
ಅದು ಬರದ ನಾಡು, ಅಲ್ಲಿ ಕುಡಿಯುವ ನೀರಿಗೆ ಹಾಹಾಕಾರ. ಆದರೆ ಅಲ್ಲಿಯ ಜನ ಒಂದೇ ಬ್ಲಡ್ ಕ್ಯಾಂಪ್ ನಲ್ಲಿ ಅತಿಹೆಚ್ಚು ರಕ್ತದಾನ ಮಾಡುವುದರ ಮೂಲಕ ಇಂಡಿಯಾ ಬುಕ್ ಅಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 3246 ಯೂನಿಟ್ ರಕ್ತದಾನ ಮಾಡುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆಯಲಾಗಿದೆ. ಇನ್ನೂ ಚಿಂತಾಮಣಿ ಶಾಸಕರು ಹಾಗೂ ಹಾಲಿ ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂಸಿ ಸುಧಾಕರ್ ಅವರ ತಂದೆ ಚೌಡರೆಡ್ಡಿ ಅವರ 88 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಬರ ಇದ್ರೂ ಜನರ ಜೀವ ಉಳಿಸುವ ಮಾನವೀಯತೆ ದಾನ ರಕ್ತದಾನ ಮಾಡುವುದಕ್ಕೆ ಹಿಂದೇಟು ಹಾಕದೆ ಮುಗಿಬಿದ್ದು ರಕ್ತದಾನ ಮಾಡಿದ್ದಾರೆ. ರಕ್ತದಾನ ಶಿಬಿರದಲ್ಲಿ ಜಿಲ್ಲೆಯಾದ್ಯಂತ ಜನ ಆಗಮಿಸಿ ರಕ್ತದಾನ ಮಾಡುವುದರ ಮೂಲಕ 3246 ಯೂನಿಟ್ಗಳ ರಕ್ತ ಸಂಗ್ರಹವಾಗಿ ಇಂಡಿಯಾ ಬುಕ್ ಅಫ್ ರೆಕಾರ್ಡ್ ದಾಖಲೆಯಾಗುವಂತೆ ಮಾಡಿದ್ದಾರೆ.

ಇಡೀ ದೇಶದಲ್ಲಿ ಇದುವರೆಗೂ ಯಾರೂ ಸಹ, ಒಂದೇ ಸ್ಥಳ ಒಂದೇ ರಕ್ತದಾನ ಶಿಬಿರದಲ್ಲಿ ಇಷ್ಟೊಂದು ರಕ್ತ ಸಂಗ್ರಹಣೆ ಮಾಡೇ ಇರಲಿಲ್ಲ. ಆದರೆ ಈಗ ಚಿಂತಾಮಣಿ ನಗರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬೆಳಿಗ್ಗೆ 08 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆದ ಶಿಬಿರದಲ್ಲಿ 3246 ಯೂನಿಟ್ ರಕ್ತ ಸಂಗ್ರಹವಾಗಿ ರಾಜ್ಯದ 8 ಜಿಲ್ಲೆಗಳ ರಕ್ತನಿಧಿ ಕೇಂದ್ರಗಳಿಗೆ ರಕ್ತ ರವಾನೆ ಮಾಡಲಾಗಿದೆ.

ಒಟ್ಟಿನಲ್ಲಿ ಸಚಿವ ಡಾ ಎಂ ಸಿ ಸುಧಾಕರ್ ತಂದೆಯ ಹುಟ್ಟು ಹಬ್ಬದ ಅಂಗವಾಗಿ 3246 ಯೂನಿಟ್ ರಕ್ತ ಸಂಗ್ರಹವಾಗುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದು ವಿಶೇಷ.
Published On - 6:35 pm, Sun, 23 February 25