
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆ ಆಗಿದ್ದ ಮಾರತಹಳ್ಳಿಯ ಕೃತಿಕಾ ರೆಡ್ಡಿ ಪತಿ ಮಹೇಂದ್ರ ರೆಡ್ಡಿಯಿಂದಲೇ ಕೊಲೆ ಆಗಿರೋದು ನಿನ್ನೆ ಬಯಲಾಗಿತ್ತು. ವಿಕ್ಟೋರಿಯಾದಲ್ಲೇ ವೈದ್ಯನಾಗಿದ್ದ ಮಹೇಂದ್ರ ರೆಡ್ಡಿ ಓವರ್ ಡೋಸ್ ಅನಸ್ತೇಶಿಯಾ ಕೊಟ್ಟು ಪತ್ನಿಯನ್ನ ಕೊಂದಿರೋದು ಗೊತ್ತಾಗಿತ್ತು. ಪತ್ನಿಗೆ ಅನಾರೋಗ್ಯ ಕಾಡ್ತಿದ್ರಿಂದ ಕೊಂದಿದ್ದೇನೆ ಅಂತಾ ಮಹೇಂದ್ರ ರೆಡ್ಡಿ ಒಪ್ಪಿಕೊಂಡಿದ್ದ.

ಇದೊಂದೇ ವಿಷಯ ಮಾತ್ರ ಅಲ್ಲ, ತನ್ನ ಅಸಿಸ್ಟೆಂಟ್ ವೈದ್ಯೆ ಜತೆ ಮಹೇಂದ್ರ ರೆಡ್ಡಿ ಸ್ನೇಹ ಬೆಳಸಿರೋದು ಕೂಡಾ ಗೊತ್ತಾಗಿದೆ. ಇದೇ ಕಾರಣಕ್ಕೆ ಪತ್ನಿ ಕತೆ ಮುಗಿಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪತ್ನಿ ಕೊಂದ ಮಹೇಂದ್ರ ಬಗ್ಗೆ ಪೊಲೀಸರು 3 ಆಯಾಮಗಳಲ್ಲಿ ತನಿಖೆ ನಡೆಸ್ತಿದ್ದಾರೆ. ಆರೋಪಿ ಮೊಬೈಲ್ ಜಪ್ತಿ ಮಾಡಿದ ಮಾರತ್ತಹಳ್ಳಿ ಪೊಲೀಸರು, ಮೊದಲು ಅಕ್ರಮ ಸಂಬಂಧದ ಶಂಕೆ ಆಧಾರಿತ ತನಿಖೆ ಮಾಡ್ತಿದ್ದಾರೆ. 2ನೇ ಯದಾಗಿ ಹಣಕಾಸಿನ ವಿಚಾರದ ಆಯಾಮ, 3ನೇ ಯದಾಗಿ ಅನಾರೋಗ್ಯ ಪತ್ನಿ ಬೇಡವೆಂದು ಕೊಲೆ ಮಾಡಿರುವ ಶಂಕೆ ಹಿನ್ನೆಲೆ ತನಿಖೆ ತೀವ್ರಗೊಳಿಸಿದ್ದಾರೆ.

ಆರು ತಿಂಗಳ ಹಿಂದೆಯೇ ಕೃತಿಕಾ ಕತೆ ಮುಗಿಸಿದ್ದ ಮಹೇಂದ್ರ ರೆಡ್ಡಿ, ಇದುವರೆಗೂ ಎರಡನೇ ಮದುವೆ ಆಗಿರಲಿಲ್ಲ. ಕೃತಿಕಾ ತಂದೆ ಜತೆಯೂ ಉತ್ತಮ ಸಂಬಂಧ ಇಟ್ಟುಕೊಂಡಿದ್ದ. ಇದಕ್ಕೆ ಕಾರಣವೇ ನೂರಾರು ಕೋಟಿ ಮೌಲ್ಯದ ಆಸ್ತಿ. ಕೃತಿಕಾ ತಂದೆ ನೂರಾರು ಕೋಟಿ ಆಸ್ತಿ ಒಡೆಯರಾಗಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಆಸ್ತಿಯ ಅರ್ಧ ಭಾಗದ ಮೇಲೆ ಕಣ್ಣು ಹಾಕಿದ್ದ ಎನ್ನುವ ಅನುಮಾನ ವ್ಯಕ್ತವಾಗಿದೆ.

