ಗಡಿ ಜಿಲ್ಲೆ ಬೀದರ್ನಲ್ಲಿ ಸ್ಟ್ರಾಬೆರಿ ಬೆಳೆ ಮೂಲಕ ಉತ್ತಮ ಆದಾಯ ಗಳಿಸುತ್ತಿರುವ ರೈತ
ಸುರೇಶ ನಾಯಕ | Updated By: ವಿವೇಕ ಬಿರಾದಾರ
Updated on:
Dec 06, 2024 | 7:40 AM
ಬೀದರ್ ಜಿಲ್ಲೆಯ ರೈತ ವೈಜಿನಾಥ್ ಅವರು ಕಲ್ಯಾಣ ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಟ್ರಾಬೆರಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ಅರ್ಧ ಎಕರೆಯಲ್ಲಿ ಸಾವಯವ ಕೃಷಿ ಮೂಲಕ ಉತ್ತಮ ಇಳುವರಿ ಪಡೆದಿದ್ದಾರೆ. ಯೂಟ್ಯೂಬ್ ಮತ್ತು ಇತರ ರೈತರಿಂದ ಮಾಹಿತಿ ಪಡೆದು, ಸುಮಾರು ಎರಡು ಲಕ್ಷ ರೂಪಾಯಿ ಹೂಡಿಕೆ ಮಾಡಿ, 6 ತಿಂಗಳ ಕಾಲ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇವರ ಯಶಸ್ಸು ಇತರ ರೈತರಿಗೆ ಸ್ಫೂರ್ತಿ ನೀಡುತ್ತದೆ.
1 / 9
ಸ್ಟ್ರಾಬೆರಿ ಹಣ್ಣನ್ನು ಭಾರತದಲ್ಲಿ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಹಣ್ಣು ಬೆಳೆಯಬೇಕಾದರೆ ತಂಪು ವಾತಾವರಣ ಬೇಕು, ಇಂತಹ ವಾತಾವರಣದಲ್ಲಿ ಸ್ಟ್ರಾಬೆರಿ ಹಣ್ಣು ಉತ್ತಮ ಗುಣಮಟ್ಟದಲ್ಲಿ ಬರುತ್ತದೆ.
2 / 9
ಆದರೆ, ಇದೇ ಸ್ಟ್ರಾಬೆರಿ ಹಣ್ಣನ್ನು ಗಡಿ ಜಿಲ್ಲೆ ಬೀದರ್ನಲ್ಲಿಯೂ ಬೆಳೆಯುವುದರ ಮೂಲಕ ರೈತ ವೈಜೀನಾಥ್ ಯಶಸ್ಸು ಕಂಡಿದ್ದಾರೆ. ಅರ್ಧ ಎಕರೆಯಷ್ಟು ಜಮೀನಿನಲ್ಲಿ ಸ್ಟ್ರಾಬೆರಿ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇವರು ಸಾವಯವ ರೀತಿಯಲ್ಲಿ ಜೀವಾಂಮೃತವವನ್ನ ಬಳಸಿಕೊಂಡು ಸ್ಟ್ರಾಬೆರಿ ಬೆಳೆಯುತ್ತಿದ್ದಾರೆ. ಇದರಿಂದ ಹಣ್ಣಿನ ಗಾತ್ರ ಕೂಡ ದೊಡ್ಡದಾಗಿದೆ.
3 / 9
ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಈ ರೈತ ಮೊದಲ ಸಲ ಸ್ಟ್ರಾಬೆರಿ ಹಣ್ಣು ಬೆಳೆಯುವುದರ ಮೂಲಕ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದ್ದಾರೆ. ವೈಜೀನಾಥ್ ಅವರು ಯೂಟ್ಯೂಬ್ ಹಾಗೂ ಕೆಲ ರೈತರಿಂದ ಸ್ಟ್ರಾಬೆರಿ ಬೆಳೆಯುವುದು ಹೇಗೆ ಎಂಬ ಮಾಹಿತಿ ಪಡೆದಿದ್ದಾರೆ.
