- Kannada News Photo gallery Cricket photos Abhishek Sharma, Smriti Mandhana Crowned ICC Players of Month for September 2025
ICC Player of the Month: ಸ್ಮೃತಿ ಮಂಧಾನ, ಅಭಿಷೇಕ್ ಶರ್ಮಾಗೆ ಒಲಿದ ಐಸಿಸಿ ಪ್ರಶಸ್ತಿ
ICC Players of Month for September 2025: ಸೆಪ್ಟೆಂಬರ್ 2025ರ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಭಾರತದ ಅಭಿಷೇಕ್ ಶರ್ಮಾ ಮತ್ತು ಸ್ಮೃತಿ ಮಂಧಾನ ಪಾಲಾಗಿದೆ. ಅಭಿಷೇಕ್ ಏಷ್ಯಾಕಪ್‌ನಲ್ಲಿ 314 ರನ್ ಗಳಿಸಿ, 10ನೇ ಭಾರತೀಯ ವಿಜೇತರಾದರು. ಸ್ಮೃತಿ ಆಸ್ಟ್ರೇಲಿಯಾ ವಿರುದ್ಧ 308 ರನ್, ವೇಗದ ಶತಕ ಬಾರಿಸಿ ಮಹಿಳಾ ಪ್ರಶಸ್ತಿ ಗೆದ್ದರು. ಇಬ್ಬರ ಅದ್ಭುತ ಪ್ರದರ್ಶನದಿಂದ ಭಾರತಕ್ಕೆ ಮತ್ತೊಂದು ಹೆಮ್ಮೆ.
Updated on:Oct 16, 2025 | 5:57 PM

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸೆಪ್ಟೆಂಬರ್ 2025 ರ ತಿಂಗಳ ಕ್ರಿಕೆಟರ್ ಪ್ರಶಸ್ತಿಯನ್ನು ಪ್ರಕಟಿಸಿದೆ. ಮೊದಲಿಗೆ ಪುರುಷರ ವಿಭಾಗದ ಬಗ್ಗೆ ಹೇಳುವುದಾದರೆ.. ಈ ಪ್ರಶಸ್ತಿ ರೇಸ್ನಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರು ಹಾಗೂ ಒಬ್ಬ ಜಿಂಜಾಬ್ವೆ ಕ್ರಿಕೆಟಿಗ ಇದ್ದರು. ಅಂತಿಮವಾಗಿ ಭಾರತ ಟಿ20 ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಸೆಪ್ಟೆಂಬರ್ ತಿಂಗಳ ಆಟಗಾರ ಪ್ರಶಸ್ತಿ ಲಭಿಸಿದೆ.

ಮೇಲೆ ಹೇಳಿದಂತೆ ಈ ಪ್ರಶಸ್ತಿ ರೇಸ್ನಲ್ಲಿ ಭಾರತದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ಜಿಂಬಾಬ್ವೆಯ ಬ್ಯಾಟ್ಸ್‌ಮನ್ ಬ್ರಿಯಾನ್ ಬೆನೆಟ್ ಇದ್ದರು. ಅಭಿಷೇಕ್ ಶರ್ಮಾ ಈ ಇಬ್ಬರೂ ಆಟಗಾರರನ್ನು ಸೋಲಿಸಿ ಮೊದಲ ಬಾರಿಗೆ ಐಸಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೆ ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಗೆದ್ದ 10 ನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಭಿಷೇಕ್ ಶರ್ಮಾ, ಟೀಂ ಇಂಡಿಯಾದ ಏಷ್ಯಾಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಡಿದ ಏಳು ಟಿ20 ಪಂದ್ಯಗಳಲ್ಲಿ ಮೂರು ಅರ್ಧಶತಕಗಳನ್ನು ಒಳಗೊಂಡಂತೆ ಒಟ್ಟು 314 ರನ್ ಬಾರಿಸಿದರು. ಹೀಗಾಗಿ ಅವರಿಗೆ ಟೂರ್ನಮೆಂಟ್‌ನ ಆಟಗಾರ ಪ್ರಶಸ್ತಿಯೂ ಲಭಿಸಿತು. ಪ್ರಸ್ತುತ ಅಭಿಷೇಕ್ ವಿಶ್ವದ ನಂ. 1 ಟಿ20 ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ.

ಪ್ರಶಸ್ತಿ ಗೆದ್ದ ಬಳಿಕ ಸಂತಸ ಹಂಚಿಕೊಂಡಿರುವ ಅಭಿಷೇಕ್ ಶರ್ಮಾ, ‘ಐಸಿಸಿ ಪ್ರಶಸ್ತಿ ಗೆದ್ದಿರುವುದು ತುಂಬಾ ಖುಷಿ ಕೊಡುತ್ತಿದೆ. ಕೆಲವು ನಿರ್ಣಾಯಕ ಪಂದ್ಯಗಳಲ್ಲಿ ಗೆಲ್ಲಲು ಸಹಾಯ ಮಾಡಿದ್ದಕ್ಕಾಗಿ ನನಗೆ ಅದನ್ನು ಸ್ವೀಕರಿಸಲು ಸಂತೋಷವಾಗಿದೆ. ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ಗೆಲ್ಲಬಲ್ಲ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ತಂಡದ ವ್ಯವಸ್ಥಾಪಕರ ಮಾರ್ಗದರ್ಶನಕ್ಕಾಗಿ ಮತ್ತು ನನ್ನ ಎಲ್ಲಾ ತಂಡದ ಸದಸ್ಯರು ನೀಡಿದ ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ ಸಮಿತಿಗೂ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಅಭಿಷೇಕ್ ಮಾತ್ರವಲ್ಲದೆ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರಿಗೂ ಐಸಿಸಿ ತಿಂಗಳ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಲಭಿಸಿದೆ. ಆಸ್ಟ್ರೇಲಿಯಾ ವಿರುದ್ಧದ ತವರು ಏಕದಿನ ಸರಣಿಯಲ್ಲಿ ಮಂಧಾನ ಅದ್ಭುತ ಪ್ರದರ್ಶನ ನೀಡಿದ್ದರು. ಸೆಪ್ಟೆಂಬರ್ನಲ್ಲಿ ಆಡಿದ ನಾಲ್ಕು ಏಕದಿನ ಪಂದ್ಯಗಳಲ್ಲಿ ಮಂದಾನ 308 ರನ್ ಗಳಿಸಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಸ್ಮೃತಿ ಮಂಧಾನ ಕ್ರಮವಾಗಿ 58, 117 ಮತ್ತು 125 ರನ್ ಗಳಿಸಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ ಶತಕ ಬಾರಿಸಿದ್ದ ಸ್ಮೃತಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಸೃಷ್ಟಿಸಿದ್ದರು. ಆದಾಗ್ಯೂ ಆ ಸರಣಿಯನ್ನು ಗೆಲ್ಲಲು ಭಾರತಕ್ಕೆ ಸಾಧ್ಯವಾಗಿರಲಿಲ್ಲ.
Published On - 5:57 pm, Thu, 16 October 25