ಒಂದು ಕಡೆ ಕಾಯಿಲೆ ಬಿದ್ದವಳ ಜೊತೆಗೆ ಬದುಕಲು ಇಷ್ಟ ಇಲ್ಲ. ಆದ್ರೆ ಆಕೆಯ ಕುಟುಂಬವನ್ನು ಕಳೆದುಕೊಳ್ಳಲು ಸಾದ್ಯವಿಲ್ಲ. ಯಾಕಂದ್ರೆ ಮಾವನಿಗೆ ಇಬ್ಬರೇ ಹೆಣ್ಣುಮಕ್ಕಳಿದ್ದು ನೂರಾರು ನೋಟಿ ಒಡೆಯರಾಗಿದ್ರು. ಹೀಗಾಗಿ ಕೊಲೆಗೆ ಭಯಾನಕ ಸಂಚು ರೂಪಿಸಿದ್ದ ಆರೋಪಿ, ಕಾಲಿಗೆ ಐವಿ ಸಿರಿಂಜ್ ಹಾಕಿ ಮೆಡಿಸಿನ್ ಕೊಟ್ಟಿದ್ದ. ಅಷ್ಟಲ್ಲದೇ ಕೊಲೆ ನಡೆಸಿ ಆರು ತಿಂಗಳ ತನಕ ಕುಟುಂಬದ ಜೊತೆಗೆ ಚನ್ನಾಗಿದ್ದ, ಬೇರೆ ಮದುವೆಯೂ ಮಾಡಿಕೊಂಡಿರಲಿಲ್ಲ.

ಬದಲಾಗಿ ತನಗೆ ಸರ್ಜರಿ ಮಾಡಲು ಆಗುವುದಿಲ್ಲ ಎಂದು ನೆಪ ಹೇಳಿ ವಿಕ್ಟೋರಿಯಾ ಆಸ್ಪತ್ರೆಗೆಯಲ್ಲಿ ಕೆಲಸ ಬಿಟ್ಟಿದ್ದ. ಬಳಿಕ ಸೂಳ್ಯದ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಪಾರ್ಟ್ ಟೈಮ್ ಕೆಲಸ ಮಾಡಿದ್ದ. ಹೀಗೆ ಪತ್ನಿಯಿಂದ ಮುಕ್ತಿ ಬೇಕು. ಆದರೆ ಆಕೆಯ ಕುಟುಂಬದ ಆಸ್ತಿ ಕೈ ತಪ್ಪಿ ಹೋಗಬಾರದು ಎನ್ನುವುದು ಮಹೇಂದ್ರನ ಪ್ಲಾನ್ ಎನ್ನುವ ಬಗ್ಗೆ ತನಿಖೆ ವೇಳೆ ಗೊತ್ತಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.

29 ವರ್ಷದ ವೈದ್ಯೆ ಕೃತಿಕಾ ರೆಡ್ಡಿ ಬೆಂಗಳೂರಿನ ವರ್ತೂರು ಬಳಿಯ ಮುನೇನಕೊಳಲು ನಿವಾಸಿ ಮುನಿ ದಂಪತಿಗೆ ಜನಿಸಿದ್ದರು. ವೈದ್ಯೆ ಕೃತಿಕಾಗೆ ಒಬ್ಬ ಸಹೋದರಿ ಕೂಡ ಇದ್ದಾರೆ. ಅವರು ಸಹ ಡೆಂಟಿಸ್ಟ್ ಆಗಿದ್ದಾರೆ. ಬೆಂಗಳೂರಿನ ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ MBBS ಪದವಿ ಪಡೆದ ಕೃತಿಕಾ, ನಂತರ ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಡರ್ಮಟಾಲಜಿ ವಿಷಯದಲ್ಲಿ ಎಂ.ಡಿ ಪದವಿಯನ್ನು ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಕಲ್ಯಾಣನಗರದಲ್ಲಿರುವ ರೂಟ್ಸ್ ಇನ್ಸಿಟಿಟ್ಯೂಟ್ ಡರ್ಮಟಾಲಜಿಯಲ್ಲಿ ಫೆಲೋಶಿಫ್ ಸಹ ಮುಗಿಸಿದ್ದಾರೆ. ಮದುವೆಗೂ ಮುನ್ನಾ ಸ್ಕಿನ್ ಸ್ಪೆಷಲಿಸ್ಟ್ ಸಹ ಆಗಿದ್ದರು.

ಬೆಂಗಳೂರಿನ ಗುಂಜೂರಿನ ನಿವಾಸಿಗಳಾದ ಬಿಲ್ಡರ್ ಶ್ರೀನಿವಾಸ್ ರೆಡ್ಡಿ ದಂಪತಿಗೆ ಆರೋಪಿ ಡಾ. ಮಹೇಂದ್ರ ಜನಿಸಿದ್ದಾರೆ. ಮೂವರು ಮಕ್ಕಳ ಪೈಕಿ ಮಹೇಂದ್ರ ಎರಡನೇಯವರಾಗಿದ್ದಾರೆ. ಇನ್ನೂ ಇವರ ತಮ್ಮ ಕೂಡ ವೃತ್ತಿಯಲ್ಲಿ ವೈದ್ಯರಾಗಿದ್ದು, ಅಣ್ಣ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ಆರೋಪಿ ಡಾಕ್ಟರ್ ಮಹೇಂದ್ರ ಜನರಲ್ ಫಿಸಿಷಿಯನ್ನಲ್ಲಿ MBBS ಪದವಿ ಪಡೆದಿದ್ದು, ಗ್ಯಾಸ್ಟ್ರೋ ಸರ್ಜರಿಯಲ್ಲಿ ಎಂ.ಎಸ್ ಪದವಿ ಪಡೆದಿದ್ದಾರೆ. 2024 ಮೇ 06 ರಂದು ಗುಂಜೂರಿನ ಮಂತ್ರ ಕಲ್ಯಾಣಮಂಟಪದಲ್ಲಿ ಕೃತಿಕಾ ಹಾಗೂ ಮಹೇಂದ್ರ ಅವರ ವಿವಾಹವಾಗಿತ್ತು. 2025 ಏಪ್ರಿಲ್ 24 ರಂದು ವೈದ್ಯೆ ಸಾವನ್ನಪ್ಪಿದ್ದರು. ಪತ್ನಿ ಸಾವಿನ ನಂತರ ಉಡುಪಿಯ ಮಣಿಪಾಲದಲ್ಲಿ ಗ್ಯಾಸ್ಟ್ರೋ ಸರ್ಜರಿ ಸರ್ಜನ್ ಆಗಿ ಕೊಲೆ ಆರೋಪಿ ಮಹೇಂದ್ರ ಸೇವೆ ಸಲ್ಲಿಸುತ್ತಿದ್ದ.

