
ನಿನ್ನೆ ಬೆಂಗಳೂರು ನಗರದ ಕೆಲವು ಕಡೆಗಳಲ್ಲಿ ತುಂತೂರು ಮಳೆಯಾಗಿದೆ. ಇದು ಈ ವರ್ಷದ ಮೊದಲ ಮಳೆ. ಕಳೆದ ವರ್ಷ ನವೆಂಬರ್ನಲ್ಲಿ ಕೊನೆಯದಾಗಿ ಬೆಂಗಳೂರಿನಲ್ಲಿ ಮಳೆ ಸುರಿದಿತ್ತು.

ಬಿರು ಬಿಸಿಲಿಗೆ ಬೇಸತ್ತ ಬೆಂಗಳೂರಿಗರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಸುಮಾರು ನಾಲ್ಕೈದು ತಿಂಗಳ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರ್ಷದ ಮೊದಲ ಮಳೆಯಾಗಿದೆ.

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು, ಡಾಬಸ್ ಪೇಟೆಯ ಭಾಗದಲ್ಲಿ ಕೆಲಕಾಲ ವರುಣ ಆರ್ಭಟಿಸಿದ್ದಾನೆ.

ಯಲಹಂಕ, ಕೆಂಗೇರಿ ಸೇರಿದಂತೆ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಇನ್ನು ಉಳಿದ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ.

ಏಪ್ರಿಲ್ ನಲ್ಲಿ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಇನ್ನು ಜೋರಾಗಿ ಮಳೆ ಬರಬೇಕಂದರೆ ಮೇ ವರೆಗೂ ಕಾಯಬೇಕೆಂದು ಹವಾಮಾನ ವರದಿ ತಿಳಿಸಿದೆ.

ಕೆಂಗೇರಿ, ನಾಗದೇವನಹಳ್ಳಿ, ಹುಣಸಮಾರನಹಳ್ಳಿ, ಅರಕೆರೆ, ರಾಜಾಧಿನುಕುಂಟೆ, ಬೆಟ್ಟ ಹಲಸೂರು, ಸೊನ್ನಪ್ಪನಹಳ್ಳಿ, ಯಲಹಂಕ ವ್ಯಾಪ್ತಿಯ ಕೆಲವು ಕಡೆ ಸಂಜೆ 5 ಗಂಟೆ ಸುಮಾರಿಗೆ ತುಂತುರು ಮಳೆಯಾಗಿದೆ.