆ ಆಗುವ ನಿರೀಕ್ಷೆ ಇದೆ.