ಅದ್ಯಾವಾಗ ಮರಣೋತ್ತರ ಪರೀಕ್ಷೆಯಲ್ಲಿ ಅನಸ್ತೇಷಿಯಾ ಔಷಧದಿಂದ ಕೃತಿಕಾ ಸಾವನ್ನಪ್ಪಿರುವುದು ದೃಢವಾಯ್ತೋ, ವರದಿ ನಂತರ ಕೃತಿಕಾ ಪೋಷಕರನ್ನು ಪೊಲೀಸರು ಸಂಪರ್ಕಿಸಿದ್ದರು. ಕೃತಿಕಾ ಸಾವಿನ ಹಿಂದಿನ ದಿನ ಅಳಿಯ ಮಹೇಂದ್ರ ಮಗಳಿಗೆ ಇಂಜೆಕ್ಷನ್ ನೀಡಿದ್ದ ಅನ್ನೊದನ್ನ ಪೋಷಕರು ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಆ್ಯಕ್ಟೀವ್ ಆದ ಮಾರತ್ಹಳ್ಳಿ ಪೊಲೀಸರು, ಉಡುಪಿಯ ಮಣಿಪಾಲ್ನಲ್ಲಿ ಆರೋಪಿ ಮಹೇಂದ್ರನ ಬಂಧಿಸಿರು.

ಒಬ್ಬರಿಗೂ ಅನುಮಾನ ಬಾರದಂತೆ ಮಹೇಂದ್ರ ರೆಡ್ಡಿ, ತನ್ನ ಪತ್ನಿಯ ಕತೆ ಮುಗಿಸಿದ್ದ. ಎಲರೂ ಕೈಗೆ ಐವಿ ಹಾಕಿದ್ರೆ, ಇವನು ಮಾತ್ರ ಪತ್ನಿ ಕಾಲಿಗೆ ಐವಿ ಅಂದ್ರೆ ಡ್ರಿಪ್ ಹಾಕಿದ್ದ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಆವತ್ತೇ ಐವಿ, ಸಿರಂಜ್‌ನ ಸ್ಯಾಂಪಲ್ ಪಡೆದು ತನಿಖೆಗೆ ಒಳಪಡಿಸಿದ್ರು. ಅದರಲ್ಲಿ ಅನಸ್ತೇಶಿಯಾ ಕೊಟ್ಟಿರುವು ಗೊತ್ತಾಗಿತ್ತು. ಸೀರಂಜ್‌ನಲ್ಲಿರೋ ಔಷಧ ಹಾಗೂ, ಆಕೆಯ ಡೆಡ್‌ಬಾಡಿಯಲ್ಲಿದ್ದ ಔಷಧ ಒಂದೇ ಎಂದು ವರದಿ ಬರ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡ ಪೊಲೀಸರು, ಉಡುಪಿಯ ಮಣಿಪಾಲದಲ್ಲಿ ಆರೋಪಿಯನ್ನ ಬಂಧಿಸಿ ಕರೆತಂದಿದ್ದರು.

ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಕೊಲೆ ಆರೋಪಿ ಡಾ.ಮಹೇಂದ್ರ ಅವರ ಎರಡೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ರಿಲೇಶನ್ಶಿಪ್ನಲ್ಲಿದ್ದವಳ ಜೊತೆ ಮಾತನಾಡಲು ಆರೋಪಿ ಬೇರೆ ಮೊಬೈಲ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಅದೇನೇ ಇರಲಿ ಆಸ್ತಿ ಹಾಗೂ ಪ್ರೇಯಸಿಗಾಗಿ ಮಹೇಂದ್ರ ರೆಡ್ಡಿ, ತನ್ನ ಪತ್ನಿಯನ್ನೇ ಕೊಂದಿದ್ದು ನಿಜಕ್ಕೂ ದುರಂತ.