4 / 9
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಓರ್ವ ರೈತರಿಂದ 10 ಸಾವಿರ ಸ್ಟ್ರಾಬೆರಿ ಸಸಿಗಳನ್ನು ಖರೀದಿಸಿ ತನ್ನ ಅರ್ಧ ಎಕರೆಯಷ್ಟು ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ಒಂದು ಸಸಿಗೆ 12 ರೂಪಾಯಿಂತೆ 10 ಸಾವಿರ ಸಸಿಗಳನ್ನು ಖರೀದಿಸಿದ್ದು ಸಸಿಗೆ ಹಾಗೂ ವಾಹನ ಬಾಡಿಗೆ, ನಾಟಿ ಮಾಡುವುದು ಸೇರಿದಂತೆ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
5 / 9
ನಂತರ ಡ್ರಿಫ್ ಮೂಲಕ ನೀರುಕೊಟ್ಟು ತೆಂವಾಶ ಕಡಿಮೆಯಾಗಬಾರದೆಂದು ಜಮೀನಿಗೆ ಪ್ಲಾಸ್ಟಿಕ್ ಪೇಪರ್ ಹಾಕಿದ್ದಾರೆ. ಒಟ್ಟು ಅರ್ಧ ಎಕರೆಯಷ್ಟು ಸ್ಟ್ರಾಬೆರಿ ಬೆಳೆಯಲು ಎರಡು ಲಕ್ಷದವರೆಗೂ ಖರ್ಚು ಮಾಡಿದ್ದಾರೆ. ಅಕ್ಟೋಬರ್ನಲ್ಲಿ ನಾಟಿ ಮಾಡಿದ್ದು, 40 ದಿನಗಳಲ್ಲಿ ಹಣ್ಣುಗಳನ್ನು ಬಿಡಲಾರಂಬಿಸಿದೆ. ಸುಮಾರು 6 ತಿಂಗಳು ಫಸಲು ಬರುತ್ತದೆ. ಒಂದು ದಿನ ಬಿಟ್ಟು ಒಂದು ದಿನ ಕಟಾವು ಮಾಡುತ್ತಿದ್ದು, ಒಮ್ಮೆ ಕಟಾವು ಮಾಡಿದರೆ 70 ರಿಂದ 80 ಬಾಕ್ಸ್ ನಷ್ಟು ಹಣ್ಣು ಬರುತ್ತಿವೆ. 10 ರಿಂದ 12 ಹಣ್ಣು ಹಿಡಿಯುವ ಒಂದು ಬಾಕ್ಸ್ನಲ್ಲಿ 250-300 ಗ್ರಾಂ ಹಣ್ಣುಗಳನ್ನು ಹಾಕಿ ಪ್ಯಾಕ್ ಮಾಡಲಾಗುತ್ತದೆ.
6 / 9
ಒಂದು ಬಾಕ್ಸ್ ಮಾರುಕಟ್ಟೆಯಲ್ಲಿ 75 ರೂಪಾಯಿಗೆ ಮಾರಾಟವಾಗುತ್ತದೆ. ಸ್ಟ್ರಾಬೆರಿ ಗಿಡಗಳಲ್ಲಿಯೂ ವಿವಿಧ ಜಾತಿಗಳಿವೆ. ಸದ್ಯ ವೈಜಿನಾಥ್ ಅವರು ಪ್ರಾಯೋಗಿಕವಾಗಿ ವಿಂಟರ್ ಡೌನ್ (Winterdawn), ತಳಿ ನಾಟಿ ಮಾಡಿದ್ದಾರೆ. ಇನ್ನು ಸ್ಟ್ರಾಬೆರಿ ಗಿಡಗಳಿಗೆ ಸಾವಯವ ಗೊಬ್ಬರವನ್ನು ಹಾಕುತ್ತಿದ್ದಾರೆ.
7 / 9
ಕೆಂಪು ಮಣ್ಣು ಇರುವುದರಿಂದಾಗಿ ಹಣ್ಣಿನಲ್ಲಿ ನೀರಿನಾಂಶ ಜಾಸ್ತಿಯಿದ್ದು, ರುಚಿಯೂ ಹೆಚ್ಚಿದೆ. ಹೀಗಾಗಿ ಗ್ರಾಹಕರಿಗೆ ಇವರು ಬೆಳೆದ ಸ್ಟ್ರಾಬೆರಿ ಹಣ್ಣು ಇಷ್ಟವಾಗಿದ್ದು, ಇವರ ತೊಟಕ್ಕೆ ಬಂದು ಹಣ್ಣು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಇವರು ಬೆಳೆಸಿದ ಹೆಣ್ಣು ಹೆಚ್ಚಾಗಿ ಬೀದರ್ನಲ್ಲಿಯೇ ಮಾರಾಟವಾಗುತ್ತಿದ್ದು, ಇನ್ನುಳಿದ ಹಣ್ಣನ್ನು ಪಕ್ಕದ ಹೈದ್ರಾಬಾದ್ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ.
8 / 9
ಈಗಷ್ಟೇ ಫಸಲು ಆರಂಭವಾಗಿರುವುದರಿಂದ ರೈತ ವೈಜಿನಾಂಥ್ ಅವರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ. ಅರ್ಧ ಎಕರೆಯಲ್ಲಿ ಸ್ಟ್ರಾಬೆರಿ ಬೆಳೆಯಲು 2 ರಿಂದ 3 ಲಕ್ಷ ರೂಪಾಯಿ ಖರ್ಚಾಗಲಿದೆ. ಇದರಿಂದ ಅಂದಾಜು ಎಲ್ಲ ಖರ್ಚು ತೆಗೆದರೂ 5 ಲಕ್ಷ ರೂಪಾಯಿ ಆದಾಯ ಬರುವ ನಿರೀಕ್ಷೆಯಲ್ಲಿ ರೈತ ವೈಜಿನಾಥ್ ಇದ್ದಾರೆ.
9 / 9
ಎಲ್ಲರೂ ಒಂದೇ ಬೆಳೆಯನ್ನು ಬೆಳೆಯುವುದಕ್ಕಿಂದ ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕು. ಇನ್ನು ಸ್ಟ್ರಾಬೆರಿ ಬೆಳೆಯು ಉತ್ತಮ ಆದಾಯ ಗಳಿಸಲು ರೈತರಿಗೆ ಸಹಕಾರಿಯಾಗುತ್ತದೆ ಎಂದು ರೈತ ವೈಜೀನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.
Published On - 7:38 am, Fri, 6 December 24